Search This Blog

Wednesday 28 June 2017

ಗೌತಮೀ ಬಲಸಿರಿ

ನಾಸಿಕ್ ನ ಗುಹೆಯಲ್ಲಿರುವ ಗೌತಮೀ ಬಲಸಿರಿಯ ಶಾಸನ. ಭಾಷೆ ಪ್ರಾಕೃತ ಲಿಪಿ ಬ್ರಾಹ್ಮಿಯನ್ನು ಬಳಸಲಾಗಿದೆ. ಕ್ರಿ. ಶ ೨ನೇ ಶತಮಾನದ ಈ ಶಾಸನವು ತನ್ನ ೫ನೇ ಸಾಲಿನಲ್ಲಿ "ಪೋರಜನ ನಿವಿಸೇಸ ಸಮ ಸುಖ ದುಖಸ" ಎನ್ನುವ ವಾಕ್ಯನ್ನು ವಿಷ್ಣು ಸಂಹಿತೆಯ ವಾಕ್ಯವನ್ನು ಒಳಗೊಂಡಂತೆ ಅಥವಾ ಶಾಸನ ಕವಿ ವಿಷ್ಣು ಸಂಹಿತೆಯ ಶ್ಲೋಕವೊಂದನ್ನು ಕಿರಿದಾಗಿಸಿ ತನ್ನ ನೆಲೆಯಲ್ಲಿ ಆಲೋಚಿಸಿ ಅದನ್ನು ಈ ರೀತಿ ಬರೆದಿರಬಹುದು.
ಪ್ರಜಾ ಸುಖ ಸುಖಾ ರಾಜ ತದ್ದುಃಖೇ ಯಶ್ಚ ದುಃಖಿತಃ |
ಸ ಕೀರ್ತಿಯುಕ್ತೋ ಲೋಕೇಸ್ಮಿನ್ ಪ್ರೇತ್ಯ ಸ್ವರ್ಗೇ ಮಹೀಯತೇ || ವಿಷ್ಣು ಸಂಹಿತಾ ೩, ೭೦

ಅರ್ಥ ಶಾಸ್ತ್ರದಲ್ಲಿ
ಪ್ರಜಾ ಸುಖ ಸುಖ ರಾಜ್ಞಃ ಪ್ರಜಾನಾಂಶ್ಚ ಹಿತಂ ಹಿತಮ್ |

ನಾತ್ಮಪ್ರಿಯ ಹಿತ ರಾಜ್ಞಃ ಪ್ರಜಾನಾಂ ತು ರಿಯಂ ಹಿತಮ್ || 


Tuesday 27 June 2017

ಗುಣವರ್ಮ ಮೊದಲ ಸಹಸ್ರಮಾನದ ಶಾಸನ ಕವಿ

ಸುಮಾರು ಹತ್ತನೆಯ ಶತಮಾನದ ಅಂಚಿಗೆ ರಾಷ್ಟ್ರಕೂಟರ ನಿತ್ಯವರ್ಷನ ಆಡಳಿತದ ಸಮಯದಲ್ಲಿ ಆತ ಆಂಧ್ರದ ಕಡಪಾ ಜಿಲ್ಲೆಯ ಜಮ್ಮಲಮಡುವಿನ ದಾನವುಲಪಾಡು ವಿನಲ್ಲಿ ಒಂದು ಶಾಸನವನ್ನು ಆತನ ಆಸ್ಥಾನ ಕವಿಯ ಮೂಲಕ ಒಂದು ಶಾಸನವನ್ನು ಬರೆಸುತ್ತಾನೆ. "ಶ್ರೀವಿಜಯಂ ಅನುಪಮ ಕವಿಯ ಸೇನಬೋವಂ ಗುಣವರ್ಮ್ಮಂ ಬರದಂ" ಎಂದು ಬರೆಯುತ್ತಾ ಕವಿ ಗುಣವರ್ಮ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ . ಈ ಗುಣವರ್ಮ ನೆನ್ನುವ ಕವಿ ಆ ಕಾಲದ ಶ್ರೇಷ್ಟ ಕವಿಗಳ ಸಾಲಿನಲ್ಲಿದ್ದಿರ ಬೇಕೆನ್ನುವ ಅನುಮಾನ ಮೂಡುತ್ತದೆ.
ಆದರೆ ಶೂದ್ರಕ ಎನ್ನುವ ಗ್ರಂಥ ಬರೆದ ಗುಣವರ್ಮನು " ಮಹೇಂದ್ರಾಂತಕಂ" ಮುಂತಾದ ಬಿರುದುಳ್ಳ ಗಂಗರಾಜನೊಬ್ಬನನ್ನು ಸ್ತುತಿಸಿ ಕೊಂಡಾಡಿದ್ದಾನೆ. ಈ ಗಂಗರಾಜನನ್ನು ಶೂದ್ರಕನಿಗೆ ಹೋಲಿಸಿಕೊಂಡಿದ್ದಾನೆ. ಗಂಗರಾಜರುಗಳಲ್ಲಿ ಮಹೇಂದ್ರಾಂತಕ ನೆನ್ನುವ ಬಿರುದು ಪಡೆದವನು ಗಂಗ ಎರೆಯಪ್ಪ. ಈತನ ಕಾಲ ಸುಮಾರು ೯೧೩. ಈ ಎರೆಯಪ್ಪನೇ ಗುಣವರ್ಮನನ್ನು ಪೋಷಿಸಿಕೊಂಡು ಬಂದಿರಬಹುದು ಎನ್ನಲಾಗುತ್ತದೆ. ಇದೇ ಗುಣವರ್ಮ್ಮನೆ ದಾನವುಲಪಾಡುವಿನ ಶಾಸನ ಕವಿಯಾಗಿದ್ದಿರಬಹುದು ರಾಷ್ಟ್ರಕೂಟರ ಮೂರನೇ ಇಂದ್ರ(ನಿತ್ಯವರ್ಷ)ನ ಕಾಲವೂ ಸಹ ಕ್ರಿ. ಶ. ೯೧೫. ಆದುದರಿಂದ ಶೂದ್ರಕದ ಕವಿ ಮತ್ತು ದಾನವುಲಪಾಡು ಶಾಸನ ಕವಿ ಒಬ್ಬನೇ ಇದ್ದಿರಬಹುದಾದ ಸಾಧ್ಯತೆ ಇದೆ.
ದಾನವುಲ ಪಾಡುವಿನ ಶಾಸನದ ವಿಜಯ ದಂಡನಾಥನ ಕುರಿತಾದ ಪದ್ಯದ ಸಾಲುಗಳು ಈ ಕೆಳಗಿನಂತೆ ವರ್ಣಿತವಾಗಿವೆ.
ವಸುಮತಿಯೊಳಗಿೞ್ದೆಣ್ಟುಂ ದೆಸೆಗಳ ಕುಸುಕುರುಮನೆಯ್ದಿ ಮಾಣದೆ ಮತ್ತಂ
[ಬಿಸ]ರುಹ ಗರ್ಭಾಣ್ಡಕ್ಕಂ ಪಸರಿಸಿದುದು [ಕೀ]ರ್ತ್ತಿನೆಟ್ಟನನುಪಮಕವಿಯಾ
 ಶಾಸನದಲ್ಲಿ ಈ ಕೆಳಗಿನಂತೆ ಖಂಡರಿಸಲಾಗಿದೆ.
47. ವಸುಮತಿಯೊಳ
48. ಗಿೞ್ದೆಣ್ಟುಂ ದೆಸೆಗಳ
49. ಕುಸುಕುರುಮನೆಯ್ದಿ
50. ಮಾಣದೆ ಮತ್ತಂ [ಬಿಸ]
51. ರುಹ ಗರ್ಭಾಣ್ಡಕ್ಕಂ ಪ
52. ಸರಿಸಿದುದು [ಕೀ]ರ್ತ್ತಿನೆ
53. ಟ್ಟನನುಪಮಕವಿಯಾ
 ನಿರ್ಗ್ಗತಭಯ ನೀನರಸಂ ಸರ್ಗ್ಗಮಾನಾನೊಲ್ಲೆನೆನ್ದು ಪೇಸಿ ಬಿಸುರ್ವ್ವಂ
ಸರ್ಗ್ಗದ ಭೋಗಮನುಣ್ಡಪವರ್ಗ್ಗಕ್ಕಡಿಯಿಟ್ಟೊನಱಿದೊನನುಪಮ ಕವಿಯಂ
ಇದೇ ಶಾಸನದಲ್ಲಿನ ಖಂಡರಣೆ.
10. ನಿರ್ಗ್ಗತಭಯ ನೀನರಸಂ ಸರ್ಗ್ಗ
11. ಮಾನಾನೊಲ್ಲೆನೆನ್ದು ಪೇಸಿ ಬಿಸು
12.ರ್ವ್ವಂ ಸರ್ಗ್ಗದ ಭೋಗಮನುಣ್ಡಪವ
13. ರ್ಗ್ಗಕ್ಕಡಿಯಿಟ್ಟೊನಱಿದೊನನುಪ
14. ಮ ಕವಿಯಂ
 
ದಣ್ಡಿನ ಸಾಮಗ್ರಿಗೆ ಪರಮಣ್ಡಲಮಳ್ಳಾಡೆ[ಸ]ವ್ರ್ವವಿಕ್ರಮತುಂಗಂ
ದಣ್ಡಿನಬೀರ ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ ಶ್ರೀವಿಜಯಂ
 
ಇದು ಶಾಸನದಲ್ಲಿರುವಂತೆ
14. ಮ ಕವಿಯಂ ದಣ್ಡಿನ ಸಾಮ
15. ಗ್ರಿಗೆ ಪರಮಣ್ಡಲಮಳ್ಳಾಡೆ
16. [ಸ]ರ್ವ್ವವಿಕ್ರಮತುಂಗಂ ದಣ್ಡಿನಬೀ
17. ರ ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ
18. ಶ್ರೀವಿಜಯಂ ಚಣ್ಣ ಪರಾಕ್ರ
 ಚಣ್ಣ ಪರಾಕ್ರಮನುಱದರಿಮಣ್ಡಲಿಕರನಟ್ಟಿ ಪಿಡಿದು ಪತಿಗೊಪ್ಪಿಸುವೊಳ್
ಗಣ್ಡಂ ಪ್ರಚಣ್ಡನೀ ಭೂಮಣ್ಡಲದೊಳ್ದಣ್ಡನಾಯಕಂ ಶ್ರೀವಿಜಯಂ
ಇದು ಶಾಸನದಲ್ಲಿರುವಂತೆ
18. ಶ್ರೀವಿಜಯಂ ಚಣ್ಣ ಪರಾಕ್ರ
19. ಮನುಱದರಿಮಣ್ಡಲಿಕರನಟ್ಟಿ ಪಿ
20. ಡಿದು ಪತಿಗೊಪ್ಪಿಸುವೊಳ್ಗಣ್ಡಂ ಪ್ರಚ
21. ಣ್ಡನೀ ಭೂಮಣ್ಡಲದೊಳ್ದಣ್ಡನಾಯಕಂ

22. ಶ್ರೀವಿಜಯಂ

Monday 26 June 2017

ತೋರಣ - ಪ್ರಾಕೃತ - ಸಂಸ್ಕ್ಟತ - ಕನ್ನಡ

"ತೋರಣ" ಇದು ಮೂಲ ಸಂಸ್ಕೃತಪದ ಇಂದು ನಾವು ಕನ್ನಡದ ಪದವೇ ಇರಬೇಕೆನ್ನುವಷ್ಟು ನಮ್ಮ ಭಾಷೆಯಲ್ಲಿ ಸಮ್ಮಿಳಿತಗೊಂಡು ಬಳಕೆಗೊಂಡಿದೆ, ತೋರಣಕ್ಕೆ ಸಮಾನ ಕನ್ನಡ ಪದ ಯಾವುದೆಂದು ಹುಡುಕುತ್ತಾ ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕನೇ ಸಂಪುಟದ ೩೭೦೯ನೇ ಪುಟದ ೨ನೇ ಕಾಲಂನ ೨೩ನೇ ಪದ ತೋರಣ: ಹೆಬ್ಬಾಗಿಲು, ಹೊರಬಾಗಿಲು ಎಂದು ಹೇಳಲಾಗಿದೆ. ಕಿಟ್ಟೆಲ್ ಶಬ್ದಕೋಶದ ೭೫೮ನೇ ಪುಟದಲ್ಲಿ A festoon suspended across gateways. ಎಂದು ಅರ್ಥೈಸಲಾಗಿದೆ. ಸಂಸ್ಕೃತದ ಮೋನಿಯರ್ ವಿಲ್ಲಿಯಮ್ಸ್ ನಲ್ಲಿ ೪೫೬ನೇ ಪುಟದಲ್ಲಿಯೂ ಹೂವಿನಿಂದಲಂಕೃತವಾದ ಬಾಗಿಲು ಎನ್ನಲಾಗಿದೆ. ಕುಮಾರ ಸಂಭವದಲ್ಲಿ "ಭಾಸೋಜ್ವತ್ಕಾಂಚನ ತೋರಣಾನಾಮ್" ಎಂದು ಹೇಳಲಾಗಿದೆ. "ದ್ವಾರಾಗ್ರೇ ನಿಖಾತಸ್ತಂಭೋ ಪರಿನಿಬದ್ಧೋ ಧನುರಾಕಾರಃ" ಎಂದು ವಾಚಸ್ಪತ್ಯದಲ್ಲಿ ಹೇಳಲಾಗಿದೆ. ಹೀಗೇ ತೋರಣ ಎನ್ನುವುದು ಯಾಗ ಶಾಲೆಗಳಲ್ಲಿಯೂ ವಿಶೇಷತೆಯನ್ನು ಪಡೆದಿದೆ. ಮಂಗಲಕರ ಸನ್ನಿವೇಶದಲ್ಲಿ "ತೋರಣ" ಬಹುಮುಖ್ಯ. ಸುಮಾರು ಒಂದು ಮತ್ತು ಎರಡನೇ ಶತಮಾನದ ಕಾಲದ ಜೈನ ಶಾಸನ. ಮಥುರಾದಲ್ಲಿರುವ ಶಾಸನದ ಭಾಷೆ ಪ್ರಾಕೃತ ಮಿಶ್ರವಾದ ಸಂಸ್ಕೃತ. ಲಿಪಿ ಬ್ರಾಹ್ಮಿ.
ಇಲ್ಲಿ "ಸಹ ಮಾತಾ ಪಿತಿಹಿ ಸಹ" ಮತ್ತು "ಶಶ್ರೂ ಶಶುರೇಣ" ಎನ್ನುವುದು ತೋರಣದೊಂದಿಗೆ ಇರುವುದು. ಇಲ್ಲಿ ಶಶುರೇಣ ಎನ್ನುವಲ್ಲಿನ ಅಕ್ಷರಗಳನ್ನು ತೋರಣದ ಅಂದಕ್ಕಾಗಿ ಸ್ವಲ್ಪ ಅಸ್ತವ್ಯಸ್ಥ ಗೊಳಿಸಲಾಗಿದೆ.

ಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ತೋರಣವನ್ನು ಹೀಗೆ ಹೇಳುತ್ತಾನೆ -
ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋಱಣದೋಳಿಗಳ್
ತಳತ್ತಳಿಸಿ ವಿಚಿತ್ರ ಕೇತು ತತಿಗಳ್ ಮಿಳಿರ್ದಾಡೆ ಪುರಾಙ್ಗನಾ
ಜನಙ್ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಮ್
ಬಳಿಯಿಸೆ ಪೊಕ್ಕನಾ ದ್ರುಪದ ಮನ್ದಿರಮಮ್ ಮಮ್ದಿರಮಮ್ ಪರಸೈನ್ಯಭೈರವಮ್[3-74]

ಇದಿರೊಳ್ ಕಟ್ಟಿದ ತೋರಣಮ್ ನಿಹಿದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ
ನ್ಮದ ಭೃಂಗ ಧ್ವನಿ ಮಂಗಳ ಧ್ವನಿಯೆನಲ್ ಸಾಲ್ವನ್ನೆಗಮ್ ತಾನೆ
ತಕ್ಕುದು ಕಾಮಂಗೆ ವಿವಾಹ ಮಂಟಪಮೆನಲ್ಕಾ ಮಾಧವೀ ಮಂಟಪಮ್[5-6]


Saturday 24 June 2017

ಕತಿವರ್ಣಃ ಕತ್ಯಕ್ಷರಃ ಕತಿಪದಃ ಕಸ್ಸಂಯೋಗಃ - ಎಷ್ಟು ವರ್ಣಗಳು, ಎಷ್ಟು ಅಕ್ಷರಗಳು, ???????

ಗಾಯತ್ರೇಣ ಪ್ರತಿಮಿಮೀತೇ ಅರ್ಕಮರ್ಕೇಣ ಸಾಮತ್ರೈಷ್ಟುಭೇನ ವಾಕಂ | ೧ - ೧೬೪-೪೭
ವಾಕೇನ ವಾಕಂ ದ್ವಿಪದಾ ಚತುಷ್ಪದಾ ಅಕ್ಷರೇಣ ಮಿಮತೇ ಸಪ್ತವಾಣೀಃ | ೧ - ೧೬೪-೪೮

ಇದು ಋಗ್ವೇದದಲ್ಲಿ ಬರುವ ಋಕ್ಕು. ವೇದಗಳು ಅಪೌರುಷೇಯ. ಗುರುವಿನಿಂದ ಶಿಷ್ಯನಿಗೆ ಮೌಖಿಕವಾಗಿ ಬಂದಂತಹ ಅತ್ಯುನ್ನತ ಕೊಡುಗೆ. ವೇದದಲ್ಲಿ ಬರುವ ಈ ಮಂತ್ರವು ಅಕ್ಷರದ ಬಗ್ಗೆ ಹೇಳುತ್ತಿದೆ. ಏಳು ಛಂದಸ್ಸುಗಳು ಅಕ್ಷರದ ರೂಪ ಪಡೆಯುತ್ತವೆ ಎಂದು ಹೇಳುತ್ತಿದೆ. ಛಂದಸ್ಸಿಗೆ ಅಕ್ಷರವೇ ಪ್ರಮಾಣ ಎನ್ನುವುದಾಗಿ ಹೇಳುತ್ತಿದೆ. ಹಾಗಾದರೆ ಅಕ್ಷರಗಳ, ಲಿಪಿಯ ಇತಿಹಾಸದ ಆರಂಭ ಯಾವಾಗಿನಿಂದ ಆರಂಭ ? ತೈತ್ತರೀಯದಲ್ಲಿ ದೇವತೆಗಳು ಇಂದ್ರನನ್ನು ಭಾಷೆಗೆ ವ್ಯಾಕರಣ ಬರೆಯುವಂತೆ ಪ್ರಾರ್ಥನೆಯನ್ನು ಮಾಡುತ್ತಾರೆ. ಅದಕ್ಕೆ ಇಂದ್ರನು ಪದ, ಪ್ರತ್ಯಯ, ವಾಕ್ಯಗಳನ್ನು ಬಿಡಿಸಿ ತಿಳಿಸುತ್ತಾನಂತೆ.

ಇದೇ ಋಗ್ವೇದದಲ್ಲಿ ಬರುವ ಅಷ್ಟಕರ್ಣಿಯ ಕಥೆಯನ್ನು ಗಮನಿಸಿದರೆ ಅಲ್ಲಿಯೂ ಸಹ ಗೋವುಗಳ ಗುರುತಿಗಾಗಿ ಕಿವಿಗಳಿಗೆ ಗುರುತು ಹಾಕುತ್ತಿದ್ದರಂತೆ. ಇಲ್ಲಿಯೂ ಅಕ್ಷರರೂಪ ಇದೆ. ಶತಪಥ ಬ್ರಾಹ್ಮಣದಲ್ಲೂ ಚಿನ್ನದ ತೂಕದ ವಿವರಣೆ ಸಿಗುತ್ತದೆ. ಗೋಪಥದಲ್ಲಿಯೂ ಓಂಕಾರವನ್ನು ಚರ್ಚಿಸುತ್ತಾರೆ. ಶುಕ್ಲ ಯಜುರ್ವೇದದಲ್ಲಿ ವಾಜಸನೇಯ ಸಂಹಿತೆಯಲ್ಲಿ ಅಕ್ಷರ ಮತ್ತು ಲೇಖನ ಸಾಧನೆಗಳ ಉಲ್ಲೇಖ ಸಿಗುತ್ತದೆ. ಐತರೇಯ ಬ್ರಾಹ್ಮಣದಲ್ಲಿಯೂ ಅಕ್ಷರಗಳನ್ನು ಚರ್ಚಿಸಲಾಗುತ್ತದೆ. 

Wednesday 21 June 2017

ಉಭಯಮುಖಿ - ಮತ್ತು ಕನ್ನಡ ಶಾಸನ.

ಕನ್ನಡ ಭಾಷೆ ಸುಂದರವಾದ ಭಾಷೆ ಇದು ವೈಜ್ಞಾನಿಕವಾಗಿ ವ್ಯವಸ್ಥಿತವಾದ ನೆಲೆಗಟ್ಟನ್ನು ಹೊಂದಿರುವ ಭಾಷೆ, ಪರ್ಯಾಪ್ತವಾದ ಅಕ್ಷರಗಳು, ಆ ಅಕ್ಷರಗಳು ಸಹ ನೋಡಲು ಸುಂದರವಾಗಿರುವಂತವು. ಅರ್ಕ ಒತ್ತು, ದೀರ್ಘ - ಹೃಸ್ವ, ಅನುಸ್ವಾರ ವಿಸರ್ಗ ಮಹಾ ಪ್ರಾಣ ಅಲ್ಪಪ್ರಾಣಾದಿಗಳನ್ನು ಹೊಂದಿದ ಸುಸಂಬದ್ಧ ಭಾಷೆ. ಪ್ರಾಚೀನ ಭಾಷೆಗಳಲ್ಲಿ ಒಂದು ಎನ್ನುವುದೂ ಅಷ್ಟೆ ಸತ್ಯ. ಇಂತಹ ಭಾಷೆಗೆ ಅದ್ಭುತವಾದ ಇತಿಹಾಸವಿದೆ. ಮೊದಲ ಸಹಸ್ರಮಾನದ ಆರಂಭದಿಂದ ಹತ್ತನೆ ಶತಮಾನದ ತನಕ ಬರುವ ಶಾಸನಗಳಲ್ಲಿ ಅಲ್ಲಲ್ಲಿ ಯುದ್ಧದ ವರ್ಣನೆ, ವೀರಮರಣ, ತ್ಯಾಗ ಬಲಿದಾನಗಳು, ದಾನಗಳು, ವೀರ ಕೊಡುಗೆಗಳು ಇತ್ಯಾದಿ ಬರುತ್ತಾ ಹೋಗುತ್ತವೆ. ದಾನಗಳಲ್ಲಿ "ಉಭಯಮುಖೀ" ದಾನ ಅತ್ಯಂತ ಮಹತ್ವದ ಒಂದು ದಾನ. ಉಭಯ ಎನ್ನುವುದು ಎರಡನ್ನು ಸೂಚಿಸುತ್ತದೆ. ಅಂದರೆ ಇಲ್ಲಿ ಉಭಯಮುಖಿ ಅನ್ನುವುದು ಆಗತಾನೆ ಪ್ರಸವ ವೇದನೆ ಆರಂಭವಾಗಿ ಹಸುವಿನ ಕರುವುಯ್ ಭೂಮಿಗೆ ಬರುವ ಸಂದರ್ಭ ಕರುವಿನ ಮುಖ ಒಂದುಕಡೆಗಿದ್ದರೆ ತಾಯಿ ಹಸುವಿನ ಮುಖ ಇನ್ನೊಂದು ಕಡೆ ಇರುತ್ತದೆ ಆ ಸಮಯದಲ್ಲಿ ಆ ಗೋವನ್ನು ದಾನ ಕೊಡುವುದನ್ನು ಉಭಯ ಮುಖಿ ಎಂದು ಕರೆಯಲಾಗಿದೆ, ಇದು ಅತ್ಯಂತ ಶ್ರೇಷ್ಠವಾದ ದಾನ ಎಂದು ಇತಿಹಾಸದಲ್ಲಿ ಗುರುತಿಸಿಕೊಂಡಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ ಉತ್ತರ ದಿಕ್ಕಿನ ಅರ್ಧ ಮಂಟಪದ ಎಡಗಡೆ ಕಂಬದ ಮೇಲಿರುವ ೮ನೇ ಶತಮಾನದ ರಾಷ್ಟ್ರಕೂಟ ದೊರೆ ಧಾರಾವರ್ಷನ ಶಾಸನದಲ್ಲಿ
1. ಸ್ವಸ್ತಿ ಧಾರಾವರ್ಷ ಶ್ರೀ ಪೃಥವೀವಲ್ಲಭ ಮಹಾರಾಜಾಧಿರಾಜ
2. ಪರಮೇಶ್ವರ ಭಟ್ಟಾರ ಶ್ರೀ ಕಲಿಬಲ್ಲಹನ್
3. ಪಿೃಥುವೀ ರಾಜ್ಯಂಗೆಯೆ ಲೋಕಮಹಾದೇವಿಯರ ದೇಗು
4. ಲದ ಸೂಳೆ ಗೋಯಿನ್ದಪೊಡ್ಡಿಯ ಮಗಳು ಬಾದಿ
5. ಪೊಡ್ಡಿಯೆಮ್ಬೊ[ಳ್] ಉತ್ತ[ಮ] ಗೋಸಾಸಮಿೞ್ದೋಳ್
6. ಶ್ವರಥಗೊಟ್ಟೊಳಿಸ್ತಿರಥಮಿೞ್ದೋಳ್
7. ಭೂಮಿದಾನಮುಂ ಉಭಯಮುಖಿಯುಂ ಕೊಟ್ಟ[ಳ್] - ಒಬ್ಬ ವೇಶ್ಯೆಯು ಗೋಸಾಸದೊಂದಿಗೆ ಉಭಯಮುಖೀ ದಾನವನ್ನು ಕೊಟ್ಟ ಉಲ್ಲೇಖ ಮೊತ್ತ ಮೊದಲಿಗೆ ಲಭಿಸುತ್ತದೆ.
ವಾರಣಾಸಿಯೊಳಂಪ್ರಯಾಗೆಯೊಳವಗರ್ಘ್ರ್ಯ ತೀರ್ಥ್ತದೊಳಂಸಾಸಿರಕವಿಲೆಯಂಕೋಡುಂ ಕೊಳಗುಮಂಪಂಚರತ್ನಗಳೊಳುಕಟ್ಟಿಸಿಸಾ
ಸಿರವೇದಪಾರಗರಪ್ಪ ಬ್ರಾಹ್ಮಣರ್ಗ್ "ಉಭಯಮುಖಿ"ಗೊಟ್ಟಪುಂಣ್ಯಮನೆಯ್ದುಗುಮಿದನಳಿದವನಾ ಪುಂಣ್ಯತೀತ್ರ್ಥಂಗಳೊಳನಿತುಕವಿಲೆಯು
ಮಂಸಾಷಿರ್ವಬ್ರಾಹ್ಮಣರುಮನಳಿದಪಾತಕಮನೆಯ್ದುಗು - ಎಂದು ಸಾಂತರ ಜಿನದತ್ತರಾಯನ ವಿರಕ್ತ ಮಠದ ಚವುಕಿ ಹೊಂಡದ ಶಾಸನದಲ್ಲಿ ಹೇಳಲಾಗಿದೆ. ವಾರಣಾಸಿ ಮತ್ತು ಪ್ರಯಾಗದಲ್ಲಿ ಶ್ರೇಷ್ಠವಾದ ನದಿಯಲ್ಲಿ ಸಾವಿರ ಗೋವುಗಳ ಕೋಡನ್ನು ಪಂಚರತ್ನಗಳಿಂದ ಕಟ್ಟಿಸಿ ಸಾವಿರಜನ ವೇದ ವಿದರನ್ನು ಕರೆಸಿ ಅವರಿಗೆ ಉಭಯ ಮುಖೀ ದಾನವನ್ನು ಕೊಟ್ಟ ಎಂದು ಬರುತ್ತದೆ. ಆದರೆ ಇದು ಸತ್ಯ ಅನ್ನಿಸುತ್ತಿಲ್ಲ ಸಾವಿರ ಜನರಿಗೆ ಸಾವಿರ ಹಸುಗಳು ಪ್ರಸವಿಸುವ ವೇಳೆ ಹೇಗೆ ಕೊಡಬಹುದೋ ಅರ್ಥವಾಗುತ್ತಿಲ್ಲ. ರಾಷ್ಟ್ರಕೂಟರ ಕೊಟ್ಟಿಗನ ನಾಗಾವಿಯ ಶಾಸನದಲ್ಲಿ ಸಹ ಇದೇ ರೀತಿ ಬರುತ್ತದೆ. ಹುಲ್ಗೂರು ಮತ್ತು ಕಲ್ಯಾಣ ಚಾಲುಕ್ಯರ ಆಹವಮಲ್ಲ ದೇವನ ಗದಗದ ಹೊಸೂರು ಶಾಸನದಲ್ಲೂ ಉಭಯಮುಖೀ ಪ್ರಸ್ತಾಪ ಬರುತ್ತದೆ.


Tuesday 13 June 2017

ವಿಕ್ರಮಾರ್ಜುನ ವಿಜಯದ ಕವಿಯ ಬನವಾಸಿ ಪ್ರೇಮ ಹೀಗಿದೆ. ಅವನ ಕುರಿತಾದ ಶಾಸನ ಜಿನವಲ್ಲಭನ ಶಾಸನ.

ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ (ಬ)ವನವಾಸಿ ದೇಶಮಂ

ವಿಕ್ರಮಾರ್ಜುನ ವಿಜಯದ ಕವಿಯ ಬನವಾಸಿ ಪ್ರೇಮ ಹೀಗಿದೆ. ಅವನ ಕುರಿತಾದ ಶಾಸನ ಜಿನವಲ್ಲಭನ ಶಾಸನ.

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ || ೪-೩೦||

ಪಂಪ ಮೊದಲ ಸಹಸ್ರಮಾನದ ಅಂತ್ಯದಲ್ಲಿ ಬಂದ ಜೈನ ಕವಿ. ಕನ್ನಡ ನಾಡನ್ನು ಕನ್ನಡದ ಜನತೆಯನ್ನು ಕನ್ನಡದ ಮಣ್ಣಿನ ಸೊಬಗನ್ನು ಮತ್ತು ಇಲ್ಲಿನ ಪರಿಸರದ ಪ್ರತಿಯೊಂದು ಅಂಶವನ್ನು ತಾನು ಪ್ರೀತಿಸಿ ತನ್ನ ಕಾವ್ಯದಲ್ಲಿ ಅದನ್ನು ಕಟ್ಟಿಕೊಟ್ಟಿದ್ದನೆ. ಈ ಶಾಸನದಲ್ಲಿ ಪಂಪನನ್ನು "ಕವಿತಾಗುಣಾರ್ಣವ ಕೀರ್ತಿಯ ಮೂರ್ತಿ" ಎಂದುದಲ್ಲದೇ "ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮೆನ್ದು ಮದೀಯಮಿದೆನ್ದು ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊನ್ದು ಜೈನಶಾಸನದ ನೆಗೞ್ತೆಯಂ" ಎಂದು ಪಂಪನು ಜಗದ್ವಿಖ್ಯಾತ ಕವಿಯಾಗಿದ್ದನು ಈ ಶಾಸನ ಹೇಳುತ್ತದೆ. "ಪಂಪಂಗೆಗೊಟ್ಟಾ ದ್ವಿಜಾವಸಥ ಗ್ರಾಮ" ಪಂಪನಿಗೆ ಒಂದು ಗ್ರಾಮವನ್ನೇ ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ಇದೆ. ಇದು ಆಂಧ್ರ ಪ್ರದೇಶದ ಕರೀಂ ನಗರ ಜಿಲ್ಲೆಯ ಕುರ್ಕ್ಯಾಲ ಶಾಸನ. ಅಗ್ರಹಾರದ ಬೊಮ್ಮಲಮ್ಮಗುಟ್ಟದ ಮೇಲಿನ ಒಂದು ಬಂಡೆಯ ಮೇಲೆ ಬರೆದ ಶಾಸನ. ವೇಮುಲವಾಡ ಚಾಳುಕ್ಯ - ಮೂರನೆಯ ಅರಿಕೇಸರಿಯ ಕ್ರಿ.ಶ.10ನೇ ಶತಮಾನದ ಶಾಸನ.

ಭ್ರಾತದ್ಧರ್ಮ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೋಣಿದ್ಧ್ರಮೀಕ್ಷಾಮಹೇ |
ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ || 1 ||

ಗೀತಂ ಗಾತುಮನೇಕ ಭೇದ ಸುಭಗಂ ಕಾವ್ಯಾನಿ ಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ ಸತಾಂ |
ಭೋಗಾನ್ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭೞ್ಪರಮಿದಂ ಪಂಪಾಭಿಧಾನಾನುಜಃ || [2] ||

ಅಜಸ್ರ ಜಿನವನ್ದನಾಗತ ಮುನೀಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈಃ |
ಅಧಿಷ್ಠಿತ ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀರ್ತ್ತಿ ಮಾಕಳ್ಪತಃ || [3] ||

ಬಗೆಯಲಳುಂಬಮೀ ಬಗೆಯನಾರ್ಬ್ಬಗೆವೊರ್ಬ್ಬಗೆಗಾಸೆಯಲ್ತು ದಿಟ್ಟಿಗೆಪೊಲನಲ್ತು ನೀಳ್ದ
ಸಱಿಯೊಳ್ಜಿನಬಿಂಬಮನೀತನೀಗಳೆನ್ತಗೞಿಸಿದಪ್ಪೊನೆನ್ದು ಬಗೆವನ್ನೆವರಂ ಜಿನಬಿಂಬಮಲ್ಲಿ ತೊಟ್ಟಗೆ ನೆಗೞ್ದಿೞ್ದುವೇಂ ಚರಿತಮಚ್ಚರಿಯೋ ಜಿನವಲ್ಲಭೇನ್ದ್ರನಾ || [4] ||

ಇದು ಕವಿತಾಗುಣಾರ್ಣ್ಣವನ ಕೀರ್ತ್ತಿಯಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರಬಿಂಬ ಸನಾಥಮೆಂಬಲಂಪೊದವೆ
ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮಾಗೆ ಮಾಡಿದ ಜಿನವಲ್ಲಭಂಗೆ ಜಿನವಲ್ಲಭನಪ್ಪುದುಮೊಂದು ಛೋದ್ಯಮೋ || [5] ||
ಚದುರಮಯ್ಮೆಯ ಸತ್ಕವಿತ್ವದ ಸನ್ದ ಪಂಪನ ತಮ್ಮನೋರ್ವ್ವದೆ ಪೊಗೞ್ತೆಯೆ ಬಾಜಿಸಲ್ಬರೆಯಲ್ಕವಿತ್ವದ ತತ್ವದೊಳ್ಪುದಿದು
ನೇರ್ಪ್ಪಡೆ ಪೇೞಲುರ್ವ್ವಿಗಪೂರ್ವ್ವಮಾಗಿರೆ ಬಲ್ಲೊನಪ್ಪುದಱಿನೊರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ || [6] ||
ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮೆನ್ದು ಮದೀಯಮಿದೆನ್ದು
ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊನ್ದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇೞದೇ || [7] ||
ಎಸಗಲ್ಗಾಳಿ ಪುಗಲ್ಪತಂಗಕಿರಣಂ ಸಾರಲ್ಮಿಗಂ ಪಾಱಲಾಗಸದೊಳ್ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದೊನ್ಯೋದಯಂ ಧರ್ಮ್ಮದೊಳ್ಜಸಮಂ
ಪೊಂಪುೞಿಮಾಡೆ ಮೆಚ್ಚಿ ಹರಿಗಂ ಪಂಪಂಗೆಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ನೆಗೞ್ತೆಯ ಕಳಾಪ ಗ್ರಾಮಮಂ ಪೋಲ್ತುದೋ || [8] ||
ಬರೆದುದೇ ತಾಂಬ್ರಶಾಸನಮದೇಯಮೆ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ ಪಂಪನ ಪೆತ್ತುದೆ ಪೇೞಿಮೆನ್ದು ನೀಮ್ಮರುಳೆ
ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ ವೃಷಭಾಚಳೋನ್ನತ ಶಿಳಾತಳದೊಳ್ಬಬರೆದಕ್ಕರಂಗಳಂ || [9] || ||



ಪಂಪನ ಕುರಿತಾದ ಜಿನವಲ್ಲಭನ ಕುರ್ಕ್ಯಾಲ ಶಾಸನ

ಜಿನಶಾಸನ : ದಾನಶಾಸನ - ಅಗ್ರಹಾರ
(ಬೊಮ್ಮಲಮ್ಮಗುಟ್ಟದ ಮೇಲಿನ ಒಂದು ಬಂಡೆ)
ಕುಕ್ರ್ಯಾಲ - ಊ. ; ಕರೀಂನಗರ - ತಾ. ; ಕರೀಂನಗರ - ಜಿ.
ಶಾ. : ಶಿಲೆ. ಆ. : ಕ ವಿ ವಿ ಶಾ ಸಂ 5 (2), ಕರೀಂನಗರ. 404.
ವೇಮುಲವಾಡ ಚಾಳುಕ್ಯ - ಅರಿಕೇಸರಿ III : ಕ್ರಿ.ಶ.10ನೇ ಶತಮಾನ.
1. ಓಂ ನಮಃ ಸಿದ್ಧೇಭ್ಯಃ ಸ್ವಸ್ತಿ ಸಮಸ್ತ ಸಕಳ ಕಳಾಳಾಪ ಪ್ರವೀಣಂ ಭವ್ಯರತ್ನಾಕರಂ ಗುಣಪಕ್ಷಪಾತಿ ಬೆಂಗಿನಾಡ ಸಪ್ತಗ್ರಾಮಗಳೊಳಗಣ ವಂಗಿಪಱ್ಱ ಕಮ್ಮೆಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀವತ್ಸಗೋತ್ರಂ ಗುಂಡಿಕಱ್ಱ ನಿಡುಂಗೊಣ್ಡೆಯಭಿಮಾನಚನ್ದ್ರನ ಮರ್ಮ್ಮಂ ಭೀಮಪಯ್ಯನ ಬೆಳ್ವೊಲದಅಣ್ನಿಗೆಱೆಯ ಜೋಯಿಸಸಿಂಘನಮರ್ಮ್ಮ
2. ಳಬ್ಬಣಬ್ಬೆಯ ಮಗಂ ಕೊಣ್ಡಕುನ್ದೆಯ ದೇಸಿಗಗಣದ ಪೆÇತ್ಥಗೆಯ ಬೞಿಯ ಪಣ್ಡರಂಗವಲ್ಲಿಯ ಜಯಣನ್ದಿಸಿದ್ಧಾನ್ತಭಟಾರರ ಗುಡ್ಡಂ ಜಿನವಲ್ಲಭಂ ಸಬ್ಬಿನಾಡ ನಟ್ಟನಡುವಣ ಧರ್ಮ್ಮವುರದುತ್ತರ ದಿಗ್ಭಾಗದ ವೃಷಭಗಿರಿಯೆಂಬನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣದಿಶಾಭಾಗದೀ ಈ ಸಿದ್ಧಶಿಲೆಯೊಳ್ತಮ್ಮ ಕುಲದೈವಮಾದ್ಯನ್ತ ಜಿನಬಿಂಬಂಗಳುಮಂ ಚಕ್ರೇಶ್ವರಿಯುಮಂ ಪೆವು ಜಿನಪ್ರತಿ
3. ಮೆಗಳುಮಂ ತ್ರಿಭುವನತಿಲಕಮೆಂಬ ಬಸದಿಯುಮಂ ಕವಿತಾಗುಣಾರ್ಣವಮೆಂಬ ಕೆಱೆಯುಮಂ ಮದನವಿಳಾಸಮೆಂಬ ಬನಮುಮಂ ಮಾಡಿಸಿದಂ | ವೃತ್ತಂ || ಭ್ರಾತದ್ಧಮ್ರ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೋಣಿದ್ಧ್ರಮೀಕ್ಷಾಮಹೇ ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾ
4. ನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ || 1 || ಗೀತಂ ಗಾತುಮನೇಕ ಭೇದ ಸುಭಗಂ ಕಾವ್ಯಾನಿ ಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ ಸತಾಂ ಭೋಗಾನ್ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭೞ್ಪರಮಿದಂ ಪಂಪಾಭಿಧಾನಾನುಜಃ || [2] || ಅಜಸ್ರ ಜಿನವನ್ದನಾಗತ ಮುನೀ
5. ಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈಃ ಅಧಿಷ್ಠಿತ ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀತ್ರ್ತಿಮಾಕಳ್ಪತಃ || [3] || ಬಗೆಯಲಳುಂಬಮೀ ಬಗೆಯನಾರ್ಬ್ಬಗೆವೊರ್ಬ್ಬಗೆಗಾಸೆಯಲ್ತು ದಿಟ್ಟಿಗೆಪೊಲನಲ್ತು ನೀಳ್ದ ಸಱಿಯೊಳ್ಜಿನಬಿಂಬಮನೀತನೀಗಳೆನ್ತಗೞಿಸಿದಪ್ಪೊನೆನ್ದು ಬಗೆವನ್ನೆವರಂ ಜಿನಬಿಂಬ
6. ಮಲ್ಲಿ ತೊಟ್ಟಗೆ ನೆಗೞ್ದಿೞ್ದುವೇಂ ಚರಿತಮಚ್ಚರಿಯೋ ಜಿನವಲ್ಲಭೇನ್ದ್ರನಾ || [4] || ಇದು ಕವಿತಾಗುಣಾರ್ಣ್ಣವನ ಕೀರ್ತ್ತಿಯಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರಬಿಂಬ ಸನಾಥಮೆಂಬಲಂಪೊದವೆ ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮಾಗೆ ಮಾಡಿದ ಜಿನವಲ್ಲಭಂಗೆ ಜಿನವಲ್ಲಭನಪ್ಪುದುಮೊಂದು ಛೋದ್ಯಮೋ || [5] || ಚದುರ ಮಯ್ಮೆಯ ಸತ್ಕ
7. ವಿತ್ವದ ಸನ್ದ ಪಂಪನ ತಮ್ಮನೋರ್ವ್ವದೆ ಪೊಗೞ್ತೆಯೆ ಬಾಜಿಸಲ್ಬರೆಯಲ್ಕವಿತ್ವದ ತತ್ವದೊಳ್ಪುದಿದು ನೇರ್ಪ್ಪಡೆ ಪೇೞಲುರ್ವ್ವಿಗಪೂರ್ವ್ವಮಾಗಿರೆ ಬಲ್ಲೊನಪ್ಪುದಱಿನೊರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ || [6] || ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮೆನ್ದು ಮದೀಯಮಿದೆನ್ದು ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪ
8. ನ ನಂಬಿದುದೊನ್ದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇದೇ || [7] || ಎಸಗಲ್ಗಾಳಿ ಪುಗಲ್ಪತಂಗಕಿರಣಂ ಸಾರಲ್ಮಿಗಂ ಪಾಲಾಗಸದೊಳ್ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದೊನ್ಯೋದಯಂ ಧರ್ಮ್ಮದೊಳ್ಜಸಮಂ ಪೊಂಪುೞಿಮಾಡೆ ಮೆಚ್ಚಿ ಹರಿಗಂ ಪಂಪಂಗೆಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ನೆಗೞ್ತೆಯ ಕಳಾಪ ಗ್ರಾಮಮಂ ಪೋಲ್ತುದೋ || [8] || ಬರೆದುದೇ -
9. ತಾಂಬ್ರಶಾಸನಮದೇಯಮೆ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ ಪಂಪನ ಪೆತ್ತುದೆ ಪೇೞಿಮೆನ್ದು ನೀಮ್ಮರುಳೆ ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ ವೃಷಭಾಚಳೋನ್ನತ ಶಿಳಾತಳದೊಳ್ಬಬರೆದಕ್ಕರಂಗಳಂ || [9] || ||ಕನ್ದಂ|| ಜಿನಭವನಂಬುಲೆತ್ತಿಂಚುಟ ಜಿನಪೂಜಲ್ಸೇಸೇಯುಚುನ್ನಿ ಜಿನಮುನುಲಕು ನತ್ತಿನಯನ್ನದಾನಂಬೀವುಟಂ ಜಿನವಲ್ಲಭು ಬೋಲಂಗಲರೆ
10. ಜಿನಧರ್ಮ್ಮಪರುಲ್ || [10] || ದಿನಕರುಸರಿವೆಲ್ಗುದುಮನಿ ಜಿನವಲ್ಲಭುನೊಟ್ಟನೆತ್ತು ಜಿತಕವಿನನನುಂ ಮನುಜುಲ್ಗಲರೇ ಧಾತ್ರಿಂ ವಿನಿತಿಚ್ಚಿದುನನಿಯ ವೃತ್ತವಿಬುಧಕವೀನ್ದ್ರುಲ್ [|| 11 ||] ಒಕ್ಕೊಕ್ಕೊಗುಣಂ ಕಲ್ಗುದುರೊಕ್ಕೊಣ್ಡಿಗಾಕೊಕ್ಕಲಕ್ಕ ಲೇವೆವ್ವರಿಕಿಂ ಲೆಕ್ಕಿಂಪನೊಕ್ಕೊಲಕ್ಕಕು ಮಿಕ್ಕಿಲಿ ಗುಣಪಕ್ಷಪಾತಿ ಗುಣಮಣಿಗಣಂಬುಲ್ [|| 12 ||] ಎನ್ದು ಲೋಕಮೆಲ್ಲಂ ಪೊಗೞೆ ನೆಗೞ್ದ ಜಿನವಲ್ಲಭ ಸುಧರ್ಮ್ಮಸನ್ತತಿಯೊ
11. ಳ್ತೊಟ್ಟ ಗುಣಾವಳಿಯನಿ ವೃಷಭಗಿರಿಯ ಸಿದ್ಧಶಿಲೆಯೊಲೇಱೆಯಮ್ಮಂ ಟಂಕ್ಕೋತ್ಕೀರ್ಣ್ಣಮ್ಮಾಡಿದಂ


Monday 12 June 2017

ಇಲ್ಲದ ಸಲ್ಲದ ಭಾಷೆಗ ಕಲ್ಲಂ ನಿಱಿಸುವರನುಱದೆ ನಗುವ್ವೊಲಿರ್ಕ್ಕುಂ........

ಕ್ರಿ ಶ. 970ರ ಕೊಟ್ಟಿಗದೇವನ ರೋಣ ತಾಲೂಕಿನ ಸವಡಿಯ ಗ್ರಾಮ ಚಾವಡಿಯಲ್ಲಿದ್ದ ಶಾಸನದಲ್ಲಿ "ವೇದ ವೇದಾಂಗಮನೋದದೇ ಶಾಸ್ತ್ರಮನಾದಿ ಮಧ್ಯಾಂತಮರಿಯದೆ ನಾರಣಂಗಾದುದು ಕವಿತ ಸಹಜಮೇ ನಾಗನಾರ್ಯ್ಯನ ಶೀಘ್ರ ಲಿಖಿತಂ" ಎಂದು ವೇದಗಳನ್ನು ಶಾಸ್ತ್ರಾದಿಗಳನ್ನೂ ಅರಿಯದ ಮುಗ್ಧತೆಯನ್ನು ಉಲ್ಲೇಖಿಸಿಕೊಂಡಿದ್ದಾನೆ. ಆದರೂ ಸಹ ಸಹಜವಾದ ಒಂದು ಕವಿತೆಯ ರಚನೆಮಾಡಿರುವೆನೆಂದು ವಿನಮ್ರನಾಗಿ ಹೇಳಿಕೊಂಡಿದ್ದಾನೆ. ಹಾಗೆಯೇ ಸೂಡಿಯ ಒಂದನೆಯ ಸೋಮೇಶ್ವರನ 981 ರ ಶಾಸನದಲ್ಲಿ " ವಾಕ್ಯಂ ನ್ಯೂನಾಕ್ಷರಂ ಅಧಿಕಾಕ್ಷರಂ ವಾ ಸರ್ಬ್ಬಂ ಪ್ರ್ತಮಾಣಂ ಇತಿ" ಎಂದು , ಕೈತಪ್ಪಿನಿಂದಾಗು೮ವ ದೋಷಗಳೆಲ್ಲವೂ ಮನ್ನಿಸಿ ಅದನ್ನು ಕೂಡಿಸಿಕೊಂಡು ಓದಬೇಕೆಂದು ಹೇಳಿಕೊಂಡಿದ್ದಾನೆ. ಗದಗದ ಮುಳ್ಗುಂದದ ತ್ರೈಲೋಕ್ಯ ಮಲ್ಲ ದೇವ(ಒಂದನೇ ಸೋಮೇಶ್ವರನ 1062ನೇ ಇಸವಿಯ ಶಾಸನದಲ್ಲಿ "ಅನುಪಮತರಾಕ್ಷರಂ ಬುಧಜನಮಂ ಜೀಯೆನಿಸೆ ಸಕಳವಿದ್ಯಾ ನಿಳಯಂ ಮನುಮುನಿಚಾರಿತ್ರ ನೀ ಸಾಸನಮಂ ಮನ್ನೆಯರ ಬಸವಣ್ಣಯ್ಯಂ ಬರೆದಂ" ಎಂದು ತನ್ನ ಅಕ್ಷರದಿಂದ ಬುದ್ಧಿವಂತರ ಮನಸ್ಸನ್ನು ಗೆದ್ದು ಈ ಶಾಸನವನ್ನು ಮನು ವಿನ ಶ್ಲೋಕಗಳೊಂದಿಗೆ ಬರೆದೆ ಎಂದು ಬಸವಣ್ಣಯ್ಯನು ಹೇಳಿಕೊಂಡಿದ್ದಾನೆ. ಇದೇ ರಾಜನ ಗದಗದ ಕುರ್ತಕೋಟಿಯ ಶಾಸನದಲ್ಲಿ 1081ರ ಶಾಸನವಿದು. ಇದರಲ್ಲಿ "ಮರವೆಸೆದೊಪ್ಪುವಿಟ್ಟಿಗೆಯ ದನ್ತದ ಚಿತ್ರದ ಶಾಸ್ತ್ರಮಾಗಿರೆ ಬೆಸಗೆಯ್ವ ಕಲುಭರಿವ ಕಮ್ಮಱ ವಿನ್ನಣದೋಜೆಗೆಲ್ಲಿಯುಂ ಪರಿಕಿಸೆ ವಿಶ್ವಕರ್ಮ್ಮನಿನವಂ ಮಿಗಿಲಂಬುದಶೇಷಭೂತಳ" ಎಂದು ವಿಶ್ವಕರ್ಮನನ್ನೇ ಮೀರಿಸುವ ಶಿಲ್ಪಕಲಾ ಚತುರ ಎಂದು ಬಣ್ಣಿಸಿಕೊಂಡಿದ್ದಾನೆ. ಅದೇ ಶಾಸನದಲ್ಲಿ " ಪರಹಿತರಿನ್ನೂರ್ವ್ವರ ಪದಸರಸೀರುಹಾಮೋದ ಮಧುಕರಂ ಶಿವಭಕ್ತಂ ಕರವತಿಶಯದೆ ವಿಸ್ತರಮಾಗಿರೆ ಎಂದು ಶಾಸನ ಕವಿ ತನ್ನನ್ನು ಹೇಳಿಕೊಂಡಿದ್ದಾನೆ. ಹೀಗೇ ಶಾಸನ ರಚನ ಕಾರರು ಒಮ್ಮೊಮ್ಮೆ ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದರೆ ಕೆಲವೊಮ್ಮೆ ವಿಡಂಬನೆಗಳನ್ನು ಮಾಡಿದ್ದಾರೆ. ಅದಕ್ಕೆ ಉದಾಹರಣೆ ಎನ್ನುವಂತೆ
ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿರುವ ಸ್ತ್ರೀಲಿಂಗ ದೇವಾಲಯದಲ್ಲಿ ನ ಒಂದು ಶಾಸನದ 103 ನೇ ಸಾಲಿನಲ್ಲಿ " ಇಲ್ಲದ ಸಲ್ಲದ ಭಾಷೆಗ ಕಲ್ಲಂ ನಿಱಿಸುವರನುಱದೆ ನಗುವ್ವೊಲಿರ್ಕ್ಕುಂ ಪಲ್ಲವಿಸಿ ಕುವರ ಲಕ್ಷ್ಮನ ಕಲ್ಲ ಕವಲ್ತೆಸೆವ ಕಾಂತಿ ದಿಗ್ಭಿತ್ತಿಗಳೊಳ್" ಎಂದು ಶಾಸನಗಳಿಂದ ತಾನು ಮಾಡಿರುವ ದಾನ ಧರ್ಮಾದಿಗಳು ಶಾಶ್ವತವಾಗಿರುವವು ಎನ್ನುವ ವಿಡಂಬನೆಯು ಈ ಒಂದು ಶಾಸನದ ವಾಕ್ಯದಿಂದ ತಿಳಿದು ಬರುತ್ತದೆ.

Thursday 8 June 2017

ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್ - ನಾಕಿರಾಜ

ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್ - ನಾಕಿರಾಜ

ಧಾರವಾಡದ ಮುಗದ್ ನಲ್ಲಿರುವ ಈ ಶಾಸನ ತ್ರಿಭುವನ ಮಲ್ಲ ಆರನೇ ವಿಕ್ರಮಾದಿತ್ಯನದ್ದು ಇದರ ಕಾಲ ಕ್ರಿ. ಶ. 1125 ರ ಸಮಯದ್ದು. ಈ ಶಾಸನದ ಉದ್ದಕ್ಕೂ ನಾಕಿರಾಜ ಎನ್ನುವವನ ಅನೇಕ ಗುಣಗಳನ್ನು ಸಾರುತ್ತಾ, ಶಾಸನಗಳ ವಿಧ ಮತ್ತು ಧರ್ಮವನ್ನು ಸಾರಲಾಗಿದೆ. "ಬಿಡುವ, ಮರಳ್ಚುವಟ್ಟುವ ಮಗುಳ್ವಾ ಕಡಂಗುವ ರೂಪಿಡುವ ಜಗುಳ್ವ ಝಳ್ಪಿಸುವ ಎಂದು ಶಾಸನದ 27ನೇ ಸಾಲಿನಲ್ಲಿ ಹೇಳಲಾಗಿದೆ. ಮುಂದೆ 29 ನೇ ಸಾಲಿನಲ್ಲಿ "ಸುರಿಗೆವಿಡಿವವರ ದೇವಂ" ಎಂದು ದೈವತ್ವಕ್ಕೆ ಏರಿಸಲಾಗಿದೆ. ಪರಿವಾರಕ್ಕ ಪ್ರಜೆಗಂ ನಿರುತಂ ತಾಂ ದೆಯ್ಯಮಾಗಿ" ಎಂದು ಪ್ರಜಾನುರಾಗಿ ಎಂದು ೪೩ನೇ ಸಾಲಿನಲ್ಲಿ ಹೇಳಲಾಗಿದೆ. 53ನೇ ಸಾಲಿನಲ್ಲಿ "ಮುಗುಂದಮೆಂಬುಇದಯ ಶೈಳಸ್ಥಾನದೊಳ್ತೇಜಮಾಗಿರೆ ಚೆಲ್ವಾದುದು ನಾಕಿರಾಜ ವಿಭುವೆಂಬಾದಿತ್ಯ ನಿತ್ಯೋದಯಂ" ಎಂದು ಪ್ರಭಾತ ಸಮಯದ ಸೂರ್ಯ ಮೇಲೇರುತ್ತಾ ಪ್ರಭೆಯನ್ನು ಹೆಚ್ಚಿಸಿಕೊಳ್ಳುವಂತೆ ನಾಕಿರಾಜನೂ ಪ್ರಭಾನ್ವಿತನು ಎನ್ನಲಾಗಿದೆ. ಈ ಶಾಸನದ ಕೊನೆಯಲ್ಲಿ ಅಂದರೆ 108ನೇ ಸಾಲಿನಲ್ಲಿ "ನಾಗಾರ್ಜುನ ಪಂಡಿತರು ಪೇಳ್ದ ಕಬ್ಬಂ ಕೆಸರು ಕಲ್ಲಾದಿಯಾಗಿ ಕಲ್ಲೋಝರ ಕೆಲಸ| ಭರತೋಜನ ಕಂಡರಣೆ. ಎಂದು ನಾಗಾರ್ಜುನ ಎನ್ನುವ ವಿದ್ವಾಂಸ ಈ ಕೃತಿಯನ್ನು ಬರೆದದ್ದು ಅದನ್ನು ಕಲ್ಲು ಕೆಲಸವನ್ನು ಮಾಡುವ ಶಿಲ್ಪಿ ಭರತನು ಕೆತ್ತಿದ್ದಾನೆ ಎಂದು ಬರೆಯಲಾಗಿದೆ.

ಈ ಶಾಸನದ 58ರಿಂದ 60ನೇ ಸಾಲಿನಲ್ಲಿ ಬಂದಿರುವ ಶಾಸನ ಧರ್ಮ ಈ ರೀತಿ ಇದೆ : 
ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್
ಸಾಸದ ಸಾಸನಂ ಜಯದ ಸಾಸನ ವಾರ್ಪ್ಪಿನ ಸಾಸನಂ ಗುಣೋ
ದ್ಭಾಸನ ಸಾಸನಂ ಸಿರಿಯ ಸಾಸನ ವೊಳ್ಪಿನಸಾಸನಾಳಿಯಿಂ
ಲೇಸೆನೆ ನಾಕಿರಾಜ ವಿಭು ಸಾಸನ ಕೋಟಿಯನೆಯ್ದೆ ತಾಳ್ದಿದಮ್
ಒಳ್ಳೆಯತನವನ್ನು, ಜಯದ ವಿವರಣೆಯನ್ನು ಶೌರ್ಯಗುಣವನ್ನು, ಐಶ್ವರ್ಯಗಳ ವರ್ಣನೆ, ದಾನವನ್ನು ವಿವರಿಸುವ ಶಾಸನಗಳೆಂದು ವಿಂಗಡಿಸಿಕೊಳ್ಳಬಹುದು.

ಇವುಗಳಲ್ಲಿ ದಾನಶಾಸನಗಳನೇಕವು ತಾಮ್ರಪಟಗಳ ಸಾಲಿಗೆ ಸೇರುತ್ತವೆ. ಗೋಸಾಸದ ಶಾಸನವನ್ನು ಇಲ್ಲಿ ಸಾಸದ ಶಾಸನ ಎಂದಿದ್ದು, ಜಯದ ಶಾಸನ, ಗುಣವನ್ನು ಹೇಳುವ ಶಾಸನ. ಹೀಗೆ ಕನ್ನಡದ ಶಾಸನಗಳ ವಿಧಗಳನ್ನು ಹೇಳುತ್ತಾ ನಾಕಿರಾಜನು ಈ ಎಲ್ಲಾ ಗುಣಗಳನ್ನು ಹೊಂದಿರುವ ಶಾಸನಗಳನ್ನು ಬರೆಸಲು ಸಮರ್ಥ ಎನ್ನುವುದನ್ನು ಹೇಳಲಾಗಿದೆ. ಇಲ್ಲಿ ಹೇಳಿರುವ ಶಾಸನಗಳನ್ನೆ ಎರಡು ವಿಧವಾಗಿ ನೋಡಿದರೆ ಒಂದು ದಾನಗಳಿಗೆ ಮತ್ತು ಇನ್ನೊಂದು ವೀರ ಶಾಸನಗಳನ್ನಾಗಿಸಬಹುದು. ದಾನಗಳು ಕಲ್ಲು ಮತ್ತು ತಾಮ್ರಗಳಿದ್ದರೆ ವೀರ ಶಾಸನಗಳು ಕಲ್ಲಿನಲ್ಲಿಯೇ ಬರೆಯಲ್ಪಟ್ಟ ವೀರಗಲ್ಲುಗಲಾಗಿವೆ. ತ್ಯಾಗ ಮತ್ತು ಶೌರ್ಯವನ್ನು ಈ ಶಾನ ಪ್ರತಿಪಾದಿಸುತ್ತಾ ಹೋಗುತ್ತದೆ. 

Wednesday 7 June 2017

ಕಾಳಿದಾಸ ರಘುವಂಶ - ಮಂಗಲೇಶನ ಮಕುಟ ಶಾಸನ

ಮಂಗಲೇಶನು ಪುಲಿಕೇಶಿಯ ಚಿಕ್ಕಪ್ಪ, ಈತ ಕ್ರಿ ಶ ೬೦೨ರಲ್ಲಿ ಒಂದು ಸ್ತಂಭ ಶಾಸನವನ್ನು ಮಹಾಕೂಟದಲ್ಲಿ ಬರೆಸುತ್ತಾನೆ ಇಲ್ಲಿ ಮಂಗಲೇಶನನ್ನು ಬಹುವಾಗಿ ವೈಭವಿಸಿ ಬರೆಯಲಾಗಿದೆ. ಅದೆಷ್ಟು ಪ್ರಶಂಸಿಸಲಾಗಿದೆ ಅಂದರೆ ಕಾಳಿದಾಸನ ರಘುವಂಶ ಮಹಾಕಾವ್ಯದ ಪ್ರಥಮ ಸರ್ಗ್ಗದ ಆರನೇ ಶ್ಲೋಕದ ಮೊದಲಾರ್ಧವನ್ನು ಹಾಗೆಯೇ ಬರೆಯಲಾಗಿದೆ. ಈ ಶಾಸನ ಸಂಪೂರ್ಣ ಸಂಸ್ಕೃತದಲ್ಲಿದ್ದರೂ ಕೊನೆಯಲ್ಲಿ ದಾಟ ಆನ ಕುಟ್ಟಿದ ಎನ್ನುವ ಪದ ಬಳಕೆಯಾಗಿರುವುದು ದಾಟ ಎನ್ನುವವನು ಬರೆದಂತೆ ಕಂಡುಬರುತ್ತದೆ. ಕನ್ನಡ ಶಾಸನಗಳ ಇತಿಹಾಸದಲ್ಲಿ ಖ್ಯಾತಿವೆತ್ತ ಸಂಸ್ಕೃತ ಕವಿಗಳ ನಿದರ್ಶನಗಳು ಅಲ್ಲಲ್ಲಿ ಗೋಚರಿಸುತ್ತವೆ, ರವಿಕೀರ್ತಿಯು ಕಾಳಿದಾಸ ಭಾರವಿಯನ್ನು ಉಲ್ಲೇಖಿಸಿದ್ದಾದರೆ ಇಲ್ಲಿ ನೇರವಾಗಿ ಕಾಳಿದಾಸನ ಕಾವ್ಯದ ಸೊಬಗನ್ನು ತರಲಾಗಿದೆ. ಇಲ್ಲಿ ಇನ್ನೊಂದು ಸೋಜಿಗವನ್ನು ಗಮನಿಸಬಹುದು, ಮಹಾಕೂಟವು ಐಹೊಳೆಯಿಂದ ಹತ್ತಿರವಿದ್ದು ಮಂಗಲೇಶನ ಆಶ್ರಯದಲ್ಲಿ ರವಿಕೀರ್ತಿಯಷ್ಟೇ ಪ್ರಬಲ ಅಥವಾ ರವಿಕೀರ್ತಿಯೇ ತರುಣಾವಸ್ಥೆಯಲ್ಲಿದ್ದಾಗ ಈ ಶಾಸನದ ಬರೆದು ದಾಟನು ಖಂಡರಿಸಿರಲೂ ಬಹುದು. ಅಂತೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕವಿಗಳ ಸಮೂಹವೇ ಇದ್ದಿರಬಹುದು ಅನ್ನಿಸುತ್ತದೆ. ಇಲ್ಲಿ ಈ ಶಾಸನದಲ್ಲಿ ಮಹಾಕೂಟವನ್ನು ಮಕುಟೇಶ್ವರ ಎಂದು ಕರೆಯಲಾಗಿದ್ದು ಅದೇ ಮಕುಟ ಅಥವಾ ಮುಕುಟವೇ ಮಹಾಕೂಟ ಎಂದು ಹೆಸರು ಪಡೆದಿದೆ. ನನಗನ್ನಿಸುವುದು ಕವಿಯೊಬ್ಬ ತನ್ನ ತಾರುಣ್ಯದಲ್ಲಿ (ಕ್ರಿಶ ೬೦೨) ಈ ಶಾಸನ ಬರೆದು ತನಗೇ ಅರಿವಿಲ್ಲದಂತೆ ಕಾಳಿದಾಸನ ಕಾವ್ಯದ ತುಣುಕನ್ನು ಇಲ್ಲಿ ಸೇರಿಸಿ ಮುಂದೆ ಪ್ರೌಢನಾದಾಗ(ಪುಲಿಕೇಶಿಯ ಕಾಲಕ್ಕೆ ಕ್ರಿ ಶ ೬೩೨) ಆತ ಆತ್ಮವಿಶ್ವಾಸದಿಂದ ತಾನು ಕಾಳಿದಾಸ ಮತ್ತು ಭಾರವಿಗೆ ಸರಿಸಮನೆಂದು ಹೇಳಿಕೊಂಡಿರಬಹುದು. ಇಲ್ಲಿ ಈ ಶಾಸನದಲ್ಲಿ ಆತ ಸ್ವಲ್ಪ ಯಡವಿದ್ದು ಗಮನಿಸಿದರೆ ಹಾಗೆ ಅನ್ನಿಸುತ್ತದೆ " ಯಥಾ ಹುತಾಗ್ನಿನಾ" ಎಂದು ಬರೆದು ಆಮೇಲೆ ಆ ಸಾಲಿನ ಕೆಳಗೆ "ವಿಧಿ" ಎನ್ನುವ ಪದವನ್ನು ಮೊದಲ ಸಾಲಿಗಿಂತ ಚಿಕ್ಕದಾಗಿ ಸೇರಿಸಿದ್ದು ಕಂಡು ಬರುತ್ತದೆ. ಕದಂಬರ ಕಾಲದ ತಗರೆ ಶಾಸನದಲ್ಲೂ ಇದೇ ರೀತಿ ಶಾಸನದಸಾಲಿನ ಕೆಳಗಳೆ ಚಿಕ್ಕದಾಗಿ ಅಕ್ಷರಗಳನ್ನು ಪೇರಿಸಿರುವುದು ಕಾಣ ಸಿಗುತ್ತದೆ.

ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಂ |
ಯಥಾಪರಾ ದಂಡಾನಾಂ ಯಥಾ ಕಾಲ ಪ್ರಬೋಧಿನಾಂ ||

- ಇದು ಕಾಳಿದಾಸನ ರಘುವಂಶದಲ್ಲಿ ಒಂದನೇ ಸರ್ಗದ ೬ನೇ ಶ್ಲೋಕ. ಇದರ ಮೊದಲ ಸಾಲು ಮಂಗಲೇಶನ ಮಹಾಕೂಟ ಸ್ತಂಭ ಶಾಸನದ ಮೊದಲ ಮತ್ತು ಎರಡನೇ ಸಾಲಿನಲ್ಲಿ ಬರೆಯಲಾಗಿದೆ.

Monday 5 June 2017

ಸುರಚಾಪಂಬೋಲೆವಿದ್ಯುಲ್ಲತೆಗಳತೆಱವೋಲ್ಮಂಜುವೋಲ್ತೋಱಿಬೇಗಂ

ಇಂದ್ರನ ಬಿಲ್ಲಿನಂತೆ, ಮಿಂಚಿನಬಳ್ಳಿಗಳಂತೆ(ಕೋಲ್ಮಿಂಚಿನಂತೆ),

1. ಸುರಚಾಪಂಬೋಲೆವಿದ್ಯುಲ್ಲತೆಗಳತೆಱವೋಲ್ಮಂಜುವೋಲ್ತೋಱಿಬೇಗಂ
2. ಪಿರಿಗುಂಶ್ರೀರೂಪಲೀಲಾಧನವಿಭವಮಹಾರಾಶಿಗಳ್ನಿಲ್ಲವಾಗ್ರ್ಗಂ
3. ಪರಮಾರ್ತ್ಥಂಮೆಚ್ಚೆನಾನೀಧರಣಿಯುಳಿರವಾನೆನ್ದುಸನ್ಯಾಸನಂಗೆ
4. ಯ್ದುರುಸತ್ವನ್ನನ್ದಿಸೇನಪ್ರವರಮುನಿವರನ್ದೇವಲೋಕಕ್ಕೆ ಸನ್ದಾನ್

ಇಂದ್ರನ ಬಿಲ್ಲಿನಂತೆ, ಮಿಂಚಿನಬಳ್ಳಿಗಳಂತೆ(ಕೋಲ್ಮಿಂಚಿನಂತೆ), ಮಂಜಿನಂತೆ ತೋರಿ ಬೇಗನೇ ಕರಗಿ ಕಣ್ಮರೆಯಾಗುವ ಸಂಪತ್ತು, ಪಡೆದುಬಂದರೂಪ, ಲೀಲೆಗಳು, ಧನ ಕನಕಗಳು, ಈ ಎಲ್ಲಾ ವೈಭವಗಳು ಯಾರಿಗೂ ಶಾಶ್ವತವಲ್ಲ. ಪರಮಾರ್ಥವೇ ಶಾಶ್ವತವೆಂದು ಅದನ್ನು ಇಷ್ಟಪಟ್ಟು ನಾನು ಈ ಭೂಮಿಯಲ್ಲಿ ಇರುವುದು ಸರಿಯಲ್ಲ. ಎಂದು ಸಂನ್ಯಾಸನವಿಧಿಯನ್ನು ಆಚರಿಸಿ(ಜೈನ ಸಂಪ್ರದಾಯದಂತೆ) ನಂದಿಸೇನಪ್ರವರ ಎನ್ನುವ ಮುನಿಯು ಮರಣವನ್ನು ಸ್ವೀಕರಿಸಿದನು. ಎನ್ನುವುದು ಈ ಶಾಸನದ ಆಶಯ. ನಶ್ವರವಾದ ಜಗತ್ತಿನ ಬಾಹ್ಯ ಬಂಧಗಳನ್ನು ತೊಡೆದು ತಾನು ಆಂತರ್ಯದಿಂದ ತಾನು ಮುಕ್ತಿಯನ್ನು ಕಾಣುವುದನ್ನು ವಿವರಿಸಲಾಗಿದೆ. ಇದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ ಬಸದಿಯೊಂದರ ಈಶಾನ್ಯದಲ್ಲಿ ಕಾಣ ಸಿಗುವ ಶಾಸನ. ಇದರ ಕಾಲಮಾನ ಸುಮಾರು ೭ನೇ ಶತಮಾನ.