Search This Blog

Tuesday 30 January 2018

ಕ್ಷಮಯಾ ಪೃಥಿವೀಸಮಃ - ಮಂಗಲೇಶ

ಇದನ್ನು ಮಾಗಡ ಎಂದು ಕರೆಯುತ್ತಿದ್ದರು, ಕಾಲಕ್ರಮೇಣ ಅದು ಮಾಕುಟ ಎಂದು ಕರೆಸಿಕೊಂಡಿತು, ಭಾಷೆಯ ಮೇಲೆ ಅನ್ಯಭಾಷೆಯ ಪ್ರಭಾವ ಹೆಚ್ಚಿದಂತೆಲ್ಲಾ ಇನ್ನೂ ಹೊಸರೂಪ ತಾಳುತ್ತಾ ಮಕುಟ ಎಂದು ಕರೆಸಿಕೊಂಡು ಆಮೇಲೆ ಇಂದಿನ ತನಕವೂ ಮಹಾಕೂಟ ಎಂದೇ ಕರೆಯಲ್ಪಟ್ಟಿತು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಕೆಲವೇ ಕಿಲೋಮೀಟರುಗಳ ಅಂತರದಲ್ಲಿ ಪೂರ್ವದಿಕ್ಕಿನಲ್ಲಿ ಸಿಗುವುದೇ ಮಹಾಕೂಟ.
ಬಾದಾಮಿ ಚಾಳುಕ್ಯರ ವಂಶಾವಳಿಯಂತೆ ರಣರಾಗ ಮೊದಲಿಗ, ಅವನ ಮಗ ಮೊದಲನೇ ಪೊಲೆಕೇಶಿ ಕ್ರಿ.ಶ. ೫೪೦ ರಿಂದ ೫೬೬ತನಕ ರಾಜ್ಯಭಾರ ಮಾಡಿದ. ಈತನೇ ಚಾಲುಕ್ಯವಂಶದ ಸ್ಥಾಪಕ. ವಲ್ಲಭ ಅಥವಾ ಪೃಥ್ವೀವಲ್ಲಭ ಎನ್ನುವ ಬಿರುದನ್ನು ಮೊತ್ತಮೊದಲು ಪಡೆವನು ಈತನೇ ಈತನ ತರುವಾಯದ ಎಲ್ಲಾ ರಾಜರೂ ಆ ಬಿರುದನ್ನು ಮುಂದುವರೆಸಿಕೊಂಡು ಬಂದರು. ಈತನಿಗೆ ಪೂಗವರ್ಮ ಮತ್ತು ಕೀರ್ತಿವರ್ಮ ಮತ್ತು ಮಂಗಲೇಶ ಹೀಗೇ ಮೂರು ಜನ ಮಕ್ಕಳು. ಆದರೆ ಪೂಗವರ್ಮನೆನ್ನುವವನ ಬಗ್ಗೆ ಹಲವಾರು ಸಂದೇಹಗಳಿದ್ದು ಆತ ಹೆಚ್ಚು ಸಮಯ ಬಾಳಿದಂತೆ ಕಾಣುತ್ತಿಲ್ಲ. ಮೊದಲನೇ ಕೀರ್ತಿವರ್ಮನ ಮಗನೇ ಚಳುಕ್ಯ ದೊರೆಗಳಲ್ಲೆಲ್ಲಾ ಪ್ರಸಿದ್ಧನಾದ ಎರಡನೇ ಪೊಲೆಕೇಶಿ.
ಮೊದಲನೇ ಕೀರ್ತಿವರ್ಮ ಸಾಯುವ ಸಮಯ ಎರಡನೇ ಪೊಲೆಕೇಶಿ ಇನ್ನು ಚಿಕ್ಕವನಾಗಿದ್ದ. ಆಗ ಅವನ ಪರವಾಗಿ ಮಂಗಲೇಶನೇ ಅಧಿಕಾರ ನಡೆಸುತ್ತಾನೆ. ಮಂಗಲೇಶ ತನ್ನ ಕೊನೆಯ ಕಾಲದಲ್ಲಿ ಎರಡನೆ ಪೊಲೆಕೇಶಿಯನ್ನು ದೂರವಿಟ್ಟು ಆತನ ಹಕ್ಕನ್ನು ತನ್ನ ಮಗನಿಗೆ ಕೊಡಲು ಉದ್ಯುಕ್ತನಾಗುತ್ತಾನೆ. ಈ ಸಂಚನ್ನು ತಿಳಿದ ಪೊಲೆಕೇಶಿ ಬಂಡೆದ್ದು ತನ್ನ ಅಧಿಕಾರ ಸ್ವೀಕರಿಸುತ್ತಾನೆ. ಆಗ ಮಂಗಲೇಶ ಮರಣ ಹೊಂದುತ್ತಾನೆ. ಆಂತರಿಕ ಬಂಡಾಯದ ವಿಷಯ ಎಲ್ಲಿಯೂ ನಮಗೆ ಸಿಗುವುದಿಲ್ಲ.
ಮಂಗಲೇಶನ ಆಸ್ಥಾನದಲ್ಲಿ ಎಂತೆಂತಹ ಕವಿಗಳು ಸಾಹಿತಿಗಳು ಕಲಾವಿದರು ಇದ್ದರೋ ತಿಳಿಯುತ್ತಿಲ್ಲ. ಆದರೆ ೫ -೬ ನೇ ಶತಮಾನಕ್ಕಾಗಲೇ ಪುರಾಣಗಳಿಂದ ಹಾಗೂ ಕಾಳಿದಾಸನಂತಹ ಸಂಸ್ಕೃತದ ಮೇರು ಕವಿಗಳ ಕಾವ್ಯಗಳಿಂದ ಸ್ಪೂರ್ತಿಪಡೆದ ಕವಿಯೊಬ್ಬನಿದ್ದ ಅನ್ನುವುದು ಕನ್ನಡನಾಡಿನವರಾದ ನಮಗೆ ಹೆಮ್ಮೆ.
ಮಂಗಲೇಶ ಒಂದು ಶಸನವನ್ನು ಮಹಾಕೂಟದಲ್ಲಿ ಬರೆಸುತ್ತಾನೆ. ಈ ಶಾಸನದ ಆರಂಭದಲ್ಲಿಯೇ ಶಾಸನಕವಿ 'ದಾಟ' ಕಾಳಿದಾಸನ ರಘುವಂಶದ ರಘುವಂಶ ಕಾವ್ಯದ ಒಂದನೇ ಸರ್ಗದ 
"ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಮ್ | ಎನ್ನುವ ಸಾಲನ್ನು ತೆಗೆದುಕೊಂಡು ಬೆರಗು ಗೊಳಿಸುತ್ತಾನೆ. ಹಾಗಂತ ಕವಿಗೆ ಅದು ರಘುವಂಶದ ಶ್ಲೋಕವೆಂತಲೋ ಅಥವಾ ಅದು ಕಾಳಿದಾಸನ ಕೃತಿ ಎಂತಲೋ ತಿಳಿದ ಬಗ್ಗೆ ಗೊತ್ತಾಗುತ್ತಿಲ್ಲ. ಮತ್ತು ಕಾಳಿದಾಸನನ್ನು ಕುರಿತು ಸಹ ಉಲ್ಲೇಖಿಸುತ್ತಿಲ್ಲ. ಅದೇ ರೀತಿಯಾಗಿ. ಈ ಕವಿ ಅಸಾಮಾನ್ಯ ಎನ್ನುವಲ್ಲಿ ಎರಡು ಮಾತಿಲ್ಲ.
ಈ ಶಾಸನದ ೬ನೇ ಸಾಲಿನಲ್ಲಿ ಈತ "ಸಮುದ್ರ ಇವ ಗಂಭೀರಃ ಕ್ಷಮಯಾ ಪೃಥಿವೀ ಸಮಃ" ಎಂದು ಬರೆಯುತ್ತಾನೆ. ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಶ್ಲೋಕದ ಇನ್ನೊಂದು ರೂಪ. ಅಲ್ಲಿ ೧೭ನೆಯ ಶ್ಲೋಕದಲ್ಲಿ
ಸಮುದ್ರ ಇವ ಗಾಮ್ಭೀರ್ಯೇ ಧೈರ್ಯೇಣ ಹಿಮವಾನಿವ |
ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ಪ್ರಿಯದರ್ಶನಃ |
ಕಾಲಾಗ್ನಿಸದೃಶಃ ಕ್ರೋಧೇ ಕ್ಷಮಯಾ ಪೃಥಿವೀಸಮಃ || ೧೭ ||
ಗಾಂಭೀರ್ಯದಲ್ಲಿ ಸಮುದ್ರದಂತೆ ಗಂಭೀರ, ಧೈರ್ಯದಲ್ಲಿ ಎತಿ ಎತ್ತರದ ಹಿಮಾಲಯದಂತೆ, ಪರಾಕ್ರಮದಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುವ ವಿಷ್ಣುವಿನಂತೆ. ದರ್ಶನಾಕಾಂಕ್ಷಿಗಳಿಗೆ ಪ್ರಿಯನಾದ ಶಿವನಂತೆ. ಕೋಪದಲ್ಲಿ ಕಾಲಾಗ್ನಿಯಂತೆಯೂ , ಕ್ಷಮಾಗುಣದಲ್ಲಿ ಭೂಮಿಗೆ ಸಮಾನನು ಎಂದು ವಾಲ್ಮೀಕಿ ರಾಮನನ್ನು ಬಣ್ಣಿಸಿದ್ದಾನೆ. ಶಾಸನ ಕವಿ ಇಲ್ಲಿ ರಾಮಾಯಣದಲ್ಲಿ ಉಕ್ತವಾಗಿರುವ ಶ್ಲೋಕದ ಮೊದಲ ಚರಣದ ಪೂರ್ವಾರ್ಧವನ್ನು ಉಳಿಸಿಕೊಂಡು ಶ್ಲೋಕದ ಅಂತ್ಯವನ್ನು ಸೇರಿಸಿದ್ದಾನೆ. ಗಾಂಭೀರ್ಯದಲ್ಲಿ ಸಮುದ್ರರಾಜನಂತೆಯೂ ಕ್ಷಮಾಗುಣದಲ್ಲಿ ಭೂಮಿಯಂತೆಯೂ ಎಂದು ಹೇಳಿದ್ದಾನೆ.
ಇದೇ ಶಾಸನದ ೭ನೇ ಸಾಲಿನಲ್ಲಿ "ಜ್ಯೇಷ್ಟ ಶ್ರೇಷ್ಟ ಗುಣ ಸಮುದಯೋದಿತ ಪುರುರಣ ಪರಾಕ್ರಮಾಂಕ ಪ್ರಿಯಃ" ಎಂದು ಬರೆಯುತ್ತಾನೆ. ಇದು ರಾಮಾಯಣದ ಬಾಲಕಾಂಡದ ೧೯ನೇ ಶ್ಲೋಕದಲ್ಲಿ
ತಮೇವಂಗುಣಸಂಪನ್ನಂ ರಾಮಂ ಸತ್ಯಪರಾಕ್ರಮಮ್ |
 ಜ್ಯೇಷ್ಠಂ ಶ್ರೇಷ್ಠಗುಣೈರ್ಯುಕ್ತಂ ಪ್ರಿಯಂ ದಶರಥಃ ಸುತಮ್ || ೧೯ ||
ಇಲ್ಲಿಯೂ ಸಹ ಶ್ಲೋಕದ ಎರಡನೇ ಚರಣದ ಸಾಲನ್ನು ಸ್ವಲ್ಪ ಪರಿವರ್ತಿಸಿಕೊಂಡಿರುವುದು ಕಂಡು ಬರುತ್ತದೆ.
ಅಂದರೆ ಶಾಸನ ಕವಿ ಪುರಾಣವನ್ನು ಸಮಗ್ರವಾಗಿ ಅಧ್ಯಯನ ಮಾಡಿ ರಾಮಾಯಣದಂತಹ ಕೃತಿಯಲ್ಲಿನ ಶ್ಲೋಕವೊಂದನ್ನು ಉದಾಹರಿಸಲು ಸಮರ್ಥನಿದ್ದ. ಹಾಗೆಯೇ ಕಾಳಿದಾಸಾದಿಗಳ ಕಾವ್ಯವನ್ನು ಬಲ್ಲವನಾಗಿದ್ದ. ಈತನ ನಂತರ ಬಂದ ಇವನಿಗಿಂತಲೂ ಸಶಕ್ತ ಪ್ರಕಾಂಡ ವಿದ್ವಾಂಸ ರವಿಕೀರ್ತಿ.
ಆದರೆ ಈ ಶಾಸನ ಕವಿಯು ಸಂಸ್ಕೃತದಲ್ಲಿ ಸಾಮ್ರ್ಥ್ಯ ತೋರಿಸಿದ್ದರು ಶಾಸನಾಂತ್ಯದಲ್ಲಿ ಕನ್ನಡದಲ್ಲಿ ಕನ್ನಡಪ್ರೇಮ ಮೆರೆದು ತಾನು ಕನ್ನಡಿಗನೆನ್ನುವುದನ್ನು ತೋರಿಸಲು ತನ್ನ ಹೆಸರನ್ನು ಕನ್ನಡದಲ್ಲಿಯೇ ಬರೆದಿದ್ದಾನೆ. “ದಾಟ ಆನ ಕುಟ್ಟಿದ ಪೂ ಕಮ್ಬ” ಎಂದು ಬರೆದಿದ್ದಾನೆ.


Saturday 27 January 2018

ಪದ್ಮಾವತಿ - ಮೇವಾಡದ ನರೇಂದ್ರಮಿಶ್ರರ "ಪದ್ಮಿನಿ ಗೋರಾಬಾದಲ್"

ಪದ್ಮಾವತಿಯ ಕಥೆಯನ್ನು ಕೇಳಬೇಕಿದ್ದರೆ ಮೊದಲು ಇದನ್ನೊಮ್ಮೆ ಗಮನಿಸಬೇಕು. ಅಂದಿನ ರಾಜಕೀಯ ಸಾಮಾಜಿಕ ಬದುಕು ಹೇಗಿತ್ತು ಎನ್ನುವುದು ಬಹಳ ಮುಖ್ಯವಾಗುತ್ತದೆ.
ಸುಮಾರು 1296-1316 ರ ವರೆಗೆ ದೆಹಲಿಯನ್ನಾಳಿದ ಅಸಹನೀಯ ಕ್ರೂರಿ ಅಲ್ಲಾವುದ್ದೀನ್ ಖಿಲ್ಜಿ. ಜಲಾಲುದ್ದೀನ್ ಖಿಲ್ಜಿಯ ಅಳಿಯ ಮತ್ತು ಆತನ ಉತ್ತರಾಧಿಕಾರಿ. ಈತ ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಮತಾಂಧ, ಕಾಮಾಂಧನಾಗಿದ್ದ. ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ. ದಕ್ಷಿಣದ ಹಿಂದೂ ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ ಎಂದು ತಿಳಿದು ಬರುತ್ತದೆಇವನ ಇಪ್ಪತ್ತು ವರ್ಷಗಳ ಆಳ್ವಿಕೆ ಭಯೋತ್ಪಾದನೆಯ ರಕ್ತಪಾತದ ಕಾಲವಾಗಿತ್ತು. ಮಹಾತ್ತ್ವಾಕಾಂಕ್ಷಿಯಾದ ಅಲ್ಲಾವುದ್ದೀನನಿಗೆ ಒಂದು ಹೊಸ ಮತವನ್ನು ಸ್ಥಾಪಿಸಬೇಕೆಂಬ ಹಾಗೂ ಅಲೆಕ್ಸಾಂಡರನಂತೆ ಪ್ರಪಂಚವನ್ನೇ ಗೆಲ್ಲಬೇಕೆಂಬ ಆಕಾಂಕ್ಷೆಗಳು ಹುಟ್ಟಿದವು, ಆಗ ಅಲ್ಲಾ ಉಲ್ ಮುಲ್ಕ್ ಎಂಬ ತನ್ನ ಆಪ್ತ ಖಾಜಿಯ ಕೆಟ್ಟ ಸಲಹೆಯಂತೆ ಈ ಎರಡು ಅಭಿಲಾಷೆಗಳನ್ನೂ ಕೈಬಿಟ್ಟು ಹಿಂದೂಸ್ಥಾನವನ್ನೆಲ್ಲ ಜಯಿಸಲುದ್ಯುಕ್ತನಾದ. 1305ರ ವೇಳೆಗೆ ಇಡೀ ಉತ್ತರ ಹಿಂದೂಸ್ಥಾನದಲ್ಲಿ ಖಿಲ್ಜಿ ಸಾಮ್ರಾಜ್ಯ ಏರ್ಪಟ್ಟಿತು. ಅನಂತರ ಅಲ್ಲಾವುದ್ದೀನ್ ರಾಜಕೀಯ ಮತ್ತು ಆರ್ಥಿಕ ಲೋಭದಿಂದ ದಕ್ಷಿಣದ ಕಡೆಗೆ ತನ್ನ ಗಮನ ಹರಿಸಿದ. ದಕ್ಷಿಣ ರಾಜ್ಯಗಳ ಆಕ್ರಮಣಕ್ಕೆ ತನ್ನ ಆಪ್ತ ಗುಲಾಮನಾದ ಮಲಿಕ್ ಕಾಫರ್ನನ್ನು ನೇಮಿಸಿದ. ಈತ ತನ್ನ ಮೊದಲ ದಾಳಿಯಲ್ಲಿ ರಾಜ ರಾಮಚಂದ್ರ ಕ್ರಮವಾಗಿ ಸುಳ್ಳು ನೆಪದ ಮೇಲೆ ದೇವಗಿರಿಯನ್ನು ಮುತ್ತಿ ಕೊಳ್ಳೆ ಹೊಡೆದ. ನಂತರದ ದಂಡಯಾತ್ರೆಯಲ್ಲಿ ವಾರಂಗಲ್ಲಿನ ಪ್ರತಾಪರುದ್ರನನ್ನು ಸೋಲಿಸಿದ. 1313ರಲ್ಲಿ ಹೊಯ್ಸಳ 3ನೆಯ ವೀರಬಲ್ಲಾಳನನ್ನು ಸೋಲಿಸಿ ದೋರಸಮುದ್ರವನ್ನು ಕೊಳ್ಳೆ ಹೊಡೆದ. ಮಧುರೆ ಹಾಗೂ ರಾಮೇಶ್ವರದವರೆಗೂ ದಂಡೆತ್ತಿಹೋಗಿ ಪಾಂಡ್ಯರನ್ನು ಸೋಲಿಸಿ ವಿಶೇಷವಾದ ಐಶ್ವರ್ಯವನ್ನು ದೋಚಿದ. ಈ ದಂಡಯಾತ್ರೆಗಳಿಂದ ಅದೆಷ್ಟೋ ಮಂದಿ ಮಡಿದರು, ಅನೇಕ ಪಟ್ಟಣಗಳು ಹಾಗೂ ದೇವಾಲಯಗಳು ನಾಶವಾದವು. ಅಪಾರ ಸಂಪತ್ತು ಸುಲ್ತಾನನ ವಶವಾಯಿತು. ಹಿಂದೂಗಳು ದಂಗೆಯೇಳಬಹುದೆಂಬ ಭೀತಿಯಿಂದ ಅವರ ಮೇಲೆ ಇಲ್ಲ ಸಲ್ಲದ ಅಪಾದನೆ ಹೊರಿಸಿ ಹಿಂಸಿಸಿದ. ಅಲ್ಲದೇ ತೆರಲಸಾಧ್ಯವಾದ ತೆರಿಗೆಗಳನ್ನು ವಿಧಿಸಿದ. ಮಹಮ್ಮದೀಯರಲ್ಲಿಯೇ ಆಡಳಿತ ವಿರುದ್ಧ ಅಸಮಾಧಾನವೂ ಹಿಂದೂಗಳಲ್ಲಿ ಕಡುಬಡತನ ಮತ್ತು ಅಸಹಾಯಕತೆಯ ನೋವು ಅಂದಿನ ಸಾಮಾಜಿಕ ಸ್ಥಿತಿಯ ನೈಜ ಪ್ರತಿಬಿಂಬಗಳಾಗಿದ್ದುವು. ಕ್ರೂರಿಯಾದ ಅಲ್ಲಾವುದ್ದೀನನ ಅಂತ್ಯ ದುಃಖಮಯವಾಗಿತ್ತು. ಅತಿಭೋಗದಿಂದ ಅವನ ಆರೋಗ್ಯ ಕೆಟ್ಟಿತ್ತು. ಸಲಿಂಗ ಕಾಮಿಯಾದ ಅಲ್ಲಾವುದ್ದೀನ ಇಹದಲ್ಲಿಯೇ ನರಕವನ್ನನುಭವಿಸಿದ. ಅರಮನೆಯಲ್ಲಿಯೇ ಆಂತರಿಕಕಲಹಗಳುದ್ಭವಿಸಿ ದಂಗೆಗಳಾದವು. ಕೊನೆಗೆ ಮಲಿಕ್ ಕಾರ್ ಅಲ್ಲಾವುದ್ದೀನನನ್ನು ಕೊಲೆಮಾಡಿ ಸಿಂಹಾಸನವೇರಿದ. ಆದರೆ ಒಂದು ತಿಂಗಳಲ್ಲೇ ಕಾರನ ಕೊಲೆಯಾಗಿ ಅಲ್ಲಾವುದ್ದೀನನ ಮಗ ಕುತುಬ್ ಉದ್ದೀನ್ 1316ರಲ್ಲಿ ಸುಲ್ತಾನನಾದ.
     ಸಿಂಹಳದ ರಾಜಾ ಗಂಧರ್ವಸೇನನಿಗೆ ಮಗಳಾಗಿದ್ದವಳು ಪದ್ಮಿನಿ ಅವಳನ್ನು ಪದ್ಮಾವತಿ ಎಂದೂ ಕರೆಯುತ್ತಿದ್ದರು. ಅತಿಶಯ ಸೌಂದರ್ಯದ ಖನಿ. ಆಕೆಯ ಸೌಂದರ್ಯದ ವರ್ಣನೆ ಪ್ರಪಂಚದೆಲ್ಲೆಡೆ ಪ್ರಚಾರದಲ್ಲಿತ್ತು. ಪದ್ಮಾವತಿಯ ಹತ್ತಿರ 'ಹಿರಾಮಣಿ' ಎನ್ನುವ ಮಾತನಾಡುವ ಗಿಳಿಯಿತ್ತಂತೆ. ಅದು ಹೇಗೋ ಒಮ್ಮೆ ಬೇಟೆಗಾರನೊಬ್ಬನ ಬಲೆಗೆ ಬಿದ್ದ ಗಿಳಿ ಹೇಗೋ ಮೇದಾಪತ್ ಅಥವಾ ಮೇವಾಡದ ರತ್ನಸಿಂಹನೆನ್ನುವ ರಾಜನ ಬಳಿ ಬಂದು ಸೇರಿತು.ರಾವಲ್ ಶಾಖೆಯ ಗುಹಿಲ ವಂಶದ ಚಿತ್ರಕೂಟವನ್ನಾಳಿದ ಅರಸು. ಇವನಿಗೆ ಈಗಾಗಲೆ ನಾಗಮತಿ ಎನ್ನುವ ರಾಜಕುಮಾರಿಯೊಡನೆ ಮದುವೆಯಾಗಿತ್ತು. ಗಿಳಿಯ ಬಾಯಿಂದ ಕೇಳಿದ ಪದ್ಮಾವತಿಯ ಸೌಂದರ್ಯದ ಕುರಿತಾದ ಸ್ತುತಿಗೆ ಮಾರುಹೋದ ರತ್ನಸಿಂಹ ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ತನ್ನ ಹದಿನಾರು ಸಾವಿರ ಸೈನಿಕರೊಡನೆ ಸಮುದ್ರದಾಟಿ ವೇಷಾಂತರದಿಂದ ಸಿಂಹಳಕ್ಕೆ ಬಂದ ರತ್ನಸಿಂಹ ಪದ್ಮಾವತಿಯ ಭೇಟಿಗಾಗಿ ಅದೆಷ್ಟೋ ದಿನ ಕಾಯುತ್ತಾನೆ. ಅವಳ ಭೇಟಿಯಾಗದೇ ಹತಾನಾಗಿದ್ದ. ಆಗ ಒಂದು ದಿನ ಅವನ ಕನಸಿನಲ್ಲಿ ಶಿವಪಾರ್ವತಿಯರು ಕಾಣಿಸಿಕೊಂಡು "ಸಿಂಹಳವನ್ನು ಯುದ್ಧದಲ್ಲಿ ಗೆದ್ದು ಪದ್ಮಾವತಿಯನ್ನು ತನ್ನವಳಾಗಿಸಿ"ಕೊಳ್ಳುವಂತೆ ಸಂದೇಶಕೊಟ್ಟರಂತೆ. ಯುದ್ಧದಲ್ಲಿ ಸಿಂಹಳದ ದೊರೆ ಗಂಧರ್ವಸೇನನಿಗೆ ರತ್ನಸಿಂಹನ ಪರಾಕ್ರಮದ ಅರಿವಾಯ್ತು. ಅಂಥ ವೀರನ ಮನೆಗೆ ತನ್ನ ಮಗಳು ಸೇರುವುದು ಭಾಗ್ಯವೆಂದುಕೊಂಡು ಸಂತೋಷದಿಂದ ಪದ್ಮಾವತಿಯನ್ನು ಧಾರೆಯೆರೆದುಕೊಟ್ಟ. ಮಾತ್ರವಲ್ಲ ಅವಳ ಹದಿನಾರು ಸಾವಿರ ಗೆಳತಿಯರನ್ನು ರತ್ನಸಿಂಹನ ಜೊತೆ ಬಂದ ಸೈನಿಕರ ಜೊತೆ ಮದುವೆ ಮಾಡಿಸಿದ. ಮೇವಾಡಕ್ಕೆ ತಿರುಗಿ ಬಂದ ರತ್ನಸಿಂಹ ತನ್ನಿಬ್ಬರು ರಾಣಿಯರಾದ ನಾಗಮತಿ ಹಾಗೂ ಪದ್ಮಾವತಿಯರೊಡನೆ ಸುಖವಾಗಿ ಸಂಸಾರ ಮಾಡಿದ.
       ಮೇವಾಡದ ರತ್ನಸಿಂಹನ ಆಸ್ಥಾನದಲ್ಲಿ ರಾಘವ ಚೈತನ್ಯನೆಂಬ ಮಂತ್ರವಾದಿಯೊಬ್ಬ ಇದ್ದ. ಒಮ್ಮೆ ಅದ್ಯಾಕೋ ವಾಮಾಚಾರದಲ್ಲಿ ಪಾಲ್ಗೊಂಡ ರಾಘವಚೈತನ್ಯನನ್ನು ರತ್ನಸಿಂಹ ಗಡಿಪಾರು ಮಾಡುತ್ತಾನೆ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ರಾಘವಚೈತನ್ಯ ನೇರವಾಗಿ ದೆಹಲಿಗೆ ತೆರಳಿ ಅಲ್ಲಾವುದ್ದೀನ್ ಖಿಲ್ಜಿಯ ಸ್ನೇಹ ಸಂಪಾದಿಸುತ್ತಾನೆ. ಶತ್ರುವಿನ ಶತ್ರು ಮಿತ್ರನಾಗುತ್ತಾನೆ. ರಾಣಿ ಪದ್ಮಾವತಿಯ ಸೌಂದರ್ಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ಎದುರು ಹೊಗಳಿ ಮೇವಾಡವನ್ನು ಮುತ್ತಿ ಪದ್ಮಿನಿಯನ್ನು ವಶಪಡಿಸಿಕೊಳ್ಳುವಂತೆ ಕಿವಿಯೂದುತ್ತಾನೆ. ಖಿಲ್ಜಿ ಮೊದಲೇ ಕಾಮುಕವ್ಯಾಘ್ರ. ಖಿಲ್ಜಿಗೆ ಹೆಣ್ಣು ಮತ್ತು ಗಂಡುಗಳ ವ್ಯತ್ಯಾಸವೇ ಗೊತ್ತಿರಲಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಸೇರಿ ಅವನ ಅಖಾಡಾದಲ್ಲಿದ್ದವರು ಕಡಿಮೆ ಅಂದರೂ ಎಪ್ಪತ್ತು ಸಾವಿರ ಮಂದಿ. ಅದರಲ್ಲೂ ಅವನಿಗೆ ಅತ್ಯಂತ ಪ್ರೀತಿಪಾತ್ರಳಾದವಳು, ಛೀ.... ಆದವನು ಚಾಂದರಾಮ. ಗುಜರಾತಿನ ಬಚ್ಚಾ ಬಾಝಿ ಮಾರ್ಕೇಟಿನಲ್ಲಿ ಚಾಂದರಾಮನನ್ನು ನೋಡಿದ ಕೂಡಲೆ ಖಿಲ್ಜಿಗೆ ಪ್ರೇಮಂಕುರವಾಗುತ್ತದೆ. (ಬಚ್ಚಾಬಾಝಿ ಎಂಬುದು ಅಫ್ಘಾನಿಸ್ತಾನದಿಂದ ಭಾರತದ ಒಳಪ್ರವೇಶಿಸಿದ್ದು. ದಾಳಿಕಾರರು ತಮ್ಮ ದಾಹ ತೀರಿಸಿಕೊಳ್ಳಲು ಪುರುಷ ನರ್ತಕರು ಹಾಗೂ ಗಂಡುಮಕ್ಕಳನ್ನು ಸ್ತ್ರೀವೇಷ ತೊಡಿಸಿ ತಮ್ಮೊಡನೆ ಕರೆತರುತ್ತಿದ್ದರು. ಇದು ಮುಂದೆ ಮುಘಲರ ಕಾಲದಲ್ಲಿ ದೊಡ್ಡ ದಂಧೆಯಾಗಿಯೇ ಬೆಳೆಯಿತು. ಈಗಲೂ ಸಹ ಅಪ್ರಾಪ್ತ ಮಕ್ಕಳನ್ನು ಲೈಂಗಿಕಪರಿವರ್ತನೆ ಮಾಡಿಕೊಂಡು ನೇಮಿಸಿಕೊಳ್ಳುವ ಪದ್ಧತಿ ಅಪಘಾನಿಸ್ಥಾನದಂತಹ ಪ್ರದೇಶದಲ್ಲಿದೆ). ಚಾಂದರಾಮ್ ನನ್ನು ಸಾವಿರ ವರಹಗಳನ್ನು ಕೊಟ್ಟು ಖರೀದಿಸಿದ್ದರಿಂದ ಇವನಿಗೆ "ಹಜಾರಿ ದಿನಾರಿ" ಎಂಬ ಹೆಸರು ಅಂಟಿಕೊಂಡಿತು. ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿದ ಖಿಲ್ಜಿ ಅವನನ್ನು ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾವುದ್ದೀನನಿಗೆ ಈತನ ಮೇಲೆ ಪ್ರೀತಿ ಎಷ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್.
ಅಲ್ಲಾದ್ದೀನ್ ಖಿಲ್ಜಿಗೆ ಪದ್ಮಿನಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂದು ಮೇವಾಡದ ರಾಜ ರತ್ನಸಿಂಹನಿಗೆ ಸಂದೇಶ ಕಳುಹಿಸಿದ. ರತ್ನಸಿಂಹನಿಗೆ ಈಗ ನಿಜವಾಗಲೂ ಸಂದಿಗ್ಧ. ದೆಹಲಿಯ ಸುಲ್ತಾನನಿಗೆ ಹೆಂಡತಿಯನ್ನು ತೋರಿಸುವುದಕ್ಕೆ ಒಪ್ಪಿಕೊಳ್ಳುವುದು ಹೇಗೆ? ಒಪ್ಪಿಕೊಳ್ಳದಿದ್ದರೆ ಸುಲ್ತಾನ ಸುಮ್ಮನೇ ಬಿಟ್ಟಾನಾ? ಹೀಗೆ ಚಿಂತಾಕ್ರಾಂತನಾದ. ಕೊನೆಗೆ ಒಂದು ಉಪಾಯ ಮಾಡಿದ ಕೊನೆಗೆ ಕನ್ನಡಿಯಲ್ಲಿ ಅವಳ ಮುಖ ತೋರಿಸಲು ಒಪ್ಪಿರುವುದಾಗಿ ತಿಳಿಸಿದ. ಉತ್ತರ ಸ್ವೀಕರಿಸಿದವನೇ ಖಿಲ್ಜಿಯು ಮೇವಾಡಕ್ಕೆ ಬಂದ. ಅಲ್ಲಿ ಕನ್ನಡಿಯಲ್ಲಿ ಪದ್ಮಿನಿಯ ಮುಖ ನೋಡಿದವನೇ ಹೌಹಾರಿಬಿದ್ದ. ತನ್ನ ಜನಾನಾದಲ್ಲಿದ್ದ ಎಲ್ಲರನ್ನು ಒಟ್ಟುಸೇರಿಸಿದರೂ ಇವಳಂಥ ಒಬ್ಬ ಸುಂದರಿ ಹುಟ್ಟಲಾರಳೆಂದು ಅವನಿಗೆ ಮನವರಿಕೆಯಾಯ್ತು. ಹೇಗಾದರೂ ಮಾಡಿ ಪದ್ಮಿನಿಯನ್ನು, ಮೇವಾಡವನ್ನು ವಶಪಡಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದವನೇ ರತ್ನಸಿಂಹನನ್ನು ಹೊಗಳಿ ದೆಹಲಿಗೆ ಮರುಪ್ರಯಾಣ ಬೆಳೆಸುವುದಾಗಿ ತಿಳಿಸಿದ. ರಾಜಮರ್ಯಾದೆಯಂತೆ ಅವನನ್ನು ಕೋಟೆಯ ದ್ವಾರದವರೆಗೆ ಬೀಳ್ಕೊಡಲು ಬಂದ ರತ್ನಸಿಂಹನನ್ನು ಮೊದಲೇ ತಯಾರಿದ್ದ ಖಿಲ್ಜಿಯ ಸೈನಿಕರು ಮುಗಿಬಿದ್ದು ಬಂಧಿಸಿದರು.
ಮೇವಾಡದ ರಾಜಕವಿ ಪಂಡಿತ ನರೇಂದ್ರ ಮಿಶ್ರರ "ಪದ್ಮಿನಿ ಗೋರಾಬಾದಲ್" ಎಂಬ ವೀರರಸದ ಕವಿತೆ ಆರಂಭವಾಗುವುದು ಇಲ್ಲಿಂದ.
ದೋಹರಾತಾ ಹೂಂ ಸುನೋ ರಕ್ತ ಸೇ ಲಿಖೀ ಹುಈ ಕುರಬಾನೀ |
ಜಿಸಕೇ ಕಾರನ್ ಮಿಟ್ಟೀ ಭೀ ಚನ್ದನ ಹೈ ರಾಜಸ್ಥಾನೀ ||
ರಾವಲ್ ರತ್ನ ಸಿಂಹ ಕೋ ಛಲ್ ಸೇ ಕೈದ್ ಕಿಯಾ ಖಿಲ್ಜೀ ನೇ
ಕಾಲ್ ಗಈ ಮಿತ್ರೋಂ ಸೇ ಮಿಲ್ಕರ್ ದಾಗ್ ಕಿಯಾ ಖಿಲ್ಜೀ ನೇ
ಜಿಸ್ಕೋ ಸುನ್ಕರ್ ಶಕ್ತಿ ಶೌರ್ಯ್ ರ್ ಫಿರ್ ಅಂಧಿಯಾರಾ ಛಾಯಾ
ಸ್ ದಿನ್ ಕೇ ಭೀತರ್ ನ ಪದ್ಮಿನೀ ಕಾ ಡೋಲಾ ಯದಿ ಆಯಾ
ಯದಿ ನಾ ರೂಪ್ ಕೀ ರಾನೀ ಕೋ ತುಮ್ನೇ ದಿಲ್ಲೀ ಪಹುಂಚಾಯಾ
ತೋ ಫಿರ್ ರಾಣಾ ರತ್ನಸಿಂಹ್ ಕಾ ಶೀಶ್ ಕಟಾ ಪಾಓಗೇ
ಶಾಹೀ ಶರ್ತ್ ನಾ ಮಾನೀ ತೋ ಪೀಛೇ ಪಛತಾಓಗೇ
ಇನ್ನು ಹತ್ತು ದಿನಗಳಲ್ಲಿ ಪದ್ಮಿನಿ ತನ್ನವಳಾಗದಿದ್ದರೆ ರತ್ನಸಿಂಹ ತಲೆಕಡಿದು ಕಳುಹಿಸುವುದಾಗಿ ಖಿಲ್ಜಿ ಬೆದರಿಕೆ ಹಾಕಿದ.
ಇತ್ತ ಪದ್ಮಿನಿ ಮೇವಾಡದ ಸೇನಾಪತಿ ಗೋರಾನ ಜೊತೆ ಒಂದು ತಂತ್ರ ರಚಿಸಿದಳು. ಸೈನಿಕ ಪಹರೆ ಇಲ್ಲದೆ ತನ್ನ ಪತಿಯನ್ನು ಸಂಧಿಸಲು ಅವಕಾಶ ನೀಡಿದರೆ ತಾನು ತನ್ನ ಏಳುನೂರು ಸಖಿಯರೊಡನೆ ದಿಲ್ಲಿಗೆ ಬಂದು ನಿನ್ನವಳಾಗುವುದಾಗಿ ತಿಳಿಸಿದಳು. ಒಬ್ಬಳ ಜೊತೆ ಇನ್ನೂ ಏಳುನೂರು ಸಿಕ್ಕರೆ ಲಾಭವೇ ತಾನೆ ಎಂದು ಖಿಲ್ಜಿ ಮರುಮಾತಾಡದೇ ಒಪ್ಪಿಕೊಂಡ.
       ಆದರೆ ನಡೆದಿದ್ದೇ ಬೇರೆ. ಏಳುನೂರು ಪಲ್ಲಕಿಗಳಲ್ಲಿ ಪ್ರತಿ ಪಲ್ಲಕ್ಕಿಯಲ್ಲೂ ವೇಷಮರೆಸಿಕೊಂಡ ಸಶಸ್ತ್ರ ಸೈನಿಕರು ಜೊತೆಗೆ ನಾಲ್ಕು ಹೊರುವವರು ಒಟ್ಟೂ ಮೂರೂವರೆ ಸಾವಿರ ಮಂದಿ ಗೋರಾಬಾದಲರ ನೇತೃತ್ವದಲಿ ದಿಲ್ಲಿ ತಲುಪಿದರು. ಕೊಟ್ಟ ಮಾತಿನಂತೆ ಖಿಲ್ಜಿ ಪಲ್ಲಕ್ಕಿಯಲ್ಲಿದ್ದ ಪದ್ಮಿನಿಗೆ ರತ್ನಸಿಂಹನನ್ನು ಭೇಟಿಯಾಗಲು ಅವಕಾಶ ಕೊಟ್ಟ. ಆದರೆ ಪಲ್ಲಕಿಯಲ್ಲಿ ಅವಳಿದ್ದರೆ ತಾನೆ. ಸೈನಿಕರು ರಾಣನನ್ನು ಸೆರೆಯಿಂದ ಬಿಡಿಸಿ ಮೇವಾಡದತ್ತ ಕರೆದೊಯ್ದರು. ಸುದ್ದಿ ಖಿಲ್ಜಿಯ ದಂಡನಾಯಕ ಜಾಫರನಿಗೆ ತಲುಪಿತು. ಆತ ಸೈನ್ಯ ಸಜ್ಜುಗೊಳಿಸಿ ರತ್ನಸಿಂಹನ ಬೆನ್ನಟ್ಟಿದ್ದ. ಆದರೆ ಅವರ ಎದುರಾದದ್ದು ರಾಜಸ್ಥಾನ ಕಂಡ ಎರಡು ಅಪ್ರತಿಮ ವೀರಮಣಿಗಳಾದ ಗೋರಾಬಾದಲರು.
ಗೋರಾಬಾದಲರ ಶೌರ್ಯದೆದುರು ಖಿಲ್ಜಿಯ ಖಡ್ಗಗಳು ಕತ್ತರಿಸಿ ಬಿದ್ದವು. ಅವರನ್ನು ತಡೆವರಿಲ್ಲದೆ ದೆಹಲಿಯ ಕೋಟೆಗಳು ತತ್ತರಿಸಿ ಬಿದ್ದವು. ಲಕ್ಷ ಲಕ್ಷ ಸೈನಿಕರು ಗೋರಾಬಾದಲರ ಕತ್ತಿಗೆ ಸಿಕ್ಕು ತರಿದು ಹೋದರು.
ಎದುರಿಂದ ಗೆಲ್ಲಲಾಗದೇ ಹಿಂದಿನಿಂದ ಗೋರಾನ ಕಾಲಿಗೆ ಕತ್ತಿ ಬೀಸಿದನಂತೆ ಜಾಫರ್. ಕೆಳಗೆ ಬಿದ್ದವನ ಕುತ್ತಿಗೆಗೆ ಪ್ರಹಾರ ಮಾಡಿದ.
ಎಂಥ ಅದ್ಭುತ ರೂಪಕವನ್ನು ಬಳಸುತ್ತಾರೆ ನರೇಂದ್ರಮಿಶ್ರರಿಲ್ಲಿ. ಕುತ್ತಿಗೆಯಿಲ್ಲದ ಗೋರಾನ ದೇಹ ವೈರಿಗಳ ಮೇಲೆ ಮುಗಿಬಿತ್ತಂತೆ. ಮುಂದಿನ ಹೊಡೆತಕ್ಕೆ ಜಾಫರ ನಿರ್ಜೀವನಾಗಿದ್ದ.
ಚಿಕ್ಕಪ್ಪ ಗೋರಾನ ದೇಹ ಆರೀತಿ ಹೋರಾಡುವುದನ್ನು ನೋಡಿ ಬಾದಲ್ ತಾನೇನು ಕಡಿಮೆ ಎಂದು ಮಹಾರುದ್ರನಂತೆ ದೆಹಲಿಯ ಸೈನಿಕರ ಮೇಲೆರಗಿದ.
ಎಂಥ ಅಪ್ರತಿಮ ವರ್ಣನೆ. ಪ್ರಳಯಭಯಂಕರ ಜ್ವಾಲಾಮುಖಿ ಬಾಯ್ದೆರೆದಂತೆ, ಭೀಕರ ಚಂಡಮಾರುತ ಅಪ್ಪಳಿಸಿದಂತೆ ಬಾದಲ್ ದೆಹಲಿಯ ಸೈನಿಕರ ಮೇಲೆ ಮುಗಿಬಿದ್ದ. ಹೊಟ್ಟೆಬಗೆದು ಕರುಳು ಹೊರಬಂದಿದ್ದರೂ ತನ್ನ ಪಗಡಿಯನ್ನು ಬಿಚ್ಚಿ ಹೊಟ್ಟೆಗೆ ಕಟ್ಟಿ ಹೋರಾಡುತ್ತಿದ್ದಾನೆ ಬಾದಲ್. ಆದರೆ......
ಕೊನೆಗೂ ಆಗುವುದೇ ಆಯಿತು. ತಮ್ಮ ಕಣಕಣದ ರಕ್ತವನ್ನೂ ಯುದ್ಧಭೂಮಿಯಲ್ಲಿ ಬಿತ್ತಿದ ಗೋರಾಬಾದಲರು ಭಾರತಮಾತೆಯ ಮಣ್ಣಿನಲ್ಲಿ ಒಂದಾಗಿ ಹೋದರು. ಅತ್ತ ರತ್ನಸಿಂಹ ಸುರಕ್ಷಿತವಾಗಿ ಮೇವಾಡ ತಲುಪಿದ್ದ.
       ಈ ಸೋಲಿನ ಅವಮಾನದಿಂದ  ಚೇತರಿಸಿಕೊಳ್ಳುವುದು ಅಲ್ಲಾವುದ್ದೀನನಿಗೆ ಬಹಳ ಕಷ್ಟವಾಯಿತು. ಮುಂದಿನ ವರ್ಷ ಆತ ಭಾರೀ ಸೈನ್ಯದೊಡನೆ ಚಿತ್ತೂರಿಗೆ ಬಂದು ಘನಘೋರವಾದ ಧಾಳಿ ಮಾಡಿದ. ಇತರೇ ರಜಪೂತರ ಸಹಾಯ ಪಡೆಯಲು ರತ್ನಸಿಂಹ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಿತ್ತೂರು ಏಳು ತಿಂಗಳುಗಳ ಕಾಲ ಏಕಾಂಗಿಯಾಗಿ ಹೋರಾಡಬೇಕಾಯಿತು. ಕೋಟೆಯಲ್ಲಿದ್ದ ಆಹಾರದ ದಾಸ್ತಾನು ಖಾಲಿಯಾಗಿತ್ತು.  ಇನ್ನು ಉಳಿಯುವುದು ಕಷ್ಟವೆಂದು ಕಂಡುಬಂದಾಗ ರತ್ನಸಿಂಹ ಮತ್ತವನ ಸೈನಿಕರು ಕೋಟೆಯ ಬಾಗಿಲನ್ನು ತೆರೆದು, ಸುಲ್ತಾನನ ಸೈನ್ಯದ ಮೇಲೆ ಬಿದ್ದು ಪ್ರಾಣವಿರುವವರೆಗೂ  ಹೋರಾಡಿ ಹುತಾತ್ಮರಾದರು.
       ಇತ್ತ ಚಿತ್ರಕೂಟ(ಚಿತ್ತೋರ್‌ಗಢ್) ಕೋಟೆಯೊಳಗೆ ಪದ್ಮಿನಿ ಮತ್ತವಳ ಸಖಿಯರು ವಿಶಾಲವಾದ ಅಗ್ನಿಕುಂಡವನ್ನು ಸಿದ್ಧಪಡಿಸಿ ಅದರಲ್ಲಿ ಧುಮುಕಿ ಜೋಹರ್ ಆಚರಿಸಿದರು.ಕೋಟೆ ಗೆದ್ದ ವಿಜಯೋತ್ಸಾಹದಲ್ಲಿ ಒಳಬಂದ ಖಿಲ್ಜಿಗೆ ಕಂಡಿದ್ದು ಬೂದಿಗಳ ರಾಶಿಯಷ್ಟೆ. ತಮ್ಮ ಆತ್ಮಬಲ, ಧರ್ಮಬಲಗಳ ಅಪ್ರತಿಮ ಉಪಮೆಯಾಗಿ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿ ಹೋದಳು.

       ಮೇವಾಡದ ಚಿತ್ತೋರ್‌ಗಢ್ ಕೋಟೆ ಮೂರು ಬಾರಿ ಜೋಹರ್ ಅನ್ನು ಕಂಡಿದೆ. ಖಿಲ್ಜಿಯ ಆಕ್ರಮಣವಾದಾಗ ಪದ್ಮಿನಿಯು ಆತ್ಮಾರ್ಪಣೆ ಮಾಡಿಕೊಂಡದ್ದು ಮೊದಲ ಬಾರಿ. ರಾಣಾ ಸಂಗನ ಕಾಲದಲ್ಲಿ ಬಹದೂರ್ ಷಾ ಜಾಫರನ ಆಕ್ರಮಣವಾದಾಗ ರಾಣಿ ಕರ್ಣಾವತಿಯದ್ದು ಎರಡನೇ ಬಾರಿ ಹಾಗೂ ರಾಣಾ ಉದಯ ಸಿಂಗನು ಅಕ್ಬರನೆದುರು ಸೋತಾಗ ಮೂರನೇ ಬಾರಿ .