Search This Blog

Tuesday, 20 March 2018

ವೈದಿಕ ಆರ್ಯರ ಸರಸ್ವತೀ – “ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ”


ನಮ್ಮ ಎಲ್ಲಾ ಸಾಮ್ರಾಜ್ಯಗಳು ತಮ್ಮ ಅಸ್ತಿತ್ವವನ್ನು ಕಂಡುಕೊಂಡದ್ದು ನದಿಗಳ ತೀರದಲ್ಲಿಯೇ. ನದಿಯ ಒಡನಾಟ ನಮ್ಮನ್ನು ಅಷ್ಟು ಹಿಡಿದಿಡುತ್ತದೆ. ಇದು ಎಂದಿನದ್ದೋ ಕಥೆಯಲ್ಲ. ನಮ್ಮ ನಾಗರೀಕತೆ ಕಣ್ಣು ಬಿಟ್ಟದ್ದೇ ನದಿಗಳ ತೀರದಲ್ಲಿ. ಇದು ಪ್ರಬಲವಾಗಿ ನಮ್ಮ ಅಸ್ತಿತ್ವವನ್ನು ಪ್ರತಿಬಿಂಬಿಸುವ ದ್ಯೋತಕವಾಗಿದ್ದುದು ಮತ್ತು ಈಗ ಇರದೇ ಇರುವುದು ಸರಸ್ವತೀ ನದಿಯ ಕುರಿತಾಗಿರುವುದು. ಮೊತ್ತ ಮೊದಲಿಗೆ ನಮ್ಮ ದೇಶದ ನಾಗರೀಕತೆ ಬೆಳೆದು ಬಂದದ್ದೇ ಈ ನದಿಯ ಮುಖಜ ಭೂಮಿಯಲ್ಲಿ.
"ಗಂಗಾ" ಈ ಹೆಸರನ್ನು ಕೇಳಿದಾಕ್ಷಣ ನಮಗೆ ಪವಿತ್ರವಾದ ಭವನೆಯೊಂದು ಬಂದು ಹೋಗುತ್ತದೆ. ನಮ್ಮ ಪಾವಿತ್ರ್ಯತೆಯ ಸಂಕೇತ ಅದು. ಹೀಗೆ ಭಾವನೆ ಬೆಳೆದು ಬಂದದ್ದು ಪ್ರಾಯಶ ಸರಸ್ವತಿಯ ಕಣ್ಮರೆಯಾದಂದಿನಿಂದ ಎಂದು ಭಾವಿಸಬಹುದೇನೋ. ಋಗ್ವೇದದಿಂದ ಹಿಡಿದು ಅಥರ್ವದ ತನಕವೂ ಸರಸ್ವತೀ ತನ್ನ ಸ್ಥಾನವನ್ನು ಉಳಿಸಿಕೊಂಡು ಸಾಗುತ್ತಾಳೆ. ಋಗ್ವೇದದಲ್ಲಂತೂ ಎಲ್ಲಾ ಮಂಡಲಗಳಲ್ಲೂ ಕಾಣಿಸಿಕೊಳ್ಳುತ್ತಾಳೇನೋ. ಇಲ್ಲಿ ಆ ಕಾಲದಲ್ಲಿ ಗಂಗೆಗೆ ಅಂತಹ ಪಾವಿತ್ರ್ಯದ ಸ್ಥಾನವಿರಲಿಲ್ಲವೇನೋ ಅನ್ನಿಸಿ ಬಿಡುತ್ತದೆ. ಯಾಕೆಂದರೆ ತತ್ಕಾಲೀನ ನಾಗರೀಕ ಸಮಾಜ ಬೆಳೆದು ಬಂದದ್ದೇ ಸರಸ್ವತಿಯ ತೀರದಲ್ಲಿ. ಹಾಗಂತ ಈ ನದಿ ಗಂಗೆಯಂತೆ ಯಮುನೆಯಂತೆ ಅಥವಾ ಆ ಕಾಲದ ಸಿಂಧುವಿನಷ್ಟು ವಿಶಲವಾಗಿ ಹರಡಿಕೊಂಡಿರಲಿಲ್ಲ ಕಿರಿದಾದ ನದಿಯಾಗಿದ್ದರೂ ತುಂಬಿ ಹರಿಯುತ್ತಿದ್ದಳು ಎನ್ನುವುದು ಋಚೆಗಳಿಂದ ತಿಳಿದು ಬರುತ್ತದೆ.
ಮಹೋ ಅರ್ಣಃ ಸರಸ್ವತೀ ಪ್ರ ಚೇತಯತಿ ಕೇತುನಾ | ಧಿಯೋ ವಿಶ್ವಾ ವಿ ರಾಜತಿ || ೧ : ೩ : ೧೨ ||
ಸರಸ್ವತಿ ನದಿಯು ಬಹು ಅಗಾಧ ಪ್ರವಾಹದಿಂದ ಹರಿಯುತ್ತಿರುವುದರಿಂದ ಈ ನದಿಯಲ್ಲಿ ಬಹು ಹೆಚ್ಚಾಗಿ ನೀರಿರುವುದು ಈ ದೇವಿಯು ತನ್ನನ್ನು ಸ್ತೋತ್ರ ಮಾಡುವ ಅಥವಾ ಯಜ್ಞದಿಂದ ಆರಾಧಿಸುವ ಜನರ ಮನಸ್ಸನ್ನು ಪ್ರಕಾಶಗೊಳಿಸುವಳು, ಅಂದರೆ ಜನರ ಬುದ್ಧಿಯನ್ನು ಪ್ರಕಾಶಿಸುವಂತೆ ಮಾಡುವಳು. ಈ ಋಕ್ಕಿನ ಋಷಿ ಮಧುಚ್ಚಂದ್ರ ಎನ್ನುವವನು. ಈತ ಇದಕ್ಕಿಂತ ದೊಡ್ದದಾದ ಸಿಂಧು ಮತ್ತು ಉಳಿದ ನದಿಗಳನ್ನು ನೋಡಿರದೇ ಇರಬಹುದು ಅಥವಾ ತುಂಬಿ ಹರಿಯುತ್ತಿದ್ದ ಸರಸ್ವತಿಯೇ ಆತನಿಗೆ ದೊಡ್ದದಾಗಿ ಕಂಡಿರಲೂ ಬಹುದು.
ಗಂಗಾ ಮತ್ತು ಯಮುನಾ ನದಿಗಳ ಪಶ್ಚಿಮಕ್ಕೆ ಪಂಜಾಬಿನ ಪೂರ್ವಕ್ಕೆ ಈ ಸರಸ್ವತೀ ನದಿ ಹರಿಯುತ್ತಿತ್ತು. ಆದರೆ ಇದಕ್ಕಿದ್ದ ಮಹತ್ವ ಆ ಎರಡೂ ನದಿಗಳು ಆ ಕಾಲದಲ್ಲಿ ಪಡೆದುಕೊಂಡಿರಲಿಲ್ಲ.
ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ |
ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನ ಸ್ಕೃಧೀ || ೨ : ೪೧ : ೧೬ ||
ತಾಯಂದಿರಲ್ಲಿಯೂ, ನದಿಗಳಲ್ಲಿಯೂ ಹಾಗೂ ದೇವತಾತ್ಮರಲ್ಲಿಯೂ ಅತ್ಯಂತ ಪವಿತ್ರಳೂ ಶ್ರೇಷ್ಠಳೂ ಆದ ಸರಸ್ವತಿಯೇ, ಬಡತನದಿಂದ ನಾವು ಎಲ್ಲರಿಂದಲೂ ತಿರಸ್ಕೃತರಾಗಿದ್ದೇವೆ. ನಮಗೆ ಧನ ಸಮೃದ್ಧಿ ಸಿಗುವಂತೆ ಮಾಡು. ಎನ್ನುವ ಈ ಋಕ್ಕಿನಿಂದ ಸರಸ್ವತಿ ಆ ಕಾಲದ ಅತ್ಯಂತ ಪವಿತ್ರಳೂ ಹಾಗೂ ದೇವಸ್ವರೂಪಿ ನದಿಯೂ ಆಗಿದ್ದಳು ಎಂದು ತಿಳಿದು ಬರುತ್ತದೆ.
ಸಿಂಧೂ ನಾಗರೀಕತೆಯ ಕೇಂದ್ರಭಾಗ ಹರಡಿದ್ದುದು ಸಿಂಧೂ ನದಿಯ ತೀರಪ್ರದೇಶದಲ್ಲಿ ಅಲ್ಲ. ಈಗ ಬತ್ತಿಹೋಗಿ ಹೆಸರನ್ನು ಮಾತ್ರ ಉಳಿಸಿಕೊಂಡ ಸರಸ್ವತೀ ನದಿಯದಡದುದ್ದಕ್ಕೂ ಎನ್ನುವುದು ಇತ್ತಿಚೆಗಿನ ಪುರಾತತ್ವ ಸಂಶೋಧನೆಗಳಿಂದ ದೃಢಪಡುತ್ತಿದೆ. ಪುರಾತತ್ವ ಸಂಶೋಧನೆಗಳು ಗುರುತಿಸಿರು ಒಂದು ಸಾವಿರದಷ್ಟು ವಸತಿಗಳಿದ್ದದ್ದು ಇದೇ ಸರಸ್ವತಿಯ ದಡದಲ್ಲಿ. ವೇದ ಮಂತ್ರಗಳಲ್ಲಿ ವರ್ಣಿತವಾಗಿರುವುದು ಇದೇ ಸರಸ್ವತಿ ನದಿ. ಋಗ್ವೇದವೇ ಮೊದಲಾದವುಗಳಲ್ಲಿನ ಸರವತೀ ನದಿಯ ಉಲ್ಲೇಖಗಳ ಆಶಯ ಏನೇ ಇದ್ದರೂ ಸಹ ಅಂದಿನ ಜನವಸತಿ ತಮ್ಮ ನೆಲೆ ಕಂಡು ಕೊಂಡದ್ದು ಉಕ್ಕಿ ಹರಿಯುತ್ತಿದ್ದ ಪವಿತ್ರ ಸರಸ್ವತಿಯ ದಡದಲ್ಲಿಯೇ. ಸಮೃದ್ಧವಾದ ವಿಶಲವಾದ ನಾಗರೀಕತೆಯೊಂದು ಬೆಳೆದದ್ದು ಇದೇ ಸರಸ್ವತೀ ಮತ್ತು ದೃಷದ್ವತೀ ನದಿಗಳ ತೀರದಲ್ಲಿ ಎಂದು ತಿಳಿದು ಬರುತ್ತದೆ.
ನಿತ್ಯಾ ದಧೇ ವರ ಆ ಪೃಥಿವ್ಯಾ ಇಳಾಯಾಸ್ಪದೇ ಸುದಿನತ್ವೇ ಅಹ್ನಾಂ |
ದೃಷದ್ವತ್ಯಾಂ ಮಾನುಷ ಆಪಯಾಯಾಂ ಸರಸ್ವತ್ಯಾಂ ರೇವದಗ್ನೇ ದಿದೀಹಿ || ೩ : ೨೩ : ೪ ||
ಎಲೈ ಅಗ್ನಿಯೇ ಗೋ ರೂಪವನ್ನು ಧರಿಸಿರುವ ಭೂಮಿಯ ಉತ್ತಮವಾದ ವೇದಿಸ್ಥಾನದಲ್ಲಿ ಎಲ್ಲಾ ದಿನಗಳಿಗಿಂತಲೂ ಶ್ರೇಷ್ಠವಾದ ಯಜ್ಞದಿನದಲ್ಲಿ ನಿನ್ನನ್ನು ಸುತ್ತಲೂ ಸ್ಥಾಪಿಸುತ್ತೇನೆ. ಯಜ್ಞ ಕರ್ತೃರಾದ ಮಾನವರು ಸಂಚರಿಸತಕ್ಕ ದೃಷದ್ವತಿಯ ದಡದ ಮೇಲೆಯೂ "ಆಪಯಾ" ಮತ್ತು ಸರಸ್ವತೀ ನದೀ ದಡದಮೇಲೆಯೂ ಧನಯುಕ್ತನಾಗಿರುವಂತೆ ಪ್ರಜ್ವಲಿಸಿ ಪ್ರಕಾಶಿಸು. ಎಂದು ವೇದದಲ್ಲಿ ಹೇಳಲಾಗುತ್ತದೆ. ತಮ್ಮ ನಿತ್ಯದ ಜೀವನಕ್ಕೆ ಆಧಾರವಾಗಿದ್ದ ಬೇಸಾಯ ಮತ್ತು ಗೋಪಾಲನೆ ಇದೇ ಸರಸ್ವತಿಯಿಂದ ಆಗಿದ್ದು. ಈ ಸರಸ್ವತಿ ಅವರಿಗೆ ಧನ ಕನಕಗಳನ್ನು ಕೊಡುವ ಸಂಪತ್ಪ್ರದಾಯಿನೀ.
ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರ್ಸ್ವತೀ ಸಿಂಧುಭಿಃ ಪಿನ್ವಮಾನಾ || ೬ : ೫೨ ;೫ ||
ಇಂದ್ರನು ಅತ್ಯಂತ ಸಮೀಪಸ್ಥನಾಗಿ ನಮ್ಮ ರಕ್ಷಣೆಗೆ ಬರುವಂತವನಾಗಲಿ, ಪ್ರವಹಿಸುವ ನೀರಿನೊಂದಿಗೆ ಸರಸ್ವತಿಯೂ ಬರುವಂತಾಗಲಿ. ಇಂದ್ರ ಮತ್ತು ಸರಸ್ವತೀ ನದಿಯನ್ನು ತುಲನಾತ್ಮಕ ದೃಷ್ಟಿಯಿಂದ ನೋಡಿದ ಈ ಜನರು ಸರಸ್ವತೀ ಸದಾಕಾಲವೂ ತುಂಬಿಕೊಂಡಿರಲಿ ಎಂದು ಆಶಿಸುತ್ತಿದ್ದರು. ಈ ನದಿ ಅನೇಕ ಸಲ ತನ್ನ ಪಥವನ್ನು ಬದಲಾಯಿಸುತ್ತಿದ್ದುದು ಸಂಶೋಧನೆಯಿಂದ ತಿಳಿದು ಬರುತ್ತದೆ. ಸುಮಾರು ಇಂದಿಗೆ ೩೯೦೦ ವರ್ಷಗಳಿಗೂ ಪೂರ್ವದಲ್ಲಿ ಯಾವಾಗಲೋ ಈ ನದಿ ಸಂಪೂರ್ಣವಾಗಿ ಬತ್ತಿ ಹೋಯಿತು ಎನ್ನುವುದಾಗಿ ಖ್ಯಾತ ಸಂಶೋಧಕ ವಾಕಣಕರ್ ಹೇಳುತ್ತಾರೆ. ಈ ನದಿಯು ಬತ್ತಿ ಹೋಗಿದ್ದು ಸಹ ಇದರ ಉಪನದಿಗಳಾಗಿದ್ದ ಸಟ್ಲೇಜ್ ಮತ್ತು ಯಮುನಾ ನದಿಗಳು ತಮ್ಮ ಪಥ ಬದಲಿಸಿ ಗಂಗೆಯನ್ನು ಸೇರಿಕೊಂಡದ್ದರಿಂದ ಎನ್ನುವ ಅಭಿಪ್ರಾಯ ಇದೆ.
ಈ ಸ್ತಿಥ್ಯಂತರದ ನಂತರವೇ ಆರ್ಯರೆನ್ನಿಸಿಕೊಂಡವರು ಇಲ್ಲಿಂದ ವಲಸೆ ಪೂರ್ವದ ಕಡೆ ನಡೆಯಿತು.
ಗಂಗಾ ನದಿಯ ದಡದಲ್ಲಿಯೂ ಹಾಗೂ ಸಿಂಧೂ ನದಿಯ ದಡದಲ್ಲಿಯೂ ನೆಲೆ ಕಂಡುಕೊಂಡರು. ವೇದಗಗಳಲ್ಲಿ ಪಾವಿತ್ರ್ಯವನ್ನು ಪಡೆಯದೇ ಇದ್ದ ಗಂಗೆ ಈ ವಲಸೆಯ ಕಾರಣದಿಂದ ಪಾವಿತ್ರ್ಯವನ್ನು ಪಡೆದಳು. ಭರತವಂಶೀಯ ರಾಜರಿಗೆ ಸರಸ್ವತಿಯ ತೀರದಲ್ಲಿದ್ದ ಪ್ರಾಶಸ್ತ್ಯಹೋಗಿ ರಾಜಕೀಯ ಸ್ಥಿತ್ಯಂತರಗಳಿಗೂ ಕಾರಣಾವಾಗಿ ಮಗದವಂಶೀಯರ ಪ್ರಾಬಲ್ಯಕ್ಕೆ ಕಾರಣವಾಗಿದ್ದು ತಿಳಿದು ಬರುತ್ತದೆ. ಅಂತೂ ಸರಸ್ವತೀ ನದಿ ಒಂದು ಕಾಲದಲ್ಲಿ ಅತ್ಯಂತ ವಿಸ್ತಾರವಾಗಿತ್ತು ಅದರ ಅಗಲ ೬ ರಿಂದ ೮ ಕಿ.ಮಿ ಗಳಿದ್ದುವಂತೆ. ಇಷ್ಟು ಭವ್ಯವಾದ ನದಿ ಕಿರಿದಾಗಿ ನಶಿಸಿತು ಎನ್ನುವುದು ದೃಢಪಟ್ಟಿದೆ.
ಹೌದು ಇಂತಹ ಭವ್ಯ ನದಿಯೊಂದು ಅಗಾಧ ಸಂಪತ್ತನ್ನು ಕೊಟ್ಟು ಪೋಷಿಸಿದ್ದನ್ನು ಆರ್ಯರೆನ್ನುವವರು ಹೇಗೆ ವರ್ಣಿಸಲು ಸಾಧ್ಯವಾಯಿತು. ಅದೆಲ್ಲಿಂದಲೋ ಬಂದು ಇನ್ನೂ ಜೀವಂತ ವಾಗಿದ್ದು ಭವ್ಯವಾಗಿದ್ದ ಪವಿತ್ರಳಾಗಿದ್ದ ಸಿಂಧೂ ನದಿ ಮತ್ತು ಅದರ ಐದು ಉಪನದಿಗಳನ್ನು ದಾಟಿ ಬಂದು ನಿಸ್ತೇಜವಾಗಿದ್ದು ಬತ್ತಿಹೋಗಿದ್ದ ಸರಸ್ವತೀ ನದಿಯ ದಡದಲ್ಲಿ ಆರ್ಯರೆನ್ನುವವರು ವಾಸ ಮಾಡಿದ್ದು ಹೇಗೆ ? ಹಾಗಾದರೆ ಇಂತಹ ನದಿಯನ್ನು ಅವರು ಅಂಬಿತಮೇ ನದೀತಮೇ ದೇವಿತಮೇ ಸರಸ್ವತೀ | ಅಪ್ರಶಸ್ತಾ ಇವ ಸ್ಮಸಿ ಪ್ರಶಸ್ತಿಮಂಬ ನ ಸ್ಕೃಧೀ || ಎಂದು ಹೇಗೆ ಪ್ರಾರ್ಥಿಸಿದರು ? ಋಗ್ವೇದದಲ್ಲಿ ವರ್ಣಿಸಲ್ಪಟ್ಟ ಸರಸ್ವತೀ ನದಿ ಬತ್ತಿಹೋಗುವುದಕ್ಕಿಂತ ಹಿಂದೆ ಸಮೃದ್ಧವಾಗಿ ಸಂಪದ್ಭರಿತವಾಗಿದ್ದ ಭೌಗೋಲಿಕ ಸ್ಥಿತಿಯು ಸುಮಾರು ಹದಿನೈದು ಲಕ್ಷ ಚದರ ಕಿಲೋಮೀಟರಿಗೂ ಹೆಚ್ಚು ಹರಡಿಕೊಂಡಿದ್ದ ಸಿಂಧೂ ಸರಸ್ವತೀ ನಾಗರೀಕತೆ ಅದು "ವೈದಿಕ ಆರ್ಯರದ್ದಾಗಿತ್ತು. ಇದೇ ಆರ್ಯರೇ ಅಂಬಿತಮೇ ನದೀತಮೇ ದೇವಿತಮೇ ಸರಸ್ವತಿ. ಋಗ್ವೇದದ ಆರನೇ ಮಂಡಲದ ಅರವತ್ತೊಂದನೆಯ ಸೂಕ್ತದಲ್ಲಿ ಬರುವ ಮಂತ್ರಗಳೆಲ್ಲವೂ ಇದೇ ಸರಸ್ವತಿಗೆ ಸಂಬಂಧಿಸಿವೆ. ಇವೆಲ್ಲದರ ಸಾಧ್ಯತೆ ಗಮನಿಸಬೇಕು.

Monday, 19 March 2018

ಆರ್ಯರೇಕೆ ಈ ನೆಲದಿಂದ ವಲಸೆ ಹೋಗಿರಲಾರರು ???


ಸುದಾಸ ಅತ್ಯಂತ ಬಲಿಷ್ಠನಾದ ರಾಜನಾಗಿದ್ದ ಸೂರ್ಯವಂಶದ ಸುದಾಸ ವೇದ ಮತ್ತು ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದವರಲ್ಲಿ ಒಬ್ಬ. ತನ್ನ ಪ್ರತಿಯೊಂದು ಕಾರ್ಯಕ್ಕೂ ವಿಶ್ವಾಮಿತ್ರನ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದ. ಒಮ್ಮೆ ಈತ ತನ್ನ ವಿರೋಧಿಗಳಾದ ಶಿಮ್ಯು, ತುರ್ವಶ, ದ್ರುಹ್ಯು, ಕವಶ, ಪೂರು, ಅನು, ಭೇದ, ಶಂಬರ, ವೈಕರ್ಣ ಮತ್ತು ಇನ್ನೊಬ್ಬ ವೈಕರ್ಣ ಹೀಗೆ ಹತ್ತು ರಾಜರೊಡನೆ ಯುದ್ಧ ಮಾಡಬೇಕಾಗುತ್ತದೆ. ಹತ್ತುಜನ ರಾಜರೊಡನೆ ಅವರ ಬಲದೊಡನೆ ಸೆಣಸುವಾಗ ಈತನ ಯುದ್ಧದ ಭೀಕರತೆ ಹಾಗಿರಲಿಕ್ಕೇ ಬೇಕು. ಈ ಯುದ್ಧದಲ್ಲಿ ತ್ರುತ್ಸು ಎನ್ನುವ ಜನಾಂಗದವರು ಸುದಾಸನಿಗೆ ನೆರವಾದರು ಎಂದು ತಿಳಿದು ಬರುತ್ತದೆ.
ನಿಗವ್ಯವೋ ನವೋ ದ್ರುಹ್ಯವಶ್ಚ ಷಷ್ಟಿಃ ಶತಾ ಶುಷುಪುಃ ಷಟ್ ಸಹಸ್ರಾ | ಷಷ್ಟಿರ್ವಿರಾಸೋ ಅಧಿ ಷಡ್ಡುವೋಯು ವಿಶ್ವೇದಿಂದ್ರಸ್ಯ ವೀರ್ಯಾ ಕೃತಾನಿ || ೭ : ೨ : ೧೮ ||( ಈ ಮಂತ್ರದ ಅರ್ಥ : ಸುದಾಸನ ಗೋವುಗಳನ್ನು ಅಪಹರಿಸಲು ಯತ್ನಿಸಿದ ಅನು, ದ್ರುಹ್ಯು ಮೊದಲಾದವರ ಗುಂಪಿಗೆ ಸೇರಿದ ೬೬೬೬೦ಜನ ಸೈನಿಕರೊಂದಿಗೆ ಹೋರಾಡಿ ಇಂದ್ರನಿಂದ ಹತರಾಗಿ ಮಲಗಿಸಲ್ಪಟ್ತರು. ಎಂದಾಗುತ್ತದೆ(ಈ ಯುದ್ಧಕ್ಕಾಗಿ ಇಂದ್ರ ಆಯುಧಗಳನ್ನು ಕೊಟ್ಟ ಎಂದು ಮೊದಲು ಬಂದಿದೆ)
ತೃತ್ಸುಗಳ ಸಹಾಯವನ್ನು ಪಡೆದು ನಡೆದ ಯುದ್ಧದಲ್ಲಿ ಹತ್ತು ಮಂದಿ ರಾಜರನ್ನೂ ಯುದ್ಧದಲ್ಲಿ ಸೋಲಿಸಿದನು. ಈ ಯುದ್ಧವು ಪರುಷ್ಣೀನದಿ(ಪಂಜಾಬ್)ದಡದಲ್ಲಿ ನಡೆಯಿತೆಂದು ತಿಳಿದು ಬರುತ್ತದೆ.
ಅರ್ಧಂ ವೀರಸ್ಯ ಶ್ರತಪಾಮನಿಂದ್ರಂ ಪರಾ ಶರ್ಧಂತಂ ನುನುಧೇ ಅಭಿ ಕ್ಷಾಂ |
ಇಂದ್ರೋ ಮನ್ಯುಂ ಮನ್ಯುಮ್ಯೋ ಮಿಮಾಯ ಭೇಜೇ ಪಥೋ ವರ್ತನಿಂ ಪತ್ಯಮಾನಃ || ೧೬ || ಬಹಳ ಪರಾಕ್ರಮಿಯಾದ ಸುದಾಸನಿಗೆ ಹಿಂಸಕನಾಗಿದ್ದ ದ್ರುಹ್ಯುವು ಇಂದ್ರನಿಗೆ ಅರ್ಪಿಸತಕ್ಕ ದ್ರವ್ಯಾದಿಗಳನ್ನೂ ಅಪಹರಿಸಿ ಇಂದ್ರನಿಗೂ ವಿರೋಧಿಯಾಗಿದ್ದ. ಆದುದರಿಂದ ಸುದಾಸನು ಪರಾಕ್ರಮದಿಂದ ಹೋರಾಡಿದಾಗ ಶತ್ರುವು ಪಲಾಯನ ಮಾಡಿದನಂತೆ. ಅದೇ ರೀತಿ ಋಗ್ವೇದ ೩೩ನೇ ಮಂಡಲದಲ್ಲಿಯೂ ಇದೇ ವರ್ಣನೆ ಬಂದಿದ್ದು. ಸುದಾಸನಿಗೆ ಯದು ಎನ್ನುವ ರಾಜನ ಬೆಂಬಲವೂ ಸಿಗುತ್ತದೆ ಎಂದು ಹೇಳಲಾಗಿದೆ ಯದುವಿನ ಸಂಗಡ ಅವನ ಅನುಯಾಯಿಗಳಾದ ಮತ್ಸ್ಯರು, ಸಕ್ಥರು, ಭಲಾನರು, ವಿಷಾಣಿಗಳು, ಅಲಿನರು, ಹೀಗೇ ಅನೇಕ ಜನಾಂಗದವರನ್ನು ಕರೆತಂದಿದ್ದ ಎಂದು ಹೇಳಲಾಗುತ್ತದೆ. ಇಲ್ಲಿ ಇನ್ನೊಂದು ಮುಖ್ಯವಾದ ಅಂಶವೆಂದರೆ ಈ ಮಂಡಲದ ದೃಷ್ಟಾರ ವಶಿಷ್ಟ. ಸುದಾಸನಿಗೆ ಪುರೋಹಿತ ಮತ್ತು ಮಾರ್ಗದರ್ಶಕ ವಿಶ್ವಾಮಿತ್ರನಾಗಿದ್ದ ಈ ಯುದ್ಧ ಸಹ ವಿಶ್ವಾಮಿತ್ರನ ಸಮ್ಮುಖದಲ್ಲೇ ನಡೆದಿರುವುದು. ಆದರೆ ಇಲ್ಲಿ ಸುದಾಸನ ಬೆಂಬಲಕ್ಕೆ ಬಂದಿದ್ದ ತೃತ್ಸು ಜನಾಂಗದವರ ಮಾರ್ಗದರ್ಶಕ ವಶಿಷ್ಟನಾಗಿದ್ದ ಎನ್ನುವುದು ತಿಳಿದು ಬರುತ್ತದೆ. ಮುಂದೆ ವಶಿಷ್ಟ ಮತ್ತು ವಿಶ್ವಾಮಿತ್ರರಿಗೂ ವೈರತ್ವ ಬೆಳೆಯುವುದು ತಿಳಿಯುತ್ತದೆ. ಸುದಾಸನು ವಿಪಾಶಾ ಮತ್ತುಶತದ್ರು ನದಿಗಳ ಮಧ್ಯದ ಪ್ರದೇಶದ ರಾಜನಾಗಿದ್ದ ಎಂದು ತಿಳಿದು ಬರುತ್ತದೆ.
ಯುವಾಂ ಹವಂತ ಉಭಯಾಸ ಆಜಿಷ್ವಿಂದ್ರಂ ಚ ವಸ್ವೋ ವರುಣಂ ಚ ಸಾತ ಯೇ |
ಯತ್ರ ರಾಜಭಿರ್ದಶಬಿರ್ನಿಬಾಧಿತಂ ಪ್ರ ಸುದಾಸ ಮಾವತಂ ತೃತ್ಸು ಭಿಃ ಸಹ || ಎಂದು ಋಗ್ವೇದದ ೭ನೇ ಮಂಡಲದ ೮೩ನೇ ಸೂಕ್ತದಲ್ಲಿ ಬರುತ್ತದೆ. ಇದು ಮೇಲೆ ವಿವರಿಸಿದ ಯುದ್ಧಕ್ಕೆ ಸಂಬಂಧಿಸಿದೆ.
ಇದೇ ಯುದ್ಧವನ್ನು ದಾಶರಾಜ್ಞ ಎಂದು ವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ.        

ಮಹಾಭಾರತದ ಆದಿಪರ್ವದ ೭೫ನೇ ಅಧ್ಯಾಯದಲ್ಲಿನ ಕಥೆಯೊಂದನ್ನು ಗಮನಿಸೋಣ
ಇಂದ್ರಪದವಿಗೇರಿದ ನಹುಷನ ಎರಡನೆಯ ಮಗನಾದ ಯಯಾತಿಯು ಚಕ್ರವರ್ತಿಯಾದನು. ಅವನು ಸತ್ಯವಂತನೂ, ಪರಾಕ್ರಮಿಯೂ ಆಗಿದ್ದನಲ್ಲದೇ ರಾಜ್ಯವನ್ನು ಧರ್ಮದಿಂದಲೂ ಪರಿಪಾಲನೆಮಾಡುತ್ತಿದ್ದನು. ಅವನ ಪತ್ನಿಯರಾದ ದೇವಯಾನೀ ಮತ್ತು ಶರ್ಮಿಷ್ಠೆಯರಲ್ಲಿ ಅವನಿಗೆ ಗುಣವಂತರೂ ಪರಾಕ್ರಮಿಗಳೂ ಆದ ಮಕ್ಕಳು ಹುಟ್ಟಿದರು. ದೇವಯಾನಿಗೆ ಯದು, ತುರ್ವಸು ಎಂಬುವರೂಹುಟ್ಟಿದರೆ, ಶರ್ಮಿಷ್ಠೆಯಲ್ಲಿ ದ್ರುಹ್ಯು, ಅನು ಮತ್ತು ಪೂರು ಎಂಬುವರೂ ಹುಟ್ಟಿದರು. ಯಯಾತಿಯು ಅನೇಕ ವರ್ಷಗಳ ಕಾಲ ರಾಜ್ಯವನ್ನು ಪರಿಪಾಲಿಸುತ್ತಿದ್ದು ಆತನಿಗೆ ಮುಪ್ಪು ಆವರಿಸಿ ಕುರೂಪಿಯಾದ, ನೋಡಲು ಮಹಾಘೋರವಾಗಿದ್ದ ವೃದ್ಧಾಪ್ಯವನ್ನು ಅಕಾಲದಲ್ಲಿ ಪಡೆಯಬೇಕಾಯಿತು. ಆದರೆ ಆತನಿಗೆ ಇಂದ್ರಿಯದ ಸೆಳೆತದಿಂದ ನಿಗ್ರಹ ಪಡೆಯಲಾಗಲಿಲ್ಲ. ಆಗ ಯದು, ತುರ್ವಸು, ಪೂರು, ದ್ರುಹ್ಯು, ಮತ್ತು ಅನುಗಳನ್ನು ಕರೆದು ಯಯಾತಿಯು ಹೇಳಿದನು "ನನಗೆ ವೃದ್ಧಾಪ್ಯವು ಅಕಾಲಿಕವಾಗಿ ಪ್ರಾಪ್ತವಾಗಿದೆ. ಆದರೆ ನನ್ನ ಕಾಮನೆಗಳು ಪೂರ್ಣವಾಗಿಲ್ಲ. ಪುನಃ ಯುವಕನಾಗಿ ಕೆಲವು ಕಾಲ ಯುವತಿಯರೊಡನೆ ವಿಹರಿಸಿಕೊಂಡಿರಲು ಇಚ್ಛಿಸಿದ್ದೇನೆ. ಅದಕ್ಕಾಗಿ ನೀವು ನನಗೆ ಸಹಾಯಮಾಡಿ.” ತಂದೆಯು ಹೇಳಿದ ಮಾತುಗಳನ್ನು ಕೇಳಿ ದೇವಯಾನಿಯ ಮಗನಾದ ಮತ್ತು ಹಿರಿಯವನಾದ ಯದುವು ಸಾಧ್ಯವಿಲ್ಲ ಎಂದನು.
ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ |
ತಸ್ಮಾದರಾಜ್ಯಭಾಕ್ತಾತ ಪ್ರಜಾ ತವ ಭವಿಷ್ಯತಿ || ೯ ||
 “ನನ್ನ ಔರಸಪುತ್ರನಾಗಿಯೂ ನಾನು ಹೇಳಿದ ಕಾರ್ಯವನ್ನು ಮಾಡುವುದಿಲ್ಲ ಎಂದು ಹೇಳುತ್ತಿರುವೆ ನೀನು ನಿನ್ನ ಯೌವನವನ್ನು ಕೊಡಲು ನಿರಾಕರಿಸಿದುದರಿಂದ ನಿನ್ನ ಮಕ್ಕಳು ಯಾರೂ ಸಹ ರಾಜರಾಗದಿರಲಿ”–ಎಂದು ಶಪಿಸಿ ಎರಡನೆಯವನಾದ ತುರ್ವಸುವನ್ನು ಕರೆದು ಕೇಳಿದನು : “ತುರ್ವಸು! ನಿನ್ನ ಯೌವನವನ್ನು ಒಂದು ಸಾವಿರ ವರ್ಷಗಳವರೆಗೆ ಮಾತ್ರ ಕೊಟ್ಟುಬಿಡು ಅನಂತರ ನಾನೇ ನಿನಗೆ ಮತ್ತೆ ನಿನ್ನ ಯೌವನವನ್ನು ಕೊಡುವೆನು. ನಿನ್ನ ಯೌವನವನ್ನು ಪಡೆದುಕೊಂಡು ಇನ್ನೂ ಒಂದು ಸಾವಿರ ವರ್ಷಗಳ ಕಾಲ ಸುಖಪಡುವ ಅಭಿಲಾಷೆಯಿದೆ ಎಂದನು. ಅದಕ್ಕೆ ತುರ್ವಸುವು “ಕಾಮೋಪಭೋಗಗಳನ್ನೇ ಹಾಳುಮಾಡುವ, ಶಕ್ತಿ- ಸಾಮರ್ಥ್ಯಗಳನ್ನೂ ಸೌಂದರ್ಯವನ್ನೂ ವಿನಾಶಮಾಡುವ, ಬುದ್ಧಿಶಕ್ತಿಯನ್ನೂ ಹಾಗೂ ಕೊನೆಗೆ ಪ್ರಾಣವನ್ನೂ ಕುಂಠಿತಗೊಳಿಸುವ ವೃದ್ಧಾಪ್ಯವನ್ನು ನಾನು ಅಪೇಕ್ಷಿಸುವುದಿಲ್ಲ. ನನಗದು ಬೇಡ ಎನ್ನುತ್ತಾನೆ.
ಇದರಿಂದ ಕುಪಿತನಾದ ಯಯಾತಿಯು
ಯತ್ತ್ವಂ ಮೇ ಹೃದಯಾಜ್ಜಾತೋ ವಯಃ ಸ್ವಂ ನ ಪ್ರಯಚ್ಛಸಿ |
ತಸ್ಮಾತ್ಪ್ರಜಾ ಸಮುಚ್ಛೇದಂ ತುರ್ವಸೋ ತವ ಯಾಸ್ಯತಿ || ೧೩ ||
ಸಂಕೀರ್ಣಾಚಾರಧರ್ಮೇಷು ಪ್ರತಿಲೋಕಚರೇಷು ಚ |
ಪಿಶಿತಾಶಿಷು ಚಾನ್ತ್ಯೇಷು ಮೂಢ ರಾಜಾ ಭವಿಷ್ಯಸಿ || ೧೪ ||
ಗುರುದಾರಪ್ರಸಕ್ತೇಷು ತಿರ್ಯಗ್ಯೋನಿಗತೇಷು ಚ |
ಪಶುಧರ್ಮೇಷು ಪಾಪೇಷು ಮ್ಲೇಚ್ಛೇಷು ತ್ವಂ ಭವಿಷ್ಯಸಿ || ೧೫ ||
“ನನ್ನ ಮಗನಾಗಿ ಹುಟ್ಟಿಯೂ ನಿನ್ನ ಯೌವನವನ್ನು ಕೊಡದೇ ಇರುವುದಕ್ಕಾಗಿ ನಿನ್ನ ಸಂತಾನವು ನಶಿಸಲಿ. ಸಂಕೀರ್ಣಜಾತಿಯ, ದುರಾ ಚಾರಿಗಳ, ವಿಲೋಮಜಾತಿಯ, ಮಾಂಸಭಕ್ಷಕರ, ಗುರುಪತ್ನೀಸಮಾಗಮ ವನ್ನೂ ಸಹ ಮಾಡಲು ಹಿಂಜರಿಯದ, ಕೇವಲ ಪಶು-ಪಕ್ಷಿಗಳಂತೆ ಜೀವನ ನಡೆಸುವ ಮ್ಲೇಚ್ಛಜಾತಿಗೆ ನೀನು ರಾಜನಾಗು. ಎಂದು ಶಪಿಸುತ್ತಾನೆ.
ಯಯಾತಿಯು ದೇವಯಾನಿಯ ಮಕ್ಕಳಿಬ್ಬರಿಗೂ ಶಾಪಕೊಟ್ತ ನಂತರ ಶರ್ಮಿಷ್ಠೆಯ ಮಗನಾದ ದ್ರುಹ್ಯುವನ್ನು ಕರೆದು ಹೇಳಿದನು: “ದ್ರುಹ್ಯುವೇ ಒಂದೇ ಒಂದು ಸಾವಿರ ವರ್ಷಗಳ ಕಾಲ ಈ ನನ್ನ ಕಾಂತಿ ಮತ್ತು ರೂಪಗಳನ್ನು ವಿನಾಶಗೊಳಿಸುವ ವೃದ್ಧಾಪ್ಯವನ್ನು ನೀನು ತೆಗೆದುಕೋ. ನಿನ್ನ ಯೌವನವನ್ನು ನನಗೆ ಕೊಡು. ಸಾವಿರವರ್ಷಗಳು ಮುಗಿದೊಡನೆಯೇ ನಿನ್ನ ಯೌವನವನ್ನು ಪುನಃ ನಿನಗೇ ಕೊಟ್ಟು ನನ್ನ ವೃದ್ಧಾಪ್ಯವನ್ನು ದೋಷದೊಡನೆ ಹಿಂದಕ್ಕೆ ತೆಗೆದುಕೊಳ್ಳುವೆನು ಎನ್ನುತ್ತಾನೆ. ಅದಕ್ಕೆ ದ್ರುಹ್ಯುವು ಹೇಳುತ್ತಾನೆ
ನ ಗಜಂ ನ ರಥಂ ನಾಶ್ವಂ ಜೀರ್ಣೋ ಭುಙ್ಕ್ತೇ ನ ಚ ವಾಕ್ಸಙ್ಗಶ್ಚಾಸ್ಯ
ಭವತಿ ತಾಂ ಜರಾಂ ನಾಭಿಕಾಮಯೇ “ಅಪ್ಪಾ! ಸ್ತ್ರಿಯಮ್‍ | || ೧೯ ||
ಮುದಿತನದಲ್ಲಿ ಕುದುರೆಸವಾರಿ ಮಾಡಲು ಸಾಧ್ಯವಿಲ್ಲ.ಆನೆ, ರಥಾದಿಗಳ ಮೇಲೆ ಹತ್ತಲೂ ಸಾಧ್ಯವಾಗಲಾರದು. ಹೆಂಗಸರನ್ನೂ ಉಪಭೋಗಿಸಲು ಸಾಧ್ಯವಿಲ್ಲ. ಮುದಿತನದಲ್ಲಿ ಮಾತೂ ತೊದಲುತ್ತದೆ. ಇಂತಹ ನಿಷ್ಪ್ರಯೋಜಕವಾದ ಮುದಿತನವು ನನಗೆ ಬೇಡ. ಯಯಾತಿಗೆ ಇಂತಹ ಮಾತುಗಳನ್ನು ಕೇಳಿ ಸ್ಥಿಮಿತ ತಪ್ಪಿತು. ಕೋಪವು ಹೆಚ್ಚಿತು. “ಮಕ್ಕಳು, ಮಕ್ಕಳು–ಎಂದು ಹಂಬಲಿಸುವುದೇಕೆ? ಕೇವಲ ಒಂದು ಸಾವಿರ ವರ್ಷಗಳ ಕಾಲ ನಿನ್ನ ಯೌವನವನ್ನು ನನಗೆ ಕೊಡಲು ಸಾಧ್ಯವಿಲ್ಲವೆಂದರೆ ನೀನು ಮಗನಾಗಿ ಹುಟ್ಟಿದುದರ ಪ್ರಯೋಜನವಾದರೂ ಏನು? ಆನೆ, ರಥ, ಕುದುರೆ ಇತ್ಯಾದಿಗಳಿಂದ ಸುಖವನ್ನು ಅಭಿಲಾಷಿಸಿರುವೆಯಲ್ಲವೇ? ರಥಸಂಚಾರಕ್ಕೆ ಅಯೋಗ್ಯವಾದ, ಸರಿಯಾದ ದಾರಿಯಿಲ್ಲದ, ಹಳ್ಳ-ಕೊಳ್ಳಗಳೂ, ಬೆಟ್ಟ-ಗುಡ್ಡಗಳೂ ಇರುವ ಪ್ರದೇಶಕ್ಕೆ ನೀನು ರಾಜನಾಗುವೆ. ನೀನು ಹೆಸರಿಗೆ ಮಾತ್ರ ರಾಜನಾಗಿರುವೆಯೇ ಹೊರತು ನಿನ್ನ ಅಧಿಕಾರವೇನೂ ಆ ರಾಜ್ಯದಲ್ಲಿ ನಡೆಯದಿರಲಿ.” ಎಂದು ಶಪಿಸುತ್ತಾನೆ ದಾಶರಾಜ್ಞದಲ್ಲಿ ವಿವರಿಸಲ್ಪಟ್ಟ ಈ ದ್ರುಹ್ಯುವೇ ಮುಂದೆ ಪ್ರಾಚೀನ ಯುರೋಪಿನ ಕಡೆ ವಲಸೆ ಹೋಗುತ್ತಾರೆ. ಪ್ರಾಚೀನ ಯೂರೋಪಿಯನ್ನರು ಇವರನ್ನೇ ಡ್ರೂಯಿಡ್ಸ್ ಎಂದು ಕರೆದರು. ಇವರು ಐರ್ಲೆಂಡ್, ವೇಲ್ಸ್ ಮುಂತಾದೆಡೆಗಳಲ್ಲಿ ನೆಲೆಸಿದರು ಎಂದು ತಿಳಿದು ಬರುತ್ತದೆ. ( ದ್ರೂಯಿಡ್ಸ್ ಎಂದರೆ ಪುರೋಹಿತ ವರ್ಗ ಎಂದು ಅರ್ಥ ಸೂಚಿಸುತ್ತದೆ.)ಡ್ರೂಯಿಡ್ ದಾಖಲೆಗಳು ಸಹ ಕ್ರಿಸ್ತ ಪೂರ್ವ ೩೭೦೦ಕ್ಕೂ ಪೂರ್ವದಲ್ಲಿ ಮಧ್ಯ ಏಶಿಯಾದಿಂದ ವಲಸೆ ಬಂದವರು ಎಂದು ಸಾರುತ್ತವೆ. ದಾಶರಾಜ್ಞ ಸುದಾಸನಿಂದ ಪರಾಭವಹೊಂದಿ ವಲಸೆ ಹೋದ ಪಾರ್ಥಿವರು ಪಾರ್ತಿಯನ್ ಆದರು ಪರ್ಶುಗಳು ಪರ್ಶಿಯನ್ ಆದರು, ಅಲೀನರು ಪ್ರಾಚೀನ ಗೀಕ್ ನ ಹೆಲಿನ್ ಆದರು ಹೀಗೆ ಇಲ್ಲಿಂದ ವಲಸೆ ಹೋಗಿ ಇಲ್ಲಿನ ನಾಗರೀಕತೆಯ ಸಾಮ್ಯತೆ ಹೊಂದಿದರು ಆದರೆ ಕಾಲ ಕ್ರಮೇಣ ತಥಾ ಕಥಿತ ಬುದ್ಧಿ ಜೀವಿಗಳೆನ್ನಿಸಿಕೊಂಡವರನೇಕರಿಗೆ ಇದು ಹಿಡಿಸಲಿಲ್ಲ ಅಲ್ಲಿನಿಂದಲೇ ಇಲ್ಲಿ ಬಂದರು ಎನ್ನುವ ಹುಯಿಲೆಬ್ಬಿಸಿದರು. ಇಂತಹ ವಾದ ಸರಣಿಗೆ ತುಪ್ಪ ಸುರಿದದ್ದು ಮಾಕ್ಸ್ ಮುಲ್ಲರ್ ನಂತವರು, ಮೆಕಾಲೆಯಂತೂ ಅಲ್ಲಿಂದ ಇಲ್ಲಿಗೆ ವಲಸೆ ಬಂದದ್ದೇ ಮುಂದಿನ ಪೀಳಿಗೆ ಕಲಿಯ ಬೇಕೆನ್ನುವ ಹಠಕ್ಕೆ ಬಿದ್ದು ಸಾಧಿಸಿಕೊಂಡ ಪರಮಪಾಪಿ.



Sunday, 18 March 2018

ಚರಕಾಚಾರ್ಯ - ಚರಕಾಧ್ವರ್ಯುಃ - ೨

ನಿನ್ನೆ ರಾಮಾಯಣ ಮತ್ತು ಮಹಾಭಾರತದಲ್ಲಿ "ಚರಕಾರ - ಚರಕಾಲ - ಚರಕಾಧ್ವರ್ಯು" ಎನ್ನುವುದಾಗಿ ಚರಕ ಎನ್ನುವ ಶಬ್ದದ ಕುರಿತು ಬರೆದಿದ್ದೆ. ಆಯುರ್ವೇದದಲ್ಲಿ ಸುಪ್ರಸಿದ್ಧ ವೈದ್ಯನೊಬ್ಬನ ಹೆಸರು ಚರಕ ಎನ್ನುವುದಾಗಿದೆ. ಈತ ರಚಿಸಿದ ವೈದ್ಯ ಶಾಸ್ತ್ರಗ್ರಂಥಕ್ಕೂ ಚರಕಸಂಹಿತೆ ಎಂದು ಕರೆಯಲಾಗುತ್ತದೆ. ಪ್ರಾಚೀನ ಭಾರತದಲ್ಲಿ "ಚರಕ" ಎಂಬ ಪದ ಅವರು ನಿರ್ವಹಿಸುತ್ತಿದ್ದ ವೃತ್ತಿಸೂಚಕವಾಗಿದ್ದಿತೆಂದು ತಿಳಿದು ಬರುತ್ತದೆ. ಕೃಷ್ಣ ಯಜುರ್ವೇದ ಶಾಖೆಯ ವೈದಿಕರನ್ನು ಸಹ ಅದೇ ಹೆಸರಿಂದ ಕರೆಯಲಾಗುತ್ತಿತ್ತು, ಪರಿವ್ರಾಜಕ ಸಂಚಾರಪ್ರವೃತ್ತಿಯ ಶಾಸ್ತ್ರಬೋಧಕರು, ಹಾಗೂ ವ್ಯಾಯಾಮ ನಿಪುಣರು, ಗೂಢಚಾರರು ಮುಂತಾದವರನ್ನು ಚರಕರೆಂದು ಕರೆಯಲಾಗುತ್ತಿತ್ತು. ಇವುಗಳಲ್ಲದೇ ವ್ಯಾಕರಣ, ಜ್ಯೋತಿಷ್ಯ, ಆಯುರ್ವೇದ, ಧನುರ್ವೇದ ಮುಂತಾದ ಶಾಸ್ತ್ರಗಳಲ್ಲಿ ನಿಷ್ಣಾತರಾಗಿ ಶಿಷ್ಯರಿಗೆ ಅವನ್ನು ಬೋಧಿಸುತ್ತ ಸಂಚರಿಸುತ್ತಿದ್ದ ಋಷಿ, ಮುನಿಗಳನ್ನು ಚರಕಾಚಾರ್ಯರೆಂದೇ ಕರೆಯುತ್ತಿದ್ದರೆಂದು ಊಹಿಸಲಾಗಿದೆ. ಇಂಥವರಲ್ಲಿ ಆಯುರ್ವೇದ ಶಾಸ್ತ್ರದ ಅತಿಮುಖ್ಯ ಗ್ರಂಥವನ್ನು ರಚಿಸಿದಾತ ಒಬ್ಬ ಚರಕಾಚಾರ್ಯ.
ವೈದ್ಯ ಶಾಸ್ತ್ರದ ಚರಕನ ಜನ್ಮಸ್ಥಳ, ಅವನ ಕುಲ, ಕಾಲ ಮುಂತಾದ ವಿವರಗಳಾವೂವೂ ನಿರ್ದಿಷ್ಟವಾಗಿ ತಿಳಿದಿಲ್ಲ. ವಾಗ್ಭಟಾಚಾರ್ಯ ಮತ್ತು ಭಾವಮಿಶ್ರರು ಇವನನ್ನು ಮುನಿ ಎಂದು ತಿಳಿಸುತ್ತಾರೆ. ಪಾಣಿನಿಯ ವ್ಯಾಕರಣದ ಮೇಲಿನ ಮಹಾಭಾಷ್ಯದ ಕರ್ತೃವಾದ ಪತಂಜಲಿ ಋಷಿಯೇ ಚರಕಾಚಾರ್ಯನೆಂದೂ ಪತಂಜಲಿ ಆದಿಶೇಷನ ಅವತಾರವೆಂದೂ ವಿಜ್ಞಾನಭಿಕ್ಷು ಮತ್ತು ಭೋಜ ಎಂಬುವರು ವರ್ಣಿಸಿದ್ದಾರೆ. ಚಕ್ರಪಾಣಿ ದತ್ತನೆಂಬ ವ್ಯಾಖ್ಯಾನಕಾರ ಚರಕ ಸಂಹಿತೆಗೆ ಪತಂಜಲಿಯೇ ಪ್ರಥಮ ಭಾಷ್ಯಕಾರನೆಂದು ಸ್ತುತಿಸಿದ್ದಾನೆ. ಚೀನಾದೇಶದಲ್ಲಿ ದೊರೆತ ಬೌದ್ಧ ತ್ರಿಪಟಿಕ ಗ್ರಂಥಗಳಲ್ಲಿ ಕಾನಿಷ್ಕನ ಆಸ್ಥಾನದಲ್ಲಿ ಚರಕನೆಂಬ ವೈದ್ಯಾಚಾರ್ಯನಿದ್ದನೆಂದು ತಿಳಿಸಲಾಗಿದೆ. ಚರಕಸಂಹಿತೆಯ ಆಂತರಿಕ ಲಕ್ಷಣ, ಭಾಷಾಶೈಲಿ, ಚಾರಿತ್ರಿಕ ಹಿನ್ನೆಲೆ ಮುಂತಾದ ಆಧಾರಗಳೆಲ್ಲವನ್ನೂ ವಿಮರ್ಶಿಸಿರುವ ಪ್ರಾಚ್ಯ ವಿದ್ಯಾ ಸಂಶೋಧಕರ ಅಭಿಪ್ರಾಯದಲ್ಲಿ ಅದರ ಕರ್ತೃವೂ ಮಹಾಭಾಷ್ಯದ ಕರ್ತೃ ಪತಂಜಲಿಯೂ ಭಿನ್ನವ್ಯಕ್ತಿಗಳು; ಕಾನಿಷ್ಕನ ಆಸ್ಥಾನದ ವಸುಮಿತ್ರ ಅಶ್ವಘೋಷ, ನಾಗಾರ್ಜುನ ಮೊದಲಾದವರ ಗ್ರಂಥಗಳಲ್ಲಿ ಕಂಡುಬರುವಂಥ ಬೌದ್ಧಮತೀಯ ವಿಷಯಗಳು ಚರಕಸಂಹಿತೆಯಲ್ಲಿ ಕಾಣದಿರುವುದು ಮತ್ತು ಚರಕ ಸಂಹಿತೆಯ ಶೈಲಿಯ ಭಿನ್ನತೆಗಳು ಚರಕ ಸಂಹಿತೆಯ ಕರ್ತೃವೂ ರಾಜವೈದ್ಯ ಚರಕನೂ ಭಿನ್ನ ವ್ಯಕ್ತಿಗಳೆಂದು ದೃಢಪಡಿಸುತ್ತವೆ. ಮತ್ತು ಚರಕಸಂಹಿತೆಯ ಕಾಲ ಕ್ರಿ.ಪೂ. ಎರಡನೆ ಶತಮಾನಕ್ಕೇ ಸರಿಯಾಗಬಲ್ಲುದು. ಚರಕ ಸಂಹಿತೆಯ ಕರ್ತೃ ಚರಕಾಚಾರ್ಯ ಕ್ರಿ.ಪೂ. ಎರಡನೆಯ ಶತಮಾನದಲ್ಲಿದ್ದ ಪ್ರಸಿದ್ಧ ಲೋಹಶಾಸ್ತ್ರಜ್ಞ. ಆದರೆ ನಮಗಿಂದು ದಕ್ಷಿಣಕ್ಕೆ ಲಿಪಿಯ ಉಪಯೋಗವನ್ನು ಪರಿಚಯಿಸಿದ ಅಶೋಕನ ಕಾಲದ ಚಪಡನ ಮೊಮ್ಮಗನೇ ಚರಕ ಎನ್ನುವುದಾಗಿ ಹೇಳಲಾಗುತ್ತದೆ ಹಾಗೇನಾದರೂ ಆಗಿದ್ದರೆ ಚರಕ ಗಾಂಧಾರದೇಶದವನು.
ಚರಕಸಂಹಿತೆಯ ಕುರಿತಾಗಿ : ಇದು ಚರಕನ ಸ್ವತಂತ್ರಕೃತಿಯಲ್ಲ. ಕ್ರಿ.ಪೂ. ಏಳನೆಯ ಶತಮಾನದ ಮಹರ್ಷಿ ಕೃಷ್ಣಾತ್ರೇಯ ಬೋಧಿಸಿದ ಸಿದ್ಧಾಂತಗಳನ್ನು ಆತನ ಶಿಷ್ಯೋತ್ತಮವಾದ ಅಗ್ನಿವೇಷ ಎನ್ನುವ ಋಷಿ ಗ್ರಂಥವನ್ನಾಗಿ ರಚಿಸಿದ ಅದು ಅಗ್ನಿವೇಶ ಸಂಹಿತೆ ಎಂದು ಕರೆಯಲ್ಪಟ್ಟಿತು. ದೇವತೆಗಳಿಂದಲೂ ಶ್ಲಾಘಿಸಲ್ಪಟ್ಟ ಈ ಅಗ್ನಿವೇಶ ಸಂಹಿತೆ ಆಯುರ್ವೇದ ಅಧ್ಯಯನ ಆದ್ಯಾಪನಾದಿಗಳಿಗೆ ಆಧಾರಗ್ರಂಥವಾಗಿ ಮುಂದಿನ ಶತಮಾನಗಳಲ್ಲಿ ಮಾನ್ಯತೆ ಪಡೆಯಿತು. ದೇಶದಲ್ಲಿ ಉಂಟಾದ ರಾಜಕೀಯ ಕ್ಷೋಭೆ, ಪರಕೀಯರ ಆಕ್ರಮಣ ಮುಂತಾದ ಹಲವಾರು ಕಾರಣಗಳಿಂದ ಈ ಅಗ್ನಿವೇಶ ಸಂಹಿತೆ ಕ್ರಿ.ಪೂ. ಎರಡನೆಯ ಶತಮಾನದ ವೇಳೆಗೆ ಭಾಗಶಃ ನಾಶವಾಗಿ ಹೋಗಿದ್ದರಿಂದ ಅದನ್ನು ಪುನಃ ಸಂಪಾದಿಸಿ ಪರಿಷ್ಕರಿಸಿ ಅಧ್ಯಯನಯೋಗ್ಯವನ್ನಾಗಿ ಮಾಡಿದ ಕೀರ್ತಿ ಚರಕನಿಗೆ ಸಲ್ಲುತ್ತದೆ.ಮುಂದೆ ಈ ಗ್ರಂಥ ಚರಕಸಂಹಿತೆಯೆಂದೇ ಖ್ಯಾತಿ ಪಡೆಯಿತು. ಮುಂದಿನ ಮೂರು ಶತಮಾನಗಳು ಕಳೆಯುವುದರೊಳಗೆ ಇದು ಕೂಡ ನಾಶವಾಗುತ್ತ ಬಂದಿತು. ಆಗ ಕಾಶ್ಮೀರದ ಪಂಚನಪುರವೆಂಬಲ್ಲಿ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿದ್ದ ಕಪಿಲಬಲ ಎನ್ನುವವನ ಮಗನಾದ ದೃಢಬಲನೆಂಬಾತ ಚರಕಸಂಹಿತೆಯನ್ನು ಪುನಃ ಪರಿಷ್ಕರಿಸಿ ಕೊನೆಯ 41 ಅಧ್ಯಾಯಗಳನ್ನು ತಾನೇ ರಚಿಸಿ ಗ್ರಂಥಕ್ಕೆ ಸೇರಿಸಿ ಅದನ್ನು ಸಂಪೂರ್ಣಗೊಳಿಸಿದ. ಇದೇ ನಮಗೆ ಇಂದು ದೊರೆತಿರುವ ಚರಕಸಂಹಿತೆ.
ಮಹರ್ಷಿ ಕೃಷ್ಣಾತ್ರೇಯನ ಬೋಧನೆಗಳುಳ್ಳ, ಅಗ್ನಿವೇಶ ಋಷಿಪ್ರಣೀತವಾದ, ಚರಕಾಚಾರ್ಯನಿಂದ ಪ್ರತಿ ಸಂಸ್ಕರಿತವಾದ ದೃಢಬಲನಿಂದ ಸಂಪೂರ್ಣಗೊಳಿಸಲ್ಪಟ್ಟ ಆಯುರ್ವೇದ ಶಾಸ್ತ್ರದ ಅತ್ಯಮೂಲ್ಯ ಆಧಾರ ಗ್ರಂಥ.
ಚರಕಸಂಹಿತೆಯಲ್ಲಿ ಅನುಕ್ರಮವಾಗಿ 30 ಅಧ್ಯಾಯಗಳ ಸೂತ್ರಸ್ಥಾನ, ಪ್ರತ್ಯೇಕ 8 ಆಧ್ಯಾಯಗಳ ನಿದಾನ, ವಿಮಾನ ಮತ್ತು ಶಾರೀರಸ್ಥಾನಗಳು, 12 ಅಧ್ಯಾಯಗಳ ಇಂದ್ರಿಯಸ್ಥಾನ, 30 ಅಧ್ಯಾಯಗಳ ಚಿಕಿತ್ಸಾಸ್ಥಾನ, ಪ್ರತ್ಯೇಕ 12 ಅಧ್ಯಾಯಗಳ ಕಲ್ಪ ಮತ್ತು ಸಿದ್ದಿಸ್ಥಾನಗಳು ಹೀಗೆ 120 ಅಧ್ಯಾಯಗಳುಳ್ಳ ಎಂಟು ಸ್ಥಾನಗಳಿವೆ. ಆಯುರ್ವೇದದ ಮೂಲಸಿದ್ಧಾಂತಗಳು, ಔಷಧ ಹಾಗೂ ಆಹಾರದ್ರವ್ಯಗಳ ಗುಣಧರ್ಮ ಸ್ವಸ್ಥವೃತ್ತ ಮುಂತಾದವು ಸೂತ್ರಸ್ಥಾನದ ವಿಷಯ. ರೋಗಕಾರಣ ಮತ್ತು ಲಕ್ಷಣಗಳನ್ನು ನಿದಾನಸ್ಥಾನವೂ ಷಡ್ರಸಗಳ ಗುಣಕರ್ಮ, ರೋಗಿಪರೀಕ್ಷೆ, ವೈದ್ಯನೀತಿ ಮುಂತಾದವನ್ನು ವಿಮಾನಸ್ಥಾನವೂ ಸಾಂಖ್ಯದರ್ಶನಾನುಸಾರ ವಿಶ್ವಸೃಷ್ಟಿ, ಶರೀರ ರಚನೆ, ಅಂಗಾವಯವಗಳ ವಿವರಣೆಯನ್ನು ಶರೀರ ಸ್ಥಾನವೂ ಮರಣ ಸೂಚಕ ಲಕ್ಷಣಗಳ ವಿವರಣೆಯನ್ನು ಇಂದ್ರಿಯ ಸ್ಥಾನವೂ ಹೊಂದಿವೆ. ರೋಗಗಳ ಚಿಕಿತ್ಸಾಕ್ರಮ ಚಿಕಿತ್ಸಾಸ್ಥಾನದಲ್ಲಿದೆ. ಔಷಧಿಗಳನ್ನು ತಯಾರಿಸುವ ಕ್ರಮ ಕಲ್ಪಸ್ಥಾನದಲ್ಲಿದೆ. ಚಿಕಿತ್ಸಾಕಾಲದಲ್ಲಿ ಉಂಟಾಗಬಹುದಾದ ವೈಪರೀತ್ಯಗಳ ಜ್ಞಾನ ಮತ್ತು ನಿವಾರಣೋಪಾಯಗಳನ್ನು ಸಿದ್ಧಿಸ್ಥಾನದಲ್ಲಿ ವಿವರಿಸಲಾಗಿದೆ.
ಆಯುರ್ವೇದದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಕಾಯಚಿಕಿತ್ಸೆ ಎಂಬ ವಿಭಾಗಕ್ಕೆ ಚರಕಸಂಹಿತೆಯೇ ಆಧಾರಗ್ರಂಥ. ಬಾಹ್ಯ ಪ್ರಪಂಚದಲ್ಲಿರುವಂತೆಯೇ ಶರೀರದಲ್ಲಿಯೂ ಅಗ್ನಿ ಇದೆ. ಉದರದ ಒಳಭಾಗದಲ್ಲಿರುವ ಜಠರಾಗ್ನಿ, ಕೋಷ್ಠಾಗ್ನಿ, ಔದಾರ್ಯ ತೇಜಸ್, ಪಾಚಕಪಿತ್ತ ಎಂಬ ಬೇರೆ ಸಂಕೇತಗಳೂ ಇವೆ. ನಾವು ಸೇವಿಸಿದ ಆಹಾರವನ್ನು ಪಾಕ ಮಾಡುತ್ತದೆ. ರಸ, ರಕ್ತ ಮೊದಲಾದ ಸಪ್ತಧಾತುಗಳಲ್ಲಿರುವ ವಿಶಿಷ್ಟ ಅಗ್ನಿಗಳು ಜಠರಾಗ್ನಿಯಿಂದ ಬಲವನ್ನು ಪಡೆದು ತಮ್ಮ ಆಹಾರಾಂಶಗಳನ್ನು ಪಾತಮಾಡುತ್ತವೆ. ಕೋಷ್ಟಾಗ್ನಿ ಮತ್ತು ಧಾತ್ವಗ್ನಿಗಳು ಪ್ರಾಕೃತವಾಗಿರುವಾಗ ಶರೀರ ಅನೇಕ ರೋಗಗಳಿಗೆ ತುತ್ತಾಗುತ್ತದೆ. ಆ ಸಮಯದಲ್ಲಿ ಅಗ್ನಿಯನ್ನು ಪ್ರಾಕೃತ ಸ್ಥಿತಿಗೆ ತರುವುದೇ ರೋಗನಿವಾರಣೆಯ ಕ್ರಮ. ಕಾಯಚಿಕಿತ್ಸೆ ಎಂದರೆ ಕಾಯಾಗ್ನಿ ಚಿಕಿತ್ಸೆ ಎಂಬುದೇ ಈ ವಿಭಾಗದ ಮೂಲಸಿದ್ಧಾಂತ. ಚರಕಸಂಹಿತೆಯಲ್ಲಿರುವ ಇತರ ಸಿದ್ಧಾಂತಗಳೆಲ್ಲವೂ ಅಗ್ನಿತತ್ತ್ವವನ್ನೇ ಮುಖ್ಯವಾಗಿಟ್ಟುಕೊಂಡು ಬೆಳೆದಿವೆ. ಜಠರಾಗ್ನಿಯನ್ನು ದೀಪನ ಮಾಡುವುದಕ್ಕಾಗಿ ಬಾಯಿಯ ಮೂಲಕವೇ ಔಷಧಿಗಳ ಪ್ರಯೋಗ. ಔಷಧಿಗಳಲ್ಲಿ ಹೆಚ್ಚಿನವು ಗಿಡಮೂಲಿಕೆಗಳಿಂದ ತಯಾರಾದವು. ನಿರುಪದ್ರವಿಯೂ ಯಶಸ್ವಿಯೂ ಆದ ಕಾಯಚಿಕಿತ್ಸಾ ಕ್ರಮವನ್ನು ವಿವರಿಸುವ ಚರಕಸಂಹಿತೆಗೆ ಆಯುರ್ವೇದ ಸಾಹಿತ್ಯದಲ್ಲಿ ಅಗ್ರಸ್ಥಾನವೂ ಇದೆ.
ಚರಕ ಸಂಹಿತೆಗೆ ಸುಮಾರು ಐದನೆಯ ಶತಮಾನದ ಈಶಾನದೇವ ಮತ್ತು ಭಟ್ಟಾರ ಹರಿಶ್ಚಂದ್ರರಿಂದ ಆರಂಭಿಸಿ ವಾಪ್ಯಚಂದ್ರ, ಬತುಳತರ, ಭೀಮದತ್ತ, ನರದತ್ತ, ಜೇಜ್ಜಟ, ಗುಣಾಕಾರ, ಚಕ್ರಪಾಣಿದತ್ತ, ಸ್ವಾಮಿಕುಮಾರ, ಶಿವದಾಸಸೇನ, ಗಂಗಾಧರರಾಯ ಮತ್ತು ಇಪ್ಪತ್ತನೆಯ ಶತಮಾನದ ಯೋಗೇಂದ್ರನಾಥ ಸೇನರ ವರೆಗೆ ಅನೇಕ ಪಂಡಿತರ ವ್ಯಾಖ್ಯಾನಗಳಿವೆ. ಇವುಗಳ ಪೈಕಿ ಹನ್ನೊಂದನೆಯ ಶತಮಾನದಲ್ಲಿ ಬಂಗಾಳದ ಗೌಡದೇಶದ ರಾಜ ನಯಪಾಲನ ಆಸ್ಥಾನವೈದ್ಯನಾಗಿದ್ದ ಚಕ್ರಪಾಣಿದತ್ತ ರಚಿಸಿರುವ ಆಯುರ್ವೇದದ ದೀಪಿಕಾ ವ್ಯಾಖ್ಯಾನ ಅತ್ಯಂತ ವಿದ್ವತ್ಪೂರ್ಣವಾಗಿದ್ದು ಕರ್ತೃವಿಗೆ ಚರಕ ಚತುರಾನನ ಎಂಬ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಈಗ ಸಮುಗ್ರವಾಗಿ ಲಭ್ಯವಾಗಿರುವ ವ್ಯಾಖ್ಯಾನಗಳಲ್ಲಿ ಇದೇ ಪ್ರಾಚೀನವಾದುದಾಗಿದ್ದುದು ಇದರ ಮಹತ್ತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಈಗ ನಾನು ಇಲ್ಲಿ ಹಾಕಿರುವ ಶಾಸನದ ಸಾಲು ಅಜಂತಾದ ಗುಹೆಯಲ್ಲಿ ಖಂಡರಿಸಲ್ಪಟ್ಟ ಸುಮಾರು ೨ನೇ ಶತಮಾನದ ಶಾಸನ. ಬ್ರಾಹ್ಮಿ ಲಿಪಿಯಲ್ಲಿ ಅತ್ಯಂತ ಸುಂದರವಾಗಿ ಖಂಡರಿಸಲ್ಪಟ್ಟ ಶಾಸನವಿದು. ಇಲ್ಲಿ ಪ್ರಭಾಸ, ಗೋವರ್ಧನ, ಚರಕ "ಚರಕ ಪರ್ಶಭ್ಯಃ ಗ್ರಾಮೇ" ಎನ್ನುವ ಒಂದು ಪದಗಳ ಬಳಕೆಯಾಗಿವೆ.