Search This Blog

Tuesday 31 October 2017

ಪ್ರಜ್ಞೋತ್ತರಂ ಭೂಷಣಂ ಕದಂಬರ ಮಯೂರ
ಮಯೂರವರ್ಮ , ಆತನ ಮಗ ಕಂಗವರ್ಮ ಕಂಗವರ್ಮನ ತರುವಾಯ ಬಂದವನು ಬಗೀತಾರ್ಹ ಆಮೇಲೆ ರಘು ಆ ರಘುವಿನ ನಂತರ ಬಂದವನೇ ಕಾಕುಸ್ಥವರ್ಮ. ಕದಂಬ ರಾಜರುಗಳಲ್ಲಿ ಈ ಕಾಕುಸ್ಥವರ್ಮ ಪ್ರಸಿದ್ಧಿಯನ್ನು ಪಡೆದಿದ್ದ.
ಭ್ರಾತಾಸ್ಯ ಚಾರುವಪುರಬ್ದ ಗಭೀರನಾದೋ ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲಶ್ಚ |
ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ಕಾಕುಸ್ಥ ಇತ್ಯವನಿಮಂಡಲಘುಷ್ಟಕೀರ್ತಿಃ ||
ಅತ್ಯಂತ ಬುದ್ಧಿವಂತನಾದ ಕಾಕುಸ್ಥವರ್ಮ ಅಷ್ಟೇ ಬಲಶಾಲಿಯಾಗಿದ್ದ. ಹಾಗೆ ನೋಡಿದರೆ ಕದಂಬ ರಾಜರುಗಳ ಸಂಸ್ಕಾರವೇ ಹಾಗಿತ್ತೋ ಏನೋ ಪರಾಕ್ರಮದಲ್ಲಿಯೂ ಸಹ ಮುಂದಿರುತ್ತಿದ್ದ ಕದಂಬರಾಜರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಅಷ್ಟೇ ಮುಂದಿದ್ದರು. ಮೋಕ್ಷ ತ್ರಿವರ್ಗ ಪಟುರನ್ವಯ ವತ್ಸಲರಾಗಿದ್ದರು. ಅದೇ ಕದಂಬ ಕಾಕುಸ್ಥವರ್ಮನು - ಭಾಗೀರಥಿರ್ನರಪತಿರ್ಮೃಗರಾಜ ಲೀಲಃ ನಾಗಿದ್ದ, ಹೀಗೇ ಈ ಭೂಮಂಡಲದಲ್ಲಿ ಕೀರ್ತಿಯನ್ನು ಹೊಂದಿದ್ದ.
ಜ್ಯಾಯೋಭಿಸ್ಸಹ ವಿಗ್ರಹೋರ್ಥಿಷು ದಯಾ ಸಮ್ಯಕ್ ಪ್ರಜಾಪಾಲನಂ ದೀನಾಭ್ಯುದ್ಧರಣಂ ಪ್ರಧಾನವಸುಭಿರ್ಮುಖ್ಯ ದ್ವಿಜಾಭ್ಯರ್ಹಣಮ್ |
ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ ತಂಭೂಪಾಷ್ಖಲು ಮೇನಿರೇ ಸುರಸಖಂ ಕಾಕುಸ್ಥಮತ್ರಾಗತಮ್ ||
ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಪ್ರಜೆಗಳ ಸುಖವನ್ನೇ ಅಭಿಲಾಶಿಸುತ್ತಿದ್ದ ಮತ್ತು ರಾಜಧರ್ಮದ ಪ್ರತಿಪಾಲನೆಗೆ ಕಟಿಬದ್ಧನಾಗಿದ್ದ ಕಾಕುಸ್ಥನು ದೀನ ಜನರ ಉದ್ಧಾರಕ್ಕಾಗಿ ಈ ಭೂಮಂಡಲದ ರಕ್ಷಣೆಗಾಗಿ ಬ್ರಾಹ್ಮಣ್ಯವನ್ನು ಎತ್ತಿ ಹಿಡಿದಿದ್ದ. "ಯಸೈತತ್ಕುಲಭೂಷಣಸ್ಯ ನೃಪತೇಃ ಪ್ರಜ್ಞೋತ್ತರಂ ಭೂಷಣಂ" ಎನ್ನುವ ಮಾತು ಈ ಕಾಕುಸ್ಥನಿಗೆ ಅನ್ವರ್ಥವಾಗಿತ್ತು.
ಈ ಶ್ಲೋಕದ ಅಂದರೆ ಮೊದಲ ಶ್ಲೋಕ 10ನೇ ಸಾಲಿನ ಪೂರ್ವಾರ್ಧ ವಸಂತ ತಿಲಕಾ ದಲ್ಲಿ ಬರೆಯಲಾಗಿದ್ದು ಮುಂದಿನ ಹತ್ತನೇ ಸಾಲಿನ ಕೊನೆಯ ಅರ್ಧ ಮತ್ತು 11ನೇ ಸಾಲಿನ ಪೂರ್ವಾರ್ಧವು ಶಾರ್ದೂಲ ವಿಕ್ರೀಡಿತಾ ದಲ್ಲಿದೆ. (27ನೇ ಶ್ಲೋಕವು ವಸಂತ ತಿಲಕ ಮತ್ತು 28 ಶಾರ್ದೂಲ ವಿಕ್ರೀಡಿತದಲ್ಲಿದೆ)



ವಿವಿಧ ಕಲಾ ಕುಶಲರ್ಪ್ರಜಾ ಪ್ರಿಯಶ್ಚ - ಕದಂಬ ರಾಜರುಗಳು


ಮಯೂರವರ್ಮನ ನಂತರ ಬಂದ ಕದಂಬ ರಾಜರುಗಳಲ್ಲಿ ಕಂಗವರ್ಮ ಈತನು ಮಯೂರನ ಮಗ, ಈತನ ನಂತರ ಬಂದವರಲ್ಲಿ ಸಂಪದ್ಭರಿತವಾದ ಇಡೀ ಭೂಮಂಡಲವನ್ನೇ ಆಳಲು ಸಮರ್ಥನೆನ್ನಿಸಿದ "ರಘು" ಎನ್ನುವ ರಾಜ ಪ್ರಮುಖನು.
ಅಥ ನೃಪತಿ ಮಹಿತಸ್ಯ ತಸ್ಯ ಪುತ್ರಃ ಪೃಥಿತ ಯಶಾ ರಘು ಪಾರ್ಥಿವ ಪೃಥಿವೀ ಶ್ರೀ |
ಪೃಥುರಿವ ಪೃಥಿವೀಂ ಪ್ರಸಹ್ಯ ಯೋsರೀನ್ ಅಕೃತ ಪರಾಕ್ರಮತ ಸ್ಸ್ವವಂಶ ಭೋಜ್ಯಾಮ್ ||
ಸೂರ್ಯವಂಶದಲ್ಲಿ ಅನರಣ್ಯ ಎನ್ನುವ ಒಬ್ಬ ದೊರೆ ಇದ್ದ. ಆತ ಪ್ರಜಾ ಪೀಡಕನಾಗಿ ಸ್ವಾರ್ಥಿಯಾಗಿ ಅಹಂಕಾರದಿಂದ ಮೆರೆಯುತ್ತಿದ್ದ ಆತನ ಕ್ರೂರತೆ ಎಷ್ಟಿಂತ್ತೆಂದರೆ ಇಡೀ ಭೂಮಂಡಲದ ಸಸ್ಯವರ್ಗಗಳು ಮತ್ತು ಪ್ರಾಣಿಗಳು ತಮ್ಮ ಜೀವ ಕಳೆದುಕೊಂಡಿದ್ದವು. ಇಂತಹ ಸಮಯದಲ್ಲಿ ಜನರೆಲ್ಲಾ ಸೇರಿ ಆತನನ್ನು ಕಲ್ಲಿನಿಂದ ಹೊಡೆದು ಕೊಲ್ಲುತ್ತಾರೆ. ಆಮೇಲೆ ಅವನ ಮೂಳೆಯನ್ನು ಕಡೆದಾಗ ಹುಟ್ಟುವ ಮಗುವೇ ಪೃಥು ಈ ಪೃಥುವು ಹುಟ್ಟಿದಾಕ್ಷಣ ಇಡೀ ಭೂಮಂಡಲದಲ್ಲಿ ಮಳೆಯಾಗಿ ಹಸಿರು ಕಂಗೊಳಿಸಿ ಜನರೆಲ್ಲಾ ನಿಟ್ಟುಸಿರು ಬಿಡುತ್ತಾರೆ. ಈ ಪೃಥುವಿನಿಂದ ಪುನಃ ಈ ಭೂಮಿತನ್ನ ಜೀವಕಳೆ ಪಡೆದದ್ದಕ್ಕಾಗಿ ಈ ಭೂಮಿಗೆ ಪೃಥಿವೀ ಎನ್ನುವ ಹೆಸರು ಬರುತ್ತದೆ. ಎಂದು ಓದಿದ ನೆನಪು. ಇಲ್ಲಿ ಶಾಸನ ಕವಿ ಕದಂಬ ರಾಜರಿಗೆ ಈ ಪೃಥುವಿನಂತೆ ಈ ಭೂಮಂಡಲವನ್ನು ಪುನಃ ಸಂಪದ್ಭರಿತವನ್ನಾಗಿ ಮಾಡಿದರು ಎನ್ನುವ ರೀತಿಯಲ್ಲಿ ಸಾಹಸ ಶೌರ್ಯಗಳನ್ನು ಹೇಳುತ್ತಾನೆ.
ಪ್ರಥಿತ ಭಯ ಸಮರೇಶ್ವರಾತಿ ಶಸ್ತ್ರೋಲ್ಲಿಖಿತ ಮುಖೋsಭಿಮುಖದ್ವಿಷಾಂ ಪ್ರಹರ್ತ್ತಾ |
ಶ್ರುತಿಪಥನಿಪುಣಷ್ಕವಿಃ ಪ್ರದಾತಾ ವಿವಿಧ ಕಲಾ ಕುಶಲರ್ಪ್ರಜಾ ಪ್ರಿಯಶ್ಚ ||
ಮುಖಕ್ಕೆ ಮುಖ ಕೊಟ್ಟು ಯುದ್ಧ ಮಾಡುವ ಸಮರ್ಥರು ಈ ಕದಂಬ ಕುಲದ ರಾಜರುಗಳು, ಸ್ಮೃತಿ ಮತ್ತು ಶ್ರುತಿಗಳಲ್ಲಿ ನೈಪುಣ್ಯತೆ ಹೊಂದಿದ ಶಸ್ತ್ರ ಮತ್ತು ಶಾಸ್ತ್ರಗಳಿಗೆ ಸಮಾನವಾದ ಗೌರವಗಳನ್ನು ಕೊಡತಕ್ಕವರು ಈ ಕದಂಬ ರಾಜ್ಯದಲ್ಲಿದ್ದರು ಮತ್ತು ವಿವಿಧ ಕಲೆಗಳಲ್ಲಿ ನಿಪುಣರಾದ ಕವಿಗಳು ಕಲಾವಿದರ ಒಂದು ವರ್ಗವೇ ಈ ರಾಜ್ಯದಲ್ಲಿದ್ದು ಈ ರಾಜರುಗಳೆಲ್ಲಾ ಪ್ರಜೆಗಳ ಅತ್ಯಂತ ಪ್ರೀತಿ ಪಾತ್ರರಾಗಿದ್ದರು ಎಂದು ಈ ಶಾಸನದ ಸಾಲುಗಳು ಹೇಳುತ್ತವೆ.
ಇಲ್ಲಿನ ತನಕ ಈ ಶಾಸನವು ಅಂದರೆ ಮೊದಲ ಸಾಲಿನಿಂದ 8ನೇ ಸಾಲು ಅಂದರೆ ಅಲ್ಲಿಗೆ 24 ಶ್ಲೋಕಗಳನ್ನು ಮಿಶ್ರಗೀತಿಕಾ ದಲ್ಲಿ ಬರೆಯಲಾಗಿದ್ದು ಮುಂದೆ ಈ ಸಾಲು ಅಂದರೆ 25 ಮತ್ತು 26ನೇ ಶ್ಲೋಕವನ್ನು ಪುಷ್ಪಿತಾಗ್ರದಲ್ಲಿ ಬರೆಯಲಾಗಿದೆ.


Thursday 26 October 2017

ನೊಸಲೊಳುರಿಗಣ್ಣವಂದದಿ - ಮುಕ್ಕಣ್ಣ ಮಯೂರ - ೪

ನೊಸಲೊಳುರಿಗಣ್ಣವಂದದಿ ಮಿಸೆಮರೆಯನಲ್ಲಿ ಪಟ್ಟಮಂ ಕಟ್ಟಿದ ಜಾನು
ಸಮುದ್ದೇಶದೊಳಂತದನೆಸದಿರೆ ಕಟ್ಟಿದರೆನದಲ್ಕ ದಿನ್ನೇವೊಳ್ಗೆಂ ಎನ್ನುವುದು ಮಯೂರನಿಗೆ ಮೂರು ಕಣ್ಣುಗಳಿದ್ದವಂತೆ ಆದುದರಿಂದ ಈತನನ್ನು ತ್ರಿನೇತ್ರ ಕದಂಬ, ಲಲಾಟಲೋಚನ ಮುಂತಾಗಿ ಕರೆಯಲಾಗುತ್ತದೆ. ಹಣೆಯಲ್ಲಿ ಮೂರನೇ ಕಣ್ಣಿದ್ದುದರಿಂದ ಈತನಿಗೆ ಪಟ್ಟಾಭಿಷೇಕದ ಸಮಯದಲ್ಲಿ ಕೀರೀಟ ಕಟ್ಟಲು ಸಾಧ್ಯವಾಗದೇ ಕೊನೆಗೆ ಮಂಡಿಗೆ ಕಟ್ಟಿದರು ಎಂದು ಹೇಳಲಾಗುತ್ತದೆ. ಹೌದು ಮಯೂರನ ಕುರಿತಾಗಿ ಸಿಗುವ ಅತ್ಯದ್ಭುತ ದಾಖಲೆಗಳಲ್ಲಿ ಮಯೂರನ ಕುರಿತಾಗಿ ಅನೇಕ ದಂತ ಕಥೆಗಳು ಉಪಲಬ್ದವಾಗುತ್ತವೆ. ಕಲವಂತೂ ಉತ್ಪ್ರೇಕ್ಷೆಯಿಂದ ಕೂಡಿದೆಯೇನೋ ಅನ್ನುವಷ್ಟು ಹೇಳಲ್ಪಟ್ಟಿದೆ. ಪರಶಿವನನ್ನು ಕೈಲಾಸದಲ್ಲಿ ನಂದ ರಾಜನು ಕದಂಬ ಹೂವುಗಳಿಂದ ಅರ್ಚಿಸಲು ಶಿವನ ಸಂಪ್ರೀತಿಯ ವರದಿಂದ ಹುಟ್ಟಿದವನೇ ಮಯೂರ ಎನ್ನುವುದಾಗಿ ಹೇಳಲಾಗುತ್ತದೆ. ಕಾವೇರಿ ಪುರಾಣ ಎನ್ನುವ ಪುರಾಣದಲ್ಲಿ ಮಯೂರನ ಕುರಿತಾಗಿ ಇನ್ನೊಂದು ಕಥೆ ಇದೆ. ಚಂದ್ರಾಂಗದ ಎನ್ನುವ ಅರಸು ತನಗೆ ಉಂಟಾದ ಸರ್ಪದಮನ ಎನ್ನುವ ರೋಗದ ಚಿಕಿತ್ಸೆಗಾಗಿ ವಲ್ಲಭೀಪುರಕ್ಕೆ ಬರುತ್ತಾನೆ . ಆಗ ಅಲ್ಲಿನ ಚತ್ರ ಒಂದರಲ್ಲಿ ಉಳಿದುಕೊಳ್ಲಬೇಕಾಗಿ ಬಂದಾಗ ಅಲ್ಲಿನ ಸೇವಕಿ ಒಬ್ಬಳು ಅವನ ಕಾಯಿಲೆಗೆ ಚಿಕಿತ್ಸೆಮಾಡಿ ಅದರಿಂದ ಗುಣಮುಖ ಹೊಂದಿದ ಚಂದ್ರಾಂಗದನು ಆಕೆಯನ್ನು ಮದುವೆಯಾಗುತ್ತಾನೆ. ಚಂದ್ರಾಗದನು ಗರ್ಭಿಣಿಯಾದ ಹಿರಿಯ ಮಡದಿಯನ್ನು ತ್ಯಜಿಸುತ್ತಾನೆ. ಆ ಪರಿತ್ಯಕ್ತಳ ಮಗನೇ ಈ ಮಯೂರ ಎನ್ನುವುದಾಗಿ ಬರುತ್ತದೆ. ಹೀಗೇ ಮಯೂರನ ಕುರಿತಾಗಿ ಅನೇಕ ಕಥೆಗಳು ಕೇಳಿಬರುತ್ತವೆ. ಅದೇನೇ ಇರಲಿ ಮಯೂರ ವಿದ್ವದ್ರಾಜನಂತೂ ಹೌದು.
ವಿಬುಧ ಸಂಘಮೌಲಿ ಸಮೃಷ್ಟ ಚರಣಾರವಿಂದಷ್ಷಡಾನನಃ |
ಯಮಭಿಷಿಕ್ತವಾನನುಧ್ಯಾಯ ಸೇನಾಪತಿಂ ಮಾತೃಭಿಸ್ಸಹ ||
ಕಾಂಚಿಯ ಪಲ್ಲವರನ್ನು ಉಪಾಯದಿಂದ ಗೆದ್ದು ತನ್ನ ಅಪೇಕ್ಷೆಯನ್ನು ತನ್ನ ಸೇಡನ್ನು ತೀರಿಸಿಕೊಂಡ ಮಯೂರ ವಿದ್ಯಾರ್ಜನೆಯ ಕೇಂದ್ರವನ್ನಾಗಿ ವಿಒಬುಧ ಜನರ ಒಂದು ದೊಡ್ಡ ಪಡೆಯನ್ನೇ ನಿರ್ಮಿಸಿಕೊಂಡಿದ್ದು ತನ್ನ ಪಟ್ಟಭಿಷೇಕವನ್ನು ತನ್ನ ತಾಯಿ ಮತ್ತು ಸೇನಾಪತಿಯ ನೇತೃತ್ವದಲ್ಲಿ ನೆರವೇರಿಸಿಕೊಳ್ಳುತ್ತಾನೆ. ಆದರೆ ಇನ್ನೊಂದು ಮೂಲದಂತೆ ಕದಂಬ ಮಯೂರನ ಸಾಮರ್ಥ್ಯಕ್ಕೆ ಮನಸೋತ ಪಲ್ಲವ ಶಿವ ಸ್ಕಂದವರ್ಮ ಪಶ್ಚಿಮ ಸಮುದ್ರದಿಂದ ಮಲಪ್ರಭಾ ನದಿಯ ವರೆಗಿನ ಭೂಬಾಗವನ್ನು ಮಯೂರನಿಗೆ ಬಿಟ್ಟುಕೊಟ್ಟು ಪಟ್ಟಾಭಿಷೇಕವನ್ನು ಮಾಡಿದ ಎನ್ನುವುದಾಗಿ ತಿಳಿಯುತ್ತದೆ.
ಇವನ ಮಗ ಕಂಗವರ್ಮ ಈತನೂ ಸಹ ಅತ್ಯಂತ ಚಾಣಾಕ್ಷನಾಗಿದ್ದನೆಂದು ತಿಳಿಯುತ್ತದೆ. ಆದರೆ ಮಯೂರನಷ್ಟು ವಿದ್ವತ್ ಪಡೆದಂತೆ ಕಾಣಿಸುತ್ತಿಲ್ಲ ಆದುದರಿಂದಲೇ ಕದಂಬ ರಾಜರುಗಳಲ್ಲಿ ಅಂತಹ ಹೆಸರು ಈತ ಪಡೆಯಲಿಲ್ಲ.
ತಸ್ಯಪುತ್ರಷ್ಕಂಗವರ್ಮೋಗ್ರ ಸಮರೋದ್ಧುರ ಪ್ರಾಂಶು ಚೇಷ್ಟಿತಃ |
ಪ್ರಣತ ಸರ್ವ ಮಂಡಲೋತ್ಕೃಷ್ಟ ಸಿತ ಚಾಮರೋದ್ಧೂತ ಶೇಖರಃ ||
ತತ್ಸುತಷ್ಕದಂಬ ಭೂಮಿವಧೂರುಚಿತೈಕನಾಥೋ ಭಗೀರಥಃ |
ಸಗರಮುಖ್ಯ ಸ್ವಯಂ ಕದಮ್ಬ ಕುಲ ಪ್ರಚ್ಚನ್ನ ಜನ್ಮಾ ಜನಾಧಿಪಃ ||


Tuesday 24 October 2017

ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ - ಭಾಸ

ಕಾರಣಂತು ಕವಿತ್ವಸ್ಯ ನ ಸಂಪನ್ನ ಕುಲೀತಾ |
ಧಾವಕೋಪಿ ಹಿ ಯದ್ಭಾಸಃ ಕವೀನಾಮಗ್ರಿಮೋಭವತ್ ||
ಕವಿ ರಾಜಶೇಖರನು ಭಾಸ ಕವಿಯನ್ನು ಕುರಿತಾಗಿ ಹೇಳುವುದು ಹೀಗೆ. ಧಾವಕನಾದ ಭಾಸ ಕವಿಗಳಲ್ಲಿಯೇ ಮೊದಲಿಗನು ಎನ್ನುತ್ತಾನೆ. ಅಂದರೆ ಭಾಸನನ್ನು ಅಗಸರ ಜಾತಿಯವನು ಎನ್ನುವುದನ್ನು ಅತ್ಯಂತ ಸೂಚ್ಯವಾಗಿ ನಿರ್ದೇಶಿಸುತ್ತಾನೆ. ರತ್ನಾವಳೀ ನಾಗಾನಂದ ಪ್ರಿಯದರ್ಶಿಕಾ ಎನ್ನುವ ನಾಟಕವನ್ನು ಬರೆದ ಎನ್ನುವುದಾಗಿ ಹೇಳುತ್ತಾನೆ.
ಸೋಗ್ನಿರಪಿ ಭಾಸಮುನೇಃ ಕಾವ್ಯಂ ವಿಷ್ಣು ಧರ್ಮಾನ್ ಮುಖಾತ್ ತ್ಯಕ್ತವಾನ್ | ನಾದ ಹದಿತ್ಯರ್ಥಃ - ಎಂದು ಹೇಳಿ ಮುನಿ ಶಬ್ದವನ್ನು ಪ್ರಯೋಗಿಸಿರುವುದರಿಂದ ಇವನು ಮಹಾಕವಿಯೆಂದೂ ಮುನಿ ಎನ್ನುವ ಶಬ್ದ ಪ್ರಯೋಗಗೊಂಡಿರುವುದರಿಂದ ಈತ ಬ್ರಾಹ್ಮಣನೆಂದೂ ತಿಳಿಯಲ್ಪಡುತ್ತದೆ ಮತ್ತು ಈತನ ಜನ್ಮ ಸ್ಥಳ ಮತ್ತು ಈತನ ತಂದೆ ತಾಯಿಗಳು ಯಾರೆನ್ನುವುದು ತಿಳಿದು ಬರುತ್ತಿಲ್ಲ ಎಂದು ಲೋಲ ರಾಜನ ಮೊಮ್ಮಗನೂ ನೋನರಾಜನ ಮಗ ಜೋನರಾಜನು ಹೇಳುತ್ತಾನೆ.
ಭಾಸನು ಜಾತಿಯಲ್ಲಿ ಅಗಸ ಎಂದು ಒಂದು ಕಥೆ ಇದೆ.
ಒಮ್ಮೆ ವಿಕ್ರಮಾದಿತ್ಯನು ಬೇಟೆಗೆ ಹೋಗಿದ್ದನು, ಬೇಟೆ ಮುಗಿಸಿಕೊಂಡು ಹಿಂತಿರುಗಿ ಬರುತ್ತಿರುವಾಗ ಬಟ್ಟೆಗಳನ್ನೆಲ್ಲಾ ಹರಡಿ ಏಕಾಗ್ರತೆಯಿಂದ ಬರೆಯುತ್ತಿರುವಾಗ ರಾಜ ಅವನ ಎದುರಿಗೆ ಬಂದದ್ದನ್ನು ಸಹ ಗಮನಿಸದೇ ಬರೆಯುತ್ತಿದ್ದ. ರಾಜ ಅರಮನೆಗೆ ತೆರಳಿ ಈ ಅಗಸನನ್ನು ಅರಮನೆಗೆ ಕರೆಸಿಕೊಂಡು ನೀನು ಏನು ಬರೆಯುತ್ತಿದ್ದೆ ತೋರಿಸು ಎಂದಾಗ ಅಗಸನು ಅದನ್ನು ತೋರಿಸಿದಾಗ ಅದು ನಾಗಾನಂದ ಎನ್ನುವ ನಾಟಕವಾಗಿತ್ತು. ಅದನ್ನು ಓದಿದ ರಾಜ ತುಂಬಾ ಸಂತೋಷಗೊಂಡು ಭಾಸನನ್ನು ಅಂದೇ ಅಲ್ಲಿಯೇ ಆಸ್ಥಾನ ಪಂಡಿತನನ್ನಾಗಿ ಸ್ವೀಕರಿಸಿದನು. ಇದಕ್ಕೆ ಪ್ರತಿಯಾಗಿ ಭಾಸನು ರತ್ನಾವಳಿ, ಪ್ರಿಯದರ್ಶಿಕಾ, ನಾಗಾನಂದ ಗಳನ್ನು ರಾಜನ ಹೆಸರಿನಲ್ಲಿಯೇ ಅಂಕಿತ ಮಾಡಿದ ಎಂದು ತಿಳಿದು ಬರುತ್ತದೆ. ಆಸ್ಥಾನದ ಇತರ ಕವಿಗಳು ಇವನ ಅಭಿವೃದ್ಧಿಯನ್ನು ಕಂಡು ಇವನಿಗೆ ಭಾಸಕವಿ ಎಂದು ಹೇಳಲು ಇಷ್ಟಪಡದೇ ಭಾಸನು ಧಾವಕ ಅಂದು (ಅಗಸರವನು) ಎಂದು ಹೇಳಿದ್ದರಿಂದ ಮುಂದೆ ಭಾಸ ಶಬ್ದಕ್ಕೆ ಬದಲಾಗಿ ಧಾವಕ ಶಬ್ದವೇ ಬಂತು ಎಂದು "ಭಾಸ ಭಾಸಕ ಧಾವಕ" ಈ ಮೂವರೂ ಒಬ್ಬನೇ ಎನ್ನುವ ಈ ಕಥೆಯು ಪ್ರಚಲಿತವಾಗುತ್ತದೆ.
ಭಾಸ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಪ್ರಾಕೃತ ಹೆಚ್ಚು ಪ್ರಚಲಿತ ಕಾಲದಲ್ಲಿ ಸಂಸ್ಕೃತ ಸಾಹಿತ್ಯವನ್ನು ತನ್ನ ನಾಟಕಗಳಿಂದ ಶ್ರೀಮಂತಗೊಳಿಸಿ, ಕಾಳಿದಾಸ, ಬಾಣ ಮುಂತಾದ ಮಹಾಕವಿಗಳಿಂದಲೇ ಗೌರವ ಗಳಿಸಿದ.
ಭಾಸನ ಕಾಲದೇಶ ಕೃತಿಗಳ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕಾಲದ ಚರ್ಚೆಯಂತೂ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ.4ನೆಯ ಶತಮಾನದ ತನಕ ಚಾಚಿಕೊಂಡಿದೆ. ಈತ ವ್ಯಾಸ ವಾಲ್ಮೀಕಿಗಳಿಗಿಂತ ಈಚಿನವನೆಂಬುದರಲ್ಲೂ ಕಾಳಿದಾಸ ಬಾಣರಿಗಿಂತ ಹಿಂದಿನವನೆಂಬುದರಲ್ಲೂ ಸಂದೇಹವಿಲ್ಲ. ಆದರೆ ವ್ಯಾಸ, ವಾಲ್ಮೀಕಿ, ಕಾಳಿದಾಸ ಇವರಲ್ಲಿ ಯಾರೊಬ್ಬರ ಕಾಲವೂ ಖಚಿತವಾಗಿ ತಿಳಿದಿಲ್ಲ. ಬಾಣನ ಕಾಲ ಮಾತ್ರ ಕ್ರಿ.ಶ. 6ನೆಯ ಶತಮಾನವೆಂಬುದರಲ್ಲಿ ವಿವಾದವಿಲ್ಲವಾದ್ದರಿಂದ ಭಾಸ ಅದಕ್ಕೆ ಹಿಂದಿನವನೆಂಬುದು ಸ್ಪಷ್ಟ. ಕಾಳಿದಾಸ ಕ್ರಿ.ಪೂ. 1ನೆಯ ಶತಮಾನದವನೆಂದು ಒಪ್ಪುವುದಾದರೆ ಭಾಸ ಕ್ರಿ.ಪೂ. 3-4ನೆಯ ಶತಮಾನದವನಾಗಿರಬೇಕು. ಕೀತ್ ಅವರ ಅಭಿಪ್ರಾಯದಲ್ಲಿ ಕಾಳಿದಾಸ ಕ್ರಿ.ಶ. 4ನೆಯ ಶತಮಾನದವನು; ಭಾಸ ಕ್ರಿ.ಶ. 3ನೆಯ ಶತಮಾನದವ. ಆದರೆ ಕೀತ್ ರವರ ಈ ಅಭಿಪ್ರಾಯವನ್ನು ಓಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾಸ ಉತ್ತರ ಭಾರತದವನೇ, ದಕ್ಷಿಣ ಭಾರತದವನೇ ಎಂಬುದರಲ್ಲೂ ಸಂದೇಹವಿದೆ. ಇವನು ತನ್ನ ನಾಟಕಗಳಲ್ಲಿ ಪ್ರಯೋಗಿಸಿರುವ ಸಂಬಂಧ ಮುಂತಾದ ಪದಗಳ ಮತ್ತು ವ್ಯವಹಾರಗಳ ಕಾರಣದಿಂದಲೂ ಇವನ ನಾಟಕಗಳು ಮೊದಮೊದಲು ಕೇರಳದಲ್ಲಿ ದೊರೆತುದರಿಂದಲೂ ಇವನು ಕೇರಳ ದೇಶದವನೆಂದೇ ವಾದಿಸುವವರಿದ್ದಾರೆ. ಇವನ ನಾಟಕಗಳಲ್ಲಿ ಬರುವ ನದಿಗಳೂ ಪಟ್ಟಣಗಳೂ ಉತ್ತರ ಭಾರತದವೇ ಆದುದರಿಂದಲೂ ಇವನು ದಕ್ಷಿಣ ಭಾರತದವನಲ್ಲವೇ ಅಲ್ಲ ಎಂದು ನಂಬಿರುವವರೂ ಇದ್ದಾರೆ.
ಸ್ವಾರಸ್ಯದ ವಿಷಯವೆಂದರೆ ಕ್ರಿ.ಶ. 1912ರ ತನಕ ಭಾಸಕವಿ ವಿರಚಿತವೆಂದು ನಮಗೆ ಪರಿಚಿತವಾಗಿದ್ದುದು ಸುಭಾಷಿತ ಗ್ರಂಥಗಳಲ್ಲಿ ಹಂಚಿಹೋಗಿದ್ದ ಹದಿಮೂರು ಬಿಡಿ ಶ್ಲೋಕಗಳು ಮಾತ್ರ. ಭಾಸನ ವಿಚಾರವಾಗಿ ಅವನಿಗಿಂತ ಈಚಿನ ಕವಿಗಳ ಕೆಲವು ಉಲ್ಲೇಖಗಳೂ ದೊರೆತಿದ್ದುವು. ಕಾಳಿದಾಸ ತನ್ನ ಮಾಳವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ "ಪಾರಿ ಪಾರ್ಶ್ವಕಃ ಮಾ ತಾವತ್ | ಪ್ರಥಿತ ಯಶಸಾಂ ಭಾಸಸೌಮಿಲ್ಲ ಕವಿಪುತ್ರಾದೀನಾಂ ಪ್ರಬಂಧಾನ್ ಅತಿಕ್ರಮ್ಯ ವರ್ತಮಾನ ಕವೇಃ ಕಾಲಿದಾಸಸ್ಯ ಕ್ರಿಯಾಯಾಂ ಕಥಂ ಬಹುಮಾನಾಃ" ಎಂಬಲ್ಲಿ ಭಾಸನು(ಇಲ್ಲಿ ಭಾಸನೆಂದೇ ಉಲ್ಲೇಖಿಸಿದ್ದಾನೆ ಧಾವಕನೆಂದಲ್ಲ) ತನಗಿಂತ ಹಿಂದಿನ ಪ್ರಸಿದ್ಧ ಕವಿಗಳಲ್ಲಿ ಒಬ್ಬನೆಂದು ಪರಿಗಣಿಸಿರುವುದನ್ನೂ ಮತ್ತು ಬಾಣ ತನ್ನ ಹರ್ಷ ಚರಿತೆಯ ಪ್ರಸ್ತಾವನೆಯಲ್ಲಿ "ಸೂತ್ರಧಾರಕೃತಾರಂಭೈರ್ನಾಟಕೈರ್ಬಹು ಭೂಮಿಕೈಃ ಸಪತಾಕೈರ್ಯಶೋಲೇಭೇ ಭಾಸೋ ದೇವಕುಲೈರಿವ" ಎಂಬುದಾಗಿ ಭಾಸನ ಪ್ರಸಿದ್ಧಿಗೆ ಕಾರಣಗಳಾದ ಅವನ ನಾಟಕಗಳ ಸ್ವರೂಪವನ್ನು ಸ್ಥೂಲವಾಗಿ ನಿರ್ದೇಶಿಸಿರುವುದನ್ನೂ ರಾಜಶೇಖರನ ಸೂಕ್ತಿ ಮುಕ್ತಾವಳಿಯ "ಭಾಸನಾಟ ಚಕ್ರೇಪಿ ಛೇಕೈಃ ಕ್ಷಿಪ್ತೇ ಪರೀಕ್ಷಿತುಂ | ಸ್ವಪ್ನವಾಸದತ್ತಸ್ಯ ದಾಹಕೋಭೂನ್ನ ಪಾವಕಃ ||" ಎಂಬ ಶ್ಲೋಕದಲ್ಲಿ ಭಾಸರಚಿತ ನಾಟಕ ಚಕ್ರದ ಅಗ್ನಿಪರೀಕ್ಷೆ ಮಾಡಿದಾಗ ಸ್ವಪ್ನವಾಸವದತ್ತವು ಸರ್ವೋತ್ಕೃಷ್ಟವಾಗಿ ಉತ್ತೀರ್ಣವಾಯಿತೆಂದು ಹೇಳಿರುವುದನ್ನೂ ಇಲ್ಲಿ ತಿಳಿಯಬಹುದಾಗಿದೆ.
ಪಂಡಿತ . ಟಿ. ಗಣಪತಿಶಾಸ್ತ್ರಿಗಳು ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿದ್ದಾಗ ಅವರಿಗೆ 1909ರಲ್ಲಿ ಪ್ರತಿಜ್ಞಾ, ಸ್ವಪ್ನ, ಅವಿಮಾರಕ, ಮಧ್ಯಮ ವ್ಯಾಯೋಗ, ಪಂಚರಾತ್ರ, ದೂತಘಟೋತ್ಕಚ, ಕರ್ಣಭಾರ, ಊರುಭಂಗ, ಬಾಲಚರಿತ, ಚಾರುದತ್ತ ಎಂಬ ಹತ್ತು ಸಂಸ್ಕೃತ ರೂಪಕಗಳ ಗ್ರಂಥಾಕ್ಷರದ ಒಂದು ತಾಳೆಯೋಲೆ ಪ್ರತಿಯೂ 1910ರಲ್ಲಿ ಪ್ರತಿಮಾ, ಅಭಿಷೇಕ ಮತ್ತು ದೂತವಾಕ್ಯ ಎಂಬ ಮೂರು ರೂಪಕಗಳ ಮತ್ತೊಂದು ಪ್ರತಿಯೂ ದೊರೆತವು. ಈ ಹದಿಮೂರು ರೂಪಕಗಳಲ್ಲೂ ಆರಂಭದಲ್ಲೇ "ನಾಂದ್ಯಂತೇತತಃ ಪ್ರವಿಶತಿ ಸೂತ್ರಧಾರಃ" ಎಂಬ ರಂಗ ಸೂಚನೆ; ಆಮೇಲೆ ಸೂತ್ರಧಾರನಿಂದ ಕಾವ್ಯವಸ್ತು ಸೂಚಕವಾದ ಮಂಗಳ ಶ್ಲೋಕ ಪಠಣ; ನಾಟಕದ ಅಥವಾ ನಾಟಕಕರ್ತೃವಿನ ಹೆಸರಿನ ಉಲ್ಲೇಖವೇ ಇಲ್ಲದ ಪುಟಗಳು; ಒಂದು ನಾಟಕದಲ್ಲಿ ಪ್ರಯೋಗಿಸಿದ ವಾಕ್ಯ, ಪದ, ಶ್ಲೋಕ, ಶ್ಲೋಕಾರ್ಥಗಳು ಉಳಿದ ನಾಟಕಗಳಲ್ಲೂ ಕಂಡುಬರುವುದು; ಎಲ್ಲದರಲ್ಲಿಯೂ ಒಂದೇ ರೀತಿಯ ವಾಕ್ಯ ಇತ್ಯಾದಿ-ಈ ವಿವಿಧ ಸಾಮ್ಯಗಳ ಆಧಾರದ ಮೇಲೆ ಶಾಸ್ತ್ರಿಗಳು ಅಜ್ಞಾತಕರ್ತೃಕಗಳಾಗಿದ್ದ ಈ ಎಲ್ಲ ನಾಟಕಗಳೂ ಒಬ್ಬನೇ ಬರೆದನೆಂದು ನಿರ್ಧರಿಸಿದರು. ಈ ಹದಿಮೂರು ನಾಟಕಗಳಲ್ಲೂ ಬಾಣ ಹೇಳಿರುವ ಭಾಸನಾಟಕ ಸ್ವರೂಪಗಳ ಸ್ಪಷ್ಟವಾದ ಹೊಂದಾಣಿಕೆಯಿತ್ತು. ನಾಟಕ ಚಕ್ರವೆಂದೇ ಕರೆಯಬಹುದಾದ ಈ 13 ನಾಟಕಗಳಲ್ಲಿ ಒಂದಾಗಿದ್ದ ಸ್ವಪ್ನವಾಸವದತ್ತಮ್ ನಾಟಕ ವಾಸವದತ್ತೆಯ ವಿಷಯವಾಗಿದ್ದುದಲ್ಲದೆ ಸರ್ವೋತ್ಕೃಷ್ಟವಾಗಿಯೂ ಇದ್ದು ರಾಜಶೇಖರಕವಿಯ ಮಾತುಗಳನ್ನು ಅದಕ್ಕೆ ಅನ್ವಯಿಸಬಹುದು. ಆದ್ದರಿಂದ ಶಾಸ್ತ್ರಿಗಳು ಈ ಸ್ವಪ್ನವಾಸವದತ್ತಂ ನಾಟಕವನ್ನು ಭಾಸರಚಿತ ಸ್ವಪ್ನವಾಸವದತ್ತಂ ನಾಟಕವೆಂದೇ ನಿರ್ಣಯಿಸಿ, ಒಬ್ಬನೇ ಬರೆದನೆಂದು 13 ಅಜ್ಞಾತಕರ್ತೃ ನಾಟಕಗಳಲ್ಲಿ ಒಂದನ್ನು ರಚಿಸಿದವ ಭಾಸ ಎಂದು ಖಚಿತವಾದ ಮೇಲೆ ಅವೆಲ್ಲವೂ ಭಾಸರಚಿತವೇ ಎಂದು ಪ್ರತಿಪಾದಿಸಿದರು. ಆದರೆ ಈ ನಾಟಕಗಳ ಯಾವ ಹಸ್ತಪ್ರತಿಯಲ್ಲಾಗಲಿ ಗ್ರಂಥಕಾರನ ಹೆಸರಿರಲಿಲ್ಲ. ಅದೇ ವೇಳೆಗೆ ಸ್ವಪ್ನವಾಸವದತ್ತಂ ಎಂಬ ಹೆಸರಿದ್ದ ಮತ್ತೊಂದು ಮಾತೃಕೆ ದೊರೆತು ಅದೂ ಸ್ವಪ್ನವಾಸವದತ್ತನಾಟಕವೂ ಒಂದೇ ಎಂಬುದೂ ದೃಢಪಟ್ಟಿತು. ಕ್ರಿ.ಶ. 12ಯ ಶತಮಾನ ಶಾರದಾತನಯ ತನ್ನ ಭಾವಪ್ರಕಾಶದಲ್ಲಿ ಸ್ವಪ್ನವಾಸವದತ್ತೆವನ್ನು ಪ್ರಶಾಂತ ನಾಟಕವೆಂದು ಉಲ್ಲೇಖಿಸಿ ಆ ನಾಟಕದಿಂದ ಉದಾಹರಿಸಿರುವ "ಚಿರಪ್ರಸುಪ್ತಃ ಕಾಮೋ ಮೇ ವೀಣಯಾ ಪ್ರತಿಬೋಧಿತಃ | ತಾಂ ತು ದೇವೀಂ ನ ಪಶ್ಯಾಮಿ ಯಸ್ಯಾ ಘೋಷವತೀ ಪ್ರಿಯಾ ||" ಎಂಬ ಶ್ಲೋಕ ಶಾಸ್ತ್ರಿಗಳಿಗೆ ದೊರೆತ ನಾಟಕದ ಆರನೆಯ ಅಂಕದಲ್ಲಿದ್ದುದೂ ಅವರ ವಾದಕ್ಕೆ ಸಮರ್ಥನೆ ನೀಡಿತು. ಶಾಸ್ತ್ರಿಗಳ ಈ ನಿಲವನ್ನು ಕೀತ್, ಥಾಮಸ್, ರಾಂಜಪೆ ಮುಂತಾದ ಪ್ರಸಿದ್ಧ ವಿದ್ವಾಂಸರು ಸಮರ್ಥಿಸಿದರು. ಆದರೆ ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣದಲ್ಲಿ ಭಾಸನ ಸ್ವಪ್ನವಾಸವದತ್ತದಿಂದ (ವತ್ಸರಾಜ ಶೇಫಾಲಿಕ ಮಂಟಪವನ್ನು ನೋಡಿ ಹೇಳುವುದು) ಉದಾಹೃತವಾಗಿರುವ 'ಯಥಾ ಭಾಸ ಕೃತೇ ಸ್ವಪ್ನವಾಸವದತ್ತೇ ಶೇಫಾಲಿಕಾ ಮಂಡಪ ಶಿಲಾತಲಮವಲೋಕ್ಯ :
ಪಾದಾಕ್ರಾಂತಾನಿ ಪುಷ್ಪಾಣಿ ಸೋಕ್ಷ್ಮ ಚೇದಂ ಶಿಲಾಸನಂ |
ನೂನಂ ಕಾಚಿದಿಹಾಸೀನಾ ಮಾಂ ದೃಷ್ಟ್ವಾ ಸಹಸಾ ಗತಾ || ಎಂಬ ಶ್ಲೋಕ ಶಾಸ್ತ್ರಿಗಳಿಗೆ ದೊರೆತ ಸ್ವಪ್ನನಾಟಕದಲ್ಲಿಲ್ಲದಿದ್ದದನ್ನೂ ಸುಭಾಷಿತ ಗ್ರಂಥಗಳಲ್ಲಿ ಕಂಡುಬರುವ ಭಾಸರಚಿತ ಶ್ಲೋಕಗಳಲ್ಲೊಂದು. ಈ ಹದಿಮೂರು ರೂಪಗಳಲ್ಲಿಲ್ಲದಿರುವುದನ್ನೂ ಪ್ರಧಾನಕಾರಣವಾಗಿಟ್ಟು ಬಾರ್ನೆಟ್, ಮುಂತಾದವರು ಶಾಸ್ತ್ರಿಗಳ ನಿಲವನ್ನು ವಿರೋಧಿಸಿರು.
ಕಾಥಿಯವಾಡದ ಗೊಂಡಾಲ್ ಜೀವರಾಮ ಕಾಳಿದಾಸಶಾಸ್ತ್ರಿ ಎಂಬುವರು 1941ರಲ್ಲಿ ಯಜ್ಞಫಲ ಎಂಬ ಸಂಸ್ಕೃತ ನಾಟಕವನ್ನು ದೇವನಾಗರೀ ಲಿಪಿಯಲ್ಲಿದ್ದ ಎರಡು ಪ್ರತಿಗಳ ಆಧಾರದ ಮೇಲೆ ಪ್ರಕಟಿಸಿ, ಭಾಸರಚಿತವೆನ್ನಲಾದ ತಿರುವಾಂಕೂರಿನ ಹದಿಮೂರು ನಾಟಕಗಳಂತೆಯೇ ಇರುವುದರಿಂದ ಅದೂ ಭಾಸರಚಿತವೇ ಎಂದು ಪ್ರತಿಪಾದಿಸಿದರು. ಈ ನಾಟಕದ ವಸ್ತು ರಾಮಾಯಣದ ಬಾಲಕಾಂಡದ ಕಥೆ; ಪ್ರತಿಮಾ ನಾಟಕದ ಕಥೆಗೆ ಪೂರ್ವವರ್ತಿಯೆಂದು ಹೇಳಬಹುದು. ಇದು ಭಾಸರಚಿತವಿರಬೇಕೆಂದೇ ಕೆಲವು ವಿಮರ್ಶಕರ ಅಭಿಪ್ರಾಯ. ಆದ್ದರಿಂದ ಇದೂ ಸೇರಿದರೆ ಭಾಸರಚಿತವೆನ್ನಬಹುದಾದ ನಾಟಕಗಳೂ ಹದಿನಾಲ್ಕು ಎಂದಾಯಿತು. ಇವೆಲ್ಲವೂ ಇಂದಿಗೂ ಪ್ರದರ್ಶನಕ್ಕೆ ಯೋಗ್ಯವಾಗಿರುವುದು ಇವುಗಳ ವೈಶಿಷ್ಟ್ಯ. ಇವು ಭಾಸರಚಿತ ಮೂಲ ನಾಟಕಗಳ ಸಂಗ್ರಹದರೂಪ ಮಾತ್ರ. ಪ್ರದರ್ಶನಕ್ಕಾಗಿಯೇ ಹೀಗೆ ರೂಪಾಂತರಿತವಾದವು ಎಂಬ ಅಭಿಪ್ರಾಯವೂ ಇದೆ. ಈ ನಾಟಕಗಳಲ್ಲಿ ಪುರುಷ ಪಾತ್ರಗಳೇ ಹೆಚ್ಚು. ದೂತವಾಕ್ಯ, ಕರ್ಣಭಾರಗಳಲ್ಲಿ ಸ್ತ್ರೀಪಾತ್ರಗಳೇ ಇಲ್ಲ. ಪಂಚರಾತ್ರದಲ್ಲಿ ಬರುವ ಬೃಹನ್ನಳೆ ವಸ್ತುತಃ ಅರ್ಜುನನೇ. ಭಾಸನ ಪಂಚರಾತ್ರ ರೀತ್ಯ ಮಹಾಭಾರತಯುದ್ಧದ ಪ್ರಸಕ್ತಿಯೇ ಇಲ್ಲ. ಹೀಗೆ ಒಂದೊಂದು ನಾಟಕದಲ್ಲೂ ಭಾಸನ ಕೈವಾಡ ಪರಿಪೂರ್ಣವಾಗಿದೆ. ಒಟ್ಟಿನಲ್ಲಿ ಈ ನಾಟಕಗಳಲ್ಲಿ ಕಾಳಿದಾಸಾದಿಗಳಿಂದ ರಚಿತವಾದ ನಾಟಕಗಳಿಗಿಂತ ಸ್ವರೂಪತಃ ಭಿನ್ನವಾಗಿದ್ದರೂ ರಸಭಾವಪರಿಪುಷ್ಟಿ, ರಚನಾಕೌಶಲ, ಕಲಾನೈಪುಣ್ಯಗಳ ದೃಷ್ಟಿಯಿಂದ ಅವೆಲ್ಲಕ್ಕೂ ಆದರ್ಶಪ್ರಾಯವಾಗಿವೆ. ಈ ನಾಟಕಗಳಲ್ಲಿ ಬರುವ ಎಷ್ಟೋ ಮಾತುಗಳು ನಿತ್ಯಸತ್ಯಗಳಾಗಿದ್ದು ಸೂಕ್ತಿರತ್ನಗಳೆಂದು ಪರಿಗಣಿಸಲು ಅರ್ಹವಾಗಿವೆ. ಅಲ್ಲಲ್ಲೇ ಬರುವ ಪತಾಕಾ ಸ್ಥಾನಗಳಿಗೆ ಮಾರುಹೋಗದ ಪ್ರೇಕ್ಷಕರೂ ಓದುಗರೂ ವಿರಳ. ವರ್ಣನೆಗಳು ಸ್ವಲ್ಪ ದೀರ್ಘವಾಗಿದ್ದರೂ ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಮನಮೋಹಕವಾಗಿವೆ.
ನಾಲ್ಕು ಅಂಕಗಳ ಪ್ರತಿಜ್ಞಾಯೌಗಂಧರಾಯಣ, ಭಾಸನ ನಾಟಕಗಳಲ್ಲಿ ಅತ್ಯುತ್ತಮವಾದುದೆಂದು ಪ್ರಸಿದ್ಧಿಗಳಿಸಿರುವ ಆರು ಅಂಕಗಳ ಸ್ವಪ್ನವಾಸವದತ್ತ ನಾಟಕದ ಪೂರ್ವಾರ್ಧದಂತಿದೆ. ಈ ಎರಡು ನಾಟಕಗಳೂ ಸೇರಿ ಹತ್ತು ಅಂಕಗಳಾಗುವುದರಿಂದಲೂ ಎರಡರ ಕಥೆಯೂ ಪಾತ್ರಗಳೂ ಒಂದಕ್ಕೊಂದು ಪೂರಕವಾಗಿರುವುದರಿಂದಲೂ ಪ್ರತಿಜ್ಞಾಯೌಗಂಧರಾಯಣದ ಸ್ಥಾಪನೆಯಲ್ಲಿ 'ವಯಮಪಿ ಪ್ರಕರಣಮಾರಭಾಮಹೇ ಎಂದು ಸೂತ್ರಧಾರ ಹೇಳುವುದರಿಂದಲೂ ಭಾಸ ಬರೆದುದು ಒಟ್ಟಾಗಿ ಒಂದು ಪ್ರಕರಣ; ಅದನ್ನು ಈಚಿನವರು ಪ್ರದರ್ಶನಕ್ಕೆ ಅಳವಡಿಸಿಕೊಳ್ಳುವಾಗ ಎರಡಾಗಿ ಒಡೆದು ಬೇರೆಬೇರೆ ಹೆಸರಿಟ್ಟಿದ್ದಾರೆಂಬುದು ಕೆಲವರ ಅಭಿಪ್ರಾಯ. ಈ ಎರಡು ನಾಟಕಗಳನ್ನೂ ನಾಟಕೀಯವಾಗಿ ಹೆಣೆಯುವುದರಲ್ಲಿ ಶೃಂಗಾರ-ವೀರಾದಿ ರಸಗಳಿಗೆ ಸಮಪ್ರಾಶಸ್ತ್ಯವನ್ನು ತುಂಬುವುದರಲ್ಲಿ ವಿದೂಷಕನ ಪಾತ್ರದಿಂ ಹಾಸ್ಯಮಯವಾದ ವಾತಾವರಣ ಕಲ್ಪಿಸುವುದರಲ್ಲಿ ಭಾಸ ತನ್ನ ಕಲಾಪ್ರೌಢಿಮೆ ಮೆರೆದಿದ್ದಾನೆ.
ಹಾಸ್ಯಕ್ಕೆ ಆತನ ಕೊಡುಗೆ :
ಕುಸುಮವಸಂತಾದ್ಯಭಿಧಃ ಕರ್ಮವಪುರ್ವೇಷಭಾಷಾಧೈಃ |
ಹಸ್ಯಕರಃ ಕಲಹರತಿಃ ವಿದೂಷಕಃ ಸ್ಯಾತ್ಸ್ವಕರ್ಮಜ್ಞಃ ||
ಮೊದಲೇ ಅವನ ಹೆಸರು ವಿಚಿತ್ರ. ಕುರೂಪಿಯಾಗಿದ್ದರೂ ಕುಸುಮದಂತಿದ್ದಾನೆ. ವಸಂತ ಎಂದು ಕರೆಯುವೆವು. ಆಕಾರವೂ ವಿಕಾರವೇ ಅವನನ್ನು ಒಂದು ಸಾರಿ ಬಳಸಿ ಬಂದರೆ ಶರೀರಕ್ಕೆ ತಕ್ಕಷ್ಟು ವ್ಯಾಯಾಮವಾಗಿ ಹಸಿವಾಗುವುದು. ಹೀಗೆ ವಿಡಂಬನೆ ಅವನ ತಂತ್ರ.
ಈ ಎರಡು ನಾಟಕಗಳಿಗೆ ನೀಡಿರುವ ಹೆಸರುಗಳಲ್ಲೇ ತನ್ನ ಚಿತ್ಯಪೂರ್ಣ ಪ್ರತಿಭೆ ಪ್ರದರ್ಶಿಸಿದ್ದಾನೆ. ಮಹಾಸೇನನ ಕುತಂತ್ರಕ್ಕೆ ಬಲಿಯಾಗಿ, ಕಟ್ಟಿಗೆಯ ಆನೆಯನ್ನು ನಿಜವಾದ ಆನೆಯೆಂದು ಹಿಡಿಯಹೋಗಿ ಅವನ ಸೈನಿಕರಿಗೆ ಸೆರೆಸಿಕ್ಕಿ ಉಜ್ಜಯಿನಿಯ ರಾಜನ ಬಂದಿಯಾದ ವತ್ಸರಾಜ ಉದಯನನ ಬವಣೆ, ಮಹಾಸೇನನ ಮಗಳಾದ ವಾಸವದತ್ತೆಗೆ ವೀಣೆ ಕಲಿಸುವ ಶಿಕ್ಷಕನಾಗುವ ಸನ್ನಿವೇಶ, ಅವರ ಪ್ರಥಮ ಪ್ರಣಯ, ಈ ಮೋಸಕ್ಕೆ ತಕ್ಕ ಪ್ರತೀಕಾರವನ್ನು ಮೋಸದಿಂದಲೇ ಮಾಡುವೆನೆಂದು ಪ್ರತಿಜ್ಞೆ ಮಾಡಿ ಉದಯನ ವಾಸವದತ್ತೆಯರಿಬ್ಬರನ್ನೂ ಇನ್ನೊಂದು ಆನೆಯ ತಂತ್ರದಿಂದಲೇ ಉಜ್ಜಯಿನಿಯಿಂದ ಬಿಡಿಸಿಕೊಂಡು ಬಂದು ಪ್ರತಿಜ್ಞೆಯನ್ನು ನಿರ್ವಹಿಸಿದ ಯೌಗಂಧರಾಯಣ ಮಹಾತಂತ್ರ ಇದು ಪ್ರತಿಜ್ಞಾಯೌಗಂಧರಾಯಣದ ಕಥಾವಸ್ತು. ಈ ಕಥೆಯಲ್ಲಿ ರಾಜತಂತ್ರ ಕೌಶಲಕ್ಕೆ ಹೆಚ್ಚಿನ ಸ್ಥಾನ; ಪ್ರೇಮ ಗೌಣ. ಆದರೆ ಸ್ವಪ್ನವಾಸವದತ್ತದಲ್ಲಿ ರಾಜತಂತ್ರ ಕೌಶಲಕ್ಕೆ ಕಡಿಮೆಯಿಲ್ಲದ ಮಹತ್ತ್ವದ ಸ್ಥಾನ ಶೃಂಗಾರರಸಕ್ಕೆ ಮೀಸಲಾಗಿರುವುದರಿಂದ ಈ ನಾಟಕ ಮತ್ತಷ್ಟು ಮನರಂಜಕವಾಗಿದೆ. ವಾಸವದತ್ತೆಯ ಮೇಲಿನ ಅತಿಪ್ರೇಮವೇ ಉದಯನನ ರಾಜ್ಯ ಶತ್ರುವಶವಾಗುವುದಕ್ಕೆ ಕಾರಣವೆನಿಸಿದಾಗ, ಮಂತ್ರಿ ಯೌಗಂಧರಾಯಣ ರಾಜ್ಯವನ್ನುಳಿಸಿ ನಿಷ್ಕಂಟಕವಾಗಿಸಲು ನೆರೆಯ ಮಗಧರಾಜ ಪುತ್ರಿ ಪದ್ಮಾವತಿಯ ವಿವಾಹ ಪ್ರಯತ್ನವನ್ನು ಕೈಗೊಳ್ಳಬೇಕಾಯಿತು. ಅದು ಸಫಲವಾಗಲು ಅಡ್ಡಿಯಾಗಿದ್ದ ವಾಸವದತ್ತೆಯನ್ನು ಸತ್ತಳೆಂದು ಸುಳ್ಳುಸುದ್ದಿ ಹರಡಬೇಕಾಯಿತು. ಗಂಡನಿಗೆ ಲೇಸಾಗಲೆಂದು ವಾಸವದತ್ತೆ ಮಂತ್ರಿಯ ಈ ಯೋಜನೆಗೆ ಒಪ್ಪಿ ತಾನು ಪದ್ಮಾವತಿಯ ಪರಿಚರಿಕೆಯಾಗಿ ಕೆಲವೊಂದು ಕಾಲ ಕಳೆಯುವುದಕ್ಕೂ ಪದ್ಮಾವತಿ ತನ್ನ ಗಂಡನನ್ನೇ ಮದುವೆಯಾಗುವುದಕ್ಕೂ ಒಪ್ಪುವುದು ಅವಳ ತ್ಯಾಗದ ವೈಶಿಷ್ಟ್ಯವನ್ನು ತೋರಿಸುವಂತಿದೆ. ಇದು ಬಹು ಗುಪ್ತವಾಗಿರುವ ಸಂಗತಿಯಾದ್ದರಿಂದ ಉದಯನನ್ನೇ ಆದಿಯಾಗಿ ನಾಟಕದಲ್ಲಿ ಮತ್ತಾರಿಗೂ ಗೊತ್ತಾಗಿರುವುದಿಲ್ಲ. ಪದ್ಮಾವತೀ ಪರಿಣಯವಾದ ಮೇಲೆ ಕಡೆಗೆ ಯೌಗಂಧರಾಯಣನ್ನೇ ಮತ್ತೆ ವಾಸವದತ್ತೆಯ ಪುನಸ್ಸಮಾಗಮನವನ್ನೂ ಉದಯನನಿಗೆ ಮಾಡಿಸಿ ಕ್ಷಮೆಕೇಳುತ್ತಾನೆ.
ಇಡೀ ನಾಟಕದ ರಸಸ್ಥಾನವೆಲ್ಲ ವಿಪ್ರಲಂಭ ಶೃಂಗಾರಕ್ಕೇ ಮೀಸಲಾಗಿದೆ. ನಾಯಕನಿಗೆ ತನ್ನ ಮೆಚ್ಚಿನ ಮಡದಿ ನಿಜವಾಗಿಯೂ ಮೃತಳಾದಳೆಂಬ ಭಾವನೆ ಬೇರೂರಿಬಿಟ್ಟರೆ, ಅವನು ಪುನರ್ವಿವಾಹವಾದ ಮೇಲೆ ಮತ್ತೆ ಮೊದಲ ಪತ್ನಿಯನ್ನು ಪ್ರೀತಿಸಲು ಸಾಧ್ಯವೆ? ಇದು ಈ ನಾಟಕದ ಸಮಸ್ಯೆ. ಯೌಗಂಧರಾಯಣನ ರಾಜತಂತ್ರ ಇದನ್ನು ಸಾಧಿಸಲಾರದು, ಅದಕ್ಕಾಗಿ ಉದಯನನ ಸ್ಮೃತಿಪಟಲದಲ್ಲಿ ವಾಸದತ್ತೆಯ ನೆನಪು ಆಗಾಗ ಮರುಕಳಿಸುತ್ತಿರುವಂತೆ ತೋರಿಸಲು ಭಾಸ ತುಂಬ ಎಚ್ಚರ ವಹಿಸಿ ತನ್ನ ಪ್ರತಿಭೆಯನ್ನು ಮೆರಿದಿದ್ದಾನೆ. ಮೇಲ್ನೋಟಕ್ಕೆ ವಿದೂಷಕನ ಪರಿಹಾಸದ ಪ್ರಶ್ನೆಯಂತೆ ಕಂಡರೂ ನಿನಗೆ ಅಂದಿನ ವಾಸವದತ್ತೆ ಮೆಚ್ಚಿನವಳೋ? ಇಂದಿನ ಪದ್ಮಾವತಿಯೋ? ಎಂಬ ಜಟಿಲ ಪ್ರಶ್ನೆ ಇಡಿಯ ನಾಲ್ಕನೆಯ ಅಂಕವನ್ನೆಲ್ಲ ತುಂಬಿದೆ; ರಾಜನ ಹೃದಯದಲ್ಲಿ ವಾಸವದತ್ತೆಗಿರುವ ಸ್ಥಾನವನ್ನು ಗಟ್ಟಿಮಾಡಿದೆ.
ಅದರ ಮುಂದಿನ ವಿವರಣೆಯೇ ನಾಟಕದ ರಸಕೇಂದ್ರವಾದ ಐದನೆಯ ಅಂಕದ ಸ್ವಪ್ನದೃಶ್ಯವೆನ್ನೆಬಹುದು. ಇಲ್ಲಿ ಅರಿವು, ಮರೆವು. ಎಚ್ಚರ, ಕನಸು ಇವು ನೆರಳು ಬೆಳಕುಗಳಂತೆ ಬರುತ್ತ, ಹೋಗುತ್ತ, ವಾಸವದತ್ತೆ ಇದ್ದಾಳೆ, ಇಲ್ಲ ಎಂಬ ಅದ್ಫುತ ಸಮ್ಮಿಶ್ರ ವಾತಾವರಣದಲ್ಲಿ ಪರ್ಯವಸಾನಗೊಳ್ಳುತ್ತದೆ. ನಾಟಕವೇ ಒಂದು ತೋರಿಕೆ; ಅದರಲ್ಲಿ ಸತ್ಯ ಮಿಥ್ಯೆಗಳ ಸಮ್ಮಿಶ್ರಣ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ. ಇಲ್ಲಿ ಜಾಗ್ರತ ಪ್ರಪಂಚದ ವಾಸವದತ್ತೆಗೂ ಉದಯನನ ಸ್ವಪ್ನ ಪ್ರಪಂಚ ವಾಸವದತ್ತೆಗೂ ನಾಟಕೀಯ ಸಂವಿಧಾನ ತಂತ್ರದಿಂದಲೇ ಅಭೇದ ಪ್ರಾಪ್ತವಾಗಿ, ರೋಮಾಂಚಕಾರಿಯಾಗಿದೆ. ಅವಳು ರಾಜನ ತೋಳನ್ನೆತ್ತಿ ಹಾಸಿಗೆಯ ಮೇಲಿರಿಸುವಾಗ. ಈ ಸ್ಪರ್ಶಸುಖ ಪ್ರತ್ಯಕ್ಷವಾದ ಮೇಲೆ ಯಾರೇನೆಂದರೂ ರಾಜನ ಮನಸ್ಸಿನಲ್ಲಿ ಅವಳ ಪುನಸ್ಸಮಾಮ ಪ್ರತ್ಯಕ್ಷವಾಗಿ ದೃಢವಾಗುತ್ತದೆ. ಎರಡನೆಯ ಮದುವೆಯಾಗಿದ್ದರೂ ರಾಜನಿಗೆ ಮೊದಲ ಪ್ರೇಮ ಸ್ವಲ್ಪವೂ ಮಾಸಿಲ್ಲವೆಂಬ ಪೂರ್ಣ ಭರವಸೆ ವಾಸವದತ್ತೆಗೆ ದೊರೆತು ಸಮಾಧಾನ ತರುತ್ತದೆ. ಉದಯನ ವಾಸವದತ್ತೆಯರ ಈ ವಿಪ್ರಲಂಭ ಶೃಂಗಾರ ಸಂಸ್ಕೃತ ನಾಟಕ ಸಾಹಿತ್ಯದಲ್ಲೇ ಅನರ್ಘ್ಯವಾದ ಒಂದು ರಸ.
ಪದ್ಮಾವತಿ, ವಾಸವದತ್ತೆ, ಯೌಗಂಧರಾಯಣ, ವಿದೂಷಕ-ಈ ಎಲ್ಲ ಪಾತ್ರಗಳ ಹೃದಯಾಂತರಾಳದಲ್ಲಿ ಮೂಡುವ ಒಳತೋಟ ಈ ನಾಟಕದ ಉತ್ಕರ್ಷಕ್ಕೆ ಹೆಚ್ಚಿನ ಸಾಮಗ್ರಿ ಒದಗಿಸಿದೆ. ಭಾಸನ ಮನೋವೈಜ್ಞಾನಿಕ ಅಂತರ್ದೃಷ್ಟಿ ಸ್ವಪ್ನವಾಸದತ್ತದಲ್ಲಿ ನಿಜವಾಗಿಯೂ ಸಫಲತೆ ಕಂಡುಕೊಂಡಿದೆಯೆನ್ನಬಹುದು. ಇಬ್ಬರು ನಾಯಕಿಯರನ್ನೂ ವಿಭಿನ್ನ ರೀತಿಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವಂತೆ ಚಿತ್ರಿಸಿರುವುದು ಭಾಸನ ವೈಶಿಷ್ಟ್ಯವೇ ಸರಿ. ತಿಳಿಯಾದ, ಲಘುವಾದ ಇಲ್ಲಿಯ ವಿದೂಷಕನ ಹಾಸ್ಯ ಕೂಡ ಈ ನಾಟಕದ ಮೇಲ್ಮೈಗೆ ಪೋಷಕವಾಗಿದೆ.
ಪ್ರತಿಮಾ ನಾಟಕ : ರಾಮಾಯಣ ನಾಟಕಗಳಲ್ಲೆಲ್ಲ ಪ್ರತಿಮಾನಾಟಕದ ಸಂವಿಧಾನ ಕೌಶಲ ಆಧುನಿಕರಿಗೆ ಕೂಡ ಮೆಚ್ಚುವಷ್ಟು ರಮಣೀಯವಾಗಿದೆ. ಕೈಕೆಯಿ, ರಾಮ, ಭರತ, ಲಕ್ಷ್ಮಣ, ಸೀತೆ ಈ ಎಲ್ಲರ ಪಾತ್ರಗಳೂ ರಾಮಾಣಯಣಕ್ಕಿಂತ ಉಜ್ಜ್ವಲವಾಗಿ ಕಳಂಕರಹಿತವಾಗಿ ಶೋಭಿಸುವಂತೆ ಭಾಸ ತನ್ನ ನೂತನ ಕಥೆ ಸೃಷ್ಟಿ ಮಾಡಿದ್ದಾನೆ. ದಶರಥನಿಗೆ ಪುತ್ರಶೋಕದಿಂದ ಸಾವೆಂಬ ಶಾಪವಿದ್ದುದರಿಂದ ರಾಮ ಕಾಡಿಗೆ ಹೋಗುವಂತೆ ವಸಿಷ್ಠಾದಿಋಷಿಗಳೇ ಕೈಕೇಯಿಯನ್ನೊಲಿಸಿಕೊಂಡು ಯೋಜನೆ ಮಾಡುತ್ತಾರೆ. ಇಲ್ಲಿಯ ಕೈಕೇಯಿ ರಾಜ್ಯದಾಹದಿಂದ ಕುರುಡಾಗಿ ವೈಧವ್ಯ ತಂದುಕೊಂ ನೀಚೆಯಲ್ಲ; ಭರತನೇ ಆದಿಯಾಗಿ ಎಲ್ಲರಿಂದಲೂ ಬೈಸಿಕೊಂಡರೂ ರಾಮನ ಕ್ಷೇಮಚಿಂತನೆಗಾಗಿಯೇ ಮಹಾತ್ಯಾಗ ಮಾಡಿದ ಮಹಿಳಾ ಮಣಿ, ಹೀಗೆ ರಾಮಾಯಣದ ಮೂಲಕಥೆಯಲ್ಲಿ ಇಷ್ಟೊಂದು ಧಾರಾಳವಾಗಿ ಬದಲಾವಣೆ ಮಾಡಿಕೊಳ್ಳುವ ಕಲ್ಪನಾ ಸಾಮರ್ಥ್ಯ ಮತ್ತಾವ ಸಂಸ್ಕೃತ ಕವಿಯಲ್ಲೂ ನಮಗೆ ಕಾಣಸಿಗದು. ದಶರಥನ ಸತ್ಯಪರಿಪಾಲನೆಗಾಗಿ ಕೈಕೇಯಿಗೆ ಕೊಟ್ಟ ವರವನ್ನು ಅವನು ತೀರಿಸಲೇಬೇಕಾಗಿಯೂ ಇದ್ದಿತಂತೆ. ಇಲ್ಲಿ ಉಡಲರಿಯದ ಸೀತೆಗೆ ನಾರುಮಡಿಗಳನ್ನು ಕೈಕೆಯಿ ತಂದು ಉಡಿಸುವುದಿಲ್ಲ. ನಾಟ್ಯಶಾಲೆಯನ್ನು ನೋಡಲು ಹೋಗಿದ್ದ ಸೀತೆ ಬಾಲಚಾಪಲ್ಯದಿಂದ ಅಭಿಷೇಕದ ದಿನವೇ ಮುನ್ಸೂಚನೆಯೋ ಎಂಬಂತೆ ದೈವಪ್ರೇರಿಗಳಾಗಿ ನಾರುಸೀರೆಯನ್ನುಟ್ಟಿರುತ್ತಾಳೆ. ರಾಜ್ಯ ತಪ್ಪಿತೆಂದು ರಾಮನಿಗಾಗಲಿ ಸೀತೆಗಾಗಲಿ ಇಲ್ಲಿ ಎಳ್ಳಷ್ಟೂ ದುಃಖವಿಲ್ಲ. ಅದಕ್ಕೆ ಪ್ರತಿಯಾಗಿ ತಮಗೆ ಬೇಧರ್ಮಾಚರಣೆಯ ಸದವಕಾಶ ಲಭಿಸಿತೆಂಬ ಹರ್ಷವಿದೆ. ಭರತನಿಗೆ ದಶರಥನ ಮರಣವೃತ್ತಾಂತ ಇಲ್ಲಿ ಕೈಕೆಯ ಬಾಯಿಂದ ತಿಳಿಯುವುದಿಲ್ಲ; ಊರ ಹೊರಗೇ ಪ್ರತಿಮಾಗೃಹದ ಪೂಜಾರಿಯಿಂದ ಕ್ರಮಕ್ರಮವಾಗಿ, ಪ್ರಾಸಂಗಿಕವಾಗಿ ತಿಳಿಯುತ್ತದೆ. ಸೀತೆ ಸವರ್ಣಮೃಗಕ್ಕೆ ಆಸೆಪಟ್ಟು, ಲಕ್ಷ್ಮಣನನ್ನು ಧಿಕ್ಕರಿಸುವ ಪ್ರಸಂಗವೇ ಇಲ್ಲಿ ಇಲ್ಲ. ತಂದೆಯ ಶ್ರಾದ್ಧಕ್ಕೆ ಸುವರ್ಣಮೃಗ ಪ್ರಶಸ್ತವೆಂಬ ರಾಮನ ಭಾವನೆಯಿಂದಲೇ ಆ ಮಾಯಾಮೃಗದ ವೃತ್ತಾಂತ ಸೀತಾಪಹರಣಕ್ಕೆ ನಿಮಿತ್ತವಾಗುತ್ತದೆ. ಹೂವಿನ ಹೃದಯ ಭರತನಿಗೆ ಕೆಟ್ಟಸುದ್ದಿಗಳನ್ನು ಕ್ರಮಕ್ರಮವಾಗಿ ತಿಳಿಸಲೆಂದು ಭಾಸ ಯೋಜಿಸಿರುವ ಪ್ರತಿಮಾಗೃಹದ ವೃತ್ತಾಂತ ನಿಜವಾಗಿಯೂ ಶ್ಲಾಘನೀಯವಾಗಿದೆ. ದಿಲೀಪ, ಅಜ, ಮುಂತಾದ ರಾಜರ ಪ್ರತಿಮೆಗಳಿಂದ ದೇವಾಲಯವೇ ಹೊರತು ಅದು ದೇವತಾಪ್ರತಿಮೆಗಳಿರುವ ದೇವಾಲಯವಲ್ಲವೆಂದು ಮಾವನ ಮನೆಯಲ್ಲೆ ಬಹುಕಾಲ ಕಳೆದು ಗಡಿಬಿಡಿಯಿಂದ ಅಯೋಧ್ಯೆಗೆ ಬರುವ ಭರತನಿಗೆ ಮೊದಲು ಪೂಜಾರಿಯಿಂದ ತಿಳಿಯುತ್ತದೆ. ಅಲ್ಲಿ ಮೂರನೆಯ ಪ್ರತಿಮೆಯೂ ಒಂದಿರುವುದು ಅವನಲ್ಲಿ ಕೆಟ್ಟ ಸಂಶಯಕ್ಕೆ ನಿಮಿತ್ತವಾಗುತ್ತದೆ. ಸತ್ತವರ ಪ್ರತಿಮೆಗಳಷ್ಟೇ ಇರುತ್ತವೆಂದ ಮೇಲಂತೂ ದಶರಥನೂ ಸತ್ತಾಗಿರಬೇಕೆಂಬುದು ಮನಸ್ಸಿನಲ್ಲಿ ಸುಳಿದು ಅವನು ಮೂರ್ಛೆ ಹೋಗುತ್ತಾನೆ. ಸ್ವಪ್ನವಾಸವದತ್ತದ ಸ್ವಪ್ನದೃಶ್ಯದಂತೆಯೇ ಪ್ರತಿಮಾನಾಟಕದ ಪ್ರತಿಮಾದೃಶ್ಯವಾದರೂ ಭಾಸನ ಅಸಾಧಾರಣ ನಾಟಕ ತಂತ್ರಕ್ಕೆ ಮಾನದಂಡದಂತಿದೆ.
ಅವಿಮಾರಕ ಏಳು ಅಂಕಗಳ ಒಂದು ಅದ್ಭುತ-ಶೃಂಗಾರ ನಾಟಕ. ಪ್ರಾಯಶಃ ಇದು ಭಾಸನ ಪ್ರಥಮ ರಚನೆಯಿರಬೇಕು. ಕ್ಷತ್ರಿಯ ಕುಮಾರನೊಬ್ಬ ಚಂಡಾಲ ವೇಶದಲ್ಲಿದ್ದು, ಮದ್ದಾನೆಗೆ ಸಿಕ್ಕಿದ ರಾಜಪುತ್ರಿಯನ್ನು ರಕ್ಷಿಸಿ, ಗುಪ್ತವಾಗಿ ಅವಳ ಅಂತಃಪುರದಲ್ಲಿದ್ದು ರಾಜಕೋಪಕ್ಕೆ ಹೆದರಿ ಓಡುತ್ತ, ವಿದ್ಯಾಧರನೊಬ್ಬ ಕರುಣಿಸಿದ ಅದ್ಭುತ ಉಂಗುರದ ಪ್ರಭಾವದಿಂದ ಆಕೆಯನ್ನು ಮದುವೆಯಾಗುವ ಅದ್ಭುತ ಸಾಹಸಮಯ ರಮ್ಯ ಕಥಾಪ್ರಸಂಗ ಇಲ್ಲಿದೆ. ಅವಳ ತಂಗಿಗೂ ನಾಯಕನ ತಮ್ಮನಿಗೂ ಹೀಗೆಯೇ ಮದುವೆಯಾಗುತ್ತದೆ. ಉದ್ದದ ಕಥೆ ಅತಿ ಮಾನುಷವೂ ಅಸಾಧಾರಣವೂ ಆದ ಕಥೆಯು ಅವಾಸ್ತವಿಕತೆಯಿಂದ ತುಂಬಿದೆ. ವಸ್ತು ರಚನಾ ಕೌಶಲವಾಗಲಿ, ರಸವಾಗಲಿ ಈ ನಾಟಕದಲ್ಲಿ ಕಂಡುಬರುವುದಿಲ್ಲ.
ಚಾರುದತ್ತ ಒಂದು ಸುಂದರ ಸಾಮಾಜಿಕ ನಾಟಕ. ಇದರ ಮೊದಲ ನಾಲ್ಕು ಅಂಕಗಳು ಮಾತ್ರ ಸಿಕ್ಕಿರುವುದರಿಂದ ಇದು ಅಸಮಗ್ರಸ್ಥಿತಿಯಲ್ಲಿದೆ. ಶೂದ್ರಕನ ಮೃಚ್ಛಕಟಿಕಕ್ಕೆ ಈ ನಾಟಕವೇ ಆಧಾರವೆಂಬುದು ಕೆಲವರ ಅಭಿಪ್ರಾಯ. ಪ್ರೇಮಕ್ಕೆ ಹಣ ಮುಖ್ಯವಲ್ಲ, ಗುಣ ಮುಖ್ಯ ಎಂಬುದೇ ಈ ನಾಟಕದ ತಿರುಳು. ಮೃಚ್ಛಕಟಿಕದಲ್ಲಿ ಆರ್ಯ ಕಪಾಲಕರಿಗೆ ಸಂಬಂಧಿಸಿದ ರಾಜ್ಯಕ್ರಾಂತಿ ಪ್ರಕರಣ ಚಾರುದತ್ತ ವಸಂತಸೇನೆಯರ ಪ್ರಣಯದೊಡನೆ ಹಣೆದುಕೊಂಡಿದ್ದರೆ, ಚಾರುದತ್ತನಾಟಕದಲ್ಲಿ ಆ ವೃತ್ತಾಂತವೇ ಇಲ್ಲದಿರುವುದು ಎರಡು ನಾಟಕಗಳಿಗೂ ಇರುವ ಪ್ರಧಾನ ಭೇದ. ಉದಾರಿಯಾದ ಚಾರುದತ್ತ ನಿರಪೇಕ್ಷವಾಗಿ ಆತನ ಹೃದಯಕ್ಕೆ ಅಂಟಿಕೊಂಡ ಇನ್ನೊಂದು ಜೀವವಾದ ವಸಂತಸೇನೆ, ತನ್ನ ಮೂಢತೆ ಹಾಗೂ ನಿಕಟವಾದ ನಡತೆಯಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕಾರ-ಇವೆಲ್ಲ ಪಾತ್ರಗಳು ನಾಟಕಕ್ಕೆ ಕಳೆಕಟ್ಟುತ್ತವೆ. ಮೃತ್ ಶಕಟಿಕಾ ವೃತ್ತಾಂತವೂ ಶೂದ್ರಕನ ಸ್ವತಂತ್ರ ಕಲ್ಪನೆಯಿರಬೇಕು. ಅಭಿನವಗುಪತ್ತ ಉಲ್ಲೇಖಿಸಿರುವ ದರಿದ್ರ ಚಾರುದತ್ತವೂ ಭಾಸನ ಈ ಚಾರುದತ್ತವೂ ಒಂದೇ ಇರಬಹುದು.
ಹೀಗೆ ಭಾಸ ಭಾರತದೇಶಕಂಡ ಅತ್ಯಪೂರ್ವ ನಾಟಕಕಾರ ಎನ್ನಬಹುದು.
ಕೊನೆಗೆ
ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್ ಭೂಮಿಸ್ತೋಯಂ ಖನ್ಯಮಾನಾ ದದಾತಿ |
ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ ಮಾರ್ಗಾರಬ್ಧಾಃ ಸರ್ವ ಯತ್ನಾಃ ಫಲನ್ತಿ || ಪ್ರತಿಜ್ಞಾ : ೭೨

ಕಟ್ಟಿಗೆಯನ್ನು ಕಡೆದರೆ ಬೆಂಕಿ, ಭೂಮಿಯನ್ನು ಅಗೆದರೆ ನೀರು ಉತ್ಸಾಹೀ ಜನರಿಗೆ ಯಾವುದೂ ಅಸಾಧ್ಯವಲ್ಲ ತಕ್ಕ ರೀತಿಯಲ್ಲಿ ಮಾಡಿದ ಪ್ರಯತ್ನವು ಫಲಿಸುವುದು ಖಂಡಿತ 

Friday 20 October 2017

ಯಮ್ಮಿತ್ರಮೇವಾಶು ವವ್ರಿರೇ - ಮಯೂರ - 4


ಸ್ವಪ್ರತಿಜ್ಞಾ ಪಾರಣೋತ್ಥಾನ ನಾಗಿ ತನ್ನ ಬಲವಾದ ಸೈನ್ಯದೊಂದಿಗೆ ಶ್ಯೇನದಂತಹ ವ್ಯೂಹವನ್ನು ರಚಿಸಿಕೊಂಡು ವಿಷಮದೇಶವನ್ನು ಹೊಕ್ಕು ಯುದ್ಧೋತ್ಸಾಹನಾದಾಗ ಅದೇ ಸಮಯಕ್ಕೆ ಉತ್ತರದಲ್ಲಿದ್ದ ಗುಪ್ತರ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ಸಮುದ್ರ ಗುಪ್ತನ ದಕ್ಷಿಣಾಪಥದ ದಂಡಯಾತ್ರೆ ಆರಂಭವಾಗುತ್ತದೆ. ಆಗ ಸಮುದ್ರಗುಪ್ತ ಪಲ್ಲವರ ರಾಜ ವಿಷ್ಣುಗೋಪನನ್ನು ಸೋಲಿಸಿ ಮಯೂರವರ್ಮನಿಗೆ ಬೆಂಬಲವಾಗಿ ನಿಂತು ಬಿಡುತ್ತಾನೆ ಇದೇ ಸಮಯವನ್ನು ಕಾಯುತ್ತಿದ್ದ ಮಯೂರ ಈ ಸಮಯದಲ್ಲಿ ಪ್ರಬಲನಾಗಿ ಬೆಳೆದಾಗಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡು ಕರ್ನಾಟಕದ ಪ್ರದೇಶದ ಮೈಸೂರು ಪ್ರಾಂತ್ಯ, ಬಾದಾಮಿ, ಶಿವಮೊಗ್ಗ ಮತ್ತು ಕುಂತಳ, ಕರಾವಳಿಯ ಭೂ ಬಾಗಗಳನ್ನು ಸೇರಿಸಿಕೊಂಡು ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕದಂಬ ವಂಶವನ್ನು ಸ್ಥಾಪಿಸುತ್ತಾನೆ. ಮುಂದೆ ಮೌರ್ಯರ ಕಾಲದಲ್ಲಿಯೂ ಅದು ಕುಂತಳ ನಗರವೆಂದೇ ಪ್ರಸಿದ್ಧಿಯನ್ನು ಪಡೆದಿತ್ತು.
ಪಲ್ಲವೇಂದ್ರಾ ಯಸ್ಯ ಶಕ್ತಿಮಿಮಾಂ ಲಬ್ದ್ವಾ ಪ್ರತಾಪಾನ್ವಯಾವಪಿ |
ನಾಸ್ಯ ಹಾನಿ ಶ್ರೇಯಸೀತ್ಯುಕ್ತಾ ಯಮ್ಮಿತ್ರಮೇವಾಶು ವವ್ರಿರೇ || 19 ||
ಹೌದು ಪಲ್ಲವ ರಾಜ ಈತನ ಸೈನ್ಯದ ಬಲವನ್ನು ನೋಡಿಯೇ ಮಯೂರನಲ್ಲಿ ಯುದ್ಧಮಾಡುವುದಕ್ಕಿಂತ ಮತ್ತು ನಾವು ಹಾನಿ ಮಾಡಿಸಿಕೊಳ್ಳುವುದಕ್ಕಿಂತ ಮಿತ್ರತ್ವಕ್ಕೆ ಹೆಚ್ಚು ಒತ್ತು ಕೊಟ್ಟರೆ ಅದು ನಮಗೇ ಶ್ರೇಯಸ್ಸು ಎಂದು ಬಗೆಯುತ್ತಾನೆ.
ಸಂಶ್ರಿತಸ್ತದಾ ಮಹೀಪಾಲಾನಾರಾಧ್ಯ ಯುದ್ಧೇಷು ವಿಕ್ರಮೈಃ |
ಪ್ರಾಪ ಪಟ್ಟಬಂಧ ಸಂಪೂಜಾಂ ಕರಪಲ್ಲವೈರ್ಪಪಲ್ಲವೈದ್ಧರ್øತಾಮ್ || 20 ||
ಭಂಗುರೋರ್ಮಿ ವಲ್ಗಿತೈರ್ನೃತ್ಯದಪರಾರ್ಣವಾಂಭಷ್ಕøತಾವಧಿಂ |
ಪ್ರೇಹರಾಂತಾಮನನ್ಯ ಸಂಚರಣ ಸಮಯಸ್ಥಿತಾಂ ಭೂಮಿಮೇವ ಚ || 21 ||
ಹೀಗೇ ಪಲ್ಲವರನ್ನೂ ಯುದ್ಧದಲ್ಲಿ ಸೋಲಿಸಿ ತನ್ನ ಸ್ವಪ್ರತಿಜ್ಞೆಯನ್ನು ನೆರವೇರಿಸಿದ್ದಲ್ಲದೇ ಕನ್ನಡದ ನಾಡಿಗೆ ಒಂದು ಒಳ್ಳೆಯ ವಂಶವನ್ನು ಕೊಟ್ಟ ಹೆಗ್ಗಳಿಕೆ ಮಯೂರನಿಗೆ ಸಲ್ಲುತ್ತದೆ. ಸಾತವಾಹನರು, ಸಾತಕರ್ಣಿಗಳ ಕಾಲದಲ್ಲಿ ಮತ್ತು ಪಲ್ಲವರ ಕಾಲದಲ್ಲಿ ಬನವಾಸಿಯು ಕುಂತಳನಗರ ಎಂದು ಪ್ರಸಿದ್ಧಿ ಪಡೆದಿದೆ.
ಕೃತಯುಗದಲ್ಲಿ ಕೌಮುದೀಯಾಗಿದ್ದ ಬನವಾಸಿ, ತ್ರೇತೆಯಲ್ಲಿ ಚೈದಲೀಪುರವಾಯಿತು. ಜಯಂತೀಪುರವೆಂದು ದ್ವಾಪರದಲ್ಲಿ ಕರೆಯಲ್ಪಟ್ಟ ಬನವಾಸಿ ಕಲಿಯುಗದಲ್ಲಿ ವೈಜಯಂತಿಯಾಗಿ ವನವಾಸಿಯಾಗಿ ಮುಂದೆ ಕನ್ನಡದ ನೆಲದಲ್ಲಿ ಬನವಾಸಿಯಾಯಿತು. ಹೀಗೆ ಅತ್ಯಂತ ಪ್ರಾಚೀನ ಕಾಲದಲ್ಲಿಯೂ ಯುಗಾಂತರಗಳಲ್ಲಿಯೂ ಇದು ರಾಜಧಾನಿಯಾಗಿ ಮೆರೆದ ಊರು.

ಮಯೂರವರ್ಮನ ವಿಷಮ ದೇಶ ಪ್ರಯಾಣ - 3


“ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಮ್ “ ಇದು ವಶಿಷ್ಠನಿಂದ ವಿಶ್ವಾಮಿತ್ರನು ತನ್ನ ಪೂರ್ವಾಶ್ರಮದಲ್ಲಿ ಕಾಮಧೇನುವನ್ನು ಪಡೆದುಕೊಳ್ಳಲು ಆಗದಿರುವಾಗ ಹೇಳುವ ನುಡಿ. ಆದರೆ ಇಲ್ಲಿ ಇತಿಹಾಸದಲ್ಲಿ ಕದಂಬರ ಮಯೂರಶರ್ಮನು ವರ್ಮನಾಗಿ ಬದಲಾದಾಗ ಈ ಮಾತು ಆತನಿಗೂ ಅನ್ವಯಿಸುತ್ತದೆ. ವಿಶ್ವಾಮಿತ್ರ ಕ್ಷತ್ರಿಯನಾಗಿ ನಂತರ ಬ್ರಹ್ಮರ್ಷಿಯಾದ ಆದರೆ ಇಲ್ಲಿ ಬ್ರಹ್ಮ ತೇಜಸ್ಸನ್ನು ಪಡೆದ ಮಯೂರ ಕ್ಷತ್ರಿಯ ತೇಜಸ್ಸನ್ನು ಪಡೆದ. 
ತನ್ನ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳಲಿಕ್ಕಾಗಿ ತ್ರಿಪರ್ವತದ ಸುತ್ತಲಿನ ಪಲ್ಲವರ ಸಾಮಂತರನ್ನು ಓಡಿಸಿದ ಮಯೂರ ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಳ್ಳುತ್ತಾ ಸಾಗಿದ. ಈತ ಒಂದು ಕಡೆಯಿಂದ ಸೈನ್ಯವನ್ನು ಕಟ್ಟಿ ತನ್ನ ಕೇಂದ್ರವನ್ನು ತನ್ನ ಪ್ರತಿಜ್ಞೆಯನ್ನು ತೀರಿಸಿಕೊಳ್ಳುವ ಹಂಬಲಕ್ಕಾಗಿ ಇರಿಸಿದ.

ಸ್ವಪ್ರತಿಜ್ಞಾ ಪಾರಣೋತ್ಥಾನ ಲಘುಭೀ ಕೃತಾರ್ಥೈಶ್ಚ ಚೇಷ್ಟಿತೈಃ |
ಭೂಷಣೈರಿವಾ ಬಭೌ ಬಲವದ್ಯಾತ್ರಾಸಮುತ್ಥಾಪನೇನ ಚ || 16 ||

ತನ್ನ ವೈರಿಗಳ ಪ್ರದೇಶಕ್ಕೆ ತೆರಳಿ ಅಲ್ಲಿ ಹಿಂದಿನ ಮಯೂರನಾಗಿರದೇ ರಾಜನಾಗಿರುವ ಮಯೂರನಾಗಿ ವಿಜಯಶಾಲಿಯಾಗಿ ಬರಬೇಕು ಎನ್ನುವುದು ಮಯೂರನ ಹಂಬಲವಾಗಿತ್ತು. ಅತ್ಯಂತ ಉತ್ಸಾಹ ಭರಿತ ಸೈನ್ಯವನ್ನು ಕಟ್ಟಿ ಬೆಳೆಸಿ ಅವರಲ್ಲಿ ಸ್ವಾಭಿಮಾನವನ್ನು ತುಂಬಿ ಪಲ್ಲವರ ಕಾಂಚಿಯನ್ನು ಜಯಿಸಲಿಕ್ಕಾಗಿ ಮತ್ತು ಪಲ್ಲವರಿಗೆ ತಕ್ಕ ಪಾಠ ಕಲಿಸಲಿಕ್ಕಾಗಿ ಹೊರಟ.

ಅಭಿ ಯುಯುಕ್ಷಯಾಗತೇಷು ಭೃಶಂ ಕಾಂಚೀ ನರೇಂದ್ರೇಷ್ವರಾತಿಷು |
ವಿಷಮದೇಶ ಪ್ರಯಾಣ ಸಂವೇಶ ರಜನೀಷ್ವವಸ್ಕಂದ ಭೂಮಿಷು || 17 ||

ಭೂಮಿಗೆ ಇಳಿದು ಬಂದ ಚಂದ್ರನಂತೆ ಪ್ರಕಾಶಮಾನನಾದ ಮಯೂರ ವಿಷಮ ದೇಶ ಪ್ರಯಾಣ ಎನ್ನುವುದಾಗಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಮಯೂರನ ಸೇನೆ ಸಾಮಾನ್ಯದ ಸೇನೆ ಆಗಿರಲಿಲ್ಲ ಅದೊಂದು ಸಾಗರದಂತೆ ಕಂಗೊಳಿಸುತ್ತಿತ್ತು. ಅತ್ಯಂತ ಉತ್ಸಾಹ ಭರಿತ ಸೇನೆ ಬಲಶಾಲಿಯಾಗಿಯೂ ಗಿಡುಗ ಆಕಾರದಲ್ಲಿದ್ದು ಆ ಸೇನೆಯನ್ನು ಶತ್ರು ಸೈನ ಬಿಡಿಸಿಕೊಳ್ಳಲು ಸಾಧ್ಯವಾಗದಂತೆ ನಿರ್ಮಿಸಲಾಗಿತ್ತು ಅದನ್ನೇ ಶಾಸನ ವಾಕ್ಯದಲ್ಲೂ ಶ್ಯೇನವತ್ತದಾ ಎಂದು ಉಲ್ಲೇಖಿಸಿದ್ದು.

ಪ್ರಾಪ್ಯ ಸೇನಾ ಸಾಗರಂ ತೇಷಾಂ ಪ್ರಾಹನ್ ಬಲೀ ಶ್ಯೇನವತ್ತದಾ |
ಆಪದಂತಾಂಧಾರಯಾಮಾಸ ಭುಜ ಖಡ್ಗ ಮಾಂತ್ರ ವ್ಯುಪಾಶ್ರಯಃ || 18 ||

ತನ್ನ ಪ್ರತಿಜ್ಞೆಯನ್ನು ಸಾಕಾರಗೊಳಿಸಿಕೊಳ್ಳಲು ಬಲಿಷ್ಠವಾದ ಮತ್ತು ವೈರಿಗಳಿಂದ ಸುಲಭದಲ್ಲಿ ಬಿಡಿಸಿಕೊಳ್ಳಲು ಸಾಧ್ಯವಾಗದಂತಹ ವೈಹವನ್ನು ರಚಿಸಿಕೊಂಡ ಮಯೂರ ವಿಷಮ ದೇಶವನ್ನು ಪ್ರವೇಶಿಸಿದ್ದಾನೆ. ವೈರಿಗಳಲ್ಲಿ ನಡುಕ ಹುಟ್ಟಿಸಿ ಕಾಮೋಡದಂತೆರಗಿ ಅವರಲ್ಲಿ ಭಯದ ವಾತಾವರಣ ಹುಟ್ಟಿಸಿದ್ದಾನೆ.


Friday 13 October 2017

ಕುಶ ಸಮಿತ್ತು ಸೃಕ್ ಆಜ್ಯ ಚರುಗಳನ್ನು ಹಿಡಿಯ ಬೇಕಿದ್ದ ಕೈಯಲ್ಲಿ "ಉದ್ವವರ್ಹ ದೀಪ್ತಿಮಚ್ಛಸ್ತ್ರಂ" ಧಾರಿ ಮಯೂರ - 2

ಭಾರತದ ಇತಿಹಾಸವೇ ಹಾಗೇ. ಇಲ್ಲಿನ ಅನೇಕ ರಾಜರು ರಾಜ ವಂಶಸ್ಥರು ಅಧ್ಯಯನ ಶೀಲರಾಗಿದ್ದರು, ಸಾಹಿತ್ಯದ ಆರಾಧಕರು ಪೋಷಕರು ಆಗಿದ್ದರು. ಇದು ಸಧ್ಯದ ವಿಷಯವಲ್ಲ ತಲತಲಾಂತರಗಳಿಂದಲೂ ನಡೆದು ಬಂದದ್ದು ಅದಕ್ಕೇ ಅಲ್ಲವೇ ನಮಗೆ ಈ ಕೆಳಗಿನ ಶ್ಲೋಕ ಉತ್ತಮ ಉದಾಹರಣೆಯಾಗಿ ದೊರಕುವುದು.

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ನಾಲ್ಕು ವೇದಗಳನ್ನು ಕಲಿತು ಕಂಠಸ್ಥನಾಗಿ ಅಧ್ಯಯನ ಮಾಡಿಕೊಂಡಿದ್ದೇನೆ ವೇದ ವೇದಾಂಗಗಳ ಸಂಪೂರ್ಣ ಜ್ಞಾನ ನನ್ನಲ್ಲಿದೆ ಅದೇ ರೀತಿ ಶರ ಹಿಡಿದು ಯುದ್ಧ ಮಾಡುವ ಧನುರ್ವೇದವನ್ನೂ ಕಲಿತಿದ್ದೇನೆ ನನ್ನ ಬೆನ್ನ ಮೇಲೆ ಬಾಣದೊಂದಿಗೆ ಬಿಲ್ಲಿದೆ, ನಾನು ಯುದ್ಧಕ್ಕೂ ಸಿದ್ಧನಿದ್ದೇನೆ, ಸಾಮರ್ಥ್ಯವೂ ಇದೆ,ಇಲ್ಲಿ ಬ್ರಹ್ಮ ತೇಜಸ್ಸು ನನ್ನ ಮುಖದಲ್ಲಿದ್ದರೆ ಹಾಗೂ ಕ್ಷಾತ್ರತೇಜಸ್ಸು ಇಡೀ ದೇಹದಲ್ಲಿದೆ ನಾನು ಸಂಸ್ಕಾರವಂತನೂ ಹೌದು ಪರಾಕ್ರಮಿಯೂ ಹೌದು. ಎನ್ನುವ ಚಿತ್ರಣ ಈ ಒಂದು ಶ್ಲೋಕ ನಮಗೆ ನೀಡುತ್ತದೆ. ಪುರಾಣದ ಪರಶುರಾಮ ಇದಕ್ಕೆ ನಮಗೆ ಉತ್ತಮ ಉದಾಹರಣೆಯಾಗಿ ದೊರಕಬಲ್ಲ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಕಂಚಿಯ ಪಲ್ಲವರಿಂದ ಅವಮಾನಿತನಾದ ಕದಂಬ ವಂಶದ ದೊರೆ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತ ನಾಗಿದ್ದ (ಪಲ್ಲವರ ಅಶ್ವಮೇಧಕ್ಕಾಗಿ ಕಟ್ಟಿದ ಕುದುರೆಯಿಂದ ಆದ ಕಲಹ) ಮಯೂರ ಸಾಕ್ಷಾತ್ ಪರಶುರಾಮನಂತೆ ಆಗಿದ್ದ.

"ಕುಶ ಸಮಿತ್ಸ್ರುಗಾಜ್ಯ ಚರುಗ್ರಹಣಾದಿಧಕ್ಷೇನ ಪಾಣಿನಾ |
ಉದ್ವವರ್ಹ ದೀಪ್ತಿಮಚ್ಛಸ್ತ್ರಂ ವಿಜಿಗೀಷಮಾಣೋ ವಸುನ್ಧರಾಮ್ ||"
ದರ್ಭೆ ಹಿಡಿದು ಆಜ್ಯ ಮತ್ತು ಚರುಗಳಿಂದ ಹೋಮ ಹವನಗಳನ್ನು ಮಾಡಬೇಕಿದ್ದ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಭೂಮಿಯನ್ನು ಆಳಲು ಹೊರಟ ಎನ್ನುವುದಾಗಿ ತಾಳಗುಂದದ ಸ್ತಂಭ ಶಾಸನದ ೫ನೇ ಸಾಲಿನಲ್ಲಿ 13ನೇ ಶ್ಲೋಕದಲ್ಲಿ ಹೇಳಲ್ಪಡುತ್ತದೆ. ಕಂಚಿಯಿಂದ ಹೊರಟ ಮಯೂರ ಧನುರ್ವೇದಿಯಾಗಿ ಶ್ರೀಪರ್ವತ ಅಥವಾ ತ್ರಿಪರ್ವತದ ದಟ್ಟ ಕಾಡಿನಲ್ಲಿ ಪ್ರವೇಶಿಸಿ ಅಲ್ಲಿನ ಮೂಲ ನಿವಾಸಿಗಳ ಪಡೆಯನ್ನು ಕಟ್ಟಿ ಬ್ರಹದ್ಬಾಣರೇ ಮೊದಲಾದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ಎನ್ನುವುದಾಗಿ ಅದೇ ಸಾಲಿನಲ್ಲಿ ಹೇಳಲಾಗಿದೆ. ಉಪಾಯದಿಂದ ಪಲ್ಲವರ ಕೈಗೆ ಎಲ್ಲಿಯೂ ಸಿಕ್ಕಿ ಹಾಕಕೊಳ್ಳದೇ ಪರ್ವತದ ಸುತ್ತಲಿನ ಪಲ್ಲವರ ಸಾಮಂತ ದೊರೆಗಳಾದ ಆಂಧ್ರಪಾಲರನ್ನು ಅಲ್ಲಿಂದ ಓಡಿಸಿ ಆ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಂಡು ಮಯೂರ ಬಲಿಷ್ಠನಾಗುತ್ತ ಬಂದ.
ಯೋಂತಪಾಲಾನ್ ಪಲ್ಲವೇಂದ್ರಾಣಾಂ ಸಹಸಾ ವಿನಿರ್ಜ್ಜಿತ್ಯ ಸಂಯುಗೇ |
ಅದ್ಧ್ಯುವಾಸ ದುರ್ಗ್ಗಮಾಮಟವೀಂ ಶ್ರೀ ಪರ್ವ್ವತ ದ್ವಾರ ಸಂಶ್ರಿತಾಮ್ ||

ಆದದೇಕರದ್ಬೃಹದ್ಬಾಣ ಪ್ರಮುಖಾದ್ವಹೂನ್ ರಾಜ ಮಂಡಲಾತ್ |
ಏವಮೇಭಿಱ್ಪಲ್ಲವೇಂದ್ರಾಣಾಂ ಭ್ರುಕುಟೀ ಸಮುತ್ಪತ್ತಿ ಕಾರಣೈಃ ||



ಎನ್ನುವುದಾಗಿ 14 - 15 ನೇ ಶ್ಲೋಕದಲ್ಲಿ ಹೇಳಲಾಗಿದೆ. ಒಂದು ವೇಳೆ ಪಲ್ಲವರಿಂದ ಅಪಹಾಸ್ಯಕ್ಕೆ ಗುರಿಯಾಗದೇ ವೇದಾಧ್ಯಯನ ಶೀಲನಾಗಿ ಮಯೂರ ನಮಗೆ ದೊರಕಿದ್ದರೆ ಕರ್ನಾಟಕದ ಪಾಲಿಗೆ ಅನ್ಯಾಯವಾಗುತ್ತಿತ್ತು ಅನ್ನಿಸುತ್ತದೆ. ನಮ್ಮ ನೆಲಕ್ಕೆ ಶಾಪಾದಪಿ ಶರಾದಪಿ ಸಾಮರ್ಥ್ಯ ಹೊಂದಿದ ರಾಜನೊಬ್ಬನ ಅಥವಾ ರಾಜ ವಂಶ ಸಿಗುತ್ತಿರಲಿಲ್ಲ.

Monday 9 October 2017

ಮಯೂರಶರ್ಮನ - ತಾಳಗುಂದ - ಗುಡ್ನಾಪುರ - 1

ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿರುವ ಸ್ತಂಭಶಾಸನವು ಕದಂಬರ ಕುರಿತಾಗಿ ಹಾಗೂ ಮಯೂರ ವರ್ಮನ ಕುರಿತಾಗಿ ಕೆಲವು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಮಯೂರನ ಕುರಿತಾಗಿಯೇ ಕೆಲವು ವಿಚಾರ ತಿಳಿಸುವ ಇನ್ನೊಂದು ಶಾಸನವೆಂದರೆ ಅದು ಗುಡ್ನಾಪುರ ಶಾಸನ. ವೇದ ವಿದ್ಯಾ ಪಾರಂಗತ ಎನ್ನುವುದನ್ನು ಎರಡೂ ಶಾಸನಗಳು ಬಿಂಬಿಸುತ್ತವೆ, ಒಮ್ಮೆ ಮಯೂರ ಶರ್ಮನು ತನ್ನ ಅಜ್ಜ ವೀರ ಶರ್ಮಜೊತೆಗೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯ ಘಟಿಕಾಸ್ಥಾನಕ್ಕೆ** ತೆರಳಿದ್ದ ಎಂದು ಶಾಸನದ ನಾಲ್ಕನೇ ಸಾಲು ೯ನೇ ಶ್ಲೋಕದಿಂದ ತಿಳಿದು ಬರುತ್ತದೆ. ಅಲ್ಲಿ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರ ಶರ್ಮನನ್ನು ಪಲ್ಲವರ ರಾಜ ಶಿವಸ್ಕಂದವರ್ಮನು ಸುಮಾರು ೩೪೫ ರಿಂದ ೩೫೫ ರ ಸಮಯದಲ್ಲಿ ಅಶ್ವಮೇಧ ಯಾಗವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಂಚಿಯಲ್ಲಿ ಆ ಸಂದರ್ಭದಲ್ಲಿ ನಡೆದ ಜಗಳ ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಅಪಮಾನಿತನಾದ. ಆದರೆ ಮಯೂರ ಅದನ್ನು ಅಲ್ಲಿನ ಆಳರಸರಲ್ಲಿ ತನ್ನ ದೂರನ್ನು ನಿವೇದಿಸಿಕೊಂಡರೂ ಸಹ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವಮಾನವನ್ನು ಅನುಭವಿಸಿದ. ಇವುಗಳಿಂದ ಸಹಜವಾಗಿಯೇ ಆತ ಸಿಟ್ಟಿಗೆದ್ದು ಕಂಚಿಯ ಪಲ್ಲವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ. ಶಸ್ತ್ರ ವಿದ್ಯೆಯನ್ನು ಕಲಿಯಲು ಆರಂಭಿಸಿದ ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನಲ್ಲಿ ೧೧ನೇ ಶ್ಲೋಕದಲ್ಲಿ
"ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ |
ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾ ವಿಪ್ರತಃ ||"
ಎಂದು ಹೇಳಲಾಗಿದೆ. ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನ ಶರ್ಮ ಅಭಿದಾನವನ್ನು ತೊರೆದು ಕ್ಷತ್ರಿಯರ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯರ ಸೂಚಕ ಅಭಿದಾನವಾದ ವರ್ಮನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ. ೫ನೇ ಸಾಲಿನ ೧೪ನೇ ಶ್ಲೋಕದಲ್ಲಿ ಮಯೂರ ವರ್ಮನು ಶ್ರೀಪರ್ವತದ್ವಾರಾ ಸಂಶ್ರಿತಾಮ್ ಎಂದು ಉಲ್ಲೇಖಗೊಂಡಿದೆ. ಶ್ರೀ ಶೈಲದ ದಟ್ಟಕಾಡಿನಲ್ಲಿ ಗುಡ್ದಗಾಡಿನ ಜನರಿಂದ ಸೇರಿದ ಸೇನೆ ಕಟ್ಟಿದ ಎನ್ನುವುದು ತಿಳಿದು ಬರುತ್ತದೆ.
**ಘಟಿಕಾ ಸ್ಥಾನ ಎಂದರೆ ವೇದಾಧ್ಯಯನದ ಕೇಂದ್ರ.

Sunday 1 October 2017

ಆರ್ಯೋಹಮೀಶ್ವರಃ ಸ್ತೋಮಾನಾಮರ್ಯ ಸ್ತ್ವಮಸೀತಿ ವಾ

ಪ್ರತತ್ತೇ ಅದ್ಯ ಶಿಪಿವಿಷ್ಟ ನಾಮಾರ್ಯಃ ಶಂ ಸಾಮಿ ವಯುನಾನಿ ವಿದ್ವಾನ್ |
ತಂ ತ್ವಾ ಗೃಣಾಮಿ ತವ ಸಮತವ್ಯಾನ್ ಕ್ಷಯಂ ತಮಸ್ಯ ರಜಸಃ ಪರಾಕೇ || ಋಗ್ವೇದ ಸಂಹಿತಾ ೭ : ೧೦೦ : ೫

ಈ ಋಕ್ಕನ್ನು ಗಮನಿಸಿದರೆ ಆರ್ಯೋಹಮೀಶ್ವರಃ ಸ್ತೋಮಾನಾಮರ್ಯ ಸ್ತ್ವಮಸೀತಿ ವಾ ಎನ್ನುವುದಾಗಿ ನಿರುಕ ೫: ೯ ರಲ್ಲಿ ಆರ್ಯ ಪದವನ್ನು ಉದಾಹರಿಸಿದ ವೃತ್ತಿಕಾರರು ಯಸ್ಮಾದರ್ಯೋಹಮಸ್ಮಿ ಈಶ್ವರಃ ಸ್ತುತೀನಾಮುದೀರಣೇ ಯುಷ್ಮದ್ಗುಣಾಭಿಜ್ಞಃ ಅಥವಾ ಅರ್ಯಸ್ತ್ವಮಸಿ ಅರ್ಯ ಈಶ್ವರಃ ಮದನುಗ್ರಹಾಯ ಸಮರ್ಥಃ | ಸ್ತುತಿ ಮಾಡಲು ನಿನ್ನ ಗುಣಗಳನ್ನೂ ನಾನು ತಿಳಿಯಲು ಸಮರ್ಥನಾಗಿರುವೆನು. ಅಥವಾ ಅನುಗ್ರಹಿಸಲು ನೀನು ಸಮರ್ಥನಾಗಿದ್ದಿಯೇ ಎಂದೂ ಆರ್ಯ ಶಬ್ದವು ಉಪಯೋಗಿಸಲ್ಪಡುತ್ತದೆ.ಪೂಜ್ಯ ಎನ್ನುವ ಅರ್ಥವನ್ನೂ ಸಹ ಅನೇಕ ಕಡೆಗಲಲ್ಲಿ ಧ್ವನಿಸುತ್ತದೆ.
ಪೃಥೂ ರಥೋ ದಕ್ಷಿಣಾಯಾ ಅಯೋಜ್ಯೈನಂ ದೇವಾಸೋ ಅಮೃತಾಸೋ ಅಸ್ಥುಃ |
ಕೃಷ್ಣಾದುದಸ್ಥಾದರ್ಯಾ ವಿಹಾಯಾಶ್ಚಿಕಿತ್ಸಂತೀ ಮಾನುಷಾಯ ಕ್ಷಯಾಯ || ಋಗ್ವೇದ ಸಂಹಿತಾ ೧ : ೧೨೩ : ೧

ಎನ್ನುವ ಈ ಋಕ್ಕಿನಲ್ಲಿ ಉಷೋದೇವತೆಯ ಗುಣಗಳನ್ನು ವರ್ಣಿಸುತ್ತಾ ಅರ್ಯಾ ಎನ್ನುವ ವಿಷೇಷಣವನ್ನು ಬಳಸಲಾಗಿದೆ, ಇಲ್ಲಿ ಈ ಅರ್ಯಾ ಎನ್ನುವುದು ಗೌರವ ಸೂಚಕವಾದ ಪದವೇ ಹೊರತು ಬೇರಿನ್ನಾವುದೂ ಅಲ್ಲ. ಸಾಯಣರು ಸಹ ಪೂಜ್ಯ ಅಥವಾ ಅನುಗ್ರಹಿಸಲು ಸಮರ್ಥನಾದವನು ಎಂದೇ ಹೇಳಿದ್ದಾರೆ.

ಅರ್ಯಾ ಎನ್ನುವುದು ಈರಯಿತಾ ಸ್ತುತೇಶ್ವರೀಶ್ವರೋ ವಾ; ಸ್ತುತಿ ಪ್ರೇರಕ ಅಥವಾ ಸ್ತುತಿ ನಿರ್ಮಾಣಕ್ಕೆ ಈಶ್ವರ ಅಥವಾ ಅಧಿಕಾರ ಉಳ್ಳವನು ಎನ್ನುವ ಅರ್ಥ ಕೊಡಲಾಗಿದೆ. ಹೋತೃವನ್ನು ಈ ವಿಶೇಷಣದ ಮೂಲಕ ಗೌರವಿಸಲಾಗುತ್ತದೆ.




ಹೀಗೇ ಆರ್ಯ ಪದವು ಗೌರವ ಸೂಚಕ ಪದವೆನ್ನುವ ಅಭಿಪ್ರಾಯ ವೇದದಲ್ಲಿದೆ ಅನ್ನುವುದನ್ನು ಸಾಯಣರು ಹೇಳುತ್ತಾರೆ. ಆದರೆ ದ್ರಾವಿಡ ?? ಜನಾಂಗವನ್ನು ಆರ್ಯ ಎನ್ನುವ ಪದ ಬಿಂಬಿಸುವುದಿಲ್ಲ.