Search This Blog

Wednesday 31 August 2016

ಸ್ವಹಸ್ತೋಯಂ - ಭೋಜರಾಜಃ

ಆರಂಭ ಕಾಲೀನ ಸಹಸ್ರಮಾನದಲ್ಲಿ ಅಂದರೆ ಹತ್ತನೆ ಶತಮಾನಕ್ಕೂ ಮೊದಲು ಕಾಳಿದಾಸನಿಗೆ ಅನೇಕ ಅಭಿಮಾನಿ ಕವಿಗಳಿದ್ದದ್ದು ಅಲ್ಲಲ್ಲಿ ಕಂಡು ಬರುತ್ತವೆ. ಅನೇಕ ಶಿಲ್ಪಿಗಳು, ಅನೇಕ ಕಲಾಕಾರರು ಮತ್ತು ಕವಿಗಳು ಕಾಳಿದಾಸನನ್ನು ಒಂದಲ್ಲ ಒಂದು ರೀತಿಉಯಿಂದ ಹೊಗಳಿದ್ದಾರೆ ಮತ್ತು ಅಭಿಮಾನದಿಂದ ತಮ್ಮನ್ನೂ ಸಹ ಕಾಳಿದಾಸ ಎಂದೇ ಹೆಸರಿಸಿಕೊಂಡಿದ್ದಾರೆ. ಇನ್ನು ಕೆಲವರು ತಾವು ಕಾಳಿದಾಸನಿಗೆ ಸಮನಾದ ಕವಿಗಳು ಎಂದಿದ್ದರೆ ಮತ್ತೆ ಕೆಲವರು ಕಾಳಿದಾಸಕಿಂತಲೂ ತಾವು ಕಡಿಮೆಯವರಲ್ಲ ಅವನಿಗಿಂತ ಶ್ರೇಷ್ಠರು ಎಂದವರೂ ಇದ್ದಾರೆ. ಅನೇಕ ರಾಜರುಗಳು ತಮ್ಮ ಶಾಸನಗಳಲ್ಲಿ ರಘುವಂಶದ ಮಂಗಲಾಚರಣೆಯನ್ನು ತಾವು ಅಳವಡಿಸಿಕೊಂಡದ್ದು ಕಂಡು ಬರುತ್ತದೆ. ಹೀಗೆ ಕಾಳಿದಾಸ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಜನಮಾನಸದಲ್ಲಿದ್ದ. ಸಾಮಾನ್ಯ್ ೮ನೇ ಶ್ಡತಮಾನದ ನಂತರದ ಅನೇಕ ಶಾಸನ ಸಾಹಿತ್ಯದಲ್ಲಿ ಹರ್ಷ ಚರಿತದ ಸಾಲುಗಳು ಬಂದಿದ್ದರೂ ಸಹ ಕವಿ ಗೌಣವಾಗಿಯೇ ಉಳಿದ. ಕಾಳಿದಾಸನ ಕಾಲಕ್ಕೆ ಮತ್ತು ಅವನ ನಂತರದ ಸಂಸ್ಕೃತ ಸಾಹಿತ್ಯ ಒಂದು ರೀತಿಯಲ್ಲಿ ಶ್ರೀಮಂತಗೊಳ್ಳುತ್ತಾ ಹೋಯಿತು. ಪಾಣಿನೀ ಮಹರ್ಷಿಯ ಶಿಕ್ಷಾ ದಲ್ಲಿನ ವಿಧಿಗಳನ್ನು ಅಳವಡಿಸಿಕೊಂಡು ಸುಸಂಬದ್ಧವಾಗುತ್ತಾ ಸಾಗಿತು ಅನ್ನ ಬಹುದು . ಸುಂದರ ಪದರಚನೆ ಆಲಂಕಾರಿಕ ಲಕ್ಷಣಗಳನ್ನು ಹೊತ್ತು ತಂದಿತು ಅಂದರೆ ತಪ್ಪಾಗುವುದಿಲ್ಲ. ಆದರೆ ಹತ್ತನೇ ಶತಮಾನದ ತರುವಾಯ ಬಂದ ಭೋಜ ಸ್ವತಃ ಸಂಸ್ಕೃತದ ಪ್ರಕಾಂಡ ಪಂಡಿತನಾಗಿದ್ದ ಆತನ ಆಸ್ಥಾನದಲ್ಲಿಯೂ ಪರಿಣತ ಮತ್ತು ಅತ್ಯಂತ ಶ್ರೇಷ್ಠ ಕವಿಗಳಿದ್ದರು. ಆತನ ಶಾಸನಗಳನ್ನು ಗಮನಿಸುತ್ತಾ ಸಾಗಿದರೆ ವಿದ್ವಜ್ಜನ ಸಮೂಹವೇ ಇದ್ದಿರ ಬಹುದು. ಪದಗಳ ರಚನೆ, ಪದಲಾಲಿತ್ಯ, ಮತ್ತು ಶಾಸನಗಳಲ್ಲಿ ಬಳಕೆಗೊಂಡ ಶ್ಲೋಕಗಳಂತೂ ಅದೊಂದು ಅತ್ಯದ್ಭುತ ಆಸ್ಥಾನವಾಗಿರಲೇ ಬೇಕು ಅನ್ನಿಸುತ್ತದೆ. ಬಹುಭಾಷಾ ಪಾಂಡಿತ್ಯ ಹೊಂದಿದ ಭೋಜ ಎಲ್ಲಿಯೂ ಕಾಳಿದಾಸನನ್ನು ಉಲ್ಲೇಖಿಸಿದ್ದು ಕಾಣಸಿಗುವುದಿಲ್ಲ. ಆದರೂ ಇಲ್ಲಿ ಉಜ್ಜಯಿನಿಯ ಶಾಸನದಲ್ಲಿ ತನ್ನ ಹಸ್ತಗಳಿಂದಲೇ ರಚಿಸಿದ ಶಾಸನವಿದು ಎಂದು ಎರಡೆರಡು ಬಾರಿ ಪ್ರಕಟಿಸಿದ್ದಾನೆ. ಆದರೆ ನಾವು ಈಗ ಕಲ್ಪಿಸಿಕೊಳ್ಳುವ ಕಾಳಿದಾಸನೇ ಬೇರೆ ಹಿಂದೆ ಆಗಿ ಹೋಗಿದ್ದ ಕಾಳಿದಾಸನೇ ಬೇರೆ. ಅದು ಹೇಗೋ ಇಂದು ಕಲ್ಪಿತ ಘಟನೆಗಳನ್ನು ಆಧರಿಸಿದ ಕಾಳಿದಾಸ ಕಾಣ ಸಿಗುತ್ತಾನೆ.

Monday 29 August 2016

ಪಾರಿಜಾತ ಮಂಜರೀ - ಭೋಜನ ಪ್ರಹಸನ

ಅರ್ಜುನವರ್ಮನ ಈ ಶಾಸನವು ಮಧ್ಯ ಭಾರತದ ಧಾರಾನಗರದ್ದು ಇದನ್ನು ಹಿಂದೆ ಮಾಳವದ ಪರಮಾರ ರಾಜರು ಆಳುತ್ತಿದ್ದರು. ಪ್ರಾಚೀನ ನಾಗರೀ ಲಿಪಿಯಲ್ಲಿ ಈ ಶಾಸನವನ್ನು ಖಂಡರಿಸಿದ್ದರೂ ಅತ್ಯಂತ ಸುಂದರವಾದ ಅಕ್ಷರಗಳಿಂದ ಕೆತ್ತಲ್ಪಟ್ಟಿದೆ. ಈ ಭೋಜದೇವನ ಕುರಿತಾದ ಈ ಶಾಸನದಲ್ಲಿ ಭೋಜ ತಾನೇ ಶ್ರೀ ಕೃಷ್ಣ ಎನ್ನುವುದಾಗಿ ಹೋಲಿಸಿ ಕೊಂಡಿದ್ದಾನೆ. ಇದೊಂದು ಎರಡು ಅಂಕಗಳಿರುವ ಪ್ರಹಸನ ಇದರಲ್ಲಿ. ಈ ಪ್ರಹಸನದ ಕೊನೆಯ ಹಂತದಲ್ಲಿ ತಿಳಿದು ಬರುವುದು ಕಲಚೂರಿ ವಂಶದ ರಾಜಾ ಗಾಂಗೇಯನನ್ನು ಭೋಜನು ಸೋಲಿಸಿದ ವರ್ಣನೆ ಇದೆ. ಇದರಲ್ಲಿ ಸೂತ್ರಧಾರ, ನಟೀ, ಅರ್ಜುನವರ್ಮ, ವಿದಗ್ಧ, ರಾಣೀ ಸರ್ವಕಲಾ ಮತ್ತು ಅವಳ ಸೇವಕಿ ಕನಕಲೇಖಾ, ಹಾಗೂ ಕುಸುಮಾಕರ ಮತ್ತು ವಸಂತಲೀಲಾ. ಇದರ ನಾಯಕಿ ಪಾರಿಜಾತಮಂಜರಿ ಅಥವಾ ವಿಜಯ ಶ್ರೀ. ಕುಸುಮಾಕರನು ಸಂಸ್ಕೃತದಲ್ಲಿ ಮಾತನಾಡುತ್ತಾನೆ, ಉಳಿದವರು ಪ್ರಾಕೃತ ಮತ್ತು ಸೌರಸೇನಿಯಲ್ಲಿ ಮಾತನಾಡುತ್ತಾರೆ. ಈ ಶಾಸನದ ಆರಂಭದಲ್ಲಿ ಮಂಗಲಾಚರಣೆಯ ಶ್ಲೋಕ ಬಳಸದೇ ಈ ಶಾಸನಕ್ಕೆ ಎರಡು ಬಂಡೆಗಳನ್ನು ಆಯ್ದು ಕೊಂಡಿದ್ದೇನೆ ಎಂದು ಶಿಲ್ಪಿ ರಾಮದೇವನು ಹೇಳಿಕೊಳ್ಳುತ್ತಾನೆ . ಎಲ್ಲಾ ಶಾಸನಗಳ ಕ್ರಮದಂತೆ ತನ್ನ ಹೆಸರನ್ನು ಕೊನೆಗೆ ಬರೆದರೂ. ಓದುಗರು ತಿಳಿದಿರಲಿ ಎಂದು ಎರಡು ಶಾಸನ ಎಂದು ಬರೆದು ತನ್ನ ಜಾಣ್ಮೆ ಮೆರೆದಿದ್ದಾನೆ. ಈತನ ಅಕ್ಷರವಂತೂ ಇಂದಿನ ಮುದ್ರಿತ ದಾಖಲೆಗಳಿಗೆ ಕಡಿಮೆ ಇಲ್ಲ.

Friday 26 August 2016

ಯಥಾವಿಧಿ ಹುತಾಗ್ನಿನಾಂ ಯಥಾ ಕಾಮಾರ್ಚಿತಾರ್ಥಿನಾಂ - ಮಂಗಲೇಶನ ಶಾಸನದಲ್ಲಿ

ಪದವೀಂ ಕಾಲಿದಾಸಸ್ಯ ಲಲಿತಾಂ ಮೃದುಲೈಃ ಪದೈ |
ನ ಶಕ್ನುವಂತ್ಯಹೋ ಗನ್ತುಂ ಪಶ್ಯನ್ತೋsಪಿ ಕವೀಶ್ವರಾಃ ||

ಸಾಯಣಾಚಾರ್ಯರು ತಮ್ಮ ಸುಭಾಷಿತದಲ್ಲಿ ಕಾಳಿದಾಸನ ಕಾವ್ಯಮಾರ್ಗವೆನ್ನುವುದು ಲಾಲಿತ್ಯದಿಂದ ಕೂಡಿದೆ, ಅವನು ಉಪಯೋಗಿಸುವ ಪದಗಳು ತುಂಬಾ ಮೃದುವಾದ ನುಡಿಗಳು. ಆದರೆ ಅವನಂತೆಯೇ ಬರೆಯಲು ಎಂತೆಂತಹ ಕವಿಗಳು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ, ಕಾಳಿದಾಸನ ಕಾವ್ಯಮಾರ್ಗ ಮತ್ತಾರಿಗೂ ಪ್ರವೇಶಕೊಟ್ಟಿಲ್ಲ ಏನಾಶ್ಚರ್ಯ. ಎಂದು ಉದ್ಗರಿಸಿದ್ದಾರೆ. ಇದನ್ನೇ ದಂಡಿ
ಲಿಪ್ತಾಮಧುದ್ರವೇಣಾಸನ್ ಯಸ್ಯ ನಿರ್ವಿಷಯಾ ಗಿರಃ |
ತೇನೇದಂ ವರ್ತ್ಮ ವೈದರ್ಭಂ ಕಾಲಿದಾಸೇನ ಶೋಭಿತಮ್ ||
ಜೇನಿನ ಮಧುರವಾದ ಸಿಹಿಯಲ್ಲಿ ಅವನ ವೈದರ್ಭೀ ಶೈಲಿಯನ್ನು ಕೊಂಡಾಡಿದ್ದಾರೆ.
ಬಾಣ ಭಟ್ಟ:
ನಿರ್ಗತಾಸು ನವಾ ಕಸ್ಯ ಕಾಲಿದಾಸಸ್ಯ ಸೂಕ್ತಿಷು |
ಪ್ರೀತಿರ್ಮಧುರಸಾಂದ್ರಾಸು ಮಂಜರೀಷ್ವಿವ ಜಾಯತೇ || ಎಂದಿದ್ದಾನೆ.
ವಸಂತ ಋತುವಿನ ಆರಂಭದಲ್ಲಿನ ಚಿಗುರಿರುವ ಮಾವಿನ ಹೂಗೊಂಚಲು ಎಂದು ಬಾಣ ಉದ್ಗರಿಸಿದ್ದಾನೆ.
ಕಾಳಿದಾಸನನ್ನು ಮೀರಿಸುವ ಇನ್ನೊಬ್ಬ ಕವಿ ಹುಟ್ಟಲೇ ಇಲ್ಲವೆಂದು ಇನ್ನೊಂದು ಶ್ಲೋಕ ಹೇಳುತ್ತದೆ.
ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಠಿಕಾಧಿಷ್ಠಿತ ಕಾಲಿದಾಸಾ |
ಅದ್ಯಾಪಿ ತತ್ತುಲ್ಯಕವೇರಭಾವಾದನಾಮಿಕಾ ಸಾರ್ಥವತೀ ಬಭೂವ||

ಇದನ್ನೆಲ್ಲಾ ಸಂಸ್ಕೃತಕವಿಗಳೇ ಹೇಳಿದ್ದರೆ ನಮ್ಮ ಕನ್ನಡದ ಕವಿ ರುದ್ರಭಟ್ಟ ತನ್ನ ಜಗನ್ನಾಥ ವಿಜಯದಲ್ಲಿ ಹೀಗೆ ಸುಂದರವಾಗಿ ಅನುವಾದಿಸಿದ್ದಾನೆ .
ಸುಕವಿ ಜನಗಣನೆಯೊಳ್ ದತ್ತಕನಿಷ್ಠಿಕನಾಗೆ ಕಾಳಿದಾಸಂ ಮೊದಲೆಂ |
ದು ಕರಂ ಬಣ್ಣಿಪರದರಿಂದೆ ಕಾಳಿದಾಸಂಗೆ ದಾಸರೆನಿಪರ್ ಕವಿಗಳ್ ||
ಕಾಶ್ಮೀರದ ಆಲಂಕಾರಿಕರಿಗೆಲ್ಲಾ ಕಾಳಿದಾಸನೇ ಮೇಲ್ಪಂಕ್ತಿ ಅದರಲ್ಲೂ ಕಾಳಿದಾಸಾದೀನಾಮಿವ ಯಶಃ ಎಂದು ಮಮ್ಮಟ ಹಾಡಿ ಹೊಗಳಿದ್ದಾನೆ. ಕನ್ನಡದಲ್ಲಿ ಪಂಪನೊಬ್ಬನನ್ನು ಹೊರತು ಪಡಿಸಿ ಉಳಿದೆಲ್ಲಾ ಕವಿಗಳೂ ಒಂದಲ್ಲ ಒಂದು ರೀತಿಯಲ್ಲಿ ಕಾಳಿದಾಸನನ್ನು ಹೊಗಳಿದ್ದಾರೆ.
ಮೃದು ಪದ್ಯ ರಚನೆಯೊಳ್ ಕಾಳಿದಾಸನುಂ ಗದ್ಯರಚನೆಯೊಳ್ ಬಾಣನುಮಂ |
ಕದ ಕವಿಗಳೆನಿಸಿ ನೆಗಳ್‍ದರದರಿಂ ಸತ್ಕವಿಗಳಿರ್ವರೆಮಗಭಿವಂದ್ಯರ್ || ಎಂದು ರನ್ನ ಮುಕ್ತಕಂಠದಿಂದ ಬಾಣನನ್ನೂ ಮತ್ತು ಕಾಳಿದಾಸನನ್ನು ವಂದಿಸಿದರೆ ದುರ್ಗಸಿಂಹನು ತನ್ನ ಪಂಚತಂತ್ರದಲ್ಲಿ "ಸುರತರ ಚಂದ್ರಿಕಾ ದ್ಯುತಿನಿರಸ್ತ ಸಮಸ್ತ ಜಗತ್ತಮಂ ಕಳಾ ಪರಿಣತನೆಂದೊಡೇವೊಗಳ್ವೆನುನ್ನತಿಯಂ ಕವಿ ಕಾಳಿದಾಸನಾ" ಎಂದಿದ್ದಾನೆ. ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಳಿದಾಸ ಕಾವ್ಯ ಪ್ರಪಂಚದಲ್ಲಿ ಹೊಗಳಲ್ಪಟ್ಟಿದ್ದಾನೆ. ಪೊನ್ನನಂತೂ ತಾನು ಕಾಳಿದಾಸನಿಗೂ ಮಿಗೆಲೆಂದು ಹೇಳಿಕೊಂಡಿದ್ದಾನೆ. "ಮುನ್ನುಳ್ಳ ಕಾಳಿದಾಸಂಗಂ" "ನಾಗವರ್ಮನಂತೂ "ತನಗಿನ್ನಾರ್ ಸರಿ .....ನಾಗವರ್ಮ ಕೃತಿಗಂ ಕಾಳಿದಾಸಂಬರಂ"

ಶಾಸನ ಸಾಹಿತ್ಯದಲ್ಲೂ ಹಿಂದೆ ಬಿದ್ದಿಲ್ಲ ಕಲ್ಯಾಣಿ ಚಾಲುಕ್ಯರ ಕಾಲದ ಆರನೇ ವಿಕ್ರಮಾದಿತ್ಯನ ಹೂಲಿ ಶಾಸನದಲ್ಲಿ "ವಾಗರ್ಥಾ ವಿವ...." ಎನ್ನುವ ರಘುವಂಶದ ಮಂಗಲಾಚರಣೆಯನ್ನು ಬಳಸಿಕೊಲಾಗಿದೆ. ಬೆಂಗಳೂರು ಬೇಗೂರಿನ ಅಗಸಾಳೆ ಮಠದ ತಾಮ್ರ ಶಾಸನದಲ್ಲೂ ವಾಗರ್ಥವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇವುಗಳಲ್ಲದೇ ಬಾದಾಮಿ ಚಾಲುಕ್ಯರ ಕಾಲದ ಎರಡನೇ ವಿಕ್ರಮಾದಿತ್ಯನ ಆಸ್ಥಾನ ಕವು ರವಿಕೀರ್ತಿಯಂತೂ ತಾನು ಭಾರವಿ ಮತ್ತು ಕಾಳಿದಾಸನಿಗೆ ಸಮನಾದವನೆಂದಿದ್ದಾನೆ. ಮಹಾಕೂಟದ ಮಂಗಲೇಶನ ಸ್ತಂಬ ಶಾಸನದಲ್ಲೂ ರಘುವಂಶದ "ಯಥಾವಿಧಿ ಹುತಾಗ್ನಿನಾಂ ಯಥಾ ಕಾಮಾರ್ಚಿತಾರ್ಥಿನಾಂ" ಎಂದು ಶಾಸನವನ್ನು ಆರಂಭಿಸಲಾಗಿದೆ. ಕಾಳಿದಾಸ ಸಾಹಿತ್ಯಲೋಕದ ಅನಭಿಷಿಕ್ತ ದಿಒರೆ ಎನ್ನಿಸಿ ಅಂದಿಗೂ ಇಂದಿಗೂ ಎಂದೆಂದಿಗೂ ಸಾಹಿತ್ಯಾಸಕ್ತರ ಕೇಂದ್ರವಾಗಿದ್ದಾನೆ. ಅಸೂಯಾಪರರಿಗೂ ಅವಕಾಶ ಕಲ್ಪಿಸಿ, ಹೆಗ್ಗಳಿಕೆಗೂ ಅವಕಾಶ ಮಾಡಿಕೊ ಟ್ಟ ಒಬ್ಬನೇ ಒಬ್ಬ ಕವಿ ಕಾಳಿದಾಸ.

Thursday 25 August 2016

ಆತ್ಮ ವಿಶ್ವಾಸದ ಅಜ್ಞಾತ ಕವಿಗಳು ಶಾಸನ ಸಾಹಿತ್ಯದಲ್ಲಿ

ಸಂಸ್ಕೃತ ಸಾಹಿತ್ಯದ ಮೇರು ಕವಿಗಳಲ್ಲಿ ಕಾಳಿದಾಸನಷ್ಟು ದೃಢತೆ ಮತ್ತು ಆತ್ಮ ವಿಶ್ವಾಸವಿದ್ದ ಕವಿ ಇನ್ನೊಬ್ಬನಿರಲಿಲ್ಲ. ತಾನು ರಚಿಸಿದ ಕಾವ್ಯಗಳಲ್ಲಿ ಅಥವಾ ಇನ್ನಾವುದೇ ಕೃತಿಗಳಲ್ಲಾದರೂ ಆತ ಆತ್ಮ ವಿಶ್ವಾಸವನ್ನು ತುಂಬಿದ್ದ. ಇದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತಾ ಹೋಗುತ್ತವೆ. ಮೇಘದೂತ ಮತ್ತು ಋತು ಸಂಹಾರವಂತೂ ಸ್ಪಷ್ಟ ನಿದರ್ಶನವನ್ನು ಕಟ್ಟಿಕೊಡುತ್ತವೆ. ಆದರೆ ಅದೇ ಕಾಲಕ್ಕೆ ಅಥವಾ ಆಮೇಲಿನ ಅನೇಕ ಕವಿಗಳಿಗೆ ಸ್ವಪ್ರತಿಷ್ಟೆ ಇರುವುದು ಕಾಣಬರುತ್ತವೆ. ಅದೇನೇ ಇರಲಿ ಕಾಳಿದಾಸನ ಬಗ್ಗೆ ಶಾಸನ ಸಾಹಿತ್ಯಗಳಲ್ಲಿ ಅತ್ಯಲ್ಪವೇ ಮಾಹಿತಿ ಸಿಗುತ್ತವೆ. ಆದರೆ ಕಾಳಿದಾಸನ ಆತ್ಮ ವಿಶ್ವಾಸವನ್ನು ತನ್ನಲ್ಲೂ ಕಂಡುಕೊಂಡವನು ಎರಡನೇ ಪೊಲೆಕೇಶಿಯ ಐಹೊಳೆಯ ಮೇಗುಟಿಯ ಜೈನ ದೇವಾಲಯದಲ್ಲಿ ಶಾಸನ ಬರೆದ ಕವಿ ರವಿಕೀರ್ತಿ. ಈತ ಕ್ರಿ ಶ ೬೩೭ ರಲ್ಲಿ ಕನ್ನಡ ಲಿಪಿಯಲ್ಲಿ ಸಂಸ್ಕೃತ ಶಾಸನ ರಚಿಸಿದ. ಭಾರವಿ ಮತ್ತು ಕಾಳಿದಾಸನಷ್ಟೇ ನಾನು ಕೂಡ ಸಮರ್ಥ ಎನ್ನುವುದು ಇವನ ವಿಶ್ವಾಸದ ನುಡಿಯಾಗಿತ್ತು. ಈತ ಬೇರಾವ ಕೃತಿ ರಚಿಸಿದ ಮಾಹಿತಿ ಸಿಗುತ್ತಿಲ್ಲ. ಆದರೆ ಕೂಡ ಬೇರೆ ಕೃತಿಯನ್ನು ರಚಿಸಿರಬಹುದು.  
ಬಾದಾಮಿ ಚಾಲುಕ್ಯರ ಕಾಲದಲ್ಲಿ ಸಿಗುವ ಸಂಸ್ಕೃತ ಕವಿಗಳಲ್ಲಿ ಇನ್ನೊಬ್ಬ ಅಜ್ಞಾತ ಕವಿ ಶಿವ ಭಟ್ಟಾರಕ ಕವಿ ಈತನು ಹರಪಾರ್ವತೀಯ ನಾಟಕವನ್ನು ಬರೆದು ಅದನ್ನು ಪ್ರದರ್ಶಿಸಿದ ಉಲ್ಲೇಖ ಧಾರಾಶ್ರಯ ಜಯಸಿಂಹನ ಮಹಾರಾಷ್ಟ್ರದ ನಾಸಿಕ್ ತಾಮ್ರಪಟದಿಂದ ತಿಳಿದು ಬರುತ್ತದೆ ಕ್ರಿ ಶ ಸುಮಾರಿ ೬೪೮ರಲ್ಲಿ ಇದ್ದ ಕವಿಯಾಗಿದ್ದ. ಈತನ ಈ ಕೃತಿ ಲಭ್ಯವಿರದಿದ್ದರೂ ಇವನು ಆ ಕಾಲದ ಆ ಪ್ರದೇಶದ ಪ್ರಮುಖ ಕವಿಯಾಗಿದ್ದ.


Tuesday 23 August 2016

ಶಾಸನವೆಂದರೆ ಘಟಿತ ಘಟನೆಗಳ ದಾಖಲೆಗಳು ಮಾತ್ರವಲ್ಲ



ಶಾಸನಗಳು ಅಂದರೆ ಸಾಮಾನ್ಯವಾಗಿ ಎಲ್ಲರೂ ಭಾವಿಸುವುದು ಆಗಿಹೋದ ಘಟಿತ ಘಟನೆಗಳ ದಾಖಲೀಕರಣ ಎಂದೇ ಭಾವಿಸುತ್ತಾರೆ. ಇದರ ಬರಹಗಳು ಕೇವಲ ರಾಜವಂಶ ಮತ್ತು ಬಿರುದು. ಹಾಗೂ ದಾನ ದತ್ತಿ ಉಂಬಳಿ ಮತ್ತು ಕೆಲವು ವೀರರ ಕುರಿತಾದ ವಿಷಯಗಳು ಎಂದೇ ಭಾವಿಸಿರುತ್ತಾರೆ. ಆದರೆ ಅದಕ್ಕೂ ಮಿಗಿಲಾದ ಮತ್ತು ಅದ್ಭುತವಾದ ಅಂಶಗಳನ್ನೂ ಅನೇಕ ಶಾಸನಗಳು ಹೊಂದಿರುತ್ತವೆ ಅನ್ನುವುದು ಇಂತಹ ಶಾಸನಗಳಿಂದ ನಮಗೆ ಮಾಹಿತಿ ಸಿಗುತ್ತವೆ. ೬ನೇ ಶತಮಾನದಲ್ಲಿದ್ದ ಭಾರವಿಯ ಕಿರಾತಾರ್ಜುನೀಯ ಕೃತಿಯ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ದುರ್ವೀತನು ಬರೆದ ಎನ್ನುವುದಾಗಿ ಉಲ್ಲೇಖಿಸಲಾಗಿದೆ. ದುರ್ವಿನೀತನು ಉದ್ಧಾಮ ಪಂಡಿತನಾಗಿದ್ದ ಅನ್ನುವುದು ಇದರಿಂದ ತಿಳಿದು ಬರುತ್ತದೆ. ಕನ್ನಡ ಲಿಪಿ ಮತ್ತು ಸಂಸ್ಕೃತ - ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನವಿದು. ಗಂಗದೊರೆ ಮಾರಸಿಂಹನ ದತ್ತಿಯ ಕುರಿತಾದ ಶಾಸನ. ಕೋಲಾರ ಜಿಲ್ಲೆಯ ಶಿಡ್ಲಘಟ್ಟದ ಹೊಸಪೇಟೆಯಲ್ಲಿರುವ ಗಂಗರ ಕಾಲದ ಕ್ರಿ. ಶ ೮ನೇ ಶತಮಾನದ ಆರಂಭ ಕಾಲದ ಶಾಸನ.

Monday 22 August 2016

ಹಳದೀಪುರ - ಹೈಗುಂದ - ಪಲ್ಲವರ ಪ್ರಧಾನಿ ಗೋಪಾಲದೇವ

ಅವಿಭಜಿತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಆರಂಭಕಾಲದ ಕನ್ನಡ - ಮತ್ತು ಸಂಸ್ಕೃತ ಮಿಶ್ರಿತ ಕನ್ನಡದ ಶಾಸನಗಳು ಸಿಕ್ಕಿರುವುದೇ ಅಪರೂಪ ಪುತ್ತೂರಿನ ಭಂತ್ರ, ಮತ್ತು ಉದ್ಯಾವರದ ಶಾಸನಗಳು , ಉಡುಪಿ ಜಿಲ್ಲೆಯ ವಡ್ಡರ್ಸೆ ಮತ್ತು ಕೋಟ ಹಿರೇ ಮಹಾಲಿಂಗೇಶ್ವರ, ಹಟ್ಟಿ ಅಂಗಡಿಯ ಲೋಕನಾಥೇಶ್ವರ ದ ಶಾಸನಗಳನ್ನು ಬಿಟ್ಟರೆ ಉಳಿದವು ಹತ್ತನೇ ಶತಮಾನದ ತರುವಾಯ ಬಂದವುಗಳು. ಆದರೆ ಉತ್ತರ ಕನ್ನಡದಲ್ಲಿ ಬಹಳಷ್ಟು ಶಾಸನಗಳು ಪ್ರಾಯಶ: ಶರಾವತಿಯಲ್ಲಿ ಮುಳುಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅವಿಭಜಿತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಕರಾವಳಿಯುದ್ದಕ್ಕೂ ಹರಡಿರುವ ಹವ್ಯಕ ಬ್ರಾಹ್ಮಣರಿಗೆ ನಂಟು ಹೊಂದಿರುವ ಹೈಗುಂದದಲ್ಲೇ ಅನೇಕ ಶಾಸನಗಳು ಇಂದು ಕಣ್ಮರೆಯಾಗಿವೆ. ಒಂದು ಕಾಲಕ್ಕೆ ಹೈಗುಂದ ಅತ್ಯಂತ ಪ್ರಭಾವಿ ಮತ್ತು ಅತ್ಯಂತ ಪ್ರಮುಖ ಕೇಂದ್ರವಾಗಿತ್ತು ಆದರೆ ಆಮೇಲೆ ನಡುಗಡ್ಡೆಯ ದ್ವೀಪವಾಗಿ ಆಧುನಿಕತೆಯಿಂದ ದೂರ ಉಳಿಯಿತು. ಆದರೆ ಕದಂಬರ ಕಾಲಕ್ಕೆ ಅದೊಂದು ಅಗ್ರಹಾರವಾಗಿತ್ತು. ಪಲ್ಲವರ ಪ್ರಧಾನ ಮಂತ್ರಿಯಾದ ಚಂಡಮಹಾಸೇನನ ಮಗನು ಗೋಪಾಲದೇವನು ಹೈಗುಂದದ ಒಡೆಯನಾಗಿದ್ದನು ಅನ್ನುತ್ತದೆ ಹಳದೀಪುರದ ಶಾಸನ. ಇದರಲ್ಲಿ ಅನೇಕ ಊರುಗಳ ಉಲ್ಲೇಖಗಳಿವೆ ಹಾಗೆಯ್ತೇ ಕಳನಿಯನ್ನೂ ಮನೆದಾಣವನ್ನೂ ದಾನವಾಗಿ ಕೊಟ್ಟ ಉಲ್ಲೇಖವಿದೆ.