Search This Blog

Monday 30 July 2018

ಕಃ ಅಂದರೆ ಯಾರು ?


ಇಂದ್ರನನ್ನು ಕೊಲ್ಲಲಿಕ್ಕಾಗಿಯೇ ಮಗಬೇಕೆಂದು ಯಜ್ಞಮಾಡಿದ ವಿಶ್ವರೂಪಾಚಾರ್ಯನ ಸ್ವರದಲ್ಲಿ ವ್ಯತ್ಯಾಸವಾಗಿದ್ದರಿಂದ ಇಂದ್ರನಿಂದಲೇ ಕೊಲ್ಲಲ್ಲ್ಪಡುವ ಮಗನಾಗಿ ವ್ರತ್ರ ಹುಟ್ಟುತ್ತಾನೆ. ಇಂದ್ರನ ಪರಮ ವೈರಿಯಾಗಿ ಬೆಳೆಯುತ್ತಾನೆ. ಇಂದ್ರ ವ್ರತ್ರನನ್ನು ಯುದ್ಧವೊಂದರಲ್ಲಿ ಸಂಹರಿಸುತ್ತಾನೆ. ಈತನ ಸಂಹಾರದ ನಂತರ ಸಮಸ್ತ ಭೂಮಂಡಲವೇ ಇಂದ್ರನ ವಶವಾಗುತ್ತದೆ. ಆಗ ಇಂದ್ರ ಪ್ರಜಾಪತಿಯಲ್ಲಿ ಒಂದು ಮಾತು ಕೇಳುತ್ತಾನೆ. ಪ್ರಜಾಪತಿಯೇ ಇಷ್ಟರ ತನಕ ಮಹಾಸ್ಥಾನವನ್ನು ಗಳಿಸಿ ನೀನು ಎಲ್ಲರಿಂದಲೂ ಪೂಜ್ಯನೆನಿಸಿಕೊಂಡಿದ್ದಿಯಲ್ಲ. ಅದು ಇನ್ನು ಮುಂದೆ ನನಗೆ ಸಲ್ಲಬೇಕು ಎನ್ನುತ್ತಾನೆ. ಇನ್ನು ಮುಂದೆ ನಿನ್ನ "ಮಹತ್" ಪದವಿಯು ನನಗೆ ಬೇಕು ಎನ್ನುತ್ತಾನೆ. ಆಗ ಪ್ರಜಾಪತಿಯು ಹೇಳುತ್ತಾನೆ. ಇಲ್ಲಿಯ ತನಕ ನನ್ನಲ್ಲಿದ್ದ ಆ "ಮಹತ್" ಪದವಿಯನ್ನು ತೆಗೆದುಕೊಂಡರೆ, ಪದವಿಯನ್ನು ಕಳೆದುಕೊಂಡ ನಾನು ಯಾರು (ಕಃ ?) ಎನ್ನುತ್ತಾನೆ. ಎಲ್ಲವನ್ನೂ ಕಳೆದು ಕೊಂಡ ನನ್ನ ಸ್ಥಾನಮಾನವೇನು ಎಂದು ಕೇಳುತ್ತಾನೆ. ಅದಕ್ಕೆ ಇಂದ್ರನು ಪ್ರಜಾಪತಿಯೇ ಈಗ ನೀನೇ ಕೇಳಿರುವೆಯಲ್ಲ ನಾನು ಯಾರು "ಕಃ" ಎಂದು ಅದೇ ಇನ್ನು ಮುಂದೆ ನೀನು. ಇನ್ನು ಮುಂದೆ ನೀನು ಕಃ ಶಬ್ದದಿಂದ ಕರೆಯಲ್ಪಡುವೆ. ಅಂದಿನಿಂದ ಪ್ರಜಾಪತಿಗೆ ಕ ಎನ್ನುವ ಹೆಸರು ಪ್ರಚಲಿತಕ್ಕೆ ಬಂದು ಪ್ರಸಿದ್ಧನಾಗುವನು. ಇದು ಐತರೇಯ ಬ್ರಾಹ್ಮಣದ ೨೧-೨೧ ರಲ್ಲಿ ಬರುವ ಕಥೆ. "ಪ್ರಜಾಪತಿರಭವಕ್ಕೋ ವೈ ನಾಮ ಪ್ರಜಾಪತಿರ್ಮಹಾನಿಂದ್ರೋ ಭವತ್" ಎಂದು ಐತರೇಯದಲ್ಲಿ ಸಿಗುತ್ತದೆ. ಈ ಕಾರಣದಿಂದಲೇ ಯಾವುದಾದರೂ ದಾನವನ್ನು ಸ್ವೀಕರಿಸುವಾಗ ಹೇಳುವ ಮಂತ್ರಗಳಲ್ಲಿ ಈ ವಿಷಯವು ಹೇಳಲ್ಪಡುತ್ತದೆ. "ಕ ಇದಂ ಕಸ್ಮಾ ಅದಾದಿತ್ಯಾಹ | ಪ್ರಜಾಪತಿರ್ವೈ ಕಃ | ಪ್ರಜಾಪತಯ ಏವ ತದ್ ದದಾತಿ ಎಂದು ಹೇಳುವ ರೂಢಿ ಬೆಳೆದು ಬಂತು.
ಕ ಎನ್ನುವ ಅಕ್ಷರಕ್ಕೆ ಸುಖ ಎನ್ನುವ ಅರ್ಥವೂ ಇರುವುದರಿಂದ ಪ್ರಜಾಪತಿಯನ್ನು ಸುಖ ದಾಯಕನು ಅಥವಾ ಸುಖ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. "ಇಂದ್ರೋ ವೃತ್ರ ಮಹಂತಂ ದೇವಾ ಅಬ್ರುವನ್ ಮಹಾನ್ವಾ ಅಯಮಭೂದ್ಯೋ ವೃತ್ರಮಧೀದಿತಿ ತನ್ಮಹೇಂದ್ರಸ್ಯ ಮಹೇಂದ್ರತ್ವಂ" ಪ್ರಜಾಪತಿಯ ಮಹತ್ತನ್ನು ಇಂದ್ರ ಸ್ವೀಕರಿಸಿದುದರಿಂದ ಮುಂದೆ "ಮಹೇಂದ್ರ" ಎನ್ನಿಸಿಕೊಂಡ.
ಹಿರಣ್ಯಗರ್ಭಂ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮಾ ||
ಹಿರಣ್ಯಗರ್ಭಂ ಸಮವರ್ತತಾಗ್ರೇ ಎಂದರೆ ಇಲ್ಲಿ ಹಿರಣ್ಯಗರ್ಭನು ಪ್ರಜಾಪತಿ ಎಂದಾಗುವುದಾದರೂ, ಹಿರಣ್ಭ್ಯ ಗರ್ಭ ಎನ್ನುವುದು ಈ ಜಗತ್ತಿನ ಸೃಷ್ಟಿಯ ಆರಂಭದಲ್ಲಿ ವಿಶ್ವವು ಒಂದು ಅಂಡಾಕಾರದಲ್ಲಿ ಚಿನ್ನದ್ದ ಬಣ್ಣದ ಪ್ರಕಾಶಮಾನವಾದ ಬೆಳಕನ್ನು ಸೂಸುತ್ತಿತ್ತು ಎನ್ನುವುದು. ಅಂತಹ ಪ್ರಕಾಶಮಾನವಾದ ಅಂಡವನ್ನು ತನ್ನ ಗರ್ಭದಲ್ಲಿ ಧರಿಸಿದಂತವನನ್ನೇ ಹಿರಣ್ಯಗರ್ಭನೆಂದು ಕರೆಯಲಾಗಿದೆ. ಇಲ್ಲಿ ಇನ್ನೊಂದು ಸೂಕ್ಷ್ಮ ಅಡಗಿದೆ, ಸೃಷ್ಟಿಗೆ ಪೂರ್ವದಲ್ಲಿ ಯಾವುದೂ ಇರಲಿಲ್ಲ ಅವ್ಯಕ್ತವಾದ ಒಂದು ಪ್ರಕಾಶ(ಶಕ್ತಿ) ಒಂದು ನಮ್ಮ ಕಣ್ಣಿಗೆ ಕಾಣಿಸದಷ್ಟು ಪ್ರಮಾಣದಲ್ಲಿದ್ದದ್ದು. ವ್ಯಕ್ತವಾಗ ಬೇಕೆನ್ನುವ ಇಚ್ಚೆ ಆ ಪರಮಾತ್ಮನಲ್ಲಿ ಉಂಟಾಗುವುದನ್ನೇ ತೈತ್ತಿರೀಯ ಉಪನಿಷತ್ತಿನಲ್ಲಿ "ಸೋ ಕಾಮಯತ | ಬಹುಸ್ಯಾಂ ಪ್ರಜಾಯಾಯೇತಿ ......... ಎಂದು ಹೇಳಿರುವುದು ಸೃಷ್ಟಿಯ ಕ್ರಿಯೆಯನ್ನು. ಒಂದು ವಸ್ತುವಿನಲ್ಲಿ ಅಡಕವಾಗಿರುವ ಇನ್ನೊಂದು ವಸ್ತುವನ್ನೇ "ಗರ್ಭ" ಎನ್ನಲಾಗುತ್ತದೆ. ಹೀಗೇ ಹಿರಣ್ಯ ಗರ್ಭ ಎನ್ನುವ್ದು ಸೃಷ್ಟಿ ಕ್ರಿಯೆಯನ್ನು ಪ್ರತಿಪಾದಿಸುತ್ತದೆ. ಇಲ್ಲಿ ಹಿರಣ್ಯ ಗರ್ಭನಾದ ಪ್ರಜಾಪತಿಯೊಬ್ಬನೇ ಇದ್ದ ಎನ್ನಲಾಗಿದೆ.
"ಭೂತಸ್ಯ ಜಾತಃ ಪತಿಃ ಏಕಃ ಆಸೀತ್" ಸಮಸ್ತ ಚರಾಚರ ವಸ್ತು ಮತ್ತು ಪ್ರಾಣಿಗಳಿಗೂ ಆತನೊಬ್ಬನೇ ಆಜ್ಞಾಧಾರಕನಾಗಿದ್ದ ಎನ್ನುತ್ತದೆ.
"ಕಸ್ಮೈ ದೇವಾಯ ಹವಿಷಾ ವಿಧೇಮಾ " ಇಲ್ಲಿ ಪುನಃ ಕ ಕಾರ ಬಂತು. ಇಲ್ಲಿ ಕಸ್ಮೈ ಎಂಉ ಬಂದಿದೆ ಅಂದರೆ ಕಂ ಎನ್ನುವುದು ಸುಖವನ್ನು ಸೂಚಿಸುವುದಕ್ಕಾಗಿ. ಕಸ್ಮೈ ಎನ್ನುವುದು ಸುಖ ಸ್ವರೂಪನಾದ ಪ್ರಜಾಪತಿಯನ್ನು ಕುರಿತಾಗಿದೆ. ನಿರುಕ್ತದಲ್ಲಿ ಇದನ್ನೇ "ಕಃ ಕ್ರಮನೋ ವಾ ಕ್ರಮಣೋ ವಾ ಸುಖೋ ವಾ" ಎನ್ನಲಾಗಿದೆ. ಅಂದರೆ ಕಂ ಎನ್ನುವುದು ಪ್ರೀತಿಸು ಎನ್ನುವುದನ್ನು ಧ್ವನಿಸುವುದರಿಂದ ಇಲ್ಲಿ ಸಕಲವನ್ನೂ ಪ್ರೀತಿಸುವವನು ಎನ್ನುವುದು ಅರ್ಥ. ಕಃ ಎನ್ನುವುದು ಇದರಿಂದಲೇ ಹುಟ್ಟಿದ್ದು, ಕ್ರಮಣ ಅತ್ರಿಕ್ರಮಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಕಃ ಎಂದರೆ ಸುಖಸ್ವರೂಪನಾದವನು ಎನ್ನುವುದು ಒಟ್ಟಾರೆ ಅರ್ಥ. ಹೀಗೆ ಕಃ ಶಬ್ದವು ಬಹಳ ವಿಸ್ತಾರವಾದ ಅರ್ಥವನ್ನು ಕೊಡುತ್ತದೆ
#ಶಿಲೆಗಳಲ್ಲಡಗಿದ_ಸತ್ಯ


ಸ್ವರ್ಭಾನುವಿನ ತಮಾಂಧಕಾರ


ನಾನು ಹುಟ್ಟಿದ್ದು ಹಳ್ಳಿಯಲ್ಲಿ ಚಿಕ್ಕವನಿರುವಾಗ ಅಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಸಂಜೆಯಾಯಿತೆಂದರೆ ಲಾಟೀನು ಬೆಳಕು ಬಿಟ್ಟರೆ ದೊಡ್ದ ಬೆಳಕು ಕಾಣುವುದು ಯಕ್ಷಗಾನದ ರಂಗಸ್ಥಳಕ್ಕೆ ಅಳವಡಿಸುತ್ತಿದ್ದ ಪೆಟ್ರೋಮಾಕ್ಸ್. ಅದೂ ಸಹ ಪಂಪ್ ಹೊಡೆದು ಉರಿಸುತ್ತಿದ್ದರು ಅದು ಕ್ರಮೇಣ ಮಬ್ಬಾಗುತ್ತಿತ್ತು. ಅಂತಹ ಕಾಲದಲ್ಲಿಯೂ ಗ್ರಹಣ ಬರುತ್ತಿತ್ತು. ಆದರೂ ಆ ಕಾಲದಲ್ಲಿ ಗ್ರಹಣಕಾಲದಲ್ಲಿ ದೇವಾಲಯಗಳ ಬಾಗಿಲು ಹಾಕುವುದು ನೋಡಿಲ್ಲ ಗ್ರಹಣಾರಂಭದಲ್ಲಿಯೇ ಸ್ನಾನ ಮಾಡಿ ದೇವಾಲಯದಲ್ಲಿ ರುದ್ರಾಭಿಷೇಕ ನಡೆಯುತ್ತಿತ್ತು ಗ್ರಹಣ ಮೋಕ್ಷವಾದ ನಂತರವೂ ಪುನಃ ಸ್ನಾನ ಮಾಡಿ ಪೂಜೆಗಳು ನಡೆಯುತ್ತಿದ್ದವು ಅದು ಅಂದಿಗೂ ಇಂದಿಗೂ ವ್ಯತ್ಯಾಸವಂತೂ ಆಗಿಲ್ಲ. ಆದರೆ ಈಗ ಕೆಲವೆಡೆ ದೇವಾಲಯಗಳ ಬಾಗಿಲು ಮುಚ್ಚುತ್ತಾರಂತೆ. ಇಂತಹ ಪವಿತ್ರ ಕಾಲದ ಉಪಯೋಗವನ್ನೇ ಮಾಡಿಕೊಳ್ಳುತ್ತಿಲ್ಲ ಅಂತಾಯಿತು. ಪ್ರಕೃತಿಯ ವಿಸ್ಮಯಗಳನ್ನು ಕಾಣದೆ ಮನೆಯಲ್ಲೇ ಹೊದ್ದು ಮಲಗುವ ಚಾಳಿ ಇದನ್ನೆಲ್ಲಾ ಮಾಡಿಸುತ್ತದೆಯೋ ಅಥವಾ ದೃಶ್ಯ ಮಾಧ್ಯಮ ಹಾಗೆ ಮಾಡಿಸುತ್ತದೆಯೋ ಗೊತ್ತಿಲ್ಲ. ಅದೇನೇ ಇರಲಿ ಗ್ರಹಣದ ಕುರಿತು ವೇದಗಳಲ್ಲಿನ ಮತ್ತು ಪುರಾಣದ ಕಲ್ಪನೆ ಸ್ವಲ್ಪ ಹೇಳುತ್ತೇನೆ. ಕಶ್ಯಪ ಮಹರ್ಷಿ ಪ್ರಾಚೀನ ಋಷಿ. ಆತನಿಗೆ ಹನ್ನೆರಡು ಜನ ಪತ್ನಿಯರು. ಅವರಲ್ಲಿ ಧನು ಎನ್ನುವಳಲ್ಲಿ ಜನಿಸಿದವನೇ ಸ್ವರ್ಭಾನು ಎನ್ನುವವ. ಸ್ವರ್ಭಾನು ಆಸುರೀ ಸ್ವಭಾವದವನಾಗಿದ್ದ. ಈತ ತಾಮಸೀ ಸ್ವಭಾವಕ್ಕೆ ಹೆಸರಾಗಿದ್ದ. ತಮಸ್ಸು ಈತನ ಸಹಜ ಸ್ವಭಾವವಾಗಿತ್ತು.
ಯತ್ತ್ವಾ ಸೂರ್ಯ ಸ್ವರ್ಭಾನುಸ್ತಮಸಾವಿಧ್ಯದಾಸುರಃ |
ಅಕ್ಷೇತ್ರವಿದ್ಯಥಾ ಮುಗ್ಧೋ ಭುವನಾನ್ಯದೀಧಯುಃ ||
ಎಲೈ ಸೂರ್ಯನೇ ಅಸುರಪುತ್ರನಾದ ಸ್ವರ್ಭಾನುವು ತನ್ನ ಮಾಯಾ ನಿರ್ಮಿತವಾದ ಅಂಧಕಾರದಿಂದ ಯಾವಾಗ ನಿನ್ನನ್ನು ಆವರಿಸಿದನೋ ಆಗ ಸಕಲ ಲೋಕಗಳೂ ಬೆದರಿದವು ನಿನ್ನ ಅಂಧಕಾರದಿಂದ ತಮ್ಮ ವಾಸಸ್ಥಾನವನ್ನೇ ಗುರುತಿಸದಂತಾದರು. ಅಂದರೆ ಸೂರ್ಯಗ್ರಹಣದ ಕಾಲದಲ್ಲಿನ ಅಂಧಕಾರವನ್ನು ಸೂಚಿಸಲಾಗಿದೆ. ಈತನ ಮಾಯೆಗಳನ್ನೆಲ್ಲಾ ಇಂದ್ರ ಯುದ್ಧಮಾಡಿ ಜಯಿಸುತ್ತಾನಂತೆ. ಇಂದ್ರನಿಗೆ ಅತ್ರಿ ಮಹರ್ಷಿ ಸಹಕರಿಸಿ ಸೂರ್ಯನ ತೇಜಸ್ಸು ಪುನಃ ಪ್ರಕಾಶಿಸುವಂತೆ ಮಾಡಿದ ಎನ್ನುವುದು ತಿಳಿದು ಬರುತ್ತದೆ. ಈತನನ್ನೇ ಪುರಾಣಗಳಲ್ಲಿ ರಾಹು ಎನ್ನುವುದಾಗಿ ಕರೆಯಲಾಗಿದೆ. ಆದರೆ ಈತ ಅತ್ಯಂತ ಶಕ್ತಿಯುತನಾದ ಬಲಿಷ್ಠನಾದ ಅಸುರನಾಗಿದ್ದ ಎನ್ನುವುದು ಸಂಹಿತೆಗಳಲ್ಲಿ ಮತ್ತು ಬ್ರಾಹಣಗಳಲ್ಲಿ ಉಲ್ಲೇಖಗೊಂಡಿದ್ದರೂ ಈತನನ್ನ ರಾಹು ಎಂದು ಹೇಳಿಲ್ಲ.
ತಮಸ್ತು ರಾಹುಸ್ಸ್ವರ್ಭಾನುಃ ಸೈಂಹಿಕೇಯೋ ವಿಧಂತುದಃ ಎನ್ನುವುದಾಗಿ ಅಮರಕೋಶದಲ್ಲಿ ಸ್ವರ್ಭಾನುವನ್ನು ಹೇಳಲಾಗಿದೆ. ಇದರಲ್ಲಿ ತಿಳಿಸಿರುವ ಗುಣವೆಲ್ಲವೂ ಸ್ವರ್ಭಾನುವಿನಲ್ಲಿರುವುದರಿಂದ ಆತನೇ ರಾಹು ವಿನಲ್ಲಿರುದರಿಂದ ಎನ್ನ ಬಹುದು. ಹೀಗಿರುವುದರಿಂದ ಪುರಾಣದ ರಾಹುವೇ ಸ್ವರ್ಭಾನು. ಆದರೆ ಕಂಠದ ಮೇಲ್ಬಾಗ ಅಸುರ ಎನ್ನುವುದು ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.
ವೇದದಲ್ಲಿ ಮಾತ್ರ ಯತ್ತ್ವಾ ಸೂರ್ಯ ಸ್ವರ್ಭಾನುಸ್ತಮಸಾವಿಧ್ಯದಾಸುರಃ ಎನ್ನುದರಿಂದ ಈತ ಕೇವಲ ಮುಖ ಮಾತ್ರ ಅಸುರನಾಗಿರದೇ ಸಂಪೂರ್ಣ ತಾಮಸೀ ಪೃವೃತ್ತಿಯ ಅಸುರಪುತ್ರನೂ ಸ್ವರ್ಭಾನು ಎನ್ನುವ ಹೆಸರುಳ್ಳವನು ಎನ್ನಲಾಗಿದೆ.
ಸ್ವರ್ಭಾನು ದೃಷ್ಟಂ ಸೂರ್ಯಸ್ಯ ಅಪಹತ್ಯ ತತೋ ತ್ರಯಃ ಎಂದು ಬೃಹದ್ದೇವತಾದಲ್ಲಿ ಬರುತ್ತದೆ. ಅಂದರೆ ಅತ್ರಿ ಮಹರ್ಷಿಗಳು ಸ್ವರ್ಭಾನುವಿನಿಂದ ಗ್ರಸ್ತನಾಗಿದ್ದ ಸೂರ್ಯನ ತೇಜಸ್ಸು ಕ್ಷೀಣಿಸಿ ಕಾಣದಾದಾಗ ಕತ್ತಲ್ಲಿನಿಂದ ಬಿಡಿಸಿ ಸೂರ್ಯನ ಪ್ರಕಾಶ ಕಂಡೊಡನೆ ಅಗ್ನಿಯನ್ನು ಸ್ತುತಿಸಿದರು ಎನ್ನುತ್ತದೆ.
ಕೌಶೀತಕಿಯಲ್ಲಿ ಹೀಗೆ ಹೇಳಲಾಗಿದೆ. ಸ್ವರ್ಭಾನುವೆಂಬ ಅಸುರನು ಸೂರ್ಯನನ್ನು ಕತ್ತಲೆಯಿಂದ ಮುಚ್ಚಿದಾಗ ದೇವತೆಗಳ ಪ್ರಾರ್ಥನೆಯಂತೆ ಅತ್ರಿ ಮಹರ್ಷಿ ಸೂರ್ಯನನ್ನು ಬಿಡಿಸಿದ ಎನ್ನುವುದಾಗಿ ಹೇಳಲಾಗಿದೆ. ಆಗ ಸಪ್ತದಶಸ್ತೋಮದಿಂದ ಯುಕ್ತವಾದ ತ್ರ್ಯಹಾತ್ಮಕವಾದ ಯಾಗದಲ್ಲಿ ಸ್ವರಸಾಮ ಎನ್ನುವ ಮಂತ್ರದಿಂದ ಪರಿಹರಿಸುತ್ತಾನಂತೆ. ಮನಸ್ಸಿನ ಅಂಧಕಾರದ ನಿವಾರಣೆಗೆ ಜಪಿಸುವ ಮಂತ್ರವನ್ನು ಮುಂದೆ ಸ್ವರ ಸಾಮವೆಂದೇ ಕರೆಯಲಾಗುತ್ತದೆ.
ಯಂ ವೈ ಸೂರ್ಯಂ ಸ್ವರ್ಭಾನುಸ್ತಮಸಾ ವಿಧ್ಯದಾಸುರಃ |
ಅತ್ರಯಸ್ತಮನ್ವ ವಿಂದನ್ನಹ್ಯನ್ಯೇ ಅಶಕ್ನುವನ್ || ಎಂದು ಋಗ್ವೇದದ ಐದನೇ ಮಂಡಲದಲ್ಲಿ ಹೇಳಲಾಗಿದೆ.
ಸೂರ್ಯನ ಅಂಧಕಾರವನ್ನು ಹೋಗಲಾಡಿಸಿ ಸೂರ್ಯನನ್ನು ಪಡೆಯುವಲ್ಲಿ ಅತ್ರಿಮಹರ್ಷಿಗಳ ವಂಶಜರು ಸಮರ್ಥರಾದರು ಮತ್ತು ಅವರಲ್ಲದೇ ಬೇರೆ ಯಾರಿಗೂ ಸಾಧ್ಯವಾಗಲಿಲ್ಲ ಎನ್ನುವುದಾಗಿ ಈ ಋಕ್ಕು ಹೇಳುತ್ತದೆ. "ರಹತಿ ಗೃಹೀತ್ವಾ ತ್ಯಜತಿ ಚಂದ್ರಾರ್ಕೌ" ಚಂದ್ರ ಮತ್ತು ಸೂರ್ಯ ಗ್ರಹಣಕ್ಕೂ ರಾಹುವು ಕಾರ್ಣನಾಗಿರುವುದರಿಂದ ಆತನನ್ನು ರಾಹು ಎನ್ನಲಾಗಿದೆ. ಹೀಗೇ ಸೂರ್ಯನ ಅಥವಾ ಚಂದ್ರನ ಪ್ರಕಾಶವು ಕುಗ್ಗುತ್ತದೆ ಮತ್ತು ಅಂಧಕಾರವು ಆವರಿಸುತ್ತದೆ ಎಂದು ವೇದಗಳಲ್ಲಿ ಉಲ್ಲೇಖಿಸಿದ್ದರೂ ರಾಹು ನುಂಗುತ್ತಾನೆ ಎನ್ನುವ ರೀತಿಯ ಉಲ್ಲೇಖ ಸಿಗುವುದಿಲ್ಲ. ಅಥವಾ ಇದಕ್ಕಾಗಿ ಭಯದ ವಾತಾವರಣವನ್ನೋ ಅಥವಾ ಈ ಗ್ರಹಣಗಳಿಂದ ದೋಷಗಳಿವೆ ಎನ್ನುವ ಯಾವ ಪ್ರಸ್ತಾಪವೂ ಇಲ್ಲ.
ಇನ್ನು ಮಹಾಭಾರತದಲ್ಲಿ ಗಮನಿಸಿದರೆ
ಪುನರ್ಮೇಘಮಹಾವಾತೌ ಪುನರ್ವಜ್ರಮಹಾಚಲೌ | ಪುನಃ ಕುಞ್ಜರಶಾರ್ದೂಲೌ ಪುನಃ ಸ್ವರ್ಭಾನುಭಾಸ್ಕರೌ || ೩೧ ||
ಒಬ್ಬ ರಾಕ್ಷಸನು ಪ್ರಳಯಕಾಲದ ಬೆಂಕಿಯಾಗಿ ಉರಿಯತೊಡಗುತ್ತಾನೆ ಮತ್ತೊಬ್ಬ ರಾಕ್ಷಸನು ಸಮುದ್ರರೂಪವನ್ನು ಧರಿಸಿ ಪ್ರಳಯಾಗ್ನಿಯನ್ನೂ ಉಪಶಮನಗೊಳಿಸುತ್ತಿದ್ದನು. ಒಬ್ಬನು ತಕ್ಷಕನ ರೂಪವನ್ನು ಧರಿಸಿ ಕಚ್ಚಲು ಬರುತ್ತಾನೆ ಮತ್ತೊಬ್ಬನು ಒಡನೆಯೇ ಗರುಡನ ರೂಪವನ್ನು ಧರಿಸಿ ತಕ್ಷಕನ ಸೊಕ್ಕನ್ನು ಮುರಿಯುತ್ತಿದ್ದನು. ಒಬ್ಬ ರಕ್ಕಸನು ಮೇಘದ ರೂಪವನ್ನು ಧರಿಸಿ ಧಾರಾಕಾರವಾಗಿ ಮಳೆಗರೆಯಲು ಪ್ರಾರಂಭಿಸಿದರೆ ಮತ್ತೊಬ್ಬ ದೈತ್ಯನು ಚಂಡಮಾರುತನ ರೂಪವನ್ನು ತಾಳಿ ಮೋಡಗಳನ್ನು ದಿಕ್ಕಾಪಾಲಾಗಿ ಚೆದುರಿಸಿಬಿಡುತ್ತಿದ್ದನು. ಒಬ್ಬ ರಾಕ್ಷಸನು ಪರ್ವತದ ರೂಪವನ್ನು ತಾಳಿದರೆ ಮತ್ತೊಬ್ಬನು ವಜ್ರಾಯುಧದ ರೂಪವನ್ನು ತಾಳುವನು. ಒಬ್ಬ ರಕ್ಕಸನು ಮದವೇರಿದ ಆನೆಯ ರೂಪವನ್ನು ಧರಿಸಿ ಧ್ವಂಸಮಾಡಲು ಬರುತ್ತಾನೆ ಮತ್ತೊಬ್ಬನು ಸಿಂಹದ ರೂಪವನ್ನು ಧರಿಸಿ ಆನೆಯ ಕೊಬ್ಬನ್ನು ಅಡಗಿಸುತ್ತಿದ್ದನು. ಒಬ್ಬ ಅಸುರನು ಪ್ರಳಯಕಾಲದ ಸೂರ್ಯನಾಗಿ ದಹಿಸಲು ಪ್ರಾರಂಭಿಸಿದರೆ ಮತ್ತೊಬ್ಬ ದಾನವನು ರಾಹುವಿನ ರೂಪವನ್ನು ತಾಳಿ ಸೂರ್ಯನ ಪ್ರತಾಪ ವನ್ನು ಕುಂಠಿತಗೊಳಿಸುತ್ತಿದ್ದನು. ಪರಸ್ಪರವಧಾಕಾಂಕ್ಷಿಗಳಾಗಿದ್ದ, ನೂರಾರು ಮಾಯೆಗಳನ್ನು ಸೃಷ್ಟಿಸುತ್ತಿದ್ದ ಅಲಂಬುಷ ಮತ್ತು ಘಟೋತ್ಕಚರು ಈ ರೀತಿಯಾಗಿ ವಿಚಿತ್ರರೀತಿಯಲ್ಲಿ ಯುದ್ಧ ಮಾಡುತ್ತಿದ್ದರು.
ಭೀಷ್ಮಪರ್ವದಲ್ಲಿ ರಾಹು, "ರಾಹುವಿನ ಪ್ರಮಾಣವೆಷ್ಟಿದೆಯೆಂಬು ದನ್ನು ಹೇಳುತ್ತೇನೆ. ಸ್ವರ್ಭಾನುವು ಮಂಡಲಾಕಾರನಾಗಿದ್ದಾನೆಂದು ನಾನು ಕೇಳಿದ್ದೇನೆ. ರಾಹುಗ್ರಹದ ವ್ಯಾಸದ ವಿಸ್ತಾರ ಹನ್ನೆರಡು ಸಾವಿರ ಯೋಜನ ಗಳು. ಅದರ ಸುತ್ತಳತೆ ಮೂವತ್ತಾರು ಸಾವಿರ ಯೋಜನಗಳು. ರಾಹುಗ್ರಹದ ಗಾತ್ರವು (ದಪ್ಪವು) ಆರು ಸಾವಿರ ಯೋಜನಗಳೆಂದು ಪೌರಾಣಿಕರು ಹೇಳುತ್ತಾರೆ. ಚಂದ್ರಗ್ರಹದ ವ್ಯಾಸ ಹನ್ನೊಂದು ಸಾವಿರ ಯೋಜನಗಳಿವೆ. ಸುತ್ತಳತೆಯು ಮೂವತ್ತುಮೂರು ಸಾವಿರ ಯೋಜನಗಳು. ಚಂದ್ರಗ್ರಹದ ಗಾತ್ರವು ಅಥವಾ ದಪ್ಪವು ಐದು ಸಾವಿರದ ಒಂಬೈನೂರು ಯೋಜನಗಳು. ಸೂರ್ಯಗ್ರಹದ ವಿಸ್ತಾರ ಹತ್ತು ಸಾವಿರ ಯೋಜನಗಳು. ಸುತ್ತಳತೆ ಮೂವತ್ತು ಸಾವಿರ ಯೋಜನಗಳು. ಸೂರ್ಯಗ್ರಹದ ಗಾತ್ರ ಐದು ಸಾವಿರದ ಎಂಟುನೂರು ಯೋಜನಗಳು. ಈ ರೀತಿಯಾಗಿ ಪರಮೋದಾರನಾದ, ಶೀಘ್ರಗಾಮಿಯಾದ ವಿಭಾವಸುವಿನ (ಸೂರ್ಯಗ್ರಹದ) ಪರಿಮಾಣವನ್ನು ಹೇಳುತ್ತಾರೆ. ಧೃತರಾಷ್ಟ್ರ! ಇದೇ ಸೂರ್ಯಗ್ರಹದ ಪ್ರಮಾಣವೆಂದು ನಿರ್ದಿಷ್ಟವಾಗಿದೆ. ಮೂರು ಗ್ರಹಗಳಲ್ಲಿ ರಾಹುವೇ ಬಹಳ ದೊಡ್ಡಗ್ರಹ ವಾದುದರಿಂದ ಕೆಲವು ಸಮಯಗಳಲ್ಲಿ ರಾಹುಗ್ರಹವು ಸೂರ್ಯ ಮತ್ತು ಚಂದ್ರಗ್ರಹ ಗಳನ್ನೇ ಮುಚ್ಚಿಬಿಡುತ್ತದೆ. ಎಂದು ಗಾತ್ರವನ್ನು ಹೇಳಲಾಗಿದೆ.
ಹೀಗೇ ಗ್ರಹಣಗಳ ಕುರಿತಾಗಿ ಎಲ್ಲಿಯೂ ಭಯದ ವಾತಾವರಣದ ವಿಷಯಗಳಿಲ್ಲದೇ ಅದೊಂದು ಪವಿತ್ರ ಸಮಯ ಎನ್ನುವುದು ಕಂಡು ಬರುತ್ತದೆ ಸ್ವರಸಾಮದಂತಹ ಮಂತ್ರಗಳಿಂದ ಗ್ರಹಗಳನ್ನು ಸ್ತುತಿಸುವ ಪುಣ್ಯ ಕಾರ್ಯವಾಗಬೇಕೇ ವಿನಃ ದೇವಾಲಯದ ಬಾಗಿಲು ಹಾಕಿಕೊಳ್ಳುವ ಮೂರ್ಖತನ ಸರಿಯಲ್ಲ. ಆಹಾರ ಸೇವನೆಯ ಕುರಿತಾಗಿಯೂ ವೇದಗಳಲ್ಲಿ ಎಲ್ಲಿಯೂ ಉಲ್ಲೇಖ ಸಿಗುವುದಿಲ್ಲ. ಆದರೆ ಅವೆಲ್ಲ ಸ್ಮೃತಿಯ ವಾಕ್ಯವಿರಬಹುದು. ಸೂರ್ಯ ಮತ್ತು ಭೂಮಿ ಚಂದ್ರ ಇವುಗಳ ಸಂಬಂಧವನ್ನು ಇಲ್ಲಿ ಕಲ್ಪಿಸಿಕೊಂಡು ಸ್ವರ್ಭಾನು ವೆನ್ನುವ ತಮಾಂಧಕಾರ ನಮ್ಮನ್ನು ಆವರಿಸುತ್ತದೆ ಎನ್ನುವ ಸೂಕ್ಷ್ಮ ಅರಿಯ ಬೇಕು. ಆದರೆ ಇವೆಲ್ಲವನ್ನೂ ನಾವು ಆಚರಿಸದೇ ಇರುವುದು ಮತ್ತು ಏನೇನೋ ಕಲ್ಪಿಸಿ ಭಯಗೊಳ್ಳುವುದು ಶುದ್ಧ ಮೂರ್ಖತನ ಎನ್ನಬಹುದು. ಇನ್ನು ಜ್ಯೋತಿಷ್ಯದಲ್ಲಿಯೂ ಕೇತುಗ್ರಹವು ಚಂದ್ರನ ಜೊತೆಗಿದ್ದು ಅಲ್ಲಿಂದ ಏಳನೇ ಮನೆಯಲ್ಲಿ ಸೂರ್ಯನ ಜೊತೆಗೆ ರಾಹುವಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಂದರೆ ಪ್ರತಿಫಲನವನ್ನು ಇಲ್ಲಿ ಹೇಳಲಾಗಿದೆ.
#ಶಿಲೆಗಳಲ್ಲಡಗಿದ_ಸತ್ಯ

ಮೂಮೆ ಪೆರ್ಜ್ಜೆರೆಪು ಇದೊಂದು ಪೇಟಾ ???


ಳುಕ್ಯರ ಆಳ್ವಿಕೆಯ ಸುಮಾರು ಎರಡು ಶತಮಾನಗಳಲ್ಲಿ ಅವರು ನಿರ್ಮಿಸಿದ್ದು ಸುಮಾರು ಆರು ಗುಹಾಲಯಗಳನ್ನು ಮತ್ತು ಕಟ್ಟಿಸಿದ್ದು ಸುಮಾರು ನಲವತ್ತೆಂಟು ಪ್ರಸಿದ್ಧ ದೇವಾಲಯಗಳನ್ನು. ಇವುಗಳನ್ನು ಎಷ್ಟುಜನ ಶಿಲ್ಪಿಗಳು ನಿರ್ಮಿಸಿದರು ಎಂದು ತಿಳಿದು ಬರುತ್ತಿಲ್ಲ. ಆದರೆ ಇನ್ನೂರಕ್ಕೂ ಹೆಚ್ಚು ಹೆಸರುಗಳು ಅಲ್ಲಲ್ಲಿ ಶಿಲೆಗಳಲ್ಲಿ ದಾಖಲಾಗಿವೆ. ಲ್ಲುಕುಟಿಗ(ಕಲ್ಕುಟಿಗ)ನಿಂದ ಹಿಡಿದು ಸೂತ್ರಧಾರಿಯವರೆಗೂ ಶ್ರಮಿಸಿದ ಶಿಲ್ಪಿಗಳೆಲ್ಲರೂ ಲಿಪಿ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರೆ, ಈ ಸಂಖ್ಯೆ ಸಾವಿರದ ಗಡಿ ದಾಟುತ್ತಿದ್ದಿರಬಹುದು. ಅದೇನೇ ಇರಲಿ, ಈ ಇನ್ನೂರು ವರ್ಷಗಳಲ್ಲಿ ರಾಜಮನ್ನಣೆ ದೊರಕಿದ್ದು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ತ್ರೈಲೋಕೇಶ್ವರ ಎನ್ನುವ ಎರಡು ದೇವಾಲಯಗಳನ್ನು ಕಟ್ಟಿದ ಗುಣ್ಡ ಮತ್ತು ಸರ್ವ್ವಸಿದ್ಧಿಆಚಾರಿಗಳಿಗೆ ಮಾತ್ರ. ಇಮ್ಮಡಿ ವಿಕ್ರಮಾದಿತ್ಯನು ಮೂರು ಬಾರಿ ಕಾಂಚಿಯನ್ನು ಜಯಿಸಿ, ಪಲ್ಲವರನ್ನು ಸೋಲಿಸಿ, ಅಪಾರ ಸಂಪತ್ತಿನಿಂದ ರಾಜಧಾನಿಗೆ ಮರಳಿ ಬಂದ ಮಹದಾನಂದದ ದಿನಗಳಲ್ಲಿ ಇದು ಸಂಭವಿಸಿದ್ದು. ತಮ್ಮ ವಿಜಯವನ್ನು ಹೇಳಿಕೊಳ್ಳಲು ಮತ್ತು ಯುದ್ಧದಲ್ಲಿ ಗೆದ್ದು ತಂದ ಸಂಪತ್ತಿನ ಒಂದು ಭಾಗವನ್ನು ಧರ್ಮಕಾರ್ಯಕ್ಕೆ ವಿನಿಯೋಗಿಸಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ವಿಕ್ರಮಾದಿತ್ಯನ ಇಬ್ಬರು ಅರಸಿಯರು ಅವಳಿ ದೇವಾಲಯಗಳನ್ನು ಕಟ್ಟಿಸಿದರು. ಕಾಂಚಿ ಯುದ್ಧದ ಮೊದಲ ಗೆಲುವಿನ ನಂತರ ಈ ದೇವಾಲಯದ ಕಾರ್ಯವು ಪ್ರಾರಂಭಗೊಂಡು ಮೂರನೇ ಬಾರಿ ಜಯ ಲಭಿಸಿದಾಗ ಪೂರ್ಣಗೊಂಡಿರಬಹುದು. ಮೂರು ಬಾರಿ ಪಡೆದ ಯಶಸ್ಸನ್ನಿಂದ ಉತ್ತೇಜಿತನಾದ ಶಾಸನಕವಿ ಶ್ರೀವಿಕ್ರಮಾದಿತ್ಯಭಟಾರನು ಮ್ಮೂಮೆಕಂಚಿಯಮ್ಮೂಮೆಪರಾಜಿಸಿದೊರಾ ಎಂದು ಹೊಗಳುತ್ತಾ ಲೋಕೇಶ್ವರಂ ಮಾಡಿದ ಸೂತ್ರಧಾರಿ[ಗೆ] ಮೂಮೆಪೆರ್ಜ್ಜೆಱೆಪು ಗೆಯ್ದ, ಶ್ರೀಸರ್ವ್ವಸಿದ್ಧಿ ಆಚಾರಿ ಹಾಗೂ ಮಹಾದೇವಿಯರಾ ದೇಗುಲಮಾನ್ ಮಾಡಿದ ಸೂತ್ರಧಾರಿ ಶ್ರೀಗುಣ್ಡನ್ ಅನಿವಾರಿತಾಚಾರಿಗೆ ಮ್ಮೂಮೆಪೆರ್ಜ್ಜಱೆಪು ಪಟ್ಟಮಂ ತ್ರಿಭುವನಾಚಾರಿಯೆಂದು ಪೆಸರಿತ್ತು ಪ್ರಸಾದಙ್ಗಯ್ದದ್ದನ್ನು ವರ್ಣಿಸಿರುವನು. ಸರ್ವ್ವಸಿದ್ಧಿಯನ್ನು ಗೌರವಿಸಿದ ಶಾಸನದಲ್ಲಿ ಶ್ರೀಲೋಕಮಹಾದೇವಿಯರಾ ಈ ಲೋಕೇಶ್ವರಂ ಎಂಬ ಉಲ್ಲೇಖವಿದ್ದರೆ, ಗುಣ್ಡನನ್ನು ಗೌರವಿಸಿದ ಶಾಸನದಲ್ಲಿ ಮಹಾದೇವಿಯರಾ ದೇಗುಲದ ಉಲ್ಲೇಖವಿದೆ, ಆದರೆ ಪೆರ್ಜ್ಜರಿಪು ಯಾರ ಹಸ್ತದಿಂದ ಈ ಸೂತ್ರಧಾರಿಗಳಿಗೆ ಕೊಡಲ್ಪಟ್ಟಿತು ಎಂಬುದರ ಉಲ್ಲೇಖ ಇಲ್ಲ.
ಪೆರ್ಜ್ಜೆಱೆಪುಗೆಯ್ದ ಉಲ್ಲೇಖ ಒಂದು ಶಾಸನದಲ್ಲಿದ್ದರೆ ಇನ್ನೊಂದರಲ್ಲಿ ಪೆರ್ಜ್ಜೆಱೆಪುಪಟ್ಟದ ಉಲ್ಲೇವಿದೆ. ಇದೊಂದು ಗೌರವ ಸಮಾರಂಭವೆನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಇದರ ನಿಜ ಸ್ವರೂಪ ನನಗೆ ತಿಳಿಯುತ್ತಿಲ್ಲ. ಪೆರ್ ಎಂದರೆ ಹಿರಿದು, ದೊಡ್ಡ ಪ್ರಮಾಣದ್ದು, ಎಂದಾಗುತ್ತದೆ, ಆದರೆ ಜರಿಪು ಎಂದರೇನು ಎಂಬುದರ ಬಗ್ಗೆ ಒಮ್ಮತವಿಲ್ಲ. ಇದು ಜರಿರುಮಾಲನ್ನು ತೊಡಿಸುವ ಗೌರವವೆನ್ನುವುದಾದರೆ ಈ ಪದದ ಶಬ್ದಾರ್ಥ ಮಾತ್ರ ಹೇಳಿದಂತಾಗಬಹುದು. ಇದೊಂದು ರಾಜಗೌರವವಾದರೂ ಗೌರವಾನ್ವಿತ ಸೂತ್ರಧಾರಿಗಳಿಗೆ ಇದರಿಂದಾದ ಆರ್ಥಿಕ ಮತ್ತು ಸಾಮಾಜಿಕ ಲಾಭದ ಕುರಿತು ತಿಳಿಯುತ್ತಿಲ್ಲ. ಭೂಮಿಯೋ, ಸಂಪತ್ತು, ನಿವೇಶನ, ಇವಾವೂ ಇವರಿಗೆ ಸಿಗಲಿಲ್ಲವೆಂದು ಕಾಣುತ್ತದೆ. ಇದೊಂದು ನಿರ್ದಿಷ್ಟವಾದ ನಿಮಿತ್ತಮಾತ್ರದ ಕಾರ್ಯಕ್ರಮ ಮಾತ್ರವಾಗಿ ಮುಕ್ತಾಯವಾಗಿರಬಹುದು. ಈ ಸೂತ್ರಧಾರರಲ್ಲಿ ಒಬ್ಬನಿಗೆ ಸಿಕ್ಕ ವಿಶೇಷ ಗೌರವವೆಂದರೆ ಅನಿವಾರಿತಾಚಾರಿ ಎಂಬ ಹೆಸರು. ಇದು ಆಳರಸ ವಿಕ್ರಮಾದಿತ್ಯನ ವಿಶೇಷಣವಾಗಿದ್ದೊಂದು ವಿಶೇಷ.
ಮೂಮೆಪೆರ್ಜ್ಜೆರಪು ಎನ್ನುವ ಈ ಗೌರವ ಸಮಾರಂಭದಿಂದ ಶಿಲ್ಪಿಗಳಕುಲಕ್ಕೆ ಆದ ಒಂದೇ ಒಂದು ತಾತ್ಕಾಲಿಕ ಲಾಭವೆಂದರೆ ಅವರು ಉಪಯೋಗಿಸುತ್ತಿದ್ದ ತಾಂಬೂಲಕ್ಕೆ ಸಿಕ್ಕ ಕರ ವಿನಾಯತಿ ಅಷ್ಟೇ. ಗುಣ್ಡ ಮತ್ತು ಸರ್ವ್ವಸಿದ್ಧಿಗೆ ಈ ಗೌರವ ದೊರೆಕಿದ್ದು ಅವರು ಕಟ್ಟಿದ ದೇವಾಲಯಗಳನ್ನು ಮೆಚ್ಚಿಯೋ ಅಥವಾ ಈ ದೇವಾಲಯಗಳು ವಿಜಯೋತ್ಸವದ ಅಂಗವಾಗಿದ್ದುದರಿಂದಲೋ, ಆಗಿರಬಹುದು. ಮೂಮೆಪೆರ್ಜ್ಜೆರಪು ಎನ್ನುವುದು ಚಾಳುಕ್ಯರ ಇತಿಹಾಸದಲ್ಲಿ ಬೇರೊಬ್ಬರಿಗೆ ಕೊಟ್ಟ ಇನ್ನೊಂದು ಉದಾಹರಣೆ ಸಿಗುವುದಿಲ್ಲ. ಇನ್ನೂ ಹಲವು ವಿದ್ವಾಂಸರ ಅಭಿಪ್ರಾಯದಂತೆ ಈ ಮೂಮೆ ಪೆರ್ಜ್ಜೆರಪು ಎಂದರೆ ಮೂರು ಬಾರಿ ಸೆರಗನ್ನು ಕಾಣಿಸುವಂತೆ ರಚಿಸಿರುವ ಒಂದು ಬಗೆಯ ಪೇಟಾ. ಈಗಿನ ಮೈಸೂರು ಪೇಟಾದಂತೆಯೇ ಅದು ಇದ್ದಿತ್ತು ಅದಕ್ಕೆ ಅಷ್ಟೇ ಮಹತ್ವವೂ ಇತ್ತು ಎನ್ನುವ ಅಭಿಪ್ರಾಯವೂ ಇದೆ. ಅದೇನೇ ಇದ್ದರೂ ಕದಂಬ, ಗಂಗ, ರಾಷ್ಟ್ರಕೂಟರ ಕಾಲದಲ್ಲಿಯೂ ಕಾಣಿಸಿಕೊಳ್ಳದೇ ಇಲ್ಲಿ ಮಾತ್ರ ಇದು ಕಾಣಿಸಿಕೊಂಡಿದ್ದು ವಿಶೇಷ.


ಜಗತ್ತಿನ ಮೊದಲ ಡಾಕ್ಟರ್ ಸೂರ್ಯ


ಪ್ರಸ್ಕಣ್ವಮಹರ್ಷಿ ಋಗ್ವೇದ ಕಾಲದ ಒಬ್ಬ ಋಷಿಯಾಗಿದ್ದ. ಅನೇಕ ಸೂಕ್ತಗಳ ದೃಷ್ಟಾರನಾಗಿ ಕಾಣಿಸಿಕೊಳ್ಳುವ ಈತ ಕಣ್ವ ಮಹರ್ಷಿಯ ವಂಶದವನು. ಕಣ್ವನ ಮಗ ಎನ್ನುವುದಾಗಿಯೂ ಋಗ್ವೇದದ ಒಂದನೇ ಮಂಡಲದ ನಲವತ್ತನಾಲ್ಕನೇ ಸೂಕ್ತದಲ್ಲಿ ಹೇಳಲಾಗಿದೆ. ಕಣ್ವ ಋಷಿಯು ಋಗ್ವೇದದ ೯೭ ಋಕ್ಕುಗಳಿಗೆ ಋಷಿಯಾಗಿ ಸಿಗುತ್ತಾನೆ. ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಈತ ಒಬ್ಬ. ಋಗ್ವೇದದ ಎಂಟನೇ ಮಂಡಲದಲ್ಲಿರುವ ಎಲ್ಲಾ ಸೂಕ್ತಗಳಿಗೆ ಈತ ಮತ್ತು ಈತನ ವಂಶೀಯರೇ ಋಷಿಗಳಾಗಿದ್ದಾರೆ. ಈ ಕಣ್ವನ ಮಗ ಪ್ರಸ್ಕಣ್ವ ವಿಶೇಷವಾಗಿ ಕಾಣಿಸಿಕೊಳ್ಳುತ್ತಾನೆ. ಅದಕ್ಕೆ ಕಾರಣವಿದೆ ಆತ ಸೂರ್ಯನ ಕುರಿತಾಗಿ ಎಲ್ಲಾ ಕಡೆಯೂ ಪ್ರಾರ್ಥಿಸಿ ಆತನ ಶಕ್ತಿಯನ್ನು ಹೊಗಳುತ್ತಾನೆ. ಪ್ರಸ್ಕಣ್ವ ವ್ಯಾಧಿಗಳಿಂದ ಬಳಲುತ್ತಿದ್ದ ಎನ್ನುವುದು ಆತನ ಅನೇಕ ಋಕ್ಕುಗಳಿಂದ ತಿಳಿದು ಬರುತ್ತದೆ.
ಉದ್ಯನ್ನದ್ಯ ಮಿತ್ರಮಹ ಆರೋಹನ್ನುತ್ತರಾಂ ದಿವಂ |
ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ ||
ಹೇ ಸೂರ್ಯದೇವ, ನೀನು ಈ ಜಗತ್ತಿನ ಅನುಕೂಲವಾಗಿರತಕ್ಕ ತೇಜಸ್ಸಿನಿಂದ ಕೂಡಿದ್ದಿಯೇ. ಸಕಲ ಚರಾಚರ ಜೀವ ಜುಅಂತುಗಳಿಗೂ ಎಲ್ಲವಕ್ಕೂ ಪ್ರೇರಕನಾಗಿ ಚೈತನ್ಯವನ್ನು ತುಂಬುವವನಾಗಿದ್ದಿಯೇ, ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರುವ ಅಂತರಿಕ್ಷವನ್ನು ಹತ್ತುತ್ತಾ ನನ್ನ ಹೃದಯಸಂಬಂಧೀ ರೋಗ(ಹೃದಯದಲ್ಲಿನ ಆಂತರಿಕವಾದ ರೋಗ) ಮತ್ತು ನನ್ನ ಕಾಮಾಲೆ ಅಥವಾ ಹಳದಿ ಬಣ್ಣದ ಚರ್ಮವ್ಯಾದಿಯನ್ನು ಗುಣಪಡಿಸು ಎನ್ನುವುದು ಪ್ರಸ್ಕಣ್ವ ಋಷಿಯ ನಿವೇದನೆ. ಅಂದರೆ ಆತ ಈ ಎರಡು ವಿಧದ ರೋಗದಿಂದ ಪೀಡಿತನಾಗಿ ಅದನ್ನು ಗುಣಪಡಿಸುವಂತೆ ಬೇಡಿಕೊಳ್ಳುತ್ತಾನೆ.
ಈ ಋಕ್ಕನ್ನು ರೋಗದ ಶಾಂತಿಗಾಗಿ ಅಂದರೆ ರೋಗ ಉಲ್ಬಣಿಸದಂತೆ ಪಠಿಸಬೇಕಂತೆ. ಉದ್ಯನ್ನದ್ಯ ಎನ್ನುವ ಈ ಋಕ್ಕು ಪ್ರಸ್ಕಣ್ವನ ಚರ್ಮ ಸಂಬಂಧೀ ರೋಗವನ್ನು ನಿವಾರಿಸುವ ಕುರಿತು ಆತ ಸೂರ್ಯನಲ್ಲಿ ಬೇಡಿಕೊಳ್ಳುವ ಕುರಿತು ಅದನ್ನೇ "ಉದ್ಯನ್ನದ್ಯ ಮಿತ್ರಮಹ" ಅಂದರೆ ಈಗತಾನೇ ಉದಯಿಸುತ್ತಿರುವ ಸೂರ್ಯನು ಆರೋಹನ್ ಉತ್ತರಾಂ ದಿವಂ ಅಂದರೆ ಆಮೇಲೆ ಅತ್ಯಂತ ಎತ್ತರಕ್ಕೆ ಏರಿ ಹೋಗುತ್ತಾನೆ. ಎಂದು "ಮಿತ್ರಮಹ" ಎನ್ನುವುದು ಸೂರ್ಯನಿಗೆ. ಅಂದರೆ ಅನುಕೂಲವಾದ ಮತ್ತು ಅತ್ಯವಶ್ಯವಾದ ಕಾಂತಿಯಿಂದ ಕೂಡಿರುವವನು ಎನ್ನುವುದನ್ನು ಸೂಚಿಸುತ್ತದೆ. "ಹೃದ್ರೋಗಂ" ಎನ್ನುವುದು ಹೃದಯದ ಸಂಬಂಧವಾದ ರೋಗವನ್ನು ಕುರಿತಾಗಿ ಹೇಳಲಾಗಿದೆ. "ಹರಿಮಾಣಂ" ಎನ್ನುವುದು ಬಾಹ್ಯ ಶರೀರದ ಚರ್ಮವು ಹಳದೀ ಬಣ್ಣಕ್ಕೆ ತಿರುಗಿ ಉಂಟಾಗುವ ಚರ್ಮವ್ಯಾದಿ ಅಥವಾ ತೊನ್ನು ಎನ್ನುವ ಕಾಯಿಲೆಯನ್ನು ಸೂಚಿಸುತ್ತದೆ. ಹೀಗೇ ಸೂರ್ಯನನ್ನು ಕುರಿತಾಗಿ ಇಲ್ಲಿ ಪ್ರಾರ್ಥನೆ ಇದ್ದರೆ ಮುಂದಿನ ಋಕ್ಕನ್ನು ಗಮನಿಸಿದರೆ ಅಲ್ಲಿ :
ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ |
ಅಥೋ ಹಾರಿದ್ರವೇಷು ಮೇ ಹರಿಮಾಣಂ ನಿ ದಧ್ಮಸಿ ||
ಈ ಋಕ್ಕಿನಲ್ಲಿ ಪರಿಹಾರವನ್ನೂ ಸೂಚಿಸಿದ್ದಾನೆ. ನನಗೆ ಈ ಹಳದಿ ಬಣ್ಣದ ದೇಹ ಬೇಡ ಇದು ನನಗೆ ಅನವಶ್ಯಕ ಇದ್ರ ಅವಶ್ಯಕತೆ ಇರುವುದು ಗಿಳಿಗಳಿಗೆ. ಅವುಇಗಳಿಗೆ ಹಸಿರು ಬಣ್ಣ್ದ ಜೊತೆಗೆ ಹಳದಿಯೂ ಇದೆ, ಅದಿಲ್ಲವಾದರೆ "ಹಾರಿದ್ರವೇಷು" ಅಂದರೆ ಹರಿತಾಳ ವೃಕ್ಷ ಅಥವಾ ಯಾವುದೋ ಒಂದು ಹಳದಿ ಬಣ್ಣದ ಎಲೆ ಹೊಂದಿರುವ ಮರದಲ್ಲಿ ಇಡು ಇದನ್ನು ತೊಲಗಿಸು ಎನ್ನುತ್ತಾನೆ. ಹೀಗೆ ಇಟ್ಟಲ್ಲಿ ನನ್ನ ರೋಗ ಸುಲಭವಾಗಿ ಗುಣವಾಗುತ್ತದೆ ಎನ್ನುತ್ತಾನೆ. ಹೀಗೆ ಮುಂದಿನ ಋಕ್ಕಿನಲ್ಲಿಯೂ ಅದಿತಿಯ ಸುತನಾದ ಆದಿತ್ಯನೇ ನನ್ನಲ್ಲಿ ರೋಗವನ್ನು ಸ್ವಸಾಮರ್ಥ್ಯದಿಂದ ಗುಣ ಪಡಿಸಿಕೊಳ್ಳುವ ಸಾಮರ್ಥ್ಯವಿಲ್ಲ ನೀನೇ ಗುಣಪಡಿಸು ಎಂದು ಬೇಡಿಕೊಳ್ಳುತ್ತಾನೆ.
"ಪ್ರಿಯಮೇಧವತ್ ಅತ್ರಿವತ್ ಜಾತವೇದಃ ........... " ಎನ್ನುವ ಋಕ್ಕಿನಲ್ಲಿ ಅತ್ರಿ, ಪ್ರಿಯಮೇಧ ಮತ್ತು ವಿರೂಪ ಮತ್ತು ಆಂಗೀರಸರನ್ನು ನೀನು ಹೇಗೆ ಯಜ್ಞಗಳಲ್ಲಿ ಬಂದು ಉಪಕರಿಸಿದ್ದೆಯೋ ಹಾಗೆ ನನ್ನ ರೋಗವನ್ನೂ ನೀನು ಗುಣಪಡಿಸಿ ಉಪಕರಿಸು. ಇಲ್ಲಿ ಬಂದಿರುವ ಋಷಿಗಳ ವಿವರಣೆ ಅನವಶ್ಯಕವಾದುದರಿಂದ ಬರೆಯುತ್ತಿಲ್ಲ.
ಸುಶಂಶೋ ಬೋಧಿಗೃಣ್ವತೇ ಯವಿಷ್ಠ್ಯ ಮಧುಜಿಹ್ವಃ ಸ್ವಾಹುತಃ |
ಪ್ರಸ್ಕಣ್ವಸ್ಯ ಪ್ರತಿರನ್ನಾಯುರ್ಜೀವಸೇ ನಮಸ್ಯಾ ದೈವ್ಯಂ ಜನಂ ||
ಹೇ ಅಗ್ನಿದೇವನೇ ನಿನಗೆ ಎಲ್ಲಾ ಕಡೆಯೂ ಹೋಮ ಮಾಡುವುದರಿಂದ ನಿನ್ನ ಜ್ವಾಲೆಯು ಅತ್ಯಂತ ಆಕರ್ಷಕವಾಗಿ ಮೇಲಕ್ಕೆದ್ದು ಎಲ್ಲರಿಗೂ ಸಂತೋಷವನ್ನು ಉಂಟುಮಾಡುತ್ತಿರುವೆ. ನಿನ್ನನ್ನು ಸ್ತೋತ್ರಮಾಡುವ ಯಜಮಾನನಿಗಾಗಿ ನಾವು ನಿನ್ನನ್ನು ಹೊಗಳುತ್ತೇವೆ. ಈಗ ನೀನು ಪ್ರಸ್ಕಣ್ವನ ಜೀವನವನ್ನು ವೃದ್ಧಿಸಿ ಅವನ ಆಯುಷ್ಯವನ್ನು ವರ್ಧಿಸು. ದೇವಸಂಬಂಧಿಯಾದ ಮನುಷ್ಯನನ್ನು ನೀನು ರಕ್ಷಿಸು ಎನ್ನುವುದಾಗಿ ಈ ಋಕ್ಕು ಹೇಳುತ್ತದೆ.
ಅಂದರೆ ಇಲ್ಲಿ ಸೂರ್ಯ ಎಲ್ಲವಕ್ಕೂ ಕೇಂದ್ರನೆನಿಸಿಕೊಂಡಿದ್ದಾನೆ. ಪ್ರತಿಯೊಂದು ವಸ್ತು ವಿಷಯಕ್ಕೂ ಚೇತನಾ ಸ್ವರೂಪಿ ಸೂರ್ಯನೇ ಅಂದರೆ ಅದು ಅತಿಶಯವೆನ್ನಿಸದು.
ಇಲ್ಲಿ ಇನ್ನೊಂದು ಗಮನಿಸಬೇಕಾದ್ದು ಹೃದಯ ಸಂಬಂಧೀ ರೋಗ ಮತ್ತು ಚರ್ಮ ಸಂಬಂಧೀ ರೋಗವನ್ನುಇ ಸೂರ್ಯ ಗುಣಪಡಿಸಬಲ್ಲ ಎನ್ನುತ್ತದೆ. ಹೌದು ಸಾಮಾನ್ಯವಾಗಿ ವೈದ್ಯಲೋಕದಲ್ಲಿಯೂ ಹೃದಯ ಸಂಬಂಧೀ ಕಾಯಿಲೆಗೆ ಸೂರ್ಯನ ಬಿಸಿಲಿನಲ್ಲಿ ನಡೆದಾಡಲು ಹೇಳುವುದು ಕೇಳಿದ್ದೇನೆ. ಚರ್ಮ ವ್ಯಾಧಿಗೂ ಅಷ್ಟೇ ವಿಟಮಿನ್ ಗಳ ಕೊರತೆಯನ್ನು ನೀಗಿಸಲೂ ಸಹ ಸೂರ್ಯನ ಬಿಸಿಲು ಅಥವಾ ಕಿರಣ ಅತ್ಯವಶ್ಯ ಎಂದು ಕೇಳಿದ್ದೇನೆ. ಇವತ್ತಿಗೂ ನಮ್ಮ ಮನಸ್ಸನ್ನು ಶಾಂತ ಗೊಳಿಸಲು ಉದ್ವೇಗದ ಜೀವನದಿಂದ ಸ್ವಲ್ಪ ವಿಶ್ರಾಂತಿಪಡೆಯಲು ಸಂಜೆಯ ಸೂರ್ಯಾಸ್ತದ ಮತ್ತು ಬೆಳಗಿನ ಸೂರ್ಯೋದಯದ ಬಿಸಿಲನ್ನು ಆಸ್ವಾದಿಸಿದಾಗ ಮನಸ್ಸು ಹಗುರವಾಗಿರುವುದು ನಮಗೆ ಗೊತ್ತಾಗುತ್ತದೆ. ಹಾಗಾದರೆ ಪ್ರಾಚೀನ ವಿಶ್ವದಲ್ಲಿ ವೈದ್ಯಕೀಯ ಜಗತ್ತಿಗೆ ಕೊಟ್ತ ಕೊಡುಗೆ ಸೂರ್ಯನ ತಾಪದಿಂದಲೂ ಅನೇಕ ವಿಧವಾದ ರೋಗಗಳು ಗುಣವಾಗುತ್ತವೆ ಎನ್ನುವುದು. ಹೌದು ನನಗೆ ಇದು ಹೆಮ್ಮೆ ಎನ್ನಿಸುತ್ತದೆ ನಾನು ಭಾರತೀಯ ಎನ್ನಲು. ಅಗಾಧ ಶಕ್ತಿಯನ್ನು ಉಚಿತವಾಗಿ ನಾವು ಪಡೆಯುತ್ತಿದ್ದೇವೆ. ಇದೇ ಸೂರ್ಯ ನಮ್ಮಿಂದ ಕಣ್ಮರೆಯಾಗಿ ಗಂಟೆಗಟ್ಟಲೆ ಸಿಗದಿದ್ದರೆ ! ಭಯಾನಕ !
#ಶಿಲೆಗಳಲ್ಲಡಗಿದ_ಸತ್ಯ

Wednesday 25 July 2018

ನಾನು ಭಾರತೀಯ.


ರಾಮಾಯಣದಲ್ಲಿ ದಶರಥನಿಗೆ ಕೈಕೇಯಿಯಲ್ಲಿ ಜನಿಸಿದವ ಭರತ. ಇಡಿ ರಾಮಾಯಣದ ಕೇಂದ್ರ ಬಿಂದು ಈತ. ಮಂಥರೆಯ ಮಾತನ್ನು ಕೇಳದೇ ಹೋಗಿದ್ದರೆ ರಾಮಾಯಣದ ಕಥೆ ಮುಂದುವರಿಯುತ್ತಿರಲಿಲ್ಲವೇನೋ. ಅದೇನೇ ಇರಲಿ. ಭರತ ಎನ್ನುವ ಹೆಸರು ರಾಮಾಯಣದಲ್ಲಿ ಸಿಗುವುದು ಇಲ್ಲಿಯೇ.
ಮಹಾಭಾರತದಲ್ಲಿ ಪುರುವಂಶದ ದುಷ್ಯಂತ ಮತ್ತು ಶಕುಂತಲೆಗೆ ಮಗನಾಗಿ ಜನಿಸುವವನೇ ಭರತ ಎನ್ನುವ ಉಲ್ಲೇಖ ಆದಿಪರ್ವ ವಿರಾಟಪರ್ವ ಮತ್ತು ದ್ರೋಣ ಪರ್ವದಲ್ಲಿ ಸಿಗುತ್ತದೆ.
ಹಿಂದೆ ಋಷಭದೇವ ಎನ್ನುವವನೊಬ್ಬನಿದ್ದ ಆತನಿಗೆ ಜಯಂತಿ ಎನ್ನುವ ಮಡದಿ ಇದ್ದಳು. ಸಚ್ಚಾರಿತ್ರವಂತರು, ಅಪ್ರತಿಮ ದೇಶಭಕ್ತರೂ ಪ್ರಜಾಪಾಲಕರಾಗಿದ್ದ ಅವರಿಗೆ ಜನಿಸಿದ ಮಗನೇ ಭರತ. ಈತ ಪಾಲಿಸಿದ ಭೂಭಾಗವನ್ನು ಭರತ ಖಂಡ ಎಂದು ಕರೆಯಲಾಯಿತು ಎನ್ನುವುದು ಭಾಗವತ ಮತ್ತು ವಿಷ್ಣುಪುರಾಣದಲ್ಲಿನ ಉಲ್ಲೇಖ. ಭರತಖಂಡ ಮಾತ್ರವಲ್ಲದೇ ಅಜನಾಭವರ್ಷ ಎನ್ನುವುದಾಗಿಯೂ ಕರೆಯಲಾಗಿದೆ.
ಅಯಂತು ತೇ ನವಮಸ್ತೇಷಾಂ ದ್ವೀಪಸ್ಸಾಗರ ಸಂವೃತಃ |
ಯೋಜನಾನಾಂ ಸಹಸ್ರಂತು ದ್ವೀಪೋಯಂ ದಕ್ಷಿಣೋತ್ತರಃ ||
ಆಯತಸ್ತು ಕುಮಾರೀತಃ ಗಂಗಾಯಾಃ ಪ್ರವಹಾವಧಿಃ |
ತಿರ್ಯಗೂರ್ಧ್ವಂತು ವಿಸ್ತೀರ್ಣಃ ಸಹಸ್ರಾಣಿ ದಶೈವತು |
ದ್ವಿಪೋಹ್ಯುಪನಿವಿಷ್ಟೋಯಂ ಮ್ಲೇಚ್ಛೈರಂತೇತು ಸರ್ವತಃ || ಇದು ಮತ್ಸ್ಯಪುರಾಣದ ಮಾತು. ಕನ್ಯಾಕುಮಾರಿಯಿಂದ ಹಿಮಾಲಯದ ತನಕ ವ್ಯಾಪಿಸಿರುವ ಈ ದೇಶ ಪೂರ್ವ ಪಶ್ಚಿಮದ ಸಮುದ್ರಗಳ ನಡುವೆ ಇದೆ. ಕ್ರಮೇಣ ಇದು ಮೇಚ್ಚರ ಆಕ್ರಮಣಕ್ಕೆ ಗುರಿಯಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.
ಪ್ರಿಯವ್ರತ ರಾಜನ ಮಗನಾದ ಅಗ್ನೀಧ್ರ ಎನ್ನುವವನಿಗೆ ಮಗನಾಗಿ ಜನಿಸುವವನು ಅಜನಾಭ ಎನ್ನುವವನು. ಈತನು ಪಾಲಿಸುವ ಜಂಬೂದ್ವೀಪದ ಒಂದು ಪ್ರದೇಶವನ್ನು ಅಜನಾಭವರ್ಷ ಎಂದು ಕರೆಯಲಾಗಿದೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಮತ್ತು ನನ್ನ ಮನಸ್ಸನ್ನು ಹಿಡಿದಿರುವುದು ಭಾರತದ ಪ್ರಾಚೀನತೆ.
ಭಾರತೀಳೇ ಸರಸ್ವತಿ ಯಾ ವಃ ಸರ್ವಾ ಉಪಬ್ರುವೇ |
ತಾ ನ ಶ್ಚೋದಯತ ಶ್ರಿಯೇ || ಇದು ಋಗ್ವೇದದ ಒಂದನೇ ಮಂಡಲದಲ್ಲಿ ಬರುವ ಋಕ್ಕು. "ಹೇ ಭಾರತೀ, ಇಳಾ, ಸರಸ್ವತೀ ಎಂಬ ಮೂರು ಲೋಕಗಳ ಅಧಿದೇವತೆಗಳೇ, ನಿಮ್ಮೆಲ್ಲರನ್ನೂ ಸಮೀಪಿಸಿ ಸ್ತುತಿಸುತ್ತೇನೆ. ನೀವೆಲ್ಲರೂ ಸಂಪತ್ತನ್ನು ಪಡೆಯುವುದಕ್ಕಾಗಿ ನಮ್ಮನ್ನು ಪ್ರೇರೇಪಿಸಿ. ಎನ್ನುವ ಅರ್ಥವನ್ನು ಇದು ಧ್ವನಿಸುತ್ತದೆ. ಇಲ್ಲಿ ಈ ಮೂರೂ ದೇವತೆಗಳನ್ನು ಯಜ್ಞಕ್ಕೆ ಪ್ರಾರ್ಥಿಸಲಾಗಿದೆ.
ಇವುಗಳ ಕುರಿತಾಗಿ ಇದೇ ಮಂಡಲದಲ್ಲಿ
ಶುಚಿರ್ದೇವೇಶ್ವರ್ಪಿತಾ ಹೋತ್ರಾ ಮರುತ್ಸು ಭಾರತೀ |
ಇಳಾ ಸರಸ್ವತೀ ಮಹೀ ಬರ್ಹಿಃ ಸೀದಂತು ಯಜ್ಞಿಯಾಃ ||
ಇಲ್ಲಿ ಭಾರ್ತಿಯನ್ನು ಕುರಿತಾಗಿ ಅಮರತ್ವವನ್ನು ಪಡೆದವರೂ, ಪ್ರಕಾಶಮಾನರಾದವರೂ ಸ್ತೋತ್ರಗಳಲ್ಲಿಯಾಗಲೀ, ಮರುತ್ತುಗಳಲ್ಲಿಯಾಗಲೀ, ಅಥವಾ ಋತ್ವಿಕ್ಕುಗಳಲ್ಲಿ ನಿಯತವಾಗಿರುವವಳೂ, ಹೋಮ ಸಂಪಾದಿಕೆಯಾದವಳೂ, ಆದ ದ್ಯುಲ್ಲೋಕಸ್ಥಳೂ, ಆದಿತ್ಯ ಸಂಬಂಧಿನಿಯೂ ಆದ ವಾಗ್ದೇವತೆಯೂ, ಪಾರ್ಥಿವಸ್ಥಳಾದ ವಾಗ್ದೇವತೆಯೂ ಮತ್ತು ಮಹತ್ತಾದ ಸ್ವರೂಪ ಉಳ್ಳವಳೂ, ಮಾಧ್ಯಮಿಕ ವಾಕ್ಕೂ ಈ ಮೂರು ಸ್ಥಾನಗಳ ವಾಗಾಭಿಮಾನ ದೇವತೆಗಳೂ ಯಜ್ಞಕ್ಕೆ ಯೋಗ್ಯರಾಗಿ ಬಂದು ದರ್ಭಾಸನಸ್ಥರಾಗಲಿ ಎನ್ನುವ ಅರ್ಥ ಕೊಡುತ್ತದೆ.
ಭಾರತೀ. ಇಳಾ ಮತ್ತು ಸರಸ್ವತಿಯರನ್ನು ತಿಸ್ರೋ ದೇವೀ ಎನ್ನುವುದಾಗಿಯೇ ಕರೆಯಲಾಗಿದೆ. ಇದರಲ್ಲಿ ಭಾರತಿಗೆ ಹೋತ್ರಾ ಮತ್ತು ಶುಚಿಃ ಮತ್ತು ಅರ್ಪಿತಾ ಎನ್ನುವುದಾಗಿ ಹೇಳಲಾಗಿದೆ. ಈ ತಿಸ್ರೋ ದೇವತೆಗಳು ಅಗ್ನಿಯನ್ನು ಪ್ರತಿಬಿಂಬಿಸುತ್ತವೆ.
ನಿರುಕ್ತದಲ್ಲಿ "ಏತು ನೋ ಯಜ್ಞಂ ಭಾರತೀ ಕ್ಷಿಪ್ರಂ | ಭರತ ಆದಿತ್ಯಸ್ತಸ್ಯ ಭಾ ಇಳಾಚ ಎನ್ನಲಾಗಿದೆ. ಭ ಎಂದರೆ ಸೂರ್ಯನನ್ನು ನಿರ್ದೇಶಿಸಲಾಗಿದೆ. ರತ ಎನ್ನುವುದು ಪ್ರಭೆಯನ್ನು ನಿರ್ದೇಶಿಸುತ್ತದೆ. ಅಂದರೆ ಪ್ರಭಾರೂಪವಾದ ದೇವತೆ ಈಕೆ. ಈ ತಿಸ್ರೋ ದೇವತೆಗಳಲ್ಲಿ ಇಳಾ ಪಾರ್ಥಿವಾಗ್ನಿಯನ್ನು ಅಲಂಕರಿಸಿ ಆಕ್ರಮಿಸಿಕೊಂಡಳು, ಸರಸ್ವತಿಯು ಮಧ್ಯವನ್ನಾಕ್ರಮಿಸಿದಳು. ಭಾರತಿಯು ದೇವಲೋಕವನ್ನು ಪಡೆದುಕೊಂಡಳು ಎಂದು ಬೃಹದ್ದೇಶಿಯಲ್ಲಿ ಹೇಳಲಾಗಿದೆ.
"ಇಳಾ ಸರಸ್ವತೀ ಮಹಿ" ಎಂದು ವೇದದಲ್ಲಿ ಬರುವುದು ಇಲ್ಲಿ ಮಹೀ ಎನ್ನುವುದು ಭಾರತಿ ಎನ್ನುವುದರ ವಿಶೇಷಣ ಎನ್ನಲಾಗಿದೆ.
"ಭಾರತೀ ಪವಮಾನಸ್ಯ ಸರಸ್ವತೀಳಾ ಮಹೀ |"
ಎನ್ನುವ ಋಕ್ಕಿನಲ್ಲಿಯೂ ಸಹ ಭಾರತಿಯ ವಿಶೇಷಣವನ್ನಾಗಿ ಮಹೀ ಶಬ್ದವನ್ನು ಬಳಸಿಕೊಳ್ಳಲಾಗಿದೆ ಎನ್ನುವುದು ಸಾಯಣಾಚಾರ್ಯರ ಅಭಿಮತ.
ಋಗ್ವೇದದ ನಾಲ್ಕನೇ ಮಂದಲದಲ್ಲಿ "ತಸ್ಮಾ ಅಗ್ನಿರ್ಭಾರತಃ" ಎನ್ನುವ ಋಕ್ಕು ಇದೆ. ಅಲ್ಲಿ ಭಾರತಿಯನ್ನೇ ಭಾರತ ಎನ್ನಲಾಗಿದೆ. ಅಂದರೆ ಅಗ್ನಿಯ ಅತ್ಯಂತ ನಿಕಟತ್ವವನ್ನು ನಿರ್ದೇಶಿಸಲಾಗಿದೆ. ಅಂದರೆ ಸೂರನನ್ನೇ ಇಲ್ಲಿ ಅಗ್ನಿ ಎನ್ನುವ ನಿರ್ದೇಶದಿಂದ ಕರೆಯಲಾಗಿದೆ. ಇಲ್ಲಿ ಇಳಾ ಭಾರತೀ ಮತ್ತು ಸರಸ್ವತಿ ಎನ್ನುವುದು ಅಗ್ನಿಯನ್ನಾಶ್ರಯಿಸಿದರೂ ಸಹ ಸರಸ್ವತಿಯು ನೀರನ್ನಾಶ್ರಯಿಸಿದ್ದಾಳೆ ಅವಳು ದೇವತಾತ್ಮಳಾದ ನದಿ ಎನ್ನುವುದು ಕೆಲವರ ಅಭಿಮತ ಅಲ್ಲಿಯೂ ಅವರು ಸರ ಎನ್ನುವ ಶಬ್ದ ಹರಿಯುವುದನ್ನು ಸೂಚಿಸುವುದು ಎನ್ನುತ್ತಾರೆ. ಆದರೆ ಅಗ್ನಿಯು ಭೂಮಿ ಮತ್ತು ಅಂತರಿಕ್ಷ ಮತ್ತು ದೇವಲೋಕಗಳನ್ನೂ ಆಕ್ರಮಿಸಿಕೊಂಡಿರುವುದರಿಂದ ಭಾರತಿ ಎನ್ನುವುದು ಸೂರ್ಯನ ಪ್ರಭೆ ಎನ್ನುವುದು ಸರಿ ಎನ್ನಿಸುತ್ತದೆ. ಸರಸ್ವತಿಯು ಸಿಡಿಲು ಮಿಂಚುಗಳಿಗೆ ಅಧಿದೇವತೆ ಎನ್ನಲಾಗುತ್ತದೆ. ಇಳಾ ಎನ್ನುವುದು ಅಗ್ನಿಗೆ ನೇರವಾದ ಸಂಬಂಧ ಹೊಂದಿರುವುದರಿಂದ ಈ ತಿಸ್ರೋ ದೇವತೆಗಳು ಅಗ್ನಿಯ ಇನ್ನೊಂದು ರೂಪ ಎಂದೂ ಹೇಳಲಾಗಿದೆ.
ಆ ನೋ ಯಜ್ಞಂ ಭಾರತೀ ತೂಯಮೇತ್ವಿಳಾ ಮನುಷ್ವದಿಹ ಚೇತಯಂತಿ |
ತಿಸ್ರೋದೇವಿರ್ಬರ್ಹಿರೇದಂ ಸ್ಯೋನಂ ಸರಸ್ವತೀ ಸ್ವಪಸಃ ಸದಂತು || ಇದು ಹತ್ತನೇ ಮಂಡಲದಲ್ಲಿನ ಋಕ್ಕು. ಸೂರ್ಯನ ತೇಜೋ ರೂಪವಾದ ಭಾರತೀ ದೇವಿಯು ನಮ್ಮ ಯಜ್ಞಕ್ಕೆ ಕ್ಷಿಪ್ರವಾಗಿ ದಯಮಾಡಲಿ, ಮಾನವರಂತೆ ಕರ್ತ್ವ್ಯವನ್ನರಿತ ಇಳಾ ಮತ್ತು ಸರಸ್ವತಿಯೂ ಬರಲಿ. ಶ್ರೇಷ್ಠವಾದ ಕರ್ಮವುಳ್ಳ ಈ ದೇವತೆಗಳು ನಮ್ಮ ಯಜ್ಞಕ್ಕೆ ಬಂದು ಕುಳಿತುಕೊಳ್ಳಲಿ ಎನ್ನುವುದು ಇದರ ಆಶಯ.
ಭರತಃ ಆದಿತ್ಯಸ್ತಸ್ಯ ಭಾ ಎನ್ನುವದನ್ನು ಗಮನಿಸಿದರೆ ಇಲ್ಲಿ ಭರತ ಎನ್ನುವುದು ಸೂರ್ಯನಿಗೆ. ಜಗತ್ತಿನ ಪ್ರತಿಯೊಂದು ಪ್ರಾಣಿ ಪಕ್ಷಿಗಳೆಲ್ಲವನ್ನೂ ಚೆತನಾ ಸ್ವರೂಪರಂತೆ ಮಾಡುವವನೇ ಭರತ ಅವನೇ ಸೂರ್ಯ. ಈತ ಮಳೆಯ ಮತ್ತು ಅದರ ನೀರಿನಿಂದಲೂ ಜನರ ಅಭಿವೃದ್ಧಿಯನ್ನು ಮಾಡುವಂತವನು ಆದುದರಿಂದಲೇ ಭರತ ಎನ್ನುವುದಾಗಿ ಕರೆಯಲಾಗಿದೆ. ತಸ್ಯ ಭಾ ಎಂದರೆ ಅವನ ಪ್ರಕಾಶಕ್ಕೆ ಎಂದು ಅಂದರೆ ಸೂರ್ಯನ ಪ್ರಕಾಶವನ್ನು ಇಲ್ಲಿ ಭಾ ಎನ್ನಲಾಗಿದೆ. "ಇಳಾ ಮನುಷ್ಯದಿಹ ಚೇತಯಮಾನಾ" ಅಂದರೆ ಇಳಾ ಎನ್ನುವವಳು ತಿಳಿದಿರುವವಳು ಎನ್ನುವುದಾಗಿ ಅರ್ಥ. ಅಂದರೆ ಹೇಗೆ ಹಸಿದ ಮನುಷ್ಯ ತನ್ನ ಆಹಾರ ಸಿಕ್ಕಿದೊಡನೆ ಅವಸರದಿಂದ ಬಂದು ಸ್ವೀಕರಿಸುತ್ತಾನೋ ಅದೇ ರೀತಿ ಈ ಇಳಾ ಅಗ್ನಿಗೆ ಸಮರ್ಪಿಸುವ ಆಹುತಿಯನ್ನು ಬೇಗನೇ ಬಂದು ಸ್ವೀಕರಿಸುತ್ತಾಳೆ ಎನ್ನುವ ಅರ್ಥ.
ಹೀಗೇ ಭಾರತೀ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನು. ಆದಿತ್ಯನ ದೀಪ್ತಿಗೆ ಭಾ ಎಂದು ಹೆಸರು ಆದುದರಿಂದ ಭಾರತಿ ಎಂದರೆ ಸೂರ್ಯನ ಪ್ರಕಾಶ ಮತ್ತು ಸೂರ್ಯ ಮಂಡಲದಲ್ಲಿನ ಅಗ್ನಿಯನ್ನು ಕುರಿತಾಗಿ ಹೇಳಿರುವುದು.
ಇಳಾ ಎಂದರೆ ಭೂಮಿಯನ್ನು ಕುರಿತಾಗಿ ಹೇಳಿರುವುದು. "ಮನುಷ್ವತ್ ಚೇತಯಂತೀ" ಎಂದರೆ ಮನುಷ್ಯರಿಗೆ ಭೂಮಿಯ ಮೇಲಿನ ಅನ್ನಾದಿ ಆಹಾರಗಳನ್ನು ಸಂಪತ್ತು ಮತ್ತು ಶಾಂತಿಯನ್ನು ಕೊಡುವುದರಿಂದ ಇವಳು ಭೂಮಿಯಲ್ಲಿನ ಅಗ್ನಿ.
ಸರಸ್ವತೀ ಎನ್ನುವವಳು ಅಂತರಿಕ್ಷದ ಸಿಡಿಲು ಮತ್ತು ಮಿಂಚು ಗುಡುಗುಗಳಿಗೆ ಅಧಿದೇವತೆಯಾದ್ದರಿಂದ ಅಲ್ಲಿನ ಅಗ್ನಿಯೆಂದು ಹೇಳಲಾಗಿದೆ. ಅಗ್ನಿ ಅಥವಾ ಸೂರ್ಯ (ಶಕ್ತಿ) ಭೂಮಿಗೆ ಅನಿವಾರ್ಯ ಸಕಲ ಚರಾಚರ ವಸ್ತುಗಳು ಜೀವಿಗಳೂ ಸಹ ಈ ಶಕ್ತಿಯನ್ನು ಅವಲಂಬಿಸಿವೆ. ಇಂತಹ ಶಕ್ತಿ ಭಾರತ. ಈ ಹೆಸರೇ ಅತ್ಯಂತ ಸುಂದರ. ಈ ಸುಂದರ ಹೆಸರಿನಲ್ಲಿಯೇ ಸೂರ್ಯನಂತಹ ಪ್ರಭೆ ಹೊಂದಿದೆ. ಸೂರ್ಯನ ಶಕ್ತಿ ಈ ಭಾರತಕ್ಕಿದೆ. ಸೂರ್ಯನಿಲ್ಲದೇ ಹೇಗೆ ಭೂಮಿ ಇಲ್ಲವೋ ಅದೇ ರೀತಿ ಭಾರತ ವಿಲ್ಲದ ವಿಶ್ವ ಇರಲಿಕ್ಕಿಲ್ಲ. ಇಡಿಯ ಜಗತ್ತನ್ನು ಹಿಡಿದಿಡುವ ಮತ್ತು ಇಡೀ ಜಗತ್ತಿಗೆ ಬೆಳಕನ್ನು ಕೊಡುವ ಶಕ್ತಿ ಈ ಭಾರತಕ್ಕಿದೆ. ಹೌದು ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬಂದಿರುವುದು ಇಲ್ಲಿ ಆಳಿದ ರಾಜರುಗಳಿಂದ ಇರಬಹುದು ಆದರೆ ಜಗತ್ತಿಗೆ ಶಕ್ತಿಯನ್ನೊದಗಿಸುವ ಭಾರತ ನನ್ನ ಕಣ್ಣಿಗೆ ಕಾಣಿಸುವುದು ಇಂತಹ ಸೂರ್ಯನಾರಯಣನಿಂದಲೇ. ಇದು ಜಗದ್ಗುರು ಭಾರತ.
#ಶಿಲೆಗಳಲ್ಲಡಗಿದ_ಸತ್ಯ

Sunday 22 July 2018

ಕದಂಬರ ಲಿಪಿ ವೈವಿಧ್ಯತೆ

ಕನ್ನಡ ಇತಿಹಾಸ ಆರಂಭವೇ ಕದಂಬರಿಂದ. ಸಂಸ್ಕೃತದಲ್ಲಿ ಛಂದೋಬದ್ಧವಾದ ಸಾಹಿತ್ಯಾತ್ಮಕ ರಚನೆಗಳನ್ನು ನೀಡಿದ ಕದಂಬರು ಬ್ರಾಹ್ಮೀ ಮತ್ತು ಪ್ರಾಕೃತದಿಂದ ಬೇರೆಯಾಗಿ ಸಂಸ್ಕೃತದ ಕಡೆಗೆ ಹೊರಳಿದರು ಅಲ್ಲಿಯೂ ಸಹ ಸಾಹಿತ್ಯದ ಕೃಷಿ ಮಾಡಿದ ನಂತರ ತಮ್ಮ ವಿಷಯಗಳನ್ನು ನಾಡಿನ ಜನತೆಯ ಸಮೀಪಕ್ಕೆ ತರುವ ನಿಟ್ಟಿನಲ್ಲಿ ಮಾಧ್ಯಮ ಲಿಪಿಯನ್ನು ಬ್ರಾಹ್ಮಿಯಿಂದ ಕನ್ನಡಕ್ಕೆ ಪರಿವರ್ತಿಸಿಕೊಂಡರು. ಹೀಗೆ ಬ್ರಾಹ್ಮಿಗೆ ವಿದಾಯ ಹೇಳುತ್ತಾ ಕನ್ನಡ ಲಿಪಿಯ ಆರಂಭಕ್ಕೆ ನಾಂದಿ ಹಾಡಿದರು.   
ಮಯೂರವರ್ಮನ ನಂತರ ಅವನದ್ದೇ ವಂಶದ ದಶರಥನ ಮಗ ಕಾಕುಸ್ಥವರ್ಮ ಅಧಿಕಾರಕ್ಕೆ ಬರುತ್ತಾನೆ. ಈತ ಕದಂಬರಲ್ಲಿಯೇ ಅತ್ಯಂತ ಹೆಚ್ಚು ಪ್ರಚಲಿತನಾದ ದೊರೆ. ಸುಮಾರು ೪೦೫-೩೦ರ ಅವಧಿಯಲ್ಲಿ ಈತ ಆಳಿದನೆನ್ನಲಾಗಿದೆ. ಈತನ ಹಲಸಿ ತಾಮ್ರಪಟವನ್ನು ಹೊರತುಪಡಿಸಿ ಮಿಕ್ಕ ಎರಡು ಮತ್ತು ತಾಳಗುಂದದಲ್ಲಿನ ಸಂಸ್ಕೃತದ ಎರಡು ಮತ್ತು ಹಲ್ಮಿಡಿಯ ಕನ್ನಡದ ಶಿಲಾಶಾಸನಗಳಲ್ಲಿ ದಕ್ಷಿಣದ ದ್ರಾವಿಡ ಮೂಲದ ಹಳಗನ್ನಡದಲ್ಲಿ ಮಾತ್ರ ಗುರುತಿಸಲ್ಪಟ್ಟ ವರ್ಣಗಳಾದ ಶಕಟರೇಫ "ರ-ಱ", ಮತ್ತು "ಳ-ೞ" ಗಳನ್ನು ಬಳಸಿಕೊಳ್ಳಲಾಗಿದೆ. ಛಂದೋಬದ್ಧ ಪದಲಾಲಿತ್ಯವನ್ನು ಹೊಂದಿದ ಸಂಸ್ಕೃತ ಕಾವ್ಯದಲ್ಲಿರುವ ಕುಬ್ಜನಿಂದ ರಚಿಸಲ್ಪಟ್ಟ ಶಾಂತಿವರ್ಮನ ತಾಳಗುಂದ ಶಾಸನ ೯ನೇ ಸಾಲಿನಲ್ಲಿ ಕಾಣಿಸಿಕೊಂಡಿರುವ "ಶ್ರುತಿಪಥ ನಿಪುಣಷ್ಕವಿಃ ಪ್ರದಾತಾ ವಿವಿಧ ಕಲಾಕುಶಲಱ್ಪ್ರಜಾಪ್ರಿಯಶ್ಚ" ಎಂಬ ಪದದಲ್ಲಿ "ಕುಶಲಱ್ಪ್ರಜಾ" ಎಂಬ ಪ್ರಯೋಗವಿದೆ. ಇಲ್ಲಿ ಶಕಟರೇಫದ ಱಪ್ರಯೋಗ ಬಳಸಿಕೊಳ್ಳಲಾಗಿದೆ. ಕಾಕುಸ್ಥವರ್ಮನ ಸಂಸ್ಕೃತದೊಂದಿಗೆ ಗುರುತಿಸಿಕೊಂಡ ಕನ್ನಡದ ಹಲ್ಮಿಡಿ ಶಾಸನದ ೮ನೇ ಸಾಲಿನಲ್ಲಿರುವ "ಪೊಗೞೆಪ್ಪೊಟ್ಟಣ" ಮತ್ತು ೧೧ನೇ ಸಾಲಿನಲ್ಲಿರುವ "ಕಾದೆಱೆದು", "ಬಾಳ್ಗೞ್ಚು", ೧೨ನೇ ಸಾಲಿನಲ್ಲಿರುವ "ಮೂೞವಳ್ಳಿ" "ಸೞ್ಬಙ್ಗದರ್", ೧೪ನೇ ಸಾಲಿನಲ್ಲಿರುವ "ಕುಱುಮ್ಬಿಡಿ". ೧೫ನೇ ಸಾಲಿನಲ್ಲಿರುವ "ಅದನೞವೊನ್ಗೆ", ೧೬ನೇ ಸಾಲಿನಲ್ಲಿರುವ "ಗೞೆ", ಎಂಬ ಪದಗಳ ಪ್ರಯೋಗಗಳನ್ನು ಗಮನಿಸಿದರೆ, ಸುಮಾರು ೪೦೦ನೇ ಇಸವಿಯ ಆಸುಪಾಸಿನಲ್ಲಿ ಈ ವರ್ಣಗಳು ಸಂಸ್ಕೃತ ಬರವಣಿಗೆಯಲ್ಲಿ ಪ್ರವೇಶಿಸಿದ ಬಗ್ಗೆ ಮಾಹಿತಿ ದೊರಕುತ್ತಿದೆ.
ಕರ್ನಾಟಕದಲ್ಲಿ ದೊರೆತ ಬ್ರಾಹ್ಮೀಲಿಪಿಯ ಪ್ರಾಕೃತ ಶಾಸನಗಳಲ್ಲಾಗಲೀ ಅಥವಾ ಸು.ನಾಲ್ಕನೇ ಶತಮಾನದ ಅಂತ್ಯದ ಕದಂಬ ಪ್ರಿಯವ್ರತವರ್ಮನ ಅರತಲೆಗದ್ದೆ ಸಂಸ್ಕೃತ ತಾಮ್ರಪಟ ಶಾಸನ ದಲ್ಲಾಗಲೀ ಱ-ೞ ವರ್ಣಗಳು ಕಾಣಿಸಿಕೊಂಡಿಲ್ಲ. ಅಂದರೆ ಈ ಱ-ೞ ವರ್ಣಗಳನ್ನು ಕರ್ನಾಟಕದಲ್ಲಿ ಸಂಸ್ಕೃತಕ್ಕೆ ಮೊತ್ತಮೊದಲು ಪರಿಚಯಿಸಿದವರು ಸುಮಾರು ಐದನೇ ಶತಮಾನದ ಆರಂಭಕಾಲದಲ್ಲಿದ್ದ ಕದಂಬ ಶಿಲಾಶಾಸನಕಾರರೆನ್ನುವುದು ಸ್ಪಷ್ಟ. ಹೀಗೆ ಪ್ರಾರಂಭವಾದ ಈ ವರ್ಣಗಳ ಬಳಕೆ ಕದಂಬರ ಕಾಲದುದ್ದಕ್ಕೂ ಮುಂದುವರಿದುದರಿಂದ ಸುಮಾರು ೩೦ ಸಂಸ್ಕೃತ ಶಾಸನಗಳಲ್ಲಿ ಕನಿಷ್ಠ ೨೮ ಬಾರಿ ಶಕಟರೇಫ ಗಳು ಬಂದಿವೆ.
ಸ್ಥಳೀಯ ವ್ಯಕ್ತಿ ಮತ್ತು ಸ್ಥಳನಾಮಗಳ ಉಚ್ಚಾರಕ್ಕೆ ಸಂಸ್ಕೃತ ಬರಹಗಾರರಿಂದ ಲೋಪ ಬರಬಾರದೆಂದು ಈ ವರ್ಣಗಳನ್ನು ಸಂಸ್ಕೃತ ಪಠ್ಯದಲ್ಲಿ ತಂದುಕೊಂಡಿರಬಹುದು. ಅಲ್ಲದೆ, ಇದು ಕೇವಲ ನಾಮಪದಗಳಿಗೆ ಮಾತ್ರ ಸೀಮಿತಗೊಳ್ಳಲಿಲ್ಲವೆಂಬುದನ್ನು ಕೆಳಗಿನ ನಿದರ್ಶನಗಳು ಸ್ಪಷ್ಟಪಡಿಸುತ್ತವೆ.
ಕಿಱುಕೆಯ್ತರ, ಕಿಱುನೀರಿಲ್ಲಿ, ಕದೞಕೞನಿ, ಕಿಱುಪಾಪಣಿ, ಮುೞ್ತಗಿ, ಅ(ಮ)ೞ್ಕಾವು, ಎಸೞಾ(ಎಸಱಾ), ಪಾಲ್ಗೞನೀ, ಕದೆಇೞ್ಕೂರ, ಕಿಱುಕೂಡಲೂರ್ ಎಂಬ ಸ್ಥಳನಾಮಗಳೆಲ್ಲವೂ ನಾಮಪದಗಳು.
ಱ್ಪಾವಿತಂ, ಱ್ಪದ್ಮ, ಱ್ಪಥಿತ, ವರಱ್ಪ್ರರು, ಱ್ಪಸಾದಾನ್ನೃಪತೇ, ಱ್ಪ್ರತಿಕೃತಸ್ವಾಧ್ಯಾಯ, ಱ್ಪಾತಾಪಾಲಯಿತಾ, ಸಮೞ್ಕಾವಂ, ನಯಱುಯಾಸ್ತಿರೇ, ಅದ್ಭಿಱ್ಪ್ರಾದಾನ್, ಱ್ಪಜಾರಕ್ಷಣ, ಱ್ಪರಮಮಹೇಶ್ವರ, ಱ್ಪವದ್ಧನಮಾನ, ಎಂಬ ಸಂದಿಗೊಳಗಾದ ಕರ್ತೃ-ಕ್ರಿಯಾಪದಗಳು ಮತ್ತು ಇತರ ಪದಗಳು.
ಱ-ೞಗಳಲ್ಲದೇ ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಇನ್ನೂ ಕೆಲವು ಕನ್ನಡ ಮೂಲದ ಪದಗಳು, ವಿಶೇಷವಾಗಿ ನಾಮಪದಗಳು, ಸಂಸ್ಕೃತ ಪಠ್ಯದಲ್ಲಿ ಸೇರಿದವು. ರಾಜಾಡಳಿತ ಘಟಕವಾದ "ನಾಡು" ಈ ಕಾಲದಲ್ಲಿ ಬಳಕೆಯಲ್ಲಿದ್ದರೂ ಸಂಸ್ಕೃತ ಶಾಸನಪಠ್ಯದಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಸಂಸ್ಕೃತ ಶಾಸನಕಾರರು ಇದರ ಸ್ಥಾನದಲ್ಲಿ ಒಮ್ಮೊಮ್ಮೆ ಕ್ಷೇತ್ರ ಬಳಸಿರುವರು. ಇಮ್ಮಡಿ ಕೃಷ್ಣವರ್ಮನ ಶಿರಸಿ ಶಾಸನದಲ್ಲಿ ಮಾತ್ರ ಇವೆರಡನ್ನೂ ಕೂಡಿಸಿ "ಕವ್ವನ್ನಾ(ಙ್ಗಂ)ಡ್ಗಂ ವಿಷಯೇ" ಎಂದು ಬರೆದ ಸ್ಪಷ್ಟವಾದ ನಿದರ್ಶನ ಸಿಗುತ್ತದೆ. ಅವರ್ಗೀಯ ಅಕ್ಷರ ಳ ಬಳಕೆ ಸಂಸ್ಕೃತ ಪಠ್ಯಗಳಲ್ಲಿ ವಿರಳಾತಿ ವಿರಳ, ಕನ್ನಡದ ನಾಮಪದಗಳನ್ನು ಉಚ್ಚರಿಸುವಾಗ ಸಂಸ್ಕೃತ ಲಿಪಿಕಾರರು ಕೞನಿ, ನಿಡುವೊಳ್ ಕೊಳಾಲ, ಪಾಲಗಳನಿ ಸುಳ್ಳಿ ಕೋಳನಲ್ಲೂರು, ವಳ್ಳಾವಿ-ವಿಷಯ ಕಾಣಸಿಗುತ್ತವೆ. ಹೀಗೆ ಸಂಸ್ಕೃತದಲ್ಲಿ ನಾಡು, ಪಲ್ಲಿ, ಊರು ಮುಂತಾದ ಹಳಗನ್ನಡ ಪದಗಳ ಪ್ರವೇಶವಾದವು.
ಪಲ್ಲಿ, ಪಳ್ಳಿ, ಹಳ್ಳಿ ಮತ್ತು ಊರು ಎಂಬ ಪದಗಳು ಹಳಗನ್ನಡ ಬರವಣಿಗೆಯಲ್ಲಿ ಸಾಕಷ್ಟು ಬಳಕೆಯಲ್ಲಿದ್ದವು. ಸಂಸ್ಕೃತದಲ್ಲಿ ಇದನ್ನು ಗ್ರಾಮ ಎನ್ನಲಾಗುತ್ತದೆ. ಕದಂಬರ ಕಾಲದ ಸ್ಥಳನಾಮಗಳಲ್ಲಿ ಸೇರಿಕೊಂಡಿರುವ ಪಲ್ಲಿ ಎನ್ನುವ ಪದವನ್ನು ಸಂಸ್ಕೃತದಲ್ಲಿ ಬದಲಾಯಿಸುವ ಕಾರ್ಯವನ್ನು ಸಂಸ್ಕೃತ ಕವಿಗಳು ಮಾಡಲಿಲ್ಲ.
ಕನ್ನಡ ಶಾಸನಗಳಲ್ಲಿ ಪಲ್ಲಿಯನ್ನು ಮೊದಲು ಬಳಸಿದವರು ಬ್ರಾಹ್ಮೀ-ಪ್ರಾಕೃತದ ಲಿಪಿಕಾರರು. ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಬಳಕೆಯಾಗಿರುವ ಮಳಪಳಿ ಮತ್ತು ಸೋಮಪಲ್ಲಿ. ಕದಂಬರ ಕಾಲದ ಸಂಸ್ಕೃತಭಾಷಾ ಶಾಸನಕಾರರು ಈ ಉಚ್ಚಾರವನ್ನುಮುಂದುವರೆಸಿರುವುದಕ್ಕೆ ಉದಾಹರಣೆಯಾಗಿ ವೇಲ್ಪಲ್ಲಿ, ಕಿಱುಪಾಣನಿಪಲ್ಲಿ, ಮುೞ್ತಕೆಪಲ್ಲಿ, ಹಾಕಿನಿಪಲ್ಲಿ, ನಾಪಿತಪಲ್ಲಿ, ಸಾಟ್ಟಿಪಲ್ಲಿ, ಕಮಕಪಲ್ಲಿ, ಮುಂತಾದವನ್ನು ಉದಾಹರಿಸಬಹುದು. ಭೋಗಿವರ್ಮನ ಬೆಳ್ಳೂರು ತಾಮ್ರಪಟದಲ್ಲಿ ಇಪ್ಪತ್ನಾಲ್ಕು ಪಲ್ಲಿಗಳ ಘಟಕವನ್ನು ಪ್ರಸ್ತಾಪಿಸಲಾಗಿದೆ. 
ಊರು ಎನ್ನುವ ಪದಗಳು ನಮ್ಮ ನಾಡಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಬ್ರಾಹ್ಮೀ-ಪ್ರಾಕೃತದ ಮಳವಳ್ಳಿಯ ಶಾಸನದಲ್ಲಿ ಅಂತ ಭಾವಿಸಿದರೆ ಕನಗನಹಳ್ಳಿಯ ಸನ್ನತಿ ಶಾಸನಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ವೇಗೂರು, ಮತ್ತು ಕೋಟೂರುಗಳನ್ನು ಉಲ್ಲೇಖಿಸುವವು. ಹಾಗಾದರೆ ಎರಡುನೇ ಶತಮಾನಕ್ಕಿಂತ ಮುಂಚೆಯೇ ಇಂತಹ ಊರುಗಳು ಕರ್ನಾಟಕದಲ್ಲಿ ಇತ್ತು ಎನ್ನುವುದನ್ನು ದೇಢಪಡಿಸುತ್ತವೆ. ಕದಂಬರ ಕಾಲದ ಸಂಸ್ಕೃತ ಶಾಸನಕಾರರು ಇವನ್ನು ಮನ್ನಿಸಿ ಮುಂದುವರಿಸಿದರು. ಅವರ ಬರವಣಿಗೆಗಳಲ್ಲಿ ಬಂದಿರುವ ಸ್ಥಾನಕುಂದೂರು, ಪರಲೂರು, ಕೆದೆಇಲ್ಕೂರು, ಮೋಗೂರು, ಸತ್ತೂರು, ಇಡಿಊರು, ಅಳವೂರು, ಕುನ್ದೂರು, ಕೂಡಲೂರು, ಆಸಂದ್ಯಾಲೂರು, ಕೊಳನಲ್ಲೂರು, ಕಿಱುಕೂಡಲೂರು, ಎಂಬವು ಇದಕ್ಕೆ ಉದಾಹರಣೆಗಳು.
ಇದೇ ರೀತಿ ಕುಣ್ಡಿ, ಗೋಡು, ಪಾಟಿ, ಗಲ್ಲಿ, ಸ್ಥಳನಾಮಗಳೂ ಸಂಸ್ಕೃತ ಶಾಸನಗಳಲ್ಲಿ ಕಂಡು ಬಂದಿವೆ. ಇವೂ ಕನ್ನಡ ಮೂಲದ ಪದಗಳು.
ಇನ್ನೂ ಕೆಲವು ಹಳಗನ್ನಡ ಪದಗಳು ಸಂಸ್ಕೃತ ಶಾಸನದಲ್ಲಿ ಸ್ಥಾನ ಪಡೆದುಕೊಂಡಿರುವವು. ಪುಕ್ಕೊಲ್ಲಿ ಮತ್ತು ಸಮೞ ಎಂಬವು ಇದಕ್ಕೆ ಉದಾಹರಣೆಗಳು. ಪುಕ್ಕೊಲ್ಲಿ ಎನ್ನುವುದು ನೀರ್ಣ್ಣು ಎನ್ನುವುದನ್ನು ಸೂಚಿಸುತ್ತದೆ ಅದು ಫಲವತ್ತಾದ ಗದ್ದೆ, ಸಮೞ ಎನ್ನುವುದು ಗ್ರಾಮದ ಆದಾಯ ಅಥವಾ ತೆರಿಗೆಯನ್ನು ಸೂಚಿಸುವುದು. ಈ ಪದಗಳು ಮೃಗೇಶವರ್ಮನ ಎರಡನೇ ವರ್ಷದ ತಾಮ್ರಪಟದ ೫ನೇ ಸಾಲಿನಲ್ಲಿ ಮತ್ತು ಇಮ್ಮಡಿ ಕೃಷ್ಣವರ್ಮನ ೧೯ನೇ ವರ್ಷದ ಶಿರಸಿಯ ಸಂಸ್ಕೃತ ತಾಮ್ರಪಟದ೩೯ನೇ ಸಾಲಿನಲ್ಲಿ ಬಂದಿವೆ. ಇಂತಹ ವರ್ಣಗಳನ್ನು, ಪದಗಳನ್ನು ಬಳಸಿಕೊಂಡು ಸಂಸ್ಕೃತ ಶಾಸನಗಳನ್ನು ಬರೆದ ಕದಂಬ ಲಿಪಿಕಾರರು ಕನ್ನಡವನ್ನು ಸಂಸ್ಕೃತವನ್ನೂ ಬಲ್ಲವರಾಗಿರಬೇಕು. ಇವರಲ್ಲಿ ತಾಳಗುಂದ ಶಿಲಾಶಾಸನವನ್ನು ರಚಿಸಿದ ಕವಿ ಕುಬ್ಜ, ವಿಜಯ ಶಿವಮೃಗೇಶವರ್ಮನ ನಾಲ್ಕನೇ ವರ್ಷದ ದೇವಗಿರಿ ಶಾಸನವನ್ನು ರಚಿಸಿದ ನರವರ ಸೇನಾಪತಿ, ಆರನೇ ವರ್ಷದ ಹೊಸನಗರ ಮತ್ತು ಮೃಗೇಶವರ್ಮನ ಐದನೇ ವರ್ಷದ ಹಿಟ್ನಹೆಬ್ಬಾಗಿಲು ತಾಮ್ರಪಟಗಳನ್ನು ರಚಿಸಿದವನು ಶ್ರೀ ಕೀರ್ತ್ತಿವರ, ಮತ್ತು ಇದೇ ಅರಸನ ಎಂಟನೇ ವರ್ಷದ ಹಲಸಿ ತಾಮ್ರಪಟವನ್ನು ರಚಿಸಿದ ಭಾನುಕೀರ್ತ್ತಿ ಭೋಜಕ ಮತ್ತು ಜಯಂತ ಆಯುಕ್ತಕ ಎಂದು ಗುರುತಿಸಿಕೊಂಡಿರುವರು.
ಹೀಗೆ ಕದಂಬರು ಲಿಪಿಯ ಸಾಮ್ರಾಜ್ಯವನ್ನೇ ಸ್ಥಾಪಿಸಿ, ಪ್ರಾಕೃತದಿಂದ ಸಂಸ್ಕೃತಕ್ಕೆ ಬಂದು ಅಲ್ಲಿಂದ ಬ್ರಾಹ್ಮಿ ಲಿಪಿಯನ್ನು ತೊರೆದು ಸ್ಥಳೀಯವಾದ ಕನ್ನಡ ಬಳಕೆಗೆ ತಂದವರು ಕದಂಬರು.

#ಶಿಲೆಗಳಲ್ಲಡಗಿದ_ಸತ್ಯ

Thursday 19 July 2018

ರಾಷ್ಟ್ರಂಧಾರಯತಾಂ ಧ್ರುವಂ - ರಾಜಧರ್ಮ ಹೇಗಿರಬೇಕು ?


ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ 
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜುರ್ವೇದ.22.22.)
ಯಜುರ್ವೇದದ ಮಂತ್ರ ಅದೆಷ್ಟು ಅರ್ಥವತ್ತಾಗಿ ನಮ್ಮ ಜನ ಮತ್ತು ನಮ್ಮ ನೆಲವನ್ನು ಹೊಗಳಿ ಸಮೃದ್ಧವಾಗಿರಲಿ ಎಂದು ಹೇಳುತ್ತದೆ.
ಪರಮಾತ್ಮನೇ(ದೇವನೇ) ನಮ್ಮ ರಾಷ್ಟ್ರದಲ್ಲಿ ಬ್ರಹ್ಮತೇಜಸ್ಸಿನಿಂದ ಕೂಡಿದ ಬ್ರಾಹ್ಮಣನು(ಬ್ರಾಹ್ಮಣ ಎನ್ನುವುದು ಇಲ್ಲಿ ಜಾತಿವಾಚಕವಲ್ಲ, ಕರ್ಮ ಮತ್ತು ಆಚಾರದ ದೃಷ್ಟಿಯಿಂದ) ಕಾಲ ಕಾಲಕ್ಕೂ ಹುಟ್ಟಿ ಬರುತ್ತಿರಲಿ. ಕ್ಷತ್ರಿಯನಾದವನು ತನ್ನ ಕ್ಷಾತ್ರ ತೇಜಸ್ಸಿನಿಂದ ಕೂಡಿದವನಾಗಿ ಮತ್ತು ಶೂರನೂ ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ನಿಪುಣನೂ, ರೋಗರುಜಿನಗಳಿಲ್ಲದವನಾಗಿಯೂ, ಮಹಾರಥಿಯಾಗಿ ಜನ್ಮವೆತ್ತಿ ಬರುತ್ತಿರಲಿ. ಗೋವುಗಳು ಯಥೇಷ್ಟವಾಗಿ ಹಾಲು ಕೊಡುತ್ತಿರಲಿ. ಎತ್ತುಗಳು ಹೊರೆ ಹೊರಲು ಸಮರ್ಥವಾಗಿರಲಿ. ಕುದುರೆಗಳು ವೇಗವಾಗಿ ಓಡುವಂತಾಗಲಿ. ನಾರಿಯು ತನ್ನ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿರ್ವಹಿಸುವವಳಾಗಿರಲಿ. ಶುಭಕರ್ಮಕರ್ತನ ಪುತ್ರನು ಜಯಶಾಲಿಯೂ, ಉತ್ತಮ ರಥಿಕನೂ, ಸಭೆಯಲ್ಲಿ ಕುಳಿತುಕೊಳ್ಳಲು(ಸಭೆಯಲ್ಲಿ ಆಸೀನರಾಗಲು) ಅರ್ಹನೂ, ಉತ್ಸಾಹಶಾಲಿಯೂ ಆಗಿರಲಿ. ನಮಗಾಗಿ ಓಷಧಿಯು( ಭೂಮಿಯು), ಫಲಭರಿತವಾಗಿ ಪಕ್ವವಾಗಲಿ. ನಮಗೆ ಯೋಗಕ್ಷೇಮವು ಸದಾ ಸಿದ್ಧಿಸಲಿ.
ಇದು ಈ ನೆಲದ ಮೊದಲ ರಾಷ್ಟ್ರಗೀತೆ. ಸ್ವಂತದ್ದನ್ನು ಯಾವುದನ್ನೂ ಆಶಿಸದೇ ಬೇರೆಯವರಿಗಾಗಿ ಮತ್ತು ಈ ನೆಲಕ್ಕಾಗಿ ಎಲ್ಲವನ್ನೂ ಈ ಯಜುರ್ವೇದದ ಸೂಕ್ತಕಾರ ಕೇಳಿಕೊಳ್ಳುತ್ತಾನೆ.
ಋಗ್ವೇದದದ ಹತ್ತನೇ ಮಂಡಲದಲ್ಲಿ ರಾಷ್ಟ್ರವನ್ನಾಳುವ ರಾಜನ ಕುರಿತಾಗಿ ಹೇಳಲಾಗಿದೆ.
ರಾಜಾನಮಭಿಷಿಚ್ಯೇತ ತಿಷ್ಯೇಣ ಶ್ರವಣೇನವಾ |
ಪೌಷ್ಣಾ ಸಾವಿತ್ರ ಸೌಮ್ಯಾಶ್ವಿರೋಹಿಣೀಷೂತ್ತರಾಸು ಚ ||
ಎನ್ನುವುದಾಗಿ ಪುಷ್ಯಾ ಮತ್ತು ಶ್ರವಣ ಮೊದಲಾದ ಶುಭ ನಕ್ಷತ್ರದಲ್ಲಿ ರಾಜ್ಯಾಭಿಷೇಕ ಮಾಡಬೇಕು ಮತ್ತು ಅದರ ವಿಧಿ ವಿಧಾನಗಳನ್ನೂ ಸಹ ಹೇಳಲಾಗಿದೆ. ರಾಜನಿಗೆ ಪುರೋಹಿತನಾಗಿದ್ದವನು ರಾಜನನ್ನು ಆಶೀರ್ವದಿಸಬೇಕು. ಅಪ್ರತಿರಥ ಸೂಕ್ತದಲ್ಲಿನ "ಆಶುಃ ಶಿಶಾನಃ" ಎನ್ನುವ ಮಂತ್ರವನ್ನು ಪಠಿಸುತ್ತಾ "ಎಲೈ ರಾಜನೇ ಸಮಸ್ತ ಪೃಥ್ವಿಯನ್ನು ಜಯಿಸುವವನಾಗು. ನಿನ್ನಲ್ಲಿ ಧರ್ಮವು ಜಾಗ್ರತವಾಗಿರಲಿ ನೀನು ಧರ್ಮದಂತೆ ನಡೆದುಕೋ. ಪ್ರಜಾ ಪಾಲನೆಯುಅಲ್ಲಿಯೂ ಸಹ ಧರ್ಮವನ್ನು ಆಚರಿಸು. ನಿನ್ನ ವಂಶವು ಅಭಿವೃದ್ಧಿಯಾಗಲಿ. ಎಂದು ಜಪಿಸಬೇಕು. ಯುದ್ಧಾರ್ಥವಾಗಿ ಹೊರಟು ನಿಂತ ರಾಜನನ್ನು ಅದೇ ಸೂಕ್ತದ "ಆತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ" ಎನ್ನುವ ಮಂತ್ರದಿಂದ ಅಭಿಮಂತ್ರಿಸಬೇಕು ಎನ್ನುತ್ತದೆ. ಈ ಸೂಕ್ತ ಕರ್ತಾರ ಆಂಗೀರಸನ ಮಗನಾದ ಧ್ರುವ ಎನ್ನುವವನು.
ಆ ತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ |
ವಿಶಸ್ತ್ವಾ ಸರ್ವಾ ವಾಂಛಂತು ಮಾ ತ್ವಾದ್ರಾಷ್ಟ್ರಮಧಿಭ್ರಶತ್ ||
ಎಲೈ ರಾಜನೇ ನಿನ್ನನ್ನು ರಾಷ್ಟ್ರಕ್ಕೆ ಅಧಿಪತಿಯಾಗಿ ಅಭಿಷಿಕ್ತನನ್ನಾಗಿ ಮಾಡಿ ಈ ರಾಷ್ಟ್ರಕ್ಕೆ ಕರೆತಂದಿದ್ದೇನೆ, ನಮ್ಮ ಮಧ್ಯದಲ್ಲಿದ್ದು ನಮಗೆಲ್ಲರಿಗೂ ಸ್ವಾಮಿಯಾಗಿರು. ಸ್ಥಿರ ಚಿತ್ತನಾಗಿಯೂ ಶತ್ರುಗಳಿಂದ ಅಹಿಂಸಿತನಾಗಿಯೂ ಸ್ಥಾನ ಭ್ರಷ್ಟನಾಗದೇ ಇದೇ ನೆಲದಲ್ಲಿ ಸ್ಥಿರವಾಗಿದ್ದು ನಮ್ಮನ್ನು ಸಲಹು. ಎಲ್ಲಾ ಪ್ರಜೆಗಳ ವಿಶ್ವಾಸವನ್ನು ಸಂಪಾದಿಸಿ ಅವರಿಂದ ನೀನು ಸದಾಕಾಲ ನಮ್ಮನ್ನು ಆಳುವಂತವನಾಗಬೇಕೆಂದು ಆಶಿಸು. ನಿನ್ನಿಂದ ಈ ರಾಜ್ಯ ಕೈಬಿಟ್ಟು ಹೋಗದಿರಲಿ ಎನ್ನುವುದಾಗಿ ಪುರೋಹಿತ ರಾಜನನ್ನು ಆಶೀರ್ವಾದಿಸುವ ರೂಪದ ಸೂಕ್ತ. ಇಲ್ಲಿ ಪುರೋಹಿತ ಪ್ರಜೆಗಳ ಪ್ರತಿನಿಧಿಯಾಗಿ ರಾಜನೊಬ್ಬನನ್ನು ಪ್ರಜೆಗಳು ಅಪೇಕ್ಷಿಸುವ ವಿಧಾನವನ್ನು ವ್ಯಕ್ತಪಡಿಸುತ್ತಾನೆ.
ಧ್ರುವಾ ದ್ಯೌರ್ಧ್ರುವಾ ಪೃಥಿವೀ ಧ್ರುವಾಸಃ ಪರ್ವತಾ ಇಮೇ |
ಧ್ರುವಂ ವಿಶ್ವಮಿದಂ ಜಗದ್ಧ್ರುವೋ ರಾಜಾ ವಿಶಾಮಯಂ ||
ಈ ದ್ಯುಲ್ಲೋಕ, ಮತ್ತು ಭೂಮಿ, ಈ ಪರ್ವತಗಳು, ಈ ಸಕಲ ಜಗತ್ತೂ ಸ್ಥಿರವಾಗಿ ಇರುವುವು. ಅದರಂತೆ ಪ್ರಜಾ ಪಾಲಕನಾದ ನೀನೂ ಸಹ ಧ್ರುವನಾಗಿರು. ಶಾಶ್ವತವಾಗಿ ನೆಲೆಸು ಎನ್ನುತ್ತದೆ ಈ ಮಂತ್ರ.
ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ |
ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂಧಾರಯತಾಂ ಧ್ರುವಂ ||
ಮಹಾರಾಜ, ನಿನ್ನ ರಾಜ್ಯವನ್ನು ಅತ್ಯಂತ ಪ್ರಕಾಶಮಾನನಾದ ವರುಣದೇವನು, ದಾನವೇ ಮೊದಲಾದ ಸದ್ಗುಣಯುಕ್ತನಾದ ಬೃಹಸ್ಪತಿಯೂ, ಇಂದ್ರ ಮತ್ತು ಅಗ್ನಿಗಳು ಸ್ಥಿರವಾಗಿ ನಿನ್ನ ರಾಜ್ಯವನ್ನು ಕಾಪಾಡಿ ಬೆಳಗಲಿ ಮತ್ತು ಸ್ತಿರವಾಗಿರಲಿ ಮತ್ತು ಪ್ರಜಾಜನರನ್ನು ಕಾಪಾಡಲಿ ಎಂದು ಆಶಿಸುತ್ತಾನೆ. ಮುಂದಿನ ಮಂತ್ರದಲ್ಲಿ ಪ್ರಜೆಗಳು ನಿನ್ನಲ್ಲಿ ರಾಜಭಕ್ತಿಯನ್ನಿಡುವಂತೆ ಮತ್ತು ಅವರೇ ನಿನಗೆ ಕರಾದಾಯಗಳನ್ನು ಸ್ವ ಮನಸ್ಸಿನಿಂದ ಕೊಡುವಂತೆ ಇಂದ್ರನು ಅನುಗ್ರಹಿಸಲಿ ಎನ್ನುತ್ತಾನೆ.
ಇದಕ್ಕೂ ಮಿಗಿಲಾದ ಆಶಿರ್ವಾದ ಅಥವಾ ಶುಭಾಶಯ ನಮಗೆ ಎಲ್ಲಿಂದ ದೊರಕುತ್ತದೆ. ಎಂತಹ ಆಶಯ ಇದು. ರಾಜನ ಸುಖವೇ ಪ್ರಜೆಗಳ ಸುಖವೆನ್ನುವುದು ಒಂದಾದರೆ, ಎಲ್ಲರನ್ನೂ ಜೀವಿಸಲು ಬಿಡು ಎನ್ನುವುದು ಇನ್ನೊಂದು ಅರ್ಥ. ರಾಜನಾದವ ಕರಗಳನ್ನು ಬೇಡಲೂ ಬಾರದು ಅಥವಾ ಬಲಾತ್ಕಾರದಿಂದ ತೆಗೆದುಕೊಳ್ಲಲೂ ಬಾರದು ಪ್ರಜೆಗಳಲ್ಲಿ ತಾವೇ ಸಮರ್ಪಿಸಬೇಕು ಎನ್ನುವ ಭಾವನೆ ಹುಟ್ಟಬೇಕಂತೆ. ಹಾಗಾದರೆ ಆ ರಾಜ ಎಂತವನಿರಬೇಕು! ಅವನ ಆಡಳಿತ ಹೇಗಿರಬಹುದು. ಇಂತಹ ಸೂಕ್ತ ಪಡೆದ ನಾವು ಧನ್ಯರು.
#ಶಿಲೆಗಳಲ್ಲಡಗಿದ_ಸತ್ಯ