Search This Blog

Sunday 25 February 2018

ಪಾರ್ಥತುಲ್ಯ ಪರಾಕ್ರಮಃ



ಕ್ರಿ ಶ ೬೧೬-೬೧೭ ನೇ ಇಸವಿಗೆ ಸರಿ ಹೊಂದುವ ಈ ಶಾಸನ ಚಳುಕ್ಯ ಮೊದಲನೇ ವಿಷ್ಣುವರ್ಧನನಿಗೆ ಸೇರಿದ್ದು. ಮಹಾರಾಷ್ಟ್ರದ ಸತಾರದಲ್ಲಿ ದೊರೆತ ತಾಮ್ರಪಟ ಶಾಸನ, ಕನ್ನಡ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಈ ಶಾಸನ ಬರೆಯಲಾಗಿದೆ. ಈ ಶಾಸನದ ೭ನೇಸಾಲಿನ ಕೊನೆಯ ಭಾಗ ಮತ್ತು ೮ನೇ ಸಾಲಿನಲ್ಲಿ ವಾಲ್ಮೀಕಿರಾಮಾಯಣ ಬಾಲಕಾಂಡ ೧ನೆಯ ಸರ್ಗ ಎರಡನೇ ಶ್ಲೋಕದ ಎರಡನೇ ಚರಣವನ್ನು ಹಾಗೇಯೇ ಅಲ್ಲಿ ಇಳಿಸಲಾಗಿದೆ. "ಧರ್ಮಜ್ಞಶ್ಚ ಕೃತಜ್ಞಶ್ಚ ಪಾರ್ಥತುಲ್ಯ ಪರಾಕ್ರಮಃ" ಎಂದು ಶಾಸನ ಕವಿ ತೆಗೆದುಕೊಂಡಿದ್ದಾನೆ. ಧರ್ಮಜ್ಞನೂ, ಕೃತಜ್ಞನೂ ಆಗಿದ್ದ ಮೊದಲನೇ ವಿಷ್ಣುವರ್ಧನನು ಪರಾಕ್ರಮದಲ್ಲಿ ಅರ್ಜುನನಿಗೆ ಸರಿಸಾಟಿಯಾಗಿದ್ದನಂತೆ.
ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್ |
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ | || ||
ಪರಮಪೂಜ್ಯರಾದ ನಾರದಮಹರ್ಷಿಗಳೇ! ಈಗ ಜಗತ್ತಿನಲ್ಲಿ ಸಕಲಕಲ್ಯಾಣಗುಣಗಳಿಂದ ಕೂಡಿರುವವನು ಯಾರು? ವೀರ್ಯವಂತನು ಯಾರು? ಧರ್ಮಜ್ಞನಾರು? ಕೃತಜ್ಞನಾರು? ಸತ್ಯಭಾಷಿಯು ಯಾರು? ಎನ್ನುವ ಪ್ರಶ್ನೆ ಕೆಳಲಾಗುತ್ತದೆ.
೧. ಅನುಸಂಧಾನಮಾಡಲ್ಪಡುವುದು, ಅಥವಾ ಅನುಕರಣೆಮಾಡಲ್ಪಡುವುದೇ ಗುಣ.
೨ ವಿಕಾರಕ್ಕೆ ಕಾರಣಗಳಿದ್ದರೂ ವಿಕಾರಹೊಂದದವನು, ಅಥವಾ ತಾನೂ ವಿಕಾರ ಹೊಂದದೆ ಮತ್ತೊಬ್ಬರನ್ನೂ ವಿಕಾರಹೊಂದದಂತೆ ಮಾಡಬಲ್ಲ ಸಮರ್ಥನು ವೀರ್ಯವಂತನೆನಿಸಿಕೊಳ್ಳುತ್ತಾನೆ.
3. "ಯತೋಽಭ್ಯುದಯನಿಃಶ್ರೇಯಸಸಿದ್ಧಿಃಸಧರ್ಮಃ" ಅಭ್ಯುದಯ ಮತ್ತು ಶ್ರೇಯಸ್ಸುಗಳನ್ನು ಸಾಧಿಸಿಕೊಡುವುದೇ ಧರ್ಮ. ಅಲೌಕಿಕಶ್ರೇಯಸ್ಸಿನ ಸಾಧನೆಯೇ ಧರ್ಮ. ಇಂತಹ ಧರ್ಮದಲ್ಲಿ ಸಾಮಾನ್ಯ ಮತ್ತು ವಿಶೇಷರೂಪಗಳನ್ನು ತಿಳಿದವನು ಧರ್ಮಜ್ಞನು.
೪ ಇತರರಿಂದಾದ ಉಪಕಾರವು ಸ್ವಲ್ಪವೇ ಆದರೂ ಅದನ್ನೇ ಬಹುವಾಗಿ ತಿಳಿಯುವವನು ಕೃತಜ್ಞನು.
೫ ನಿಜವನ್ನು ಹೇಳಿದರೆ ತನಗೆ ತೊಂದರೆಯುಂಟಾಗುವುದೆಂದು ತಿಳಿದೂ ಸುಳ್ಳು ಹೇಳದೇ ನಿಜವನ್ನು ಹೇಳುವವನೇ ಸತ್ಯಭಾಷಿಯು.
೬ ಎಂತಹ ವಿಪತ್ತು ಒದಗಿದರೂ ಸಂಕಲ್ಪವನ್ನು ಪರಿತ್ಯಜಿಸದೇ ಕಾರ್ಯವನ್ನು ಸಾಧಿಸುವ ಸತ್ಯಸಂಕಲ್ಪನು ದೃಢವ್ರತನೆನಿಸುತ್ತಾನೆ.
ಇದೇ ಶ್ಲೋಕದಂತೊಇರುವುದು ರಾಮಾಯಣದಲ್ಲಿ ಅನೇಕ ಸಂದರ್ಭಗಳಲ್ಲಿ ಬರುತ್ತದೆ. ಅವುಗಳಲ್ಲಿ :
ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡದ ೧೬ನೇ ಸರ್ಗದಲ್ಲಿ
ನ ಚ ಕಾರ್ಯೋ ವಿಷಾದಸ್ತೇ ರಾಘವಂ ಪ್ರತಿ ಮತ್ಕೃತೇ |
ಧರ್ಮಜ್ಞಶ್ಚ ಕೃತಜ್ಞಶ್ಚ ಕಥಂ ಪಾಪಂ ಕರಿಷ್ಯತಿ || ||
ವಾಲ್ಮೀಕಿ ರಾಮಾಯಣದ ಸುಂದರ ಕಾಂಡದಲ್ಲಿ
ಧರ್ಮಜ್ಞಶ್ಚ ಕೃತಜ್ಞಶ್ಚ ರಾಜಧರ್ಮವಿಶಾರದಃ |
ಪರಾವರಜ್ಞೋ ಭೂತಾನಾಂ ತ್ವಮೇವ ಪರಮಾರ್ಥವಿತ್ || ||
ಸಂಕ್ಷೇಪರಾಮಾಯಣದ ಪ್ರಥಮ ಸರ್ಗದಲ್ಲಿ, ಮತ್ತು
ಉತ್ತರಕಾಂಡದ ೮೪ನೇ ಸರ್ಗದಲ್ಲಿ
ಧರ್ಮಜ್ಞಶ್ಚ ಕೃತಜ್ಞಶ್ಚ ಬುದ್ಧ್ಯಾ ಚ ಪರಿನಿಷ್ಠಿತಃ |
ಶಶಾಸ ಪೃಥಿವೀಂ ಸ್ಫೀತಾಂ ಧರ್ಮೇಣ ಸುಸಮಾಹಿತಃ || || ಎನ್ನುವುದಾಗಿ ಪುನರುಕ್ತ ಗೊಂಡಿದೆ.

Tuesday 20 February 2018

ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು- ಕವಿ. ಮೊಗೇರಿ ಗೋಪಾಲಕೃಷ್ಣ ಅಡಿಗ.

ಹೊರಗೆ ನೀಲಾಕಾಶ, ಮುಗಿಲು, ತೊರೆ, ತೆರೆ ಕಾನು
ಹಿಮಗಿರಿಯ ಕಂದರದ ಧವಳ ಹಾಸ;
ಕೇಳುವುದು ದೂರತೀರದ ಮರ್ಮರಾಲಾಪ
ಈ ಪಂಜರಕು ನನಗು ವಜ್ರ ಲೇಪ
ಹೌದು, ಆ ಪರಿಸರವೇ ಹಾಗಿತ್ತು. ಪೂರ್ವಕ್ಕೆ ಕಣ್ಣು ಹಾಯಿಸಿದರೆ ಗದ್ದೆಗಳು. ಇನ್ನೂ ದೂರಕ್ಕೆ ಕಣ್ಣು ಹಾಯಿಸಿದರೆ ಬೆಟ್ಟಗಳ ಸಾಲು. ಪಶ್ಚಿಮದಲ್ಲಂತೂ ಬಯಲು ದೂರದಲ್ಲಿ ಸಮುದ್ರ. ಹಳ್ಳಿ ಎಂದರೆ ಹಳ್ಳಿಯೇ. ಮಧ್ಯದಲ್ಲಿರುವುದೇ ಅಡಿಗರ ಮನೆ. ಸಾಮಾನ್ಯವಾಗಿ ತಾಲೂಕಿನಾದ್ಯಂತ ಇಂದಿಗೂ ಜನ ಮಾನಸದಲ್ಲಿ ಹೆಸರು ಅಳಿಯದಂತೆ ಉಳಿಸಿಕೊಂಡ ಮನೆತನ ಅದು. ಹಾಗೆ ನೋಡಿದರೆ ಭೈರಪ್ಪರ ವಂಶವೃಕ್ಷದ ಶ್ರೋತ್ರೀಯರ ನೆನಪು ತಂದುಕೊಡುವಂತಹ ಮನೆ. ಜ್ಯೋತಿಷ್ಯ, ವೇದ ವೇದಾಂತಗಳ ಆಗರ. ಸ್ವತಃ ಸೂರ್ಯ ಸಿದ್ಧಾಂತದ ರೀತ್ಯಾ ಪಂಚಾಂಗ ತಯಾರಿಸುತ್ತಿರುವ ಮನೆ. ಬೆಳಗ್ಗೆದ್ದರೆ ಶಂಕರನಾರಾಯಣನಿಗೆ ರುದ್ರಾಭಿಷೇಕದೊಂದಿಗೆ ಅರ್ಚಿಸಿ ಪೂಜಿಸಿ ಅಡಿಗರ ಮನೆಯ ಮಿಕ್ಕಿದ ಕೆಲಸಗಳು ನಡೆಯುತ್ತಿದ್ದ ಕಾಲ. ಆಗಂತೂ ಎಲ್ಲಿಯೂ ವಿದ್ಯುತ್ ದೀಪಗಳಿರದ ಕಾಲ ಎಣ್ಣೆ ದೀಪದ ಅಡಿಯಲ್ಲಿಯೇ ಕುಳಿತು ಓದಿಕೊಳ್ಳುತ್ತಿದ್ದ ಸಮಯ. ಮೈಕುಗಳಿರದಿದ್ದರಿಂದ ದೂರದಲ್ಲಿ ಸಂಜೆ ಆರಕ್ಕೆ ಅಬ್ಬರದ ಚಂಡೆ ಕೇಳಿ ಇಂದು ಯಕ್ಷಗಾನವಿತ್ತು ಎಂದು ಅಂದಾಜಿಸಿ ದೊಂದಿಯನ್ನು ಹಿಡಿದುಕೊಂಡು ಆ ಕಡೆ ಹೋಗಬೇಕಿತ್ತು.
ಆ ಊರೇ ಹಾಗೆ ಇಂದು ಬಹಳಷ್ಟು ಬದಲಾವಣೆ ಕಂಡಿದೆ. ಆದರೆ ರಾಮಪ್ಪ ಅಡಿಗರ ಕಾಲದಲ್ಲಿನ ಪರಿಸ್ಥಿತಿಯನ್ನು ಸ್ವಲ್ಪವನ್ನೇ ಹೇಳಿದೆ.
ರಾಮಪ್ಪ ಅಡಿಗರು ಮತ್ತು ಗಾರಮ್ಮ ನಾನೀಗ ಹೇಳ ಹೊರಟಿರುವ ಗೋಪಾಲಕೃಷ್ಣ ಅಡಿಗರ ತಂದೆ ತಾಯಂದಿರು. ಮೊಗೇರಿ ಎನ್ನುವ ಊರಿನ ಪರಿಸರವೇ ಹಾಗಿತ್ತು ಮೊಗೇರಿಯಿಂದ ಕೂಗಳತೆಯ ದೂರದಲ್ಲಿದ್ದ ಬವಲಾಡಿಯಲ್ಲಿ ಯಕ್ಷಗಾನದ ಪ್ರಸಂಗಕರ್ತ ಕವಿ ಹೃದಯದ ಹಿರಿಯಣ್ಣ ಹೆಬ್ಬಾರರ ಮನೆಯಿತ್ತು. ಇನ್ನೊಬ್ಬ ಸಾಹಿತಿ ಸೀತಾರಾಮ ಹೆಬ್ಬಾರರ ಮಗ ಬಿ ಎಚ್. ಶ್ರೀಧರ್ ಸಹ ಅದೇ ಊರಿನವರು. ಒಂದು ದೃಷ್ಟಿಯಿಂದ ಆ ಪರಿಸರವೇ ಸಾಹಿತ್ಯದ ಕೃಷಿಕರ ನಾಡು ಅನ್ನಬಹುದಿತ್ತು. ಅಂತಹ ಪರಿಸರದಲ್ಲಿ ಬೆಳೆದ ಅಡಿಗರು ವರ್ಧಮಾನರಾಗಿ ಪ್ರವರ್ಧಮಾನಕ್ಕೇರಿದರು. ಒಂದು ಕಡೆ ಪಾರಂಪರಿಕ ವೈದಿಕ ಆಚರಣೆಗಳು ಇನ್ನೊಂದು ಕದೆ ಕೃಷಿಯನ್ನು ಬಿಡದ ಮನೆತನ. ಇಂತಹ ಸನ್ನಿವೇಶದಲ್ಲಿ ಅಡಿಗರಿಗೆ ಸಹಜವಾಗಿಯೇ ಚಂಡೆ ಮದ್ದಲೆಗಳ ನಾದ ಕೇಳಿರ ಬೇಕು.
ತಮ್ಮ ನೆನಪಿನ ಗಣಿಯಿಂದ ಎನ್ನುವ ಅನುಭವ ಕಥನದಲ್ಲಿ ಮೊಗೇರಿಯ ಸ್ಪಷ್ಟ ಚಿತ್ರಣವನ್ನು ಕೊಡುತ್ತಾರೆ. ಅದು ಅವರು ಕಂಡ ಮೊಗೇರಿ. ಈಗ ಅದು ಆ ರೀತಿಯಲ್ಲಿಲ್ಲದಿದ್ದರೂ. ಅವರಕಾಲಕ್ಕದು ಹಾಗಿತ್ತು. ನಾಗ ಬನ , ಆ ನಗಬನದ ಮೇಲೆಲ್ಲ ಬಾಗಾಳ ಮರದ ತರಗೆಲೆಗಳು ಬಿದ್ದಿರುವುದು ಇತ್ಯಾದಿ ಕೊಂಚ ಬದಲಾಗಿರಬಹುದು.
ಗೋಪಾಲಕೃಷ್ಣ ಅಡಿಗರ ಅಜ್ಜ ಶುದ್ಧ ವೈದಿಕರು ಆಚಾರ ವಿಚಾರಗಳು ಕರ್ಮಠತನವನ್ನು ಪ್ರತಿಬಿಂಬಿಸುತ್ತಿದ್ದವು ಆದರೆ ಆಮೇಲೆ ಅಡಿಗರ ತಂದೆ ಹಾಗಿರಲಿಲ್ಲ. ಅವರು ಸಂಸ್ಕೃತದಲ್ಲಿಯೂ ಪದ್ಯರಚನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ಅಡಿಗರು ತಮ್ಮ ಬಾಲ್ಯ, ಹುಡುಗಾಟಿಕೆಯ ಕಾಲ ಕಳೆದದ್ದು ಮೊಪ್ಗೇರಿ ಪರಿಸರದಲ್ಲಿಯೇ, ಆಮೇಲೆ ಕಾಲೇಜು ಅಭ್ಯಾಸ ಮೈಸೂರಿನಲ್ಲಿ ನಡೆಯಿತು. ಅವರ ಕುರಿತಾಗಿ ಹೇಳ ಹೊರಟರೆ ಅದು ಇನ್ನೂ ಬೆಳೆಯುತ್ತದೆ.
"ಅನ್ಯರೊರೆದುದನೆ, ಬರೆದುದನೆ ನಾ ಬರೆ ಬರೆದು
ಬಿನ್ನಗಾಗಿದೆ ಮನವು; ಬಗೆಯೊಲಗನೇ ತೆರೆದು
ನನ್ನ ನುಡಿಯೊಳಗೆ ಬಣ್ಣ ಬಣ್ಣದಲಿಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ" ಎಂದು ತಮ್ಮ ಕವನ ಒಂದರಲ್ಲಿ ತಿಳಿಸುತ್ತಾರೆ.
ಇನ್ನೊಂದು ಕವನದಲ್ಲಿ :
ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸವೇಗದಿಂದೆ ಎನ್ನುತ್ತಾರೆ.
ಕನ್ನಡದ ನೆಲವನ್ನು ನೆನೆಯುತ್ತ;
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸುಕುವ ಮುನ್ನ ಎನ್ನುತ್ತಾರೆ

ಈ ಸಾಲುಗಳಂತೂ ಹೃದಯಸ್ಪರ್ಶಿ ಎನ್ನಿಸುತ್ತದೆ. 

Monday 19 February 2018


ಗುರೋರಭ್ಯಸ್ಥ ನಾಮನ್ - ರುದ್ರದಾಮನ ಧರ್ಮದೊಂದಿಗೆ ರಾಜಕಾರಣ”


ಮೊದಲಸಹಸ್ರಮಾನದ ಮೊದಲ ಶತಮಾನಕ್ಕೆ ಸರಿಹೊಂದುವ ರುದ್ರದಾಮನ ಜುನಾಗಡ್ ಶಾಸನ 20 ಸಾಲುಗಳಲ್ಲಿ ಖಂಡರಿಸಲಾದ ಈ ಶಾಸನ ಕೆಲವೊಂದು ಮಹತ್ವದ ವಿಷಯಗಳಿಗೆ ಆಕರವಾಗಿದೆ. ರುದ್ರದಾಮ ಸಂಸ್ಕೃತ ಸಾಹಿತ್ಯದ ದೊಡ್ದ ಕವಿಯಾಗಿದ್ದ, "ಶಬ್ದಾರ್ಥ ಗಾಂಧರ್ವ ನ್ಯಾಯಾದ್ಯಾನಾಂ ವಿದ್ಯಾನಾಂ ಮಹತೀನಾಂ ಪಾರಣ ಧಾರಣ" ನಾಗಿದ್ದನೆನ್ನುವುದಾಗಿ ಆತನ ಜುನಾಗಡ್ ಶಾಸನದಿಂದ ತಿಳಿದು ಬರುತ್ತದೆ.
ಈ ಜುನಾಗಡ್ ಶಾಸನದ 4ನೇ ಸಾಲಿನ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ "ಗುರುಭಿರಭ್ಯಸ್ತ ನಾಮನ್" ಎನ್ನುವ ಪದ ಮುಂದೆ ಅನೇಕ ಶಾಸನಗಳಲ್ಲಿ ಸಾಹಿತ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಗೋಚರಿಸುತ್ತದೆ. ಈ ಪದದ ಅರ್ಥವನ್ನು ಅನೇಕ ವಿದ್ವಾಂಸರು ಅನೇಕ ವಿಧದಲ್ಲಿ ವಿವರಿಸಿದರೂ ಅದರ ಸರಿಯಾದ ಅರ್ಥ ಇನ್ನೂ ಸಿಗದಿರುವುದು ಸೋಜಿಗ. ಇದನ್ನು ರುದ್ರದಾಮನಿಗೆ ಸಿಕ್ಕಿದ ಬಿರುದು ಎಂದು ಕೆಲವರು ಭಾವಿಸಿದರೆ ಇನ್ನು ಕೆಲವರು ಇದೊಂದು ರುದ್ರದಾಮನ ಹೆಸರಿನ ವಿಶೇಷಣ ಎಂದಿರುವರು. ತಾನು ಕಲಿತು ಬಂದ ಅಥವಾ ತನ್ನ ಗುರು ಅಥವಾ ಮಾರ್ಗದರ್ಶಕರ ನೆನಪನ್ನು ಸದಾಸ್ಮರಿಸುವವ ಎನ್ನುವ ಅರ್ಥವನ್ನೂ ಈ ಪದ ಧ್ವನಿಸುತ್ತದೆ. ಗೌರವಾನ್ವಿತವಾದ ಪದದ ಗುಚ್ಚ ಎಂದು ಆಮೇಲಿನ ಎಲ್ಲಾ ಪಂಡಿತರುಗಳೂ ಹಾಗೆಯೇ ನಿಲ್ಲಿಸಿ ಬಿಟ್ಟರು. ರುದ್ರದಾಮನು ಧಾರ್ಮಿಕ ನಡೆಯ ವ್ಯಕ್ತಿ ಸ್ವಾಧ್ಯಾಯ ಪ್ರವಚನಾದಿಗಳು ಅವನ ಆಸ್ಥಾನದಲ್ಲಿ ನಿತ್ಯದ ಕಾರ್ಯಕ್ರಮವಾಗಿತ್ತು ಅಂತವನು ತನ್ನ ಗುರುವಿನಿಂದ ನಿರ್ದೇಶಿಸಲ್ಪಟ್ಟದ್ದನ್ನು ಮೀರದೇ ನಡೆಯುತ್ತಿದ್ದನಾದುದರಿಂದ ಈ ಹೆಸರು ಉಲ್ಲೇಖ ಗೊಂಡಿದೆ.
ಗುರುಗಳಿಂದ ವೇದಾಧ್ಯಯನ ಕಲಿತು ಅದನ್ನೇ ಜೀವನವನ್ನಾಗಿಸುತ್ತಾ ಅದೇ ರೀತಿ ನಡೆದುಕೊಳ್ಳುತ್ತಾ ಇರುವುದು.
"ಗುರುಭಿರಭ್ಯಸ್ತನಾಮನ್" ಎನ್ನುವುದು ಒಂದೊಮ್ಮೆ "ಸುಗ್ರಹೀತ ನಾಮನ್" ಎಂದಾಗಿದ್ದರೆ ಅಂತಹ ದೊಡ್ಡ ಗೌರವ ಸೂಚಕ ಪದವೆನ್ನಿಸುತ್ತಿರಲಿಲ್ಲ.
ಗುರುಭಿರಭ್ಯಸ್ತ ನಾಮನ್ ಎನ್ನುವುದನ್ನು ವ್ಯಾಕರಣದ ದೃಷ್ಟಿಯಿಂದ ಗಮನಿಸುವುದಾದರೆ; "ಗುರುಭಿರ್ - ಅಭ್ಯಸ್ಥ -ನಾಮನ್" ಇದನ್ನು ಇನ್ನು ಹೆಚ್ಚು ತಾರ್ಕಿಕ ದೃಷ್ಟಿಯಿಂದ ಗಮನಿಸಿದರೆ ಗುರುವಭ್ಯಸ್ಥನಾಮನ್ ಆಗಬೇಕು. ಗಮಕತ್ವಾತ್ ಸಮಾಸಃ ಎನ್ನುವುದರಿಂದ ಸಾಪೇಕ್ಷಮ್ ಅಸಮರ್ಥಂ ಭವತಿ. ಎಂದಾಗುತ್ತದೆ. ಆದುದರಿಂದ ವಿದ್ವಾಂಸರುಗಳ ಹೇಳಿಕೆಯಂತೆ ಗುರುಭಿರಭ್ಯಸ್ಥ ನಾಮನ್ ಎನ್ನುವುದು :
1. ಸಾಮಾನ್ಯವಾದ ಸುಗೃಹೀತ ನಾಮನ್ ಎನ್ನುವುದಕ್ಕಿಂತ ಹೆಚ್ಚು ಗೌರವವನ್ನು ಸೂಚಿಸುವ ಪದಗಳಲ್ಲಿ ಗುರುಭಿರಭ್ಯಸ್ಥನಾಮನ್ ಪ್ರಮುಖವಾದದ್ದು.
2. ಈ ಪದದ ಅರ್ಥವನ್ನು ಅಕ್ಷರಶಃ ಗಮನಿಸಿದಾಗ ಅಂದರೆ ವಾಚ್ಯಾರ್ಥವನ್ನು ಗಮನಿಸಿದಾಗ "ಯಾರು (ನಾಮನ್) ಅವರ ಹೆಸರನ್ನು ಹೇಳುತ್ತಾ (ಅಭ್ಯಸ್ಥ) ಯಾರಿಂದ ಅಭ್ಯಾಸ ಮಾಡಿದರೋ (ಗುರುಭಿರ್) ಗುರುಗಳಿಂದ. ಎಂದಾಗುತ್ತದೆ. ಅಂದರೆ ಇಲ್ಲಿ ರುದ್ರಧಾಮನು ಯಾವ ಗುರುಗಳಿಂದ ಅಭ್ಯಾಸ ಮಾಡಿದನೋ ಆ ಗುರು.
3. ಇನ್ನು ಲಕ್ಷ್ಯಾರ್ಥವನ್ನು ಗಮನಿಸಿದರೆ ರುದ್ರದಾಮನು, ವೇದನಿಷ್ಠನಾಗಿದ್ದು ದೊಡ್ದ ವೇದಾಂತಿಯಾಗಿದ್ದನ್ನು. ಫಲಭರಿತ ಹಣ್ಣನ್ನು ಹೇಗೆ ಮರಗಳು ಕೊಡುತ್ತವೋ ಅದೇರೀತಿ ಉತ್ತಮವಾದ ವೇದನಿಷ್ಟವಾದ ಆಡಳಿತವನ್ನು ಕೊಡುತ್ತಿದ್ದ.
4. ಗುರುಭಿರಭ್ಯಸ್ಥ ನಾಮನ್ ಎನ್ನುವುದು ವ್ಯಾಕರಣದ ಪ್ರಕಾರ ತಪ್ಪು. ಸಮಾಸದ ನಿಯಮವನ್ನು ಮೀರುತ್ತದೆ. ಸಮಾಸವನ್ನು ಪರಿಗಣಿಸಿದರೆ ಗುರ್ವಭ್ಯಸ್ಥ ನಾಮನ್ ಆಗಬೇಕಾಗುತ್ತದೆ.
ಪುನಃ ಇನ್ನೊಮ್ಮೆ ಇದನ್ನು ಗಮನಿಸುವುದಾದರೆ ವ್ಯಾಕರಣಾಂಶವನ್ನು ಬದಿಗಿಟ್ಟೂ ಸುಗೃಹೀತ ನಾಮನ್ ಎನ್ನುವುದನ್ನೇ ಬರೆದಿದ್ದರೆ ಅದು ರುದ್ರದಾಮನ ಕೀರ್ತಿಗೆ ಅಂತಹ ದೊಡ್ಡ ಬಿರುದಾಗಿರುತ್ತಿರಲಿಲ್ಲ. ಇಲ್ಲಿ ಗುರು ಎನ್ನುವ ಶಬ್ದವನ್ನು ದೇವರಿಗೆ ಸಮಾನವಾದ ಅರ್ಥದಲ್ಲಿ ಬಳಸಿದ್ದು. ವೇದವನ್ನು ಗಮನದಲ್ಲಿರಿಸಿಕೊಂಡು ಈ ಶಬ್ದವನ್ನು ಈ ಶಾಸನದಲ್ಲಿ ಬಳಸಿಕೊಳ್ಳಲಾಗಿದೆ.
ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಗಮನಿಸಿದರೆ ಅಲ್ಲಿಯೂ ಸುರರು(ದೇವತೆಗಳೂ) ಮತ್ತು ಅಸುರರರು(ರಾಕ್ಷಸರು) ಇಬ್ಬರಿಗೂ ಗುರು ಇರುತ್ತಿದ್ದರು. ಗುರು ಎನ್ನುವುದು ದೇವತಾ ಸ್ವರೂಪ ಅಥವಾ ವೇದಮಾತಾ ಎನ್ನುವ ಭಾವನೆ ಇತ್ತು. ವಿಷ್ಣುವಿನ ಅಂಶದಿಂದ ಅವತಾರ ಹೊಂದಿದ ರಾಮ ಮತ್ತು ಕೃಷ್ಣ ಇಬ್ಬರಿಗೂ ಗುರುವಿನ ಮಾರ್ಗದರ್ಶನವಿತ್ತು ಎಂದು ಪುರಾಣಗಳಿಂದ ತಿಳಿದು ಬರುತ್ತದೆ.
ಅಮರ ಸಿಂಹನ ಅಮರಕೋಶದಲ್ಲಿ "ಉಪಾಧ್ಯಾಯೋಧ್ಯಾಪಕೋಥ ಸ ನಿಷೇಕಾದಿಕೃದ್ ಗುರುಃ" ಎಂದು ಹೇಳಿದ್ದಾನೆ.
ನಿಷೇಕೋ ಗರ್ಭದಾನಾಧಿ ಯಸ್ಯ ತಸ್ಯ ಕರ್ತಾ" ಎನ್ನುವುದಾಗಿ ಹೇಳಲಾಗಿದೆ ಅಂದರೆ ಗ್ರೀಣಾತಿ ಧರ್ಮಾದಿ ಇತಿ ಗುರುಃ ಅಂದರೆ ಇಲ್ಲಿ ಧರ್ಮವನ್ನು ಎತ್ತಿ ಹಿಡಿಯುವವನೇ ಗುರು. ಮತ್ತು "ಗಿರತಿ ಅಜ್ಞಾನಮ್" ಎನ್ನುತ್ತದೆ. ಅಂದರೆ ಅಜ್ಞಾನವನ್ನು ಹೊಡೆದೋಡಿಸುವವನೇ ಗುರು. ಇಲ್ಲಿ ಬೇರೆ ಬೇರೆ ಅರ್ಥವನ್ನು ಗ್ರಹಿಒಸಿದರೆ "ಸಂಸ್ಕಾರಾದಿ ಕರ್ತೋಃ ಗುರುಃ " ಎನ್ನುತ್ತದೆ. ಅಂದರೆ ಸಂಸ್ಕಾರಾದಿಗಳನ್ನು ಮಾಡಿಸುವವನೇ ಗುರು.
ಅಧ್ಯಾಪಕ, ಉಪಾಧ್ಯಾಯ, ಮತ್ತು ಎಲ್ಲಾ ವಿಧದ ಕಾರ್ಯಗಳಿಗೆ ಮಾರ್ಗದರ್ಶನ ಕೊಡುವವನು ಮತ್ತು ಸಂಸ್ಕಾರಗಳಲ್ಲಿ ಸಲಹೆ ಸೂಚನೆಯೊಂದಿಗೆ ಧಮ್ರವನ್ನು ಸೂಚಿಸುವ ಮಹತ್ತರ ಕೆಲಸ ಮಾಡುವವನೆ ಗುರು.
ನಿಷೇಕಾಧೀನಿ ಕರ್ಮಾಣಿ ಯ ಕರೋತಿ ಯಥಾ ವಿಧಿಃ
ಸಂಭಾವಯತಿಚಾನೇನ ಸ ವಿಪ್ರೋ ಗುರುರುಚ್ಯತೇ || ಎನ್ನುವುದಾಗಿ ಅಮರ ಕೋಶ ಮತ್ತು ಮನುಸ್ಮೃತಿಯಲ್ಲಿ ಹೇಳಲ್ಪಟ್ಟಿದೆ. ಇಲ್ಲಿ ನಿಷೇಕ ಮತ್ತು ಗರ್ಭಾದಾನಾದಿಗಳು ಸಂಸ್ಕಾರವಾಗಿರುವುದರಿಂದ ಅವು ಗುರು ಮುಖೇನ ಮಾಡಬೇಕಾದದ್ದು ಎನ್ನುತ್ತದೆ.
ಮನು ವಿನ ಅನಿಸಿಕೆಯಂತೆ : "ಉಪಾಧ್ಯಾಯಾನ್ ದಶಾಚಾರ್ಯ ಆಚಾರ್ಯಾಣಂ ಶತಂ ಪಿತಾ" ಎನ್ನುತ್ತಾನೆ.
ವ್ಯಾಸ ಹೇಳುವಂತೆ :
ಪ್ರಭುಃ ಶರೀರ ಪ್ರಭಾವಃ ಪ್ರಿಯಕೃದ್ ಪ್ರಾಣದೋ ಗುರುಃ |
ಹಿತಾನಾಂ ಉಪದೇಷ್ಟಾ ಚ ಪ್ರತ್ಯಕ್ಷಂ ದೈವತಂ ಪಿತಾ ||
ಎಂದು ಗುರು ತನ್ನ ಸಂಪೂರ್ಣ ಪ್ರಭಾವವನ್ನು ಶಿಷ್ಯನ ಮೇಲೆ ಹಾಕುತ್ತಾನೆ. ಹಿತವಾದದದ್ದನ್ನು ಉಪದೇಶಿಸುತ್ತಾನೆ ಅಂತಹ ಗುರು ದೇವ ಸಮಾನ ಎನ್ನುತ್ತಾನೆ.
ಕಾಳಿದಾಸ ತನ್ನ ರಘುವಂಶದಲ್ಲಿ
ನ ಕೇವಲಂ ತದ್ ಗುರುರೇಕ ಪಾರ್ಥಿವಃ | ಕ್ಷಿತವಭೂದೇಕ ಧನುರ್ದ್ಧರೋಪಿ ಸಃ || ಎನ್ನುತ್ತಾನೆ. ಹೀಗೇ ಧರ್ಮವನ್ನು ಬಿಟ್ಟು ಗುರುವನ್ನು ಬಿಟ್ಟು ಮಾನವ ತನ್ನ ಯಾವ ಉನ್ನತಿಯನ್ನು ಮೊದಲೆಲ್ಲ ಸಾಧಿಸಿಕೊಳ್ಳಲು ಆಗುತ್ತಿರಲಿಲ್ಲ. ಧರ್ಮವನ್ನು ಬಿಟ್ಟು ರಾಜಕಾರಣವೂ ಅಂತಹ ಸುಲಭದ್ದಲ್ಲ. ಆದರೆ ಧರ್ಮದ ಅರ್ಥೈಸುವಿಕೆಯಲ್ಲಿ ಎಡವಿದ ನಾವು ರಾಜಕಾರಣದಲ್ಲಿ ಧರ್ಮ ಬೆರೆಸಬೇಡಿ ಎಂದು ಉದ್ದುದ್ದ ಗಂಟಲು ಹರಿಯುವಂತೆ ಭೀಷಣವಾದ ಭಾಷಣ ಬಿಗಿಯುತ್ತೇವೆ. ಗುರುಭಿರಭ್ಯಸ್ಥನಾಮನ್ ಎನ್ನುವ ಒಂದು ವಾಕ್ಯವೇ ಇದಕ್ಕೆಲ್ಲ ಉತ್ತರ ಕೊಡಬಲ್ಲದು.
ಕರ್ನಾಟಕದ ಶಾಸನಗಳ ಕಡೆಗೆ ಬಂದರೆ ಕದಂಬರ ಶಾಸನಗಳಲ್ಲಿ ಮೊತ್ತ ಮೊದಲಿಗೆ ಗುರುವನ್ನು ನೆನೆಯಲಾಗಿದೆ. ರವಿವರ್ಮನ ಗುಡ್ನಾಪುರ ಶಾಸನದಲ್ಲಂತೂ ತನ್ನ ಅಜ್ಜ ವೀರ ಶರ್ಮನೇ ತನ್ನ ಗುರು ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಆತನ ಕುರಿತಾಗಿ ಧ್ಯಾನಿಸುತ್ತಾನೆ. ಹೀಗೆ ಗುರುವಿನ ಅನುಕರಣೆ ಅನುಸರಣೆ ಹಿಂದೆಲ್ಲ ಮಹತ್ವ ಪಡೆದಿತ್ತು ಆದರೆ ಇಂದು ಗುರು ವೆನ್ನಿಸಿಕೊಂಡವ ಧ್ರಮದಂತೆ ನಡೆದಾಗ ಖಂಡಿತಾ ಅನುಕರಣೀಯ ಅನುಸರಣೀಯನೇ.




Thursday 15 February 2018

ಸಂಸ್ಕೃತದ ಚೋಕ್ಷ - ಕನ್ನಡದಲ್ಲಿ ಚೊಕ್ಕ - ಪ್ರಾಕೃತದಲ್ಲಿಯೂ ಚೊಕ್ಕವೇ


“ಚೋಕ್ಷ” ಈ ಪದ ಕೇಳಲಿಕ್ಕೆ ವಿಚಿತ್ರವೆನ್ನಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಪ್ರಾಚೀನ ಮತ್ತು ಆಮೇಲಿನ ಭಾಷೆಗಳಲ್ಲಿಯೂ ಈ ಪದ ಬಳಕೆಗೊಂಡಿದೆ. ಮಧ್ಯಪ್ರದೇಶದ ಭಾಗ್ ಎನ್ನುವ ಊರಿನಲ್ಲಿ ದೊರೆತ ೪-೫ನೇ ಶತಮಾನದ ಭುಲುಂಡಮಹಾರಾಜನ ಸಂಸ್ಕೃತ ಭಾಷೆ ಮತ್ತು ಬ್ರಾಹ್ಮಿಲಿಪಿಯ ತಾಮ್ರಪಟ ಶಾಸನದಲ್ಲಿ ಈ ಶಬ್ದ ನಮಗೆ ಮೊತ್ತ ಮೊದಲಿಗೆ ದೊರಕುತ್ತದೆ. ಅಲ್ಲಿ ಚೌಕ್ಷ ಎನ್ನುವುದಾಗಿ ಇದು ಬಳಕೆಗೊಂಡಿದೆ. ಮೋನಿಯರ್ ವಿಲಿಯಂನ ೪೦೨ನೇ ಪೇಜಿನ ೩ನೇ ಕಾಲಮ್ಮಿನಲ್ಲಿ ಇದಕ್ಕೆ Pure ಮತ್ತು Clean ಎನ್ನುವ ಅರ್ಥದೊಂದಿಗೆ ಇದು ಪ್ರಾಕೃತದಲ್ಲಿ ಚೊಕ್ಕ ಎನ್ನುವುದಾಗಿದೆ ಎಂದು ಹೇಳಲಾಗಿದೆ. ಹೌದು ನಮ್ಮ ಕನ್ನಡದಲ್ಲಿಯೂ ಚೊಕ್ಕವೇ.
ಶಾಸನಪಾಠದಲ್ಲಿ ನೋಡೋಣ "ಯತೋದ್ಯ ಪ್ರಭೃತ್ಯಾ ದೇವಕೀಯ ಕರ್ಷಕಾಃ ಕೃಷಂತೋ ವಪಂತಃ ಪಾಶುಪತಾರ್ಯ್ಯ ಚೋಕ್ಷಾಃ ದೇವಪರಸಾದಕಾಶ್ಚ ಗಂಧ ಧೂಪ ಬಲಿ ಚರು ಸತ್ರೋಪಯೋಗಾದಿಶುಪಾಯೋಜಯಮಾನಾಸ್ಸರ್ವೈರೇವ . . . . . .ಸಮನುಮಂತವ್ಯಾಃ" ಇಲ್ಲಿ ಶಾಸನದಲ್ಲಿ ಸಾಹಿತ್ಯದ ನೆಲೆಯಲ್ಲಿ ಬಂದದ್ದು. ಚೋಕ್ಷಾಃ ಎನ್ನುವ ಪದ ಚುಕ್ಷಾ ಎನ್ನುವ ಪದದಿಂದ ಹುಟ್ಟಿ ಛತ್ರಾದಿ ಗಣ ಎನ್ನುವ ಮೂಲ ಧಾತುವಿನಿಂದ ಹುಟ್ಟಿದ್ದು. ಛತ್ರ ಚಾಮರ ಪಂಚಮಹಾವಾದ್ಯಾದಿಗಳು. ಸಾಹಿತ್ಯದ ದೃಷ್ಟಿಯಲ್ಲಿ ಅವಲೋಕಿಸಿದರೆ ಈತ ಅತ್ಯಂತ ಪರಿಶುದ್ಧ ಹೃದಯಿ ಎನ್ನುವುದು. ಮಹಾಭಾರತದಲ್ಲಿ ಇದರ ಕುರಿತಾಗಿ ಬಂದಿರುವುದನ್ನು ಗಮನಿಸೋಣ.
ಶಾಂತಿಪರ್ವ ದಲ್ಲಿ
ಅನೀರ್ಷುರ್ಗುಪ್ತದಾರಃ ಸ್ಯಾಚ್ಚೋಕ್ಷಃ ಸ್ಯಾದಘೃಣೀ ನೃಪಃ |
ಸ್ತ್ರಿಯಃ ಸೇವೇತ ನಾತ್ಯರ್ಥಂ ಮೃಷ್ಟಂ ಭುಞ್ಜೀತ ನಾಹಿತಮ್ || ||  
ದಕ್ಷನಾಗಿರಬೇಕು. ಅತಿಕಾರುಣ್ಯವಿರ ಬಾರದು. ಸ್ತ್ರೀಯರಲ್ಲಿ ಹೆಚ್ಚು ಅನುರಕ್ತನಾಗಬಾರದು. ಶುದ್ಧವಾದ ಮತ್ತು ರುಚಿಕರವಾದ ಭೋಜನವನ್ನೇ ಮಾಡಬೇಕು. ಆದರೆ ಅಹಿತಕರವಾದ ಪದಾರ್ಥಗಳನ್ನು ತಿನ್ನಬಾರದು. ಇಲ್ಲಿಯೂ ಸಹ ಶುದ್ಧವಾದ ಎನ್ನುವ ಅರ್ಥ ಬರುವಂತೆ ಹೇಳಲಾಗಿದೆ.
ಶಾಂತಿಪರ್ವ ಅಧ್ಯಾಯ೨೬೫ ರಲ್ಲಿ
ಯಚ್ಚಾಪಿ ಕಿಂಚಿತ್ಕರ್ತವ್ಯಮನ್ಯಚ್ಚೋಕ್ಷೈಃ ಸುಸಂಸ್ಕೃತಮ್ |
ಮಹಾಸತ್ತ್ವೈಃ ಶುದ್ಧಭಾವೈಃ ಸರ್ವಂ ದೇವಾರ್ಹಮೇವ ತತ್ || ೧೨ ||
ವೇದಗಳಲ್ಲಿ ಯಜ್ಞಸಂಬಂಧವಾದ ಯಾವ ವೃಕ್ಷಗಳು ಹೇಳಿವೆಯೋ ಅವುಗಳನ್ನು ಯಜ್ಞಗಳಲ್ಲಿ ಉಪಯೋಗಿಸಲೇಬೇಕು. ಶುದ್ಧವಾದ ಆಚಾರ- ವಿಚಾರವುಳ್ಳ ಸಾತ್ತ್ವಿಕನಾದ ಪುರುಷನು ವಿಶುದ್ಧವಾದ ಭಾವನೆಯನ್ನಿಟ್ಟುಕೊಂಡು ಪ್ರೋಕ್ಷಣವೇ ಮೊದಲಾದ ಉತ್ತಮಸಂಸ್ಕಾರಗಳಿಂದ ಯಾವುದೇ ಹವಿಸ್ಸನ್ನು ಸಿದ್ಧಗೊಳಿಸಿದರೂ ಹವಿಸ್ಸು ದೇವತೆಗಳ ಅರ್ಪಣೆಗೆ ಅರ್ಹವೇ ಆಗಿರುತ್ತದೆ.” ಎಂದು ಇಲ್ಲಿ ಕೂಡಾ ಶುಚಿತ್ವ ಮತ್ತು ಶುದ್ಧತೆಗೆ ಹೇಳಲಾಗಿದೆ.
ಅನುಶಾಸನ ಪರ್ವದ ೧೧ನೇ ಅಧ್ಯಾಯದಲ್ಲಿ
ಪಾಪಾಮಚೋಕ್ಷಾಮವಲೇಹಿನೀಂ ವ್ಯಪೇತಧೈರ್ಯಾಂ ಕಲಹಪ್ರಿಯಾಂ |
ನಿದ್ರಾಭಿಭೂತಾಂ ಸತತಂ ಶಯಾನಾ- ಮೇವಂವಿಧಾಂ ತಾಂ ಪರಿವರ್ಜಯಾಮಿ || ೧೨ ||
ದಯಾರಹಿತಳಾಗಿ ಪಾಪಕಾರ್ಯಗಳಲ್ಲಿ ತತ್ಪರಳಾಗಿರತಕ್ಕವಳನ್ನೂ, ಕುರೂಪಿಯಾಗಿರುವವಳನ್ನೂ (ಅವುಡುಕಚ್ಚುವವಳನ್ನೂ), ಧೈರ್ಯವಿಲ್ಲದವಳನ್ನೂ, ಜಗಳಗಂಟಿಯನ್ನೂ, ತೂಕಡಿಸುತ್ತಿರುವವಳನ್ನೂ, ಯಾವಾಗಲೂ ಮಲಗಿರುವವಳನ್ನೂ ನಾನು ಪರಿತ್ಯಾಗಮಾಡುತ್ತೇನೆ. ಎಂದು ಪರಿಶುದ್ಧಳಲ್ಲದವಳ ಕುರಿತು ಹೇಳಲಾಗಿದೆ. ಅಂದರೆ ಇಲ್ಲಿ ಶುದ್ಧತೆಯನ್ನೇ ಹೇಳಲಾಗಿದೆ.
ಚೋಕ್ಷಶ್ಚೋಕ್ಷಜನಾನ್ವೇಷೀ ಶೇಷಾನ್ನಕೃತಭೋಜನಃ |
ವೃಥಾ ಮಾಂಸಂ ಭುಞ್ಜೀತ ಶೂದ್ರೋ ವೈಶ್ಯತ್ವಮೃಚ್ಛತಿ || ೨೯ ||
ಶುದ್ಧರಾದವರು ಪರಿಶುದ್ಧರೊಡನೆಯೇ ಬೆರೆಯಬೇಕು ಎನ್ನುವ ಅರ್ಥ ಧ್ವನಿಸುತ್ತದೆ.
ಶ್ರದ್ಧಾವನ್ತೋ ದಯಾವನ್ತಶ್ಚೋಕ್ಷಾಶ್ಚೋಕ್ಷಜನಪ್ರಿಯಾಃ |
ಧರ್ಮಾಧರ್ಮವಿದೋ ನಿಶ್ಯಂ ತೇ ನರಾಃ ಸ್ವರ್ಗಗಾಮಿನಃ || ೩೭ ||
ಶ್ರದ್ಧಾಳುಗಳಾದ, ದಯಾಳುಗಳಾದ, ಶುದ್ಧರಾದ, ಶುದ್ಧಜನಪ್ರಿಯ ರಾದ, ಧರ್ಮಾಧರ್ಮಗಳನ್ನು ತಿಳಿದಿರುವ ಮನುಷ್ಯರು ಸ್ವರ್ಗಕ್ಕೆ ಹೋಗು ತ್ತಾರೆ.
ತೀರ್ಥಾನಾಂ ಗುರವಸ್ತೀರ್ಥಂ ಚೋಕ್ಷಾಣಾಂ ಹೃದಯಂ ಶುಚಿ |
ದರ್ಶನಾನಾಂ ಪರಂ ಜ್ಞಾನಂ ಸಂತೋಷಃ ಪರಮಂ ಸುಖಮ್ || ೪೭ ||
ತೀರ್ಥಗಳಲ್ಲಿ ಗುರುಜನರೇ ಸರ್ವೋತ್ತಮವಾದ ತೀರ್ಥಸ್ವರೂಪರು. (ಗುರುಜನರನ್ನು ಸಂದರ್ಶಿಸಿ ಸೇವಿಸಿದರೆ ತೀರ್ಥಗಳಲ್ಲಿ ಸ್ನಾನಮಾಡುವುದಕ್ಕಿಂತಲೂ ಅಧಿಕವಾದ ಫಲವು ಲಭಿಸುತ್ತದೆ.) ಪವಿತ್ರವಾದ ವಸ್ತುಗಳಲ್ಲಿ ಶುದ್ಧವಾದ ಹೃದಯವೇ ಅತ್ಯಂತಪವಿತ್ರವಾದ ವಸ್ತುವಾಗಿದೆ. ದರ್ಶನಗಳಲ್ಲಿ (ಜ್ಞಾನಗಳಲ್ಲಿ) ಪರಮಾರ್ಥತತ್ತ್ವಜ್ಞಾನವೇ ಶ್ರೇಷ್ಠವಾದ ಜ್ಞಾನವಾಗಿದೆ. ಸಂತೋಷವೆಂಬುದೇ ಸರ್ವೋತ್ತಮವಾದ ಸುಖವಾಗಿದೆ. ಇಲ್ಲಿ ಪಾವಿತ್ರಕ್ಕೆ, ಶುದ್ಧತೆಗೆ ಹೇಳಲಾಗಿದೆ.
ಆಶ್ವಮೇಧಿಕಪರ್ವದಲ್ಲಿ
ಆಗ್ನೇಯಂ ವೈ ಲೋಹಿತಮಾಲಭನ್ತಾಂ ವೈಶ್ವದೇವಂ ಬಹುರೂಪಂ ಹಿ ರಾಜನ್ |
ನೀಲಂ ಚೋಕ್ಷಾಣಂ ಮೇಧ್ಯಮಪ್ಯಾಲಭನ್ತಾಂ ಚಲಚ್ಛಿಶ್ನಂ ಸಮ್ಪ್ರದಿಷ್ಟಂ ದ್ವಿಜಾಗ್ರ್ಯಾಃ || ೩೦ ||
ಮರುತ್ತನೇ! ಹವಿಸ್ಸಿಗಾಗಿ ಅಗ್ನಿದೇವತಾಸ್ವರೂಪದ ಲೋಹಿತ ಜಾತಿಯ ಜಿಂಕೆಯನ್ನು ಆಲಂಭಿಸಲಿ. ವಿಶ್ವೇದೇವತೆಗಳ ಹವಿಸ್ಸಿಗಾಗಿ ಬಹುರೂಪವಿರುವ ಜಿಂಕೆಯನ್ನು ಆಲಂಭಿಸಲಿ. ಇಲ್ಲಿರುವ ಬ್ರಾಹ್ಮಣಶ್ರೇಷ್ಠರು ಯಾಗಕ್ಕೆ ಅರ್ಹವಾದ ಚಂಚಲವಾದ ಶಿಶ್ನವುಳ್ಳ ನೀಲಿಯ ಬಣ್ಣದ ಎತ್ತನ್ನು ನನ್ನ ನಿರ್ದೇಶನದಂತೆ ಆಲಂಭಿಸಲಿ.” ಎಂದು ವ್ಯಾಸರು ಹೇಳುತ್ತಾರೆ: ತಿಳಿಯಾದ ಪರಿಶುದ್ಧತೆಗೆ ಹೇಳಲಾಗಿದೆ.
ಇವುಗಳೆಲ್ಲವೂ ಮಹಾಭಾರತದಲ್ಲಿನ ಉಲ್ಲೇಖ.
ಮನುವಿನ ಸಂಹಿತೆಯಲ್ಲಿ ಚೋಕ್ಷದ ಕುರಿತಾಗಿ ನೋಡಿದರೆ ಅಲ್ಲಿ
ಅವಕಾಶೇಷು ಚೋಕ್ಷೇಷು ಜಲತೀರೇಷುಚೈವ ಹಿ
ವಿವಿಕ್ತೇಷು ಚ ತುಷ್ಯಂತಿ ದತ್ತೇನ ಪಿತರಃ ಸದಾ
ಮನುಸ್ಮೃತಿಗೆ ಬರೆದ ಮೇಧಾತಿಥಿ ಟೀಕೆಯಲ್ಲಿ "ಸ್ವಭಾವ ಶುಚಯೋ ಮನಃ ಪ್ರಸಾದ ಜನಕಾರಣ್ಯಾದಯಃ " ಅಂದರೆ ಇಲ್ಲಿಯೂ ಸಹ ಅದೊಂದು ಸ್ವಭಾವ, ಶುಚಿತ್ವ, ಮತ್ತು ಮನಸ್ಸಿನ ಪರಿಶುದ್ಧತೆಗೆ ಸಂಬಂಧಿಸಿದ ಪದ ಎನ್ನಲಾಗಿದೆ.
ಪಾಳಿ ಮತ್ತು ಆಂಗ್ಲ ಡಿಕ್ಷನರಿಯಲ್ಲಿ ಚೋಕ್ಕ ಭಾವ ಎನ್ನಲಾಗಿದೆ. ಶುಭ್ರತೆ ಎನ್ನುವುದು ಮನಸ್ಸಿನ ಭಾವನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಪಾಇಯ ಸದ್ದ ಮಹಾಣ್ಣಓ, ಭಗವತೀ ಸೂತ್ರ, ರಾಯಪಸೇಣಿಯ ಮುಂತಾದವುಗಳಲ್ಲಿ ಶುಭ್ರತೆ ಸ್ವಚ್ಚ ಮತ್ತು ಶುದ್ಧತೆಗೆ ಹೇಳಲಾಗಿದೆ. ಅಲ್ಲಿ
ಅಭಿನವಗುಪ್ತ ತನ್ನ ನಾಟ್ಯಶಾಸ್ತ್ರದಲ್ಲಿ
ಪರಿವ್ರಾಡ್ ಮುನಿಶಾಕ್ಯೇಷು ಚೋಕ್ಷೇಷು ಶ್ರೋತ್ರೀಯೇಷುಚ|
ಶಿಷ್ಠಾಯೇಚೈವ ಲಿಂಗಸ್ಥಾಃ ಸಂಸ್ಕೃತಂ ತೇಷುವೋಜಯೇತ್ ||
ಅಭಿನವಗುಪ್ತನ ನಾಟ್ಯ ಶಾಸ್ತ್ರದಲ್ಲಿ ಚೋಕ್ಷದ ಕುರಿತು ಹೇಳುತ್ತಾ. ಇದೊಂದು ಭಾಗವತ ಸಂಪ್ರದಾಯದಲ್ಲಿ ಬರುವ ಒಂದು ಪಂಗಡ ಇವರನ್ನು ಏಕಾಯನರು ಎಂದೂ ಕರೆಯಲಾಗುತ್ತದೆ ಎಂದಿರುವನು.
ಪರಿವ್ರಾಜಕರು, ಶ್ರೋತ್ರೀಯರು, ಮುಂತಾದವರ ಕುರಿತು ಹೇಳುತ್ತಾನೆ. ಇಲ್ಲಿಯೂ ಪರಿಶುದ್ಧತೆಯನ್ನೇ ಹೇಳುತ್ತಾನೆ. ಪ್ರೈವ್ರಾಜರು ಮುನಿಶಾಕ್ಯರು ಮತ್ತು ಚೋಕ್ಷರು ಶ್ರೋತ್ರೀಯರು ಎನ್ನುತ್ತಾನೆ. ಇಲ್ಲಿ ಶ್ರೋತ್ರೀಯರ ವಿಶೇಷಣವಾಗಿ ಚೋಕ್ಷ ಪದವನ್ನು ಬಳಸಿಕೊಂಡಿದ್ದಾನೆ ಪರಿಶುದ್ಧರಾದ ವೇದಾಧ್ಯನ ನಿರತರನ್ನು ಹೇಳಿದ್ದಾನೆ.
ವರಾಹಮಿಹಿರ ಜ್ಯೋತಿಷ್ಯ ಶಾಸ್ತ್ರವನ್ನು ಹೇಳುವಾಗ ಚೋಕ್ಷವನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ ಶಕುನಗಳನ್ನು ಹೇಳುವಾಗ ಮತ್ತು ಅಂತಶ್ಚಕ್ರವನ್ನು ಹೇಳುವಾಗ ಚೋಕ್ಷವನ್ನೇ ಆಧಾರವಾಗಿ ಬಳಸುತ್ತಾನೆ.
ಬೃಹತ್ಸಂಹಿತೆಯಲ್ಲಿ :
ಶಸ್ತ್ರಾನಲ ಪ್ರಕೋಪಾವಾಗ್ನೇಯೇ ವಾಜಿ ಮರಣ ಶಿಲ್ಪಿ ಭಯಂ
ಯಾಮ್ಯೇ ಧರ್ಮ ವಿನಾಶೋಪರೇ ಅಗ್ನ್ಯವಸ್ಕಂದ ಚೋಕ್ಷ ಬದ್ಧಾಃ
ಎನ್ನುವುದು ಶಸ್ತ್ರಾಸ್ತ್ರಗಳ ಘರ್ಷಣೆಯಿಂದ 'ಸುಡುವದು' ಮತ್ತು ಏಕಾಏಕಿ ಬೆಂಕಿ, ಮತ್ತು ಕುದುರೆಗಳು ನಾಶ, ಶಿಲ್ಪಿಗಳಿಗೆ ಭಯ, ಧರ್ಮ ಕ್ಷೋಭೆ, ಅಗ್ನಿಯೇ ಮುಂತಾದವುಗಳಿಂದ ಅನರ್ಥ, ಪರಿಶುದ್ಧ ಹೃದಯಿಗಳ ನಾಶವಾಗಬಹುದೆನ್ನುತ್ತಾನೆ.
ವರಾಹಮಿಹಿರನ ಬೃಹತ್ಸಂಹಿತಾವನ್ನು ಕುರಿತು ಅಜಯ್ ಮಿಶ್ರ ಶಸ್ತ್ರಿಯವರು ಹೇಳುವಂತೆ ಇಂದಿನ ಗುಜರಾತ್ ಪ್ರಾಂತ್ಯದಲ್ಲಿ ವಾಸವಾಗಿರುವ ವೈಷ್ಣವ ಭಕ್ತರೇ ಚೋಕ್ಷುಗಳು ಎನ್ನುತ್ತಾರೆ. ಉತ್ಪಲ ಎನ್ನುವ ಗ್ರಂಥದಲ್ಲಿ ಚೋಕ್ಷುಗಳು ಕೆಟ್ಟಜನಾಂಗದವರು ಎನ್ನುವ ವಿಭಿನ್ನ ಹೇಳಿಕೆ ಸಿಗುತ್ತದೆ.
ಇನ್ನೂ ಬೇಕಾದಷ್ಟು ಬರೆಯ ಬಹುದು, ಎಲ್ಲಾ ಕಡೆಯೂ ಪವಿತ್ರವನ್ನೇ ಹೇಳಿ, ಪರಿಶುದ್ಧತೆ ಮತ್ತು ಪಾವಿತ್ರ್ಯವನ್ನು ಹೇಳಲಾಗಿದೆ. ಗುಪ್ತರ ಕಾಲದ ವೈಷ್ಣವರಾಗಿ, ನಾಟಕವೊಂದರಲ್ಲಿ ಪಾತ್ರವಾಗಿ, ಉತ್ಪಲದಲ್ಲಿ ದುಷ್ಟಜನರಾಗಿ, ಜ್ಯೋತಿಷ್ಯದಲ್ಲಿ ಶಕುನವಾಗಿ ಚೋಕ್ಷ ಬಂದು ಹೋಗಿದೆ. ಇಂದಿಗೂ ನಮ್ಮ ಕನ್ನಡದಲ್ಲಿ ಚೊಕ್ಕವಾಗಿಯೇ ಬಂದಿದ್ದು ಇಲ್ಲಿ, ಶುಭ್ರತೆಯ ಜೊತೆಗೆ ರಿಕ್ತವನ್ನೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಹೇಳುತ್ತದೆ.