Search This Blog

Saturday 23 September 2017

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈಃ

ಶಾಕಾಬ್ದೇ ಲಿಖ್ಯಮಾನೇ ಮುನಿ ರಸ ಮನುಭಿರ್ಮಂಡಪಂ ಶೈಲ ಸಾರೈರ್
ಮುಕ್ತೈ ನಿರ್ಮಾಯ ಭಕ್ತ್ಯಾಧೃತ ವಿಬುಧ ಗಣಂ ಶ್ರೀ ಮಹೇಂದ್ರೋತ್ರ ಸಾಕ್ಷಾತ್
ಮಧ್ಯೇ ವಿಷ್ಣುಂ ಕೃಶಾನೋರ್ದ್ದಿಶಿ ದಿವಸ್ಕರಂ ನೈರೃತೇ ವಿಘ್ನರಾಜಂ
ವಾಯವ್ಯೇ ಶೈಲಪುತ್ರೀಂ ಹರಹರಿತಿ ಸೌರೈರ್ವಂದಿತಂ ವಿಶ್ವನಾಥಂ
ಶ್ರೀ ಗೋವಿಂದ ಮಿಶ್ರಸ್ಯ ನೀಲೋಪಲೇನ ಘಟಿತೋ ಮಠ ಏ ಯಸ್ಯ
ಸಂಘರ್ಷ್ಣಾದುಪಚಿತಾ ಕಿಲ ನೀಲ ಮೂರ್ತಿಃ ಅತನ್ವತೀ ವತ ವೃತೈವ ಕಲಂಕ ವಾದಂ 
ವಿಂಬೇ ವಿಧೋರ್ವಿಮಲ ಭಾಸಿ ವಿಭಾತಿ ರೇಖಾ || ಶ್ರೀ ಶತಾವಧಾನಸ್ಯ ||
  ಇದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಾರಿಯಲ್ಲಿನ ಶಾಸನ. ಪಂಚಾಯತನ ಪೂಜಾವಿಧಾನದಲ್ಲಿ ಇದನ್ನು ನಿರ್ಮಿಸಲಾದ ಮಠ ಒಂದರಲ್ಲಿನ ದೇವಾಲಯವನ್ನು ನಿರ್ದೇಶಿಸಲಾಗಿದೆ ಇದಕ್ಕೆ ನಾನು ಇಲ್ಲಿ ಹೆಚ್ಚೇನನ್ನೂ ಬರೆಯಲಾರೆ. ಇದರ ಲಿಪಿ ಬಂಗಾಳಿ ಸುಮಾರು ೧೫ನೇ ಶತಮಾನದ ಲಿಪಿ. 
ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತು ಮಿಚ್ಛತಿ |
ತಸ್ಯ ತಸ್ಯಾ ಚಲಂ ಶ್ರದ್ಧಾಂ ತಾಮೇವ ವಿಧದಾಮ್ಯಹಂ || ೨೧ ||

ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧನಮೀಹತೇ |
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿತಾನ್ || ೨೨ ||

ಭಗವದ್ಗೀತೆಯಲ್ಲಿ ೭ ನೇ ಅಧ್ಯಾಯದ ೨೧, ೨೨ನೇ ಶ್ಲೋಕಗಳಲ್ಲಿ ಯಾವನು ದೇವತೆಗಳ ದೇಹವನ್ನು ಅಥವಾ ಮೂರ್ತಿಯನ್ನು ಅರ್ಚಿಸಲು ಇಷ್ಟಪಡುತ್ತಾನೋ ಅವನಿಗೆ ಆಯಾ ದೇವತೆಗಳಲ್ಲಿ ಶ್ರದ್ಧೆಯುಂಟು ಮಾಡುವೆನು ಮತ್ತು ಅವರ ಬಯಕೆಗಳನ್ನು ಈಡೇರಿಸುವೆನು ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಆದರೆ ಭಗವಂತನನ್ನೇ ಸರ್ವಾಂತರ್ಯಾಮಿ ಎಂದು ತಿಳಿದು ಧ್ಯಾನಮಾಡುವುದು ಶ್ರೇಷ್ಠ ವೆಂದು ಅದೇ ಅಧ್ಯಾಯದಲ್ಲಿ ತಿಳಿಸಿದ್ದಾನೆ.

ಶ್ರೀ ಶಂಕರಾಚಾರ್ಯರು ಷಣ್ಮತಸ್ಥಾಪಕರೆಂದು ಹೆಸರು ಪಡೆದಿದ್ದು ಪಂಚಾಯತನ ಪೂಜೆಯನ್ನು ಪ್ರಚುರ ಪಡಿಸಿದರೆಂಬುದು ಪ್ರತೀತಿ. ಆದರೆ ಅವರ ಪ್ರಸ್ಥಾನತ್ರಯ ಭಾಷ್ಯಗಳಲ್ಲಿ ಎಲ್ಲಿಯೂ ಪಂಚಾಯತನ ಪೂಜೆಯ ವಿಷಯ ಬರುವುದಿಲ್ಲ. ಷಣ್ಮತದ ವಿಷಯವೂ ಬರುವುದಿಲ್ಲ. ಆದರೆ ರೂಢಮೂಲವಾಗಿ ಅವರು ಪಂಚಾಯತನ ಪೂಜೆಯನ್ನು ವಿಧಿಸಿ ಬೇರೆ ಬೇರೆ ಉಪಾಸಕರ ಮಧ್ಯೆ ಇರುವ ಮನಸ್ತಾಪವನ್ನು ಶಮನಗೊಳಸಿದರೆಂದು ನಂಬಲಾಗಿದೆ. ಈ ದೇವರ ಪೂಜಾವಿಧಿ ನಿತ್ಯ ಕರ್ಮ ದಲ್ಲಿ ಸೇರುವುದು.

ಪಂಚಾಯತನ ದೇವತೆಗಳು
ಸೂರ್ಯಗಣಪತಿಅಂಬಿಕಾಶಿವವಿಷ್ಣು , ಈ ಐದೂ ದೇವತೆಗಳ ಮೂರ್ತಿಗಳಿದ್ದಲ್ಲಿ ಅಥವಾ ಶಿಲೆಗಳಿದ್ದಲ್ಲಿ ಅವರ ಮನೆ ದೇವತೆಯ ಮೂರ್ತಿ ಅಥವಾ ಶಿಲೆಯನ್ನು ಮಧ್ಯದಲ್ಲಿಟ್ಟು ಉಳಿದವುಗಳನ್ನು ಈ ಕೆಳಗಿನ ಕ್ರಮದಲ್ಲಿಡುವುದು ಶಾಸ್ತ್ರರೀತ್ಯಾ ಪದ್ದತಿ. ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೇವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು.

ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆ ಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಷೇಕ ಪೂಜೆ ಮಾಡುವ ಪದ್ಧತಿಗಳಿವೆ.

ವಿಷ್ಣು ಕೇಂದ್ರ ; ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ ಶಿವ ಕೇಂದ್ರ : -ವಿಷ್ಣು ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಸೂರ್ಯ- ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ - ವಾಯವ್ಯದಲ್ಲಿ.

ಸೂರ್ಯಕೇಂದ್ರ : ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಗಣಪತಿ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; -ವಿಷ್ಣು -ಪಶ್ಚಿಮ ದಕ್ಷಿಣ ಮಧ್ಯೆ ನೈತ್ಯದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.

ಅಂಬಿಕಾ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಗಣಪತಿ -ಪಶ್ಚಿಮ ದಕ್ಷಿಣ ಮಧ್ಯೆ ನೈತ್ಯದಲ್ಲಿ;: ಸೂರ್ಯ- ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.


ಗಣಪತಿ ಕೇಂದ್ರ : -ವಿಷ್ಣು -ಪೂರ್ವ ಉತ್ತರ ಮಧ್ಯೆ-ಈಶಾನ್ಯದಲ್ಲಿ; ಶಿವ -ಪೂರ್ವ ದಕ್ಷಿಣ ಮದ್ಯೆ ಆಗ್ನೇಯದಲ್ಲಿ ; ಸೂರ್ಯ -ಪಶ್ಚಿಮ ದಕ್ಷಿಣ ಮಧ್ಯೆ ನೈತ್ಯದಲ್ಲಿ ; ಅಂಬಿಕಾ - ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ.



Wednesday 20 September 2017

ತಕ್ಷಶಿಲೆಯ ಭಾಗವತ ಹೆಲಿಯೋಡೋರಸ್

ತಕ್ಷಶಿಲೆಯ ಭಾಗವತ ಹೆಲಿಯೋಡೋರಸ್
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತದ ವಿದಿಶಾದ ಇಂದಿನ ಬೆಸ್ನಗರದ  ಹತ್ತಿರ ಶುಂಗ ದೊರೆ  ಭಾಗಭದ್ರನ ಆಸ್ಥಾನದಲ್ಲಿನ ಇಂಡೋ-ಗ್ರೀಕ್   ದೊರೆಯಾದ  ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ನ  ರಾಯಭಾರಿ ಹೆಲಿಯೋಡೋರಸ್  ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.
ಕಂಬದ ಮೇಲುಗಡೆ ಗರುಡನ ಕೆತ್ತನೆ ಇದ್ದು, ಇದನ್ನು  ಹೆಲಿಯೋಡೋರಸ್ ನು   ದೇವನಾದ ವಾಸುದೇವನಿಗೆ  ಅರ್ಪಿಸಿದ್ದಾನೆ . ಇದು  ವಾಸುದೇವ ಮಂದಿರದ ಎದುರಿಗೆ ಇದೆ.
ಗರುಡಗಂಬದ ಮೇಲೆ ಎರಡು ಶಾಸನಗಳಿವೆ .
ಇದು  ಬ್ರಾಹ್ಮಿ ಲಿಪಿಯಲ್ಲಿದ್ದು  ಹೆಲಿಯೋಡೋರಸ್ , ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ  ಕುರಿತಾಗಿದೆ.
ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನ ಹತ್ತಿರ ಅಂಟಾಲಿಕಿಡಾಸ್ ಮಹಾರಾಜನಿಂದ ಕಳುಹಿಸಲ್ಪಟ್ಟವನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಮಗನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು.
ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ ಭಾಗವತ ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.
ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.
ಹೆಲಿಯೋಡೋರಸ್  ಮತ್ತು  ಸಮಕಾಲೀನ  ಅಗತೋಕ್ಲಸ್  ಇವರುಗಳು ಹಿಂದೂಧರ್ಮದ  ವೈಷ್ಣವ ಪಂಥಕ್ಕೆ  ದಾಖಲಾದ ಪ್ರಾಚೀನ ಮತಾಂತರಿಗಳು ಎನ್ನಬಹುದು.  ಕೆಲವು ಇತಿಹಾಸದ ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು  ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ ಭಾಗವತ-ಕೃಷ್ಣ ಪಂಥಕ್ಕೆ ಮತಾಂತರಗೊಂಡ ಮೊದಲ ಮತಾಂತರಿ ಎನ್ನುವುದು ಸರಿಯಾಗುವುದಿಲ್ಲ. ಅವನನ್ನು ರಾಯಭಾರಿಯನ್ನಾಗಿ  ಕಳಿಸಿದ ರಾಜನೂ ಸೇರಿ ಅನೇಕ ಜನರು ಕೂಡ ಭಾಗವತ ಸಂಪ್ರದಾಯದ ಅನುಯಾಯಿಗಳೇ ಆಗಿದ್ದರು.
ಅಂತಲಿಕಿತ

ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಕ್ರಿ. ಪೂ 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ ರಾಯಭಾರಿಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ ತಕ್ಷಶಿಲೆಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬಹಗಳಿವೆ.


Sunday 17 September 2017

ಪ್ರತಿಷ್ಠಾ ನಗರದ ಸಾತವಾಹನ - ಭಾಗ 2

ಪೆದ್ದ ಹಾಲ - ಸಾತವಾಹನ ಮತ್ತು ಪ್ರಾಣಾಧಿಕಮೋದಕೈಸ್ತಾಡಯ !!

ಸಾತವಾಹನನು ಸರಸ್ವತೀ ವರಪುತ್ರನಾಗಿದ್ದ ರಾಜ. ವಿದ್ವತ್ತಿನ ಜೊತೆಗೆ ಅಧಿಕಾರವೂ ಇತ್ತು. ಈತನು ಮಹಾಕವಿಯಾಗಿದ್ದು ೭೦೦ ಶ್ಲೋಕಗಳಿಂದ ಕೂಡಿದ ಗ್ರಂಥವನ್ನು ಬರೆದವನು. ಆದರೆ ಈ ಸಾತವಾಹನನು ಯಾರು ಮತ್ತು ಹಾಲ ಎನ್ನುವವನು ಯಾರು ಎನ್ನುವ ಬಗ್ಗೆ ಅನೇಕ ಊಹಾಪೋಹಗಳಿವೆ.
ಶಾಲೋ ಹಾಲೋ ಮತ್ಸ್ಯಭೇದೇ : ಎಂದು ಶಾಲಃ ಹಾಲಃ ಎನ್ನುವುದು ಮತ್ಸ್ಯಭೇದದ ಅಭಿಪ್ರಾಯ ಅದೇರೀತಿ "ಹಾಲವಾಹನ ಪಾರ್ಥಿವೇ" ಎನ್ನುವಲ್ಲಿ ಹಾಲ ಎನ್ನುವುದು ಸಾತವಾಹನ ರಾಜ ಎನ್ನುವ ಅರ್ಥದಲ್ಲಿಯೂ ಹೇಳಲ್ಪಡುತ್ತದೆ.
ಶಲತಿ ಶಾಲಃ - ಶಯತಿ ವಾ ಶಯಮಾಶಯಾ ಇತಿ ಲಃ ಹಾಲಃ ಎನ್ನುವುದನ್ನು ಮನಗಂಡರೆ ಸಾತವಾಹನ ರಾಜ ಎನ್ನುವುದಾಗಿ ಹೈಮಾನೇಕಾರ್ಥದಲ್ಲಿ ಹೇಳಿದೆ.
ಹೈಮಾನೇಕಾರ್ಥದ ವ್ಯಾಖ್ಯಾನ ಗ್ರಂಥ ಅನೇಕಾರ್ಥಕೈರವಾಕರಕೌಮುದಿಯಲ್ಲಿ "ಜಜ್ಞೇ ಶಾಲ ಮಹೀಪಾಲಃ ಪ್ರತಿಷ್ಠಾನಪುರೇ ಪುರಾ" ದಿವಂಗತೇ ಹಾಲ ವಸುಂಧರಾಧಿಪೇ......."ಎಂದು ಬಂದಿದೆ.
ಹಾಲಸ್ಯಾತ್ ಸಾತವಾಹನಃ ಎಂದು ಹೈಮನಾಮ ಮಾಲೆಯಲ್ಲಿ ಬಂದಿದೆ. ಕಥಾ ಸರಿತ್ಸಾಗರದಲ್ಲಿ ಕೂಡ ಸಾ ತೇನ ಯಸ್ಮಾದೂಢೋಭೂತ್ತಸ್ಮಾತ್ತಂ ಸಾತವಾಹನಂ | ನಾಮ್ನಾ ಚಕಾರ ಕಾಲೇನ ರಾಜ್ಯೇ ಚೈನಂ ನ್ಯವೇಶಯತ್ ಎಂದು ಹೇಳಲ್ಪಟ್ಟಿದೆ. ಸಾತವಾಹನ ಪದವು ನಿರುಕ್ತದಲ್ಲಿಯೂ ಕಂಡುಬರುತ್ತದೆ.
ಸಾತನೆಂಬ ಹೆಸರುಳ್ಳ ಯಕ್ಷನೊಬ್ಬನು ಕುಬೇರನ ಶಾಪದಿಂದ ಸಿಂಹ ಜನ್ಮವನ್ನು ಹೊಂದಿ ಸಾತವಾಹನನನ್ನು ತನ್ನ ಬೇನ್ನಿನಮೇಲೆ ಹೊತ್ತುಕೊಂಡು ಹೋಗುತ್ತಿದ್ದುದರಿಂದ ಸಾತವಾಹನ ಎನ್ನುವ ಹೆಸರು ಬಂದಿತು ಎಂದು ನಿರುಕ್ತದಲ್ಲಿ ಹೇಳಲ್ಪಟ್ಟಿದೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿಯೂ ಸಹ ಸಾತವಾಹನನ ಉಲ್ಲೇಖ ಬಂದಿದೆ. ವಾಯು, ಮತ್ಸ್ಯ ಮತ್ತು ವಿಷ್ಣು ಪುರಾಣ ಮತ್ತು ಭಾಗವತದಲ್ಲಿಯೂ ಹಾಲಮಹೀಪತಿ ಎನ್ನುವ ಉಲ್ಲೇಖ ಬಂದಿದೆ.
ಸಾತವಾಹನನ ಕುರಿತಾದ ಕಥೆ : ದೀಪಕರ್ಣ ಎನ್ನುವ ರಾಜನಿಗೆ ಶಕ್ತಿಮತಿ ಎನ್ನುವ ರಾಣಿ ಇದ್ದಳು. ಒಂದಿ ದಿನ ತನ್ನ ಪತಿಯೊದನೆ ಏಕಾಂತದಲ್ಲಿರುವಾಗ ಶಕ್ತಿಮತಿಗೆ ಸರ್ಪವೊಂದು ಕಡಿದು ಮರಣ ಹೊಂದಿದಳು. ದೀಪಕರ್ಣನು ತನ್ನಮಡದಿ ಮಡಿದ ದುಖದಜೊತೆಗೆ ಪುತ್ರಹೀನತೆಯಿಂದ ಕೊರಗಿದನು. ಸಂತಾನ ಭಾಗ್ಯವಿಲ್ಲದ ದೀಪಕರ್ಣನು ದುಖ್ಹಿಸುತ್ತಿರುವಾಗ ಒಂದು ದಿನ ಆತನಿಗೆ ಸ್ವಪ್ನಾವಸ್ತೆಯಲ್ಲಿ ಶಿವನು ಪ್ರತ್ಯಕ್ಷನಾಗಿ " ನೀನು ಚಿಂತೆಯನ್ನು ಬಿಡು. ನೀನು ಅರಣ್ಯಕ್ಕೆ ಹೋಗಿ ಅಲ್ಲಿ ಒಬ್ಬ ಹುಡುಗ ಸಿಂಹವನ್ನೇರಿಕೊಂಡು ಬರುವನು ನೀನು ಸಿಂಹವನ್ನು ಕೊಂದು ಆ ಹುಡುಗನನ್ನು ಕರೆದುಕೊಂಡು ಬಂದು ಸಾಕು ಅವನೇ ನಿನ್ನ ಮಗ" ಎಂದು ಅಂತರ್ಧಾನನಾಗುವನು. ಇದನ್ನು ಕೇಳಿದ ರಾಜ ದೀಪಕರ್ಣ ಮಾರನೇ ದಿನವೇ ಕಾಡಿಗೆ ಹೋಗುತ್ತಾನೆ. ಅಲ್ಲಿ ಆತನಿಗೆ ಹುಡುಗನೊಬ್ಬ ಸಿಂಹದ ಮೇಲೆ ತಿರುಗುತ್ತಿರುವುದು ಕಾಣಿಸುತ್ತದೆ ಆಗ ಸಿಂಹಕ್ಕೆ ಒಂದು ಬಾಣವನ್ನು ಪ್ರಯೋಗಿಸಿ ಕೊಂದನು. ಆಗ ಸಿಂಹವು ಯಕ್ಷರೂಪವನ್ನು ತಳೆದು ತಾನು ಸಾತವಾಹನನೆಂಬ ಯಕ್ಷನು ಶಾಪರೂಪದಿಂದ ಈ ರೀತಿ ಸಿಂಹದ ರೂಪ ಹೊಂದಿದ್ದು. ಮುನಿಕುಮಾರಿಯೊಬ್ಬಳೊಂದಿಗೆ ರಮಿಸಿದ್ದಕ್ಕೆ ನಮ್ಮಿಬ್ಬರಿಗೂ ಶಾಪ ಕೊಟ್ಟರು ಆಗ ನಾವು ಪ್ರಾಯಶ್ಚಿತ್ತ ಕೇಳಿದಾಗ ಪುತ್ರಜನನದ ತಕ್ಷಣ ತಾಯಿಗೂ ಮುಂದೆ ರಾಜನೊಬ್ಬನ ಒಂದೇ ಬಾಣದ ಪ್ರಯೋಗದಿಂದ ಯಕ್ಷನಿಗೂ ಶಾಪವಿಮೋಚನೆ ಎಂದರು ಇಂದಿಗೆ ತನ್ನ ಶಾಪ ವಿಮೋಚನೆ ಆಯಿತು ಎಂದು ಹೇಳಿ. ಮಗುವಿಗೆ ಇಷ್ಟರ ತನಕ ಸಿಂಹಿಣಿಗಳ ಹಾಲನ್ನೇ ಕುಡಿಸಿದ್ದು ಇನ್ನು ಮುಂದೆ ಇವನು ನಿನ್ನ ಮಗ ಇವನು ನಿನ್ನವನು ಎಂದು ಅಂತರ್ಧಾನನಾದನು. ಆ ಮಗುವನ್ನು ತಂದು ಸಾಕಿದ ದೀಪಕರ್ಣನು ಅವನಿಗೆ ರಾಜ ಪಟ್ಟ ಕಟ್ಟಿದನು. ಸಾತ್ ಎಂದರೆ ಸಾತನೆನ್ನುವ ಯಕ್ಷನ ಹೆಸರೂ ವಾಹನಃ ಎಂದರೆ ಹೊತ್ತುತಿರುಗಿದ್ದರಿಂದ ಆತನನ್ನು ಸಾತವಾಹನ ಎನ್ನಲಾಯಿತು. ಈ ಸಾತವಾಹನನ ಹೆಂಡತಿ ಮಲಯವತಿ. ಒಂದು ದಿನ ಉದ್ಯಾನದಲ್ಲಿ ಜಲಕ್ರೀಡೆಯಾಡ್ವಾಗ ಬೇಸರಗೊಂಡ ಮಲಯವತಿ "ಪ್ರಾಣಾಧಿಕಮೋದಕೈಸ್ತಾಡಯ" ಎಂದು ಹೇಳಿದ್ದನ್ನು ರಾಜ ಕೇಳಿ ಅಪಾರ್ಥ ಮಾಡಿಕೊಂಡು ಮೋದಕಗಳಿಂದ ರಾಣಿಗೆ ಹೊಡೆಯುತ್ತಾನೆ. ಮಲಯವತಿ ವಿದ್ಯಾ ಪ್ರವೀಣೆ ಅವಳು ರಾಜನನ್ನು ಚೇಡಿಸಿ ನಾನು ಹೇಳಿದ್ದು "ಜೀವಿತೇಶ ಮಾ ಉದಕೈಸ್ತಾಡಯ" ಶಬ್ದ ಸಂಧಿಜ್ಞಾನವಿಲ್ಲದವನೆಂದು ಮೂದಲಿಸುತ್ತಾಳೆ. ಇದು ಕಥಾ ಬೃಹತ್ಕಥಾಮಂಜರಿಯಲ್ಲಿಯೂ ಈ ವಿಷಯ ಬಂದಿದ್ದು
ತತ್ರೈಕಾ ಮಹಿಷೀ ರಾಜ್ಞಾ ಹತಾ ಸಾವೇಗ ಮಂಬುನಾ |
ಮಾ ಮೋದಕೇನ ರಾಜೇಂದ್ರ ತಾಡಯೇತ್ಯಭ್ಯಧಾನ್ನೃಪಂ || ಎಂದು
ಶ್ರುತ್ವೇತಿ ಮೂರ್ಖೋ ಭೂಪಾಲಃ ಕ್ಷಿಪ್ರಮಾಹೃತ ಮೋದಕಃ |
ಮಾ ಮಾರಿಣೇತಿ ದೇವಾಸ್ತದ್ವಚಶ್ರುತ್ವಾ ಹ್ರಿಯಂ ಯಯೌ ||
ಎಂದೂ ಕಥಾ ಸರ್ತ್ಸಾಗರದ ೬ನೇ ಲಂಬಕದಲ್ಲಿಯೂ ಇದೇ ರೀತಿಯಲ್ಲಿ ಬಂದಿದೆ., ಇದರಿಂದ ರಾಜನು ಬಹಳ ಅಪಮಾನಿತನಾಗಿ ತನ್ನ ಮಂತ್ರಿ ಗುಣಾಡ್ಯನನ್ನು ಕರೆದು ವ್ಯಾಕರಣ ಕಲಿಸು ಎನ್ನುತ್ತಾನೆ ಅದಕ್ಕೆ ಗುಣಾಡ್ಯನು ಆರು ವರ್ಷಗಳು ಬೇಕು ಎನ್ನಲು ರಾಜನು ಶರ್ವವರ್ಮನೆನ್ನುವ ಬ್ರಾಹ್ಮಣನನ್ನು ಕರೆದು ವ್ಯಾಕರಣ ಕಲಿಸಲು ನಿನಗೆಷ್ಟು ಸಮಯ ಬೇಕು ಎಂದು ಕೇಳಲು ಅವನು ಷಣ್ಮಾಸಃ ಆರು ತಿಂಗಳು ಎನ್ನುತ್ತಾನೆ. ಆಗ ಗುಣಾಡ್ಯನು ಶರ್ವವರ್ಮನಿಗೆ ಸಂಸ್ಕೃತ ಅಥವಾ ಪ್ರಾಕೃತ ಮತ್ತು ದೇಶೀ ಭಾಷೆ ಯಲ್ಲಿ ಯಾವುದಾದರೊಂದರಲ್ಲಿ ಒಂದು ಶಬ್ದವನ್ನೂ ಹೇಳಲು ಸಾಧ್ಯವಿಲ್ಲ ಎಂದನು ಆಗ ಶರ್ವವರ್ಮನು ಪಂಥಾಹ್ವಾನ ಕೊಟ್ಟು. ಆರು ತಿಂಗಳಲ್ಲಿ ನಾನು ಕಲಿಸದೇ ಹೊದರೆ ಹನ್ನೆರಡು ವರ್ಷ ನಿನ್ನ ಪಾದುಕೆಯನ್ನು ತನ್ನ ತಲೆಯಲ್ಲಿಟ್ಟು ತಿರುಗುವೆ ಎಂದು ಹೇಳಿ ಷಣ್ಮುಖನನ್ನು ಆರಾಧಿಸಿ. ಕಾಲಾಪ ವ್ಯಾಕರಣವನ್ನು ಪಡೆದು ಅದನ್ನು ಭೋದಿಸಿ ರಾಜನನ್ನು ವಿದ್ವದ್ರಾಜನನ್ನಾಗಿ ಮಾಡುತ್ತಾನೆ. ಇದ್ದರಿಂದ ಭರೋಚ ರಾಜ್ಯವನ್ನು ಕೊಟ್ಟ ವಿಷಯ ಈಗಾಗಲೇ ನಾನು ಹೇಳಿರುವೆ.

ಗುಣಾಡ್ಯ ಮೊದಲ ಸಹಸ್ರಮಾನದ ಮೊದಲ ಶತಮಾನದ ಪೂರ್ವಾರ್ಧದಲ್ಲಿದ್ದವನು. ಅವನ ಆಶ್ರಯದಾತ ಸಾತವಾಹನನೂ ಸಮಕಾಲೀನನು. ಹೀಗೆ ಅವನ ಜನ್ಮ ವೃತ್ತಾಂತವನ್ನು ಹೇಳಿರುವೆನು ಮತ್ತು ವ್ಯಾಕರಣ ಗ್ರಂಥವೊಂದರ ಉಲ್ಲೇಖ ಮಾಡಿರುವೆನು ಮುಂದೆ ಅವನ ಕಾಲ ವಿಚಾರವನ್ನು ಗಮನಿಸ ಬೇಕಿದೆ.      

Saturday 16 September 2017

ಪ್ರತಿಷ್ಠಾ ನಗರದ ಸಾತವಾಹನ - ಭಾಗ ೧

ರಾಜನಾಗಿಯೂ, ಗಾಥಾಸಪ್ತಶತೀ ಯನ್ನು ಬರೆದ ವಿದ್ವತ್ತುಳ್ಳ ಕವಿಯೂ, ಮತ್ತು ದೀಪಕರ್ಣಿಯಮಗನೂ ಆದ ಸಾತವಾಹನನೆನ್ನುವನು ಪ್ರತಿಷ್ಠಾನಗರದಲ್ಲಿದ್ದನು, "ದೀಪಕರ್ಣಿ ಸೂನುಃ ಸಾತವಾಹನೋ ನಾಮ ಕಶ್ಚನ ವಿದ್ವಾನ್ ಮಹೀಪತಿಃ"
ಸೋಮದೇವ ಭಟ್ಟನ ಕಥಾಸರಿತ್ಸಾಗರದ ಕಥಾಪೀಠಲಂಬಕದ ಆರನೇ ಸರ್ಗದಲ್ಲಿ :
"ಯತ್ ಸಭಾಂ ಬೃಹತ್ಕಥಾ ಪ್ರಣೀತ ಗುಣಾಢ್ಯ ಕಾಲಾಪ ವ್ಯಾಕರಣಕರ್ತೃ ಶರ್ವವರ್ಮ ಪ್ರಭೃತಯೋ ಭೂಯಾಂಸೋ ವಿದ್ವಾಂಸೋ ಮಂಡಯಾಂಚಕ್ರುರಿತಿ" ಈ ಸಾತವಾಹನನ ಸಭೆಯಲ್ಲಿ ಪೈಶಾಚೀ ಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಬರೆದ ಗುಣಾಢ್ಯನೆನ್ನುವವನಿದ್ದನು. ಕಾಲಾಪ ವ್ಯಾಕರಣವನ್ನು ಬರೆದ ಶರ್ವವರ್ಮನೇ ಮೊದಲಾದ ವಿದ್ವಾಂಸರುಗಳು ಇದ್ದುದಾಗಿಯೂ ತಿಳಿದು ಬರುತ್ತದೆ.
ಕ್ಷೇಮೇಂದ್ರನ ಬೃಹತ್ಕಥಾ ಮಂಜರಿಯಲ್ಲಿ ಇವನ ವಿಷಯವಾಗಿ ಬಂದಿದೆ.
ರಾಜಶೇಖರ ಸೂರಿಯ ಪ್ರಬಂಧ ಕೋಶದಲ್ಲಿ "ಅಧುನಾ ತು ದಕ್ಷಿಣ ದೇಶಸ್ಥಿತಂ ಪ್ರತಿಷ್ಠಾನಪುರಂ ಕ್ಷುಲ್ಲಕ ಗ್ರಾಮತುಲ್ಯಂ ವರ್ತತೇ ಇತ್ಯಸ್ತಿ" ಎನ್ನುವುದಾಗಿ ಪ್ರಸ್ತುತ ದಕ್ಷಿಣದೇಶದಲ್ಲಿ ಪ್ರತಿಷ್ಠಾನಪುರವೆನ್ನುವುದು ಚಿಕ್ಕ ಗ್ರಾಮದಂತಿರುವುದಾಗಿ ಹೇಳಿದ್ದಾನೆ. ಆದರೆ ಈ ಹಳ್ಳಿಯು ಯಾವುದೆಂದು ತಿಳಿಯುತ್ತಿಲ್ಲ. ಆಗಿನ ಕಾಲದಲ್ಲಿ ಅದು ದೊಡ್ದ ನಗರವಾಗಿದ್ದು ರಾಜಶೇಖರನ ಕಾಲಕ್ಕೆ ಅದು ಚಿಕ್ಕ ಹಳ್ಳಿಯಾಗಿದ್ದಿರಬಹುದು. ಗೋಧಾವರೀ ತೀರದಲ್ಲಿರುವ ಪೈಠಣವು ಕುಂತಲಕ್ಕೆ ರಾಜಧಾನಿಯಾಗಿತ್ತೆನ್ನುವುದನ್ನು ರಾಜಶೇಖರಸೂರಿಯು ಅದೇ ಪೈಠನವು ಪ್ರತಿಷ್ಠಾನಪುರವಾಗಿತ್ತು ಎನ್ನುವುದಾಗಿ ಉಲ್ಲೇಖಿಸಿದ್ದಾನೆ.
ವಾತ್ಸ್ಯಾಯನನೌ ತನ್ನ ಕಾಮಸೂತ್ರದ ೧೨ನೇ ಅಧ್ಯಾಯದಲ್ಲಿ ಕುಂತಳದ ರಾಜನಾದ ಶಾತವಾಹನನು ಮಹಾದೇವಿ(ಪಟ್ಟದರಾಣಿ) ಮಲಯವತಿಯನ್ನು ಕೊಂದು ಹಾಕಿದನೆಂದು ಹೇಳಿದ್ದಾನೆ. "ಕುಂತಲ ಶಾತಕರ್ಣಿ ಶಾತವಾಹನೋ ಮಹದೇವೀಂ ಮಲಯವತೀಂ ಜಘಾನ" ಎಮೋದು ಉಲ್ಲೇಖಿಸಿದ್ದಾನೆ ಆದರೆ ಕಥಾಸರಿತ್ಸಾಗರದಲ್ಲಿ ಮಲಯವತಿ ಎನ್ನುವುದಾಗಿರದೇ ವಿಷ್ಣು ಶಾಕ್ತಿಯ ಮಗಳನ್ನು ಕೊಂದುದಾಗಿ ಹೇಳಲಾಗಿದೆ.

ಇವುಗಳಲ್ಲದೆ ಗಾಥಾಸಪ್ತಶತೀಯಲ್ಲಿ ಶ್ರಂಗಾರ ಕಾವ್ಯದ ಕೊನೆಯಲ್ಲಿ ಹಾಲ - ಸಾತವಾಹನನು
ಶ್ರೀಮತ್ ಕುಂತಲದೇಶ ಜನಪದೇಶ್ವರ ಪ್ರತಿಷ್ಠಾಪತ್ತನಾಧೀಶ ಶತಕರ್ಣೋಪನಾಮಕ
ಮಲಯತ್ಯುಪದೇಶಪಣ್ಡಿತೀಭೂತ ತ್ಯಕ್ತ ಭಾಷಾತ್ರಯ ಸ್ವೀಕೃತ ಪೈಶಾಚಕ ಪಣ್ಡಿತರಾಜ ಗುಣಾಢ್ಯ
ನಿರ್ಮಿತ ಭಸ್ಮೀಭವದ್ ಭೃಹತ್ಕಥಾವಶಿಷ್ಟ ಸಪ್ತಮಾಂಶಾವಲೋಕನ ಪ್ರಾಕೃತಾದಿವಾಕ್ಪಂಚಕ ....................................... ಎಂದು
ಹಾಲಾದ್ಯುಪನಾಮಕ ಶ್ರೀಸಾತವಾಹನ ನರೇಂದ್ರ ನಿರ್ಮಿತಾ ವಿವಿಧಾನ್ಯೋಕ್ತಿಮಯ
ಪಾಕೃತಗೀರ್ಗುಂಭಿತಾ ಶುಚಿರಸಪ್ರಧಾನಾ ಕಾವ್ಯೋತ್ತಮಾ ಸಪ್ತಶತಮವಸಾನಮಗಾತ್ .............ಎಂದು ಹೇಳಿರುವುದರಿಂದ ಕಥಾ ಸರಿತ್ಸಾಗರದಲ್ಲಿ ಹೇಳಿರುವ ಸಾತವಾಹನನೂ ವಾತ್ಸ್ಯಾಯನನಿಂದ ಹೇಳಿರಲ್ಪಟ್ಟ ಸಾತವಾಹನನೂ ಗಾಥಾಸಪ್ತಶತಿಯನ್ನು ಬರೆದ ಸಾತವಾಹನನೂ ಒಬ್ಬನೇ ಎನ್ನುವುದು ಬಲವಾಗುತ್ತದೆ. ಇವನು ಪ್ರತಿಷ್ಠಾನಗರದ ಅರಸನಾಗಿದ್ದುದಲ್ಲದೇ ಗುರ್ಜರದಲ್ಲೂ ಅಧಿಪತ್ಯ ಸ್ಥಾಪಿಸಿರುವುದೂ ತಿಳಿದುಬರುತ್ತದೆ.

ರಾಜಾರ್ಹ ರತ್ನನಿಚಯೈ ರಥಶರ್ವವರ್ಮಾ ತೇನಾರ್ಚಿತೋ ಗುರುರಿತಿ ಪ್ರಣತೇನ ರಾಜ್ಞಾ |
ಸ್ವಾಮೀಕೃತಶ್ಚ ವಿಷಯೇ ಭರುಕಚ್ಛನಾಮ್ನಿ ಕೂಲೋಪಕಂಠವಿನಿವೇಶಿನಿ ನರ್ಮದಾಯಾಃ ||
ಕಾಲಾಪವ್ಯಾಕರಣವನ್ನು ತನಗೆ ಬೋಧಿಸಿದ ಶರ್ವವರ್ಮನಿಗೆ ಅವನ ಪಾಂಡಿತ್ಯಕ್ಕೆ ಮೆಚ್ಚಿ ಗೌರವದಿಂದ ಭರುಕಚ್ಚ(ಭರೋಚ) ಹೆಸರಿನ ಪ್ರದೇಶದ ಆಡಳಿತವನ್ನು ಬಿಟ್ಟುಕೊಟ್ಟನು ಎನ್ನುವುದಾಗಿ ಈ ಶ್ಲೋಕದಿಂದ ತಿಳಿಯುತ್ತದೆ.
ಕಾಶ್ಮೀರದ ರಾಜನಾದ ಅನಂತ ರಾಜ, ಕಲಶದೇವ , ಹರ್ಷದೇವ ಮೊದಲಾದವರು ಸಾತವಾಹನ ವಂಶದವರು ಎಂದು ಕಲ್ಲಣನ ರಾಜತರಂಗಿಣೀ ಮತ್ತು ಕಥಾ ಸರಿತ್ಸಾಗರದ ಕೊನೆಯ ಪ್ರಶಸ್ತಿವಾಕ್ಯದಿಂದ ತಿಳಿದು ಬರುತ್ತದೆ.

ಬಾಣ ತನ್ನ ಹರ್ಷಚರಿತದ ಆರಂಭದಲ್ಲಿ ಸಾತವಾಹನನ ಕುರಿತಾಗಿ ..
ಅವಿನಾಶಿನಮಗ್ರಾಮ್ಯಮಕರೋತ್ಸಾತವಾಹನಃ |
ವಿಶುದ್ಧ ಜಾತಿಭಿಃ ಕೋಶಂ ರತ್ನೈರಿವ ಸುಭಾಷಿತೈಃ || ಎಂದು ಇದೊಂದು ಶಾಶ್ವತ ಕೋಶ ಎಂದಿರುವನು. ಇದೇ ಶ್ಲೋಕವು ಜಲ್ಹಣನ ಸೂಕ್ತಿ ಮುಕ್ತಾವಳಿಯಲ್ಲಿ ರಾಜಶೇಖರನ ಹೆಸರಿನಿಂದ ಉಲ್ಲೇಖಗೊಂಡಿದೆ.
ಸಾತವಾಹನನು ಗಾಥಾ ಸಪ್ತ ಶತಿಯನ್ನು ಬರೆದಿರುವುದಲ್ಲದೇ ಸಾತವಾಹನ ಕೋಶವೆಂಬ ಇನ್ನೊಂದು ಗ್ರಂಥ ಬರೆದ ಎಂದು ಶ್ಲೋಕವೊಂದರಿಂದ ತಿಳಿದು ಬರುತ್ತದೆ.
ನಮಃ ಶ್ರೀಹರವರ್ಷಾಯ ಯೇನಹಾಲಾದನಂತರಂ |

ಸ್ವಕೋಶಃ ಕವಿಕೋಶಾನಾಮಾವಿರ್ಭಾವಾಯ ಸಂಭೃತಃ || ಎಂದು ಕೊಶವನ್ನೂ ಸಹ ಬರೆದಿದ್ದ ಎನ್ನುವುದು ತಿಳಿದು ಬರುತ್ತದೆ. ಇದೇ ಶ್ಲೋಕವು ಶತಾನಂದನನ ಮಗನಾದ ಅಭಿನಂದನನಿಂದ ಬರೆಯಲ್ಪಟ್ಟ ರಾಮಚರಿತವೆಂಬ ಏಳನೆಯ ಮತ್ತು ಹದಿನೈದನೆಯ ಸರ್ಗದ ಕೊನೆಯಲ್ಲಿ ಕಾಣಸಿಗುತ್ತವೆ.

Tuesday 12 September 2017

ಕಿರಾತಾರ್ಜುನೀಯದ ಭಾರವಿ - ಎಲ್ಲೆಡೆಯೂ ಪ್ರಸ್ತುತ

ಭಾರವಿಯನ್ನು ಆರನೇ ಶತಮಾನಕ್ಕೆ ಎಲ್ಲಾ ವಿದ್ವಾಸರೂ ತಂದು ನಿಲ್ಲಿಸುತ್ತಾರೆ ಆದರೆ ಅದಕ್ಕೂ ಮೊದಲು ನೇಪಾಲದ ಒಂದು ಶಾಸನದಲ್ಲಿ "ಸುಸ್ವಾದುಶೀತಲ ವಿಶುದ್ಧ ಜಲಾಭಿರಾಮಾ ಕೀರ್ತಿಃ ಕೃತೇ ಯಂ ಇಹ ಭಾರವಿನಾ ನ ವಿನಾ" ಎನ್ನುತ್ತದೆ ಇಲ್ಲಿ ಭಾರವಿ ಎನ್ನುವುದು ಇದೇ ಭಾರವಿಗೋ ಅಥವಾ ಬೇರೆಯೋ ನನಗೆ ಅರ್ಥವಾಗಿಲ್ಲ. ಆದರೆ ಶಾಸನವಂತೂ ಅತ್ಯಂತ ಸುಂದರ ನುಡಿಮುತ್ತುಗಳಿಂದ ಕಂಗೊಳಿಸಿದೆ.
ಸಂಸ್ಖ್ರತ ಕವಿ ಭಾರವಿಯ . ಕಾಲ ಕ್ರಿ. . 634ಕ್ಕೂ ಮೊದಲು. ಮಹಾಕಾವ್ಯಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಮಾಡಿದ್ದ ಕಾಳಿದಾಸ ಮತ್ತು ಅಶ್ವಘೋಷರ ನಂತರ ಅಗ್ರಗಣ್ಯನೆನಿಸುವವನು ಭಾರವಿ. ಹುಟ್ಟು ಬಡತನದಿಂದ ಬಂದ ಭಾರವಿ ತನ್ನ ಬಾಲ್ಯದಿಂದ ಹಿಡಿದು ಯೌವನದ ತನಕವೂ ಅತ್ಯಂತ ಸಂಕಷ್ಟದಲ್ಲಿ ಬೆಳೆದ. ಮಡದಿಯ ಕುಹಕನದ ನುಡಿಯ ಮಧ್ಯೆಯೂ ತನ್ನ ಕಾವ್ಯಾತ್ಮಕ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಕೊನೆಗೊಮ್ಮೆ ಮಡದಿಯ ಮಾತಿನಿಂದ ಸಿಟ್ಟಿಗೆದ್ದು ಮನೆಯಿಂದ ಹೊರಟು ತನ್ನ ವಿದ್ಯಾ ಸಂಪತ್ತಿಗೆ ಎಂದಾದರೊಂದು ದಿನ ಅದೃಷ್ಟ ಲಕ್ಷ್ಮಿ ಒಲಿಯ ಬಹುದೆಂದು ಆಸೆ ಹೊಂದಿ ಅಲೆಯುತ್ತಾ ಬಳಲಿ ಕಾಡಿನ ಸಮೀಪದ ಒಂದು ಕೆರೆಯ ದಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸುಮ್ಮನೆ ಕುಳಿತಿರಲಾರದೇ ಕೆರೆಯಲ್ಲಿ ಆಗತಾನೆ ಅರಳಿದ್ದ ಕಮಲದ ಪತ್ರೆಯ ಮೇಲೆ ಒಂದು ಕವಿತೆಯನ್ನು ರಚಿಸುತ್ತಾನೆ "ಯಾರೂ ಸಹ ಪೂರ್ವಾಪರವನ್ನು ಯೋಚಿಸದೇ (ಹಿಂದೆ ಮುಂದೆ ಯೋಚಿಸದೇ) ಯಾವುದೇ ಕಾರ್ಯಕ್ಕೂ ಕೈಹಾಕಬಾರದು. ಸರಿಯಾಗಿ ತಿಳಿಯದೇ ಮಾಡಿದ ಕಾರ್ಯ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ. ಸಂಪತ್ತು ಸದ್ಗುಣಗಳನ್ನು ಮಾತ್ರವೇ ಅಪೇಕ್ಷಿಸುತ್ತದೆ. ಮತ್ತು ಪೂರ್ವ ವಿಮರ್ಶೆಮಾಡುವವನನ್ನು ಸಂಪತ್ತು ತಾನಾಗಿಯೇ ಸೇರುತ್ತದೆ" ಎಂದು ಬರೆದಿಟ್ಟನು. ಅದೇ ಸಮಯಕ್ಕೆ ಆ ದೇಶದ ರಾಜ ಕಾಡಿಗೆ ಬಂದವನು ಇವನ ಈ ಕವಿತೆಯನ್ನು ನೋಡಿ ಸಂತೋಷಗೊಂಡು. ಮಾರನೆಯ ದಿನ ಅರಮನೆಯಲ್ಲಿ ಬಂದು ಕಾಣುವಂತೆ ವಿನಂತಿಸುತ್ತಾನೆ. ಭಾರವಿ ಮಾರನೆಯ ದಿನ ಅರಮನೆಗೆ ತೆರಳಿದಾಗ ಆತನ ದರಿದ್ರ ವೇಷವನ್ನು ನೋಡಿ ದ್ವಾರದಲ್ಲಿಯೇ ತಡೆದು ಹಿಂದಕ್ಕೆ ಕಳಿಸುತ್ತಾರೆ. ಆದರೆ ಮುಂದೊಂದು ದಿನ ರಾಜ ಒಂದು ಅಚಾತುರ್ಯಕ್ಕೆ ಕೈಹಾಕಿದಾಗ ಈತನ ಈ ಕವಿತೆಯನ್ನು ನೋಡಿ ಸಮಾಧಾನದಿಂದ ಯೋಚಿಸಿದಾಗ ನಡೆಯಬಹುದಾಗಿದ್ದ ದೊಡ್ದ ಅನಾಹುತವೊಂದು ತಪ್ಪುತ್ತದೆ. ಆಗ ರಾಜ ಈ ಭಾರವಿಯನ್ನು ಕರೆಸಿ ಸನ್ಮಾನಿಸಿದ ಎಂದು ಒಂದು ಕಥೆ ಬರುತ್ತದೆ. ಆದರೆ ಭಾರವಿಯ ಬಗ್ಗೆ ಇರುವ ಈ ಕಥೆ ಎಷ್ಟು ಸತ್ಯವೋ ತಿಳಿಯುತ್ತಿಲ್ಲ. ಭಾರವಿಯ ಹುಟ್ಟು ಹೆಸರು ದಾಮೋದರ. ಈತನ ತಂದೆ ನಾರಾಯಣಸ್ವಾಮೀ. ಈತ ಚಾಲುಕ್ಯರಾಜನಾದ ವಿಷ್ಣುವರ್ಧನನ ಮಿತ್ರನಾಗಿದ್ದನು. ಎಂದು ತಿಳಿದು ಬರುತ್ತದೆ. ಭಾರವಿ ದಂಡಿ ಎನ್ನುವ ಕವಿಯ ಅಜ್ಜ. ಗಂಗ ದೊರೆ ದುರ್ವಿನೀತನಿಗಂತೂ ಈತ ಅತ್ಯಂತ ಪ್ರೀತಿಪಾತ್ರನು ಅನ್ನಿಸುತ್ತದೆ. ಕ್ರಿ. . 634 ಐಹೊಳೆ ಶಾಸನದಲ್ಲಿ "ಯೇನಾಯೋಜಿ ನವೇಶ್ಮಸ್ಥಿರಮತ್ರ್ಥವಿಧೌ ವಿವೇಕಿನಾ ಜಿನವೇಶ್ಮ ವಿಜಯತಾಂ ರವಿಕೀರ್ತ್ತಿಃ ಕವಿತಾಶ್ರಿತಕಾಳಿದಾಸ ಭಾರವಿಕೀರ್ತ್ತಿಃ" ಎಂದು ಕಾಳಿದಾಸನ ಹೆಸರಿನ ಜತೆಯಲ್ಲೇ ಭಾರವಿಯ ಹೆಸರಿನ ಉಲ್ಲೇಖವಿರುವುದರಿಂದಲೂ ಕ್ರಿ. . 673ರಲ್ಲಿ ಭಾರತದಲ್ಲಿ ಸಂಚರಿಸಿದ ಇತ್ಸಿಂಗ್ ಎಂಬ ಚೀನಿಯಾತ್ರಿಕ ಉಲ್ಲೇಖಿಸಿರುವ ಜಯಾದಿತ್ಯನ "ಕಾಶಿಕಾವೃತ್ತಿ"ಯಲ್ಲಿ "ಪ್ರಕಾಶ ಸ್ಥೇಯಾಖ್ಯಯೋಶ್ಚ" ಎಂಬ ಪಾಣಿನಿ ಸೂತ್ರದ ವೃತ್ತಿಯಲ್ಲಿ ಭಾರವಿಯ ಕಿರಾತರ್ಜುನೀಯದ "ಸಂಶಯ್ಯ ಕರ್ಣಾದಿಷು ಶಿಷ್ಠತೇಯಃ" ಎಂಬ ಪ್ರಯೋಗ ಉದಾಹೃತವಾಗಿರುವುದರಿಂದಲೂ ಭಾರವಿ ಕ್ರಿ.. ಆರನೆಯ ಶತಮಾನಕ್ಕಿಂತ ಮೊದಲಿನವನು ಎಂದು ತಿಳಿಯುತ್ತದೆ. ದಂಡಿವಿರಚಿತ ಎನ್ನಲಾದ "ಅವಂತಿ ಸುಂದರೀಕಥೆ" ಉಪಕ್ರಮಶೋಕಗಳಲ್ಲಿ ಭಾರವಿಗೆ ದಾಮೋದರನೆಂಬ ಹೆಸರು ಇತ್ತೆಂದೂ ಅವನ ಮಗನ ಪ್ರಪೌತ್ರನೇ ದಂಡಿಯೆಂದೂ ಅವನು ಕೌಶಿಕ ಗೋತ್ರದ ಬ್ರಾಹ್ಮಣನೆಂದೂ ಅವನ ಪೂರ್ವಜರು ಆರ್ಯಾವರ್ತದ ವಾಯವ್ಯದಲ್ಲಿದ್ದ ಆನಂದಪುರದಿಂದ ದಕ್ಷಿಣಾಪಥದ ಅಚಲಪುರಕ್ಕೆ ವಲಸೆ ಬಂದವರೆಂದೂ ಭಾರವಿ ಚಾಲುಕ್ಯರಾಜನಾದ ವಿಷ್ಣುವರ್ಧನನ ಗೆಳೆಯನಾಗಿದ್ದು ಕ್ರಮೇಣ ಗಂಗ ದುರ್ವಿನೀತನೆಂಬ ರಾಜನ ಆಸ್ಥಾನ ಕವಿಯಾದನೆಂದು ಹೇಳಿದೆ. ದುರ್ವಿನೀತನು ಕಿರಾತಾರ್ಜುನೀಯದ 16ನೆಯ (ಚಿತ್ರಬಂಧಗಳ) ಸರ್ಗಕ್ಕೆ ವಾಖ್ಯಾನ ಬರೆದುದಾಗಿ ಗುಮ್ಮಾರೆಡ್ಡಿಪುರದ ತಾಮ್ರಪಟ ಶಾಸನದಿಂದ ತಿಳಿದುಬರುತ್ತದೆ. ವ್ಯಾಖ್ಯಾನ ಈಗ ಉಪಲಬ್ಧವಾಗಿಲ್ಲದಿದ್ದರೂ ದುರ್ವಿನೀತನ ಕಾಲ ಸುಮಾರು 580 ಎಂದು ನಂಬಲಾಗಿದೆಯಾದ್ದರಿಂದ ಭಾರವಿ 6ನೆಯ ಶತಮಾನದ ಉತ್ತರಾರ್ಧದವನೆಂದು ಹೇಳಬಹುದಾಗಿದೆ.
ಭಾರವಿ ತನ್ನ ಕಿರಾತಾರ್ಜುನೀಯ ಕಾವ್ಯದ 18ನೆಯ ಸರ್ಗದ 5ನೆಯ ಶ್ಲೋಕದಲ್ಲಿ ಶಿವನ ಎದೆಯ ಮೇಲೆ ಅರ್ಜುನನೆಸಗಿದ ಮುಷ್ಟಿಪ್ರಹಾರವನ್ನು ಸಹ್ಯಾದ್ರಿಯ ವಿಶಾಲವಾದ ತಪ್ಪಲು ಪ್ರದೇಶದ ಮೇಲೆ ಅಪ್ಪಳಿಸಿ ಹಿಂದೂಡಲ್ಪಡುವ ಸಮುದ್ರದ ಅಲೆಗಳಿಗೆ ಹೋಲಿಸಿರುವುದರಿಂದಲೂ ಮೊದಲನೆಯ ಸರ್ಗದ ಕೊನೆಯ ಶ್ಲೋಕದಲ್ಲೂ 9ನೆಯ ಸರ್ಗದ 2 ಮತ್ತು 5ನೆಯ ಶ್ಲೋಕಗಳಲ್ಲೂ ಸೂರ್ಯಸಮುದ್ರದಲ್ಲಿ ಮುಳುಗುವುದನ್ನು ನಿರೂಪಿಸಿರುವುದರಿಂದಲೂ ಈತ ಪಶ್ಚಿಮದ ಸಮುದ್ರತೀರದಲ್ಲಿ ನೆಲಸಿದ್ದವನಾಗಿರಬೇಕೆಂದು ಊಹಿಸಬಹುದು.
ಈತನ ಬಡತನವನ್ನು "ಸಹಸಾವಿಧದೀತನ ಕ್ರಿಯಾಂ" ಎಂಬ ಕಿರಾತಾರ್ಜುನೀಯದ ಶ್ಲೋಕವೊಂದು ಈತನಿಗೆ ರಾಜಾಶ್ರಯ ದೊರಕಿಸಿಕೊಟ್ಟಿತೆಂದೂ ಮುಂತಾಗಿ ಹೇಳುವ ಕೆಲವು ದಂತಕಥೆಗಳನ್ನು ಬಿಟ್ಟರೆ ಈತನ ಜೀವನ ವೃತ್ತಾಂತದ ಬಗೆಗೆ ವಿಶೇಷ ಮಾಹಿತಿ ಉಪಲಬ್ಧವಾಗಿಲ್ಲ. ಈತನಿಗೆ ಮಹಾಶೈವ, ಮಜಹಾಪ್ರಭಾವ ಪ್ರದೀಪ್ತಭಾಸ ಎಂಬ ಹೆಸರುಗಳಿದ್ದುವಾಗಿ ಅವಂತಿಸುಂದರೀ ಕಥೆಯಲ್ಲಿ ಹೇಳಿದೆ.
ಭಾರವಿ ರಚಿತವೆಂದು ಪರಿಚಿತವಾಗಿರುವ 18 ಸರ್ಗಗಳ ಕಿರಾತಾರ್ಜುನೀಯ ಮಹಾಕಾವ್ಯ. ಮಹಾಭಾರತದ ಒಂದು ಪ್ರಸಿದ್ಧ ಆಖ್ಯಾನದ ಮೇಲೆ ರಚಿತವಾಗಿದೆ. ದ್ಯೂತದಲ್ಲಿ ಸೋತ ಯುಧಿಷ್ಠಿರ ಸಹೋದರರ ಸಮೇತ ದ್ವೈತ ವನದಲ್ಲಿರುವಾಗ ಅಲ್ಲಿಗೆ ಬಂದ ವೇದವ್ಯಾಸರ ಹೇಳಿಕೆಯಂತೆ ಅರ್ಜುನ ಈಶ್ವರನಿಂದ ನಿಂದ ಪಾಶುಪತಾಸ್ತ್ರ ಪಡೆಯಲಿಕ್ಕಾಗಿ ಇಂದ್ರಕೀಲಪರ್ವತದಲ್ಲಿ ತಪಸ್ಸುಮಾಡಲು ಹೋಗುತ್ತಾನೆ. ಅರ್ಜುನನ ಕಠಿಣ ತಪಸ್ಸನ್ನು ಭಂಗಪಡಿಸಲು ಅಪ್ಸರ ಸ್ತ್ರೀಯರೇ ಮೊದಲಾದವರು ಯತ್ನಿಸುತ್ತಾರೆ. ಆದರೆ ಅರ್ಜುನ ಮತ್ತಷ್ಟು ಏಕಾಗ್ರ ಮನಸ್ಸಿನಿಂದ ಈಶ್ವರನ ಉಪಾಸನೆಗೆ ತೊಡಗುತ್ತಾನೆ. ಈತನ ತಪೋಬಲವನ್ನು ಪರೀಕ್ಷಿಸುವುದಕ್ಕಾಗಿ ಈಶ್ವರ ಕಿರಾತ ವೇಷಧರಿಸಿ ಬರುತ್ತಾನೆ. ಒಂದು ಹಂದಿಯನ್ನು ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸುತ್ತಾನೆ ಅರ್ಜುನ ಹಂದಿಯ ಮೇಲೆ ಬಾಣ ಬಿಡುತ್ತಾನೆ. ಅರ್ಜುನನ ಬಾಣದಿಂದ ಹಂದಿ ಸಾಯುತ್ತದೆ. ಆದರೆ ಬಿಟ್ಟ ಬಾಣದ ವಿಷಯದಲ್ಲಿ ಕಿರಾತ ಹಾಗೂ ಅರ್ಜುನರಲ್ಲಿ ಜಗಳ ಆರಂಭವಾಗುತ್ತದೆ. ಒಂದು ಸಲ ಅರ್ಜುನ ವಿಜಯಿಯಾದರೆ ಮತ್ತೊಂದು ಸಲ ಕಿರಾತವಿಜಯಿ ಎನಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಇಬ್ಬರೂ ಮಲ್ಲಯುದ್ಧಕ್ಕೆ ನಿಲ್ಲುತ್ತಾರೆ. ಗಾಂಡೀವಿಯ ಬಲಕ್ಕೆ ಪ್ರಸನ್ನನಾದ ಶಂಕರ ತನ್ನ ನಿಜಸ್ವರೂಪ ತೋರಿಸಿ ಪಾಶುಪತಾಸ್ತ್ರ ಕೊಟ್ಟು ಅರ್ಜುನನ ಅಭಿಲಾಷೆಯನ್ನು ಪೂರ್ಣಗೊಳಿಸುತ್ತಾನೆ. ಅರ್ಜುನ ಪಾಶುಪತಾಸ್ತ್ರ ಪಡೆಯಲು ಹೊರಡುವ ಸನ್ನಿವೇಶ, ಅವನ ತಪಸ್ಸು ಅದರ ಸಿದ್ಧಿ ಹಿನ್ನೆಲೆಯಲ್ಲಿ ಅರ್ಜುನನಿಗೂ ಕಿರಾತಸ್ವರೂಪಿ ಶಿವನಿಗೂ ನಡೆದ ಯುದ್ಧ - ಇದು ಕಿರಾತಾರ್ಜುನೀಯದ ಕಥಾವಸ್ತು. ಮಹಾಭಾರತದ ವನಪರ್ವದಲ್ಲಿ ಬರುವ ಕಥೆಗೂ ಕಾವ್ಯದ ಕಥೆಗೂ ವಿಶೇಷ ವ್ಯತ್ಯಾಸವಿಲ್ಲ. ಲಕ್ಷಣಬದ್ಧವಾಗಿರುವ ಕಾವ್ಯವನ್ನು ಪರಿಶೀಲಿಸಿದವರಿಗೆ ಲಾಕ್ಷಣಿಕರು ಇದನ್ನೇ ಆದರ್ಶವಾಗಿಟ್ಟುಕೊಂಡು ಮಹಾಕಾವ್ಯಲಕ್ಷಣಗಳನ್ನು ರಚಿಸಿರಬೇಕೆಂದು ತೋರುತ್ತದೆ. ಕಾವ್ಯದ 18 ಸರ್ಗಗಳಲ್ಲಿ ಅಡಕವಾಗಿರುವ 18 ವರ್ಣನೆಗಳೂ ಮನೋಹರವಾಗಿವೆ. ಪಾತ್ರ ಚಿತ್ರಣದಲ್ಲೂ ವಿಷಯನಿರೂಪಣೆಯಲ್ಲೂ ಭಾರವಿಯ ಕೌಶಲ ಅಪ್ರತಿಮ; ಪ್ರತಿಭೆ ಉಜ್ವಲ. ಉಪಮಾನಗಳಿಗೆ ಕಾಳಿದಾಸ ಪ್ರಸಿದ್ಧನಾಗಿರುವಂತೆ ಅರ್ಥಗೌರವಕ್ಕೆ ಭಾರವಿ ಹೆಸರಾಗಿದ್ದಾನೆ. ಕಾಳಿದಾಸನ ಶೈಲಿ ಲಲಿತವೂ ಸುಕುಮಾರವೂ ಆಗಿದ್ದರೆ ಭಾರವಿಯದು ಗಂಭೀರ ಮತ್ತು ಪ್ರೌಢ. ಪ್ರಕೃತಿಮಧುರಾ ಭಾರವಿಗಿರಃ ಎಂಬುದು ಸದುಕ್ತಿಕರ್ಣಾಮೃತದ ಒಂದು ಶ್ಲೋಕದಲ್ಲಿ ಬರುವ ಭಾರವಿ ಪ್ರಶಸ್ತಿ.
ಬೇರೆ ಕಾವ್ಯಾದಿಗಳನ್ನು ಭಾರವಿ ರಚಿಸಲೇ ಇಲ್ಲವೇ ಅಥವಾ ರಚಿಸಿದ್ದು ಈಗ ಅವು ಲುಪ್ತವಾಗಿಬಿಟ್ಟಿವೆಯೇ ಎಂಬುದನ್ನು ತಿಳಿಯಲು ಆಧಾರಗಳಾವುವೂ ದೊರತಿಲ್ಲ. ಕಾಳಿದಾಸನ ಕಾವ್ಯಗಳಿಗೆ ಸಂಜೀವಿನಿ ವ್ಯಾಖ್ಯಾನ ಬರೆದಿರುವ ಮಲ್ಲಿನಾಥನೇ ಕಿರಾತಾರ್ಜುನೀತಕ್ಕೆ "ಘಂಟಾಪಥವ್ಯಾಖ್ಯಾನ" ಬರೆದಿದ್ದಾನೆ. ಭಾರವಿಯಯ ಕಾವ್ಯ ನಾರಿಕೇಳಪಾಕದಂತೆ ಎಂಬುದೇ ಮಲ್ಲಿನಾಥನ ಅಭಿಪ್ರಾಯ. ಕಾಳಿದಾಸ ಅಶ್ವಘೋಷದಲ್ಲಿ ಕಾಣಸಿಗುವ ಚಿತ್ರಬಂಧಾದಿ ಶಬ್ಧ ಚಮತ್ಕಾರಗಳು ಭಾರವಿಯ ಕಾವ್ಯದಲ್ಲಿವೆ. ಕಿರಾತಾರ್ಜುನೀಯದ 15ನೆಯ ಸರ್ಗದ 22ನೆಯ ಶ್ಲೋಕವನ್ನು ಕೊನೆಯಿಂದ ಹಿಂದಕ್ಕೆ ಓದಿದರೆ ಅದೇ 23ನೆಯ ಶ್ಲೋಕ. ಸಂದರ್ಭಾನುಸಾರ ಅರ್ಥವೂ ಸರಿಹೋಗುತ್ತದೆ. ಒಂದು ಅಥವಾ ಎರಡೇ ಅಕ್ಷರಗಳನ್ನು ಬಳಸಿಕೊಂದು ರಚಿತವಾದ ಶ್ಲೋಕಗಳು 16 ಬೇರೆ ಬೇರೆ ವೃತ್ತಗಳಲ್ಲಿವೆ. ಇವೆಲ್ಲವನ್ನೂ ಗಮನಿಸಿದರೆ ಭಾರವಿ ಕಾವ್ಯರಚನೆ ಮಾಡುವ ವೇಳೆಗೆ ಪಾಂಡಿತ್ಯಪ್ರದರ್ಶನ ಕವಿಗೆ ಅವಶ್ಯಗುಣವೆಂಬ ಭಾವನೆ ಬೇರು ಬಿಟ್ಟಿತ್ತೆಂದು ಕಾಣುತ್ತದೆ.
ಕಿರಾತಾರ್ಜುನೀಯದ ಆದಿಯಲ್ಲೆ ಶ್ರೀ ಶಬ್ದವೂ ಅದರ ಪ್ರತಿಯೊಂದು ಸರ್ಗದ ಕೊನೆಯ ಶ್ಲೋಕದಲ್ಲಿ ಲಕ್ಷ್ಮಿಶಬ್ದವೂ ಇರುವುದರಿಂದ ಅದು ಲಕ್ಷ್ಮೀಪದಲಾಂಛನವುಳ್ಳ ಕಾವ್ಯವೆಂದು ಹೆಸರುಗೊಂಡಿತು. ಭಾರವಿಯ ಅನಂತರದವನಾದ ಮಾಘಕವಿ ರಚಿಸಿರುವ ಶಿಶುಪಾಲವಧ ಮಹಾಕಾವ್ಯ ಅನೇಕ ರೀತಿಯಲ್ಲಿ ಕಿರಾತಾರ್ಜುನೀಯದ ಅನುಕರಣೆ ಎಂದು ಹೇಳಬಹುದು.
ಭಾರವಿಯ ಬಗ್ಗೆ ಹೀಗೆಯೂ ಒಂದು ಕಥೆ ಇದೆ.

ಒಮ್ಮೆ ತನ್ನ ಸಮಕಾಲೀನ ರಾಜಕುಮಾರನಾದ ವಿಷ್ಣುವರ್ಧನನ ಜೊತೆ ಬೇಟೆಗಾಗಿ ದಟ್ಟ ಅರಣ್ಯವನ್ನು ಹೊಕ್ಕಾಗ ಭಾರವಿ ಮಾಂಸವನ್ನು ಸೇವಿಸಿದ ಕಾರಣಕ್ಕಾಗಿ ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆಗೆ ಹೋದನು. ಆಗ ಅವನ ಕಾವ್ಯವನ್ನು ಕೇಳಿದ ಕಾಂಚೀನೃಪಾಲ ಸಿಂಹವಿಷ್ಣು ಅವನನ್ನು ತನ್ನ ರಾಜಧಾನಿಗೆ ಕರೆದೊಯ್ದನು. ಸಿಂಹವಿಷ್ಣುವಿನ ಮಗನಾದ ಮಹೇಂದ್ರವಿಕ್ರಮನೊಡನೆ ಭಾರವಿ ಅಲ್ಲಿಯೇ ಆನಂದದಿಂದ ವಾಸಿಸತೊಡಗಿದನು. ಅವನ ಮಗ ಮನೋರಥ ಹಾಗೂ ಮೊಮ್ಮಗ ದಂಡೀ. ಕಥೆ ಅವಂತಿಸುಂದರೀ ಕಥೆಯಲ್ಲಿ ನಿರೂಪಿತವಾಗಿದೆ. ಭಾರವಿಯ ಮತ್ತೊಂದು ಹೆಸರು ದಾಮೋದರೆಂಬುದು ಕೆಲವರ ಅಭಿಪ್ರಾಯವಾದರೆ, ಮತ್ತೆ ಕೆಲವರು ದಾಮೋದರ-ಭಾರವಿ ಬೇರೆಬೇರೆ ಎನ್ನುತ್ತಾರೆ.