Search This Blog

Sunday, 7 January 2018

ಗೋನಂದ ವಂಶದವರನ್ನು ಹೂಣರೆಂದು ಬಿಂಬಿಸಿದ ವಿದೇಶಿ ಇತಿಹಾಸಕಾರರು..

ಜುಗೋಪಿ ಗೋಪಾದಿತ್ಯಾಖ್ಯ ಕಾಶ್ಮೀರೇಂದ್ರ ಜಿಗೀಷಯಾ | 
ಯುಧಿಷ್ಠಿರ ಪ್ರಪೌತ್ರಂ ಹಿ ಗಾಂಧಾರಾಧಿಪತಿಸ್ತದಾ | 2 : 145
ವಸನ್ನ ಪ್ರಾಪ್ತ ಸಾಮ್ರಾಜ್ಯಃ ಸ ತತ್ರ ತನಯಂ ಕ್ರಮಾತ್ |
ಅವಾಪ ಲಕ್ಷಣೈರ್ದಿವ್ಯೈರಮೋಘಂ ಮೇಘವಾಹನಮ್ || 2 : 146 - ಕಲ್ಲಣನ ರಾಜತರಂಗಿಣೀ
ವಿದೇಶೀ ಇತಿಹಾಸಕಾರರ ದಾಳಿ ವಿದೇಶೀ ರಾಜರುಗಳ ದಾಳಿಗಿಂತ ಹೆಚ್ಚು ಘಾಸಿಗೊಳಿಸಿದ್ದು ನಮ್ಮ ಇತಿಹಾಸಗಳಿಂದ ಕಂಡು ಬರುತ್ತದೆ. ಭಾರತದ ಇತಿಹಾಸವನ್ನು ಪ್ರಾಚೀನತೆಯಿಂದ ಎಳೆದು ತಂದು ಸಾವಿರಾರು ವರ್ಷಗಳಷ್ಟು ಅರ್ವಾಚೀನಗೊಳಿಸಿದ್ದು ಇದೇ ಯಾತ್ರಿಕರು. ಭಾರತದ ರಾಜರುಗಳ ಹೆಸರನ್ನು ತಮಗೆ ಬೇಕಾದಂತೆ. ತಮ್ಮ ಉಚ್ಚಾರಣೆಗೆ ತಕ್ಕುದಾದಂತೆ ಅಪಭ್ರಂಶಗೊಳಿಸಿ. ಅತ್ಯಂತ ಸಮೃದ್ಧ ನಾಗರಿಕತೆಯ ಇತಿಹಾಸವನ್ನು ತಮಗೆ ತೋಚಿದಂತೆ ಬರೆದು ಇಂದಿನ ನಮ್ಮ ಜನಾಂಗ ಅದನ್ನೇ ಉರು ಹೊಡೆದುಕೊಳ್ಳುವಂತೆ ಮಾಡುವುದರಲ್ಲಿ ಮೆಗಾಸ್ತನೀಸ್ ನಂತವರು ಶ್ರಮಿಸಿದರು.
ಶ್ರೇಷ್ಟ ಕ್ಷತ್ರಿಯ ಗೋನಂದ ವಂಶದ 80ನೇ ದೊರೆ ಮೇಘವಾಹನ, ಇವನ ಮಗ 81ನೇ ದೊರೆ ಪ್ರವರಸೇನ. ಈ ಪ್ರವರಸೇನನನ್ನು ಶ್ರೇಷ್ಠಸೇನ ಅಥವಾ ತುಂಜೀನ ಎನ್ನುವುದಾಗಿ ಕರೆಯುತ್ತಿದ್ದರು ಎಂದು ಕಲ್ಲಣನ ರಾಜತರಂಗಿಣಿಯಿಂದ ತಿಳಿದು ಬರುತ್ತದೆ. (ಕಲ್ಲಣನ ರಾಜತರಂಗಿಣೀ ೩ : ೩೧.). ಈ ಪ್ರವರಸೇನನಿಗೆ ಇಬ್ಬರು ಮಕ್ಕಳು ಹಿರಣ್ಯ ಮತ್ತು ತೋರಮನ. ಇವರಲ್ಲಿ ಹಿರಿಯನಾದ ಹಿರಣ್ಯನು ಕ್ರಿಸ್ತ ಪೂರ್ವ 16 ರಿಂದ ಕ್ರಿ ಶ 14ರ ತನಕ ರಾಜ್ಯಭಾರ ಮಾಡಿದ ಎಂದು ವಿದೇಶೀ ಇತಿಹಾಸಕಾರರ ಬಣ್ಣನೆ. (ಆದರೆ ಕ್ರಿಸ್ತಪೂರ್ವ 704ರಿಂದ ಕ್ರಿ.ಪೂ.634ರ ತನಕ ಆಡಳಿತ ನಡೆಸಿದ್ದರು. ಅಂದರೆ ಅಲ್ಲಿಗೆ ಸುಮಾರು 600ಕ್ಕೂ ಹೆಚ್ಚು ವರ್ಷಗಳನ್ನು ಎಳೆದು ತಂದು ಬಿಟ್ಟರು.) ಆಗ ಎರಡನೆಯವನಾದ ತೋರಮನ ಯುವರಾಜನಾಗಿದ್ದ. ಬಲನ ಮುದ್ರೆಯನ್ನು ಹೊಂದಿದ್ದ ನಾಣ್ಯದ ಬದಲಾಗಿ ತನ್ನ ಚಿತ್ರದ ನಾಣ್ಯವನ್ನು ಚಲಾವಣೆಗೆ ತಂದ. ಇದು ಹಿರಣ್ಯನಿಗೆ ಗೊತ್ತಾಗಿ ತೋರಮನನನ್ನು ಜೈಲಿಗೆ ಹಾಕಿದ. ಆತ ಅಲ್ಲಿಯೇ ಸತ್ತು ಹೋದ. ವಿದೇಶೀ ಇತಿಹಾಸಕಾರರಿಗೆ ಇದೇ ಅತ್ಯಂತ ಆಕರ್ಷಕವಾಗಿ ಇತಿಹಾಸದ ಅಧ್ಯಯನಕ್ಕೆ ನಾಂದಿಯಾಯಿತು. (ತೋರಮನನ ಮುದ್ರೆ ಇರುವ ನಾಣ್ಯ ಅಳಿಸದೇ ಹಾಗೇ ಉಳಿದಿರುವುದು ನಮ್ಮ ತಥಾಕಥಿತ ಮೆಗಾಸ್ತನೀಸನಂತಹವರಿಗೆ ಸಿಕ್ಕಿತು ) ಅವರು ಈ ಗೋನಂದ ವಂಶೀಯರನ್ನೇ ಹೂಣರೆಂದು ತಿಳಿದು ಇತಿಹಾಸವನ್ನೇ ಬದಲಾಯಿಸಿ ಬಿಟ್ಟರು. ಇಷ್ಟಕ್ಕೆ ಬಿಡದ ಅವರು ತೋರಮಾನನನ್ನೇ ಹೂಣ ವಂಶದವನೆಂದು ಮಿಹಿರಕುಲದ ಸ್ಥಾಪಕನೆಂದು, ಪ್ರಚಾರಗೊಳಿಸಿದರು. ಈತ ಮಧ್ಯ ಭಾರತ ಅಥವಾ ಪಶ್ಚಿಮ ಭಾರತದ ದೊರೆ ಎಂದು ಬಿಟ್ಟರು ಆದರೆ ಗೋನಂದ ವಂಶ ಇದ್ದದ್ದು ಕಾಶ್ಮೀರದಲ್ಲಿ. ಇವರೆಲ್ಲಾ ಕಾಶ್ಮೀರದ ದೊರೆಗಳು. ಹಿರಣ್ಯನು ಮಿಹಿರಕುಲದ 19ನೇ ಯವನೂ, 64ನೇ ಕಾಶ್ಮೀರದ ದೊರೆಯಾಗಿದ್ದ. ಕ್ರಿ.ಪೂ 704 ರಿಂದ ಕ್ರಿ.ಪೂ.634ರ ತನಕ ಆಳಿದ. ಆದರೆ ಎಂದಿಗೂ ತೋರಮನ ರಾಜ್ಯವಾಳಲೇ ಇಲ್ಲ. ತೋರಮನನ ಮಡದಿ ಅಂಜನಾ ದೇವಿ ಮತ್ತು ಆತನ ಮಗ ವ್ರಜೇಂದ್ರ. ಅಂಜನಾ ದೇವಿ ಇಕ್ಷ್ವಾಕು ವಂಶದವಳಾಗಿದ್ದಳು ಎಂದು ತಿಳಿದು ಬರುತ್ತದೆ. ಆದರೆ ನಮ್ಮ ಇತಿಹಾಸಕಾರರ ಕಪೋಲಕಲ್ಪಿತ ಇತಿಹಾಸ ನಮಗಿಂದು ಅಧಿಕೃತ ಇತಿಹಾಸವಾಗಿದೆ.

Saturday, 6 January 2018

ಏಕಷಷ್ಟಿರಾತ್ರ ಯಾಗ - ಯೂಪಸ್ತಂಭ

ಏಕಷಷ್ಟಿರಾತ್ರ ಯಾಗ - ಯೂಪಸ್ತಂಭ
ಮಾಲವದ ಸೋಮ(ಶ್ರೀ)ಯ ಯೂಪಸ್ತಂಭದ ಶಾಸನ ಇದು, ಕ್ರಿಸ್ತ ಶಕ 282 ನೇ ಇಸವಿಯ ಶಾಸನ. ಇದು ನಾಂದ್ಸಾ ಎನ್ನುವ ಗ್ರಾಮದಲ್ಲಿದೆ. ಚೈತ್ರಪೌರ್ಣಮಿಯದಿನ ನಡೆಸಿದ ಯಾಗವೊಂದರ ಕುರಿತು ಈ ಶಾಸನ ತಿಳಿಸುತ್ತದೆ. ಏಕಷಷ್ಟಿರಾತ್ರ ಎನ್ನುವ ಯಾಗವೊಂದನ್ನು ಮಾಡಲಾಗಿತ್ತು. ಈ ಯಾಗದ ಮೊದಲ ದಿನ "ಪ್ರಾಯಣೀಯ ಯಾಗ" ಎರಡನೇ ದಿನ "ಚತುರ್ವಿಂಶ ಯಾಗ" ಮೂರನೆಯ ದಿನದಿಂದ 20ನೇ ದಿನದ ತನಕ "ತ್ರಯೋ ಅಭಿಪ್ಲವಯಾಗ" ಆರುದಿನಗಳಿಗೊಮ್ಮೆ ಕೊನೆಗೊಳ್ಳುವ ಯಾಗ ಇದು. 21 ರಿಂದ 26 ದಿನಗಳವರೆಗೆ "ಪೃಷ್ಟ್ಯಯಾಗ". 27 ರಿಂದ 35ನೇ ದಿನದವರೆಗೆ "ನವರಾತ್ರ ಯಾಗ" 36 ರಿಂದ 41 ದಿನಗಳ ತನಕ "ಪ್ರತಿಲೋಮ ಪೃಷ್ಟ್ಯಾಯಾಗ" 42 ರಿಂದ 47ನೇ ದಿನದವರೆಗೆ "ಅಭಿಪ್ಲವ ಯಾಗ" 48ನೇ ದಿನ "ಆಯುಷ್ ಯಾಗ" 49ನೇ ದಿನ "ಗೋ ಯಾಗ" 50 ರಿಂದ 59ನೇ ದಿನದ ತನಕ "ದಶರಾತ್ರ ಯಾಗ" 60ನೇ ದಿನ ಮಹಾವ್ರತಯಾಗ. 61ನೇ ದಿನ ಉದಾಯನೀಯ ಯಾಗವನ್ನು ಮಾಡಲಾಗುತ್ತದೆ. ಇದರಲ್ಲಿ ಪಂಚವಿಂಶ ಬ್ರಾಹ್ಮಣದಲ್ಲಿ ಕೊನೆಯದಿನದ ಉದಾಯನೀಯವನ್ನು ಹೇಳಗಿದ್ದು, ಅದೇ ಯಾಗದ ವಿವರಣೆ ಕಾತ್ಯಾಯನ ಶ್ರೌತ ಸೂತ್ರದ ೨೫, ೧೮ : ೨೭ - ೨೪ ರಲ್ಲಿ ಹೇಳಲಾಗಿದೆ. ಕೌಶೀತಕೀ ಬ್ರಾಹ್ಮಣ ಮತ್ತು ಐತರೇಯ ಬ್ರಾಹ್ಮಣ, ಶಾಂಖಾಯನ ಶ್ರೌತಸೂತ್ರದ ೯: ೨೨ ಈ ಯಾಗಗಳಕುರಿತಾಗಿ ಬಂದಿದೆ. ಇದು ಇದ್ದದ್ದರಲ್ಲಿ ಅತ್ಯಂತ ದೀರ್ಘವಾದ ಸತ್ರವಾಗಿದ್ದು ದ್ವಾದಶರಾತ್ರಯಾಗವನ್ನು ಮಥುರಾ ಸಮೀಪದ ಇಸಾಪುರದಲ್ಲಿ ಹುವಿಷ್ಕನು ದ್ರೋಣಲ ಎನ್ನುವ ಋತ್ವಿಜನಿಂದ ಮಾಡಿಸಿದನೆಂದು ತಿಳಿದು ಬರುತ್ತದೆ.
ಈ ಶಾಸನದ ಮೊದಲ ಸಾಲಿನಲ್ಲಿ ಅವತಾರಯಿತ್ವಾ ಎಂದು ಬಂದಿದ್ದು ಅವತಾರ್ಯ ಎಂದಾಗಬೇಕು.

Friday, 5 January 2018

ರತಿಸುಖ ಸಾರೇ ಗತಮಭಿಸಾರೇ ಮದನ ಮನೋಹರವೇಷಮ್ - ಸ್ವಚ್ಚಂದ ಶೃಂಗಾರ ಬಳಸಿಕೊಂಡ ಜಯದೇವ ಗೋಸ್ವಾಮಿ.

ಜಯದೇವ ಹತ್ತೊ೦ಬತ್ತನೇ ಪ್ರಬ೦ಧದ ಹತ್ತನೇ ಸರ್ಗವನ್ನು ಬರೆಯುತ್ತಿದ್ದನ೦ತೆ. ಕೆಲಕಾಲದ ಕಾಯುವಿಕೆಯ ನ೦ತರ ಕೃಷ್ಣರಾಧೆಯರಿಬ್ಬರೂ ಸ೦ಧಿಸುವ ಸನ್ನಿವೇಶ. ಕೋಪಗೊ೦ಡ ರಾಧೆಯನ್ನು ಕೃಷ್ಣ ರಮಿಸುವುದು ‘ಪ್ರಿಯೇ ಚಾರುಶೀಲೆ’ ಎ೦ದು.
ಪ್ರಿಯೇ ಚಾರುಶೀಲೆ ಮು೦ಚ ಮಯಿ ಮಾನಮ್ ಅನಿದಾನಮ್
ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್
ತ್ವಮಸಿ ಮಮ ಭೂಷಣಮ್ ತ್ವಮಸಿ ಮಮ ಜೀವನಮ್ ತ್ವಮಸಿ ಮಮ ಭವ ಜಲಧಿ ರತ್ನಮ್ |
ಭವತು ಭವತೀಹ ಮಯಿ ಸತತಮ್ ಅನುರೋಧಿನಿ ತತ್ರ ಮಮ ಹೃದಯಮ್ ಅತಿಯತ್ನಮ್ ||
ಗೀತಗೋವಿಂದ ಅಷ್ಟಪದಿಯ ಚರಣವೊ೦ದನ್ನು ಬರೆಯುವಾಗ ಜಯದೇವಕವಿಗೆ ‘ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್ ದೇಹಿ ಪದ ಪಲ್ಲವಮುದಾರಮ್’ ಎ೦ಬ ಸಾಲು ಹೊಳೆಯಿತ೦ತೆ. ಶ್ರೀಕೃಷ್ಣ ತನ್ನ ಶಿರಸ್ಸಿನ ಮೇಲೆ ನಿನ್ನ ಕಾಲುಗಳನ್ನಿಟ್ಟು ನನ್ನೆದೆಯಲ್ಲುರಿಯುತ್ತಿರುವ ಮದನನ ಕದನವನ್ನು ಶಾ೦ತಗೊಳಿಸೆ೦ದು ರಾಧೆಯನ್ನು ಕೇಳಿಕೊಳ್ಳುವ ಸನ್ನಿವೇಶ. ಮನದಲ್ಲಿ ಹೊಳೆದ ಸಾಲನ್ನು ಕ೦ಡು ಜಯದೇವನಿಗೆ ತನ್ನ ಬಗ್ಗೆಯೇ ಜಿಗುಪ್ಸೆಯು೦ಟಾಯಿತ೦ತೆ. ಸ್ವತಃ ಪರಮಾತ್ಮ ಹೀಗೆಲ್ಲ ತನ್ನ ಶಿರದ ಮೇಲೆ ಇನ್ನೊಬ್ಬರ ಕಾಲನ್ನಿಡಲು ಬೇಡುವುದು ಭಗವ೦ತನಿಗೆ ಮಾಡಿದ ಅಪಚಾರವೆ೦ದು ಭಾವಿಸಿ ಬರೆದುದನ್ನು ಅಳಿಸಿ, ಹಸ್ತಪ್ರತಿಯನ್ನು ಪತ್ನಿ ಪದ್ಮಾವತಿಯ ಕೈಗಿರಿಸಿ ಸ್ನಾನಕ್ಕೆ೦ದು ನದಿಗೆ ತೆರಳಿದ. ಕೆಲ ನಿಮಿಷದಲ್ಲೇ ಹಿ೦ದಿರುಗಿದ ಬ೦ದು ಊಟ ಮಾಡಿದ ಜಯದೇವ ಹೆ೦ಡತಿಯ ಹತ್ತಿರವಿದ್ದ ಹಸ್ತಪ್ರತಿಗಳನ್ನುತೆಗೆದುಕೊ೦ಡು ಕೋಣೆಯಲ್ಲಿ ಬರೆಯಲು ಕುಳಿತನ೦ತೆ. ಇದಾದ ಸ್ವಲ್ಪ ಸಮಯದ ನ೦ತರ ಸ್ನಾನ ಮುಗಿಸಿ ನದಿಯಿ೦ದ ಬ೦ದು ಪುನಃ ಊಟಬಡಿಸೆ೦ದ ಜಯದೇವನನ್ನು ನೋಡಿ ಹೆ೦ಡತಿಗೆ ಆಶ್ಚರ್ಯ. ಇದೇನು, ಊಟ ಮಾಡಿ ಬರೆಯಲು ಕೂತವರು ಮತ್ತೆ ಸ್ನಾನ ಮಾಡಿಬ೦ದು ಊಟಕ್ಕೆ ಕುಳಿತಿದ್ದೀರಲ್ಲ ಎ೦ದು ಪದ್ಮಾವತಿ ಕೇಳಿದಳ೦ತೆ. ಜಯದೇವ ಗೊ೦ದಲಕ್ಕೊಳಗಾದ. ಪದ್ಮಾವತಿ ನಡೆದ ವಿಷಯವನ್ನು ತಿಳಿಸಿದಳು. ಕೋಣೆಗೆ ಹೋಗಿ ನೋಡಿದಾಗ ಆತ ಅಳಿಸಿ ಹೋಗಿದ್ದ ಅಷ್ಟಪದಿ ಪುನಃ ಬರೆಯಲ್ಪಟ್ಟಿತ್ತು ’ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್’ ಚರಣದೊ೦ದಿಗೆ. ಸ್ವತಃ ಶ್ರೀಕೃಷ್ಣ ಪರಮಾತ್ಮನೇ ತನ್ನ ರೂಪದಲ್ಲಿ ಬ೦ದು ಪದ್ಮಾವತಿಗೆ ದರ್ಶನವಿತ್ತು ತನ್ನ ಅಷ್ಟಪದಿಯನ್ನು ರಚಿಸಿದನೆ೦ದರಿತ ಜಯದೇವ ಭಗವದ್ದರ್ಶನವನ್ನು ಪಡೆದ ತನ್ನ ಪತ್ನಿಯೇ ಭಾಗ್ಯವತಿಯೆ೦ದು ಆನ೦ದದಿ೦ದ ಕಣ್ಣೀರಿಡುತ್ತ ಆಕೆಯ ಕಾಲಿಗೆರಗಿದನ೦ತೆ. ಆ ಅಷ್ಟಪದಿಯ ಕೊನೆಯ ಸಾಲನ್ನು ಆತ ಬರೆದು ಪೂರ್ಣಗೊಳಿಸಿದ ’ಜಯತು ಪದ್ಮಾವತೀರಮಣ ಜಯದೇವಕವಿ ಭಾರತೀ ಭಣಿತಮಿತಿ ಗೀತಮ್’. ಮಾತ್ರವಲ್ಲ ಆತ ಗೀತಗೋವಿ೦ದದಲ್ಲಿ ಜಯದೇವ ತನ್ನನ್ನು ತಾನು ಕರೆದುಕೊಳ್ಳುವುದೇ ’ಪದ್ಮಾವತೀ ಚರಣ ಚಾರಣ ಚಕ್ರವರ್ತಿ’ ಎ೦ದು. ಜಯದೇವನ ಕುರಿತಾದ ಕಥೆ ಇದು
ಹೌದು ಅದೊಂದು ದಿನನೀರವ ಮೌನದಲ್ಲಿ ಎಲ್ಲೋ ದೂರದಲ್ಲಿ ಕೇಳುತ್ತಿದ್ದ ಮಂದ್ರಸ್ಥಾಯಿಯ ಸ್ವರವೊಂದು ಸಮೀಪೀಸುತ್ತಿದ್ದಂತೆ ಆಪ್ಯಾಯಮಾನವಾಗುತ್ತ ಎಲ್ಲೋ ಕೇಳಿದ ಧ್ವನಿ ಅತ್ಯಂತ ಪ್ರಿಯವಾದ ಹಾಡುಗುತ್ತ ಕೇಳಿಸುತ್ತದೆ. ಹೌದು ಅದೇ ಅದೇ "ರತಿಸುಖ ಸಾರೇ ಗತಮಭಿಸಾರೇ ಮದನ ಮನೋಹರವೇಷಮ್" ಎನ್ನುವ ಹಾಡು. ಟಿ ಎನ್ ಶೇಷಗೋಪಾಲನ್ ಅವರ ಕಂಠ. ಜಯದೇವನ ಅಷ್ಟಪದಿಗಳ ಸೊಗಸೇ ಹಾಗೆ ಯಾರೇ ಹಾಡಿದರೂ ಸಹ ಆಪ್ಯಾಯಮಾನ.ಜಯದೇವ ಕವಿಯ ಜೀವಿತವೇ ಒಂದು ಕಾವ್ಯವೆಂಬುದು ಕವಿಸಮಯ.
ಶ್ರೀಭೋಜದೇವ ಪ್ರಭವಸ್ಯ ರಾಮಾ ದೇವೀಸುತ ಶ್ರೀ ಜಯದೇವಕಸ್ಯ |
ಪರಾಶರಾದಿ ಪ್ರಿಯವರ್ಗ ಕಂಠೇ ಶ್ರೀಗೀತಗೋವಿಂದ ಕವಿತ್ವಮಸ್ತು ||
ಜಯದೇವನ ಕವಿತಾ ಧೋರಣೆ ಮತ್ತು ಪದಲಾಲಿತ್ಯವನ್ನು ವಿವೇಚನೆ ಮಾಡುವ ರಸಿಕರ ಹೃದಯದಲ್ಲಿ ನವರಸಗಳು ತುಂಬಿ ಹೊರಗೆ ಪ್ರಕಟಗೊಳ್ಳುವುವು. ಸರಸ ಗೀತ ಪ್ರಬಂಧದ ಮಾಲಿಕೆಗಳನ್ನು ಸಂಸ್ಕೃತ ಭಾಷೆಯನ್ನು ಉತ್ಕೃಷ್ಟಕ್ಕೇರಿಸಿದವರಲ್ಲಿ ಜಯದೇವನೂ ಒಬ್ಬ. ಪರಾಶರನೇ ಮೊದಲಾದ ಮಿತ್ರರನ್ನು ಸಂಪಾದಿಸಿದ ಈತನ ತಂದೆಯ ಹೆಸರು ಭೋಜದೇವ ಅಥವಾ ತ೦ದೆ ರಾಮಭೋಜ, ತಾಯಿ ರಾಮಾ೦ಬ. ಎನ್ನುವ ಬ್ರಾಹ್ಮಣ ಕುಟುಂಬಸ್ಥರು. ಒಂದು ತಲೆಮಾರಿನ ಕೊನೆಯ ಯುಗಸ೦ಧಿಯ ಕಾಲದಲ್ಲಿ ಬ೦ದ ಸವಿದಷ್ಟೂ ಸವಿದು ಸವೆಯದ ಶೃಂಗಾರದ ಸೊಗಸಿನ ಗೀತಗೋವಿ೦ದದ ರಚನಕಾರ ಜಯದೇವ. ಕ್ರಿ.ಶ 12ನೇ ಶತಮಾನದಲ್ಲಿದ್ದ ಬ೦ಗಾಳದ ರಾಜ ಬಲ್ಲಾಳಸೇನನ ಮಗ ಲಕ್ಷ್ಮಣಸೇನನ ಆಸ್ಥಾನಕವಿಯಾಗಿದ್ದ. ಈತ "ವರ್ಣಿತಂ ಜಯದೇವಕೇನ ಹರೇರಿದಂ ಪ್ರವಣೇನ | ಕಿಂದುಬಿಲ್ವ ಸಮುದ್ರ ಸಂಭವರೋಹಿಣೀರಮಣೇನ || ಎಂದು ಗೀತಗೋವಿಂದದ ೩ನೇ ಸರ್ಗದ ೭ನೇ ಅಷ್ಟಕದಲ್ಲಿ ಬರೆದುಕೊಂಡಿದ್ದಾನೆ. ಅಂದರೆ ಓರಿಸ್ಸಾದ ಪುರಿಯ ಸಮೀಪದ ಕಿಂದುಬಿಲ್ವದವನೆ೦ದು ಹೇಳಿಕೊಂಡಿದ್ದಾನೆ. ಇನ್ನೊಂದೆಡೆ ಬ೦ಗಾಳದ ಕೆ೦ದುಲಿಯವನೆ೦ಬ ಇನ್ನೊ೦ದು ವಾದವೂ ಇದೆ. ಚಂದ್ರದತ್ತನ ಭಕ್ತಮಾಲ ಗ್ರಂಥದಲ್ಲಿ ಬಿಂದು ಬಿಲ್ವದವನು ಎಂದಿದ್ದಾನೆ.
ಶ೦ಕರಮಿಶ್ರನ ರಸಮ೦ಜರಿ, ಲಕ್ಷ್ಮೀಧರನ ಶ್ರುತಿರ೦ಜಿನಿ, ಮೇವಾಡದ ರಾಜ ರಾಣಾಕು೦ಭನ ರಸಿಕಪ್ರಿಯಾ, ಜಗಧ್ವರನ ಸಾಗರದೀಪಿಕೆಗಳಲ್ಲಿ ಜಯದೇವನ ಕುರಿತಾದ ಉಲ್ಲೇಖಗಳು ಸಿಗುತ್ತವೆ. ಲಕ್ಷ್ಮಣಸೇನನ "ಗೌಡ" ಎ೦ಬ ಅರಮನೆಯ ಶಿಲಾಶಾಸನದಲ್ಲಿ ಪ೦ಚಮಹಾಕವಿಗಳ ಹೆಸರಲ್ಲಿ ಜಯದೇವನದ್ದೂ ಒ೦ದು. ಜಯದೇವನು ಕಥಕ೦ದಿ ಎ೦ಬ ಗ್ರಾಮದಲ್ಲಿ ಗೀತಗೋವಿ೦ದವನ್ನು ರಚಿಸಿದನ೦ತೆ. ಈತನ ಕವಿತೆಯು ಧರ್ಮಾವಿರುದ್ಧ ಕಾಮವೆ೦ಬ ದರ್ಶನರಾಮಾಯಣ, ಮಹಾಭಾರತಗಳಲ್ಲಿ ಹುಟ್ಟಿ, ಮುಂದೆ ಕಾಳಿದಾಸನ ಶಾಕು೦ತಲ, ಮೇಘದೂತ, ಬಾಣನ ಕಾದ೦ಬರಿಗಳಲ್ಲಿ ಪ್ರವಹಿಸಿ ನೆಲೆಗೊಳ್ಳುವುದು ಗೀತಗೋವಿ೦ದ ಎನ್ನುವ ಪ್ರಬ೦ಧದಲ್ಲಿ. ಸ೦ಸ್ಕೃತ ಸಾಹಿತ್ಯದಲ್ಲಿ ಗಾನ ಸ್ವರ ಗೀತ ಸಹಿತ ಊರ್ಧ್ವ ಅಧೋಗತಿಯಿರುವ ಕೃತಿಗೆ ’ಪ್ರಬ೦ಧ’ವೆ೦ದು ಹೆಸರು. ಆ೦ಗಿಕ, ವಾಚಿಕ, ಆಹಾರ್ಯ, ಸಾತ್ವಿಕೇತಿ ಚತುರ್ವಿಧ ಅಭಿನಯಗಳಿಗೆ ಹೇಳಿ ಮಾಡಿಸಿದ ಇದು ಭಾರತದ ಮೊತ್ತಮೊದಲ ಸ೦ಗೀತರೂಪಕ. ಭಕ್ತಿವೈರಾಗ್ಯ, ಶೃ೦ಗಾರದ ವಿಲಾಸಭೋಗಗಳನ್ನು ಒ೦ದೆಡೆಯೇ ಪ್ರಕಟಿಸಿದ ಅಪ್ರತಿಮ ಪದರಚನಾ ಕೌಶಲ ಸಂಪೂರ್ಣ ಸ೦ಸ್ಕೃತ ಸಾಹಿತ್ಯದಲ್ಲಿ ಗೀತಗೋವಿ೦ದವನ್ನು ಹೊರತುಪಡಿಸಿದರೆ ಇನ್ನೊ೦ದೆಡೆ ಸಿಗದು.
ಯದಿ ಹರಿಸ್ಮರಣೇ ಸರಸ೦ ಮನೋ ಯದಿ ವಿಲಾಸಕಲಾಸು ಕುತೂಹಲಮ್ |
ಮಧುರಕೋಮಲಕಾ೦ತಪದಾವಲೀ೦ ಶೃಣು ಸದಾ ಜಯದೇವಸರಸ್ವತೀಮ್ ||
ಹರಿಸ್ಮರಣೆಯಲ್ಲಿ ಮನಸ್ಸು ಆರ್ದ್ರಗೊಳ್ಳಬೇಕೆ೦ದರೆ, ಕಾವ್ಯಕಲೆಗಳಲ್ಲಿ ಕುತೂಹಲವಿದ್ದರೆ ಜಯದೇವನ ಶ್ರಂಗಾರಭರಿತ ನುಡಿಗಳನ್ನು ಕೇಳಿ ಎ೦ದು ಒಂದು ಪ್ರಸಿದ್ಧವಾಕ್ಯವಿದೆ.
ಜಯದೇವನ ಗೀತಗೋವಿಂದ ಎನ್ನುವುದು ಹನ್ನೆರಡು ಸರ್ಗಗಳಲ್ಲಿ ಇಪ್ಪತ್ನಾಲ್ಕು ಅಷ್ಟಪದಿಗಳಿರುವ ಕಾವ್ಯ. ಅಷ್ಟಪದಿಯೆ೦ದರೆ ಎರಡೆರಡು ಸಾಲಿನ ಎ೦ಟು ಶ್ಲೋಕಗಳಿರುವ ರಚನೆ. ಈ ಗೀತ ಗೋವಿಂದದಲ್ಲಿ ರಾಧಾ ಮಾಧವರ ಪ್ರೇಮವೇ ವಸ್ತು. ಗೋಪವೇಷದ ಕೃಷ್ಣ ಗೋಪಿಕೆಯರ ಜೊತೆ ವಿಹರಿಸುತ್ತಿರುವಾಗ ವಿರಹದೀನಳಾದ ರಾಧೆ ಕೃಷ್ಣನನ್ನೊಲಿಸಿ ತರಲು ತನ್ನ ಸಖಿಯನ್ನು ಕಳಿಸುತ್ತಾಳೆ. ರಾಧೆಯ ಬಳಿ ಬ೦ದ ಕೃಷ್ಣ ಅವಳ ಜೊತೆ ವಿಹರಿಸುವುದೇ ಈ ಕಾವ್ಯದ ಸ್ಥೂಲ ಸ೦ರಚನೆ. ಬ೦ಗಾಲದಲ್ಲಿ ಬಹುಪ್ರಸಿದ್ಧವಾಗಿರುವ ಜಾತ್ರಾ ಎ೦ಬ ಉತ್ಸವದಿ೦ದ ಪ್ರೇರೇಪಿತಗೊ೦ಡು ಬ್ರಹ್ಮವೈವರ್ತತ ಪುರಾಣದಲ್ಲಿ ಬರುವ ಪ್ರಸ೦ಗವನ್ನಾಧರಿಸಿ ಇದನ್ನು ರಚಿಸಿರಬಹುದೆ೦ಬ ಊಹೆ ಇದೆ. ಇದರ ಹನ್ನೆರಡು ಸರ್ಗಗಳು ಭಾಗವತ ಪುರಾಣದ ಹನ್ನೆರಡು ಕಾ೦ಡಗಳನ್ನೂ, ಇಪ್ಪತ್ನಾಲ್ಕು ಅಷ್ಟಪದಿಗಳು ಗಾಯತ್ರಿಯ ಇಪ್ಪತ್ನಾಲ್ಕು ಅಕ್ಷರಗಳನ್ನೂ ನೆನಪಿಸುತ್ತವೆ. ಪ್ರೋಷಿತಪತಿಕಾ, ವಿರಹೋತ್ಕ೦ಠಿತಾ, ಅಭಿಸಾರಿಕಾ, ವಿಪ್ರಲಬ್ಧಾ, ವಾಸಕಸಜ್ಜಿಕಾ, ಖ೦ಡಿತಾ, ಕಲಹಾ೦ತರಿತಾ, ಸ್ವಾಧೀನಪತಿಕಾ ಎ೦ಬ ಅಷ್ಟವಿಧನಾಯಿಕೆಯರ ಅವಸ್ಥೆಗಳನ್ನು ರಾಧೆಯಲ್ಲಿ ಚಿತ್ರಿಸಲಾಗಿದೆ. ಶುದ್ಧ ಶೃ೦ಗಾರ ಪ್ರಣಯವು ಮೂಲವಸ್ತುವಾಗಿರುವುದರಿ೦ದ ಕಾಮಶಾಸ್ತ್ರದಲ್ಲಿ ಕ೦ಡುಬರುವ ಸಾಮೋದ ದಾಮೋದರ, ಸಾನ೦ದ ದಾಮೋದರ, ಅಕ್ಲೇಶ ಕೇಶವ, ಮುಗ್ಧ ಮಧುಸೂದನ, ಸ್ನಿಗ್ಧ ಮಧುಸೂದನ, ಸಾಕಾ೦ಕ್ಷ ಪು೦ಡರೀಕಾಕ್ಷ, ಧನ್ಯ ವೈಕು೦ಠ ಕು೦ಕುಮ, ನಾಗರ ನಾರಾಯಣ, ವಿಲಕ್ಷ್ಯ ಲಕ್ಷ್ಮೀಪತಿ, ಮುಗ್ಧ ಮುಕು೦ದ, ಚತುರ ಚತುರ್ಭುಜ, ಸುಪ್ರೀತ ಪೀತಾ೦ಬರ ಎ೦ಬ ವಿವಿಧ ನಾಯಕರ ಭಾವಗಳು ಅಡಕವಾಗಿವೆ.
ತಾನು ಸ್ಮರಿಸುತ್ತಿರುವ ಕೃಷ್ಣನನ್ನು ರಾಧೆ ಸಖಿಯ ಬಳಿ ವರ್ಣಿಸುವ ರೀತಿ:
ಚ೦ದ್ರಕಚಾರುಮಯೂರಶಿಖ೦ಡಕಮ೦ಡಲವಲಯಿತಕೇಶಮ್ |
ಪ್ರಚುರಪುರ೦ದರಧನುರನುರ೦ಜಿತಮೇದುರಮುದಿರಸುವೇಶಮ್ ||
ಅಂದರೆ ಚ೦ದ್ರನಾಕಾರದ ಸು೦ದರ ನವಿಲುಗಿರಿಗಳ ಮ೦ಡಲದಿ೦ದ ಸುತ್ತುವರೆದ ಕೇಶಕಲಾಪದ ಘನಶ್ಯಾಮ ಕಾಮನ ಬಿಲ್ಲಿನ ಬಣ್ಣಗಳಿ೦ದ ರ೦ಜಿತವಾದ ಮೋಡದ ಸೊಬಗನ್ನು ಹೊ೦ದಿದ್ದಾನೆ ಎನ್ನುತ್ತಾನೆ.
ಆಧ್ಯಾತ್ಮ ಶೃ೦ಗಾರದ ರಸ ರಾಜಬೀದಿಯಲ್ಲಿ ಸ್ವಚ್ಚಂದವಾಗಿ ವಿಹರಿಸಿದವನು ಕವಿ ಜಯದೇವ. ಅವನ ಪದರಚನಾಕೌಶಲ ಎಷ್ಟಿದೆಯೆ೦ದರೆ ಸ೦ಸ್ಕೃತ ಅರಿಯದವರಿಗೂ ಅದು ಆದರಣೀಯವಾಗಬಲ್ಲುದು, ರಚನೆಗಳ ಅರ್ಥಸೂಚನೆಯಾಗಬಲ್ಲುದು, ಸ೦ಗೀತದ ಗುಣ, ಭಗವದ್ಭಕ್ತಿ, ಶೃ೦ಗಾರ ರಸಗಳ ಹದವಾದ ಪಾಕ ಭಾಷೆ ಗೊತ್ತಿರದವನಲ್ಲಿಯೂ ಭಾವಪರವಶತೆಯು೦ಟುಮಾಡಬಲ್ಲುದು.
ಉದಾಹರಣೆಗೆ ಮೊದಲನೇ ಸರ್ಗದಲ್ಲಿ ಗೋಪಿಕೆಯರ ಜೊತೆ ರಾಸಕ್ರೀಡೆಯಲ್ಲಿದ್ದ ಕೃಷ್ಣನನ್ನು ತೋರಿಸಿ ರಾಧೆಗೆ ಸಖಿಯು ವರ್ಣಿಸುವುದು ಈ ರೀತಿಯಾಗಿ :
ಚ೦ದನಚರ್ಚಿತನೀಲಕಲೇವರಪೀತವಸನವನಮಾಲೀ |
ಕೇಲಿಚಲನ್ಮಣಿಕು೦ಡಲಮ೦ಡಿತಗ೦ಡಯುಗಸ್ಮಿತಶಾಲೀ ||
ಪೀನಪಯೋಧರಭಾರಭರೇಣ ಹರಿ೦ ಪರಿರಭ್ಯ ಸರಾಗಮ್ |
ಗೋಪವಧೂರನುಗಾಯತಿ ಕಾಚಿದುದ೦ಚಿತಪ೦ಚಮರಾಗಮ್ ||
ಚ೦ದನಚರ್ಚಿತನೀಲಕಲೇವರಪೀತವಸನವನಮಾಲೀ |
ಕೇಲಿಚಲನ್ಮಣಿಕು೦ಡಲಮ೦ಡಿತಗ೦ಡಯುಗಸ್ಮಿತಶಾಲೀ ||
ಪೀನಪಯೋಧರಭಾರಭರೇಣ ಹರಿ೦ ಪರಿರಭ್ಯ ಸರಾಗಮ್ |
ಗೋಪವಧೂರನುಗಾಯತಿ ಕಾಚಿದುದ೦ಚಿತಪ೦ಚಮರಾಗಮ್ ||
ಯಾವುದೇ ಮುಚ್ಚುಮರೆಯಿಲ್ಲದ ಪರಿಶುದ್ಧ ಭಕ್ತಿಯಲ್ಲಿ ಮೈಮರೆತು ಸ್ವಚ್ಚಂದವಾಗಿ ವಿಹರಿಸುವ ಅದ್ಭುತ ಶಕ್ತಿ ಇರುವುದು ಈ ಜಯದೇವ ಗೋಸ್ವಾಮಿಗೆ ಹೊರತು ಬೇರೆಯವರಿಗಲ್ಲ.
ಗೀತಗೋವಿ೦ದ ರಚಿತವಾಗಿ ಸುಮಾರು ಎ೦ಟುನೂರು ವರ್ಷಗಳು ಕಳೆದಿವೆ. ಭಾರತೀಯ ಸ೦ಸ್ಕೃತಿ, ನಾಟ್ಯ, ಚಿತ್ರ, ಕಲೆಗಳಿಗೆ ಅದರ ಕೊಡುಗೆಯನ್ನು, ಇದರಿ೦ದ ಪ್ರಭಾವಿತನಾದ ಚೈತನ್ಯ ಮಹಾಪ್ರಭು ವೈಷ್ಣವ ಪ೦ಥವನ್ನು ಬೆಳೆಸಿದುದರಲ್ಲಿ ವಹಿಸಿದ ಪಾತ್ರವನ್ನು, ಗೀತರೂಪಕವೆ೦ಬ ಹೊಸ ಕಾವ್ಯಪ್ರಕಾರವನ್ನೇ ಹುಟ್ಟುಹಾಕಿದ ಹಿರಿಮೆಯನ್ನೂ, ಹರಿಶ೦ಕರನ ಸ೦ಗೀತರಾಘವ, ನ೦ಜರಾಜನ ಗೀತಗ೦ಗಾಧರ, ಕ೦ಚಿ ಚ೦ದ್ರಶೇಖರೇ೦ದ್ರ ಸರಸ್ವತಿಗಳ ಶಿವಗೀತಮಾಲಿಕಾ, ಉಪನಿಷದ್ ಬ್ರಹ್ಮೇ೦ದ್ರರ ರಾಮಾಷ್ಟಪದೀ, ಪುರುಷೋತ್ತಮಮಿಶ್ರನ ಅಭಿನವ ಗೀತಗೋವಿ೦ದ, ಅನ೦ತನಾರಾಯಣನ ಗೀತಶ೦ಕರ ಸೇರಿದ೦ತೆ ಸುಮಾರು ಹದಿನೈದಕ್ಕೂ ಹೆಚ್ಚು ಅನುಕರಣ ಗೀತಕಾವ್ಯ, ಅಷ್ಟಪದಿಗಳನ್ನು ಸೃಷ್ಟಿಸಿದ ಅದರ ಪ್ರೇರಣಾಶಕ್ತಿಯೇ ಅನನ್ಯ, ಅದ್ಭುತ ಮತ್ತು ಅಲೌಕಿಕ. ಜಯದೇವ ತನ್ನ ಸಮಕಾಲೀನ ಕವಿಗಳನ್ನು ಕೊಂಡಾಡುವಾಗ
ವಾಚಃ ಪಲ್ಲವಯತ್ಯುಮಾಪತಿಧರಃ ಸಂದರ್ಭ ಶುದ್ಧಿಂ ಗಿರಾಂ
ಜಾನೀತೇ ಜಯದೇವ ಏವ ಶರಣಃ ಶ್ಲಾಘ್ಯೋ ದುರೂಹದ್ರುತೇಃ
ಶೃಂಗಾರೋತ್ತರ ಸತ್ಪ್ರಮೇಯ ರಚನೈರಾಚಾರ್ಯ ಗೋವರ್ಧನ
ಸ್ಪರ್ಧೀ ಕೋಪಿ ನ ವಿಶ್ರುತಃ ಶ್ರುತಿಧರೋ ಧೋಯೀ ಕವಿ ಕ್ಷ್ಮಾಪತಿಃ || ಇದು ಲಕ್ಷ್ಮಣ ಸೇನನ ಗೌಡ ಅರಮನೆಯಲ್ಲಿನ ದ್ವಾರದ ಮೇಲೆ ಬರೆಯಲ್ಪಟ್ಟ ಶಾಸನದ ಸಾಲು. ಈತ ಗೀತಗೋವಿಂದ , ಕಾರಕವಾದ, ರತಿಮಂಜರಿ, ತತ್ವಚಿಂತಾಮಣಿ ಈತನ ಕೃತಿಗಳು.

Thursday, 4 January 2018

ಪಂಚಾಯತನ ಪೂಜಾ ವಿಧಾನ.

ಹದಿನೈದನೇ ಶತಮಾನದ ಈ ಶಾಸನದ ಲಿಪಿ ಬಂಗಾಳಿ. ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಾರಿಯಲ್ಲಿನ ಶಾಸನ. ಪಂಚಾಯತನ ಪೂಜಾವಿಧಾನದಲ್ಲಿ ನಿರ್ಮಿಸಲಾದ ಮಠ ಒಂದರಲ್ಲಿರುವ ದೇವಾಲಯವನ್ನು ನಿರ್ದೇಶಿಸಲಾಗಿದೆ . ಪಂಚಾಯತನದ ಬಗೆಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಯಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು
ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ ಪೂಜೆ ಮಾಡುವ ಪದ್ಧತಿಗಳಿವೆ.

ವಿಷ್ಣು ಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ
ಶಿವ ಕೇಂದ್ರ : ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಸೂರ್ಯಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; -ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಅಂಬಿಕಾ ಕೇಂದ್ರ : ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.
ಗಣಪತಿ ಕೇಂದ್ರ : ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯದಲ್ಲಿ ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈರ್ಮುಕ್ತೈ ನಿರ್ಮಾಯ ಭ
ಕ್ತ್ಯಾಧೃತ ವಿಬುಧ ಗಣಂ ಶ್ರೀ ಮಹೇಂದ್ರೋತ್ರ ಸಾಕ್ಷಾತ್ ಮಧ್ಯೇ ವಿಷ್ಣುಂ ಕೃಶಾನೋರ್ದ್ದಿ
ಶಿ ದಿವಸ್ಕರಂ ನೈರೃತೇ ವಿಘ್ನರಾಜಂ ವಾಯವ್ಯೇ ಶೈಲಪುತ್ರೀಂ ಹರಹರಿತಿ ಸೌರೈರ್ವಂದಿ
ತಂ ವಿಶ್ವನಾಥಂ ಶ್ರೀ ಗೋವಿಂದ ಮಿಶ್ರಸ್ಯ ನೀಲೋಪಲೇನ ಘಟಿತೋ ಮಠ ಏಶ ಯ
ಸ್ಯ ಸಂಘರ್ಷ್ಣಾದುಪಚಿತಾ ಕಿಲ ನೀಲ ಮೂರ್ತಿಃ ಅತನ್ವತೀ ವತ ವೃತೈವ ಕಲಂಕ ವಾದಂ 
ವಿಂಬೇ ವಿಧೋರ್ವಿಮಲ ಭಾಸಿ ವಿಭಾತಿ ರೇಖಾ || ಶ್ರೀ ಶತಾವಧಾನಸ್ಯ ||

ಇದು ಈ ಮೊದಲೊಮ್ಮೆ ಹಾಕಿದ್ದೆ ಸ್ವಲ್ಪ ಬೇರೆ ರೀತಿಯಲ್ಲಿ.............


Tuesday, 2 January 2018

ಕನ್ನಡನಾಡಿಗೆ ಮಾತ್ರಾಸಮಕ ಕೊಟ್ಟ ಕುಬ್ಜ ಕವಿ -ಸದ್ಯೋಜಾತ ಭಟ್ಟ

ಬನವಾಸಿಯನ್ನು ಕೇಂದ್ರವನ್ನಾಗಿರಿಸಿಕೊಂಡು ತಮ್ಮ ರಾಜ್ಯವನ್ನು ಸುದೃಢಗೊಳಿಸಿಕೊಳ್ಳುತ್ತಿರುವಾಗ ಕದಂಬರ ಧಾರ್ಮಿಕ ಚೌಕಟ್ಟನ್ನು ಆರಂಭದಲ್ಲಿ ಗೆದ್ದದ್ದು ಬೌದ್ಧಧರ್ಮ. ಅಶೋಕನಿಂದ ದಕ್ಷಿಣದ ಕೆಲವೆಡೆ ಪ್ರಸಾರಿಸಲ್ಪಟ್ಟ ಬೌದ್ಧದರ್ಮದಲ್ಲಿ ವಿಶೇಷ ಆಸಕ್ತಿ ಸಹಜವಾಗಿತ್ತು. ಅನಂತರ ಕಾಲದಲ್ಲೂ ಸಹ ಅವರು ಬೌದ್ಧಧರ್ಮದಿಂದ ದೂರ ಸರಿಯಲಿಲ ಎನ್ನುವ ನಿದರ್ಶನಕ್ಕೆ ರವಿವರ್ಮನ ದಾವಣಗೆರೆ ಸಿದ್ಧಾಯತನ ತಾಮ್ರಪಟ ಮತ್ತು ಜಯತ್ಯಮಿತಗುಣ ಭೃದ್ಬುದ್ಧಸ್ಸತ್ವ ಸಮಾಶ್ರಯಃ| ಶುದ್ಧೋದನ ಕುಲೋದ್ಭೂತಃ ಪದ್ಮ ಪತ್ರ ನಿಭೇಕ್ಷಣಃ|| ಎನ್ನುವ ಬುದ್ಧನ ಸ್ತುತಿಯಿಂದ ಪ್ರಾರಂಭವಾಗುವ ಸು. ಐದು-ಆರನೇ ಶತಮಾನದ ಹೊನ್ನಾವರ ತಾಮ್ರಪಟಗಳು ಆಧಾರವಾಗಿ ಸಿಗುತ್ತವೆ. ಕದಂಬರು ಧರ್ಮದವೊಂದರ ಅಂಧಾಭಿಮಾನಿಗಳಾಗಿರಲಿಲ್ಲವೆಂಬುದು ಸರಿ ಸುಮಾರು ಐವತ್ತು ದಾಖಲೆಗಳು ಸ್ಪಷ್ಟಪಡಿಸುತ್ತವೆ. ವೈದಿಕ ಧರ್ಮವನ್ನು ಎಷ್ಟು ಶ್ರದ್ಧೆಯಿಂದ ಸಲಹಿದರೋ ಅಷ್ಟೇ ಶ್ರದ್ಧೆಯಿಂದ ಜೈನಧರ್ಮವನ್ನೂ ಪೋಷಿಸಿದ್ದಕ್ಕೆ ಮೃಗೇಶವರ್ಮ, ರವಿವರ್ಮ, ಹರಿವರ್ಮ, ಕೃಷ್ಣವರ್ಮ ಮತ್ತು ವಿಷ್ಣುವರ್ಮರ ಜೈನದತ್ತಿಗಳು ನಿದರ್ಶನಗಳಾಗುತ್ತವೆ. ರವಿವರ್ಮ ಬುದ್ಧನನ್ನು ಪ್ರಾರ್ಥಿಸಿದರೆ, ತನ್ನ ಗ್ರಾಮದೇವತೆಯನ್ನು ಮೃಗೇಶವರ್ಮನು ಆರಾಧಿಸಿದನು. ತಮ್ಮ ರಾಜ್ಯದಲ್ಲಿ ಮಹಾದೇವ, ವಿಷ್ಣು, ಜ್ಯೋತಿರ್ಮಯ ಮತ್ತು ಕಾಮದೇವರಿಗೆ ದೇವಾಲಯಗಳನ್ನು ಕಟ್ಟಿಸಿ, ಜಿನನ ಮತ್ತು ಕಾಮನ ಹಬ್ಬಗಳನ್ನು ವರ್ಷವರ್ಷವೂ ಇವರು ಸಡಗರದಿಂದ ಆಚರಿಸಿದರು.
ಬನವಾಸಿ ಮಹತ್ವಾಕಾಂಕ್ಷೆ ಹೊಂದಿದ ರಾಜಕಾರಣಿಗಳಾಗಿರಲಿಲ್ಲ. ಸಾತವಾಹನರ ನಂತರ ದಕ್ಷಿಣಭಾರತವನ್ನು ಆಳಿದ ಅರಸರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಬಾದಾಮಿ ಚಳುಕ್ಯರಂತಾಗಲೀ ತಲಕಾಡಿನ ಗಂಗರಂತಾಗಲೀ ಇವರು ತಮ್ಮ ಸಾಮ್ರಾಜ್ಯದ ವಿರಣೆಗೆ ಮುಂದಾಗಲಿಲ್ಲ್ಲ. ರಾಜಕೀಯವಾಗಿ ಇವರ ಕೊಡುಗೆ ಏನೇ ಇರಲಿ ಕನ್ನಡ ನಾಡು ನುಡಿ ಮತ್ತು ಲಿಪಿಯೊಂದಿಗಿನ ಭಾಷಾಸಾಮ್ರಾಜ್ಯ ಕಟ್ಟಿದ್ದಂತೂ ಸ್ಪಷ್ಟ. ಸುಮಾರು ಐದು ನೂರು ವರ್ಷಗಳಷ್ಟು ಕಾಲ ಊರ್ಜಿತದಲ್ಲಿದ ಪ್ರಾಕೃತ ಮತ್ತು ಬ್ರಾಹ್ಮಿಯ ಯುಗ ಕದಂಬರ ಕಾಲದಲ್ಲಿ ಕನ್ನಡದ ನೆಲದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಬ್ರಾಹ್ಮಿಯ ಸ್ಥಾನವನ್ನು ಕನ್ನಡಲಿಪಿ ಪಡೆದುಕೊಂಡು, ಭಾಷಾಮಾಧ್ಯಮವಾಗಿ ಸಂಸ್ಕೃತ ನೆಲೆಗೊಂಡಿತು. ದಕ್ಷಿಣದಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರವಾಗಿ ಸಂಸ್ಕೃತ ಬಳಕೆಗೆ ಬಂತು. ಹಾಗೂ ಕನ್ನಡ ಭಾಷೆ ಮತ್ತು ಲಿಪಿ ಕ್ರಮೇಣ ಸಂಸ್ಕೃತದೊಂದಿಗೆ ತಮ್ಮ ವ್ಯವಹಾರ ಹಂಚಿಕೊಂಡು ಕನ್ನಡ ಅಧಿಕೃತವಾಗಿ ನೆಲೆಗೊಂಡಿದ್ದು ಕದಂಬರ ಕಾಲದಲ್ಲಿಯೇ. 
ಕದಂಬರು ಕನ್ನಡದ ಜೊತೆಗೆ ಅಪಾರ ಸಂಸ್ಕೃತ ಪ್ರೇಮಿಗಳಾಗಿದ್ದರೆಂಬುದಕ್ಕೆ ಅವರು ಬರೆಸಿರುವ ಹೆಚ್ಚಿನ ಶಾಸನಗಳು ಅದರಲ್ಲೂ ವಿಶೇಷವಾಗಿ ತಾಮ್ರಪಟಗಳು ಇವಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಅಪವಾದವೆಂದರೆ ಕೆಳಗುಂದಿಯವೀರಗಲ್ಲು, ತಮಟಕಲ್ಲು ಮತ್ತು ಪುರ್ದುಕಾನ್ ದಾನಶಾಸನ ಪೂರ್ಣಪ್ರಮಾಣದ ಕನ್ನಡ ಶಾಸನಗಳು. ಈ ಕಾಲದಲ್ಲಾದ ಮತ್ತೊಂದು ಬದಲಾವಣೆ ಎಂದರೆ, ಶಿಲಾಶಾಸನಗಳ ಏಕಸ್ವಾಮ್ಯ ಕೊನೆಗೊಂಡು ತಾಮ್ರಪಟಗಳು ಹೆಚ್ಚಳಗೊಂಡದ್ದು. ಲಿಪಿ ಮಾಧ್ಯಮವು ಬದಲಾದುದಕ್ಕಾಗಿ ಇದು ಮಹತ್ವವೆನಿಸಲಿಲ್ಲ, ಬೇರೆ ಬಗೆಯ ಧಾರ್ಮಿಕ ಸಂಸ್ಕೃತಿಯನ್ನೂ ಆರ್ಥಿಕ ವ್ಯವಸ್ಥೆಯನ್ನೂ ತಂದುದಕ್ಕೆ ಈ ಪಟ್ಟಸಿಕ್ಕಿತು. ಶಿವಸ್ಕಂಧವರ್ಮನ ಹಿರೇಹಡಗಲಿ ಶಾಸನವು ಕರ್ನಾಟಕದಲ್ಲಿ ಬರೆಸಿದ ಮೊದಲ ತಾಮ್ರಪಟ. ಪ್ರಾಕೃತ ಭಾಷೆಯಲ್ಲಿ ಬರೆದು ವೈದಿಕದತ್ತಿಯನ್ನು ದಾಖಲಿಸಿರುವ ಈ ತಾಮ್ರಪಟದಲ್ಲಿ ಅಗ್ನಿಶರ್ಮನನ್ನು ಮೊದಲ್ಗೊಂಡು ಇಪ್ಪತ್ತು ಬ್ರಾಹ್ಮಣರಿಗೆ ವ್ರಿತ್ತಿಗಳನ್ನು ಹಂಚಿದ ವಿವರವಿದೆ. ಇಲ್ಲಿಂದ ಪ್ರಾರಂಭವಾಗುವ ಬ್ರಾಹ್ಮಣ ವೈದಿಕ ಕೊಡುಗೆಗಳು ಕದಂಬರ ಕಾಲದಲ್ಲಿ ಹೆಚ್ಚಾಗಿ, ಭಾಷೆ ಮತ್ತು ಲಿಪಿ ಸಂವಹನದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು.
ಕದಂಬರ ಕಾಲದ ಸಂಸ್ಕೃತವು ಕೇವಲ ವ್ಯವಹಾರ ಭಾಷೆಯಾಗಿ ಮಾತ್ರ ಉಳಿಯದೆ ಸಾಹಿತ್ಯಿಕ ಗುಣವನ್ನು ಹೊಂದಿ ಕಾವ್ಯ ಪರಂಪರೆಗೆ ಬಂತು. ಇದರ ಪ್ರಥಮ ಪ್ರಯೋಗವೇ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಸ್ತಂಭಶಾಸನದಲಿ ಕಾಣಿಸಿಕೊಳ್ಳುತ್ತದೆ. ಸುಮಾರು ಐದು-ಆರನೇ ಶತಮಾನದಲ್ಲಿ ಕವಿ ಕುಬ್ಜ ಇದನ್ನು ಬರೆದ. ಕುಬ್ಜಸ್ಸ್ವ ಕಾವ್ಯಮಿದಮಶ್ಮತಲೇ ಲಿಲೇಖ ಎಂದು ಅವನೇ ಈ ಶಾಸನದಲ್ಲಿ ಬರೆದುಕೊಂಡಿರುವನು. ಪ್ರಾಚೀನ ಕದಂಬರ ಅತಿ ದೊಡ್ಡ ದಾಖಲೆಯಾದ ಇದು ಒಟ್ಟು ೩೪ ಸಂಸ್ಕೃತ ಶ್ಲೋಕಗಳನ್ನೊಳಗೊಂಡಿದೆ. ಸುಂದರ ಅಕ್ಷರಗಳಲ್ಲಿ ಸಮಸಾಲುಗಳಲ್ಲಿ ಕಂಡರಿಸಿರುವ ಕಲ್ಲಿನ ಕಂಭಶಾಸನದಲ್ಲಿ ಅಕ್ಷರದೋಷಗಳು ಕಾಣ ಸಿಗುವುದೇ ಇಲ್ಲ. ಅಲ್ಲದೆ ಅಂದಿನ ನಿಘಂಟಿಗೂ ಗೊತ್ತಿರದ ಕೆಲವು ಅಪರೂಪ ಪದಗಳು ಈ ಪ್ರೌಢ ಕಾವ್ಯದಲ್ಲಿ ನುಸುಳಿಕೊಂಡು ಬಂದಿವೆ.
ಈ ಕಾವ್ಯವನ್ನು ರಚಿಸಲು ಕುಬ್ಜನು ಒಟ್ಟು ಒಂಬತ್ತು ಜಾತಿ ಛಂದಸ್ಸುಗಳನ್ನು ಬಳಸಿಕೊಂಡಿದ್ದಾನೆ. ಪುಷ್ಟಿತಾಗ್ರಾ, ಇಂದ್ರವಜ್ರ, ವಸಂತತಿಲಕ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ ಮತ್ತು ದಂಡಕ ಶಾಖೆಯ ಪ್ರಚಿತವೆಂಬವು ಈ ಕಾಲಕ್ಕಾಗಲೇ ಪರಿಚಿತವಾಗಿದ್ದವು. ಆದರೆ ಸುಮಾರು ೨೪ ಪದ್ಯಗಳನ್ನು ಬರೆಯಲು  ಬಳಸಿರುವ ಮಾತ್ರಾಸಮಕ ಜಾತಿಯ ಮಿಶ್ರಗೀತಿಕಾ ಛಂದಸ್ಸು ಹೊಸದೆಂಬುದು ಹಲವಾರು ಪಂಡಿತರ ಅಭಿಮತ. ಸರಳ ಗದ್ಯದಂತೆ ಓದಿಸಿಕೊಳ್ಳುವ, ಹದಿನೈದು ಮಾತ್ರಾಪಾದದ ನಾಲ್ಕು ಸಾಲುಗಳ ಈ ಕಾವ್ಯಪ್ರಭೇದವನ್ನು ಕೆಲವರು ಗದ್ಯವೆಂದೇ ತಿಳಿದಿದ್ದರು. ಅಪರೂಪವಾಗಿ ಇದನ್ನು ಗುಪ್ತರು ತುಸಾನ್ ಶಿಲಾಶಾಸನದಲ್ಲಿ, ವಾಕಾಟಕರು ಅಜಂತಾ ಗುಹಾಶಾಸನದಲ್ಲಿ ಬಳಸಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ ಬೊವೆರ್ ಹಸ್ತಪ್ರತಿಯ ಕೆಲವು ಪದ್ಯಗಳು ಇದೇ ಜಾತಿಯವೆಂಬುದನ್ನೂ ಗುರುತಿಸಲಾಗಿದೆ. ಐದುರಿಂದಏಳನೇ ಶತಮಾನದಲ್ಲಿ ಎಲ್ಲೋ ಬಳಕೆಯಲ್ಲಿದ್ದ ಈ ಛಂದಸ್ಸನ್ನು ಕುಬ್ಜನು ಕರ್ನಾಟಕಕ್ಕೆ ಪರಿಚಯಿಸಿದ್ದು ಕುಬ್ಜನ ದೊಡ್ಡ ಕೊಡುಗೆ ಅನ್ನಿಸಿಕೊಳ್ಳುತ್ತದೆ.
ಕವಿಕುಬ್ಜನ ಬಗ್ಗೆ ನಮಗೆ ಹೆಚ್ಚು ವಿವರಗಳು ಸಿಗುವುದಿಲ್ಲ. ಬಹುಶಃ ಕಾಲಿದಾಸಗಿಂತ ಸ್ವಲಪ ಕಾಲದಲ್ಲಿಯೇ ಬಂದು ಆತನ ಪರಭಾವಕ್ಕೆ ಒಳಗಾಗಿರಲೂ ಬಹುದು. ಈತನು ಹರ್ಷನ ಕಾಲದ ಬಾಣ ಮತ್ತು ಎರಡನೇ ಪೊಲೆಕೇಶಿಯ ರವಿಕೀರ್ತಿಗಿಂತ ಪೂರ್ವದಲ್ಲಿದ್ದನೆನಿಸುವುದು.
ಕುಬ್ಜನ ನಂತರ ಬಂದ ಕದಂಬ ಕವಿಗಳಾರೂ ಕುಬ್ಜನಷ್ಟು ವಿಧದ ಛಂದಸ್ಸುಗಳನ್ನು ಉಪಯೋಗಿಸಿಕೊಂಡು ಶಾಸನಗಳನ್ನು ರಚಿಸಲಿಲ್ಲ. ಅಲ್ಲದೆ ಇವನಷ್ಟು ಸುದೀರ್ಘ ಶಾಸನಕಾವ್ಯವನ್ನೂ ಬರೆಯಲಿಲ್ಲ. ಸುಮಾರು ಇಪ್ಪತ್ತೇಳು ಶಾಸನ ಕವಿಗಳು ಅನುಷ್ಟುಪ್ ಛಂದಸ್ಸನ್ನು ಮಾತ್ರ ಬಳಸಿದ್ದಾರೆ. ಆರು ಕವಿಗಳು ಆರ್ಯ, ಸ್ರಗ್ಧರಾ, ಉಪಜಾತಿ, ಮುಂತಾದವನ್ನು ಅನುಷ್ಟುಪ್ ಜೊತೆ ಸೇರಿಸಿ ಬರೆದರು. ರವಿವರ್ಮನ ಕಾಲದ ದಾವಣಗೆರೆ, ಹಲಸಿ, ಗುಡ್ನಾಪುರ ಶಾಸನಗಳು ಪ್ರೌಢಕಾವ್ಯಗುಣವನ್ನು ಹೊಂದಿರುವುದನ್ನು ಕಾಣುತ್ತೇವೆ. ಹಲಸಿಯ ಎರಡನೆಯ ಜಿನಶಾಸನದಲ್ಲಿರುವ ಎಂಟು ಬಗೆಯ ಛಂದಸ್ಸುಗಳು ಮತ್ತು ಗುಡ್ನಾಪುರದ ಶಾಸನದಲ್ಲಿ ಪುನರುಕ್ತಿಯಾಗಿರುವ ಮಾತ್ರಾಸಮಕ ಛಂದಸ್ಸು ಬಹುಶಃ ಕುಬ್ಜಕವಿಯ ಪ್ರಭಾವ ಇರಬಹುದು.
ಕುಬ್ಜನ ಕಾವ್ಯದ ಕುರಿತಾಗಿ ಒಂದಿಷ್ಟು : ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿರುವ ಸ್ತಂಭಶಾಸನವು ಕದಂಬರ ಕುರಿತಾಗಿ ಹಾಗೂ ಮಯೂರ ವರ್ಮನ ಕುರಿತಾಗಿ ಕೆಲವು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಮಯೂರನ ಕುರಿತಾಗಿ ಇನ್ನು ಕೆಲವು ವಿಚಾರಗಳನ್ನು ತಿಳಿಸುವ ಇನ್ನೊಂದು ಶಾಸನವೆಂದರೆ ಅದು ಗುಡ್ನಾಪುರ ಶಾಸನ. ವೇದ ವಿದ್ಯಾ ಪಾರಂಗತ ಎನ್ನುವುದನ್ನು ಎರಡೂ ಶಾಸನಗಳು ಬಿಂಬಿಸುತ್ತವೆ, ಒಮ್ಮೆ ಮಯೂರ ಶರ್ಮನು ತನ್ನ ಅಜ್ಜ ವೀರ ಶರ್ಮಜೊತೆಗೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯ ಘಟಿಕಾಸ್ಥಾನಕ್ಕೆ ತೆರಳಿದ್ದ ಎಂದು ಶಾಸನದ ನಾಲ್ಕನೇ ಸಾಲಿನ ೯ನೇ ಶ್ಲೋಕದಿಂದ ತಿಳಿದು ಬರುತ್ತದೆ. ಅಲ್ಲಿ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರ ಶರ್ಮನು, ಪಲ್ಲವರ ರಾಜ ಶಿವಸ್ಕಂದವರ್ಮನು ಸುಮಾರು ೩೪೫ ರಿಂದ ೩೫೫ ರ ಸಮಯದಲ್ಲಿ ಅಶ್ವಮೇಧ ಯಾಗವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಂಚಿಯಲ್ಲಿ ಆ ಸಂದರ್ಭದಲ್ಲಿ ನಡೆದ ಜಗಳ ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಅಪಮಾನಿತನಾದ. ಮಯೂರ ಅದನ್ನು ಅಲ್ಲಿನ ಆಳರಸರಲ್ಲಿ ತನ್ನ ದೂರನ್ನು ನಿವೇದಿಸಿಕೊಂಡರೂ ಸಹ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವಮಾನವನ್ನು ಅನುಭವಿಸಿದ. ಇವುಗಳಿಂದ ಸಹಜವಾಗಿಯೇ ಮಯೂರ ಸಿಟ್ಟಿಗೆದ್ದು ಕಂಚಿಯ ಪಲ್ಲವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ. ಶಸ್ತ್ರ ವಿದ್ಯೆಯನ್ನು ಕಲಿಯಲು ಆರಂಭಿಸಿದ ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನಲ್ಲಿ ೧೧ನೇ ಶ್ಲೋಕದಲ್ಲಿ
"ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ |
ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾ ವಿಪ್ರತಃ ||"
ಎಂದು ಹೇಳಲಾಗಿದೆ. ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನ ಶರ್ಮ ಅಭಿದಾನವನ್ನು ತೊರೆದು ಕ್ಷತ್ರಿಯರ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯ ಸೂಚಕ ಅಭಿದಾನವಾದ ವರ್ಮನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ. ೫ನೇ ಸಾಲಿನ ೧೪ನೇ ಶ್ಲೋಕದಲ್ಲಿ ಮಯೂರ ವರ್ಮನು ಶ್ರೀಪರ್ವತದ್ವಾರಾ ಸಂಶ್ರಿತಾಮ್ ಎಂದು ಉಲ್ಲೇಖಗೊಂಡಿದೆ. ಶ್ರೀ ಶೈಲದ ದಟ್ಟಕಾಡಿನಲ್ಲಿ ಗುಡ್ದಗಾಡಿನ ಜನರಿಂದ ಸೇರಿದ ಸೇನೆ ಕಟ್ಟಿದ ಎನ್ನುವುದು ತಿಳಿದು ಬರುತ್ತದೆ. ಕವಿ ಕುಬ್ಜ ಇದನ್ನು ಮಾತ್ರಾ ಸಮಕ ಅಥವಾ ಮಿಶ್ರಗಣಗೀತಿಕಾ ಬಳಸಿ ರಚಿಸಿದ್ದಾನೆ.
ಭಾರತದ ಇತಿಹಾಸವೇ ಹಾಗೇ. ಇಲ್ಲಿನ ಅನೇಕ ರಾಜರು ರಾಜ ವಂಶಸ್ಥರು ಅಧ್ಯಯನ ಶೀಲರಾಗಿದ್ದರು, ಸಾಹಿತ್ಯದ ಆರಾಧಕರು ಪೋಷಕರು ಆಗಿದ್ದರು. ಇದು ಸಧ್ಯದ ವಿಷಯವಲ್ಲ ತಲತಲಾಂತರಗಳಿಂದಲೂ ನಡೆದು ಬಂದದ್ದು ಅದಕ್ಕೇ ಅಲ್ಲವೇ ನಮಗೆ ಈ ಕೆಳಗಿನ ಶ್ಲೋಕ ಉತ್ತಮ ಉದಾಹರಣೆಯಾಗಿ ದೊರಕುವುದು.
ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ನಾಲ್ಕು ವೇದಗಳನ್ನು ಕಲಿತು ಕಂಠಸ್ಥನಾಗಿ ಅಧ್ಯಯನ ಮಾಡಿಕೊಂಡಿದ್ದೇನೆ ವೇದ ವೇದಾಂಗಗಳ ಸಂಪೂರ್ಣ ಜ್ಞಾನ ನನ್ನಲ್ಲಿದೆ ಅದೇ ರೀತಿ ಬಿಲ್ಲು ಬಾಣಗಳನ್ನು ಹಿಡಿದು ಯುದ್ಧ ಮಾಡುವ ಧನುರ್ವೇದವನ್ನೂ ಕಲಿತಿದ್ದೇನೆ, ನನ್ನ ಬೆನ್ನ ಮೇಲೆ ಬಾಣದೊಂದಿಗೆ ಬಿಲ್ಲಿದೆ, ನಾನು ಯುದ್ಧಕ್ಕೂ ಸಿದ್ಧನಿದ್ದೇನೆ, ಸಾಮರ್ಥ್ಯವೂ ಇದೆ, ಇಲ್ಲಿ ಬ್ರಹ್ಮ ತೇಜಸ್ಸು ನನ್ನ ಮುಖದಲ್ಲಿದ್ದರೆ ಹಾಗೂ ಕ್ಷಾತ್ರತೇಜಸ್ಸು ಇಡೀ ದೇಹದಲ್ಲಿದೆ ನಾನು ಸಂಸ್ಕಾರವಂತನೂ ಹೌದು ಪರಾಕ್ರಮಿಯೂ ಹೌದು. ಎನ್ನುವ ಚಿತ್ರಣ ಈ ಒಂದು ಶ್ಲೋಕ ನಮಗೆ ನೀಡುತ್ತದೆ. ಕಂಚಿಯ ಪಲ್ಲವರಿಂದ ಅವಮಾನಿತನಾದ ಕದಂಬ ವಂಶದ ದೊರೆ ಮಯೂರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತ ಪಲ್ಲವರ ಅಶ್ವಮೇಧಕ್ಕಾಗಿ ಕಟ್ಟಿದ ಕುದುರೆಯಿಂದ ಆದ ಕಲಹದಿಂದ ಮಯೂರ ಸಿಟ್ಟುಗೊಂಡಿದ್ದ. ಅದನ್ನೇ ಇಲ್ಲಿ ಈ ಶಾಸನದ ೫ನೇ ಸಾಲಿನಲ್ಲಿ ೧೩ನೇ ಶ್ಲೋಕದಲ್ಲಿ

"ಕುಶ ಸಮಿತ್ಸ್ರುಗಾಜ್ಯ ಚರುಗ್ರಹಣಾದಿಧಕ್ಷೇನ ಪಾಣಿನಾ |
ಉದ್ವವರ್ಹ ದೀಪ್ತಿಮಚ್ಛಸ್ತ್ರಂ ವಿಜಿಗೀಷಮಾಣೋ ವಸುನ್ಧರಾಮ್ ||"
ದರ್ಭೆ ಹಿಡಿದು ಆಜ್ಯ ಮತ್ತು ಚರುಗಳಿಂದ ಹೋಮ ಹವನಗಳನ್ನು ಮಾಡಬೇಕಿದ್ದ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಭೂಮಿಯನ್ನು ಆಳಲು ಹೊರಟ ಎನ್ನುವುದಾಗಿ ತಾಳಗುಂದದ ಸ್ತಂಭ ಹೇಳಲ್ಪಡುತ್ತದೆ.
ಯೋಂತಪಾಲಾನ್ ಪಲ್ಲವೇಂದ್ರಾಣಾಂ ಸಹಸಾ ವಿನಿರ್ಜ್ಜಿತ್ಯ ಸಂಯುಗೇ |
ಅದ್ಧ್ಯುವಾಸ ದುರ್ಗ್ಗಮಾಮಟವೀಂ ಶ್ರೀ ಪರ್ವ್ವತ ದ್ವಾರ ಸಂಶ್ರಿತಾಮ್ ||

ಕಂಚಿಯಿಂದ ಹೊರಟ ಮಯೂರ ಧನುರ್ವೇದಿಯಾಗಿ ಶ್ರೀಪರ್ವತ ಅಥವಾ ತ್ರಿಪರ್ವತದ ದಟ್ಟ ಕಾಡಿನಲ್ಲಿ ಪ್ರವೇಶಿಸಿ ಅಲ್ಲಿನ ಮೂಲ ನಿವಾಸಿಗಳ ಪಡೆಯನ್ನು ಕಟ್ಟಿ ಬ್ರಹದ್ಬಾಣರೇ ಮೊದಲಾದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ಎನ್ನುವುದಾಗಿ ಹೇಳಲಾಗಿದೆ. ಉಪಾಯದಿಂದ ಪಲ್ಲವರ ಕೈಗೆ ಎಲ್ಲಿಯೂ ಸಿಕ್ಕಿ ಹಾಕಕೊಳ್ಳದೇ ಪರ್ವತದ ಸುತ್ತಲಿನ ಪಲ್ಲವರ ಸಾಮಂತ ದೊರೆಗಳಾದ ಆಂಧ್ರಪಾಲರನ್ನು ಅಲ್ಲಿಂದ ಓಡಿಸಿ ಆ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಂಡು ಮಯೂರ ಬಲಿಷ್ಠನಾಗುತ್ತ ಬಂದ.

Monday, 1 January 2018

ಬುದ್ಧಘೋಷನ ಪದ್ಯ ಚೂಡಾಮಣೀ

ಬೌದ್ಧ ಧರ್ಮ ತನ್ನ ಪ್ರಭವವಿನ್ನೂ ಉಳಿಸಿಕೊಂಡ ಕಾಲವದು. ಕ್ರಿಸ್ತ ಶಕ ೫ನೇ ಶತಮಾನ, ಮಗಧರಾಜ್ಯವನ್ನು ಸಂಗ್ರಾಮನೆನ್ನುವ ರಾಜ ಆಳುತ್ತಿದ್ದ. ಆತನ ಆಸ್ಥಾನದಲ್ಲಿ ಕೇಶಿ ಎನ್ನುವ ಬ್ರಾಹ್ಮಣ ರಾಜ ಪುರೋಹಿತನೊಬ್ಬನಿದ್ದ. ಇವನ ಮಡದಿಯ ಹೆಸರು ಕೇಶಿನಿ ಎಂದು. ವೇದಗಳಿಗೆ ಸಾಯಣಾಚಾರ್ಯರು ಭಾಷ್ಯ ಬರೆದಂತೆ ಬುದ್ಧಘೋಷನೆನ್ನುವವನು ಪಾಲಿ ಭಾಷೆಯಲ್ಲಿ ಬೌದ್ಧ ಗ್ರಂಥಗಳೆಲ್ಲವಕ್ಕೂ ಭಾಷ್ಯ ಬರೆದಿದ್ದಾನೆ. ಈತನೇ ಕೇಶಿ ಮತ್ತು ಕೇಶಿನಿಯರ ಮಗ. ಬ್ರಾಹ್ಮಣದಂಪತಿಗಳ ಮಗನಾಗಿ ಬ್ರಾಹ್ಮಣನಾಗಿದ್ದ ಘೋಷನು ಬೌದ್ಧ ಮತ ದೀಕ್ಷೆ ಸ್ವೀಕರಿಸಿ ಬುದ್ಧಘೋಷನಾಗುತ್ತಾನೆ.
ಅಶೋಕನ ಮಗನಾದ ಮಹಿಂದನಿಂದ ಸಿಂಹಳೀಯ ಭಾಷೆಯಲ್ಲಿ ಬರೆಯಲ್ಪಟ್ಟ "ಬುದ್ಧಬೋಧೆ" ಎನ್ನುವ ಗ್ರಂಥವು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅದನ್ನು ಗಮನಿಸಿದ "ತೀರ"(ಬೌದ್ಧ ಕಾಲಜ್ಞಾನಿ)ಯೊಬ್ಬ ಅದನ್ನು ಮಾಗಧೀ ಭಾಷೆಗೆ ಭಾಷಾಂತರಿಸುವ ಸಮರ್ಥನನ್ನು ತನ್ನ ಕಾಲಜ್ಞಾನದಿಂದ ತಿಳಿಯಲೆತ್ನಿಸುತ್ತಾನೆ. ಇಂತಹ ಕಾರ್ಯಮಾಡಬಲ್ಲ ಸಮರ್ಥನೊಬ್ಬ "ತಾವತಿಂಸ ಸ್ವರ್ಗ"ದಲ್ಲಿರುವುದು ತಿಳಿಯುತ್ತದೆ. ಆ ಸ್ವರ್ಗದ ಪ್ರಮುಖನಾದ ಸಕ್ಕನನ್ನು ಭೇಟಿಯಾಗಿ ತನ್ನ ಕೋರಿಕೆಯನ್ನು ವಿನಂತಿಸುತ್ತಾನೆ. ಸಕ್ಕನು ಸ್ವಲ್ಪ ಸಮಯ ಕೇಳಿ, ಘೋಷನನ್ನು ಕರೆದು ನೀನು ಮಾನವ ಪ್ರಪಂಚದಲ್ಲಿ ಜನಿಸಲು ಇಷ್ಟಪಡುವೆಯಾ ಎಂದಾಗ ಘೋಷನು ದುಃಖಮಯವಾದ ಮಾನವಲೋಕಕ್ಕಿಂತ ಹೆಚ್ಚಿನದ್ಧಾದ ಮುಕ್ತಿಯನ್ನು ಕೇಳುತ್ತಾನೆ. ಆಗ ಸಕ್ಕನು ಮನುಷ್ಯನಾಗಿ ಬುದ್ಧನ ಬೋಧನೆಗಳನ್ನು ಜಗತ್ಕಲ್ಯಾಣಕ್ಕಾಗಿ ಪ್ರಚುರಪಡಿಸುವ ಕೆಲಸ ನಿನ್ನಿಂದ ಆಗ ಬೇಕು ಎಂದು ಕೇಳಿಕೊಂಡಾಗ ಘೋಷನು ಒಪ್ಪಿಕೊಳ್ಳುತ್ತಾನೆ.
ಘೋಷನು ಒಪ್ಪಿಕೊಂಡಿರುವುದನ್ನು ಸಕ್ಕನು "ತೀರ"ನಿಗೆ ತಿಳಿಸುತ್ತಾನೆ ತೀರನು ತನ್ನ ಮಿತ್ರನಾದ ಸಂಗ್ರಾಮರಾಜನ ಆಸ್ಥಾನ ಪುರೋಹಿತ ಕೇಶಿಗೆ ತಿಳಿಸುತ್ತಾನೆ. ಕೇಶಿಯು ತನ್ನ ಮಡದಿ ಕೇಶಿನಿಗೆ ತಿಳಿಸುತ್ತಾನೆ. ಕೇಶಿನಿಯೂ ಒಪ್ಪಿಕೊಳ್ಳುತ್ತಾಳೆ. ಹೀಗೆ ಕೇಶಿ ಮತ್ತು ಕೇಶಿನಿಗೆ ಮಗನಾಗಿ ಹುಟ್ಟಿ ಘೋಷನೆನ್ನುವ ಹೆಸರಿನಿಂದ ಗುರುತಿಸಿಕೊಳ್ಳುತ್ತಾನೆ. ಜನ್ಮದಿಂದ ಏಳು ವರ್ಷಗಳಲ್ಲಿ ವೇದಾದಿಗಳನ್ನೇ ಅಲ್ಲದೇ ಉಳಿದೆಲ್ಲಾ ವಿದ್ಯೆಗಳನ್ನೂ ಕಂಠಸ್ಥ ಮಾಡಿಕೊಳ್ಳುತ್ತಾನೆ. ಈತನು ಪ್ರತಿದಿನ ಆರು ಸಾವಿರ ಪದಗಳನ್ನು ಕಂಥಸ್ಥಮಾಡಿಕೊಳ್ಳುತ್ತಿದ್ದನಂತೆ. ಹೀಗೆ ಕಾಲ ಸಾಗುತ್ತಾ ಇರಲು ಒಂದು ದಿನ ಕೇಶಿಯ ಮಿತ್ರ ಮಹಾತೀರನೊಬ್ಬ ಅತಿಥಿಯಾಗಿ ಬರುತ್ತಾನೆ. ಅತಿಥಿಯು ಊಟಕ್ಕೆ ಕುಳಿತುಕೊಳ್ಳಲು ಘೋಷನ ಪೀಠವನ್ನು ಕೊಡುತ್ತಾನೆ. ಘೋಷನಿಗೆ ಅಸಹ್ಯವಾಗುತ್ತದೆ ಬೋಳುತಲೆಯ ಈ ಅತಿಥಿಯ ಅರ್ಹತೆಯನ್ನು ನೋಡದೇ ನನ್ನನ್ನು ಕಡೆಗಣಿಸಿ ಕೂರಿಸಿದನಲ್ಲಾ ಎಂದು ಕೋಪಗೊಳ್ಳುತ್ತಾನೆ. ಊಟವಾದ ನಂತರ ಘೋಷನು ಆ ಮಹಾತೀರನಲ್ಲಿ ನಿನಗೆ ವೇದ ಗೊತ್ತಾ ಎಂದು ಕೇಳುತ್ತಾನೆ. ಅದಕ್ಕೆ ಬಂದ ಶ್ರಮಣ ಮಹಾತೀರನು ವೇದ ವೇದಾಂಗಳೆಲ್ಲವೂ ಗೊತ್ತು ಎಂದು ಉತ್ತರಿಸುತ್ತಾನೆ. ವೇದಗಳಿಲ್ಲನ ಎಲ್ಲಾ ವಿಷಯಗಳನ್ನು ಅತಿ ಸರಳವಾಗಿ ವಿವರಿಸಿ ಕುಶಲಧರ್ಮ, ಅಕುಶಲಧರ್ಮ, ಅಭ್ಯಾಗತಧರ್ಮವೆಂಬ ವಿಚಾರಗಳನ್ನೊಳಗೊಂಡ "ಅಭಿಧಮ್ಮಸೂತ್ರ"ಗಳನ್ನು ತಿಳಿಸಿ ಹೇಳಿದನು. ಇದನ್ನು ಕೇಳಿಸಿಕೊಂಡ ಘೋಷನು ಮುಂದೆ ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಆಮೇಲೆ ಈತನಿಗೆ ಬುದ್ಧಘೋಷ ಎಂದು ಹೆಸರಾಯಿತು. ಬುದ್ಧಘೋಷನ ತಂದೆ ಕೇಶಿಯೊಡನೆ ರಾಜ ಸಂಗ್ರಾಮನು ವೇದಗಳ ಕುರಿತಾಗಿ ಚರ್ಚಿಸುತ್ತಿದ್ದಾಗ ಒಮ್ಮೆ ಕ್ಲಿಷ್ಟವಾದ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಕೇಶಿಯೂ ಚಿಂತಿಸುತ್ತಿದ್ದಾಗ, ಘೋಷನು ಅದಕ್ಕೆ ಉತ್ತರ ಬರೆದು ತಂದೆಯಲ್ಲಿ ಕಳಿಸಿಕೊಡುತಾನೆ ಇದನ್ನು ನೋಡಿದ ರಾಜನುಮ್ ಒಂದು ಗ್ರಾಮವನ್ನೇ ಕೊಡುತ್ತಾನೆ. ಬುದ್ಧನು ಜ್ಞಾನೋದಯಹೊಂದಿದ ಬೋಧಿಮರದ ಪ್ರದೇಶಕ್ಕೆ ಸಮೀಪದ ಒಂದು ಗ್ರಾಮವನ್ನೇ ಕೇಶಿಗೆ ದಾನ ಕೊಡುತ್ತಾನೆ ಅದು ಘೋಷಗಾಂ ಎಂದೇ ಹೆಸರಾಗಿತ್ತು. ಈಗ ಆ ಗ್ರಾಮ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲ. (ಇದು ಯಾವುದೇ ಐತಿಹಾಸಿಕ ದಾಖಲೆಗಳಿಂದ ನನಗೆ ಸಿಕ್ಕಿಲ್ಲ).
ಇದೇ ಸಮಯದಲ್ಲಿ ಮಹಾನಾಮನು ಶ್ರೀಲಂಕಾವನ್ನು ಆಳುತ್ತಿದ್ದ. ಅದೇ ಸಮಯದಲ್ಲಿ ಬುದ್ಧಘೋಷನು ಶ್ರೀಲಂಕಕ್ಕೆ ಗ್ರಂಥ ಸಂಗ್ರಹಕ್ಕಾಗಿ ಬಂದಿದ್ದಾಗಿ ಅಲ್ಲಿನ ಕೆಲವು ಗ್ರಂಥಗಳಿಂದ ತಿಳಿದು ಬರುತ್ತದೆ. ಕ್ರಿ ಶ ೧೩ನೇ ಶತಮಾನದಲ್ಲಿ ಶ್ರೀಲಂಕದ ಶ್ರಮಣ ಧರ್ಮಕೀರ್ತಿಯು ತನ್ನ "ಮಹಾವಂಶ" ಎನ್ನುವ ಗ್ರಂಥದಲ್ಲಿ ಬುದ್ಧಘೋಷನು ೫ನೇ ಶತಮಾನದಲ್ಲಿದ್ದುದಾಗಿ ಬರೆಯುತ್ತಾನೆ. ವಿಶುದ್ಧಿ ಮಾರ್ಗವು ಕ್ರಿ ಶ ೪೧೦ ರಲ್ಲಿ ಬರೆಯಲ್ಪಟ್ಟಿದೆ ಎಂದು ಬರ್ಲಿಂಗ್ ಹ್ಯಾಂ ಸಹ ಹೇಳುತ್ತಾನೆ. ಇದನ್ನವಲೋಕಿಸಿದರೆ ಬುದ್ಧಘೋಷನ ಕಾಲ ೫ನೇ ಶತಮಾನವೆನ್ನುವುದು ಸರಿ ಎನ್ನಿಸುತ್ತದೆ.
ಬುದ್ಧಘೋಷನ ಭಾಷಾಂತರ ಕಾರ್ಯವು ಮೂರುತಿಂಗಳಲ್ಲಿ ಮುಗಿಸುತ್ತಾನೆ. ಆಮೇಲೆ ತನ್ನ ತಂದೆ ತಾಯಿಯರನ್ನು ನೋಡಲು ಹೊರಡುತ್ತಾನೆ. ಆಗ ಶ್ರೀಲಂಕಾದ ಬೌದ್ಧ ಶ್ರಮಣರು ಇವನ ಭಾಷಾ ಜ್ಞಾನದ ಕುರಿತಾಗಿ ಇವನಿಗೆ ಪಾಳಿ ಮಾಗಧಿ ಬರುತ್ತದೆಯೇ ವಿನಃ ಸಂಸ್ಕೃತಜ್ಞಾನವಿಲ್ಲ ಎಂದು ಹೀಗಳೆಯುತ್ತಾರೆ ಆದರೆ ಅದನ್ನು ನಿರಾಕರಿಸಿ ಸಂಸ್ಕೃತದಲ್ಲಿಯೇ ಉಪನ್ಯಾಸ ಕೊಟ್ಟು ಬರುತ್ತಾನೆ.
ಮಾಗಧೀ ಮತ್ತು ಪಾಲೀ ಭಾಷೆಗಳಲ್ಲಿ ಬುದ್ಧಘೋಷನ ಕೃತಿಗಳು ಲಭ್ಯವಿದ್ದರೂ ಸಂಸ್ಕೃತದಲ್ಲಿ ವಿರಳಾತಿವಿರಳ. ಈಗ ಸಿಕ್ಕಿರುವ ಪದ್ಯಚೂಡಾಮಣಿ ಎನ್ನುವ ಕಾವ್ಯ ಹೊರತು ಪಡಿಸಿದರೆ ಬೇರೆ ಸಿಕ್ಕಿಲ್ಲ. ಇದು ಬುದ್ಧನ ಜೀವನ ಚರಿತ್ರೆಯನ್ನು ಬಿಂಬಿಸುವ ಹತ್ತು ಸರ್ಗಗಳ ಕಾವ್ಯ. ಪ್ರತಿ ಸರ್ಗದ ಕೊನೆಯಲ್ಲಿ "ಬುದ್ಧಘೋಷಾಚಾರ್ಯವಿರಚಿತೇ ಪದ್ಯಚೂಡಾಮಣಿ" ಎಂದು ಹೇಳಿದ್ದಾನೆ. ಇದನ್ನು ಮಹಾಕಾವ್ಯವೆಂದು ಹೇಳಲಾಗಿದ್ದರೂ ಸಹ
ನಗರಾರ್ಣವ ಶೈಲರ್ತುಚಂದ್ರಾರ್ಕೋದಯ ವರ್ಣನೈಃ |
ಉದ್ಯಾನ ಸಲಿಲ ಕ್ರೀಡಾ ಮಧುಪಾನ ರತೋತ್ಸವೈಃ ||
ವಿಪ್ರಲಂಬ ವಿವಾಹೈಶ್ಚ ಕುಮಾರೋದಯ ವರ್ಣನೈಃ |
ಮಂತ್ರದೂತ ಪ್ರಯಾಣಾ ಜಿನಾಯಕಾಭ್ಯುದಯೈರಪಿ || ಎನ್ನುವುದಾಗಿ ದಂಡಿಯು ಮಹಾಕಾವ್ಯ ಲಕ್ಷಣಗಳನ್ನು ಹೇಳುತ್ತಾ ಇದರಲ್ಲಿ ಅರ್ಣವವರ್ಣನ, ಮಧುಪಾನವರ್ಣನ, ಮದುಪಾನ ರತೋತ್ಸವ ವರ್ಣನ, ಮಂತ್ರವರ್ಣನ, ದೂತವರ್ಣನ ಇಲ್ಲದೇ ಇರುವುದರಿಂದ ಇದು ಮಹಾಕಾವ್ಯಗಳ ಸಾಲಿಗೆ ಸೇರುವುದಿಲ್ಲ ಎಂದಿದ್ದಾನೆ.
ಪದ್ಯಚೂಡಾಮಣಿಯ ೯ನೇ ಸರ್ಗದಲ್ಲಿ ಬುದ್ಧನು ಬಿಂಬಸಾರನ ರಾಜಧಾನಿಗೆ ಹೋಗಿರುವುದಾಗಿ ಹೇಲಲ್ಪಟ್ಟಿದೆಯೇ ಹೊರತಿ ಬಿಂಬಸಾರನನ್ನು ಭೇಟಿಯಾದ ಬಗ್ಗೆ ವಿವರಗಳಿಲ್ಲ. ೫೪ನೇ ಶ್ಲೋಕದಲ್ಲಿ ತಪವನ್ನು ಮಾಡಿದ ಕುರಿತು ಹೇಳಲ್ಪಟ್ಟಿದೆ. ಆಲಾರಕಾಲಾಮ ಮತ್ತು ಉದ್ದಕರಾಮಪುತ್ರರೊಡನೆ ಇದ್ದದ್ದು ಇದರಲ್ಲಿ ಬರಲೇ ಇಲ್ಲ ಹೀಗೇ ಪದ್ಯ ಚೂಡಾಮಣಿಯು ಅನೇಕ ವಿರೋಧಾಭಾಸಗಳಿಂದ ಕೂಡಿರುವುದರಿಂದ ಇದು ಬುದ್ಧಘೋಷನ ಹೆಸರಿನಿಂದ ಬೇರೆಯವರಾರೋ ಬರೆದ ಕೃತಿ ಎಂದು ಕೆಲವರು ಹೇಳುತ್ತಾರೆ.
ಕಾಳಿದಾಸ ಮತ್ತು ಅಶ್ವಘೋಷನ ಅನುಕರಣೆಯನ್ನು ತನ್ನ ಕೃತಿಯಲ್ಲಿ ಮಾಡಿಕೊಂಡ ಬುದ್ಧಘೋಷ ರಘುವಂಶ ಕುಮಾರ ಸಂಭವಗಳಲ್ಲದೇ ಅಶ್ವಘೋಷನ ಬುದ್ಧಚರಿತದ ಅನುಸರಣೆ ಎದ್ದು ಕಾಣುತ್ತದೆ. ರಾಜಕುಮಾರನ ವರ್ಣನೆ ಮಾಡುವಾಗ
ಸುಧಾನಿಧಾನಂ ತುಹಿನಾಂಶು ಬಿಂಬಂ ಲಕ್ಷ್ಮೀ ವಿಮಾನಾನಿಚ ಪಂಕಜಾನಿ |
ಆತನ್ವತಾ ಪೂರ್ವಮಮುಷ್ಯ ವಕ್ತ್ರ ನಿರ್ಮಾಣ ಯೋಗ್ಯೇವ ಕೃತಾ ವಿಧಾತ್ರಾ || ಎನ್ನುವುದನ್ನು ಮಾಘನ ಶಿಶುಪಾಲವಧೆಯನ್ನು ಅನುಸರಿಸಿದ್ದಾನೆ.
(ಬ್ರಹ್ಮನು ಈ ಯುವರಾಜನನ್ನು ಸೃಷ್ಟಿಸುವುದಕ್ಕೂ ಮೊದಲು ಪೂರ್ವಭಾವಿಯಾಗಿ ಅಮೃತನಿಧಿ ಮತ್ತು ಹಿಮಾಂಶುವಾದ ಚಂದ್ರನನೂ ಲಕ್ಷ್ಮೀನಿವಾಸ ಸ್ಥಾನಗಳಾದ ಕಮಲಗಳನ್ನೂ ಸೃಷ್ಟಿಸಿದ ನಂತರ ಈ ಯುವರಾಜನ ಮುಖವನ್ನು ನಿರ್ಮಿಸುವ್ವುದಕ್ಕೆ ಅಭ್ಯಾಸ ಮಾಡಲ್ಪಟ್ಟಿರಬೇಕು)

ಪಾಲೀ ಮಾಗಧೀ ಮತ್ತು ಸಂಸ್ಕೃತದಲ್ಲಿ ಸಮಾನ ಪಾಂಡಿತ್ಯಹೊಂದಿದ್ದ ಬುದ್ಧಗುಪ್ತನ ಸಂಸ್ಕೃತಕೃತಿಗಳು ಲಭಿಸದೇ ಇರುವುದು ಬೇಸರ.