Search This Blog

Thursday 16 July 2020

ದಿಕ್ಸುನ್ದರೀ ವದನವೆನ್ನುವ ತ್ರಿವಿಕ್ರಮಭಟ್ಟ

ರಾಷ್ಟ್ರಕೂಟ ಮೂರನೇ ಇಂದ್ರರಾಜನ ಕಾಲ, ಅಂದರೆ ಸುಮಾರು, ಸಾ. ಶಕವರ್ಷ ೮೩೩ರಲ್ಲಿ ಒಂದು ಶಾಸನ ಹಾಕಿಸುತ್ತಾನೆ. ಹಾಗೆ ನೋಡಿದರೆ ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಕವಿಗಳು ನಮ್ಮ ಪ್ರದೇಶಗಳಲ್ಲಿ ಕಾಣ ಸಿಗುತ್ತಾರೆ. ಕನ್ನಡದ ರಾಜನೊಬ್ಬ ಮಧ್ಯಪ್ರದೇಶದ ಬಗುಮ್ರಾದಲ್ಲಿ ಬರೆಸಿದ ಈ ತಾಮ್ರಪಟ ಶಾಸನ ಉತ್ತರದ ನಾಗರೀ ಲಿಪಿಯನ್ನು ಹೋಲುತ್ತದೆ. ಈ ಶಾಸನವನ್ನು ರೂಪಕಾಲಂಕಾರವನ್ನೇ ಬಳಸಿ ಬರೆದ ಕವಿ ನಲಚಂಪೂ ರಚಿಸಿದ ತ್ರಿವಿಕ್ರಮಭಟ್ಟ. ತ್ರಿವಿಕ್ರಮ ಸಮೃದ್ದ ಶಬ್ದಭಂಡಾರ ಹಾಗೂ ವಿವಿಧ ಕ್ರಿಯಾಪದಗಳ ವಿವಿಧ ಬಳಕೆಯಲ್ಲಿ ಈ ಕವಿ ಸಿದ್ಧಹಸ್ತ.
ಉದಯಗಿರಿಗತಾಯಾಂ ಪ್ರಾಕ್ ಪ್ರಭಾ ಪಾಂಡುತಾಯಾಂ ಅನುಸರಥಿ ನಿಶೀಥೇ ಶೃಂಗಮಸ್ತಾಚಲಸ್ಯ |
ಜಯತಿ ಕಿಮಪಿ ತೇಜ: ಸಾಂಪ್ರತಂ ವ್ಯೋಮಮಧ್ಯೆ ಸಲಿಲಮಿವ ವಿಭಿನ್ನಂ ಜಾಹ್ನವಂ ಯಾಮುನಂ ಚ |ಎನ್ನುವ ಈ ಶ್ಲೋಕದಿಂದ  ತ್ರಿವಿಕ್ರಮನಿಗೆ ಯಮುನಾ ತ್ರಿವಿಕ್ರಮ ಎಂಬ ಹೆಸರು ಬಂದಂತೆ ತೋರುತ್ತದೆ.
ನಳಚಂಪೂವನ್ನು ತ್ರಿವಿಕ್ರಮನೇ “ದಮಯಂತೀ ಕಥಾ" ಎಂದೂ ಕರೆದಿದ್ದಾನೆ. ಈ ಕೃತಿಯ ಪ್ರತಿಯೊಂದು ಉಚ್ಛ್ವಾಸದ ಕೊನೆಯಲ್ಲೂ “ಹರಿಚರಣಸರೋಜ” ಎಂಬ ಪದ ಪ್ರಯೋಗವಿದೆ. ಕಿರಾತಾರ್ಜುನೀಯವನ್ನು “ಲಕ್ಷ್ಯಂಕ” ವೆಂದೂ ಮಾಘಕಾವ್ಯವನ್ನು ತ್ರ್ಯಂಕ” ವೆಂದೂ ಕರೆದಿರುವಂತೆಯೇ, ತ್ರಿವಿಕ್ರಮ ಈ ಕಥೆಯನ್ನು ಪರಿಚರಣಸರೋಜಾಂಕ" ಎಂದು ಕರೆದಿದ್ದಾನೆ. ತ್ರಿವಿಕ್ರಮಭಟ್ಟನಿಗೆ ನಳಚಂಪೂ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿದೆ.

ದಿಕ್ಸುನ್ದರೀ ವದನ ಚಾನ್ದನ ಪತ್ರ ಭಂಗ ಲೀಲಾಯಮಾನ ಘನ ವಿಸ್ತೃತ ಕಾನ್ತ ಕೀರ್ತ್ತೇ |
ಶ್ರೀರಾಷ್ಟ್ರಕೂಟಕುಲಶೈಲಮಲಂಕರಿಷ್ಣೋಸ್ತಸ್ಮಾದಭೂನ್ನಿರುಪಮೋ ನಿರವದ್ಯ ಶೈಲಃ ||



ಕಾಲಯಾನದ ಕುರಿತು. ಡಾ. ನಾ ಸೋಮೇಶ್ವರ ಅವರು


ಮಾರ್ಕಂಡೇಯಪುರಾಣ ಯಾವ ಕಾಲದ್ದು ??


ದಧೀಚಿ ಹೆಸರು ಅತ್ಯಂತ ಪ್ರಸಿದ್ಧ. ಈಗಿನ ಎಲ್ಲಾ ವಿದ್ಯೆಗಳಿಗೂ ಮೂಲ ಪುರುಷ  ಇದೇ ದಧೀಚಿ. ದಧೀಚಿಯಿಂದಲೇ ಅಶ್ವಿನೀ ದೇವತೆಗಳಿಗೆ ಮಧುವಿದ್ಯೆ ಪಾಪ್ತವಾಗುತ್ತದೆ. ಮಧು ವಿದ್ಯೆ ಉಪದೇಶಿಸಿದ್ದಕ್ಕಾಗಿ ಶಿಕ್ಷೆಯಾಗಿ ಅವನ ತಲೆ ಹೋಗುತ್ತದೆ. ಎನ್ನುವ ಕಥೆ ಪ್ರಚಲಿತವಿದೆ. ಕುದುರೆಯ ತಲೆ ಶರ್ಯಣ್ಯಾವತಿಯಲ್ಲಿ ತೇಲುತ್ತಿರುತ್ತದೆ. ಅದೇ ಶರ್ಯಣ್ಯಾವತಿ ಇರುವುದು ಈಗ ನಾನು ಹೇಳುವ ಪ್ರಸ್ತುತ ಪ್ರದೇಶಕ್ಕೆ ಬಹಳ ದೂರದ್ದಲ್ಲ.
ಅದು ಮರುಭೂಮಿ. ಬಿಸಿಲಿನ ಝಳ ಅನುಭವಿಸಿಯೇ ತಿಳಿಯಬೇಕು. ರಾಜಸ್ಥಾನದ ನಾಗೌರಿ ಜಿಲ್ಲೆಯ ಜಯಲ್ ತಹಸೀಲ್ ಗೋಥ್ ಮತ್ತು ಮಂಗ್ಲೋಡ್ ಎನ್ನುವ ಗ್ರಾಮದಲ್ಲಿರುವ ದೇವೀ ದೇವಾಲಯವೇ ದಧಿಮತಿ ಅಥವಾ ದಾಧಿಮತಿ ಮಂದಿರ. ಇದರ ಕುರಿತು ಬರೆಯುತ್ತಿರುವೆ. ಸುಮಾರು ನಾಲ್ಕನೇ ಶತಮಾನಕ್ಕೂ ಪೂರ್ವದಲ್ಲಿಯೇ ಕಾಣಿಸಿಕೊಳ್ಳುವ ದೇವಾಲಯ ಆನಂತರದಲ್ಲಿ ಜೀರ್ಣಾವಸ್ಥೆಗೆ ತಲುಪಿದಾಗ ಅದನ್ನು ಪುನರ್ನಿಮಿಸಲಾಯಿತು. ಇದು ಭಾರತದ ೫೨ ಶಕ್ತಿಪೀಠಗಳಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ. ದೇವಾಲಯದ ಪ್ರಮುಖ ಭಕ್ತರಲ್ಲಿ ದಾಧೀಚ್ ಅಥವಾ ದಾಹಿಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣರು ಮತ್ತು ರಜಪೂತರು ಹೆಚ್ಚು.
ವೇದ ಮತ್ತು ಪುರಾಣಗಳಲ್ಲಿ ವರ್ಣಿತರಾಗಿರುವ ದಧೀಚಿ ಎನ್ನುವ ಮಹರ್ಷಿಯ ತಂಗಿಯು ಮಾಘ ಶುಕ್ಲ ಸಪ್ತಮಿಯ ದಿನ ಅಂದರೆ ರಥ ಸಪ್ತಮಿಯ ದಿನ ಆಕಾಶದ ಮಂಥನ ನಡೆಯುತ್ತದೆ ಸಂದರ್ಭದಲ್ಲಿ ಜನ್ಮ ಪಡೆದಳು ಎಂದು ಐತಿಹ್ಯ. ಮತ್ತು ಅದೇ ಮಾಘಮಾಸದ ಅಷ್ಟಮೀ ದಿನ ವಿಕಟಾಸುರ ಎನ್ನುವ ಅಸುರನ ಸಂಹಾರ ಮಾಡುತ್ತಾಳೆ. ಆದುದರಿಂದ ಮಾಘ ಶುಕ್ಲ ಅಷ್ಟಮಿಯ ದಿನವನ್ನು ಜಯಾಷ್ಟಮಿ ಎಂದು ಕರೆಯಲಾಗುತ್ತದೆ ಎನ್ನುವುದು ಇಲ್ಲಿನ ಪ್ರತೀತಿ. ಆಕೆಯೇ ಶ್ರೀಲಕ್ಷ್ಮಿ ಎನ್ನುವ ನಂಬಿಕೆ ಇದೆ. ಅದೇ ದಧಿಮತಿ, ದಧೀಮಾತಿ ಎನ್ನುವ ದೇವಿಯಾಗಿ ನೆಲೆಸಿದ್ದಾಳೆ ಎನ್ನುವುದು ಅಲ್ಲಿನವರ ನಂಬುಗೆ.
ಶಾಸನದ ಅಭಿಪ್ರಾಯದಂತೆ ದಾಧೀಚ್ ಬ್ರಾಹ್ಮಣರು ಇದೇ ದೇವಾಲಯ ಸಮುಚ್ಚಯದಲ್ಲಿಯೇ ಆಶ್ರಯ ಪಡೆದಿದ್ದರಂತೆ. ಇದರ ಅಕ್ಷರವನ್ನು ಗಮನಿಸಿದರೆ ಬಹಳ ಆಶ್ಚರ್ಯವಾಗುತ್ತದೆ. ಹಳಗನ್ನಡ ಲಿಪಿಯ ಶೈಲಿಯೂ ಕೆಲವೊಮ್ಮೆ ಇಣುಕುತ್ತದೆ ಕಡೆಯಿಂದ ನಾಗರಿಯನ್ನು ಸಂಪುರ್ಣವಾಗಿ ಬಳಸಿಕೊಂಡಂತೆ ಇಲ್ಲ. ಶಾಸನದ ಕೊನೆಯ ಸಾಲಿನಲ್ಲಿ ಶಾಸನದ ವರ್ಷವನ್ನು ಉಲ್ಲೇಖಿಸಿದ್ದು ಅದುಸಂವಚ್ಛರ ಶೇ()ತೇಶು ೨೦೦ ೮೦    ಶ್ರಾವಣ ೧೦ ಅಂದರೆ ಇದು ವಿಕ್ರಮ ಸಂವತ್ಸರದ ೨೮೯ನೇ ವರ್ಷ.  ಶಾಸನ ಬಹಳ ಆಶ್ಚರ್ಯವಾಗಿದ್ದು ನನಗೆ ಮಾರ್ಕಂಡೇಯಪುರಾಣದ ೮೮ನೇ ಅಧ್ಯಾಯದ ದೇವೀಮಹಾತ್ಮೆಯ ನಾರಾಯಣೀ ಸ್ತುತಿಯಲ್ಲಿನ ಅಥವಾ ಸಪ್ತಶತಿಯ ಹನ್ನೊಂದನೇ ಅಧ್ಯಾಯದ ೧೦ನೇ ಶ್ಲೋಕ ಮತ್ತು ಸಪ್ತಶತಿಯ ೫೮೫ನೇ ಶ್ಲೋಕ.
ಸರ್ವಮಙ್ಗಲಮಾಙ್ಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || ೧೦ ||


ಹೇ ನಾರಾಯಣಿ! ನೀನು ಸಮಸ್ತ ಪ್ರಕಾರವಾದ ಮಂಗಲಗಳನ್ನು ಉಂಟುಮಾಡುವ ಮಂಗಲಮಯಿಯಾಗಿರುವೆ. ಕಲ್ಯಾಣವನ್ನುಂಟು ಮಾಡುವಶಿವೆಯೂ ನೀನೇ. ನಿನ್ನಿಂದಲೇ ಸಕಲಾಭೀಷ್ಟಗಳೂ ಸಿದ್ಧಿಸುತ್ತವೆ. ನೀನು ಶರಣಾಗತ ವತ್ಸಲಳೂ, ತ್ರಿನೇತ್ರಳೂ ಹಾಗೂ ಗೌರಿಯೂ ಆಗಿರುವೆ. ನಿನಗೆ ನಮಸ್ಕಾರಗಳು ಎನ್ನುವ ಅರ್ಥವನ್ನು ಸ್ತುತಿ ನೀಡುತ್ತದೆ.
ಎನ್ನುವ ಸಾಲುಗಳು ಶಾಸನದ ೧೧ ಮತ್ತು ೧೨ನೇ ಸಾಲಿನಲ್ಲಿ ಬಂದಿವೆ. ಇದು ಆಶ್ಚರ್ಯವನ್ನುಂಟು ಮಾಡುತ್ತದೆ. ಮಾರ್ಕಂಡೇಯ ಪುರಾಣದ ಕಾಲವನ್ನು ಸುಮಾರು ೭ನೇ ಶತಮಾನಕ್ಕೆ ತಂದು ನಿಲ್ಲಿಸುವ ನಮ್ಮ ಸಂಶೋಧಕರಿಗೆ ಶಾಸನದಲ್ಲಿನ ಶ್ಲೋಕ ಯಾವಕಾಲದ್ದಾಗಿರಬಹುದು. ಶಾಸನದ ಕಾಲವನ್ನು ಶಾಸನದ ಅಂತ್ಯದಲ್ಲಿ ಹೇಳಲಾಗಿದೆ. ಇದರ ಆರಂಭದಲ್ಲಿಯೂ ಸರಸ್ವತಿಯನ್ನು ಧ್ಯಾನಿಸುವುದು ಕಾಣ ಸಿಗುತ್ತದೆ. ದಾಧೀಚ್ ಬ್ರಾಹ್ಮಣರ ಗೋತ್ರಗಳೂ ಶಾಸನದಲ್ಲಿವೆ. ಅಂದರೆ ಒಂದೋ ಪುರಾಣದ ರಚನೆಯ ಕಾಲವನ್ನು ಎಳೆದು ತಂದು ಈಚೆ ನಿಲ್ಲಿಸಲಾಗಿದೆ. 

ಕಾವ್ಯಾದರ್ಶದ ಚತುರ್ಮುಖ

ಚತುರ್ಮುಖ ಮುಖಾಂಭೋಜ ವನಹಂಸ ವಧೂರ್ಮಮ |
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||

ಪ್ರವಾಹದಂತೆ ಹರಿಯುತ್ತಿರುವ ಸರಸ್ವತಿ ನಮಗೆ ಜ್ಞಾನದ ಪ್ರವಾಹವನ್ನು ಹರಿಸಲಿ, ನಮ್ಮ ಮನಸ್ಸನ್ನು ಜ್ಞಾನದ ಪ್ರವಾಹದಿಂದ ರಮಿಸಲಿ, ದೋಷರಹಿತವಾದ ಶಬ್ದಗಳು ವಾಕ್ಯಗಳು ನನಗೆ ಒದಗಿ ಬರಲಿ ಎನ್ನುವ ಆಶಯದೊಂದಿಗೆ ದಂಡಿ ಎನ್ನುವ ಕವಿ ಕಾವ್ಯಾದರ್ಶವನ್ನು ಆರಂಭಿಸುತ್ತಾನೆ.

ಕಲಚೂರಿಗಳ ದೊರೆ ತ್ರೈಲೋಕ್ಯಮಲ್ಲದೇವ ಮಧ್ಯಪ್ರದೇಶದ ರೇವಾ ತಾಮ್ರಪಟವನ್ನು ಸಾ ಶ. ೯೬೩ರಲ್ಲಿ ಬರೆಸುತ್ತಾನೆ. ಅಕ್ಷರವನ್ನು ತುಂಬಾ ಸುಂದರವಾಗಿ ಆಲಂಕಾರಿಅಕವಾಗಿ ಬರೆಯಲಾಗಿದೆ. ಅಕ್ಷರಸ್ಖಾಲಿತ್ಯ ಇದ್ದರೂ ತುಂಬಾ ಸುಂದರವಾಗಿದೆ. ಅನುಸ್ವಾರಾಕ್ಷರಗಲನ್ನು ಮತ್ತು ಮೇಲಿನ ಕೊಂಬುಗಳನ್ನು ವಿಶೇಷವಾಗಿ ಬರೆಯಲಾಗಿದೆ. ನಂದಿನಾಗರಿ ಅಕ್ಷರಗಳನ್ನು ಬಳಸಿಕೊಂಡಿದ್ದರೂ ನಾಗರಿಯೂ ನುಸುಳಿದಂತಿದೆ. ಈ ಶಾಸನದಲ್ಲಿ ದಂಡಿಯ ಕಾವ್ಯಾದರ್ಶದ ಮಂಗಲ ಶ್ಲೋಕವನ್ನು ನಾಲ್ಕು ಮತ್ತು ಐದನೇ ಸಾಲಿನಲ್ಲಿ ಬಳಸಿಕೊಂಡದ್ದು ಬಹಳ ವಿಶೇಷವಾಗಿ ಕಾಣುತ್ತದೆ.
ಸ್ವಲ್ಪ ಬುದ್ಧ್ಯಾ ಮಂದಮತಿರಹಂ ಯತ್ತುವಾಲ್ಯಾತಿ ಉದ್ಗೀರಿತಮ್ |
ಶುದ್ಧಮಶುದ್ಧಂ ವಾ ಪಂಡಿತ ವಿಶ್ವೇಶ್ವರೇಣ ಲಿಖಿತಮಿತಿ || ಎಂದು ಬರೆದು ಈ ಶಾಸನದಲ್ಲಿನ ತಪ್ಪುಗಳನ್ನು ಮನ್ನಿಸಿ ಎಂದು ಶಾಸನ ಕವಿ ವಿಶ್ವೇಶ್ವರನಿಂದ ರಚಿಸಲ್ಪಟ್ಟ ಈ ಶಾಸನವನ್ನು ಬರೆದವನು ಪಂ. ಗಂಗಾಧರ ಮತ್ತು ಶೀರುಕನೆನ್ನುವವನು.