Search This Blog

Thursday, 16 July 2020

ಆಚಾರದಲ್ಲಿ ಆದರ್ಶವನ್ನು ಬೋಧಿಸುವವ : ಕಣಿಕನ ಕೂಟನೀತಿ ೨

ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು. ಎನ್ನುವುದನ್ನೇ ಈ ಶ್ಲೋಕದಲ್ಲಿ ಹೇಳಲಾಗಿದೆ.

ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ ||

ತನಗೆ ಕೋಪಬಂದಿದ್ದರೂ ಮುಖದಲ್ಲಿ ಅದನ್ನು ಪ್ರಕಟಿಸಬಾರದು. ಮಾತಿನಲ್ಲಿಯೂ ಸಹ ಕೋಪದ ಭಾವ  ಮತ್ತು ನಿಷ್ಠುರತೆಯನ್ನು ತೋರಿಸಬಾರದು. ಯಾವಾಗಲೂ ನಸುನಗುತ್ತ್ತಲೇ ಮಾತನಾಡಬೇಕು. ಕೋಪದಿಂದ ಬೇರೆಯವರನ್ನು ನಿಂದಿಸಬಾರದು ಎನ್ನುವುದನ್ನು ಕಣಿಕ ಧೃತರಾಷ್ಟ್ರನಿಗೆ ಈ ಶ್ಲೋಕದಿಂದ ಹೇಳುತ್ತಾನೆ.

ಕ್ರುದ್ಧೋಽಪ್ಯಕ್ರುದ್ಧರೂಪಃ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ |
ನ ಚಾಪ್ಯನ್ಯಮಪಧ್ವಂಸೇತ್ಕದಾಚಿತ್ಕೋಪಸಂಯುತಃ || ೫೫ ||

ಶತ್ರುಗಳ ನಾಶವನ್ನು ಹೇಳುತ್ತಾ . . . .
ಪ್ರಹರಿಷ್ಯನ್ಪ್ರಿಯಂ ಬ್ರೂಯಾತ್ಪ್ರಹರನ್ನಪಿ ಭಾರತ |
ಪ್ರಹೃತ್ಯ ಚ ಕೃಪಾಯೀತ ಶೋಚೇತ ಚ ರುದೇತ ಚ || ೫೬ ||

ಶತ್ರುವನ್ನು ನಾಶಮಾಡುವ ಮೊದಲು ಮತ್ತು ನಾಶಮಾಡುವ ಕಾಲದಲ್ಲಿ ಹಿತವಾದ ಮಾತುಗಳನ್ನೇ ಹೇಳುತ್ತಿರಬೇಕು. ಶತ್ರುವನ್ನು ಧ್ವಂಸಮಾಡಿದನಂತರ ಅವನಿಗಾಗಿ ಪರಿತಾಪಪಡಬೇಕು ಅಥವಾ ಅಂತಹ ಭಾವನೆಯನ್ನು ವ್ಯಕ್ತಪಡಿಸಬೇಕು. ಕೆಲವು ಸಂದರ್ಭಗಳಲ್ಲಿ ಅವನ ಪ್ರಶಂಸೆಮಾಡುತ್ತಾ ದುಃಖಿಸುತ್ತಾ ಅಳಬೇಕಾಗುತ್ತದೆ.
ಶತ್ರುವು ತನಗಿಂತ ಪರಾಕ್ರಮಿಯಾಗಿದ್ದಾಗ ಅವನನ್ನು ವಿದವಿದವಾಗಿ ಹೊಗಳಿ ಸಂತೈಸುತ್ತಲಿದ್ದು, ಅವನು ದುರ್ಬಲನಾದ ತಕ್ಷಣ ಅಥವಾ ಅವನು ನತದೃಷ್ಟನಾದದ್ದು ತಿಳಿದೊಡನೆಯೇ ಧ್ವಂಸಮಾಡಬೇಕು.

ಅಪರಾಧವನ್ನು ತಿಳಿಸುತ್ತಾ . . . .
ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ || ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು.

ಯಃ ಸ್ಯಾದನುಪ್ರಾಪ್ತವಧಸ್ತಸ್ಯಾಗಾರಂ ಪ್ರದೀಪಯೇತ್ |
ಅಧನಾನ್ನಾಸ್ತಿಕಾಂಶ್ಚೌರಾನ್ವಿಷಯೇ ಸ್ವೇ ನ ವಾಸಯೇತ್ || ೫೯ || ಯಾರನ್ನು ಕೊಲ್ಲಬೇಕಾಗಿರುವುದೋ ಅಂತಹವರ ಮನೆಯನ್ನೇ ಭಸ್ಮಮಾಡಬೇಕು. ಅವರ ಮನೆಗೆ ಬೆಂಕಿ ಹಾಕಿ ನಿಃಶೇಷವಾಗಿ ನಾಶಮಾಡಬೇಕು. ದರಿದ್ರರನ್ನೂ, ನಾಸ್ತಿಕರನ್ನೂ ಮತ್ತು ಕಳ್ಳರನ್ನೂ ದೇಶದಲ್ಲಿ ಇರಲಿಕ್ಕೆ ಆಸ್ಪದ ಕೊಡಬಾರದು. ಇಂತವರು ಶತ್ರುಗಳ ಕೈಗೊಂಬೆಗಳಾಗುವ ಸಂಭವ ಇರುತ್ತದೆ.

ಶತ್ರುವು ಬಂದ ತಕ್ಷಣ ಆತನನ್ನು ಸ್ವಾಗತಿಸಿ ಅವನಿಗೆ ಆಸನ ಮತ್ತು ಭೋಜನಾದಿಗಳಿಂದ ಉಪಚರಿಸಿ, ಅವನಿಗೆ ಇಷ್ಟವಾದ ವಸ್ತುವನ್ನು ಕೊಟ್ಟು ಸಂಪೂರ್ಣವಿಶ್ವಾಸಿಯನ್ನಾಗಿ ಮಾಡಿಕೊಂಡು ಅನಂತರ ನಾಶಮಾಡಬೇಕು. ಕಚ್ಚಿದ ಕೂಡಲೇ ಸಾಯಿಸುವ ವಿಷದ ಹಲ್ಲಿರುವ ಹಾವಿನಂತೆ ಶತ್ರುವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸುವ ತೀಕ್ಷ್ಣವಾದ ಆಯುಧವನ್ನು ಹೊಂದಿರಬೇಕು.

ಅಶಙ್ಕಿತೇಭ್ಯಃ ಶಙ್ಕೀತ ಶಙ್ಕಿತೇಭ್ಯಶ್ಚ ಸರ್ವಶಃ |
ಆಶಙ್ಕ್ಯಾದ್ಭಯಮುತ್ಪನ್ನಮಪಿ ಮೂಲಂ ನಿಕೃನ್ತತಿ || ೬೧ || ನಿನಗೆ ಯಾರ ವಿಷಯದಲ್ಲಿ ಸಂಶಯ ಇರುವುದಿಲ್ಲವೋ ಅವರನ್ನು ಬಹಳ ಜಾಗ್ರತೆಯಿಂದ ಪರೀಕ್ಷಿಸುತ್ತಲೇ ಇರಬೇಕು. ನಿನಗೆ ಆಗದವರೆಂದು ಯಾರ ವಿಷಯದಲ್ಲಿ ಸಂಶಯವಿರುವುದೋ ಅವರ ವಿಷಯದಲ್ಲಿ ನೀನು ಎಲ್ಲ ರೀತಿಯಿಂದಲೂ ಎಚ್ಚರದಿಂದಿರಬೇಕು. ನೀನು ಯಾರ ವಿಷಯದಲ್ಲಿ ಸಂಶಯಪಡುವುದಿಲ್ಲವೋ ಮತ್ತು ಯಾರು ನಿನ್ನ ನಂಬಿಕೆಗೆ ಪಾತ್ರರೆಂದು ಭಾವಿಸಿರುವೆಯೋ ಅಂತಹವರಿಂದಲೇ ಅಪಾಯವೇನಾದರೂ ಸಂಭವಿಸಿದರೆ ಅದು ನೀನು ತಡೆದುಕೊಳ್ಳಲಾಗದ ಅಪಾಯವಾಗುತ್ತದೆ. ನಿನ್ನನ್ನೇ ಅದು ಸಂಪೂರ್ಣವಾಗಿ ನಾಶಗೊಳಿಸಿಬಿಡುತ್ತದೆ.

ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್ |
ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃನ್ತತಿ || ೬೨ || ವಿಶ್ವಾಸಕ್ಕೆ ಯೋಗ್ಯರಲ್ಲದವರನ್ನು ನಂಬಲೇಬಾರದು. ವಿಶ್ವಾಸಕ್ಕೆ ಯೋಗ್ಯರಾದವರನ್ನೂ ಸಂಪೂರ್ಣವಾಗಿ ನಂಬಬಾರದು. ಏಕೆಂದರೆ ಹೆಚ್ಚು ನಂಬಿದವನಿಂದ ಉಂಟಾಗುವ ಭಯವು ರಾಜನನ್ನೇ ಸಮೂಲವಾಗಿ ನಾಶಮಾಡಿಬಿಡುತ್ತದೆ. ವಿಶ್ವಸನೀಯರಾಗಿರುವವರೇನಾದರೂ ಶತ್ರುಗಳ ಕಡೆಗೆ ಸೇರಿಬಿಟ್ಟರೆ ನಿನ್ನ ಮೂಲೋತ್ಪಾಟನೆಯಾಗುತ್ತದೆ.

Wednesday, 15 July 2020

ಮಹಾಭಾರತದ ರಾಜಕಾರಣ : ಕಣಿಕನ ಕೂಟನೀತಿ ೧


ಪ್ರಾಯಶಃ ಮಹಾಭಾರತದ ಈ ಒಪಂದು ಸಂದರ್ಭ ಇರದೇ ಇದ್ದಿದ್ದರೇ ಪಾಂಡವರ ಮತ್ತು ಕೌರವರ ಮಧ್ಯೇ ಕಂದಕವೋ ದ್ವೇಷವೋ ಆಗುತ್ತಿರಲಿಲ್ಲವಿರಬಹುದು.

ಮಹಾಭಾರತದ ಆದಿಪರ್ವದಲ್ಲಿ ಬರುವ ಸಂಭವಪರ್ವದಲ್ಲಿ ಧೃತರಾಷ್ಟ್ರನಿಗೆ ಕಣಿಕನ ಕೂಟನೀತಿಯ ಉಪದೇಶವನ್ನು ವೈಶಂಪಾಯನರು ಹೇಳುತ್ತಾರೆ. ಪಾಂಡುವಿನ ಮಕ್ಕಳು ದಿನದಿಂದ ದಿನಕ್ಕೆ ಬಲದಲ್ಲಿ ತನ್ನ ಮಕ್ಕಳಿಗಿಂತಲೂ ಔನ್ನತ್ಯವನ್ನು ಹೊಂದುತ್ತಿರುವರೆಂಬುದನ್ನು ಕೇಳಿ ಧೃತರಾಷ್ಟ್ರನು ವ್ಯಾಕುಲನಾಗಿ ಚಿಂತೆಗೀಡಾಗುತ್ತಾನೆ. ಬೇರೆ ಮಾರ್ಗವನ್ನು ಕಾಣದೇ ಆ ಕಾಲದ ಪ್ರಸಿದ್ಧರಾಜಕಾರಣಿಯಾದ ಕಣಿಕನೆಂಬ ಮಂತ್ರಿಯನ್ನು ಕರೆಸಿ ಏಕಾಂತದಲ್ಲಿ ಮಾತನಾಡುತ್ತಾನೆ. ಕಣಿಕ ರಾಜಕಾರಣಿ ಮಾತ್ರವಲ ಚಾಣಾಕ್ಷನಾದ ರಾಜನೀತಿಜ್ಞನೂ ಆಗಿದ್ದನು. ಅವನ ಮತ್ತು ಧೃತರಾಷ್ಟ್ರನ ಮಾತುಕಥೆಗಳು ಮಹಾಭಾರತದಲ್ಲಿ ಪ್ರಸಿದ್ಧ.
ಕಣಿಕನು ಆರಂಭದಲ್ಲಿಯೇ ತಾನು ಹೇಳಿದ್ದರಲ್ಲಿ ಸೂಕ್ತವಾಗಿರುವುಇದನ್ನು ನೀನು ಅನುಸರಿಸು ಎಂದು ಆರಂಭಿಸುತ್ತಾನೆ.

‘ಪಾಂಡವರೇ ನಿನ್ನ ಶತ್ರುಗಳು’ ಎನ್ನುವ ಮಾತನ್ನು ಕಣಿಕನು ನೇರವಾಗಿ ಹೇಳದಿದ್ದರೂ ‘ಪಾಣ್ಡುಪುತ್ರೇಭ್ಯಃ ಆತ್ಮಾನಂ ರಕ್ಷ’ ಎನ್ನುವುದು ‘ಪಾಂಡುವಿನ ಮಕ್ಕಳಿಂದ ನಿನ್ನನ್ನು ಸಂರಕ್ಷಿಸಿಕೋ’ಎಂದು ಕಣಿಕನು ಹೇಳುವ ಮಾತು ‘ಪಾಂಡವರೇ ತನ್ನ ಶತ್ರುಗಳು’ಎಂಬ ಅಭಿಪ್ರಾಯವು ಧೃತರಾಷ್ಟ್ರನ ಮನಸ್ಸಿನಲ್ಲಿ ದೃಢವಾಗಿ ನಿಂತು ಬಿಡುತ್ತದೆ. ಪಾಂಡವರನ್ನು ಹೇಗಾದರೂ ಮಾಡಿ ನಿರ್ನಾಮ ಮಾಡಬೇಕೆನ್ನುವ ದುರ್ಯೋಧನನ ಯೋಜನೆಗಳಿಗೆ ಧೃತರಾಷ್ಟ್ರನ ಬೆಂಬಲ ಸಿಕ್ಕಿದ್ದು ಕಣಿಕನ ರಾಜನೀತಿಯ ಉಪದೇಶದ ಪ್ರಭಾವದಿಂದಲೇ.

ನಿತ್ಯಮುದ್ಯತದಣ್ಡಃ ಸ್ಯಾನ್ನಿತ್ಯಂ ವಿವೃತಪೌರುಷಃ |
ಅಚ್ಛಿದ್ರಶ್ಛಿದ್ರದರ್ಶೀ ಸ್ಯಾತ್ಪರೇಷಾಂ ವಿವರಾನುಗಃ || ೬ || ರಾಜರು ಆಯುಧ ಸನ್ನದ್ಧರಾಗಿಯೇ ಇರಬೇಕು. ತಮ್ಮ ಸೈನ್ಯದ ಪರಾಕ್ರಮವನ್ನು ಪ್ರಶಂಸಿಸಿ ಸೈನಿಕರನ್ನು ಹುರಿದುಂಬಿಸಬೇಕು. ತಮ್ಮಲ್ಲಿರುವ ಯಾವುದೇ ಲೋಪ ದೋಷಗಳೂ ಮತ್ತು ನ್ಯೂನತೆಗಳೂ ಬಹಿರಂಗವಾಗದಂತೆ ನೋಡಿಕೊಳ್ಳಬೇಕು ಮತ್ತು ಶತ್ರುವಿನಲ್ಲಿರುವ ಲೋಪ ದೋಷಗಳನ್ನೂ, ನ್ಯೂನತೆಗಳನ್ನೂ ತಿಳಿದುಕೊಳ್ಳುತ್ತಿರಬೇಕು. ಎನ್ನುವ ಕಣಿಕನ ಮಾತು ಇಂದಿಗೂ ಬಹಳ ಪ್ರಸ್ತುತವೆನ್ನಿಸುತ್ತದೆ.

ನಿತ್ಯಮುದ್ಯತದಣ್ಡಾದ್ಧಿ ಭೃಶಮುದ್ವಿಜತೇ ಜನಃ |
ತಸ್ಮಾತ್ಸರ್ವಾಣಿ ಕಾರ್ಯಾಣಿ ದಣ್ಡೇನೈವ ವಿಧಾರಯೇತ್ || ೭ || ಈ ಶ್ಲೋಕದಲ್ಲಿನ ಮಹತ್ವ ಗಮನಿಸಬಹುದು. ಇಲ್ಲಿ ದಂಡ ಎನ್ನುವ ಪದ ಪ್ರಯೋಗವಾಗಿದೆ. ಇಲ್ಲಿ ದಂಡವೆಂದರೆ ಶಿಕ್ಷೆ ಎಂದು ಗಮನಿಸಿದರೆ ಕಠಿನಶಿಕ್ಷೆಯನ್ನು ಕೊಡುವ ರಾಜನನ್ನು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಶಿಕ್ಷೆಯು ಕ್ರೂರವಾಗಿದ್ದಷ್ಟೂ ಅಪರಾಧಗಳು ಕಡಿಮೆಯಾಗುವುದು ಎನ್ನುವುದು ಅಂದಿನ ರಾಜಕಾರಣದ ಅಭಿಪ್ರಾಯ. ಮಾನವೀಯತೆಯ ಅನುಕಂಪದಿಂದ ರಾಕ್ಷಸಪ್ರವೃತ್ತಿಯವರನ್ನೂ ಸರಿಯಾಗಿ ಶಿಕ್ಷಿಸದೇ ಇರುವುದರಿಂದ ಅನರ್ಥಗಳೇ ಉಂಟಾಗುತ್ತವೆ. ಇದರಿಂದ ಅಂತಹ ರಾಜ ಕ್ರೂರಿ ಎನ್ನಿಸಿಕೊಂಡರು ಸಹ ಅನಿವಾರ್ಯತೆಯೂ ಇತ್ತು. ಯಾವ ರಾಜನು ಯಾವಾಗಲೂ ಮೇಲೆ ಬೀಳುವ ಸ್ವಭಾವದಿಂದಿರುವನೋ ಅವನನ್ನು ಕಂಡರೆ ಎಲ್ಲರೂ ಹೆಚ್ಚಾಗಿ ಭಯಪಡುವರು. ಆದುದರಿಂದ ರಾಜನಾದವನು ಎಲ್ಲ ಕಾರ್ಯಗಳನ್ನೂ ದಂಡದ ಮೂಲಕವಾಗಿಯೇ ಸಾಧಿಸಬೇಕು ಎನ್ನುವುದು ಕಣಿಕನ ಅಭಿಪ್ರಾಯವಾಗಿತ್ತು.

ನಾಸ್ಯಚ್ಛಿದ್ರಂ ಪರಂ ಪಶ್ಯೇಚ್ಛಿದ್ರೇಣ ಪರಮನ್ವಿಯಾತ್ |
ಗೂಹೇತ್ಕೂರ್ಮ ಇವಾಙ್ಗಾನಿ ರಕ್ಷೇದ್ವಿವರಮಾತ್ಮನಃ || ೮ || ಆಮೆ ತನ್ನ ವೈರಿಗಳನ್ನು ಕಂಡಾಗ ಅಥವಾ ತನಗೆ  ಸಂಬವನೀಯ ಅಪಾಯ ತಿಳಿದು ದೇಹವನ್ನು ಚಿಪ್ಪಿನೊಳಗೆ ಸೇರಿಸಿಕೊಂಡು ರಕ್ಷಿಸಿಕೊಳ್ಳುತ್ತದೆಯೋ ಅದೇ ರೀತಿ ತನ್ನ ಮತ್ತು ತನ್ನ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಬೇಕು. ಮತ್ತು ರಾಜನಾದವನು ಶತ್ರುವಿನ ಮೇಲೆ ಆಕ್ರಮಣದ ಸಿದ್ಧತೆಯನ್ನು ಮಾಡುವಾಗ ಅದರ ಸುಳಿವು ಶತ್ರುವಿಗೆ ಸ್ವಲ್ಪವೂ ತಿಳಿಯದಂತೆ ಎಚ್ಚರಿಕೆಯಿಂದಿರಬೇಕು. ಶತ್ರುವಿನಲ್ಲಿ ನ್ಯೂನತೆಯಿದೆಯೆಂದು ಅಥವಾ ಆತನ ಬಲ ಕಡಿಮೆಯಾಗಿದೆ ಎಂದು ತಿಳಿದೊಡನೆ ಅವನ ಮೇಲೆ ಬಿದ್ದು ಅವನನ್ನು ನಾಶಗೊಳಿಸಬೇಕು. ರಾಜನಾದವನು ತನ್ನ ಮನಸ್ಸಿನ ಧ್ಯೇಯೋದ್ದೇಶಗಳನ್ನು ಯಾರಿಗೂ ಬಿಟ್ಟುಕೊಡಬಾರದು.

ನಾಸಮ್ಯಕ್ಕೃತಕಾರೀ ಸ್ಯಾದುಪಕ್ರಮ್ಯ ಕದಾಚನ |
ಕಣ್ಟಕೋ ಹ್ಯಪಿ ದುಶ್ಛಿನ್ನ ಆಸ್ರಾವಂ ಜನಯೇಚ್ಚಿರಮ್ || ೯ || ಒಂದು ಚಿಕ್ಕ ಮುಳ್ಳು ಕಾಲಿಗೆ ಚುಚ್ಚಿದಾಗ ಅದರ ಒಂದು ಚೂರೂ ಉಳಿಯದಂತೆ ತೆಗೆದುಹಾಕಲಾಗುತ್ತದೆ ಹಾಗೆಯೇ ಒಂದು ಕಾರ್ಯಮಾಡಲು ನಿರ್ಧರಿಸಿದ ಮೇಲೆ ಕಡೆಯವರೆಗೂ ಆ ಕಾರ್ಯವನ್ನು ಸಾಧಿಸಲೇಬೇಕು. ಹಾಗೆಯೇ ಶತ್ರುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದು ರಾಜನ ಮುಖ್ಯ ಕರ್ತವ್ಯ ಎನ್ನುತ್ತಾನೆ ಕಣಿಕ.

ವಧಮೇವ ಪ್ರಶಂಸನ್ತಿ ಶತ್ರೂಣಾಮಪಕಾರಿಣಾಮ್ |
ಸುವಿದೀರ್ಣಂ ಸುವಿಕ್ರಾನ್ತಂ ಸುಯುದ್ಧಂ ಸುಪಲಾಯಿತಮ್ |
ಆಪದ್ಯಾಪದಿ ಕಾಲೇ ಚ ಕುರ್ವೀತ ನ ವಿಚಾರಯೇತ್ || ೧೦ || ಶತ್ರುಗಳನ್ನೂ ಮತ್ತು ಅಪಕಾರಿಗಳನ್ನೂ ವಧಿಸುವುದೇ ಯೋಗ್ಯವೆಂದು ರಾಜನೀತಿಜ್ಞರು ಹೇಳುತ್ತಾರೆ ಮತ್ತು ಹೀಗೆ ಮಾಡುವುದನ್ನು ಅವರು ತಪ್ಪೆಂದು ಭಾವಿಸದೇ ಅದನ್ನು ಪ್ರಶಂಸಿಸುತ್ತಾರೆ. ಎಷ್ಟೇ ಪರಾಕ್ರಮಿಯಾದರೂ ಆತನಿಗೆ ಆಪತ್ತೆಂಬುದು ತಪ್ಪುವುದಿಲ್ಲ.  ಪರಾಕ್ರಮಶಾಲಿಯಾದವನಿಗೆ ಕಾಲಕಾಲಗಳಲ್ಲಿ ಒದಗುವ ಆಪತ್ತುಗಳನ್ನೇ ನಿರೀಕ್ಷಿಸುತ್ತಿದ್ದು, ಆ ಸಮಯದಲ್ಲಿ ಅಂತಹವನ ವಿಷಯದಲ್ಲಿ ಸ್ವಲ್ಪವೂ ದಯೆತೋರದೇ ಅವನನ್ನು ಸಂಹರಿಸಬೇಕು. ಯುದ್ಧದಲ್ಲಿ ಬಹಳ ನುರಿತವನಿಗೂ ಆಪತ್ತಿಲ್ಲವೆಂಬುದಿಲ್ಲ. ಅವನಿಗೂ ಕೆಲವು ಸಮಯಗಳಲ್ಲಿ ಭ್ರಾಂತಿಯುಂಟಾಗುತ್ತದೆ. ಅಂತಹ ಸಮಯವನ್ನೇ ಕಾದಿದ್ದು ಅವನನ್ನು ಪ್ರತಿಭಟಿಸಿ ಪಲಾಯನಮಾಡುವಂತೆ ಮಾಡಬೇಕು. ಶತ್ರುವು ವಿಪತ್ತಿನಲ್ಲಿರುವನೆಂದು ಖಂಡಿತವಾಗಿಯೂ ಕರುಣೆತೋರಬಾರದು. ಅವನ ಸಂಹಾರದಲ್ಲಿಯೇ ರಾಜನಾದವನು ಯೋಚಿಸುತ್ತಿರಬೇಕು.

Friday, 11 October 2019

ಶಂ ನೋ ದೇವೀರಭೀಷ್ಟಯ . . . .

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಎನ್ನುವ ಭಾವದೊಂದಿಗೆ ಶಂ ನೋ - ಒಳ್ಳೆಯದಾಗಲಿ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

ನೀರು ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಅತ್ಯಂತ ಸ್ವಾರಸ್ಯಕರವಾಗಿ ಹೇಳುವ ಋಕ್ಕು ಋಗ್ವೇದದಲ್ಲಿದೆ. ಅಲ್ಲಿ ಮನುಷ್ಯನಿಗೆ ಬರತಕ್ಕ ಹೆಚ್ಚಿನ ಎಲ್ಲಾ ರೋಗಗಳನ್ನೂ ನೀರಿನ ಮಾಧ್ಯಮದಿಂದಲೇ ಗುಣಪಡಿಸಬಹುದು ಎನ್ನುವುದಲ್ಲದೇ ನಮ್ಮ ಆಹಾರ ನಮಗೆ ಸಸಿಗಬೇಕಿದ್ದರೆ ಅಗ್ನಿ ಬಹಳ ಮುಖ್ಯ. ಆದರೆ ಅಗ್ನಿಯ ಮಧ್ಯವರ್ತಿ ಇದೇ ನೀರು ಎನ್ನುತ್ತಾನೆ ಋಗ್ವೇದದ ಹತ್ತಬನೇ ಮಂಡಲದ ಒಂಬತ್ತನೇ ಸೂಕ್ತದಲ್ಲಿ.
ಅಪ್ಸು ಮೇ ಸೋಮೋ ಅಬ್ರವೀದಂತರ್ವಿಶ್ವಾನಿ ಭೇಷಜಾ |
ಅಗ್ನಿಂ ವಿಶ್ವಶಂಭುವಂ || ಎನ್ನುವಲ್ಲಿನ ಅಗ್ನಿಂ ವಿಶ್ವಶಂಭುವಂ ಎನ್ನುವಲ್ಲಿನ ಜಗನ್ನಿರ್ಮಾತೃ ಅಗ್ನಿ ಎನ್ನುವ ಭಾವ ಕಾಣಸಿಗುತ್ತದೆ.

#ವೇದಲ್ಲಿ_ನೀರು

ಆದಿತ್ಯವರ್ಣೇ ಇರುವುದು ಬಿಲ್ವ ಮರದಲ್ಲಿ


ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ |
ತಸ್ಯ ಫಲಾನಿ ತಪಸಾ ನುದನ್ತು ಮಾಯಾನ್ತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ | |

ಮಂತ್ರ ಶ್ರೀಸೂಕ್ತದ ಮಂತ್ರ. ಸೂಕ್ತದ ಮಂತ್ರದ ದೃಷ್ಟಾರ ಆನಂದ ಋಷಿ ಎನ್ನುವವನು. ಋಷಿ ಮಹಾಲಕ್ಷ್ಮಿಯನ್ನು ಕುರಿತಾಗಿ ಮಂತ್ರವನ್ನು ಜಪಿಸುತ್ತಾನೆ. ಹೇಗಿದ್ದಾಳೆ ಲಕ್ಷ್ಮೀ ಎಂದರೆ ಆದಿತ್ಯವರ್ಣೇ ಎನ್ನುತ್ತಾನೆ. ಸೂರ್ಯನ ಪ್ರಭೆಯಂತಿದ್ದಾಳೆ ಎಂದು ಪ್ರಖರತೆಯನ್ನೂ ಮಂದವನ್ನೂ ಸೂಚಿಸುತ್ತಾನೆ.
ಸರ್ಯನಪ್ರಭೆ ಅಥವಾ ಕಾಂತಿಯಂತೆ ಮಹಾ ಪ್ರಕಾಶಮಾನವಾಗಿ ಬೆಳಗುವ ಶರೀರವನ್ನು ಹೊಂದಿರುವ ಹೇ ಶ್ರೀದೇವತೆಯೇ ನಿನ್ನ ಅನುಗ್ರಹ ಪೂರಿತ ಆಜ್ಞೆಯಂತೆ ಹೂವನ್ನು ಬಿಡದೇ ಫಲವನ್ನು ಮಾತ್ರ ಕೊಡುವ ಬಿಲ್ವ ಎನ್ನುವ ವೃಕ್ಷವು (ಸಸ್ಯಪ್ರಬೇಧ) ಹುಟ್ಟಿಕೊಂಡಿತು. ಬಿಲ್ವವು ಮನುಷ್ಯರಿಗೆ ಸುಖ ಸಂಪತ್ತು ಕೊಡಲಿ. ಮತ್ತು ಮನುಷ್ಯರಲ್ಲಿರುವ ಅಜ್ಞಾನವನ್ನು ದೂರಮಾಡಲಿ ಎನ್ನುವ ಅರ್ಥವನ್ನು ಕೊಡುತ್ತದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಮಹತ್ವದ ಅಂಶ ಎಂದರೆ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ | ತಸ್ಯ ಫಲಾನಿ ತಪಸಾ ನುದನ್ತು ಎನ್ನುವಲ್ಲಿನ ಅಂಶವನ್ನು ನೋಡಿದರೆ ಬಿಲ್ವ ಪತ್ರೆಯ ಮಹತ್ವ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ದಳಗಳುಳ್ಳ ಬಿಲ್ವ ಪತ್ರದ ಕುರಿತು ಶ್ರೀವಿದ್ಯಾರಣ್ಯರುಅಪುಷ್ಪಾಃ ಫಲವಂತೋ ಯೇ ತೇ ವನಸ್ಪತಯಃ ಸ್ಮೃತಾಃ ಅಂದರೆ ಬಿಲ್ವಪತ್ರೆ ಎನ್ನುವುದು ಹೂವನ್ನು ಬಿಡದೇ ಕಾಯಿಯನ್ನು ಕೊಡುತ್ತದೆ. ಆದುದರಿಂದಲೇ ಅದನ್ನು ವನಸ್ಪತಿ ಎಂದು ಕರೆಯಲಾಗುತ್ತದೆ. ಎಂದು ವಾಮನಪುರಾಣದಲ್ಲಿ ಕಾತ್ಯಾಯನನ ಮಾತು. ಬಿಲ್ವ ವೃಕ್ಷವೇ ಲಕ್ಷ್ಮಿಯ ನಿವಾಸಸ್ಥಾನ ಎಂದು ಭಾರ್ಗವಪುರಾಣದಲ್ಲಿ ಹೇಳಲಾಗಿದೆ ಎಂದು ಪೃಥ್ವೀದರಾಚಾರ್ಯರ ಅಭಿಪ್ರಾಯ. ಸಾಧಾರಣವಾಗಿ ಮರಗಳು ಮೊದಲು ಹೂವುಗಳನ್ನು ಬಿಟ್ಟು ನಂತರದಲ್ಲಿ ಫಲಬಿಡುತ್ತವೆ. ಆದರೆ ಹೂವನ್ನು ಬಿಡದೇ ಫಲಕೊಡುವ ಮರಗಳನ್ನೆಲ್ಲಾ ವನಸ್ಪತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಬಿಲ್ವಪತ್ರೆ.
ಬಿಲ್ವ ಎನ್ನುವುದು ಲಕ್ಷ್ಮಿಯ ತಪಸ್ಸಿನಿಂದ ಶಿವನಿಗೆ ಪ್ರಿಯವೆನ್ನಿಸಿತು ಎನ್ನುವುದು ಬ್ರಹ್ಮಾಂಡಪುರಾಣದಲ್ಲಿ. ಹೀಗೇ ಬಿಲ್ವಪತ್ರೆಯ ಕುರಿತಾಗಿ ಸ್ಕಾಂದಪುರಾಣದಲ್ಲಿ ಕಥೆಯನ್ನೇ ಕೊಡಲಾಗಿದೆ. ಅದೇನೇ ಇರಲಿ ಬಿಲ್ವಪತ್ರೆ ಅತ್ಯಂತ ಸುವಾಸನಾಯುಕ್ತವಾದದ್ದು. ಆದರೆ ಬಿಲ್ವಪತ್ರೆಯ ಕಾಯಿ ಕಾಣಸಿಗುತ್ತದೆ, ಅದು ಸಹ ಸುವಸನಾಯುಕ್ತವೇ. ಅನೇಕ ರೋಗಗಳೂ ನಿವಾರಣೆಯಾಗುತ್ತದೆ. ಇಂತಹ ಒಂದು ಬಿಲ್ವ ಶಿವನಿಗರ್ಪಿತವಾದರೂ ಸ್ವರ್ಗಪ್ರಾಪ್ತಿ ಎನ್ನಲಾಗುತ್ತದೆ. ಉದಯಿಸುತ್ತಿರುವ ಸೂರ್ಯನಂತೆ ಶರೀರಹೊಂದಿ ಕಂಗೊಳಿಸುತ್ತಿರುವ ಶ್ರೀ ಲಕ್ಷ್ಮಿಯು ಬಿಲ್ವಾರಣ್ಯದಲ್ಲಿ ನೆಲೆಸುತ್ತಾಳೆ ಎಂದು ಸಹ ವರ್ಣನೆ ಸಿಗುತ್ತದೆ. ಇಂತಹ ಬಿಲ್ವ ಪತ್ರೆಯ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಅಂತಹ ವಾತಾವರಣದಲ್ಲಿ. ನವರಾತ್ರಿಯಲ್ಲಿ ಲಕ್ಷ್ಮೀ ಮತ್ತು ಶಿವನಿಗೂ ಬಿಲ್ವ ಪತ್ರೆ ಅತ್ಯಂತ ಶ್ರೇಷ್ಠ.
#ಶ್ರೀಸೂಕ್ತ_ಬಿಲ್ವ