Search This Blog

Monday, 25 December 2017

ನೀಲಮತಪುರಾಣ - ಕಲ್ಹಣನ ರಾಜತರಂಗಿಣೀ - ಕಾಶ್ಮೀರ

ಕ್ರಿ. ಶ 1089-1101ರ ಅವಧಿಯಲ್ಲಿ ಕಾಶ್ಮೀರದ ಪ್ರದೇಶವನ್ನು ಹರ್ಷದೇವ ಎನ್ನುವ ರಾಜ ಆಳುತ್ತಿದ್ದ, ಈತನ ಮಂತ್ರಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದವನ ಹೆಸರು ಚಂಪಕ ಎಂದು. ಈ ಚಂಪಕನ ಮಗನೇ ಕಲ್ಹಣ. ಹೌದು ಭಾರತದ ಇತಿಹಾಸದಲ್ಲಿ ಒಂದು ಅದ್ಭುತ ಕೃತಿಯನ್ನು ಕೊಟ್ಟ ಕವಿ. ರಾಜಾಶ್ರಾಯದಲ್ಲಿ ಬೆಳೆದ ಮತ್ತು ಅದೇ ವಾತಾವರಣದಲ್ಲಿ ವಿದ್ಯಾರ್ಜನೆ ಮಾಡಿದ ಕಾರಣದಿಂದ ಈತ ರಾಜಕೀಯ ಪರಿಸ್ಥಿತಿಯನ್ನು ಚೆನ್ನಾಗಿಯೇ ತಿಳಿದುಕೊಂಡು ರಾಜತರಂಗಿಣಿಯಂತಹ ಐತಿಹಾಸಿಕ ಕಾವ್ಯರಚನೆ ಈತನಿಗೆ ಸಾಧ್ಯವಾಯಿತು.
ಕಾಶ್ಮೀರದಲ್ಲಿದ್ದ ಶಿಲಾ ಶಾಸನಗಳು, ತಾಮ್ರ ಪಟಗಳು, ದಾನ ಪತ್ರಗಳು, ತಾಳೆಯೋಲೆಗಳು ಮುಂತಾದವನ್ನು ಬಹು ಶ್ರಮದಿಂದ ಶೇಖರಿಸಿ, ಪ್ರಾಚೀನ ರಾಜಾವಳೀಕಥೆಗಳು, ಪುರಾಣಗಳು ಮುಂತಾದವನ್ನು ಸಂಗ್ರಹಿಸಿ, ನೀಲಮತ, ಸುವ್ರತ, ಕ್ಷೇಮೇಂದ್ರ, ಹಾಲರಾಜ, ಪದ್ಮಮಿಹಿರ, ಮುಂತಾದವರ ಕೃತಿಗಳನ್ನೆಲ್ಲ ಆಮೂಲಾಗ್ರವಾಗಿ ಪರಿಶೀಲಿಸಿದ ನಂತರ ಪುಯಾವುದೇ ದೋಷ ಕಾಣಿಸದಂತೆ ನಿಷ್ಪಕ್ಷಪಾತ ದೃಷ್ಟಿಯಿಂದ ರಾಜರ ವ್ಯಕ್ತಿತ್ವ ಹಾಗೂ ಕೃತಿಗಳನ್ನು ತೂಗಿ ನೋಡಿದುದಾಗಿ ರಾಕತರಂಗಿಣಿಯ ಕುರಿತಾಗಿ ಹೇಳಿದ್ದಾನೆ. ಪುರಾಣಕಾಲದಿಂದ ತನ್ನ ಜೀವಿತಕಾಲದ ವರೆಗಿನ ಕಾಶ್ಮೀರದ ಸಮಗ್ರ ಇತಿಹಾಸವನ್ನು ಬರೆಯುವುದು ಕಲ್ಹಣನ ಗುರಿಯಾಗಿತ್ತು; ಮೊದಲ ಭಾಗದಲ್ಲಿ ಗೋನಂದ, ಕರ್ಕೋಟ, ಉತ್ಪಲ, ಲೋಹರ, ಮುಂತಾದ ರಾಜವಂಶಗಳ ಚರಿತ್ರೆ ಬರುತ್ತದೆ. ಈ ಭಾಗದಲ್ಲಿ ಪೌರಾಣಿಕಾಂಶಗಳೇ ಹೆಚ್ಚು; ಖಚಿತವಾದ ಕಾಲದೇಶಾದಿ ವಿವರಗಳು ಕಡಿಮೆ. ಆದರೆ ತನ್ನ ಕಾಲದ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಕಲ್ಹಣನ ನಿರೂಪಣೆ ಐತಿಹಾಸಿಕ ದೃಷ್ಟಿಯಿಂದ ಹೆಚ್ಚು ಖಚಿತಗೊಳ್ಳುತ್ತದೆ.
ಕಲ್ಹಣನ ಬಗ್ಗೆ ತಿಳಿಯ ಬೇಕಿದ್ದರೆ ಕಾಶ್ಮೀರವನ್ನು ಸ್ವಲ್ಪ ಮೆಲುಕುಹಾಕಲೇ ಬೇಕು.
ಕಾಶ್ಮೀರಾಃ ಪಾರ್ವತೀ ತತ್ರ ರಾಜಾಜ್ಞೇಯೋ ಹರಾಂಶಜಃ |
ನಾವಜ್ಞೇಯಃ ಸ ದುಷ್ಟೋಪಿ ವಿದುಷಾ ಭೂತಿಮಿಚ್ಛತಾ || 1 : 27 ||
ಕಾಶ್ಮೀರ ಎನ್ನುವುದು ಸಾಕ್ಷಾತ್ ಪಾರ್ವತಿಯೇ ಎಂದು ಈ ಶ್ಲೋಕ ಹೇಳುತ್ತದೆ.
ಪ್ರಾಚೀನ ಕಾಲದಲ್ಲಿ, ಈಗಿನ ಜಮ್ಮು ಕಾಶ್ಮೀರದ ಭೂಗಭಾಗವೆಲ್ಲ ನೀರಿನಿಂದ ತುಂಬಿ ಕೊಂಡಿತ್ತು. ಒಂದು ದೊಡ್ದ ಸರೋವರದಂತೆ ಕಾಣಿಸುತ್ತಿತ್ತು. ಅದು ಅತಿ ದೊಡ್ಡ ಸರೋವರ. ಆ ಸರೋವರದ ಹೆಸರು ಸತೀಸರಸ್ ಅಥವಾ ಸತಿಸರ ಎಂದು ಕರೆಯಲಾಗುತ್ತಿತ್ತು. ಅದೊಂದು ನಿರ್ಜನ ಪ್ರದೇಶ. ರಾಕ್ಷಸರೂ ಹಾಗೂ ಪಿಶಾಚಿಗಳು ಇದ್ದರು. ಅವರೆಲ್ಲರ ಮುಖಂಡ ಜಲಧರ ಎನ್ನುವವನು. ಆತನಿಗೆ ಜಲದೇವ ಎನ್ನುವ ಇನ್ನೊಂದು ಹೆಸರೂ ಇತ್ತು. ರಾಕ್ಷಸರು ಈ ಸರೋವರದ ಸಮೀಪ ಬರಲೂ ಯಾರನ್ನೂ ಬಿಡುತ್ತಿರಲಿಲ್ಲ, ದಡದ ಮೇಲೆ ನೆಲಸಲೂ ಬಿಡುತ್ತಿರಲಿಲ್ಲ. ಪ್ರಶಾಂತವಾದ ಈ ಸ್ಥಳವು ತಪಸ್ಸಿಗೆ ಒಳ್ಳೆಯ ಪ್ರದೇಶವೆಂದು ತಪೋನಿರತ ಸಾಧುಗಳು ಬಂದರೆ ಅಂತವರಿಗೆ ಜಲಧರನೂ ಅವನ ಕಡೆಯವರೂ ಹಿಂಸೆಕೊಟ್ಟು ಓಡಿಸುತ್ತಿದ್ದರು. ತಪಸ್ವಿಗಳೆಲ್ಲಾ ಸೇರಿ ಬ್ರಹ್ಮಸ್ಥಾನದಲ್ಲಿದ್ದ ಕಶ್ಯಪನಲ್ಲಿ ದೂರಿಕೊಳ್ಳುತ್ತಾರೆ. ಕಶ್ಯಪ ಋಷಿ ಈ ಸರೋವರದ ಕಡೆ ಬರುತ್ತಾನೆ.) ಕಶ್ಯಪನ ಮೂಲ ಉದ್ದೇಶ ಇವರನ್ನೆಲ್ಲಾ ಅಲ್ಲಿಂದ ಹೊಡೆದೋಡಿಸುವುದಾಗಿತ್ತು. ಅಲ್ಲಿ ಕಶ್ಯ್ಪ ಮಹರ್ಷಿ ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ, ಅವನನ್ನು ಅನುಗ್ರಹಿಸಲು ಒಂದು ಹಕ್ಕಿಯ ವೇಷಧರಿಸಿ 'ಶಾರಿಕಾ" ದೇವತೆ ಬಂದಳಂತೆ. ಆ ಹಕ್ಕಿಯು ತನ್ನ ಕೊಕ್ಕಿನಲ್ಲಿ ಒಂದು ಚಿಕ್ಕ ಕಲ್ಲನ್ನು ಕಚ್ಚಿಕೊಂಡು ಬಂದು ಸರೋವರದೊಳಗೆ ಹಾಕಿತು. ಆ ಕಲ್ಲೇ ದೊಡ್ಡ ಪರ್ವತವಾಗಿ ಬೆಳೆದು, ಆ ಪರ್ವತದ ಕೆಳಗೆ ಸಿಕ್ಕಿ ಜಲಧರ ಮತ್ತು ಅವನ ಸಂಗಡಿಗ ರಾಕ್ಷಸರೆಲ್ಲ ಸತ್ತುಹೋದರು. ಅದನ್ನೇ ಈಗ ಹರಿಪರ್ವತ ಅಥವಾ ಹರಿ-ಪರ್ಬತ್ ಎಂದು ಕರೆಯುತ್ತಾರೆ. ಈ ಸರೋವರದ ನೀರನ್ನೆಲ್ಲ ಕಶ್ಯಪ ಮುನಿ ಬಾರಾಮುಲಾದ ಮೂಲಕ ಹೊರಹಾಕಿ ಜನವಸತಿಗೆ ಯೋಗ್ಯವಾದ ನೆಲವನ್ನಾಗಿ ಸರೋವರವನ್ನು ಮಾಡಿದ ಜಾಗಕ್ಕೆ 'ಕಾಶ್ಯಪಮಾರ್' ಎಂದು ಹೆಸರಾಯಿತು. ಕಾಲಾಂತರದಲ್ಲಿ ಅದು ಕಾಶ್ಯಪಾರ್ ಎಂದು ಆಯಿತು. ಕೊನೆಗೆ ಇಂದು ಅದು ಕಾಶ್ಮೀರ ಎಂಬ ಹೆಸರನ್ನು ತಾಳಿತು. ಈ ಕಥೆ ಒಂದು ಕಲ್ಪಿತ ದಂತಕಥೆ ಆಗಿರಲೂ ಬಹುದು. ಧ್ಯಾನಾಸಕ್ತ ಬುದ್ಧಿವಂತ ಜನರೇ ಮುಂದೆ ಇಂದಿಗೂ ಕಾಶ್ಮೀರಿ ಪಂಡಿತರು ಎಂದೇ ಪ್ರಖ್ಯಾತಿಗೆ ಬಂದದ್ದು. ಈ ಕಾಶ್ಮೀರದಲ್ಲಿ ಕಶ್ಯಪನ ಮಗ ನೀಲನಾಗನ ಕಥೆಯೂ ಹೆಚ್ಚು ಪ್ರಚಲಿತವಾಗಿದೆ. ಇಲ್ಲಿನ ಜನ ನೀಲಮತ ಪುರಾಣ ಎನ್ನುವ ಗ್ರಂಥಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.
ಸುಮಾರು 1453 ಶ್ಲೋಕಗಳನ್ನು ಹೊಂದಿದ ಈ ಗ್ರಂಥದ 210 ರಿಂದ 222ನೇ ಶ್ಲೋಕದಲ್ಲಿ ಕಾಶ್ಮೀರದ ಕುರಿತು ಅದೊಂದು ದೋಣಿಯಾಕಾರದ ಪ್ರದೇಶವೆಂದು ಸರೋವರದ ಕಲ್ಪನೆಯನ್ನೇ ಕೊಡುತ್ತದೆ. ಇದೇ ನೀಲಮತ ಪುರಾಣವೇ ಮುಂದೆ ಕಲ್ಹಣನಿಗೆ ರಾಜತರಂಗಿಣಿಯನ್ನು210 ಬರೆಯಲು ಪ್ರೇರಣೆ ನೀಡುತ್ತದೆ.
ನೀಲಮತದಲ್ಲಿ :
ನಾಬಂಧನಮಥಾಸಾಧ್ಯ ಸ್ಥಿತ್ವಾ ತೇ ಸುರಸತ್ತಮಾಃ |
ವಿಚಾರನಿರತಾಸ್ತಸ್ಥುಃ ಕಿಂಕಾರ್ಯಮಿತಿ ಚಿಂತಯಾ || 213

ದೇವಾನುಯಾತ್ರಾನಿನದಂ ಶ್ರುತ್ವಾ ದೈತ್ಯಃ ಸುದುರ್ಮತಿಃ |
ಜಲೇ ತ್ವವಧ್ಯಮಾತ್ಮಾನಂ ವಿದಿತ್ವಾ ನ ಬಹಿರ್ಯಯೌ || 214

ತನ್ಮಧ್ಯ ಶಿಖರೇ ರುದ್ರೋ ದಕ್ಷಿಣೇ ಶಿಖರೇ ಹರಿಃ |
ಉತ್ತರೇ ಶಿಖರೇ ಬ್ರಹ್ಮಾ ತೇಷಾಮನುಸುರಾಸುರಾಃ || 216 ಹೀಗೇ ಮುಂದುವರೆದು ಎಲ್ಲಾ ದೇವತೆಗಳ ವಾಸಸ್ಥಾನವಾದ ಭುವಿಗಿಳಿದ ಸ್ವರ್ಗ ಎಂದು ಬಣ್ಣಿಸಲಾಗಿದೆ.

ವಿದಾರಿತೇ ಪರ್ವತರಾಜರಾಜೇ ವಿನಿರ್ಯಯೌ ತಜ್ಜಲಮಾಶುವೇಗಾತ್ |
ವೇಗೇನ ಶಬ್ದೇನ ಚ ಸರ್ವಭೂತಾನ್ ಸಂತ್ರಾಸಮಾನಂ ಕುಟಿಲೈಸ್ತರಂಗೈಃ || 221
ಹಿಮಾಚಲಾಭೈರ್ಗಗನಂ ಸ್ಪೃಷದ್ಭಿಃ ಸಂಪ್ಲಾವಮಾನಂ ಗಿರಿಮಸ್ತಕಾನಿ |
ಸಂಕ್ಷೀಯಮಾನೇ ಸರಸಸ್ತು ತೋಯೇ ಚಕಾರ ಮಾಯಾಂ ಸ ಜಲೋದ್ಭವಾಖ್ಯಃ || 222 ಇದೇ ರೀತಿ ನೀಲಮತವು ಕಾಶ್ಮೀರದ ಕುರಿತಾಗಿ ವರ್ಣಿಸುತ್ತಾ ಸಾಗುತ್ತದೆ. ಅದನ್ನೇ ರಾಜತರಂಗಿಣಿ ಪುನರುಚ್ಚರಿಸುತ್ತದೆ.
ನೀಲಮತದ 40 ರಿಂದ 46ನೇ ಶ್ಲೋಕದವರೆಗೆ ಸತೀದೇಶ ಎನ್ನುವುದಾಗಿಯೂ ಸತೀ ಸರೋವರ ಎನ್ನುವುದಾಗಿಯೂ ಹೇಳಲ್ಪಟ್ಟಿದೆ. ನೀಲಮತವು ಕಾಶ್ಮೀರದ ಮೂಲ ನಿವಾಸಿಗಳೆಂದು ಬಣ್ಣಿಸಿದೆ.
ಮತ್ಸ್ಯ ರೂಪಧರೋ ವಿಷ್ಣುಃ ಶೃಂಗೇ ಕೃತ್ವಾಪಕರ್ಷತಿ ಎನ್ನುವ 61ನೇ ಶ್ಲೋಕದಿಂದ 71ನೇ ಶ್ಲೋಕದವರೆಗೆ ಈ ಸತೀ ದೇಶದಲ್ಲಿ ವಾಸಿಸಲು ಗರುಡನಿಂದ ನಿಮಗೆ ಅಂದರೆ ನಾಗರಿಗೆ ಯಾವುದೇ ತೊಂದರೆಯೂ ಆಗಲಾರದು ಎಂದು ಮಹಾವಿಷ್ಣುವೇ ಸೂಚಿಸುತ್ತಾನೆ. ಕಶ್ಯಪನ ಮಗನಾದ ನೀಲನು ತಾವು ಮಾನವರು ತಾವು ನಾಗರೊಂದಿಗೆ ಇರಬಹುದು ಆದರೆ ಪಿಶಾಚರೊಂದಿಗೆ ಇರಲು ಅಸಾಧ್ಯವೆಂದು ಶ್ಲೋಕ 223 ರಿಂದ ಹೇಳಿದಾಗ ಸಹನೆಯಿಂದ ಇರಿ ಮುಂದೆ ನಾಗರನ್ನು ಶೃದ್ಧಾ ಭಕ್ತಿಗಳಿಂದ ಎಲ್ಲರೂ ಪೂಜಿಸುತ್ತಾರೆ ಎನ್ನುತ್ತಾನೆ. ಕಶ್ಯಪನಿಂದ ಕಾಶ್ಮೀರ ಎಂದಾದರೂ. ಸಂಸ್ಕೃತದಲ್ಲಿ ಕ ಎನ್ನುವುದಕ್ಕೂ ನೀರು ಎನ್ನುವ ಅರ್ಥವಿದೆ. ಕಾಶ್ಮೀರ ಎನ್ನುವುದು ಸರೋವರದ ನಾಡು ಒಂದೆಡೆ ಹಿಮಾಲಯ ಕಾಣಿಸುತ್ತದೆ ಹೀಗೆ ಅತ್ಯದ್ಭುತ ರಮಣೀಯ ಸ್ವರ್ಗ ಅದು.
ಇವಿಷ್ಟು ನೀಲಮತದಲ್ಲಿನ ಉದಾಹರಣೆಯಾದರೆ ಇನ್ನು ಮೂಲತಃ ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣ ತನ್ನ 'ರಾಜತರಂಗಿಣಿ"ಯಲ್ಲಿ ಕಾಶ್ಮೀರವನ್ನು ಸ್ವಲ್ಪ ಬೇರೆ ರೀತಿಯಲ್ಲಿ ವರ್ಣಿಸಿದ್ದಾನೆ. ಕಲ್ಹಣನು ಹೇಳುವಂತೆ
ಪುರಾ ಸತೀಸರಃ ಕಲ್ಪಾರಂಭಾ ಪ್ರಭೃತಿ ಭೂರಭೂತ್ |
ಕುಕ್ಷೌ ಹಿಮಾದ್ರೇ ರಣೇಭಿಃ ಪೂರ್ಣೇ ಮನ್ವಂತರಾಣಿ ಷಟ್ ||25||
ಮನ್ವಂತರದ ಆರಂಭದಲ್ಲಿ ಮೊದಲ ಆರು 'ಮನು"ಗಳ ಕಾಲದಲ್ಲಿ ಹಿಮಾಲಯದ ಗರ್ಭದಲ್ಲಿದ್ದ ಈ ನೆಲವೆಲ್ಲ ಜಲಾವೃತವಾಗಿತ್ತು ಮತ್ತು ಎಲ್ಲವೂ ಸತಿಯ ಸರೋವರವೇ"ಸತೀಸರಸ್" ಆಗಿತ್ತು.
ಅಥ ವೈವಸ್ವತೀಯೇಸ್ಮಿನ್ ಪ್ರಾಪ್ತೇ ಮನ್ವಂತರೇ ಸುರಾನ್ |
ದ್ರುಹಿಣೋಪೇಂದ್ರರುದ್ರಾದಿನವತಾರ್ಯ ಪ್ರಜಾ ಸ್ರಜಾ || 26
ಆಮೇಲೆ, ಈಗ ಪ್ರಸ್ತುತದಲ್ಲಿ ನಡೆಯುತ್ತಿರುವ ಏಳನೆಯ ವೈವಸ್ವತ ಮನ್ವಂತರ ಆರಂಭವಾದಾಗ ದ್ರುಹಿಣ, ಉಪೇಂದ್ರ ಮತ್ತು ರುದ್ರಾದಿ ದೇವತೆಗಳು ಇಲ್ಲಿ ಅವತರಿಸಲು ಪ್ರಜಾಪ್ರತಿಯಾದ ಕಶ್ಯಪನು ಕಾರಣನಾದನು.
ಕಶ್ಯಪೇನ ತದನ್ತಃಸ್ಥಂ ಘಾತಯಿತ್ವಾ ಜಲೋದ್ಭವಂ |
ನಿರ್ಮಮೇ ತತ್ಸರೋ ಭೂಮೌ ಕಶ್ಮೀರಾ ಇತಿ ಮಂಡಲಮ್ || 27
ಈ ಸರೋವರದಲ್ಲಿ ಇದ್ದ 'ಜಲೋದ್ಭವ"ನೆಂಬ ರಾಕ್ಷಸನನ್ನು ಕಶ್ಯಪನು ಹೊಡೆದೋಡಿಸಿದನು. ಅಲ್ಲಿ 'ಕಶ್ಮೀರಾ" ಎಂಬ ಭೂಮಿಯನ್ನು ನಿರ್ಮಿಸಿದನು. ಇದು ಕ  ಕಲ್ಹಣ ತನ್ನ ರಾಜ ತರಂಗಿಣಿಯಲ್ಲಿ ಬರೆದಿರುವುದು.
ಉದ್ದದ್ವೈತಸ್ತನಿಃಷ್ಯಂತಃ ದಂಡಕುಂಡಾತಪತ್ರಿಣಾ |
ಯತ್ಸರ್ವನಾಗಾಧೀಶೇನ ನೀಲೇನ ಪರಿಪಾಲ್ಯತೇ || 28

ಈ ಕಾಶ್ಮೀರಿ ನೆಲ ಜಲ ನಾಗ ಎಲ್ಲದರ ದೊರೆ ನೀಲನಿಂದ ಪರಿಪಾಲಿಸಲ್ಪಡುವ ಪ್ರದೇಶ. ಈ ನೀಲಕುಂಡ ಒಂದು ವೃತ್ತಾಕಾರದ ಮಹಾ ಸರೋವರವಿದ್ದಂತೆ, ನೀಲನ ರಾಜಲಾಂಛನ ಬೆಳ್ಗೊಡೆ, ವಿತಸ್ತಾ ನದಿಯೆಂದರೆ ಆ ರಾಜಲಾಂಛನದ ದಂಡ. ಎನ್ನುವುದಾಗಿ ರಾಜತರಂಗಿಣಿಯಲ್ಲಿ ಹೇಳಲ್ಪಟ್ಟಿದೆ.  ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ ಸಂಸ್ಕೃತದಲ್ಲಿ ಬರೆಯಲ್ಪಟ್ಟ ರಾಜತರಂಗಿಣಿ, ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ  ರಾಜರ, ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ಈ ಕೃತಿಯು ಸಾಮಾನ್ಯವಾಗಿ ಕಾಶ್ಮೀರದ ಪರಂಪರೆಯನ್ನು ದಾಖಲಿಸುತ್ತದೆ, ಆದರೆ ರಾಜತರಂಗಿಣಿಯ 120 ಪದ್ಯಗಳು ರಾಜ ಅನಂತದೇವನ ಪುತ್ರ ರಾಜ ಕಲಶನ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ದುರಾಡಳಿತವನ್ನು ವಿವರಿಸುತ್ತವೆ. ಮುಂಚಿನ ಪುಸ್ತಕಗಳು ತಮ್ಮ ಕಾಲಗಣನೆಯಲ್ಲಿ ನಿಖರವಾಗಿಲ್ಲವಾದರೂ, ಅವು ಮುಂಚಿನ ಕಾಶ್ಮೀರ ಮತ್ತು ಭಾರತೀಯ ಉಪಖಂಡದ ವಾಯವ್ಯ ಭಾಗಗಳಲ್ಲಿನ ಅದರ ನೆರೆರಾಜ್ಯಗಳ ಬಗ್ಗೆ ಮಾಹಿತಿಯ ಒಂದು ಅಮೂಲ್ಯ ಮೂಲವನ್ನು ಒದಗಿಸುತ್ತವೆ, ಮತ್ತು ನಂತರದ ಇತಿಹಾಸಕಾರರು ಹಾಗು ಜನಾಂಗ ವರ್ಣನಕಾರರಿಂದ ವ್ಯಾಪಕವಾಗಿ ಉಲ್ಲೇಖಿಸಲಾಗುತ್ತವೆ. ರಾಜತರಂಗಿಣಿಯು ಭಾರತದ ಮೊದಲ ಇತಿಹಾಸ ಗ್ರಂಥ ಮತ್ತು ಈತನೇ ಮೊದಲ ಇತಿಹಾಸಕಾರ ಎಂದೆನಿಸಿದರೂ ಸಹ ರಾಜತರಂಗಿಣಿಯಲ್ಲಿ ಬರುವ ಅನೇಕ ವಿಷಯಗಳು ರಂಜನೆಗಾಗಿಯೇ ತುರುಕಲ್ಪ ಕಲ್ಪಿತಗಳು ಎನ್ನಿಸುತ್ತವೆ. ಅದೇನೇ ಇರಲಿ ಈತನ ರಾಜತರಂಗಿಣಿಯಿಂದ ಈತನಿಗಿಂತ ಹಿಂದೆ ಆಗಿ ಹೋದ ಸಾಹಿತ್ಯಕೃತಿಗಳು, ಕಲೆ, ಕಲಾ ಪ್ರಕಾರಗಳೂ ಅಲ್ಲದೇ ಇನ್ನೂ ಅನೇಕ ವಿಷಯಗಳಂತೂ ಸಿಗುತ್ತವೆ.

Sunday, 24 December 2017

ಜ್ಯೋತಿರ್ಮಯಂ ಬ್ರಹ್ಮ ವಿದಾಂ ಶರಣ್ಯಂ - ದ್ಯಾವಾ ಪೃಥಿವ್ಯೋ ಪೃಥಿತ ಪ್ರಭಾವಃ

ಬ್ರಾಹ್ಮಿಯಿಂದ ಕಳಚಿಕೊಂಡು ಸಂಸ್ಕೃತಭಾಷೆ ಮತ್ತು ಕನ್ನಡ ಲಿಪಿಗೆ ಬಂದ ಕದಂಬರ ಭಾಷಾ ಮತ್ತು ಲಿಪಿ ಮಾಧ್ಯಮದಲ್ಲಿ ಶಾಸನಗಳಂತೂ ಸಾಹಿತ್ಯಾಸಕ್ತರಿಗೆ ದೊಡ್ದ ಆಕರವನ್ನೇ ಸೃಷ್ಟಿಸಿತು.
ಕದಂಬರ ಶಾಸನಗಳನ್ನು ಒಮ್ಮೆ ಓದಿಕೊಂಡರೆ ಸಾಲದು ಅದು ಪುನಃ ಪುನಃ ಓದಿದಾಗ ಅದರ ಅರ್ಥವೇ ವಿಸ್ತಾರವಾಗುತ್ತಾ ಸಾಗುತ್ತದೆ. ಈ ಶಾಸನ ಕುಬ್ಜನಿಗಿಂತ ಮೊದಲೇ ಬಂದಿರುವ ಶಾಸನ. ಮಹಾವಿಷ್ಣುವಿನ ಶ್ಲೋಕದಿಂದ ಆರಂಭವಾಗುವ ಈ ಶಾಸನ ದ್ಯಾವಾಪೃಥಿವಿಗೆ ಕದಂಬರ ರಾಜ್ಯವನ್ನು ಹೋಲಿಸುತ್ತದೆ.

ಜ್ಯೋತಿರ್ಮಯಂ ಬ್ರಹ್ಮ ವಿದಾಂ ಶರಣ್ಯಂ ವಿಶ್ವಸ್ಯಕರ್ತಾರಮನೇಕರೂಪಂ |
ವಿಭುಂಪತಿಂ ಸ್ಥಾವರ ಜಂಗಮಾನಾಂ ವಿಷ್ಣುಂನಮಸ್ಯಾಮಿ ತದೇಕ ಚಿತ್ತಂ ||

ಹಾರಿತ್ಯುದಿತಾದಿ ಸರ್ಗೇ ಕದಂಬ ವಂಶೇ ನಭಸೀವ ಸೂರ್ಯಃ |
ಕಾಕುಸ್ಥ ವರ್ಮೇತಿ ನೃಪೋ ಬಭೂವ ದ್ಯಾವಾ ಪೃಥಿವ್ಯೋ ಪೃಥಿತ ಪ್ರಭಾವಃ ||


ಕ್ರಿ. ಶ. ೫ನೇ ಶತಮಾನದ ಬನವಾಸಿಯ ಕದಂಬರ ಮೃಗೇಶವರ್ಮನ ಶಾಸನದ ಸಾಲು. ಈ ಸಾಲುಗಳು ಎಷ್ಟು ಸುಂದರವೋ ಈ ಲಿಪಿಯೂ ಸಹ ಅತ್ಯಂತ ಸುಂದರ. ಸಮ ಸಾಲುಗಳಲ್ಲಿ ಬರೆಯಲಾಗಿದೆ. ನಾನು ಗಮನಿಸಿದಂತೆ ಕದಂಬರ ಕಾಲದಲ್ಲಿ ಲಿಪಿಯ ಬಗ್ಗೆ ಹೆಚ್ಚು ಆಸ್ಥೆ ವಹಿಸಿದಂತೆ ಕಾಣುತ್ತದೆ. ತಾಳಗುಂದದ ಸ್ತಂಬ ಶಾಸನ ಇರಬಹುದು ಗುಡ್ನಾಪುರ ಶಾಸನ ಇರಬಹುದು ಸಾಹಿತ್ಯಿಕ ದೃಷ್ಟಿಯಿಂದ ಎಷ್ಟು ಮುಖ್ಯವೋ ಲಿಪಿಯ ದೃಷ್ಟಿಯಿಂದಲೂ ಅಷ್ಟೆ ಪ್ರಾಧಾನ್ಯತೆ ಪಡೆಯುತ್ತದೆ. ಇದು ಕೂಡಾ ಕುಬ್ಜನ ತಾಳಗುಂದ ಶಾಸನದಂತೆಯೇ ಅಕ್ಷರ ಖಂಡರಿಸಲಾಗಿದೆ. ಪ್ರತಿಯೊಂದು ಅಕ್ಷರ ಬರೆಯುವಾಗಲೂ ಬಹಳ ಜಾಗ್ರತೆ ವಹಿಸಿ ಸ್ವಲ್ಪವೂ ಮೇಲಕ್ಕೆ ಕೆಳಕ್ಕೆ ಬರದಂತೆ ಸುಂದರವಾಗಿ ಖಂಡರಿಸಲಾಗಿದೆ. ಆದರೆ ಸಾಲುಗಳು ಮಾತ್ರ ಗುಡ್ನಾಪುರ ಶಾಸನದಂತೆಯೇ ಸಾಲುಗಳು ಅಸ್ತವ್ಯಸ್ತವಾಗಿವೆ. ತುಂಬಾ ಅದ್ಭುತ ಸಾಲುಗಳು. ಸ್ವರ್ಗದ ಮತ್ತು ಭೂಮಿಯಲ್ಲಿ ಪ್ರಭಾವ ಉಳ್ಳವನು. ಆಕಾಶದ ಸೂರ್ಯನಂತೆ ಕದಂಬ ವಂಶದ ಸೂರ್ಯ ಹಾರೀತ ಗೋತ್ರದ ಕಾಕುಸ್ಥವರ್ಮ.


Saturday, 23 December 2017

ದಾಮೋದರಗುಪ್ತನ ಕುಟ್ಟಿನೀಮತ - ಕಾಮಶಾಸ್ತ್ರದ ಗ್ರಂಥ

ಸುಮಾರು 755 ರಿಂದ 787ರ ತನಕ ಕಾಶ್ಮೀರ ಪ್ರದೇಶವನ್ನು ಆಳುತ್ತಿದ್ದ ರಾಜ ಜಯಾದಿತ್ಯ. ಈತ ಕಾರ್ಕೋಟ ವಂಶದ ದೊರೆ. ಕಾಶ್ಮೀರ ರಾಜ್ಯದಲ್ಲಿ ಗೋನಂದ ಎನ್ನುವ ವಂಶದ ದೊರೆಗಳ ಆಡಳಿತ 627 ರಲ್ಲಿ ಕೊನೆಗೊಂಡ ಮೇಲೆ ಅಧಿಕಾರಕ್ಕೆ ಬಂದ ರಾಜಸಂತತಿ ಈ ಕಾರ್ಕೋಟ. ಈ ವಂಶದ ಸ್ಥಾಪಕ ದುರ್ಲಭವರ್ಧನ; ಗೋನಂದ ವಂಶದ ಕೊನೆಯ ದೊರೆ ಬಾಲಾದಿತ್ಯನ ಮಗಳನ್ನು ವಿವಾಹವಾಗಿ, ಗಂಡು ಸಂತತಿಯಿಲ್ಲದ ಬಾಲಾದಿತ್ಯನ ಉತ್ತರಾಧಿಕಾರಿಯಾಗಿ 627 ರಲ್ಲಿ ಸಿಂಹಾಸನವನ್ನೇರಿದ. ಈ ವಂಶ 855 ರ ವರೆಗೂ ಕಾಶ್ಮೀರದಲ್ಲಿ ಆಳಿತು ಎಂದು ತಿಳಿದು ಬರುತ್ತದೆ. ದುರ್ಲಭವರ್ಧನ 36 ವರ್ಷ ಕಾಲ ರಾಜ್ಯಭಾರ ಮಾಡಿದ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳು ದೊರಕಿಲ್ಲ. ಈತನಿಗೆ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ) ಎಂಬ ಮೂವರು ಮಕ್ಕಳಿದ್ದರು ಎನ್ನುವುದು ತಿಳಿಯುತ್ತದೆ. ದುರ್ಲಭವರ್ಧನನ ನಂತರ 713 ರಲ್ಲಿ ಹಿರಿಯ ಮಗ ಚಂದ್ರಾಪೀಡ ಪಟ್ಟಕ್ಕೆ ಬಂದ. ಈತ ಚೀನದ ಚಕ್ರವರ್ತಿಯ ಆಸ್ಥಾನಕ್ಕೆ ತನ್ನ ದೂತನನ್ನು ಕಳಿಸಿ. ಅರಬ್ ದೊರೆಗಳ ವಿರುದ್ಧ ನೆರವು ಕೋರಿದ. ಈ ಪ್ರಯತ್ನದಲ್ಲಿ ಸಫಲನಾಗದೆ ಹೋದರೂ ಸಹ ಅರಬರ ಆಕ್ರಮಣಗಳಿಂದ ತನ್ನ ದೇಹವನ್ನು ರಕ್ಷಿಸಿಕೊಂಡ. 720 ರಲ್ಲಿ ಚೀನದ ಚಕ್ರವರ್ತಿ ಚಂದ್ರಾಪೀಡನನ್ನು ರಾಜನೆಂದು ಗೌರವಿಸಿದನೆಂದು ಚೀನಾ ದೇಶದ ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಒಮ್ಮೆ ಚಂದ್ರಾಪೀಡನ ಅಧಿಕಾರಗಳು ಒಂದು ದೇವಸ್ಥಾನವನ್ನು ಕಟ್ಟಲು ಒಬ್ಬ ಮೋಚಿಯ ಮನೆ ಇದ್ದ ಸ್ಥಳವನ್ನು ಆರಿಸಿದರು. ಮೋಚಿ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ಆಗ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಮೋಚಿ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಆ ಸ್ಥಳವನ್ನು ಬಿಟ್ಟು ಕೊಟ್ಟ. ಈ ಘಟನೆ ರಾಜನ ನ್ಯಾಯಪರತೆಗೊಂದು ನಿದರ್ಶನ. ತನ್ನ ತಮ್ಮ ತಾರಾಪೀಡನ ಕುತಂತ್ರದಿಂದ ಚಂದ್ರಾಪೀಡ 722 ರಲ್ಲಿ ಕೊಲೆಯಾದ. ತಾರಾಪೀಡ ಅನಂತರ ಗದ್ದುಗೆಯನ್ನೇರಿದ. ಈತ ಕ್ರೂರಿ, ನಿರ್ದಯಿ, ಕೊಲೆಗಡುಕನಾಗಿ 4 ವರ್ಷ ಕಾಲ ರಾಜ್ಯಭಾರ ಮಾಡಿದ. ಅನೇಕರು ಈತನ ಶಿಕ್ಷೆಯನ್ನು ತಡೆಯಲಾರದೆ ಗುಡ್ಡ ಗಾಡಿಗೆ ಓಡಿಹೋದರು. ಇವನ ಅನಂತರ ಇವನ ತಮ್ಮ ಲಲಿತಾದಿತ್ಯ ಮುಕ್ತಾಪೀಡ 724 ರಲ್ಲಿ ಸಿಂಹಾಸನಕ್ಕೆ ಬಂದ. ಲಲಿತಾದಿತ್ಯ ಕಾರ್ಕೋಟಕ ರಾಜಸಂತತಿಯಲ್ಲೇ ಅಗ್ರಗಣ್ಯ. ಈತ ಇಡೀ ಪ್ರಪಂಚವನ್ನೇ ಜಯಿಸುವ ಗುರಿ ಹೊಂದಿದ್ದ. ಸದಾ ಯುದ್ಧನಿರತನಾಗಿದ್ದರೂ ಇವನ ಕಾಲವನ್ನು ಕಾಶ್ಮೀರ ಇತಿಹಾಸದ ಸುವರ್ಣಯುಗವೆಂದು ವರ್ಣಿಸಬಹುದು. ಲಲಿತಾದಿತ್ಯ ಕನೌಜಿನ ಯಶೋವರ್ಮನೊಡನೆ ಒಂದುಗೂಡಿ ಟಿಬೆಟನರನ್ನು ಸೋಲಿಸಿದುದಲ್ಲದೆ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ. ಅನಂತರ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿ, ಅವನು ಗೆದ್ದ ರಾಜ್ಯಗಳನ್ನು ವಶಪಡಿಸಿಕೊಂಡ ತರುವಾಯ ಬಿಹಾರ ಮತ್ತು ಬಂಗಾಳಗಳನ್ನು ಗೆದ್ದು ಒರಿಸ್ಸ ಪ್ರದೇಶದಲ್ಲಿ ಪೂರ್ವ ಸಮುದ್ರದವರೆಗೂ ಮುನ್ನುಗ್ಗಿದ. ದಕ್ಷಿಣ ಭಾರತದಲ್ಲಿ ರಾಷ್ಟ್ರಕೂಟ ರಾಜ್ಯದ ಮೇಲೆ ದಾಳಿ ಮಾಡಿದ. ಅನಂತರ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ. ದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ. ಲಲಿತಾದಿತ್ಯ ತುಖಾರಿ ಸ್ಥಾನವನ್ನೂ ಟಿಬೆಟಿಗೆ ಸೇರಿದ ಲಡಕ್ ಪ್ರಾಂತ್ಯವನ್ನೂ ವಶಪಡಿಸಿಕೊಂಡ. ಟಿಬೆಟನ್ನು ಸಂಪೂರ್ಣವಾಗಿ ಸೋಲಿಸಲು ಚೀನದೇಶದ ಸಹಾಯ ಕೋರಿದ. ಆದರೆ ಚೀನದ ರಾಜ ಲಲಿತಾದಿತ್ಯನನ್ನು ಕಾಶ್ಮೀರದ ದೊರೆ ಮತ್ತು ತನ್ನ ಗೆಳೆಯನೆಂದು ಗೌರವಿಸುವುದರ ಹೊರತು, ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ ದೇವಾಲಯಗಳನ್ನೂ ದೇವತಾಮೂರ್ತಿಗಳನ್ನೂ ನಿರ್ಮಿಸಿದ. ಈತನ ಹೆಸರು ಅಮರವಾಗಿ ಉಳಿಯುವಂತೆ ಮಾಡಿದ ಮತ್ತು ಶಿಲ್ಪಕಲೆಗೆ ಹೆಸರುವಾಸಿಯಾದ ಕೆಲಸಗಳೆಂದರೆ ಮಾರ್ತಾಂಡದಲ್ಲಿ ಸೂರ್ಯದೇವನಿಗೆ ಕಟ್ಟಿಸಿದ ದೇವಸ್ಥಾನ ಎಂದು ತಿಳಿದು ಬರುತ್ತದೆ. ಈತ ಯಶೋವರ್ಮನನ್ನು ಸೋಲಿಸಿದ ಅನಂತರ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಆದರೂ ಕೆಲಬಾರಿ ಕ್ರೂರಿಯಾಗಿಯೂ ವಂಚಕನಾಗಿಯೂ ವರ್ತಿಸುತ್ತಿದ್ದನೆಂದು ಕಾಶ್ಮೀರದ ಚರಿತ್ರಕಾರ ಕಲ್ಹಣ ತಿಳಿಸಿದ್ದಾನೆ. 36 ವರ್ಷಗಳ ಆಳ್ವಿಕೆಯ ಅನಂತರ 760 ರಲಿ ಲಲಿತಾದಿತ್ಯ ಮರಣಿಸಿದ. ಲಲಿತಾದಿತ್ಯನ ಅನಂತರ ಆತನ ಹಿರಿಯ ಮಗ ಕುವಲಯಾಪೀಡ ಸ್ವಲ್ಪ ಕಾಲ ಅಧಿಕಾರದಲ್ಲಿದ್ದ. ತರುವಾಯ ಅವನ ತಮ್ಮ ವಜ್ರಾದಿತ್ಯ ಗದ್ದುಗೆಯನ್ನೇರಿದ. ಇವನ ಆಳಿಕೆಯಲ್ಲಿ ಸಿಂಧಿನ ಅರಬ್ಬಿ ಅಧಿಕಾರಿ ಹಿಷಾಮ್ ಇಬ್ನಂ ಆಮ್ರ್ ಅತ್ ಟಫ್ಲಿಬೀ (768-772) ಕಾಶ್ಮೀರದ ಮೇಲೆ ದಾಳಿ ಮಾಡಿ ಅನೇಕರನ್ನು ಸೆರೆಹಿಡಿದು ಗುಲಾಮರನ್ನಾಗಿ ಕೊಂಡೊಯ್ದ. ಕ್ರೂರಿಯೂ ನಿರ್ದಯನೂ ಅಶಕ್ತನೂ ಆದ ವಜ್ರಾದಿತ್ಯನ ಕಾಲದಲ್ಲಿ ಅಶಾಂತಿ ತಾಂಡವವಾಡುತ್ತಿತ್ತು. ಇವನ ಮಕ್ಕಳಲ್ಲಿ ಹಿರಿಯನಾದ ಪೃಥಿವ್ಯಾಪೀಡ ಅಧಿಕಾರಕ್ಕೆ ಬಂದಾಗ ಅವನ ಮಲತಮ್ಮ ಸಂಗ್ರಾಮಪೀಡ ದಂಗೆಯೆದ್ದು, ಸಿಂಹಾಸನವನ್ನು ವಶಮಾಡಿಕೊಂಡು 7 ದಿನಗಳ ಕಾಲ ರಾಜ್ಯವಾಳಿದ. ಅನಂತರ ಅವನ ತಮ್ಮ ಜಯಾಪೀಡ ವಿನಯಾದಿತ್ಯ ಸಿಂಹಾಸನವನ್ನೇರಿದ.
ಜಯಾಪೀಡ ತನ್ನ ಅಜ್ಜ ಲಲಿತಾದಿತ್ಯನಂತೆ ಶಕ್ತನಾದ. ಈತ ಪೂರ್ವದೇಶಗಳ ಮೇಲೆ ಯುದ್ಧ ಘೋಷಿಸಿ ಕಾಶ್ಮೀರವನ್ನು ಬಿಟ್ಟು ಹೊರಟ ಸಮಯದಲ್ಲಿ ಅವನ ಭಾವಮೈದುನ ಜಜ್ಜ ಅಧಿಕಾರವನ್ನು ಕಸಿದುಕೊಂಡ. ಪದಚ್ಯುತನಾದ ಜಯಾಪೀಡ ವೇಷಮರೆಸಿಕೊಂಡು ಅಲೆಯುತ್ತ ಪುಂಡ್ರವರ್ಧನ ದೊರೆ ಜಯಂತನ ಸೇವೆಯಲ್ಲಿದ್ದಾಗ ಅವನ ಮಗಳನ್ನು ಮದುವೆಯಾದ. ತನ್ನ ಮಾವನ ಪರವಾಗಿ ಗೌಡ ದೇಶದ ಐವರು ಪುಂಡ ನಾಯಕರನ್ನು ಸದೆಬಡಿದ. ಅನಂತರ ಪ್ರಯಾಗದಲ್ಲಿ ತನ್ನ ಅಳಿದುಳಿದ ಸೈನ್ಯವನ್ನು ಒಟ್ಟುಗೂಡಿಸಿ ಕಾನ್ಯಕುಬ್ಜವನ್ನು ಗೆದ್ದ. ಕಾಶ್ಮೀರವನ್ನು ತಲಪಿ, ಜಜ್ಜನೊಡನೆ ಹೋರಾಡಿ ಅವನನ್ನು ಕೊಂದು ಪುನಃ ತನ್ನ ರಾಜ್ಯವನ್ನು ವಶಪಡಿಸಿಕೊಂಡ. ಅನಂತರ ಪೂರ್ವಪ್ರಾಂತ್ಯದಲ್ಲಿ ಭೀಮಸೇನನೆಂಬ ರಾಜನನ್ನು ನೇಪಾಲದ ಅರಮುಡಿಯೆಂಬವನನ್ನೂ ಗೆದ್ದಂತೆ ತಿಳಿಯುತ್ತದೆ. ಇವನ ಆಸ್ಥಾನದಲ್ಲಿ ಕ್ಷೀರಸ್ವಾಮಿನ್, ಉದ್ಭಟ ಮತ್ತು ದಾಮೋದರ ಗುಪ್ತರಂಥಹ ವಿಖ್ಯಾತ ಪಂಡಿತರಿದ್ದರು. ಸು.30 ವರ್ಷಗಳ ಕಾಲ ಆಳಿದ. 
ಜಯಾದಿತ್ಯ ಅಥವಾ ಜಯಾಪೀಡ ಅತ್ಯಂತ ಚಾಣಾಕ್ಷ ಮತ್ತು ಬಲಶಾಲಿಯಾದ ರಾಜ. ಈತನ ರಾಜ್ಯದಲ್ಲಿದ್ದ ದಾಮೋದರಗುಪ್ತ ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಕೀರ್ತಿಗಳಿಸಿದ್ದ. ದಾಮೋದರ ಗುಪ್ತ ಬ್ರಾಹ್ಮಣನಾಗಿದ್ದ. ಎನ್ನುವುದಾಗಿ ಕಲ್ಲಣನ ರಾಜತರಂಗಿಣಿಯಿಂದ ತಿಳಿದು ಬರುತ್ತದೆ.

ಸ ದಾಮೋದರ ಗುಪ್ತಾಖ್ಯಂ ಕುಟ್ಟಿನೀಮತ ಕಾರಿಣಂ |
ಕವಿಂಕವಿ ಬಲಿರಿವ ಧುರ್ಯಂ ಧೀ ಸಚಿವಂ ವ್ಯದಾತ್ ||
ಮನೋರಥಶ್ಶಂಖದತ್ತಶ್ಚಟಕಸ್ಸಂಧಿಮಾಂಸ್ತಥಾ |
ಬಭೂವುಃ ಕವಯಸ್ತಸ್ಯ ವಾಮನಾದ್ಯಾಶ್ಚ ಪಂಡಿತಾಃ || ರಾಜತರಂಗಿಣೀ 4-488-96
ಬಲಿಯ ರಾಜ್ಯದಲ್ಲಿ ಶುಕ್ರಾಚಾರ್ಯನು ಹೇಗೆ ಮಂತ್ರಿ ಪದವಿಯನ್ನು ಹೊಂದಿದ್ದನೋ ಅದೇರೀತಿ ಜಯಾದಿತ್ಯನ ರಾಜ್ಯದಲ್ಲಿ ಪ್ರಧಾನ ಮಂತ್ರಿಯ ಸ್ಥಾನವನ್ನು ಪಡೆದಿದ್ದ. ಮತ್ತು ವಾಮನ, ಮನೋರಥ, ಶಂಖದತ್ತ, ಚಟಕ, ಸಂಧಿಮಂತನೇ ಮೊದಲಾದ ವಿದ್ವನ್ಮಂತ್ರಿಗಡಣವೇ ಇದ್ದಿತ್ತಂತೆ.
ಅದೇನೇ ಇರಲಿ ದಾಮೋದರಗುಪ್ತ ಖ್ಯಾತಿಗೆ ಬಂದದ್ದು ಅವನ ಕುಟ್ಟಿನೀಮತದಿಂದ. ಈ ಕುಟ್ಟಿನೀಮತ ಗ್ರಂಥವು ಈಗ ಸಂಪೂರ್ಣ ಲಭ್ಯವಿಲ್ಲದಿದ್ದರೂ ಆರ್ಯಾವೃತ್ತದಲ್ಲಿ ಬರೆಯಲ್ಪಟ್ಟ 927 ಶ್ಲೋಕಗಳು ಸಿಗುತ್ತಿವೆ. ಇವು ನೀತಿಕಥೆಗಳಂತಿರುವ ಉಪದೇಶಾತ್ಮಕ ಶ್ಲೋಕಗಳು. ಕುಟ್ಟಿನೀ ಮತವನ್ನು ಶಂಭಳೀಮತವೆಂದೂ ಕರೆಯುತ್ತಾರೆ. ಕುಟ್ಟಿನೀ ಶಂಭಳಿ ಸವೇ . . . ಎಂದು ಅಮರಕೋಶದಲ್ಲಿ ಪರ್ಯಾಯ ವಾಚಿಯಾಗಿ ಬಂದಿದೆ.
ಕುಟ್ಟಿನೀ ಅಥವಾ ತಲೆಹಿಡುಕಿಯಾದ ಕುತಂತ್ರಿಯಾದ ಹೆಂಗಸಿನ ಕುರಿತಾದದ್ದು. ವೇಶ್ಯೆಯರ ಕುರಿತಾದ ಶಬ್ದ. ಸೂಳೆಯರನ್ನು ವಿಟಪುರುಷರಿಗೆ ಹೊಂದಿಸಿಕೊಡುವವಳನ್ನು ಕುಟ್ಟಿನೀ ಎಂದು ಕರೆಯಲಾಗುತ್ತದೆ.
ವಿಟಸ್ಯ ಕುಟುಂಬಂ ಅರ್ಥಹರಣೇನ ಕುಟ್ಟಯತಿ - ನಾಶಯತೀ ಇತಿ "ಕಾಮುಕನಾದ ವ್ಯಕ್ತಿ, ಅಥವಾ ವಿಟನ ಕುಟುಂಬದ ಸಂಪತ್ತಿನ ಅಪಹರಣದಿಂದ ಕೆಡಿಸುವವಳು ಅನ್ನುವ ಅರ್ಥ ಬರುತ್ತದೆ.
ಶಂಬಳೀ ಮತವೆನ್ನುವುದಾಗಿಯೂ ಇದನ್ನು ಕರೆದಿರುವುದು "ಶಂ = ಶ್ರೇಯಃ ಭಾಲಯತಿ = ಹಿನಸ್ತಿ ಇತಿ ಶಂಭಳೀ - ಭಲ್ಲ ಭಲ್ಲ - ಪರಿಭಾಷಣ ಹಿಂಸಾದಾನೇಷು" ಎಂದರೆ ಸುಖ ಶಂತಿ ಸಮೃದ್ಧಿಯನ್ನು ಕೆಡಿಸುವವಳು ಎನ್ನುವ ಅರ್ಥವನ್ನು ಕೊಡುತ್ತದೆ.
ಕುಟ್ಟಿನೀಮತವು ವೇಶ್ಯೆಯರ ಧರ್ಮ ಮತ್ತು ನಡತೆಗಳನ್ನು ತಿಳಿಸುವುದಕ್ಕಿರುವ ಹೆಸರು. ವೇಶ್ಯೆಯರು ಮತ್ತು ವೇಶ್ಯಾ ಲಂಪಟರ ವಿಚಾರವನ್ನು ಚೆನ್ನಾಗಿ ತಿಳಿದಿದ್ದ ಕವಿ ನೀತಿ ನಿರೂಪಣೆಯಿಂದ ಈ ಗ್ರಂಥವನ್ನು ಬರೆದಿದ್ದಾನೆ. ವೇಶ್ಯೆಯರ ಚೇಷ್ಟೆ, ಕುಟ್ಟಿನಿಯರ ಚಾತುರ್ಯವನ್ನು ಮತ್ತು ಅವರಿಂದ ಮೋಸಕ್ಕೊಳಗಾಗುವ ಕಾಮುಕ ಜನರ ದುರವಸ್ಥೆಗಳನ್ನು ತೆರೆದಿಡುವ ಪ್ರಯತ್ನ ಈ ಗ್ರಂಥ ಮಾಡುತ್ತದೆ.
ವಾರಣಾಸಿಯ ಗಲ್ಲಿಯೊಂದರ ಉಪ್ಪರಿಗೆಯಲ್ಲಿ ವೇಶ್ಯೆಯೊಬ್ಬಳು ನಿಂತು ನೋಡುತ್ತಿರುವಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ ಗಾಯಕನೊಬ್ಬನು
"ಯೌವನ ಸೌಂದರ್ಯ ಮದಂ ದೂರೇಣಾಪಾಸ್ಯ ವಾರವನಿತಾಭಿಃ |
ಯತ್ನೇನ ವೇದಿತವ್ಯಾಃ ಕಾಮುಕ ಹೃದಯಾರ್ಜನೋಪಾಯಾಃ || ಎನ್ನುತ್ತಾನೆ.
ಈ ಶ್ಲೋಕವನ್ನು ಕೇಳಿದ ಆ ವಾರಾಂಗನೆ ಕೆಳಗಿಳಿದು ಬಂದು ಒಬ್ಬ ಕುಟ್ಟಿನಿಯ ಮನೆಗೆ ಬಂದು " ಕಾಮುಕರಾದ ಇಂದ್ರಿಯಾಸಕ್ತಕ್ತರಾದ ಜನರನ್ನು ಹೇಗೆ ವಶೀಕರಣದಿಂದ ವಶಪಡಿಸಿಕೊಳ್ಳಬೇಕು ಮತ್ತು ವೇಶ್ಯೆಯರ ಉಪಾಯಗಳ ಕುರಿತು ಹೇಳಿಕೊಡು ಎಂದಾಗ . ಕುಟ್ಟಿನಿಯು ತಾನು ಹೇಗೆ ವಶಪಡಿಸಿಕೊಳ್ಳುತ್ತೇನೆ ಮತ್ತು ಹೇಗೆ ಸಂಪತ್ತನ್ನು ಅಪಹರಿಸುತ್ತೇನೆ ಎಂದು ಹೇಳಿಕೊಡುತ್ತಾಳೆ.

ಅವಗಮ್ಯಾಭಿಪ್ರಾಯಂ ಸ್ವಾಮಿನ್ಯಾ ಪರಿಜನೋಪಿ ಯಂ ಪುರುಷಂ |
ಅಪಹಸತಿ ತಿರಸ್ಕಾರ್ಯಂ ತಸ್ಯ ನ ಮೂಲ್ಯಂ ವರಾಟಿಕಾಃ ಪಂಚ ||

ತವ ಹೃದಯೇ ಹೃದಯಮಿದಂ ವಿನ್ಯಸ್ತಂ ನ್ಯಾಸಪಾಲನಂ ಕಷ್ಟಂ |
ಯತ್ನಾತ್ತಥಾ ವಿಧೇಯಂ ಸ್ಥಾನ ಭ್ರಂಶೋ ಯಥಾ ನ ಸ್ಯಾತ್ ||
ಹೀಗೆ ವೇಶ್ಯೆಯರು ಹೇಗೆ ಇಂದ್ರಿಯ ಸುಖವನ್ನು ಜನರಿಗೆ ನೀಡಿ ಅವರಿಂದ ವಿತ್ತಾದಿಗಳನ್ನು ಅಪಹರಿಸುತ್ತಾರೆ ಮತ್ತು ಅವರ ಎಲ್ಲಾ ಚರ್ಯೆಗಳನ್ನು ವಿವರವಾಗಿ 900 ಕ್ಕೂ ಅಧಿಕ ಶ್ಲೋಕಗಳಿಂದ ನಿರೂಪಿಸಿದ್ದಾನೆ.

ಕಾಮಶಾಸ್ತ್ರದ ಬಹಳಷ್ಟು ವಿಷಯಗಳು ಆಧುನಿಕ ಅಭಿರುಚಿಗೆ ಅಶ್ಲೀಲವೆಂದು ತೋರಬಹುದು ಏಕೆಂದರೆ ಪ್ರಾಚೀನ ಭಾರತೀಯರು ಸ್ವಲ್ಪವೂ ಮುಚ್ಚು ಮರೆಯಿಲ್ಲದೆ ಗೋಪ್ಯಸಂಗತಿಗಳನ್ನೆಲ್ಲ ವರ್ಣನೆಮಾಡಿದ್ದಾರೆ. ಆದರೂ ವಾತ್ಸ್ಯಾಯನನೇ ಗ್ರಂಥವಾಕ್ಯದಲ್ಲಿ ತನ್ನ ಗ್ರಂಥದ ಉದ್ದೇಶ ಧರ್ಮವಿರೋಧವಲ್ಲವೆಂದೂ ಕಾಮಪ್ರಚೋದನೆಗೆ ತನ್ನ ಗ್ರಂಥ ಕಾರಕವಲ್ಲವೆಂದೂ ಸಾರಿಹೇಳಿದ್ದಾನೆ. ಕಾಮಶಾಸ್ತ್ರವನ್ನು ಶಾಸ್ತ್ರವೆಂದು ಕರೆದಿದ್ದರೂ ಅದೊಂದು ಕಲೆ ಎನ್ನುವುದು ಕುಟ್ಟಿನೀಮತದ ಅಭಿಪ್ರಾಯವಾಗಿರುವುದರಿಂದ ಅದನ್ನು ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಕಲಾ ಪ್ರಕಾರವಾಗಿ ತೆಗೆದುಕೊಂಡಿದ್ದಾನೆ.