Search This Blog

Wednesday 31 May 2017

ಉಚ್ಚಂಗಿ -ಉಚ್ಚೃಂಗಿ - ಉತ್ ಶೃಂಗಿ - ಉಚ್ಚಶೃಂಗಿ


ಇದು ಹರಪನಹಳ್ಳಿ ತಾಲೂಕಿನ(*ಬಳ್ಳಾರಿ ಜಿಲ್ಲೆ ಎಂದು ಎಸ್ ಐ ಐ ನಲ್ಲಿದೆ) ಉಚ್ಚಂಗಿ ದುರ್ಗ. ಚಾಳುಕ್ಯ ಒಂದನೇ ಸೋಮೇಶ್ವರನ ೧೦೬೪ನೆಯ ಇಸವಿಯ ಶಾಸನ. ಉಚ್ಚಂಗಿಯ ತಾವಕೇಶ್ವರ ಸ್ವಾಮಿ ದೇವಾಲಯದಲ್ಲಿರುವ ಕಲ್ಲಿನ ಶಾಸನ.

ಕದಂಬಾವಾಡಿ ನಾಡ ಮಧ್ಯದೊಳ್ಮೇರುವಿಪ್ಪಂತಿಳ್ದುದುಚ್ಚಂಗಿಯ ಪರ್ವ್ವತಂ ಅದಕ್ಕೆ ನಾಲ್ಕು ನಾಮವದೆಂ
ತೆಂದೊಡೆ ಕೃತಯುಗದೊಳು ಮೇ[ಘನಾ]ದನೆಂಬ ರಾಕ್ಷಸ ನಿವಾಸಮಪ್ಪುದರಿಂ ಮೇಘನಾ
ದವೆಂಬುದು ತ್ರೇತೆಯೊಳ್ ಹಿರಣ್ಯಕನಿವಾಸ ಮಾತನ ನಾರಾಯಣಂ ವಧೆಗೆಯ್ದಂದಿನೊಸ
ಗೆಯೊಳ್ ಸ್ವರ್ಣ್ನ ವ್ರಿಷ್ಟಿ ಕರೆದುದರಿಂ ವೀರ ಕನಕಗಿರಿಯೆಂಬುದು ದ್ವಾಪರದೊಳುತ್ತುಂಗ ಮ
ಹರಿಷಿ ಆಶ್ರಮಮಪ್ಪುದರಿಂ ಉತ್ತುಂಗಪರ್ವ್ವತಮೆಂಬುದು ಕಲಿಯುಗದೊಳ್ ಉಚ್ಚಂಗಿಯ
ಬ್ಬೆಯೆಂಬಳು ಮೊದಲಾಗಿ ಮೂವರು ಬ್ರಾಹ್ಮಣ ಕನ್ನಿಕೆಯರು ತಪಂ ಗೆಯ್ದೀಶ್ವರವರ
ಪ್ರಸಾದದಿಂ ದೇವತ್ವಮಂ ಪಡೆದರ್ದರಿಂದುಚ್ಚಂಗಿಯಾ ಪರ್ವ್ವತಮೆಂಬುದು (೨೧ ನೇ ಸಾಲಿನಿಂದ ೨೬ನೇ ಸಾಲಿನ ವರೆಗೆ)
ಇದೊಂದು ಗದ್ಯ ಶಾಸನ ಉಚ್ಚಂಗಿಯ ಪರಿಸರದ ಚಿತ್ರಣವನ್ನು ನೀಡಲಾಗಿದೆ. ಉಚ್ಚಂಗಿಯ ಪರ್ವತಕ್ಕೆ ನಾಲ್ಕು ಯುಗಗಳಲ್ಲಿ ನಾಲ್ಕು ಹೆಸರುಗಳು ಹೇಗೆ ಉಂಟಾದವು ಎನ್ನುವುದಕ್ಕೆ ಆಯಾಯ ಯುಗದ ಉದಾಹರಣೆಯೊಂದಿಗೆ ವಿವರಿಸಲಾಗಿದೆ. ಕೃತಯುಗದಲ್ಲಿ ಮೇಘನಾದನೆನ್ನುವ ರಾಕ್ಷಸನಿದ್ದುದರಿಂದ ಮೇಘನಾದ ಎಂದು ಹೆಸರಾಗಿತ್ತು. ತ್ರೇತಾಯುಗದಲ್ಲಿ ಹಿರಣ್ಯಕ ನೆನ್ನುವವನಿದ್ದ ಅವನನ್ನು ಶ್ರೀಹರಿ ಕೊಂದುದರಿಂದ ಮತ್ತು ಆಮೇಲೆ ಸ್ವರ್ಣ ವೃಷ್ಟಿ ಆಗಿದ್ದರಿಂದ ಕನಕಗಿರಿ ಎಂದು ಹೆಸರಾಗಿತ್ತು. ದ್ವಾಪರದಲ್ಲಿ ಉತ್ತುಂಗನೆನ್ನುವ ಮಹರ್ಷಿ ಇಲ್ಲಿ ಆಶ್ರಮ ಕಟ್ಟಿಕೊಂಡು ತಪಸ್ಸನಾಚರಿಸಿದ್ದರಿಂದ ಉತ್ತುಂಗ ಪರ್ವತ ಎಂದೂ ಹಾಗೂ ಕಲಿಯುಗದಲ್ಲಿ ಉಚ್ಚಂಗಿಯೇ ಮೊದಲಾದ ಮೂವರು ಬ್ರಾಹ್ಮಣ ಕನ್ಯೆಯರು ಶಿವನನ್ನು ತಪಸ್ಸಿನಲ್ಲಿ ಮೆಚ್ಚಿಸಿಕೊಂಡು ದೇವತ್ವವನ್ನು ಪಡೆದುದರಿಂದ ಉಚ್ಚಂಗಿ ಪರ್ವತ ಎಂದು ಹೆಸರಾಯಿತು ಎನ್ನುವ ವರ್ಣನೆ ಇದೆ.
ಹಿಡಿಂಬವನ ಅಥವಾ ಹಿಡಿಂಬೇಶ್ವರ

ಆ ಪರ್ವ್ವತದ ಮೂಡಣ ದೆಸೆಯೊಳು ಹಿಡಿಂಬವನಮಾ ಬನದೊಳಗೆ ಸ್ವಯಂಭು ಕಲಿದೇವಸ್ವಾಮಿ ಎಂಬುದು . . . ಹೀಗೆ ಈ ಶಾಸನ ಮುಂದುವರೆಯುತ್ತದೆ. ಈ ಉಚ್ಚಂಗಿ ಪರ್ವತದ ಪೂರ್ವದಿಕ್ಕಿನಲ್ಲಿ "ಸ್ವಯಂಭೂ ಕಲಿದೇವಸ್ವಾಮಿಗೆ" ಹಿಡಿಂಬೆಯು ದೇವಾಲಯವನ್ನು ನಿರ್ಮಿಸಿದುದರಿಂದ "ಹಿಡಿಂಬೇಶ್ವರ" ಎಂದೂ ಆ ಲಿಂಗವು ಚಂದ್ರ ಕಳೆಯಂತೆ ಬೆಳೆಯುತ್ತಿದ್ದುದರಿಂದ ಕಳಸೇಶ್ವರ - ಅಮೃತಲಿಂಗ ಎಂದು ಹೆಸರಾಯಿತು. ದಣ್ಡನಾಯಕ ದೇವಪ್ಪಯ್ಯನು ಈ ಉಚ್ಚಂಗಿ ೩೦ ನ್ನು ಆಳುತ್ತಿದ್ದಾಗ ಇದಕ್ಕೆ ಅಧಿಷ್ಠಾನ ಮಂಟಪ ಮಠ ಬಾವಿಗಳನ್ನು ತೋಡಿಸಿದ ಬಗ್ಗೆ ಉಲ್ಲೇಕ ಇದೆ. ಈ ಶಾಸನದ ವ್ಯಾಕರಣ ಅಂಶವನ್ನು ಗಮನಿಸಿದರೆ ಉತ್ತುಂಗ ಎನ್ನುವುದೇ ಕನ್ನಡದಲ್ಲಿ ಉಚ್ಚಂಗಿಯಾಗಿದ್ದು ತಿಳಿದು ಬರುತ್ತದೆ. ಆಮೇಲೆ ಉಚ್ಛೃಂಗಿ ಅಂದರೆ ಉತ್ + ಶೃಂಗಿ ಯೇ ಉಚ್ಚಶೃಂಗಿಯಾಗಿ ಉಚ್ಚಂಗಿಯಾಗಿದ್ದು ತತ್ಸಮ - ತದ್ಭವ ರೂಪಗಳ ನಿದರ್ಶನ ಸಿಗುತ್ತದೆ. 

Monday 29 May 2017

ಪರಮಾರ ವಂಶಸ್ಥ ಭೋಜರಾಜ

ಪರಮಾರ ವಂಶದ ಬಗ್ಗೆ ಉದಯಪುರ ಶಾಸನದಲ್ಲಿ ಮತ್ತು ಪದ್ಮಗುಪ್ತನನಿಂದ ಬರೆಯಲ್ಪಟ್ಟ "ಪರಿಮಳಾ" ಎನ್ನುವ ಗ್ರಂಥದ ನವಸಾಹಸಾಂಕ ಚರಿತದ ೧೧ನೇ ಸರ್ಗದಿಂದ ವಶಿಷ್ಠಕುಲ(ಗೋತ್ರ)ದವರೆಂದು ತಿಳಿದು ಬರುತ್ತದೆ. 
ಅಸ್ತ್ಯೂರ್ವಿಘ್ನಂ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಾಂಪತ್ಯ ಸಿದ್ಧೇಃ| 
ಸ್ಥಾನಂ ಚ ಜ್ಞಾನಭಾಜಾಮಭಿಮತ ಫಲದೋ ಖರ್ವಿರಃ ಸೋರ್ಬುಧಾಖ್ಯಃ || 
ವಿಶ್ವಾಮಿತ್ರ ವಶಿಷ್ಠಾದಹರತ ಬಲತೋ ಯತ್ರಗಾಂ ತತ್ಪ್ರಭಾವಾ | 
ಜ್ಞಜ್ಞೇ ವೀರೋಗ್ನಿ ಕುಂಡಾದ್ರಿಪುಬಲ ನಿಧನಂ ಯಶ್ಚ ಕಾರೈಕ ಏವಂ || 
ಮಾರಯಿತ್ವಾ ಪರಾನ್ ಧೇನು ಮಾನಿನ್ಯೇ ಸ ತತೋ ಮುನಿಃ 
ಉವಾಚ ಪರಮಾರಾಖ್ಯಃ ಪಾರ್ಥಿವೇಂದ್ರೋ ಭವಿಷ್ಯಸಿ || ಎನ್ನುವುದು ಉದಯಪುರ ಪ್ರಶಸ್ತಿ ಶಾಸನದ ವಾಕ್ಯದಿಂದಲೂ ಸಹ ವಶಿಷ್ಟಕುಲದವರು ಎನ್ನುವುದು ಗೊತ್ತಾಗುತ್ತದೆ. ಇದಲ್ಲದೇ ಭೋಜನು "ಸರಸ್ವತೀ ಕಂಠಾಭರಣ"ದ ನಾಯಕಗುಣದಲ್ಲಿ ಮಹಾಕುಲೀನತ್ವದ ಉದಾಹರಣೆಗೆ ತನ್ನ ವಂಶವನ್ನೇ ಉದಾಹರಿಸಿಕೊಂಡಿದ್ದಾನೆ. 
  
ಪರಮಾರ ವಂಶವು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಅನ್ನುವಷ್ಟು. ಆ ವಂಶಸ್ಥ ರಾಜರೆಲ್ಲರೂ ಭಾಷಾಭಿಮಾನಿಗಳೂ ಸಾಹಿತ್ಯಾಭಿಮಾನಿಗಳಾಗಿದ್ದರು ಎನ್ನುವುದು ಧರ್ ಮತ್ತು ಉದಯಪುರ ಶಾಸನಗಳಿಂದ ತಿಳಿದು ಬರುತ್ತದೆ. ಇವರ ವಂಶದ ಮುಂಜ(ವಾಕ್ಪತಿ ರಾಜ) ಸ್ವತಃ ಸಾಹಿತಿಯಾಗಿದ್ದ ಈತನ ಆಸ್ಥಾನ ಕವಿ ಧನಪಾಲ ಎನ್ನುವವನು "ತಿಲಕ ಮಂಜರಿ" ಎನ್ನುವ ಸಂಸ್ಕೃತ ಗ್ರಂಥ ರಚಿಸಿದ್ದ ಎನ್ನುವುದು ತಿಳಿದು ಬರುತ್ತದೆ. ಈತನ ತಮ್ಮನ ಮಗನೇ ಪ್ರಸಿದ್ಧನಾದ ಭೋಜರಾಜ. ಭೋಜನ ತಂದೆ ಸಿಂಧುಲ ಅಥವಾ ಸಿಂಧುರಾಜ. ಹರ್ಷನ ಮೊಮ್ಮಗ ಈತ. ಶೈವ ಪರಂಪರೆಯಲ್ಲಿ ಆಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಭೋಜ್ಪುರದ ಭೋಜೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು. ಭೋಜನಿಂದ ಬರೆಯಲ್ಪಟ್ಟ "ಯೋಗಸೂತ್ರವೃತ್ತಿ"ಯಲ್ಲಿ "ಶ್ರೀ ರಣರಂಗಮಲ್ಲ ನೃಪತೇಃ " ಎಂದಿರುವುದು ಈತನ ಬಿರುದುಗಳಲ್ಲಿ ಒಂದು.
ಭೋಜನು ಕ್ರಿ. ಶ. ೧೦೪೨ರಲ್ಲಿ "ರಾಜ ಮೃಗಾಂಕ" ಎನ್ನುವ ಖಗೋಲಶಾಸ್ತ್ರ ಗ್ರಂಥವನ್ನು ಬರೆದುದಾಗಿ ಅದರ ಪ್ರಾರಂಭಶ್ಲೋಕದಿಂದ ತಿಳಿದು ಬರುತ್ತದೆ. 
ಬಲ್ಲಾಳ ಸೇನನ "ಭೋಜ ಪ್ರಬಂಧ" ದಲ್ಲಿ ಸಿಂಧುಲನು ಭೋಜನ ತಂದೆಯಾಗಿರದೇ ಅಣ್ಣನಾಗಿದ್ದು ಅವನು ಸಾಯುವ ಸಮಯದಲ್ಲಿ ತಮ್ಮನಾದ ಮುಂಜನ ವಶಕ್ಕೆ ಚಿಕ್ಕವನಾದ ಭೋಜನನ್ನು ಒಪ್ಪಿಸಿ ರಕ್ಷಿಸ ತಕ್ಕದೆಂದು ಹೇಳಲಾಗಿದೆ. ಆದರೆ ಭೋಜನ ಆಡಳಿತದ ಆರಂಭಿಕ ಸಮಯವೇ ಗೊಂದಲವಾಗಿದ್ದು ಅದು ಭೋಜ ಪ್ರಬಂಧವನ್ನು ಇತಿಹಾಸದಿಂದ ಬೇರ್ಪಡಿಸಿ ಅದೊಂದು ಪ್ರಬಂಧವಷ್ಟೇ ಅನ್ನುವುದು ತಿಳಿದು ಬರುತ್ತದೆ.
ಭೋಜನು ಜ್ಯೋತಿಷ್ಯ, ಶಿಲ್ಪ ಶಾಸ್ತ್ರ , ಮತ್ತು ಕಾವ್ಯಗಳ ಕುರಿತಾಗಿ ಅನೇಕ ಗ್ರಂಥ ಬರೆದ ಕುರಿತು ತಿಳಿದು ಬರುತ್ತದೆ. ಶಾಸನಗಳಿಂದ ತಿಳಿದು ಬರುವ ಅನೇಕ ಗ್ರಂಥಗಳು ಈಗ ಉಪಲಬ್ದವಿರುವುದಿಲ್ಲ. 


ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಮಾಪಾತ ಮಾತ್ರ ಮಧುರೋವಿಷಯೋಪಭೋಗಃ |
ಪ್ರಾಣಸ್ತೃಣಾಗ್ರ ಜಲಬಿಂದು ಸಮಾನರಾಣಾಂ ಧರ್ಮಸ್ಸಖಾಪರಮಹೋ ಪರಲೋಕಯಾನೇ ||
ಈ ಅರಸುತನವು (ರಾಜಭೋಗ) ಧೋ ಎಂದು ಬೀಸುವ ಗಾಳಿಗೆ ಸಿಲುಕಿದ ಮೋಡಗಳ ಮಾಲೆಯಂತೆ ಕ್ಷಣಾರ್ಧದಲ್ಲಿ ಬಿದ್ದು ಕರಗಿ ಹೋಗಬಹುದು. (ಪ್ರಭುತ್ವವು ಅಸ್ಥಿರವಾದುದು). ಇಂದ್ರಿಯ ಸುಖಗಳು ಆ ಕ್ಷಣಕ್ಕೆ ರುಚಿಸತಕ್ಕವು. ನಮ್ಮ ದೇಹದಲ್ಲಿರುವ ಪ್ರಾಣವು ನೀರಿನ ಮೇಲಿರುವ ಗುಳ್ಳೆಯಂತೆ ಕ್ಷಣಿಕ. ಮೋಕ್ಷದ ಆಕಾಂಕ್ಷಿಗಳಾದ ಸಾಧಕರಿಗೆ ಪರಲೋಕದ ಸಾಧನೆಗೆ ಹೊರಟಿರುವವರಿಗೆ ಧರ್ಮವೇ ಸರ್ವಸ್ವ ಎನ್ನುವುದಾಗಿ ತನ್ನ ದಾನ ಶಾಸನ ಒಂದರಲ್ಲಿ ಹೇಳಿಕೊಂಡಿದ್ದಾನೆ. ಇವತ್ತಿಗೂ ಸಹ ಭೋಜ ಸಾಹಿತ್ಯಾಸಕ್ತರಿಗೆ ಸಾಹಿತಿಯಾಗಿ. ಶಾಸನ ಅಧ್ಯಯನ ಮಾಡುವವರಿಗೆ ವಿಸ್ಮಯ ಮತ್ತು ಬಲವಾನ್ ರಾಜನಾಗಿ ಕಂಗೊಳಿಸುತ್ತಾನೆ.  

Sunday 28 May 2017

ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ದಿನೇ ದಿನೇ - ಮರಣದ ದುಃಖವು ಕ್ಷಣಿಕವಾದದ್ದು ಮಾನವಂತರ ಮಾನಭಂಗವು ದಿನ ದಿನವೂ ಮರಣದ ದುಃಖವನ್ನು ಕೊಡುತ್ತದೆ.

ಕಪ್ಪೆ ಅರಭಟ್ಟನನ್ನು ಕನ್ನಡದ ದೇಸೀ ಛಂದಸ್ಸಾದ ತ್ರಿಪದಿಯಲ್ಲಿ ಬಣ್ಣಿಸಿದ ಶಾಸನ ಇದು. ಕನ್ನಡದ ಮೊತ್ತಮೊದಲ ತ್ರಿಪದಿ ಸಾಹಿತ್ಯವನ್ನು ಕೊಟ್ಟ ಈ ಶಾಸನ, ಸಾಹಿತಿಗಳಿಗೆ ಸಾಹಿತ್ಯವನ್ನು ಹಾಗೂ ಜಿಜ್ಞಾಸುಗಳಿಗೆ ವಿಷಯವನ್ನು ಕೊಡುತ್ತದೆ. ಈ ತ್ರಿಪದಿಯನ್ನು ಗಮನಿಸಿದರೆ ಇದಕ್ಕೂ ಅಂದರೆ ಕ್ರಿ ಶ ೮ನೇ ಶತಮಾನಕ್ಕೂ ಮೊದಲೇ ತ್ರಿಪದಿ ಛಂದಸ್ಸು ರೂಪು ಪಡೆದಾಗಿತ್ತು ಅನ್ನಿಸುತ್ತದೆ. ಈ ಶಾಸನದಲ್ಲಿ ಎಲ್ಲಿಯೂ ಪ್ರಥಮಾ ವಿಭಕ್ತಿಯ ರೂಪಗಳು ವ್ಯತ್ಯಾಸವಾಗದೇ "ಕೆಟ್ಟರ್" "ಸತ್ತರ್" ಇಂತಹ ರೂಪಗಳೇ ಕಂಡು ಬರುತ್ತವೆ. "ಪ್ರಿಯನ್" "ಭಟ್ಟನ್" ಮುಂತಾದ ಷಷ್ಟೀ ವಿಭಕ್ತಿ ಪ್ರಯೋಗವು ಕೂಡ ಅದೇ ರೀತಿಯಾಗಿ ಇವೆ. ಈ ಶಾಸನದ ಅರ್ಥವನ್ನು ಗಮನಿಸಿದರೆ
ಕಪ್ಪೆ ಅರಭಟನು ಶಿಷ್ಟಜನರಿಗೆ(ಸಜ್ಜನರಿಗೆ) ಪ್ರೀತಿಪಾತ್ರನು, ದುರ್ಜನರಿಂದ ದೂರವಿರುವವನು. ಗುಣಗಳಲ್ಲಿ ಆತ ಮಹಾ ಶೂರ (ಕಲಿ) ಮತ್ತು ಕಲಿಯುಗದ ಗುಣಧರ್ಮಕ್ಕೆ ಅತೀತನಾಗಿರವವನು. ವಿಶೇಷ ತೇಜಸುಳ್ಳವರ ಪಾಲಿಗೆ ಮರಣ ಅನ್ನುವುದು ಮರಣವೇ ಅಲ್ಲ. ಮಾನವಂತರನ್ನು ಕೊಲ್ಲಲಾಗದು. ಮರಣದಿಂದ ಬರುವ ದುಃಖ ತಾತ್ಕಾಲಿಕವಾದುದು, ಆದರೆ ಅಪಮಾನದ ವಿಷವು ದಿನವೂ ಕೊಲ್ಲುತ್ತದೆ. ಈತನು ಸಾಧುಜನರಿಗೆ (ಸಾತ್ವಿಕ) ಒಳಿತನ್ನೇ ಮಾಡುತ್ತಾನೆ. ಎದುರಿಸಿ ನಿಂತ ಶತ್ರುಗಳ ಪಾಲಿಗೆ ಯಮ ಭಯಂಕರನು. ಈತನೇ ಸಾಕ್ಷಾತ್ ಮಾಧವನು (ಶ್ರೀವಿಷ್ಣುವು), ಬೇರೆಯಲ್ಲ. ಒಳಿತನ್ನೇ ಮಾಡುವವರ ಪಾಲಿಗೆ ಒಳ್ಳೆಯವನು. ಕಪ್ಪೆ ಅರಭಟನನ್ನು ಬಂಧನದಲ್ಲಿರುವ ಸಿಂಹವೆಂದು, ಅದೇನು ಮಾಡಬಹುದು ಎಂದು ಉಪೇಕ್ಷಿಸಿದರೆ, ಅವರು ಬಂಧವನ್ನು ಕಳಚಿಕೊಂಡು ಬಂದ ಸಿಂಹವನ್ನೇ ಎದುರಿಸಬೇಕಾಗುತ್ತದೆ. ಆ ವೀರನ ಮುಂದೆ ಎದುರಾಳಿಯು ಸತ್ತಂತೆಯೇ. ಕೆಟ್ಟವರು ಮತ್ತು ಸತ್ತವರು ಎಂಬ ವಿಚಾರವನ್ನು ಕೂಡಾ ಪರಿಗಣಿಸದಂತೆ ಮಾಡಬಲ್ಲವನು. ಹೀಗೆ ಈ ಶಾಸನದಲ್ಲಿ ಜನ್ಮ ಜನ್ಮಾಂತರದ ಕರ್ಮ ಬಂಧಗಳನ್ನೂ ಸಾರುತ್ತಾ ಜನರನ್ನು ಜಿಜ್ಞಾಸೆಗೆ ಹಚ್ಚುತ್ತದೆ.
ಬಾಗಲಕೋಟೆ ಜಿಲ್ಲೆ ಬಾದಾಮಿಯ ತಟ್ಟುಕೋಟೆಯ ಮಾರುತಿ ದೇವಾಲಯಕ್ಕೆ ಹೊಗುವ ದಾರಿಯಲ್ಲಿ ಎಡಬದಿಯ ಬೃಹತ್ ಬಂಡೆಯ ಮೇಲೆ ಇರುವ ಈ ಶಾಸನ ಬಾದಾಮಿಯಲ್ಲಿರುವ ಗಮನಾರ್ಹ ಶಾಸನಗಳಲ್ಲೊಂದು. ಇದರ ಕಾಲಮಾನ ಸು.8ನೇ ಶತಮಾನ.
1. ಕಪ್ಪೆ ಅರಭಟ್ಟನ್ ಶಿಷ್ಟಜನ ಪ್ರಿಯನ್
2. ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್
3. ವರನ್ತೇಜಸ್ವಿನೋ ಮೃತ್ತ್ಯುರ್ನತು ಮಾನಾವಖಣ್ಡನಮ್
4. ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ದಿನೇ ದಿನೇ
5. ಸಾಧುಗೆ ಸಾಧು ಮಾಧೂರ್ಯಂನ್ಗೆ ಮಾಧೂರ್ಯ್ಯಂ ಬಾಧಿಪ್ಪ
6. ಕಲಿಗೆ ಕಲಿಯುಗ ವಿಪರೀತನ್ಮಾಧವನೀತನ್ಪೆರನಲ್ಲ
7. ಒಳಿತ್ತ ಕೆಯ್ವೊರಾರ್ಪೊಲ್ಲದು ಮದರನ್ತೆ ಬಲ್ಲಿತ್ತು ಕಲಿಗೆ
8. ವಿಪರೀತಾ ಪುರಾಕೃತಮಿಲ್ಲಿ ಸನ್ಧಿಕ್ಕುಮದು ಬಂದು
9. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆನ್ದು ಬಿಟ್ಟವೋಲ್ಕಲಿಗೆ ವಿ

10. [ಪ]ರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಮ್




Friday 26 May 2017

ಆತಕೂರಿನ ನಾಯಿಗೆ ವೀರಗಲ್ಲು

ಆತಕೂರಿನ ಮಣಲರನ ನಾಯಿಯಮೇಲಿನ ಪ್ರೀತಿ
ಉರಿದಿದಿರಾಂತು ಬಂದ ಚೋಳರಾಜಾದಿತ್ಯನನ್ನು ಅಷ್ಟೇ ಕೆಚ್ಚೆದೆಯಿಂದ ಬಲಂಗಳನಟ್ಟಿ ತಟ್ಟಿ ಮುಟ್ಟಿ ಸೋಲಿಸಿದ ಕಾಳಗವದು. ಅಮೋಘವರ್ಷನ ಮಾಂಡಲಿಕನಾದ ಕಚ್ಚೆಗ ಕನ್ನರದೇವನು ಚೋಳರಾಜಾದಿತ್ಯನ ಮೇಲೆ ದಂಡೆತ್ತಿ ಹೋದಾಗ ಬೂತುಗ ಹಾಗೂ ಆತನ ಸೇವಕ ಮಣಾಲರನೂ ವೀರಾವೇಷದಿಂದ ಹೋರಾಡಿದರು. ಆಗ ಕನ್ನರನು ಇಬ್ಬರನ್ನು ಅತ್ಯಾದರದಿಂದ ಗೌರವಿಸಿದನು. ಬೂತುಗನೂ ಸಹ ತನ್ನ ಸೇವಕನಾದ ಮಣಾಲರನನ್ನು ಬಾಳ್ಗಳ್ಚು(ರಕ್ತ ಸಿಕ್ತ ಖಡ್ಗವನ್ನು ತೊಳೆದು ಪುರಸ್ಕರಿಸುವ ಗೌರವ) ಕೊಟ್ಟು ಗೌರವಿಸಿದನು. ಇದು ಈ ಶಾಸನದಲ್ಲಿ ಬರುವ ವಿಷಯವಾಗಿದ್ದರೆ ಇದಕ್ಕಿಂತಲೂ ಭಿನ್ನವಾದ ಇನ್ನೊಂದು ಪ್ರಸಂಗ ಬರುತ್ತದೆ. ವೀರನಾದ ಈ ಮಣಾಲರನಿಗೆ ಸಾಕು ಪ್ರಾಣಿ ಎಂದರೆ ಎಲ್ಲಿಲ್ಲದ ಅಪಾರ ಪ್ರೀತಿ. ಯುದ್ಧದಲ್ಲಿ ಗೆದ್ದು ಬಂದ ವೀರ ಮಣಾಲರನಲ್ಲಿ ಬೂತುಗನು ನಿಗೇನು ಬೇಕೋ ಅದನ್ನು ಕೇಳು ಎಂದು ಹೇಳುತ್ತಾನೆ. ಆಗ ಮಣಾಲರನು ತನಗೆ ಸಾಕುಪ್ರಾಣಿಗಳೆಂದರೆ ಇಷ್ಟ ಆದುದರಿಂದ ನನ್ನಂತೆಯೇ ವೀರತನವುಳ್ಳ 'ಕಾಳಿ' ನಾಯಿಯನ್ನು ಬೇಡಿಕೊಂಡು ಪಡೆದುಕೊಳ್ಳುತ್ತಾನೆ. ಹೀಗಿರುತ್ತಾ ಆ ನಾಯಿಯು ಒಮ್ಮೆ ದೊಡ್ದ ಹಂದಿಯೊಡನೆ ಹೋರಾಡುತ್ತದೆ ಆಗ ಹಂದಿಯನ್ನು ಕೊಂದು ತಾನೂ ಸಾಯುತ್ತದೆ. ಆಗ ಮಣಾಲರನು ಆ ನಾಯಿಯ ವೀರಾವೇಶದ ಸಾವಿನ ನೆನಪಿಗಾಗಿ ಒಂದು ವೀರಗಲ್ಲನ್ನು ನೆಟ್ಟು. ಆ ವೀರಗಲ್ಲಿನ ಪೂಜೆಗಾಗಿ ಹೊಲವನ್ನು ಉಂಬಳಿಯಾಗಿ ಬಿಡುತ್ತಾನೆ.
ಇದು ಮಂಡ್ಯ ಜಿಲ್ಲೆಯ ಆತಕೂರಿನ ಶಾಸನ ರಾಷ್ಟ್ರಕೂಟ ೩ನೆ ಕೃಷ್ಣ ಮತ್ತು ಬೂತುಗರ ಶಾಸನ. ಚಲ್ಲೇಶ್ವರ ದೇವಾಲಯದ ಮುಂದಿರುವ ಕಲ್ಲಿನಲ್ಲಿ ಬರೆಯಲಾಗಿದೆ ಇದು ಸುಮಾರು ಕ್ರಿ ಶ ೯೫೦ ನೆ ಇಸವಿಯದ್ದು.
ಸಾಕು ಪ್ರಾಣಿ ಕಾಳಿಯ ಮೇಲೆ ಪ್ರೀತಿ
ಶ್ರೀಮತ್ ಮಣಲರತ[ಂಗ]ನುವರದೊಳ್ಮೆಚ್ಚಿ ಬೇಡಿಕೊಳ್ಳೆನ್ದೊ
ಡೆ ದಯೆಯ ಮೆರೆವೊ(ಳ್) ಎಂಬ ಕಾಳಿಯಂ ದಯೆಗೆಯ್ಯೆಂದು ಕೊಣ್ಡನಾ ನಾಯ[ಂ] ಕೇಲೆ ನಾಡ ಬೆಳತೂರ ಪಡು
ವಣ ದೆಸೆಯ ಮೊದಿಯೊಳ್ಪಿರಿ[ದುಂ ಪ]ಂದಿಗೆ ವಿಟ್ಟೊಡೆ ಪಂದಿಯುಂ ನಾಯುಂ ಒಡ ಸತ್ತುವದರ್ಕ್ಕೆ
ಯತ್ತುಕೂರೊಳ್ಚಲ್ಲೇಶ್ವರದ ಮುಂದೆ ಕಲ್ಲನ್ನಡಿಸಿ ಪಿರಿಯ ಕೆರೆಯ ಕೆಳಗೆ ಮಳ್ತಿಕಾಳಂಗದೊಳಿರ್ಕ್ಕಂಡುಗ

ಣ್ನ ಕೊಟ್ಟರಾ




 ಕದನೈಕ ಶೂದ್ರಕ ......ಬೂತುಗ
ಉರಿದಿದಿರಾಂತ ಚೋಳ ಚತುರಂಗ ಬಲಂಗಳನಟ್ಟಿ ಮುಟ್ಟಿ ತಳ್ತಿರಿವೆಡೆಗೊರ್ವರಪ್ಪೊಡಂ ಇದಿರ್ಚ್ಚುವ
ಗಣ್ಡರನಾಂಪೆವೆನ್ದು ಪೊಟ್ಟಾಲಿಸುವ ಬೀ(ವೀ)ರರಂ ನೆರೆಯೆ ಕೋಣೆ(ಣ)ಮೆ ಚೋಳನೆ ಸ(ಶ)ಕ್ತಿಯಾಗೆ ತಳ್ತಿರಿದುದನಾವೆ(ಮೆ)
ಕಣ್ಡೆವೆನೆ ಮೆಚ್ಚದೊರಾ ರ್ಸ್ಸಾಗರ ತ್ರಿಣೇತ್ರಂ ನರಪತಿ ಬೆನ್ನೊಳಿಳಿದೊನಿದಿರಂತುದು ವೈರಿಸಮೂದಂ ಇಲ್ಲಿ
ಮಚ್ಚರಿಸುವರೆಲ್ಲರುಂ ಸೆರಗುವಾಳ್ದಪೊರಿಂತಿರೆರೆನ್ದು ಸಿಂಗದಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋ
ಳ[ನ] ಕೋಟೆಯೆಂಬ ಸಿಂಧುರದ ಶಿರಾಗ್ರಮಂ ಬಿರಿಯೆ ಪಾಯಿದಂ ಕದನೈಕ ಸೂ(ಶೂ)ದ್ರಕಂ 

Thursday 25 May 2017

ಏಕಾಸ್ತ್ಯೇಕಶಿಲಾಖ್ಯಾತ್ರ ನಗರೀ ಯಾ ಗರೀಯಸೀ

ಹನುಮಕೊಂಡದ ನಿರೋಷ್ಟ್ಯ ಕಾವ್ಯ ಶಾಸನವು ಕಾವ್ಯಾಲಂಕಾರ ಅಭ್ಯಾಸಿಗಳಿಗೆ ಅತ್ಯುಪಯುಕ್ತ ಸರಕನ್ನು ಕೊಡಬಲ್ಲದು, ಕಾವ್ಯಾತ್ಮಕವಾದ ಈ ಶಾಸನದಲ್ಲಿ ಅರ್ಥ ಮತ್ತು ಶಬ್ದಾಲಂಕಾರವನ್ನು ಬಳಸಲಾಗಿದೆ."ಏಕಾಸ್ತ್ಯೇಕಶಿಲಾಖ್ಯಾತ್ರ ನಗರೀ ಯಾ ಗರೀಯಸೀ " ಏಕ ಶಿಲಾ ನಗರಿ ಎಂದು ಕರೆಯಲ್ಪಡುತ್ತಿದ್ದ ಆಂಧ್ರ ದೇಶದಲ್ಲಿ ಖಂಡರಿಸಿರುವ ಶಾಸನವಿದು. ಈ ಕೆಳಗಿನ ಶ್ಲೋಕವನ್ನು ಶಬ್ದಾಲಂಕಾರವನ್ನು ಬಳಸಿ ರಚಿಸಲಾಗಿದೆ. ಪ್ರಿಯಕರನ ಪ್ರೀತಿಯ ಕುರಿತಾಗಿ ಹೇಳು ಈ ಶ್ಲೋಕದಲ್ಲಿ "ಪ್ರೀತಿಗೆ ಪ್ರಿಯಕರನೇ ಕಾರಣ ಮತ್ತು ಅಂತಹ ಪ್ರೀತಿಯನ್ನು ಪ್ರಿಯಕರನಲ್ಲಿ ಉಂಟು ಮಾಡು " ಎನ್ನುವ ಅರ್ಥವನ್ನು ಧ್ವನಿಸುತ್ತದೆ.

ಕಾಂತಯಾ ಘ್ನಂತಿ ಯತ್ಕಾಂತಾಃ ಕಾಂತಾನಾಂ ಹೃದಯಂ ದೃಶಾ |
ಕಾಂತಯಾ ಘ್ನಂತಿ ಯತ್ಕಾಂತಾಃ ಕಾಂತಾನಾಂ ಹೃದಯಂ ದೃಶಾ||೨೮||

ಎಂತೆಂತಹ ಅದ್ಭುತವಾದ ರಚನೆಗಳಿವೆ - ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ ............ನಾರಿಯರು ಚಂದ್ರನ ಬೆಳದಿಂಗಳ ಬರುವಿಕೆಗಾಗಿ ಕಾಯುತ್ತಿದ್ದರು ..........
ಲಲಾಟೇನಾರ್ದ್ಧ ಚಂದ್ರೇಣ ಕೃಸ್ತ್ನ ಚಂದ್ರೈಸ್ತದಾನನೈಃ |
ಯದಂಗನಾಃ ಕಲಾಸಕ್ತೀರ್ನಿರ್ದಿಶಂತಿ ನಿಜಾರ್ಜಿತಾಃ ||
ಈ ಶಾಸನವು ಸುಮಾರು ೧೩ನೇ ಶತಮಾನಕ್ಕೆ ಸರಿ ಹೊಂದುತ್ತಿದ್ದು, ಆಂಧ್ರವನ್ನು ಏಕಶಿಲಾ ನಗರಿ ಎನ್ನುವುದಾಗಿ ಹೇಳಲಾಗಿದೆ.


Wednesday 24 May 2017

ಬಿಳಿಯ ಪಂಚೆಯನ್ನು ಧರಿಸಿ ಉತ್ತರೀಯದೊಂದಿಗೆ ಶೋಭಿಸುತ್ತಾ ಕೈಯಲ್ಲಿ ಧಭೆಯ ಚಾಪೆಯನ್ನು ಹಿಡಿದು ತಲೆಯಲ್ಲಿ ಗೋಪಾದದಷ್ಟಿರುವ ಶಿಖೆಯನ್ನು ಧರಿಸಿದ ವಿದ್ಯಾರ್ಥಿಗಳ ಸಮೂಹವನ್ನು ನೋಡುತ್ತಿದ್ದರೆ ಅದು ಕೈಲಾಸದಲ್ಲಿರುವ ಶಿವನ ಮಂದಿರದಲ್ಲಿ ಸಾಕ್ಶಃಆತ್ ಶಿವನೇ ಕಂಡಂತಭಾವ ಮನಸ್ಸಿನಲ್ಲಿ ಮೂಡುತ್ತಿತ್ತು. ಶುಭ್ರವಾದ ಸ್ವಚ್ಚವಾದ ಮನಸ್ಸು ಮತ್ತು ಕಲಿಕೆ ಯನ್ನು ನೋಡುತ್ತಿದ್ದರೆ ಇಡೀ ನಾಲಂದಾ ನಗರಿಯೇ ಮಂದ ಹಾಸದೊಂದಿಗೆ ವಿಜ್ರಂಭಿಸುತ್ತಿರುವಲ್ಲಿ ಶತ್ರು ಸೈನ್ಯ ನುಗ್ಗಿದರೆ ಎದುರಿಸಬಲ್ಲ ಸಾಮರ್ಥ್ಯದ ತರಬೇತಿಯೂ ನಡೆಯುತ್ತಿತ್ತು. ಗೋಡೆಗಳಮೇಲೆ ಅಲ್ಲಲ್ಲಿ ಚಿತ್ತಾರಗಳ ಆಕರ್ಷಕ ಜೋಡಣೆ ಇತ್ತು. ಎಲ್ಲಾ ವಿಧದ ವಿದ್ವಜ್ಜನರ ಸಮೂಹವೇ ಅಲ್ಲಿತ್ತು. ಒಂದೆಡೆ ದೇವವಾಣಿಯ ಕಲರವವಾದರೆ ಇನ್ನೊಂದೆಡೆ ಕಲಾವಿದರ ಕಲಾ ಪ್ರಾಕಾರಗಳ ಪ್ರದರ್ಶನ, ಛಾತ್ರ ಸಮೂಹಗಳ ದಂಡು ನೋಡಿದರೆ ಛಾತ್ರಾಲಯವು ದೇವಾಲಯ ಎನ್ನುವಂತಿತ್ತು. ಇದು ಬೇರೆಲ್ಲೂ ಅಲ್ಲ ನಮ್ಮ ಪ್ರಾಚೀನ ವಿದ್ಯಾಪೀಠ ನಾಲಂದಾದ ವರ್ಣನೆ. ಇದು ಯಶೋವರ್ಮದೇವನು ಹಾಕಿಸಿದ ನಾಲಂದಾ ದಲ್ಲಿರುವ ಶಿಲಾಶಾಸನ.
 ಯಾಸಾವೂರ್ಜಿತ ವೈರಿ ಭೂ ಪ್ರವಿಗಲದ್ದಾನಾಂಬುಪಾನೋಲ್ಲಸನ್ಮಾದ್ಯೋದ್ಭೃಂಗಕರೀಂದ್ರಕುಂಭದಲನಪ್ರಾಪ್ತಶ್ರಿಯಾಂ ಭೂಭುಜಾಮ್ |
ನಾಲಂದಾ ಹಸತೀವ ಸರ್ವನಗರೀಃ ಶುಭ್ರಾಭ್ರಗೌರಸ್ಫುರಚ್ಚೈತ್ಯಾಂಶುಪ್ರಕಾರೈಃ ಸದಾಗಮಕಲಾವಿಖ್ಯಾತ ವಿದ್ವಜ್ಜನಾ || ೪ ||
ಯಸ್ಯಾಮಂಬುಧರಾ ವಲೇಹಿ ಶಿಖರ ಶ್ರೇಣೀ ವಿಹಾರವಲೀ ಮಾಲೇವೋರ್ಧ್ವವಿರಾಜಿನೀ ವಿರಚಿತಾ ಛಾತ್ರಾ ಮನೋಜ್ಞಾ ಭುವಃ |
ನಾನಾರತ್ನ ಮಯೂಖಜಾಲಖಚಿತ ಪ್ರಾಸಾದ ದೇವಾಲಯಾ ಸದ್ವಿದ್ಯಾಧರಸಂಘರಮ್ಯವಸತಿರ್ಧತ್ತೇ ಸುಮೇರೋಃ ಶ್ರಿಯಮ್ || ೫ ||


ಕೊಲ್ಲೂರು ದೇವಾಲಯದಲ್ಲಿರುವ ಫಲಶೃತಿ

ಇಂದ್ರಃ ಪೃಚ್ಛತಿ ಚಾಂಡಾಲೀ ಕಿಮಿದಂ ಪಚ್ಯತೇ ತ್ವಯಾ |
ಶ್ವಮಾಂಸಂ ಸುರಯಾ ಸಿಕ್ತಂ ಕಪಾಲೇನ ಚಿತಾಗ್ನಿನಾ ||
ದೇವ ಬ್ರಾಹ್ಮಣ ವಿತ್ತಾನಾಂ ಬಲಾದಪಹರಂತಿ ಯೇ |
ತೇಷಾಂ ಪಾದ ರಜೋಭೀತ್ಯಾ ಚರ್ಮಣಾ ವಿಹಿತಂ ಮಯಾ ||
೧೪೮೨ನೇ ಇಸವಿಯಲ್ಲಿ ಈಗಿನ ಉಡುಪಿ ಜಿಲ್ಲೆಯ ಕೊಲ್ಲೂರು ದೇವಾಲಯದಲ್ಲಿರುವ ಶಾಸನದಲ್ಲಿರುವ ಶ್ಲೋಕವಿದು.
ಇಂದ್ರನು ಚಾಂಡಾಲಿಯೊಬ್ಬಳನ್ನು ಕೇಳುತ್ತಾನೆ. ಏನು ಬೇಯಿಸುತ್ತಿರುವೆ ಚಾಂಡಾಲಿ ? ಎಂದು ಅದಕ್ಕೆ ಚಾಂಡಾಲಿಯು ಹೇಳುತ್ತಾಳೆ:



ಹೆಂಡವನ್ನು ಬೆರೆಸಿದ ನಾಯಿಯ ಮಾಂಸವನ್ನು ಹೆಣದ ಬೆಂಕಿಯಮೇಲೆ ತಲೆಬುರುಡೆಯಲ್ಲಿ ಬೇಯಿಸುತ್ತಿದ್ದೇನೆ. ದೇವರ ಮತ್ತು ಬ್ರಾಹ್ಮಣರ ಸೊತ್ತನ್ನು ಅಪಹರಿಸಿದ ಪಾಪಿಯ ಪಾದದ ಧೂಳು ಈ ಪಾತ್ರೆಯೊಳಗೆ ಬಿದ್ದೀತೆಂಭ ಭಯದಿಂದ ಅದಕ್ಕೆ ಚರ್ಮವನ್ನು ಮುಚ್ಚಿರುವೆ ಎಂದು ಹೇಳುತ್ತಾಳೆ.

Tuesday 23 May 2017

ಇದು ದಶಪುರದ ಸೂರ್ಯ ದೇವಾಲಯದ ಸೂರ್ಯನನ್ನು ಸ್ತುತಿಸುವ ಶ್ಲೋಕ ಇದು ಒಂದನೇ ಕುಮಾರಗುಪ್ತ ಮತ್ತು ಬಂಧುವರ್ಮನ ಮಾಂಡಸೋರ್ ನಲ್ಲಿರುವ ಶಾಸನ ಪಾಠ ಕ್ರಿ ಶ ೪೯೩ ಮತ್ತು ೫೨೯ ರಲ್ಲಿ ಖಂಡರಿಸಿದ್ದು. ವತ್ಸ ಭಟ್ಟನೆನ್ನುವ ಕವಿಯಿಂದ ರಚಿಸಲ್ಪಟ್ಟ ಶಾಸನ ಪಾಠ.
"ಶಶಿನೇವ ನಭೋ ವಿಮಲಂ ಕೌಸ್ತುಭ ಮಣಿನೇವ ಶಾಂರ್ಗಿಣೋ ವಕ್ಷಃ |
ಭವನ ವರೇಣ ತಥೇದಂ ಪುರಮಖಿಲಮಲಂಕೃತ ಮುದಾರಂ ||
ಅಮಲಿನ ಶಶಿಲೇಖಾದಂತುರಂ ಪಿಂಗಲಾನಾಂ ಪರಿವಹತಿ ಸಮೂಹಂ ಯಾವದೀಶೋ ಜಟಾನಾಂ |

ವಿಕಚಕಮಲಮಾಲಾಮಂಸಸಕ್ತಾಂ ಚ ಶಾಂರ್ಗೀ ಭವನಮಿದಮುದಾರಂ ಶಾಶ್ವತಂ ತಾವದಸ್ತು || "



Monday 22 May 2017

ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ

"ಕವಿಗಳ್ಗಿದು ಕೆಯ್ಗನ್ನಡಿ
ಕವಿತೆಗೆ ಬಾಳ್ಮೊದಲುದಾತ್ತ ವಾಗ್ದೇವತೆಗು
ದ್ಭವಹೇತು ಕೋಶಗೃಹಮೆನೆ
ಭುವನದೊಳಿದು ಪರೆದುನಿಲ್ವುದೊಂದಚ್ಚರಿಯೇ " ಎಂದು
ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಉದ್ಗರಿಸಿರುವುದು ಕಾವ್ಯ ರಚನೆ ಮಾಡಬೇಕಿದ್ದರೆ ಕಾವ್ಯ ಸ್ವಾರಸ್ಯದ ಜೊತೆಗೆ ಕೋಶದಂತೆ ವ್ಯಾಕರಣವೂ ಕೂಡ ಅಷ್ಟೆ ಅವಶ್ಯ ಎಂದಿದ್ದಾನೆ. ಈತ ತನ್ನ ಕಾವ್ಯಾವಲೋಕನದ ಸಂಧಿ ಪ್ರಕರಣದ ಹತ್ತನೆಯ ಸೂತ್ರದಲ್ಲಿನ 49ನೇ ಪದ್ಯವನ್ನು ಕ್ರಿಸ್ತ ಶಕ 974 ರಲ್ಲಿನ ಗಂಗರಾಜ ಮಾರಸಿಂಹನ ಶ್ರವಣಬೆಳಗೊಳದ ಕೂಗೆ ಬ್ರಹ್ಮದೇವರ ಕಂಬದ ಮೇಲಿರುವ 113 ಸಾಲುಗಳುಳ್ಳ ಶಾಸನದಲ್ಲಿ 83 ನೇ ಸಾಲಿನಿಂದ ಕನ್ನಡ ಆರಂಭವಾಗುತ್ತದೆ ಅಲ್ಲಿನ 97 ಮತ್ತು 98 ನೇ ಸಾಲನ್ನು ಶಾಸನದಿಂದ ಆಯ್ದುಕೊಂಡಿರುವುದು. ಶಾಸನದಲ್ಲಿನ ಕಾವ್ಯಾತ್ಮಕ ಗುಣವನ್ನು ಎತ್ತಿ ತೋರಿಸುತ್ತದೆ.

"ನುಡಿದನೆ ಕಾವುದನೇ ಎ(ನೆ)ರ್ದೆ
ಗೆಡದಿರು ಜವನಿಟ್ಟು ರಕ್ಕೆ ನಿನಗೀವುದನೇಂ
ನುಡಿದನೆ ಏ! ಅದು ಕೆಯ್ಯದು(ಮೇಣ್)
ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ" ಎನ್ನುವುದನ್ನು ನಾಗವರ್ಮ ಆಯ್ದುಕೊಂಡಿದ್ದಾನೆ.
ಅದೇರೀತಿ ಕೇಶಿರಾಜನು ಸಹ ಸಂಧಿ ಪ್ರಕರಣದ ಸೂತ್ರ 58 ರಲ್ಲಿ ಸಂಧಿಯ ಅಭಾವ ಸ್ಥಳದ ಅವಧಾರಣೆಗೆ ಇದೇ ಸಾಲುಗಳನ್ನು ಬಳಸಿಕೊಂಡಿರುವುದು ವ್ಯಾಕರಣದ ದೃಷ್ಟಿಯಿಂದ ಅತ್ಯಂತ ಮಹತ್ವದ ಶಾಸನ ಎನ್ನಿಸುತ್ತದೆ.

95. ಕಾಳನೊ ರಾವಣನೋ ಶಿಶುಪಾಳನೊ ತಾನೆನಿಸಿ ನೆಗಳ್ದ ನರಗನ ತಲೆ
96. ತನ್ನಾಳಾಳ ಕಯ್ಗೆ ವನ್ದುದು ಹೇಳಾಸಾಧ್ಯದೊಳೆ ಗಂಗಚೂಡಾಮಣಿಯಾ
97. ನುಡಿದನೆ ಕಾವುದನೇ ಎರ್ದೆಗೆಡದಿರು ಜವನಿಟ್ಟ ರಕ್ಕೆ ನಿನಗೀವುದನೇಂನು
98. ಡಿದನೆ ಏ ಅದು ಕೆಯ್ಯದು ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ

Sunday 14 May 2017

ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರ - ಚಾಳುಕ್ಯರ ಆರನೇ ವಿಕ್ರಮಾದಿತ್ಯ

ಬನವಾಸಿ ಕದಂಬರಕಾಲ, ಆಗಿನ್ನು ಕನ್ನಡದ ಲಿಪಿ ತನ್ನ ಖಾತೆ ತೆರೆಯುತ್ತಿದ್ದ ಕಾಲವದು, ಬ್ರಾಹ್ಮಿಯಿಂದ ಕಳಚಿದ ಕೊಂಡಿ ಕನ್ನಡವಾಗಿ ಗುರುತಿಸಿಕೊಂಡು ತನ್ನದೇ ಸ್ವತಂತ್ರ ಇತಿಹಾಸವನ್ನು ನಿರ್ಮಿಸಿದ ಕಾಲದಲ್ಲಿ ಕುಬ್ಜನೆನ್ನುವ ಮೇರು ಕವಿಯೊಬ್ಬ ಸಂಪದ್ಭರಿತ ಸಾಹಿತ್ಯದ ರುಚಿಯನ್ನು ಉಣಿಸುತ್ತಿದ್ದ, ಅದೇ ಕಾಲ ಅಥಾ ತುಸು ಹಿಂದು ಮುಂದಕ್ಕೆ ಗುಡ್ನಾಪುರದ ಶಾಸನ ಕವಿಯಿಂದ ಇನ್ನೊಂದು ಸಾಹಿತ್ಯದ ಕೊಡುಗೆ ಬಿಟ್ಟರೆ ಆಮೇಲೆ ಚಾಳುಕ್ಯರ ಕಾಲದಲ್ಲಿನ ಎರಡನೇ ಪುಲಕೇಶಿಯ ಕಾಲದಲ್ಲಿ ಸುಮಾರು ೬೩೪ ನೇ ಇಸವಿಯಲ್ಲಿ ರವಿಕೀರ್ತಿ ಎನ್ನುವ ಆಸ್ಥಾನ ಕವಿಯೊಬ್ಬ ಐಹೊಳೆಯ ಮೇಗುತಿಯಲ್ಲಿ ಸಾಹಿತ್ಯಾತ್ಮಕವಾದ ಶಿಲಾ ಫಲಕ ಖಂಡರಿಸಿ ತಾನು ಕಾಳಿದಾಸ ಭಾರವಿಯಂತಹ ಅತ್ಯಂತ ಶ್ರೇಷ್ಠ ಕವಿಗಳಿಗಿಂತ ಕಡಿಮೆಯವನಲ್ಲ ಎಂದು ಇತಿಹಾಸ ನಿರ್ಮಿಸುತ್ತಾನೆ. ಆದರೆ ಈಗ ನಾನು ಹೇಳ ಹೊರಡುವುದು ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿನ ಕ್ರಿ ಶ ೧೧೧೨ನೇ ಇಸವಿಯ ಚಾಲುಕ್ಯ ದೊರೆ ೬ನೆಯ ವಿಕ್ರಮಾದಿತ್ಯನ ಕುರಿತು.
ಅಚ್ಚ ಕನ್ನಡದ ಪರಿಶುದ್ಧ ಭಾಷೆ, ಆಲಂಕಾರಿಕ ಶೈಲಿಯಲ್ಲಿ ರಮಣೀಯ ವರ್ಣನೆಗಳು, ಹೀಗೆ ಪ್ರಬುದ್ಧ ಚಿಂತನೆಗ ಹಚ್ಚುವ ಕಾವ್ಯಾಸಕ್ತರಿಗೆ ಮತ್ತು ಸಾಹಿತ್ಯದ ಓದುಗರಿಗೆ ಅತ್ಯಂತ ಮಹತ್ವದ ಆಕರ ಎಂದೆನಿಸುವ ಈ ಶಾಸನದಲ್ಲಿ ಬೆಳ್ವಲ, ಇಟಗೆ ಮುಂತಾದುವುಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆ.
 
ಸೃಷ್ಟಿಕರ್ತನಿಂದ-ಭರತನ ತನಕ :
ಸ್ವಯಂಭು (ಬ್ರಹ್ಮ) ವಿಗೆ ಮಗನಾಗಿ ಸ್ವಾಯಂಭುವ ಹುಟ್ಟಿದ ಈ ಸ್ವಾಯಂಭುವನಿಗೆ ಮನುವು ಮಗನಾಗಿ ಜನಿಸಿದ, ಮನುವಿನ ಮಗ ಪ್ರಿಯವ್ರತ ರಾಜ, ಪ್ರಿಯವ್ರತ ರಾಜನಿಗೆ ಏಳುಜನ ಮಕ್ಕಳು" ಸಪ್ತ ದ್ವೀಪಮಂ ಪಚ್ಚುಕೊಟ್ಟ ನಿಳಾವಲ್ಲಭನಾ" ಏಳುಜನ ತನ್ನ ಮಕ್ಕಳಿಗೆ ಹಂಚಿಕೊಟ್ಟನು. ಅಂತಹ ಪ್ರಿಯವೃತನ ವಂಶದವನು ಎಂದು ಚಾಳುಕ್ಯ ವಿಕ್ರಮಾದಿತ್ಯನನ್ನು ಹೊಗಳಲಾಗಿದೆ.
"ಎನಿಸಿರ್ದ್ಧಂಬುರುಹ ಸ್ವಯಂಭುಗೆ ಸುತಂ ಸ್ವಾಯಂಭುವಂ ಪುಟ್ಟಿದಂ
ಮನುವಾತಂಗೆ ಮಗಂ ಪ್ರಿಯಬ್ರತ ನೃಪಂ ತತ್ಪುತ್ರರಗ್ನೀದ್ರಮು -
ಖ್ಯ ನರೇಂದ್ರೋತ್ತಮರೆರ್ವ್ವರಂ ತವರ್ಗ್ಗೆ ಸಪ್ತದ್ವೀಪಮಂ ಪಚ್ಚು ಕೊ-
ಟ್ಟನಿಳಾವಲ್ಲಭನಾ ಪ್ರಿಯಬ್ರತನುದಾತ್ತ ಕ್ಷಾತ್ರಗೋತ್ರೋತ್ತಮಂ || " ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೬ನೇ ಸಾಲಿನಿಂದ.

ಅಗ್ನೀದ್ರನಿಗೆ ಜಂಬೂದ್ವೀಪವೂ(ಲವಣ ಸಮುದ್ರಾವೃತ), ಮೇಧಾತಿಥಿಗೆ ಪ್ಲಕ್ಷದ್ವೀಪ(ಇಕ್ಷುರದ್ವೀಪಾವೃತ). ವಪುಷ್ಮಂತನಿಗೆ ಶಾಲ್ಮಲೀ ದ್ವೀಪ (ಸುರಾಸಮುದ್ರ). ಜ್ಯೋತಿಷ್ಮಂತನಿಗೆ ಕುಶದ್ವೀಪ. ರಾಜಚಕ್ರನೆಂದು ಖ್ಯಾತನಾದ ದ್ಯುತಿಮಂತನಿಗೆ ಕ್ರೌಂಚದ್ವೀಪ. ಹವ್ಯನನಿಗೆ ಶಾಕಾಂತದ್ವೀಪ. ಸವನನಿಗೆ ಪುಷ್ಕರದ್ವೀಪ. ಜಂಬೂದ್ವೀಪದ ಒಡೆಯನಾದ ಅಗ್ನೀಧ್ರನಿಗೆ ಒಂಭತ್ತು ಮಕ್ಕಳು ಅವರಲ್ಲಿ ನಾಭಿಯೇ ಮೊದಲಾದವರು. (ನಾಭಿಕ್ಷೇತ್ರ, ಕಿಂಪುರುಷವರ್ಷ, ಹರಿವರ್ಷ, ಇಳಾವೃತ....ಹೀಗೆಯೇ ಸಾಗುತ್ತದೆ.) ಇವರೆಲ್ಲಾ ಸೇರಿ ನವಖಂಡಗಳನ್ನು ಆಳಿದರು. ನಾಭಿಯ ಮಗ ಋ‌ಷಭನೂ ಆತನ ಮಗ ಭರತನೂ ಈ ಭರತಖಂಡವನ್ನು ಆಳಿದರು. ಇಂತಹ ಭರತಾದಿ ರಾಜರುಗಳಿಗಿಂತಲೂ ಬಹಳ ಅತ್ಯಂತ ಪ್ರಸಿದ್ಧನಾಗಿ ಈಗ ಚಕ್ರವರ್ತಿಯಾಗಿದ್ದಾನೆ ಎಂದು ಶ್ಲಾಘಿಸಲ್ಪಟ್ಟಿದೆ.
ಲವಣಾಂಭೋನಿಧಿ ಸುತ್ತಿರಲ್ಕೆಸೆವ ಜಂಭೂದ್ವೀಪವಗ್ನೀಧ್ರರಾ -
ಜ್ಯವಿಳಾಸಾಸ್ಪದ ವಿಕ್ಷುವೇಷ್ಟಿತ ವಿಶಾಳಪ್ಲಕ್ಷವಕ್ಷುಣ್ಣ ಸೌ -
ಷ್ಠವ ಮೇಧಾತಿದಿಪಾಳಿತಂ ಸುರೆಗಡಲ್ ಸುತ್ತಿರ್ಪ್ಪಿನಂ ನೋಡಲೊ -
ಪ್ಪುವುದಾ ಶಾಲ್ಮಲಿ ಸೋಷ್ಮಸಾಹಸವಪುಷ್ಮದ್ಭೂಭುಜಸ್ವೀಕೃತಂ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೭ನೇ ಸಾಲಿನಿಂದ.

ಚಂದ್ರವಂಶದ ಹಿರಿಮೆಯನ್ನು ಸಾರುತ್ತಾ ...... ಎರಡನೆಯ ಕಮಳ ಗರ್ಭರುಂ ತ್ರಿಭುವನ ಸದ್ಧರ್ಮ ಸೂತ್ರಧಾರರುಂ" ಎಂದು ಚಂದ್ರವಂಶದ ಪರಂಪರೆಯನ್ನು ಹೇಳುತ್ತಾ .....
ಅನುಪಮ ಹೇಮ ತಾಮರಸಗರ್ಬ್ಭನ ಮಾನಸಪುತ್ರನತ್ರಿ ತ -
ನ್ಮನುಪತಿನೇತ್ರ ಪುತ್ರಿಕೆಗೆ ಪುಟ್ಟಿದ ನಂದನನಿಂದುಮೌಳಿಮಂ -
ಡನನ ಮೃತಾಂಶು ತತ್ಪ್ರಿಯಸುತಂ ಬುಧನುನ್ನತ ಸೋಮ ವಂಶವ -
ರ್ದ್ಧನನೊಗೆದಂ ಬುಧಂ ಗವಿಳೆಗಂ ಪೃಥುಕೀರ್ತಿರವಂ ಪುರೂರವ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೧೭ನೇ ಸಾಲಿನಿಂದ.
ಸ್ವಾಯಂಭುವನಿಂದ ಹಿಡಿದು ಚಾಕ್ಷುಷನ ತನಕ ಆರು ಮನುಗಳು ಆಳಿದ ತರುವಾಯ ಏಳನೆಯ ವೈವಸ್ವತನು ದಕ್ಷನ ಮೊಮ್ಮಗ ವಿವಸ್ವಂತನ ಮಗನು. ಇಳೆ ಪುರೂರವ ಮುಂತಾದವರಿಂದ ಸಾಗಿ ಹಾರೀತಿಯ ಹಲವು ಮಕ್ಕಳಿಂದ ಈ ಚಾಳುಕ್ಯ ವಂಶವು ಚಂದ್ರವಂಶದಿಂದ ಕೀರ್ತಿ ಹೊಂದಿತು. ಎನ್ನುವುದಾಗಿ ಹೇಳಲಾಗಿದೆ. ಅದೇ ಸತ್ಯಾಶ್ರಯಕುಳವಾಯಿತು.

ಚಾಳುಕ್ಯ ವಿಕ್ರಮ ;
"ಪೆಣದುಗ್ರಾಹಿತ ವಂಶಮಂ" ಎಂದು ಶೌರ್ಯ ಸಾಹಸ, ಅವನ ಔನ್ನತ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಕವಿ, ವಿಕ್ರಮಾದಿತ್ಯನನ್ನು ಶ್ಲೇಷ ರೂಪಕಾಲಂಕಾತ್ರಗಳನ್ನು ಬಳಸಿ ತನ್ನ ಕವಿತಾ ಸಾಮರ್ಥ್ಯವನ್ನು ಮೆರೆದಿದ್ದಾನೆ. ಕೇಳೀಗೃಹವನ್ನೂ ಉದ್ಘರಿಸಿರುವ ಕವಿಯ ಹೇಳಿರುವುದು ಹೀಗೆ....
ಪೆಣದುಗ್ರಾಹಿತವಂಶಮಂ ತರಿದು ಭೂಭೃದ್ವರ್ಗ್ಗಮಂ ನುರ್ಗ್ಗಿ ತ
ಕ್ಷಣದಿಂ ಕಂಟಕಕೋಟಿಯಂ ಕಡಿದು ಸಪ್ತಾಂಭೋಧಿ ಸಂರುದ್ಧಧಾ
ರಿಣಿಯಂ ಧೋರ್ವ್ವಳದಿಂದೆ ನೇರ್ಪ್ಪಡಿಸಿ ಕೀರ್ತ್ತಿಶ್ರೀಗೆ ಕೇಳೀಗೃಹಾಂ -
ಗಣಮಪ್ಪಂತಿರೆ ಮಾಡಿದಂ ಸುಭಟರಾರ್ಚ್ಚಾಳುಕ್ಯರಾಮಂಬರ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೨೫ನೇ ಸಾಲಿನಿಂದ.
ಎಂದು ಕೀರ್ತಿಶ್ರೀಗೆ ಕೇಳೀಗೃಹದಂತೆ ಎಂದು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.

ವಿಕ್ರಮಾದಿತ್ಯನ ದೋರ್ದ್ದಂಡವನ್ನು(ಭುಜಬಲ-ಬಾಹುಬಲ)ವನ್ನು ತಿಳಿಸುತ್ತಾ ಕವಿಯು -
ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರಕ್ಕೆ ವಂ -
ದು ಮಹೀಕಾಮಿನಿ ದಿಗ್ಗಜಬ್ರಜದ ಕುಂಭಾಗ್ರಂಗಳಂ ಮೆಟ್ಟಿ ವಿ
ಕ್ರಮಚಕ್ರೇಶನುದಗ್ರವಪ್ಪ ಭುಜಮಂ ಬಂದೇರಿದಳ್ ರಾಗದಿಂ -
ದಮಿದೇನುನ್ನತಮಯ್ತೊ ದಕ್ಷಿಣಭುಜಂ ಚಾಳುಕ್ಯ ಚಕ್ರೇಶನ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೨೬ನೇ ಸಾಲಿನಿಂದ.
ಆಮೆಯ(ಕೂರ್ಮ)ಬೆನ್ನಿನ ಮೇಲೆ, ಆದಿಶೇಷನ ಹೆಡೆಗಳಮೇಲೆ, ದಿಗ್ಗಜಗಳ ತಲೆಗಳ ಮೇಲೆ ಈ ಜಗತ್ತು ನಿಂತಿದೆ ಎನ್ನುವುದು ನಮ್ಮ ಪ್ರಾಚೀನ ಪುರಾಣಗಳ ಕಲ್ಪನೆ. ಆದರೆ ರಾಜನೂ ಸಹ ಭೂಧರ(ಭೂಮಿಯನ್ನು ಧರಿಸಿದವನು). ಅದೇ ರೀತಿ ವಿಕ್ರಮಾದಿತ್ಯನೂ ಧರಿಸಿದ್ದಾನೆ. ಭೂ ದೇವಿಯು ಅವನ ಭುಜಕ್ಕೆ ಏರಲು (ದೋರ್ದ್ದಂಡ) ಆಮೆಯ ಬೆನ್ನು, ಆದಿಶೇಷನ ಹೆಡೆ, ಮತ್ತು ದಿಗ್ಗಜಗಳ ತಲೆ ಮೆಟ್ಟಿಲುಗಳಾದವು ಎಂದು ಶಾಸನ ಕವಿ ವರ್ಣಿಸುತ್ತಾನೆ.

ವಿಕ್ರಮಾದಿತ್ಯನಿಗೆ ಶತ್ರುರಾಜರೂ ಸಹ ವಂದಿಸುತ್ತಿದ್ದರು ಎನ್ನುವುದು ಕವಿಯ ಈರೀತಿಯ ಅಂಬೋಣ....
ಪುದಿದು ಪೊದಳ್ದ ವಿಕ್ರಮ ವಿಜೃಂಭಣಮಂ ತೊರೆದಾಳ್ವೆಸಕ್ಕೆ ಪೂ -
ಣ್ದೊದವಿದ ಭೀತಿಯಿಂದೆರಗಲನ್ಯನೃವಾವಳಿ ಪಾದಪೀಠದೊಳ್
ಪದನಕದರ್ಪ್ಪಣಂಗಳೊಳಗಾ ರಿಪುಭೂಪರ ರೂಪು ಚಂದ್ರ ಬಿಂ -
ಬದ ಮೃಗದಂತಿರ್ಪ್ಪುವು ನೆಗರ್ತ್ತೆಯ ವಿಕ್ರಮಚಕ್ರವರ್ತ್ತಿಯ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೩೦ನೇ ಸಾಲಿನಿಂದ.
ವಿಕ್ರಮಾದಿತ್ಯನ ಅಡಿಯ ಉಗುರುಗಳ ಕನ್ನಡಿಗಳಲ್ಲಿ ಮೂಡಿದ ವೈರಿ ರಾಜರುಗಳ ರೂಪಗಳು ಚಂದ್ರ ಬಿಂಬದ ಜಿಂಕೆಯಂತೆ ಕಾಣುತ್ತಿದ್ದವು. ಇಲ್ಲಿ ವೈರಿ ರಾಜರ ಮುಖಗಳನ್ನು ಚಂದ್ರನ ಬಿಂಬಕ್ಕೆ ಹೋಲಿಸಿರುವುದು ಅತ್ಯಂತ ಮಹತ್ವದ್ದು. ವೈರಿಗಳ ಮುಖವು ಕಪ್ಪಾಗಿದ್ದವು, ಅಥವಾ ವೈರಿಗಳ ಮುಖವು ಕಳೆಗುಂದಿದ್ದವು ಎನ್ನುವುದನ್ನು ಹಾಗೆ ಕವಿ ವಿಡಂಬನೆಮಾಡಿದ್ದಾನೆ. ಹೀಗೆ ಶಾಸನ ಒಂದರ ಕವಿ ಎಂತಹ ಅದ್ಭುತವಾದ ಕಾವ್ಯದ ಸೃಷ್ಟಿಗೆ ರಾಜಾಶ್ರಯವನ್ನು ಬಳಸಿಕೊಂಡಿದ್ದ ಅಥವಾ ಕವಿಯೊಬ್ಬನನ್ನು ರಾಜ ತನ್ನ ವರ್ಣನೆಗೆ ಬಳಸಿಕೊಂಡಿರಬಹುದಾದ ಸಾಧ್ಯತೆಯೂ ಇರಬಹುದು.


Thursday 11 May 2017

ಪರಮಹಂಸಾನುಷ್ಟಾನ ಭವನ ನಾಗಾವಿಯ ಮದುಸೂಧನ ದೇವಾಲಯ.

ಚಾಳುಕ್ಯ ಆಹವಮಲ್ಲನ ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ - ಪರಮಹಂಸಾನುಷ್ಟಾನ ಭವನ ನಾಗಾವಿಯ ಮದುಸೂಧನ ದೇವಾಲಯ.
ರಾಷ್ಟ್ರಕೂಟ ನಾಲ್ಕನೆಯ ಗೋವಿಂದನ ಕಳಸ, ಶಿಗ್ಗಾವಿ ಶಾಸನ ೯೩೦ರಲ್ಲಿ ಬರೆಸಿದ್ದರಲ್ಲಿ ಸಮುದ್ರದಿಂದಾವೃತವಾದ ಸುಂದರವಾದ ಪವಿತ್ರವಾದ ಭೂ ಮಂಡಲದಲ್ಲಿ ಮೆರೆಯುತ್ತಿರುವ ಅಗ್ರಹಾರವು ಕಾಡಿಯೂರಿನಲ್ಲಿತ್ತು. ಇನ್ನೂರು ಜನರು ವಿದ್ಯಾಭ್ಯಾಸವನ್ನು ಅಲ್ಲಿ ಮಾಡುತ್ತಿದ್ದರು, ಹೀಗೇ ವಿದ್ಯಾ ಕೇಂದ್ರವಾಗಿತ್ತು ಎನ್ನುವುದಾಗಿ ತನ್ನ ರಾಜ್ಯವನ್ನು ವರ್ಣಿಸಿದ್ದಾನೆ. ವ್ಯಾಕರಣ, ಅರ್ಥಶಾಸ್ತ್ರ, ಸಾಹಿತ್ಯವಿದ್ಯೆ, ಇತಿಹಾಸ, ಇನ್ನುಳಿದ ಏಕಾಕ್ಷರ ಟೀಕೆ ಮುಂತಾದ ವಿದ್ಯೆ ಇವುಗಳೆಲ್ಲವನ್ನು ಸಮಗ್ರವಾಗಿ ಅಭ್ಯಸಿಸುತ್ತಿದ್ದರು ಎನ್ನುವುದಾಗಿ ವಿದ್ಯಾದಾನವನ್ನು ಪ್ರಶಂಸಿಸಿಕೊಳ್ಳುವುದನ್ನು ಕೆಳಗಿನ ಶಾಸನ ನುಡಿ ತಿಳಿಸುತ್ತದೆ.
ಶರಧಿವ್ಯಾವೇಷ್ಟಿತೋರ್ವ್ವೀತಳದೊಳೆಸೆಯುತೀರ್ಪ್ಪಗ್ರಹಾರಂಗಳಂ ಧಿ
ಕ್ಕರಿಸಲ್ಸಾದತ್ತು ನಾನಾಫಳವಿಳಸನದಿಂ ಕಾಡಿಯೂರಲ್ಲಿಯಿರ್ಣ್ಣೂ
ರ್ವ್ವರ ವಿದ್ಯಾಭ್ಯಾಸಮಿರ್ಣ್ಣೂರ್ವ್ವರ ವಿಧಿಲಸದಾಚಾರ ಸಮ್ಪತ್ತಿ ಯಿರ್ಣ್ಣೂ
ರ್ವ್ವರ ದಾನೋದಾರಿಯಿರ್ಣ್ಣೂರ್ವ್ವರ ವಿಮಳಯಶಃಶ್ರೀ ವಿಚಿತ್ರಂ ಪವಿತ್ರ ||
ನಾಗಾವಿ - ನಾಗವಾವಿ :
ಇದು ಗದಗ ಜಿಲ್ಲೆಯ ನಾಗಾವಿ ಹಿಂದೆ ನಾಗವಾವಿ ಎಂದು ಕರೆಸಿಕೊಳ್ಳುತ್ತಿತ್ತು. ಚಾಳುಕ್ಯ ಆಹವಮಲ್ಲನ ೧೦೫೮ನೇ ಇಸವಿಯ ಆಸುಪಾಸಿನ ಕಾಲದಲ್ಲಿ ಅದೊಂದು ಪ್ರಮುಖ ಅಗ್ರಹಾರವಾಗಿತ್ತು. ಅಲ್ಲಿಯ ತ್ರಿಪುರುಷರ ದೇವಸ್ಥಾನ ಅತ್ಯಂತ ದೊಡ್ಡ ಘಟಿಕಾಸ್ಥಾನವಾಗಿತ್ತು. ಇನ್ನೂರು ವೇದ ವಿದ್ಯಾರ್ಥಿಗಳು, ಐವತ್ತು ಶಾಸ್ತ್ರ ವಿದ್ಯಾರ್ಥಿಗಳು, ಇಲ್ಲಿ ಓದುತ್ತಿದ್ದರು. ಸರಸ್ವತೀ ಗ್ರಂಥ ಭಂಡಾರ ಅಲ್ಲಿನ ಲೈಬ್ರರಿಯಾಗಿತ್ತು. ಇವೆಲ್ಲಾ ವಿದ್ಯೆಗಳನ್ನು ಬೋಧಿಸಲು ಒಂಬತ್ತು ಉಪಾಧ್ಯಾಯರುಗಳೂ ಆರು ಮಂದಿ ಭಂಡಾರಿಗಳೂ ಇದ್ದರು. ಇಂತಹ ವಿದ್ಯಾಕೇಂದ್ರವಾಗಿದ್ದ ನಾಗಾವಿ ಸುಸಜ್ಜಿತವಾದ ಅಗ್ರಹಾರವಾಗಿತ್ತು ಎನ್ನುವುದು ಅತಿಶಯವಲ್ಲ. ಇಲ್ಲಿನ ಗುರುವರ್ಗ ಮತ್ತು ಶಿಷ್ಯವರ್ಗದ ಊಟೋಪಚಾರ ಮತ್ತು ವಸತಿಗಾಗಿ ಒಂದು ಸಾವಿರ ಮತ್ತರು ಭೂಮಿಯ ಉಂಬಳಿ ಮೀಸಲಾಗಿತ್ತು.
ಅಗ್ರಹಾರ : "ನಿಜಗುಣೋಪಾರ್ಜ್ಜಿತ ಯಶೋಲತಾವಿಶಾಲಕಂದಮುಮಂ" ಅಖಿಳ ಜಗತೀತಳಕ್ಕೆ ಮಾಡಿ ತೋರುವಂತೆ ಕಟಕ ಕಮಳಾರ್ಕ್ಕವೆಸರ ತ್ರೈಪುರುಷ ದೇವರ ಶಾಲೆಯುಮಂ ಜಗತ್ತಿಗೆ ಎದ್ದು ತೋರುತ್ತಿರುವಂತಹ ತ್ರೈಪುರುಷದೇವಾಲಯವಿತ್ತು ಎಂದೂ, ನಿಜಾಭಿದಾನಾಭಿ ರಂಜಿತಮಪ್ಪ ಮಧುಸೂದನಾಲಯಮುಮಂ ಎಂದು ಮಧುಸೂದನಾಲಯ ಎನ್ನುವ ವಿದ್ಯಾಕೇಂದ್ರವಿತ್ತು ಎನ್ನುವುದಾಗಿ ಶಾಸನದಲ್ಲಿ ವರ್ಣಿತವಾಗಿದೆ. ಘಟಿಕಾ ಸ್ಥಾನದಲ್ಲಿ ಉಪಾಧ್ಯಾಯರು, ಶಾಸ್ತ್ರಾಧ್ಯಾಯಿಗಳು, ವೇದಾಧ್ಯಾಯಿಗಳು, ಭಟ್ಟದರ್ಶನ, ನ್ಯಾಸ, ಪ್ರಭಾಕರ ವ್ಯಾಖ್ಯಾತೃಗಳು ಇವರಿಗೆಲ್ಲ ಉಂಬಳಿಯನ್ನು ಬಿಟ್ತ ಬಗ್ಗೆ ದಾಖಲೆಯನ್ನು ಕೊಡುತ್ತಾ " ಸಾಲೆಯ ಸರಸ್ವತೀ ಭಂಡಾರಿಗರಾರ್ವ್ವರ್ಗಮನ್ತು" ಎಂದು ಆ ಕಾಲದಲ್ಲಿ ಘಟಿಕಾ ಸ್ಥಾನದಲ್ಲಿದ್ದ ವಾಚನಾಲಯದಲ್ಲಿದ್ದ ಸೇವಕರು ಆರುಜನರಿಗೆ ಮತ್ತು " ಮಾಣಸರ ಅಸನಾಚ್ಚಾದನಕ್ಕಂ" ಎಂದು ಊಟ ವಸತಿಗಳನ್ನು ನಿರ್ದೇಶಿಸಲಾಗಿದೆ.
ಮಹಾಮಾಣಿಕ ಮದುಸೂಧನ ದೇವಾಲಯ : ಕ್ರಿ. ಶ ೧೦೬೮ ಮತ್ತು ೧೦೮೫ ರ ಚಾಳುಕ್ಯ ಆಹವಮಲ್ಲ ಮತ್ತು ೬ನೇ ವಿಕ್ರಮಾದಿತ್ಯನ ಕಾಲದಲ್ಲಿ ಘಟಿಕಾಸ್ಥಾನ (ಮಧುಸೂದನ) ನಾಟ್ಯಶಾಲೆಯೂ ಇದ್ದ ಬಗ್ಗೆ " ನಾಟ್ಯಶಾಳಾಳಂಕೃತಮುಂ" ಎನ್ನುವುದಾಗಿ ಹೇಳಿಕೊಂಡಿದ್ದರೆ ಮುಂದೆ ಮಹಾಮಾಣಿಕ ಮದುಸೂಧನ ದೇವಾಲಯವನ್ನು ನಿರ್ಮಿಸಿ ಅದರಲ್ಲಿ "ಶುಂಭಚ್ಛಾಕುಂಬ ವೈನತೇಯ ಸ್ತಂಭಮುಮಮರರಾಜದ್ವಿಮಾನಾನುಕಾರಿಯಪ್ಪ ಮೂರು ನೆಲೆಯ ಬಾಗಿಲ್ವಾಡಮುಂ - "ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ - ಪರಮಹಂಸಾನುಷ್ಟಾನ ಭವನಮುಂ" ಹೀಗೆ ಆರ್ಷ ಧರ್ಮ ಪ್ರತಿಪಾದಕನಾಗಿದ್ದು, ಅನುಷ್ಠಾನ ನಿರತರಿಗೆ ಪ್ರತ್ಯೇಕ ಆಲಯವನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾನೆ. ನಾಲ್ಕು ವೇದಗಳು ಮತ್ತು ಶಾಖೆಗಳ ಅಧ್ಯಯನಕ್ಕೆ "ಪಠನಮಠವಿರಾಜಿತಮುಮುತ್ತುಂಗತೋರಣ ಪ್ರಾಸಾದ" ಎಂದು ವಿದ್ಯಾಕಾಂಕ್ಷಿಗಳಿಗೆ ತವರುಮನೆಯಂತೆ ಇದ್ದಿತ್ತು ಹಾಗೂ ವಿದ್ವತ್ತಿಗೆ ತಕ್ಕ ಮಾನ್ಯತೆಯೂ ಇತ್ತು ಎನ್ನುವುದಾಗಿ ತಿಳಿದು ಬರುತ್ತದೆ.

Wednesday 10 May 2017

ಬಳ್ಳಾರಿ ಜಿಲ್ಲೆಯ ಈಗಿನ ಹಿರೇ ಹಡಗಲಿ ಹಿಂದೆ "ಪೊಸವಡಂಗಿಲೆ"

ಮನೆಮನೆ ಶಂಕರಾಚ್ಯುತಬುಧಾತಿಥಿಪೂಜೆಯಿನಗ್ನಿಹೋತ್ರದಿಂ
ಕೋಲಿವಾಲದ ಭೋಜಕನು ರಹಸ್ಯಾಧಿಕನೂ ಆಗಿದ್ದ ಭಟ್ಟಶಮ್ಮ ನು ಕನ್ನಡಕ್ಕೆ ಪಳಗಿನವನಾಗಿರಲಿಲ್ಲ ಅದು ಕ್ರಿಸ್ತ ವರ್ಷದ ೨ನೇ ಶತಮಾನ ಮತ್ತು ಮೂರನೆಯ ಶತಮಾನದ ಹೊತ್ತು. ಪಲ್ಲವ ದೊರೆ ಶಿವಸ್ಕಂದವರ್ಮನಿಗೆ ಶಾಸನ ಬರೆಸಬೇಕಿತ್ತು ಆಗ ಬ್ರಾಹ್ಮಿ ಲಿಪಿಯಲ್ಲಿ ಸಂಸ್ಕೃತ ಮಿಶ್ರಿತ ಪ್ರಾಕೃತದಲ್ಲಿ ಶ್ರೋತ್ರೀಯರನ್ನು, ಗೋ, ಬ್ರಾಹ್ಮಣರನ್ನು ಸ್ಮರಿಸುತ್ತ ದಕ್ಷಿಣದ ಹಿರೇಹಡಗಲಿಯಲ್ಲಿ ಶಾಸನವನ್ನು ಬರೆಸಿದ ಅದೇ ಬಳ್ಳಾರಿ ಜಿಲ್ಲೆಯ ಈಗಿನ ಹಿರೇ ಹಡಗಲಿ ಹಿಂದೆ "ಪೊಸವಡಂಗಿಲೆ" ಎನ್ನುವುದಾಗಿ ಕರೆಸಿಕೊಳ್ಳುತ್ತಿತ್ತು.
ತೀಡುವ ತಂಬೆಲರ್ಬ್ಬಳಸಿ ತದ್ವನ ಲಕ್ಷ್ಮಿಯ ಮುಂದೆ ಮಂಗಳಂ |
ಬಾಡುವ ತುಂಬಿ ಕೋಡುವ ಪುಳಿಲ್ಮದೆ ಪಾಡುವ ಹಂಸರಾಗದಿಂ -
ದಾಡುವ ಸೋಗೆ ಬಾದಿನೊಳವೋದಿನೊಳಂ ವಿಬುಧಾಳಿಯಂ ತೊದ
ಲ್ಮಾಡುವ ಕೀರವೀ ಪೊಸವಡಂಗಿಲೆಯೊಪ್ಪುವ ನಂದನಂಗಳೊಳ್ || ಇವುಗಳಲ್ಲಿರುವ ನಂದನದ ಸೊಬಗು, ದುಂಬಿಗಳ ಝೇಂಕಾರ, ತೊದಲುನುಡಿಗಳು. ಪೊಸವಡಂಗಿಲೆಯನ್ನು ಪ್ರತಿಧ್ವನಿಸುತ್ತವೆ
ಪುರಿಲಲನಾದುಕೂಲಮಗಳೊಳ್ಪರಿರಂಜಿಪ ನಿರ್ಮ್ಮಳಾಂಬು ಭಾ -
ಸುರನವಫೇನರಾಜಿ ಕಳಕಾಂಚಿವೊಲೊಪ್ಪಿರೆ ಕೋಟಿ ಪೀನಪೀ
ವರ ಕುಚ ಚಾರುಚೀನಚಳದಂಶುಕದಂತಿರೆ ಕೇತುಮಾಳೆ ವಿ
ಸ್ತರತರ ದಾನಧರ್ಮ್ಮದ ತವರ್ಮನೆಗಳ್ಮನೆಗಳ್ಮನೋಹರ || ದಾನ ಧರ್ಮಗಳಿಗೆ ಇದು ತವರು ಮನೆ ಎನ್ನುತ್ತಾ ಮನೋಹರವಾದ ಪ್ರದೇಶ ಎನ್ನುವುದಾಗಿ ಸಾರಲಾಗಿದೆ.
ಮನೆಮನೆ ಶಂಕರಾಚ್ಯುತಬುಧಾತಿಥಿಪೂಜೆಯಿನಗ್ನಿಹೋತ್ರದಿಂ -
ದನುಪಮ ವೇದನಾದ ಮಠಸತ್ರಸಭಾವಿಷ್ಣುವಾಗ್ನಿ ಕೇ -
ತನತತಿ ಕೇರಿಕೇರಿ ಜನರಿಂ ಸಲೆ ತಿಂತಿಣಿ ಬೀದಿ ಬೀದಿ ತಾ -
ನೆನಿಸುವುದಾಗಳುಂ ಪೊಸವಡಂಗಿಲೆ ವಿಶ್ವಮಹೀತಳಾಗ್ರದೊಳ್ || ಪ್ರತಿ ಮನೆಯಲ್ಲಿಯೂ ದೇವರ ನಾಮಸ್ಮರಣೆ. ವೇದಾದಿಗಳ ನಾದ, ಅಗ್ನಿಹೋತ್ರದ ಹೋಮಧೂಮ, ಕೇರಿಯಜನರ ನೂಪುರಗಳ ನಾದ ಪೊಸವಡಂಗಿಲೆಯು ವಿಶ್ವದಲ್ಲಿ ಅಗ್ರಸ್ಥಾನ ಪಡೆದಂತೆ ಕಂಗೊಳಿಸುತ್ತದೆ. ಈ ಇಡೀ ಊರು ಹೊಸತನದ ಬೀಡು.
ಪೊಸಕಾವ್ಯಂ ಪೊಸಗೇಯಂ
ಪೊಸವಾದ್ಯಂ ಪೊಸ ವಿನೂತರಸಂ ವೃತ್ತಂ
ಪೊಸವಸ್ತುಂ ಪೊಸವಿಳಾಸಂ
ಪೊಸದೇಸೆ ಸಮಂತು ಪೊಸವಡಂಗಿಲೆಗೆಲ್ಲಾ ||
ಎಲ್ಲವೂ ಹೊಸತು ಅದೇ ಪೊಸವಡಂಗಿಲೆ- ಹಿರೇ ಹಡಗಲಿ.