Search This Blog

Friday 14 July 2017

ಪೊರಾಣಪೊಕಿತಿಯ - ಖರೋಷ್ಟಿಯ - ಚಪಡ

ಖರೋಷ್ಟೀ ಮೂಲದವನಾದ ಅರಮೈಕ್ ಮತ್ತು ಬ್ರಾಹ್ಮಿಯನ್ನು ಬಲ್ಲಂತಹ ಸಂಸ್ಕೃತದ ಪಾಂಡಿತ್ಯವನ್ನು ಹೊಂದಿದ್ದ ವಿದ್ವಾಂಸನೊಬ್ಬ ಗಾಂಧಾರದ ಶಿಲ್ಪವನ್ನು ಮೈಗೂಡಿಸಿಕೊಂಡು ದೂರದ ಗಾಂಧಾರದಿಂದ ನಾಲಂದಕ್ಕೆ ಕಲೆಯನ್ನು ಕಲಿಯುವ ಉದ್ದೇಶದಿಂದ ಬರುತ್ತಾನೆ. ಹಾಗೆ ಬಂದ ವಿದ್ವಾಂಸನಿಗೆ ಇಲ್ಲಿ ಕಲೆಗೆ ಅಷ್ಟೊಂದು ಮಹತ್ವವಿಲ್ಲದ ಕಾಲವಾಗಿದ್ದು ಲಿಪಿಕಾರನಾಗಿ ಪರಿಚಿತನಾಗುತ್ತಾನೆ. ಅದೇ ಕಾಲಕ್ಕೆ ಪ್ರಾಕೃತವನ್ನು ಭಾಷೆಯಾಗಿ ಬಳಸಿಕೊಂಡು ಬ್ರಾಹ್ಮಿಯನ್ನು ಲಿಪಿಯಾಗಿ ಉಪಯೋಗಿಸಿಕೊಂಡು ದೇಶಾದ್ಯಂತ ಧರ್ಮ ಪ್ರಸಾರದ ಕಾರ್ಯವನ್ನು ನಡೆಸುವ ಸಲುವಾಗಿ ಲಿಪಿಕಾರರನ್ನು ಅಶೋಕ ಹುಡುಕುತ್ತಿದ್ದ. ಈ ವಿದ್ವಾಂಸನ ಲಿಪಿಜ್ಞಾನವನ್ನು ಬಳಸಿಕೊಂಡು ಪ್ರಾಕೃತ ಭಾಷೆಯನ್ನು ಬಳಸಿಕೊಂಡು ಬ್ರಾಹ್ಮಿಯಲ್ಲಿ ಬೃಹತ್ ಮತ್ತು ಕಿರು ಬಂಡೆಗಳ ಮೇಲೆ ತನ್ನ ಧರ್ಮ ಪ್ರಸಾರವನ್ನು ಕೈಗೊಂಡ. ಆದರೆ ಅಶೋಕನ ಕಟ್ಟುನಿಟ್ಟಿನ ಆದೇಶದಿಂದಾಗಿ ತಾನು ಕಟ್ಟಿ ನಿಲ್ಲಿಸಿದ ಸಾಮ್ರಾಜ್ಯದಲ್ಲಿನ ಯಾವುದೇ ಸಾಹಿತಿಗಳೋ ಲಿಪಿಕಾರರೋ ಸಾಧಕರದ್ದೋ ಹೆಸರು ಹೊರಗೆ ಪ್ರಕಾಶಿಸಲೇ ಇಲ್ಲ. ಆದರೆ ಈ ಗಾಂಧಾರದ ಶಿಲ್ಪಿ. ಉತ್ತರದಿಂದ ದಕ್ಷಿಣದ ಬ್ರಹ್ಮಗಿರಿಗೆ ಬಂದವನಿಗೆ ಇನ್ನು ಅಶೋಕ ಇಲ್ಲಿಗೆ ಬರುವುದಿಲ್ಲ ಅನ್ನಿಸಿರಲೂ ಬಹುದು ಮತ್ತು ತಾನು ಬ್ರಾಹ್ಮಿಯನ್ನು ಅಲ್ಲದೇ ಬೇರೆ ಲಿಪಿಯನ್ನು ಬಲ್ಲವನು ಅನ್ನುವುದನ್ನು ಪ್ರಜೆಗಳಿಗೆ ತಿಳಿಸಲೋಸುಗವೋ ಅಶೋಕನ ಆಜ್ಞೆಯನ್ನು ಧಿಕ್ಕರಿಸಿ ತನ್ನ ಹೆಸರನ್ನು ಖರೋಷ್ಟಿಯಲ್ಲಿ "ಚಪಡೇನ ಲಿಖಿತಂ ಲಿಪಿಕರೇಣ" ಬರೆದು ಶಾಸನವನ್ನು ಕೊನೆಗೊಳಿಸುತ್ತಾನೆ. ಈತ ದಕ್ಷಿಣಕ್ಕೆ ಬಂದು ಲಿಪಿಯನ್ನು ಖಂಡರಿಸದೇ ಇದ್ದರೆ ದಕ್ಷಿಣದಲ್ಲಿ ಲಿಪಿಯ ಬಳಕೆ ಅದೆಷ್ಟೊ ಸಮಯ ತೆಗೆದುಕೊಳ್ಳುತಿದ್ದಿರಬಹುದು. "ಪೊರಾಣ ಪೊಕಿತಿ" ಎನ್ನುವ ಪಾರಂಪರಿಕ ಧರ್ಮವೊಂದು ನಮಗೆ ಗೋಚರಿಸುತ್ತಲೇ ಇರಲಿಲ್ಲ. ಇಂತಹ ಚಪಡ ಬಹುಭಾಷಾ ಅನೇಕ ಲಿಪಿಗಳ ವಿದ್ವಾಂಸನಾಗಿದ್ದನಲ್ಲದೇ ನಮಗೆ ಲಿಪಿಯೊಂದನ್ನು ಪರಿಚಯಿಸಿ "ಇಸಿಲ" ವನ್ನು ದಾಖಲಿಸಿ ಕನ್ನಡವನ್ನು ಪುರಾತನಗೊಳಿಸಿದ ಬಹು ದೂರದ ವಿದ್ವಾಂಸ.
  

No comments:

Post a Comment