Search This Blog

Thursday 31 May 2018

ಅಜ್ಞಾತ ವಿದ್ವಾಂಸನ ಪುಟಿದೆದ್ದ ಸ್ವಾಭಿಮಾನ


ಗಾಂಧಾರ, ಈ ಹೆಸರನ್ನು ಕೇಳುವಾಗಲೇ ಏನೋ ಆನಂದವಾಗುತ್ತದೆ. ಹೌದು ಗಾಂಧಾರ ಗಾಂಧಾರಿಯ ನಾಡು ಎನ್ನುವುದನ್ನು ಮಾತ್ರ ನಾನು ಹೆಚ್ಚಾಗಿ ಹೇಳಿಬಿಡುತ್ತೇವೆ. ಆದರೆ ಗಾಂಧಾರ ಶಿಲ್ಪಕಲೆಯ ತವರೂರಾಗಿತ್ತು. ಗಾಂಧಾರ ಶೈಲಿಯೊಂದು ರೂಪುಗೊಂಡಿತ್ತು. ಗಾಂಧಾರದ ಯುವತಿಯರಂತೂ ಅತ್ಯಂತ ಸ್ಪುರದ್ರೂಪ ಉಳ್ಳವರಾಗಿದ್ದರು ಅಂತ ಪ್ರಾಚೀನ ಸಾಹಿತ್ಯಗಳಲ್ಲಿ ವರ್ಣನೆ ಬರುತ್ತದೆ. ಗಾಂಧಾರ ಆಧುನಿಕ ಉತ್ತರ ಪಾಕಿಸ್ಥಾನ ಮತ್ತು ಈಶಾನ್ಯ ಅಪಘಾನಿಸ್ಥಾನ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬೂಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಪ್ರಾಚೀನ ರಾಜ್ಯವಾಗಿತ್ತು ಎಂದು ಹಲವು ಉಲ್ಲೇಖಗಳಿಂದ ತಿಳಿದು ಬರುತ್ತದೆ. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಒಂದು ಕಾಲದಲ್ಲಿ ಸಂಸ್ಕೃತ ಸಾಹಿತ್ಯದ ದಿಗ್ಗಜರೆಲ್ಲಾ ಹುಟ್ಟಿಬಂದದ್ದೇ ಗಾಂಧಾರದ ನೆಲದಿಂದ.
ನಮ್ಮ ನೆಲದಲ್ಲಿ ಅಂದರೆ ಅಂದಿನ ಭಾರತದ ನೆಲದಲ್ಲಿ ವಿದ್ಯಾನೆಲೆಗಳಿದ್ದುದು ಪ್ರಮುಖವಾಗಿ ಎರಡು. ಒಂದು ತಕ್ಷಶಿಲಾ ಇನ್ನೊಂದು ನಾಲಂದಾ. ತಕ್ಷಶಿಲಾ ಅಂದು ಗಾಂಧಾರದ ರಾಜಧಾನಿಯಾಗಿತ್ತು. ಸುಲಲಿತ ಸಂಸ್ಕೃತದ ಕಾರಣೀಕರ್ತ ವಯ್ಯಾಕರಣಿ ಪಾಣಿನಿ ಇದೇ ನೆಲದವನಾಗಿದ್ದನಂತೆ. ಕಾಉಟಿಲ್ಯ ತನ್ನ ಜೀವಿತದ ಬಹುಭಾಗ ಈ ಪ್ರದೇಶದಲ್ಲಿಯೇ ಕಳೆದಿದ್ದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಂದರೆ ಬಿಂದುಸಾರನ ಮೊಮ್ಮಗ ಅಶೋಕನ ಅವಧಿಯಲ್ಲಿ ಗಾಂಧಾರವು ಬೌದ್ಧ ಧರ್ಮದ ಮಹಾ ನೆಲೆಯಾಗಿ ಪರಿವರ್ತನೆಗೊಂಡಿತ್ತು.
ಅಂದು ತಕ್ಷಶಿಲೆಯಲ್ಲಿ ಮತ್ತು ನಾಲಂದಾದಲ್ಲಿ ಇಲ್ಲದ ವಿದ್ಯೆಗಳೇ ಇಲ್ಲವಾಗಿತ್ತು. ಅಂತಹ ತಕ್ಷಶಿಲೆಯಲ್ಲಿ ಉತ್ತೀರ್ಣನಾಗುವುದೆಂದರೆ ಅದು ಸಾಮಾನ್ಯದ ಮಾತಾಗಿರಲಿಲ್ಲ. ಅದು ಸುಮಾರಾಗಿ ಬಿಂದುಸಾರನ ಕೊನೆಯ ದಿನಗಳ ಹಾಗೂ ಅಶೋಕನೆನ್ನುವವನ ಆರಂಭಿಕ ಕಾಲ ಇದ್ದಿರಬಹುದು ಅಂದರೆ ಬೌದ್ಧ ಧರ್ಮ ಉಚ್ಚ್ರಾಯ ಅಸ್ತಿತ್ವ ಪಡೆದಿದ್ದ ಕಾಲ. ಯುವಕನೊಬ್ಬ ಅರಮೈಕಾ, ಮತ್ತು ಖರೋಷ್ಠಿಗಳ ಜೊತೆಗೆ ಸಂಸ್ಕೃತ ಮತ್ತು ಪ್ರಾಕೃತಗಳಲ್ಲೂ ಪಾಂಡಿತ್ಯ ಹೊಂದಿ ಶಿಲ್ಪಕಲೆಯಲ್ಲಿ ಗಾಂಧಾರದ ಶಿಲ್ಪವನ್ನು ಅಧ್ಯಯನಮಾಡಿ ಉದ್ಧಾಮ ಪಾಂಡಿತ್ಯವನ್ನು ಹೊಂದಿ ಜ್ಞಾನದ ಆಕಾಂಕ್ಷೆಯಿಂದ ವಿಶ್ವವಿದ್ಯಾಲಯದಿಂದ ಹೊರಬರುತ್ತಾನೆ.
ಹೊರಬಂದ ಆತನಿಗೆ ದಾಹ. ಜ್ಞಾನದ ದಾಹ ಗಾಂಧಾರದಲ್ಲಿ ಸಿಗದೇ ಇರುವುದು ಬೇರೆಲ್ಲಿ ಸಿಗಬಹುದು ಎನ್ನುವುದಾಗಿ ಅರಸುತ್ತಾ ನೇರವಾಗಿ ನಾಲಂದಾಕ್ಕೆ ಬರುತ್ತಾನೆ. ನಾಲಂದಾ ಎಲ್ಲಾ ವಿದ್ಯೆಗಳ ಆಗರವಾಗಿತ್ತು. ಆದರೆ ಬೌದ್ಧ ಧರ್ಮ ಉಚ್ಚ್ರಾಯದ ಕಾಲ ಅಂತ ಮೊದಲೇ ತಿಳಿಸಿದ್ದೆನಲ್ಲಾ. ಇಲ್ಲಿ ಆಗ ಅಶೋಕನೆನ್ನುವ ರಾಜನ ಆಡಳಿತದ ಕಾಲ. ಅಶೋಕನಾದರೂ ಅತ್ಯಂತ ಕಠಿಣ ಆಜ್ಞೆಗಳನ್ನು ಹೊರಡಿಸುತ್ತಿದ್ದ ಕಾಲವದು. ಅಂತಹ ಕಾಲದಲ್ಲಿ ನಾಲಂದಾದಲ್ಲಿ ಕಲೆಗೆ ಆಸ್ಪದ ವಿದ್ದೀತೇ? ಇರಲಿಲ್ಲ. ಧರ್ಮದ ಮುಂದೆ ಎಲ್ಲವೂ ಮಸುಕಾಗಿತ್ತು ಬೌದ್ಧಧರ್ಮ ಪ್ರಚಾರದ ಮುಂದೆ ಸಾಹಿತ್ಯ ಮತ್ತು ಕಲೆ ಕುಂಠಿತಗೊಂಡಿತ್ತು ಎಂದರೆ ತಪ್ಪಾಗಲಾರದು. ಆಸೆಯಿಂದ ಬಂದ ಯುವಕನಿಗೆ ನಿರಾಸೆಕಾದಿತ್ತು. ಅದೇ ಸಮಯದಲ್ಲಿ ಈತನ ಪಾಂಡಿತ್ಯ ಮತ್ತು ಈತ ಅನೇಕ ಭಾಷೆ ಮತ್ತು ಲಿಪಿ ಬಲ್ಲವ ಎನ್ನುವ ವಿಷಯ ಅದು ಹೇಗೋ ಅಶೋಕನಿಗೆ ತಿಳಿಯುತ್ತದೆ. ಅಶೋಕ ತನ್ನ ಅನಿಸಿಕೆಗಳನ್ನು ಜನರಿಗೆ ತಲುಪಿಸ ಬೇಕಿತ್ತು. ಶಿಲೆಯಮೂಲಕ ಜನರನ್ನು೮ ಸಮೀಪಿಸಲು ಹಾತೊರೆಯುತ್ತಿದ್ದ ಅಶೋಕನಿಗೆ ಅನಾಮತ್ತಾಗಿ ಈ ಯುವಕ ಸಿಗುತ್ತಾನೆ. ತನ್ನ ಮಹತ್ವಾಕಾಂಕ್ಷೆಯ ಧರ್ಮ ಬೋಧನೆಗೆ ಯುವಕನನ್ನು ಸಿದ್ಧ ಗೊಳಿಸುತ್ತಾನೆ. ಭಾಷಾ ಮಾಧ್ಯಮವಾಗಿ ಪ್ರಾಕೃತವನ್ನೂ ಬ್ರಾಹ್ಮಿಯನ್ನು ಲಿಪಿಯಾಗಿ ಬಳಸಿಕೊಂಡು ಭಾರತದಾದ್ಯಂತ ಕಿರು ಬಂಡೆ ಮತ್ತು ಹೆಬ್ಬಂಡೆ ಶಾಸನಗಳನ್ನು ಬರೆಸುತ್ತಾನೆ.
ಈ ಯುವಕನ ಕುರಿತಾಗಿ ಯಾವುದೇ ಮಾಹಿತಿ ಸಿಗುವುದಿಲ್ಲ. ಅಜ್ಞಾತವಾಗಿಯೇ ಸಾಗುತ್ತಾನೆ. ಅಷ್ಟು ವಿದ್ವತ್ತನ್ನು ಹೊಂದಿದ್ದ ಯುವಕನೊಬ್ಬ ತನ್ನ ಜೀವಿತವನ್ನು ಅಜ್ಞಾತವಾಗಿ ಕಳೆಯುವುದನ್ನು ನೋಡಿದಾಗ ಇಂದಿನ ಗುಪ್ತ ಬರಹಗಾರರು ಅಥವಾ ‘GHOSTWRITER’ ಗಳನ್ನು ನಾನು ಸದಾ ನೆನೆಸಿಕೊಳ್ಳುತ್ತೇನೆ. ಅಂದು ಅಶೋಕನ ಕಟ್ಟಾಜ್ಞೆ ಇತ್ತು. ಆತ ತನ್ನ ಯಾವುದೇ ಶಾಸನದಲ್ಲಿಯಾಗಲೀ ಎಲ್ಲೇ ಆಗಲಿ ತನ್ನ ಹೆಸರಾದ ದೇವಾನಾಂಪಿಯಸಿ ಮತ್ತು ತನ್ನ ಮಕ್ಕಳಿಬ್ಬರ ಹೆಸರನ್ನು ಹೊರತು ಪಡಿಸಿ ಮಿಕ್ಕ ಯಾರ ಹೆಸರೂ ಎಲ್ಲಿಯೂ ಹೊರ ಬರದಂತೆ ಮುತುವರ್ಜಿ ವಹಿಸಿ ಬಿಟ್ಟ. ನಮ್ಮ ಪ್ರಾಚೀನ ರಾಜರೆಲ್ಲಾ ಇದೇ ರೀತಿ ಮಾಡಿ ಬಿಟ್ಟಿದ್ದರೆ ಕಂಡಿತವಾಗಿಯೂ ನಮ್ಮ ಭಾರತ ಯಾವ ಕಾಳಿದಾಸನನ್ನೂ ಪಡೆಯುತ್ತಿರಲಿಲ್ಲ ಯಾವ ಭಾರವಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ತಾನು ಕಟ್ಟಿದ ಸಾಮ್ರಾಜ್ಯ ಅನತಿ ಸಮಯದಲ್ಲೇ ಹೇಳ ಹೆಸರಿಲ್ಲದಂತಾಗಿ ಮುಂದೆ ಕಲೆ ಸಂಸ್ಕೃತಿ ಸಾಹಿತ್ಯ ಹೇರಳವಾಗಿ ನಮಗೆ ದೊರಕಿತು.
ಅಶೋಕನಿಂದ ಕಳಿಸಲ್ಪಟ್ಟ ಲಿಪಿಕಾರ ದೂರದ ಗಾಂಧಾರದಿಂದ ಬಂದು ಅಶೋಕನಲ್ಲಿ ಸೇರಿಕೊಂಡು ಅವನ ಕಟ್ಟಾಜ್ಞೆಗಳನ್ನು ಪಾಲಿಸುತ್ತಾ ಬರುತ್ತಾ ಬರುತ್ತಾ ಯಾವಾಗ ಕರ್ನಾಟಕದ ಮೊಳಕಾಲ್ಮೂರು ಪ್ರದೇಶದ ಬ್ರಹ್ಮಗಿರಿಗೆ ಬಂದನೋ ಆತನಿಗೆ ಅಶೋಕನ ಶಕ್ತಿಯ ಅರಿವಾಗಿತ್ತು. ಇನ್ನು ಇಳಿವಯಸ್ಸಿನಲ್ಲಿ ಅಶೋಕ ಅಷ್ಟು ದೂರದಿಂದ ಇಲ್ಲಿಗೆ ಬರಲಿಕ್ಕಿಲ್ಲ ಎನ್ನುವುದನ್ನು ಮನಗಾಣುತ್ತಾನೆ. ಅಜ್ಞಾತವಾಗಿ ಇಷ್ಟು ದಿನ ತಡೆದಿದ್ದ ಅವನ ಆತ್ಮಗೌರವ ಪುಟಿದೇಳುತ್ತದೆ. ಬ್ರಹ್ಮಗಿರಿಯ ಶಾಸನದಲ್ಲಿ ಅದನ್ನು ಹೊರಗೆಡಹುತ್ತಾನೆ. ಇಲ್ಲಿ ಆತ ಇಡೀ ಶಾಸನವನ್ನು ಬರೆದ ಕೊನೆಗೆ ತನಗೆ ಗೊತ್ತಿದ್ದ ಖರೋಷ್ಠಿಯಲ್ಲಿ ಬಲದಿಂದ ಎಡಕ್ಕೆ “ಲಿಪಿಕರೇಣ” ಎನ್ನುವ ಪದ ಬರೆದು ಮಿಕ್ಕವನ್ನು ಬ್ರಾಹ್ಮಿಯಲ್ಲಿ “ಚಪಡೇನ ಲಿಖಿತೇಲಿಪಿಕರೇಣ” ಎಂದು ಮುಗಿಸುತ್ತಾನೆ. ಅಖಂಡ ಭಾರತದಲ್ಲಿ ಲಿಪಿಕಾರನೊಬ್ಬನ ಹೆಸರು ಅಜ್ಞಾತವಾಗುಳಿದು ನಮ್ಮ ಹೆಮ್ಮೆಯ ಕನ್ನಡ ನಾಡಿನ ಜನತೆಗೆ ಈತ ಲಿಪಿಯ ಪಿತಾಮಹನೆನ್ನಿಸಿಕೊಳ್ಳುತ್ತಾನೆ.
ಚಪಡನಿಗೆ ಇನ್ನೊಂದು ಅಭಿಲಾಶೆ ಇತ್ತು. ಆತ ಎಲ್ಲಾ ಕಡೆ ಬ್ರಾಹ್ಮಿಯಲ್ಲಿ ಅಶೋಕನಿಂದ ಬರೆಸಲ್ಪಟ್ಟದ್ದನ್ನೇ ಬರೆದು ತನ್ನ ಸ್ವಂತಿಕೆ ಹಾಳಾಗುತ್ತಿದ್ದುದು ಅರಿವಿಗೆ ಬಂದಿತ್ತು. ಇಲ್ಲಿ ಆತ ಖರೋಷ್ಠಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ್ದು ತನಗೆ ಬ್ರಾಹ್ಮಿಯ ಜೊತೆಗೆ ಖರೋಷ್ಠಿಯೂ ಗೊತ್ತು ಎನ್ನುವುದನ್ನು ಜನರಿಗೆ ತಿಳಿಸ ಬೇಕಿತ್ತು ಅಂತ ಕಾಣಿಸುತ್ತದೆ. ಅದೇನೇ ಇರಲಿ ಆತ ತನ್ನ ಹೆಸರನ್ನು ನಮೂದಿಸಿದ್ದು ಲಿಪಿಯ ಇತಿಹಾಸದಲ್ಲಿ ಅತ್ಯಂತ್ಯ ಮಹತ್ವ ಪಡೆಯುತ್ತದೆ.
ಭಾರತದ ಅಕ್ಷರದ ಇತಿಹಾಸದ ಮೊದಲ ಸಾದೃಶ್ಯ ಇದಾಗಿರುವುದರಿಂದ, ಇದನ್ನು ಲಿಖಿಸಿದವನು ಮತ್ತು ಲಿಖಿಸಿದ ಸ್ಥಳಗಳು ಲಿಪಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿದುಬಿಡುತ್ತದೆ. ಹಾಗೆ ನೋಡಿದರೆ ನಮ್ಮ ಭಾರತದ ಲಿಪಿಕಾರರ ಇತಿಹಾಸ ಪ್ರಾರಂಭವಾಗುವುದೇ ಇಲ್ಲಿಂದ. ಈ ಚಪಡ ಬೇರಾರೂ ಅಲ್ಲ ಆಯುರ್ವೇದದಲ್ಲಿ ಸಂಹಿತೆಗಳನ್ನು ರಚಿಸಿದ ಚರಕನ ಅಜ್ಜ ಎನ್ನುವುದು ವಿಶೇಷ. ಈ ಚಪಡ ತನ್ನ ಜೀವಿತವನ್ನು ಅಜ್ಞಾತವಾಗಿ ಕಳೆದು ಕೇವಲ ಧರ್ಮಪ್ರಸಾರಕ್ಕಾಗಿ ಕಳೆದುದು ಒಂದು ರೀತಿಯಲ್ಲಿ ನಮಗೆ ದೌರ್ಭಾಗ್ಯವಾದರೂ ಇನ್ನೊಂದು ರೀತಿಯಲ್ಲಿ ಆತ ಲಿಪಿಯನ್ನು ಕೊಟ್ಟು ನಮಗೆಲ್ಲಾ ತಂದೆಯ ಸ್ಥಾನದಲ್ಲಿ ನಿಂತು ಬಿಟ್ಟ.

Friday 25 May 2018

ಪೈಶಾಚದ "ಗುಣಾಢ್ಯ" ಮತ್ತು ಕನ್ನಡದ "ದುರ್ವಿನೀತ" ಮಹಾರಾಜ.


ಒಂದು ದಿನ ಕಪಾಲಿ(ಶಿವ)ಯು ತನ್ನ ಪತ್ನಿ ಪಾರ್ವತಿಯೊಂದಿಗೆ ವಿನೋದದಿಂದ ವಿಹರಿಸುತ್ತಿರುವಾಗ ಪಾರ್ವತಿಯು ಶಿವನಲ್ಲಿ ಕೇಳಲು ಸೊಗಸಾದ ರಂಜನೀಯವಾದ ಒಂದು ಕಥೆಯನ್ನು ಹೇಳು ಎಂದು ಕೇಳುತ್ತಾಳೆ. ಶಿವನು ಅದಕ್ಕೊಪ್ಪಿ ಅತ್ಯಂತ ಗುಟ್ಟಾದ "ಸಪ್ತ ವಿದ್ಯಾಧರಚರಿತೆ" ಎನ್ನುವ ಕಥೆಯನ್ನು ಹೇಳುತ್ತಾನೆ. ಶಿವನ ಗಣದಲ್ಲೊಬ್ಬನಾದ ಪುಷ್ಪದಂತ ಎನ್ನುವವನು ಕಥೆಯನ್ನು ಮರೆಯಲ್ಲಿ ನಿಂತು ಕೇಳಿಕೊಳ್ಳುತ್ತಾನೆ. ಕಥೆಯನ್ನು ತನ್ನ ಮಡದಿ ಜಯೆ ಎನ್ನುವವಳಿಗೆ ಹೇಳುತ್ತಾನೆ. ಜಯೆ ಎನ್ನುವವಳು ಇದು ತುಂಬಾ ರಹಸ್ಯವಾದ ಕಥೆ ಇದನ್ನು ಯಾರಿಗೂ ಹೇಳಕೂಡದು ಎಂದು ನೇರವಾಗಿ ಪಾರ್ವತಿಯಲ್ಲಿ ಹೇಳುತ್ತಾಳೆ. ಪಾರ್ವತಿಗೆ ಇದನ್ನು ಕೇಳಿ ಕೋಪ ಬರುತ್ತದೆ ಆಕೆ ಪುಷ್ಪದಂತನನ್ನು ಕರೆದು ನನ್ನ ಅಂತರಂಗದಲ್ಲಿ ಹೇಳಿದ ಕಥೆಯನ್ನು ಕದ್ದು ಆಲಿಸಿ ಅದನ್ನು ಬಹಿರಂಗ ಪಡಿಸಿದ್ದಕ್ಕಾಗಿ ನೀನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟು ಎಂದು ಶಪಿಸುತ್ತಾಳೆ. ಅದನ್ನು ಕೇಳಿಸಿಕೊಂಡು ಪುಷ್ಪದಂತನು ದುಖಿಸುತ್ತಿರುವಾಗ ಮಾಲ್ಯವಂತ ಎನ್ನುವ ಇನ್ನೊಬ್ಬ ಗಣ ಪುಷ್ಪದಂತನ ಮಿತ್ರ ಪಾರ್ವತಿಯಲ್ಲಿ ತನ್ನ ಮಿತ್ರನ ತಪ್ಪನ್ನು ಮನ್ನಿಸು ನಿನ್ನದೇ ಮಕ್ಕಳಲ್ಲವೇ ನಾವು ಎನ್ನುವುದಾಗಿ ಅಂಗಲಾಚುತ್ತಾನೆ. ಪಾರ್ವತಿಯ ಕೋಪ ಇಮ್ಮಡಿಯಾಗಿ ಆತನನ್ನೂ ಶಪಿಸುತ್ತಾಳೆ ಆತನೂ ಭೂಮಿಯಲ್ಲಿ ಮನುಷ್ಯಜನ್ಮ ಪಡೆಯುವಂತೆ. ಪುಷ್ಪದಂತನ ಮಡದಿ ಜಯಾ ಎನ್ನುವವಳಿಗೆ ವಿಷಯ ತಿಳಿದು ಆಕೆ ದುಖಿತಳಾಗುತ್ತಾಳೆ. ಜಯೆಯು ಪುಷ್ಪದಂತ ಮತ್ತು ಮಾಲ್ಯವಂತರನ್ನು ಕರೆದುಕೊಂಡು ಬಂದು ಪಾರ್ವತಿಯಲ್ಲಿ ಶಾಪವಿಮೋಚನೆಯ ದಾರಿಯನ್ನು ಕೇಳುತ್ತಾಳೆ. ಆಗ ಕೋಪಗೊಂಡಿದ್ದ ಪಾರ್ವತಿ ಪ್ರಸನ್ನಳಾಗಿ ಶಾಪವಿಮೋಚನೆಯನ್ನು ಹೇಳುತ್ತಾಳೆ. "ಸುಪ್ರತೀಕ" ಎನ್ನುವ ಯಕ್ಷನೊಬ್ಬ ಕುಬೇರನ ಶಾಪದಿಂದ ಪಿಶಾಚ ಜನ್ಮದಿಂದ ಕಾಣಭೂತಿ ಎನ್ನುವ ಹೆಸರಿನಿಂದ ವಿಂದ್ಯಾಟವಿಯಲ್ಲಿ ವಾಸಮಾಡುತ್ತಿದ್ದಾನೆ. ಪುಷ್ಪದಂತನು ಅವನನ್ನು ನೋಡಿದ ಕೂಡಲೇ ಪೂರ್ವ ಜನ್ಮದ ಸ್ಮರಣೆ ಉಂಟಾಗಿ "ಸಪ್ತವಿದ್ಯಾಧರ ಚರಿತೆ"ಯನ್ನು ಅವನಿಗೆ ಹೇಳಿದಾಗ ಶಾಪ ವಿಮೋಚನೆಯಾಗುವುದು ಎನ್ನುತ್ತಾಳೆ. ಈ ಕಥೆಯನ್ನು ಕೇಳಿಸಿಕೊಂಡ ಕಾಣಭೂತಿಯು ಮಾಲ್ಯವಂತನಿಗೆ ಹೇಳಿ ಅದನ್ನು ಮಾಲ್ಯವಂತನು ಲೋಕ ಪ್ರಸಿದ್ಧಿ ಗೊಳಿಸಿದ ಕೂಡಲೇ ಅವನ ಶಾಪವೂ ವಿಮೋಚನೆಯಾಗುವುದು ಎಂದು ಶಾಪವಿಮೋಚನೆಯ ದಾರಿ ತಿಳಿಸಿದಳು.
ದೇವಿಯ ಶಾಪದಂತೆ ಪುಷ್ಪದಂತನು 'ವರರುಚಿ' ಅಥವಾ 'ಕಾತ್ಯಾಯನ' ಎನ್ನುವ ಹೆಸರಿನಿಂದ ಭೂಲೋಕದಲ್ಲಿ ಹುಟ್ಟಿ ಸಕಲವಿದ್ಯೆಗಳನ್ನು ಕಲಿತು ಅವುಗಳಲ್ಲಿ ಪಾರಂಗತನಾಗಿ ನಂದರಾಜರಲ್ಲಿ ಸೇರಿಕೊಳ್ಳುತ್ತಾನೆ. ಆದರೆ ಕೆಲವೇ ಸಮಯದಲ್ಲಿ ಆತನಿಗೆ ಸಾಂಸಾರಿಕ ಸುಖದಲ್ಲಿ ಜುಗುಪ್ಸೆ ಬರುತ್ತದೆ. ಆತ ವಿಂದ್ಯಾಟವಿಯನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ವಿಂಧ್ಯವಾಸಿನೀ ದೇವಿಯನ್ನು ಪೂಜಿಸಿ ಅರ್ಚಿಸಿ ದಿನವನ್ನು ಕಳೆಯುತ್ತಿರುವಾಗ ಒಂದು ದಿನ ವಿಂಧ್ಯವಾಸಿನಿಯು ಕನಸ್ಸಿನಲ್ಲಿ ಬಂದು "ವರರುಚಿ ನೀನು ಇಲ್ಲಿಯೇ ವಾಸಿಸುತ್ತಿರುವ ಕಾಣಭೂತಿ ಎನ್ನುವ ಪಿಶಾಚವನ್ನು ಕಾಣು" ಎಂದು ಹೇಳುತ್ತಾಳೆ. ಮರುದಿನವೇ ವರರುಚಿ ಕಾಡಿನಲ್ಲಿ ಕಾಣಭೂತಿಯನ್ನು ಹುಡುಕುತ್ತಿರುವಾಗ ಒಂದು ಮರದ ಕೆಳಗೆ ಪಿಶಾಚಗಳ ದೊಡ್ದ ಗುಂಪನ್ನೇ ಕಾಣುತ್ತಾನೆ. ಆಗ ಅಲ್ಲಿ ಕಣಭೂತಿಯನ್ನು ಕಂಡು ಕಾಣಭೂತಿಗೆ "ಸಪ್ತವಿಧ್ಯಾಧರ ಚರಿತೆ"ಯನ್ನು ಹೇಳಲು ಅವನ ಶಪ ವಿಮೋಚನೆಯಾಗುತ್ತದೆ. ಆಗ ಪಿಶಾಚವು ವರರುಚಿಯ ಹಿಂದಿನ ವೃತ್ತಾಂತವನ್ನೆಲ್ಲಾ ತಿಳಿದುಕೊಳ್ಳುತ್ತದೆ. ತಾನು ಪುಷ್ಪದಂತ ಎನ್ನುವ ಗಣನೆಂದು ಹೇಳುತ್ತಾನೆ ಮತ್ತು ಇನ್ನು ಮುಂದೆ ನನ್ನಂತೆಯೇ ಶಾಪಗ್ರಸ್ತನಾದ ಮಾಲ್ಯವಂತ ನೆನ್ನುವವನು 'ಗುಣಾಡ್ಯ'ನೆನ್ನುವ ಬ್ರಾಹ್ಮಣನಾಗಿ ಹುಟ್ಟಿ ಸಾತವಾಹನರ ಮಂತ್ರಿಯಾಗಿದ್ದಾನೆ. ಆತ ಶರ್ವವರ್ಮ ಎನ್ನುವವನ ವಾದದಲ್ಲಿ ಬೇಸರಗೊಂಡು ಇನ್ನು ಮುಂದೆ ಸಂಸ್ಕೃತ ಪ್ರಾಕೃತ ಮತ್ತು ದೇಶಭಾಷೆಗಳಲ್ಲಿ ಯಾವುದೇ ಕೃತಿಯನ್ನು ಬರೆಯುವುದಿಲ್ಲವೆಂದು ಶಪಥ ಮಾಡಿ ವಿಂಧ್ಯಾರಣ್ಯಕ್ಕೆ ಬರುತ್ತಾನೆ ಆತ ನಿನ್ನನ್ನು ಭೇಟಿಯಾದಾಗ ಈ "ಸಪ್ತವಿದ್ಯಾಧರ ಚರಿತ"ವನ್ನು ಅವನಿಗೆ ಹೇಳಿದಾಗ ಅವನ ಶಪವಿಮೋಚನೆಯೂ ಆಗುತ್ತದೆ ನೀನೂ ಪಿಶಾಚ ಜನ್ಮದಿಂದ ಮುಕ್ತನಾಗುವೆ ಎಂದು ಬದರಿಕಾಶ್ರಮಕ್ಕೆ ತೆರಳುತ್ತಾನೆ. ಸ್ವಲ್ಪ ಸಮಯದಲ್ಲಿಯೇ ಮಾಲ್ಯವಂತನು ಶರ್ವವರ್ಮನೆನ್ನುವವನಲ್ಲಿ ಪಂಥಾಹ್ವಾನ ಮಾಡಿ ವಿಂಧ್ಯಾಟವಿಗೆ ಬರುತ್ತಾನೆ ಅಲ್ಲಿ ತಿರುಗುತ್ತಿರುವಾಗ ಕಾಣಭೂತಿ ಎದುರಾಗುತ್ತನೆ. ಆಗ ಮಾಲ್ಯವಂತನಿಗೆ ಪೂರ್ವಜನ್ಮ ಸ್ಮರಣೆ ಬಂದು. ಹಿಂದೆ ಪುಷ್ಪದಂತನು ನಿನಗೆ ಹೇಳಿದ ಕಥೆಯನ್ನು ತನಗೆ ಹೇಳುವಂತೆ ಕೇಳಿಕೊಂಡಾಗ ಪಿಶಾಚವು ಗುಣಾಢ್ಯನಲ್ಲಿ ನಿನ್ನ ವೃತ್ತಾಂತವನ್ನು ತಿಳಿಸು ಎಂದಾಗ ಗುಣಾಡ್ಯನು ಅವನ ಕಥೆ ಹೇಳುತ್ತಾನೆ.
ಪ್ರತಿಷ್ಟಾನಗರದಲ್ಲಿ ಸೋಮಶರ್ಮ ಎನ್ನುವವನಿಗೆ ವತ್ಸ ಮತ್ತು ಗುಲ್ಮ ಎನ್ನುವ ಇಬ್ಬರು ಗಂದು ಮಕ್ಕಳೂ ಶ್ರುತಾರ್ಥೆ ಎನ್ನುವ ಹೆಣ್ಣು ಇದ್ದರು. ಆ ಶ್ರುತಾರ್ತೆಯ ಮಗನೇ ನಾನು. ನನ್ನ ತಾಯಿಗೆ ಬಾಲ್ಯದಲ್ಲಿಯೇ ಮಾತಾ ಪಿತೃ ವಿಯೋಗ ಉಂಟಾಗಿ ಆಕೆ ಸಹೋದರರ ಜೊತೆ ಬೆಳೆದವಳು. ವಾಸುಕೀ ಎನ್ನುವವನ ಅಣ್ನನ ಮಗ ಕೀರ್ತಿಸೇನನನ್ನು ಮದುವೆಯಾಗಿ ನನ್ನನ್ನು ಪಡೆದಳು. ನನ್ನ ಜನ್ಮವಾದೊಡನೆಯೇ ಗುಣಾಢ್ಯ ಎನ್ನುವ ಹೆಸರಿನಿಂದ ಕವಿಯಾಗಿ ಪ್ರಸಿದ್ಧನಾಗುತ್ತಾನೆ ಎಂದು ಅಶರೀರವಾಣಿಯಾಯಿತಂತೆ. ನಾನು ಗುಣ್ಢ್ಯನೆಂದು ನಾಮಕರಣ ಹೊಂದಿ ವಿದ್ಯಾರ್ಜನೆ ಮಾಡಿ ಪ್ರಸಿದ್ಧನಾಗುತ್ತಿರುವಾಗ ಸಾತವಾಹನ ದೊರೆಗೆ ನನ್ನ ವಿಷಯ ತಿಳಿದು ತನ್ನ ಮಂತ್ರಿಯನ್ನಾಗಿ ನೇಮಿಸಿಕೊಂಡ. ಹೀಗೆ ತನ್ನ ಕಥೆಯನ್ನು ಹೇಳಿದಾಗ ಕಾಣಭೂತಿಯು ಪೈಶಾಚ ಭಾಷೆಯಲ್ಲಿಯೇ ಸಪ್ತವಿದ್ಯಾಧರಚರಿತೆಯನ್ನು ಹೇಳಿ ಇದನ್ನು ಪ್ರಸಿದ್ಧಿಗೊಳಿಸು ಎಂದು ಹೇಳಿ ತನ್ನ ಜನ್ಮದಿಂದಲೂ ಮೋಕ್ಷ ಪಡೆಯಿತು. ಮುಂದೆ ಗುಣಾಢ್ಯನು ಪೈಶಾಚ ಭಾಷೆಯಲ್ಲಿಯೇ "ಸಪ್ತವಿದ್ಯಾಧರಚರಿತೆ"ಯನ್ನು ಕಾಡಿನಲ್ಲಿ ಮಶಿ ದೊರೆಯದೇ ತನ್ನ ರಕ್ತದಲ್ಲಿಯೇ ಏಳು ಲಕ್ಷ ಶ್ಲೋಕಗಳಲ್ಲಿ ಏಳುವರ್ಷ ಬರೆಯುತ್ತಾನೆ. ಹೀಗೆ ಬರೆದಿರುವುದನ್ನು ಲೋಕ ಪ್ರಸಿದ್ಧಿ ಗೊಳಿಸುವುದು ಹೇಗೆಂದು ಯೋಚಿಸುತ್ತಿರುವಾಗ ಈತನ ಶಿಷ್ಯರಾದ ಗುಣದೇವ ಮತ್ತು ನಂದಿ ಎನ್ನುವವರು ಸಾತವಾಹನನೇ ಇದಕ್ಕೆ ಸಮರ್ಥನೆಂದಾಗ ಗುಣಾಢ್ಯನಿಗೂ ಅದೇ ಸಮಂಜಸ ಎಂದು ತೋರುತ್ತದೆ. ಆಗ ಗುಣಾಢ್ಯನು ತನ್ನ ಶಿಷ್ಯರ ಮೂಲಕ ಗ್ರಂಥವನ್ನು ಕಳುಹಿಸುತ್ತಾನೆ. ಸಾತವಾಹನ ರಾಜ ಗ್ರಂಥವನ್ನು ನೋಡಿ ಇದು ಬರೆದಿರುವುದು ಪೈಶಾಚಭಾಷೆಯಲ್ಲಿ, ರಕ್ತದಿಂದ ಬರೆದ ಇದು ಏಳುಲಕ್ಷದಷ್ಟಿದೆ ಎಂದು ತಿರಸ್ಕರಿಸುತ್ತಾನೆ. ಇದನ್ನು ತಿಳಿದ ಗುಣಾಢ್ಯನು ಸಾತವಾಹನನ ನಗರದಿಂದ ಸ್ವಲ್ಪವೇ ದೂರದಲ್ಲಿ ಹೋಮಕುಂಡ ನಿರ್ಮಿಸಿ. ಪಶು ಪಕ್ಷಿಗಳೆಲ್ಲಾ ಅದನ್ನು ಕೇಳುವಂತೆ ಓದಿ . ಓದಿ ಮುಗಿದದ್ದನ್ನೆಲ್ಲಾ ಹೋಮದಲ್ಲಿ ಹಾಕುತ್ತಾನೆ. ಹೀಗೇ ಗ್ರಂಥದ ಆರುಲಕ್ಷದಷ್ಟು ಆಹುತಿಯಾಗಿ ಸುಟ್ಟುಹೋದವು. ಸಾತವಾಹನ ರಾಜನಿಗೆ ಕುಕ್ಷೀಬಾಧೆಯುಂಟಾಗಿ ರೋಗಿಯಾಗುತ್ತಾನೆ. ಆಗ ಅದರ ಕಾರಣ ತಿಳಿಯುವಾಗ ನವರಸ ಭರಿತವಾದ ಪದ್ಯಗಲ ಸವಿಯನ್ನು ಬಾಯಾರಿಕೆಯನ್ನು ಸಹ ಗಮನಿಸದೇ ಪಶು ಪಕ್ಷಿಗಳು ಕೇವಲ ತಮ್ಮ ಗೋಣನ್ನು ಮೇಲಕ್ಕೆತ್ತಿ ಕೇಳುತ್ತಿದ್ದುದರಿಂದ ಅವುಗಳ ಮಾಂಸಗಳು ಗಟ್ಟಿಯಾಗಿರದೇ ಮೃದುವಾಗಿ ಹಾಳಾಗಿದ್ದವು ಅವುಗಳನ್ನು ತಂದು ಆ ಮಾಂಸ ಬೇಯಿಸಿದುದರಿಂದ ಈತನಿಗೆ ರೋಗ ಬಂದಿದೆ ಎಂದು ರಾಜವೈದ್ಯರು ಹೇಳಿದಾಗ ರಾಜನಿಗೆ ಆಶ್ಚರ್ಯವಾಗಿ ತನ್ನ ಪರಿವಾರದೊಡನೆ ಗುಣಾಢ್ಯನ ಹೋಮಕುಂಡದ ಸಮೀಪಕ್ಕೆ ಬಂದು ಗುಣಾಢ್ಯನಲ್ಲಿ ಪರಿಪರಿಯಾಗಿ ಕ್ಷಮೆ ಕೇಳಿಕೊಳ್ಳುತ್ತಾನೆ. ಕೊನೆಗೆ ಒಂದು ಲಕ್ಷದಷ್ಟಿದ್ದ ನರದತ್ತವಾಹನ ಚರಿತೆ ಉಳಿದುಕೊಳ್ಳುತ್ತದೆ. ಇಂತಹ ಬೃಹತ್ಕಥೆ ಇಂದು ಲಭ್ಯವಿಲ್ಲ. ಗುಣಾಢ್ಯನೊಂದಿಗೆ ಹೊರಟು ಹೋಗುತ್ತದೆ ಆದರೆ ನರದತ್ತವಾಹನ ಚರಿತೆಯನ್ನು ಪ್ರಸಿದ್ಧಿಗೊಳಿಸುತ್ತಾನೆ ಸಾತವಾಹನ ರಾಜ. ಅದೇ ಬೃಹತ್ಕಥೆಯಾಗಿ ಉಳಿದುಕೊಳ್ಳುತ್ತದೆ.
ಗುಣಾಢ್ಯನ ಬೃಹತ್ಕಥೆಯೇ ವಡ್ದಕಥೆ ಎನ್ನುವುದಾಗುತ್ತದೆ ಈ ಕಥೆಗೂ ಅಂದರೆ ಗುಣಾಢ್ಯನಿಗೂ ಕರ್ನಾಟಕಕ್ಕೂ ಕನ್ನಡದ ನೆಲಕ್ಕೂ ನಂಟೊಂದು ಬೆಳೆದು ಬಿಡುತ್ತದೆ. ಹಾಗೆ ನೋಡಿದರೆ ಕನ್ನಡದ ನೆಲದಲ್ಲಿ ಸಂಸ್ಕೃತದ ಕವಿಗಳನ್ನು ನೆನೆಸಿಕೊಂಡದ್ದು ಬಹಳವೇ ಇದೆ. ಆದರೆ ರಾಜನೊಬ್ಬ ಕವಿಯಾಗಿ ಎಲ್ಲಿಯೋ ಬರೆದ ಬೃಹತ್ಕಥೆಗೆ ಇಲ್ಲಿ ಭಾಷ್ಯ ಬರೆದದ್ದು ನಿಜಕ್ಕೂ ಶ್ಲಾಘನೀಯ ಮತ್ತು ನಾವು ಕನ್ನದದ ಜನ ಅಷ್ಟೇ ಪುಣ್ಯವಂತರು. ಗಂಗದೊರೆ ದುರ್ವಿನೀತ ಸಾಮನ್ಯನಾಗಿರಲಿಲ್ಲ. ಭಾರವಿಯ ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಟೀಕೆಯನ್ನು ಬರೆದನಂತೆ, ಶಬ್ದಾವತಾರವನ್ನು ಬರೆದ ದೇವಭಾರತಿಯ ವಡ್ದಕಥೆಗೂ ಟಿಕೆಯನ್ನು ಬರೆಯುತ್ತಾನೆ. ಇಲ್ಲಿ ವಡ್ದಕಥೆ ಎನ್ನುವುದೇ ಗುಣಾಢ್ಯನ ಬೃಹತ್ಕಥೆ ಎನ್ನುವುದು ಹಲವರ ಅಂಬೋಣ. ಅದೇನೇ ಇರಲಿ ಇಲ್ಲಿ ನನಗಂತೂ ಈ ದುರ್ವಿನೀತ ರಾಜನಿಗಿಂತ ದೊಡ್ಡ ಸಾಹಿತಿಯಾಗಿ ಕಾಣಿಸಿಕೊಳ್ಳುತ್ತಾನೆ. ಹೌದು ಕನ್ನಡನಾಡಲೆ ಅದೆಷ್ಟು ದೊಡ್ಡ ದೊಡ್ದ ಕವಿಗಳು ಆಗಿಹೋಗಿದ್ದರು ನಾವೇ ಧನ್ಯರು ಕಣ್ರಿ !
ಇದು ಉತ್ತನೂರಿನ ತಾಮ್ರಪಟದ ಸಾಲುಗಳು :
“ಸಮರಮುಖ ಮಖಾಹೂತ ಪ್ರಹತಶೂರ ಪುರುಷ ಪಶೂಪಹಾರ ವಿಘಸವಿಹಸ್ತೀಕೃತ ಕೃತಾನ್ತಾಗ್ನಿಮುಖೇನ
ಶಬ್ದಾವತಾರಕಾರೇಣ ದೇವಭಾರತೀ ನಿಬದ್ಧ ವಡ್ಡಕಥೇನ ಕಿರಾತಾರ್ಜುನೀಯ ಪಞ್ಚದಶ  ಸರ್ಗ್ಗ ಟೀಕಾಕಾರೇಣ ದುರ್ವ್ವಿನೀತನಾಮಧೇಯೇನ”



Thursday 24 May 2018

ಅವಧೇಶ್ವರಿಯ - ವಿತ್ತಂ ಮೇ ಅಸ್ಯರೋದಸೀ


ಚಂದ್ರಮಾ ಅಪ್ಸ್ವನ್ತರಾ ಸುಪರ್ಣೋ ಧಾವತೇ ದಿವಿ |
ನವೋ ಹಿರಣ್ಯನೇಮಯಃ ಪದಂ ವಿಂದಂತಿ ವಿದ್ಯುತೋ ವಿತ್ತಂ ಮೇ ಅಸ್ಯ ರೋದಸೀ ||
ನಿನ್ನೆ ಬರೆದ ಲೇಖನದಲ್ಲಿ ಕುತ್ಸನನ್ನು ಬಾವಿಗೆ ತಳ್ಳಲ್ಪಟ್ಟ ವಿಷಯವನ್ನು ಹೇಳಿದ್ದೆ. ಅದರಲ್ಲಿ ಭಾಷ್ಯಕಾರರಲ್ಲಿಯೇ ಬೇರೆ ಬೇರೆ ಕಥೆಗಳನ್ನು ಹೇಳಲ್ಪಟ್ಟಿವೆ ಸಾಯಣಾಚಾರ್ಯರು ಹೇಳುವಂತೆ ಏಕತ ದ್ವಿತ ತ್ರಿತಾ ಎನ್ನುವ ಮೂವರು ಷಿಗಳಿದ್ದರು. ಒಮ್ಮೆ ಅರಣ್ಯ ಮತ್ತು ಮರಳುಗಾಡಿನಲ್ಲಿ ತಿರುಗುತ್ತಿರುವಾಗ ಬಾಯಾರಿಕೆ ಆಗುತ್ತದೆ. ಆಗ ತ್ರಿತನು ಉಳಿದಿಬ್ಬರಿಗೆ ನೀರನ್ನು ಬಾವಿಯಿಂದ ತಂದು ಕೊಡುತ್ತಾನೆ. ಬಾಯಾರಿಕೆ ನೀಗಿಒಸಿಕೊಂಡ ಉಳಿದಿಬ್ಬರು ತ್ರಿತನ ಬಲಿ ಇರುವ ಸಂಪತ್ತನ್ನು ತೆಗೆದುಕೊಂಡು ಅವನನ್ನು ಬಾವಿಗೆ ನೂಕಿ ಕಲ್ಲಿನ ಚಕ್ರವೊಂದನ್ನು ಅಡ್ದ ಇಟ್ಟು ಹೋಗುತ್ತಾರೆ ಆಗ ಆತ ವಿಶ್ವೇದೇವತೆಗಳನ್ನು ಪ್ರಾರ್ಥಿಸುತ್ತಾನೆ. ಆಗ ಈತ ಅವರನ್ನು ಸ್ತುತಿಸ ಬೇಕಾದ ಸೂಕ್ತದ ದರ್ಶನವನ್ನು ಪಡೆದುಕೊಳ್ಳುತ್ತಾನೆ. ಆ ಕಾಡಿನೊಳಕ್ಕೆ ಬಾವಿಯಲ್ಲಿ ಬಿದ್ದ ಚಂದ್ರಕಿರಣವನ್ನು ನೋಡಿ ತನ್ನ ವೇದನೆಯನ್ನು ಪ್ರಕಟಪಡಿಸುತ್ತಾನೆ. ಎನ್ನುತ್ತಾರೆ.
ಆದರೆ ಸ್ಕಂಧಸ್ವಾಮಿಯ ಭಾಷ್ಯದ ಪ್ರಕಾರ
ಆಪ್ತ್ಯ ಎನ್ನುವ ಋಷಿಗೆ ಏಕತ, ದ್ವಿತ ಮತ್ತು ತ್ರಿತ ಎನ್ನುವ ಮೂವರು ಪುತ್ರರಿದ್ದರು. ಅವರು ಯಜ್ಞ ಮಾಡಬೇಕೆಂಬ ಆಸೆಯಿಂದ ಯಜ್ಞ ಪಶುಗಳನ್ನು ಹೊಡೆದುಕೊಂಡು ಸರಸ್ವತೀ ನದಿಯ ತೋರಕ್ಕೆ ಬರುತ್ತಿರುವಾಗ ಸರಸ್ವತೀ ನದಿಯ ಇನ್ನೊಂದು ತೀರದಲ್ಲಿದ್ದ ತೋಳವೊಂದು ಯಜ್ಞ ಪಶಿಗಲನ್ನು ಕಾಣುತ್ತದೆ. ಅದು ನದಿಯನ್ನು ದಾಟಿಕೊಂಡು ಬಂದು ಯಜ್ಞ ಪಶುವನ್ನು ಹಿಡಿಯಲು ಉದ್ಯುಕ್ತವಾದಾಗ ಏಕತ ಮತ್ತು ದ್ವಿತರು ಹೇಗೋ ತಪ್ಪಿಸಿಕೊಂಡು ಯಜ್ಞಪಶುಗಳೊಂದಿಗೆ ಮನೆ ಸೇರಿಕೊಳ್ಳುತ್ತಾರೆ. ಆದರೆ ತ್ರಿತನು ಅಲ್ಲಿಯೆ ಬೆಳೆದಿದ್ದ ಬಳ್ಳಿಗಳು ಮತ್ತು ಗಿಡಗಳಿಂದ ಆವ್ರತವಾದ ಬಾವಿಯೊಳಕ್ಕೆ ಬೀಳುತ್ತಾನೆ. ಏಕತ ಮತ್ತು ದ್ವಿತರು ಯಜ್ಞ ಪಶುಗಳನ್ನು ಓಡಿಸಿಕೊಂಡು ಹೋಗುವಾಗಿನ ಧುಳಿನಿಂದ ತ್ರಿತನಿಗೆ ದಾರಿಕಾಣದೇ ಬಳ್ಳಿಗಳ ಮಧ್ಯದ ಬಾವಿಗೆ ಬಿದ್ದನು. ಆ ಕಗ್ಗತ್ತಲಿನಲ್ಲಿ ತ್ರಿತನು ಬಾವಿಯೊಳಕ್ಕೆ ಸಿಲುಕಿಕೊಂಡಾಗ ಆತನಿಗೆ ಮರಣ ಭೀತಿ ಆವರಿಸಿ ಸೋಮಯಾಗ ಮಾಡದೇ ಸತ್ತರೆ ಶ್ರೇಯಸ್ಸಿಲ್ಲ ಎಂದು ಚಿಂತಿಸಿ ಅಲ್ಲಿಯೇ ಬೆಳೆದಿದ್ದ ಬಳ್ಳಿಯನ್ನು ಜಜ್ಜಿ ರಸ ತೆಗೆದು ತನ್ನ ಆಂತರಿಕ ಯೋಗ ಸಂಪತ್ತಿನಿಂದ ಅಗ್ನಿಯನ್ನು ಆಹ್ವಾನಿಸಿ ಸೃಷ್ಟಿಸಿ ಅಲ್ಲಿಯೇ ಯಜ್ಞಾರ್ಥವಾಗಿ ದೇವತೆಗಳನ್ನು ಆಹ್ವಾನಿಸುತ್ತಾನೆ. ಆಗ ಬೃಹಸ್ಪತಿಯು ತ್ರಿತನ ಆಹ್ವಾನದ ಮೇರೆಗೆ ಎಲ್ಲಾ ದೇವತೆಗಳನ್ನೂ ಕೂಡಿಕೊಂಡು ಬಾವಿಯ ಸಮೀಪಕ್ಕೆ ಬಂದಾಗ ಬಾವಿಯಿಂದ ಮೇಲೆ ಬರಲಾಗದೇ ತನ್ನನ್ನು ಮೇಲೆಕ್ಕೆ ಕರೆಸಿಕೊಳ್ಳಿ ಎಂದು ದೇವತೆಗಳನ್ನು ಪ್ರಾರ್ಥಿಸುವ ಮಂತ್ರದ ಕೊನೆಗೆ ವಿತ್ತಂ ಮೇ ಅಸ್ಯ ರೋದಸೀ ಎನ್ನುತ್ತಾನೆ. ಎಂದು ಸ್ಕಂದಸ್ವಾಮಿ ಹೇಳುತ್ತಾರೆ.
ಒಮ್ಮೆ ಗೋವುಗಳನ್ನು ಮೇಯಿಸುವುದಕ್ಕಾಗಿ ಗೋವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ತ್ರಿತನನ್ನು ಸಾಲಾವೃಕಿ (ಹೆಣ್ಣು ತೋಳದ)ಯ ದುಷ್ಟ ಮಕ್ಕಳು ತ್ರಿತನನ್ನು ಒಂದು ಬಾವಿಯಲ್ಲಿ ನೂಕಿ ಆತನ ಗೋವುಗಳನ್ನು ಅಪಹರಿಸಿಕೊಂಡು ಹೋಗುತ್ತಾರೆ. ಮಂತ್ರಜ್ಞನಾದ ಆ ತ್ರಿತ ಋಷಿಯು ಮೆಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಗ್ಯವಾಗದೇ ಇದ್ದಾಗ ಅಲ್ಲಿಯೇ ಇದ್ದ ಸೋಮಲತೆಗಳನ್ನು ಕಿತ್ತು ಅದರ ರಸವನ್ನು ಹಿಂಡಿ ಅದನ್ನು ಪಾನ ಮಾಡಿ ತನ್ನನ್ನು ಬಂಧಮುಕ್ತನನ್ನಾಗಿ ಮಾಡಬೇಕೆಂದು ದೇವತೆಗಳನ್ನೆಲ್ಲಾ ಪ್ರಾರ್ಥಿಸಿ ಕರೆದನು. ತನ್ನನ್ನು ಬಂಧಮುಕ್ತಗೊಳಿಸಿ ಎನ್ನುವುದಾಗಿ ಪ್ರಾರ್ಥಿಸುತ್ತಾನೆ. ಅಂತಹ ಪ್ರಾರ್ಥನೆಯನ್ನು ಕೇಳಿದ ಬೃಹಸ್ಪತಿ ದೇವತೆಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಇವನಿದ್ದ ಬಾವಿಯಯ ಬಳಿ ಬಂದು ಹುಡುಕುತ್ತಿರುವಾಗ ತ್ರಿತನು ‘ವರುಣ’ ಮತ್ತು ‘ಅರ್ಯಮಾ’ರ ಸಮಸ್ತವನ್ನು ಗ್ರಹಿಸಬಲ್ಲ ಶಕ್ತಿ ಎಲ್ಲಿ ಹೋಯಿತು ಎಂದು ವಿಷಾದಿಸುತ್ತಾನೆ.
ತಾನು ಬಾವಿಯಲ್ಲಿ ಬಿದ್ದಿರುವುದರಿಂದ ನಾನು ದೇವತೆಗಳನ್ನು ಕಾಣುತ್ತಿದ್ದರೂ ಅವರಿಗೆ ನಾನು ಕಾಣುತ್ತಿಲ್ಲ ಎಂದು ಸೋಮಲತೆಗಳಿಂದ ಯಜ್ಞವನ್ನು ಅಲ್ಲಿಯೇ ಮಾಡುತ್ತಿರಲು ಅದನ್ನು ಎಲ್ಲಾ ದೇವತೆಗಳೂ ಸ್ವೀಕರಿಸಿ ಆತನನ್ನು ಬಾವಿಯಿಂದ ಎತ್ತಿದರು ಎನ್ನುವ ಕಥೆ ಬೃಹದ್ದೇವತೆಯಲ್ಲಿ ಬಂದಿದೆ.
"ವಿತ್ತಂ ಮೇ ಅಸ್ಯ ರೋದಸೀ" ಎನ್ನುತ್ತಾ ಕೊನೆಗೊಳ್ಳುವ ಒಟ್ಟು ಹನ್ನೆರಡು ಋಕ್ಕಿನಲ್ಲಿ ಬಾವಿಯಲ್ಲಿ ಬಿದ್ದಾಗಿನ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ತನ್ನ ಮುಂದಿನ ಭವಿತವ್ಯದ ಕನಸ್ಸು ನುಚ್ಚು ನೂರಾಯಿತೆನ್ನುವುದು ತ್ರಿತನ ಅಭಿಪ್ರಾಯವಾಗಿತ್ತು. ಈ ತ್ರಿತನೇ ಕುತ್ಸ ಅಥವಾ ಪುರುಕುತ್ಸ. ಈತನ ಕುರಿತಾಗಿ ಮಹಾಭಾರತ ಮತ್ತು ಭಾಗವತದಲ್ಲಿ ತಿಳಿದು ಬರುತ್ತದೆ. ಈತ ಪುರಾಣದಲ್ಲಿ ಒಬ್ಬ ದೊಡ್ದ ರಾಜನಾಗಿ ಆಳ್ವಿಕೆ ನಡೆಸಿದ್ದು ನಮಗೆ ಗೋಚರಿಸುತ್ತದೆ. ಆದರೆ ವೇದದಲ್ಲಿ ಈತನೇ ಸೂಕ್ತ ರಚನೆಕಾರನಾಗಿ, ತ್ರಿತ ಆಪ್ತ್ಯನಾಗಿ ಕಂಗೊಳಿಸುತ್ತಾನೆ ಒಬ್ಬ ಋಷಿಯನ್ನು ಋಗ್ವೇದ ನಮಗೆ ದೊರಕಿಸಿ ಕೊಡುತ್ತದೆ. ಆದರೆ ಪುರಾಣಕ್ಕಿಂತಲೂ ಜಾಸ್ತಿ ತ್ರಿತನನ್ನು ಋಗ್ವೇದ ಹಾಡಿ ಹೊಗಳಿದೆ. ಅದನ್ನು ನಿನ್ನೆಯ ನನ್ನ ಬರಹದಲ್ಲಿ ಬರೆದಿದ್ದೆ. ಇಲ್ಲಿ “ತ್ರಿತ ಆಪ್ತ್ಯ” ಎನ್ನುವುದು ತ್ರಿತ ಅಥವಾ ಪುರುಕುತ್ಸನ ಮಗನಾದ ತ್ರಸದಸ್ಯುವನ್ನು ಕುರಿತಾದದ್ದು ಎನ್ನುವ ಅಭಿಪ್ರಾಯವೂ ಇದೆ.
ಹಾಗಾದರೆ ತ್ರಸದಸ್ಯು ? - ಋಗ್ವೇದದದ ಹತ್ತನೇ ಮಂಡಲದಲ್ಲಿ ಬರುವ ಋಕ್ಕು.
ಶತಂ ವಾ ಯದಸುರ್ಯ ಪ್ರತಿ ತ್ವಾ ಸುಮಿತ್ರ ಇತ್ಥಾಸ್ತೌದ್ಧುರ್ಮಿತ್ರ ಇತ್ಥಾಸ್ತೌತ್ |
ಆವೋ ಯದ್ದಸ್ಯುಹತ್ಯೇ ಕುತ್ಸ ಪುತ್ರಂ ಪ್ರಾವೋ ಯದ್ದಸ್ಯುಹತ್ಯೇ ಕುತ್ಸವತ್ಸಂ ||
ದಸ್ಯುಗಳನ್ನು ಸಂಹರಿಸುವ ಸಂದರ್ಭದಲ್ಲಿ ಕುತ್ಸನ ಮಗನಾದ ದುರ್ಮಿತ್ರ ಅಥವಾ ಸುಮಿತ್ರನನ್ನು ರಕ್ಷಿಸಿದಾಗಲೂ ಇಂದ್ರನೇ ಸುಮಿತ್ರನೆಂಬ ಋಷಿಯು ನಿನ್ನನ್ನು ಈ ರೀತಿಯಾಗಿ ಸ್ತುತಿಸಿದನು. ದುರ್ಮಿತ್ರನೆಂಬ ಹೆಸರಿನ ಅದೇ ಋಷಿಯು ಸುಮಿತ್ರನೆಂಬ ಹೆಸರಿನಿಂದ ಈ ರೀತಿಯಾಗಿ ಸ್ತುತಿಸಿದನು. ಇಲ್ಲಿ ಒಂದು ಆತನ ಹೆಸರಾಗಿದ್ದು ಇನ್ನೊಂದು ಆತನಿಗೆ ಅಂಟಿಕೊಂಡ ಅಡ್ದ ಹೆಸರು ಎನ್ನುವುದು ತಿಳಿಯುತ್ತದೆ. "ಯದ್ದಸ್ಯುಹತ್ಯೇ ಕುತ್ಸ ಪುತ್ರಂ ಪ್ರಾವೋ ಯದ್ದಸ್ಯುಹತ್ಯೇ ಕುತ್ಸವತ್ಸಂ " ಎನ್ನುವುದನ್ನು ನಾವು ನೋಡಿದರೆ ಇದೇ ಕುತ್ಸ ಅಥವಾ ತ್ರಿತನ ಮಗ ತ್ರಿತ ಆಪ್ತ್ಯನೇ "ಸುಮಿತ್ರ" ಎನ್ನುವುದಾಗುತ್ತದೆ. ಇದೇ ಸುಮಿತ್ರನೇ ಪುರಾಣದಲ್ಲಿ ಪ್ರಸಿದ್ಧನಾಗಿದ್ದ ತ್ರಸದಸ್ಯು ಎನ್ನುವ ಹೆಸರಿನಿಂದ ಕಾಣಸಿಗುತ್ತಾನೆ.
ಅವಧೇಶ್ವರಿಯ ಕೊನೆಯ ಉಪಸಂಹಾರದ ಭಾಗದಲ್ಲಿ
ಚಂದ್ರಮಾ ಅಪ್ಸ್ವನ್ತರಾ ಸುಪರ್ಣೋ ಧಾವತೇ ದಿವಿ |
ನವೋ ಹಿರಣ್ಯನೇಮಯಃ ಪದಂ ವಿಂದಂತಿ ವಿದ್ಯುತೋ ವಿತ್ತಂ ಮೇ ಅಸ್ಯ ರೋದಸೀ || ಕಂಡು ಬರುತ್ತದೆ. ಕಾದಂಬರಿಯ ಓದಿಗಾಗಿ ಅಲ್ಲಿ ಸ್ವಲ್ಪ ಅರ್ಥವನ್ನು ವ್ಯತ್ಯಾಸಗೊಳಿಸಿದ್ದಾರೆ ಅಲ್ಲಿ ತ್ರಸದಸ್ಯುವಿನ ತಂದೆ ಪುರುಕುತ್ಸನು ಬಾವಿಗೆ ಬೀಳುವ ಕಥೆ ಇಲ್ಲ. ಆತ ತನ್ನ ಹೆಂಡತಿಯಿಂದ ಬೇರೆ ಮಾರ್ಗದಲ್ಲಿ ಮಗನನ್ನು ಪಡೆದ ಎನ್ನುತ್ತಾ ಸಾಗುತ್ತದೆ. ಅಲ್ಲಿ ಗಂಡ ಹೆಂಡಿರ ಸಂಬಂಧವೇ ಕಾಣಿಸುವುದಿಲ್ಲ. ಅದು ಕಾದಂಬರಿ ನಾನಿಲ್ಲಿ ಹೇಳಿದ್ದು ವೇದದ ಉಲ್ಲೇಖವನ್ನು. ಅದೇನೇ ಇರಲಿ ವೇದದಿಂದ ಪುರಾಣ, ಇತಿಹಾಸ ಅಲ್ಲಿಂದ ಕಾದಂಬರಿ ಹೀಗೆ ಹಲವು ವಿಧದಲ್ಲಿ ಒಬ್ಬನೇ ವ್ಯಕ್ತಿ ಋಷಿಯಾಗಿ ಸೂಕ್ತ ಕರ್ತಾರನಾಗಿ ರಾಜನಾಗಿ ಕಂಡು ಬರುತ್ತಾನೆ.



Wednesday 23 May 2018

"ಅರ್ಜುನೇಯ"ನೆಂದರೆ . . . . . . "ಕುತ್ಸ" (ಪುರುಕುತ್ಸ)


ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ಮೂವತ್ತರಿಂದ ನಲವತ್ತು ಗ್ರಾಮಗಳಿಗೆ ಅಧಿಪತಿಯಾಗಿ ರಾಜ್ಯಭಾರ ಮಾಡುತ್ತಿದ್ದ ಶ್ರೀಪುರುಕುತ್ಸ ಮಹಾರಜನ ರಾಜಧಾನಿಯಗಿತ್ತು.ಪುರುಕುತ್ಸನು ಸುಖ ಲೋಲುಪನು. ಇವನ ರಾಣಿ ನರ್ಮದಾ ಪುರುಕುತ್ಸಾನಿ. ಆದರೆ ಹೆಂಡತಿ ಜೊತೆಗೆ ಅವನಿಗೆ ಏನೂ ಸಂಬಂಧವಿರಲಿಲ್ಲ. ಏಕೆಂದರೆ ಪುರುಕುತ್ಸಾನಿ ಎನ್ನುವವಳು ಪುರುಕುತ್ಸ ಮಹಾರಾಜನ ತಂಗಿಯೂ ಹೌದು. ಸೂರ್ಯವಂಶದ ಪದ್ಧತಿಯಂತೆ ಚಿಕ್ಕಂದಿನಲ್ಲೇ ಅವರ ವಿವಾಹವು ಜರುಗಿಹೋಗಿತ್ತು. ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಸಹೋದರ ಸಂಬಂಧ ವಿವಾಹ ಮಾಡುವ ವ್ಯವಸ್ಥೆ ಇದು. ಪುರುಕುತ್ಸ ಮಹಾರಾಜನು ಪುರುಕುತ್ಸಾನಿ ತನ್ನ ತಂಗಿಯೆಂಬುವುದನ್ನು ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮಕ್ಕಳೂ ಆಗಲಿಲ್ಲ. ರಾಜಮನೆತನದ ಸಮಾನ ಅಧಿಕಾರಿಣಿಯಾಗಿದ್ದ ಪುರುಕುತ್ಸಾನಿ ತನ್ನ ವರ್ಚಸ್ಸಿನಿಂದ ಅಣ್ಣ ಹಾಗೂ ಗಂಡನ ರಾಜ್ಯ ಸೂತ್ರಗಳನ್ನು ಭದ್ರವಾಗಿ ಕೈಯಲ್ಲಿ ಇರಿಸಿಕೊಂಡು ನಿಜವಾದ ರಾಜ್ಞಿಯಂತೆ ಆಳುತ್ತಿದ್ದಳು. ಆದರೆ ಸಂಸಾರಸುಖವೊಂದು ಅವಳಿಗೆ ನಿಲುಕದ ವಿಷಯವಾಗಿತ್ತು. ರಾಜಮನೆತನದ ಈ ವಿಶಿಷ್ಟವಿವಾಹ ಪದ್ದತಿ ಹೇಗೆ ಮಾಯವಾಯಿತೆಂಬುದನ್ನು ಶಂಕರ ಮೊಕಾಶಿ ಪುಣೇಕರರು ತಮ್ಮ ಅವಧೇಶ್ವರಿ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.ಋಗ್ವೇದದ ಕಥೆಗಳನ್ನು ಆಧರಿಸಿ ಮತ್ತು ಮೊಹೆಂಜೋದಾರೋದಲ್ಲಿನ ಮುದ್ರೆಗಳನ್ನು ಮುಖ್ಯವಾದ ಆಕರಗಳನ್ನಿಟ್ಟುಕೊಂಡು ರಚಿಸಿದ 'ಅವಧೇಶ್ವರಿ'ಯಲ್ಲಿನ 'ಪುರುಕುತ್ಸ' ಯಾರೆಂದು ನಾನು ನೋಡೋಣವೆಂದರೆ ದೊರಕಿದವನೇ "ಕುತ್ಸ" ಎನ್ನುವವನು. ಇದೇ ಕುತ್ಸನೇ ಪುರುಕುತ್ಸನಾಗಿ ಕಾಣಿಸಿಕೊಳ್ಳುತ್ತಾನೆ.
ನೋಡೋಣ ಈ “ಕುತ್ಸ”ನೆನ್ನುವವನನ್ನು.
ತ್ವಮಾವಿಥ ಸುಶ್ರವಸಂ ತವೋತಿಭಿಸ್ತವ ತ್ರಾಮಭಿರಿಂದ್ರ ತೂರ್ವಯಾಣಂ |
ತ್ವಮಸ್ಮೈ ಕುತ್ಸಮತಿಥಿಗ್ವಮಾಯುಂ ಮಹೇ ರಾಜ್ಞೋ ಯೂನೇ ಅರಂ ಧನಾಯಃ ||
ಇದು ಋಗ್ವೇದ ಒಂದನೇ ಮಂಡಲದಲ್ಲಿನ ಸೂಕ್ತದಲ್ಲಿ ಬರುವುದು. ಇಲ್ಲಿ ಸುಶ್ರವಸಾ ಎನ್ನುವ ರಾಜನ ಕುರಿತಾಗಿ ಬರುತ್ತದೆ. ಸುಶ್ರವಸಾ ಎನ್ನುವ ರಾಜನ ಕುರಿತಾಗಿ ಎಲ್ಲಿಯೂ ವಿವರ ಸಿಗುವುದಿಲ್ಲ. ಈತ ಇಂದ್ರನಿಗೆ ನೆಚ್ಚಿನ ರಾಜನಾಗಿದ್ದ. ಪಂಚವಿಂಶ ಬ್ರಾಹ್ಮಣದಲ್ಲಿ ಉಪಗು ಎನ್ನುವವನು ಸುಶ್ರವಸ ಎನ್ನುವವನ ತಂದೆ ಎನ್ನುವುದಾಗಿ ತಿಳಿಯುತ್ತದೆ. "ಸುಶ್ರವಾಃ ಕೌಸ್ಯಃ" ಎಂಬವನು ಒಬ್ಬ ಆಚಾರ್ಯನೆಂದೂ, "ಸುಶ್ರವಾಃ ವರ್ಷಗಣ್ಯಃ" ಸುಶ್ರವಸ ಎಂಬವನು ವೃಷಗಣನ ವಂಶದವನು. ಶತಪಥ ಮತ್ತು ವಂಶ ಬ್ರಾಹ್ಮಣದಲ್ಲಿ ಹೇಳಿದೆ. ಆದರೆ ಪ್ರಸ್ತುತ ಸುಶ್ರವಸನು ಯಾರೆನ್ನುವುದು ಸರಿಯಾಗಿ ತಿಳಿಯದಿದ್ದರೂ ಸಹ "ರಾಜ್ಞೋ ದ್ವಿರ್ದಶಾ ಬಂಧುನಾ ಸುಶ್ರವಸೋ" ಎನ್ನುವ ಮಂತ್ರದಿಂದ ಈತನೊಬ್ಬ ರಾಜ ಎನ್ನುವುದು ಕಂಡು ಬರುತ್ತದೆ.
ಇಲ್ಲಿ ಕುತ್ಸ ಮತ್ತು ಅತಿಥಿಗ್ವ, ಆಯು ಎನ್ನುವ ಮೂರು ರಾಜರನ್ನು ಕುರಿತಾಗಿ ಈ ಋಕ್ಕು ಹೇಳುತ್ತಿದೆ. ಇಂದ್ರನೇ ನೀನು ಯುವಕನಾದ ಸುಶ್ರವಸನೊಡನೆ ಸೇರಿಕೊಂಡು ಕುತ್ಸ ಆಯು ಮತ್ತು ಅತಿಥಿಗ್ವರನ್ನು ಸುಶ್ರವಸನ ಅಧೀನರಾಗುವಂತೆ ಮಾಡಿದೆ ಎಂದು ಉಲ್ಲೇಖಿಸಿರುವುದರಿಂದ ಕುತ್ಸ ಎನ್ನುವವನು ರಾಜ ಎನ್ನುವುದಾಗಿಯೂ ತಿಳಿದು ಬರುತ್ತದೆ.
ಋಗ್ವೇದದ ಇನ್ನೊಂದು ಕಡೆಯಲ್ಲಿ ಕುತ್ಸನ ಕುರಿತಾಗಿ ಹೇಳುವಾಗ
ತ್ವಂ ಕುತ್ಸಂ ಶುಷ್ಣಹತ್ಯೇಷ್ವಾ ವಿಥಾರಂಧಯೋ ಅತಿಥಿಗ್ವಾಯ ಶಂಬರಂ |
ಮಹಾಂತಂ ಚಿದರ್ಬುದಂ ನಿ ಕ್ರಮೀಃ ಪದಾ ಸನಾದೇವ ದಸ್ಯು ಹತ್ಯಾಯ ಜಜ್ಞಿಷೇ ||
ಎಲೈ ಇಂದ್ರನೇ ಶುಷ್ಣನೆಂಬ ಅಸುರನನ್ನು ನಾಶಮಾಡಲಿಕ್ಕಾಗಿ ನಡೆದ ಯುದ್ಧದಲ್ಲಿ "ಕುತ್ಸನೆನ್ನುವ ಋಷಿಯನ್ನು" ಕಾಪಾಡಿದೆ. ಅತಿಥಿ ಸತ್ಕಾರದಲ್ಲಿ ನಿರತಾಗಿರುತ್ತಿದ್ದ ದಿವೋದಾಸನಿಗಾಗಿ ಶಂಬರನನ್ನು ಹಿಂಸಿಸಿ ಕೊಂದೆ, ಅತ್ಯಂತ ಪ್ರಬಲನಾದ ಅರ್ಬುದನೆನ್ನುವ ಅಸುರನನ್ನು ಕಾಲಿನಿಂದ ಮೆಟ್ಟಿ ಕೊಂದೆ ಎನ್ನುವುದಾಗಿ ಬರುತ್ತದೆ. ಇಲ್ಲಿ ಕುತ್ಸನೆನ್ನುವವನನ್ನು ಋಷಿ ಎನ್ನಲಾಗಿದೆ.
ಈತನು ಪ್ರಾಚೀನನಾದುದರಿಂದ ಅನೇಕ ಕಡೆ ಈತನ ಕುರಿತಾಗಿ ಬರುತ್ತದೆ. ಈತನನ್ನೇ ಕೆಲವು ಋಕ್ಕುಗಳಲ್ಲಿ ಅರ್ಜುನೇಯ ಎನ್ನುವುದಾಗಿಯೂ ಕರೆಯಲಾಗಿದೆ. ಅಂದರೆ ಅರ್ಜುನನ ಮಗ ಎನ್ನುವ ಅರ್ಥ ಬರುವಂತೆ ಹೇಳಲಾಗಿದೆ. ಶುಷ್ಣಾಸುರನೊಂದಿಗಿನ ಇಂದ್ರನ ಯುದ್ಧದಲ್ಲಿ ಅಲ್ಲಲ್ಲಿ ಈತನ ಹೆಸರು ಕಂಡು ಬರುತ್ತದೆ. ಋಗ್ವೇದದ ಹತ್ತನೇ ಮಂಡಲದಲ್ಲಿ ೯೪ನೇ ಋಕ್ಕಿನಲ್ಲಿ ಕುತ್ಸನು ಸ್ಮದಿಭ, ತುಗ್ರ ಮತ್ತು ವೇತಸುವನ್ನು ಯುದ್ಧವೊಂದರಲ್ಲಿ ಜಯಿಸಿದನಂತೆ. ತೂರ್ವಯಾಣ ಎನ್ನುವವನಿಂದ ಈತ ಸೋತಿದ್ದನಂತೆ. ಈತ ಇಂದ್ರನ ಸ್ನೇಹತನಾಗಿದ್ದ. ಈತನು ಬ್ರಾಹ್ಮಣಗಳಲ್ಲಿ ಅಲ್ಲಲ್ಲಿ ಪಠಿತನಾಗಿದ್ದಾನೆ.
ಈತನ ಹೆಸರು ಋಗ್ವೇದ ಒಂದರಲ್ಲೇ ಸುಮಾರು ಅರವತ್ತು ಸಲ ಕಂಡು ಬರುತ್ತದೆ. ಏಳನೇ ಮಂಡಲದಲ್ಲಿ ಒಮ್ಮೆ ಮಾತ್ರವೇ ಈತನ ಹೆಸರನ್ನು ಬಹುವಚನದಲ್ಲಿ ಪ್ರಯೋಗಿಸಲಾಗಿದೆ. ಅದೂ ಸಹ ಇಂದ್ರನನ್ನು ಸ್ತುತಿ ಮಾಡಲ್ಪಡುವ ಗಾಯಕರು ಎಂದು ಪರಿಗಣಿಸಲಾಗಿದೆ. ಋಗ್ವೇದದ ಒಂದನೇ ಮಂಡಲದಲ್ಲಿ ಹೇಳುವಂತೆ "ಯಾಭಿಃ ಕುತ್ಸಮಾರ್ಜುನೇಯಂ ಶತಕ್ರತೂ" ದಸ್ಯುವಿನ ಹೋರಾಟದ ಸಂದರ್ಭದಲ್ಲಿ ಅರ್ಜುನನ ಮಗನಾದ ಕುತ್ಸನು ಸಹಾಯ ಮಾಡಿದನಂತೆ. ಇಲ್ಲಿ ಅರ್ಜುನ ಎನ್ನುವ ಹೆಸರು ಇಂದ್ರನನ್ನು ಕುರಿತಾಗಿರುವುದರಿಂದ ಕುತ್ಸನು ಇಂದ್ರನ ಮಗ ಎಂದು ತಿಳಿದು ಬರುತ್ತದೆ. ಇನ್ನೊಂದೆಡೆ ಈತ ಯುವಕನೂ ಮತ್ತು ತೇಜಸ್ವಿಯೂ ಆಗಿದ್ದನಂತೆ. "ಇಂದ್ರಂ ಕುತ್ಸಂ ವೃತ್ರಹಣಂ ಶಚೀಪತಿಂ ಕಾಟೇ ನಿಬಾಳ್ಹ ಋಷಿರಹ್ವದೂತಯೇ" ಎನ್ನುವುದಾಗಿ ಒಂದನೇ ಮಂದಲದಲ್ಲಿ ಉಕ್ತವಾಗಿದೆ. ಅಂದರೆ ಕುತ್ಸನೆನ್ನುವ ಋಷಿಯನ್ನು ಬಾವಿಯಲ್ಲಿ ತಳ್ಲಲ್ಪಟ್ಟಾಗ ಇಂದ್ರನು ಸಹಾಯಕ್ಕೆ ಬರಲೆಂದು ಋಷಿಯು ಪ್ರಾರ್ಥಿಸುತ್ತಾನೆ. ಕುತ್ಸನನ್ನು ಋಷಿ ಎನ್ನುವುದಾಗಿಯೇ ಹೇಳಲಾಗಿದೆ. ಕುತ್ಸ ಮತ್ತು ಇಂದ್ರ ಒಂದೇ ರಥದಲ್ಲಿ ಸಂಚರಿಸುತ್ತಿದ್ದುದನ್ನು ನಾನು ಈ ಮೊದಲೊಮ್ಮೆ ನನ್ನ ಬರಹದಲ್ಲಿ ಬರೆದಿದ್ದೆ. ಶುಷ್ಣ ಎನ್ನುವ ಅಸುರನ ವಧೆಗಾಗಿ ಇಂದ್ರ ಮತ್ತು ಕುತ್ಸ ಜೊತೆಯಾಗುತ್ತಾರೆ. ಇದೇ ಕುತ್ಸನಿಗೋಸ್ಕರ ಗಂಧರ್ವರ ಮೇಲೂ ಸಹ ಯುದ್ಧ ಮಾಡಿದ್ದ ಎಂದು ಎಂಟನೇ ಮಂಡಲದಿಂದ ತಿಳಿಯುತ್ತದೆ. ಸೂರ್ಯನ ರಥವನ್ನು ಕದ್ದು ಅದರ ಒಂದು ಚಕ್ರವನ್ನು ಕುತ್ಸನಿಗೆ ಕೊಟ್ಟನಂತೆ. ಕುತ್ಸನು ಶುಷ್ಣನನ್ನು ಎದುರಿಸಲಿಕ್ಕಾಗಿ ಎಂದು ನಾಲ್ಕನೇ ಮಂಡಲದಲ್ಲಿ ಹೇಳಲಾಗಿದೆ.
ಆದರೆ ಕೆಲವೊಮ್ಮೆ ಕುತ್ಸ ಇಂದ್ರನ ವೈರಿಯಾಗಿಯೂ ಕಾಣಿಸಿಕೊಳ್ಳುತ್ತಾನೆ. ಇಂದ್ರನು ಆಯು ಮತ್ತು ಅತಿಥಿಗ್ವರನ್ನು ಎದುರಿಸುವಾಗ ಕುತ್ಸನನ್ನು ಎದುರಿಸಿದ್ದಾನೆ ಎಂದು ತಿಳಿದು ಬರುತ್ತದೆ. ತೂರ್ಯವಣನ ಪ್ರಸಂಗದಲ್ಲಿ ಈ ಂಉವರನ್ನು ಹೊಡೆದುರುಳಿಸಿದುದಾಗಿ ಬರುತ್ತದೆ. ಕುತ್ಸ ಎನ್ನುವ ಪದ ಕೆಲವೆಡೆ ಇಂದ್ರನ ಆಯುಧವನ್ನು ಸೂಚಿಸಿದ್ದೂ ಇದೆ. ಕುತ್ಸಂ ವಧಂ ವಹಃ ಇಲ್ಲಿ ಅದು ಆಯುಧವಾಗಿ ಬಂದಿದ್ದರೂ ಸಹ ಕುತ್ಸನನ್ನ ಮಹರ್ಷಿ ಎನ್ನುವುದಾಗಿಯೇ ಹೇಳಿದೆ.
ಈ ಮೊದಲೇ ಕುತ್ಸನು ಇಂದ್ರನ ಮಗನಾದುದರಿಂದ ಅರ್ಜುನೇಯ ಎನ್ನುವುದಾಗಿಯೂ ಕರೆಯಲಾಗಿದೆ ಎಂದು ಹೇಳಿದ್ದೆ. ಶತಪಥ ಬ್ರಾಹ್ಮಣದಲ್ಲಿ "ಫಲ್ಗುನೀಷ್ವಗ್ನೀ ಆದಧೀತ ಏತಾ ವಾ ಇಂದ್ರ ನಕ್ಷತ್ರಂ ....." ಎಂದು ಬರುತ್ತದೆ. ಫಲ್ಗುಣಿಗಳು ಇಂದ್ರ ನಕ್ಷತ್ರಗಳು. ಇಂದ್ರನಿಗೂ ಅರ್ಜುನ ಎನ್ನುವ ಹೆಸರಿದೆ. ಫಲ್ಗುನಿಗಳಿಗೂ ಅರ್ಜುನ ಎನ್ನುವ ಹೆಸರಿದೆ ಎನ್ನುವುದಾಗಿ ಬ್ರಾಹ್ಮಣಗಳಲ್ಲಿ ಹೇಳಿರುವುದರಿಂದ ಕುತ್ಸನಿಗೂ ಅರ್ಜುನೇಯ ಎನ್ನುವ ಹೆಸರು.
ಅಹಂ ಮನುರಭವಂ ಸೂರ್ಯಶ್ಚಾಹಂ ಕಕ್ಷೀವಾನ್ ರಶಿರಸ್ಮಿ ವಿಪ್ರಃ |
ಅಹಂ ಕುತ್ಸಮಾರ್ಜುನೇಯಂ ನ್ಯೃಂಜೇಹಂ ಕವಿರುಶನಾ ಪಶ್ಯತಾ ಮಾ ||
ವಾಮದೇವನೆಂಬ ಹೆಸರಿನಿಂದ ಪ್ರಸಿದ್ಧನಾದ ನಾನು ಎಲ್ಲವನ್ನು ಬಲ್ಲ ಪ್ರಜಾಪತಿ ಎನ್ನಿಸಿಕೊಂಡಿದ್ದೇನೆ. ಜಗತ್ತಿಗೆ ಚೇತನವನ್ನು ಕೊಡುವ ಸೂರ್ಯನೂ ನಾನಾಗಿದ್ದೇನೆ. ಕಕ್ಷೀವಾನ್ ಎನ್ನುವ ಹೆಸರುಳ್ಳ ಋಷಿಯೂ ನಾನೇ ಅರ್ಜುನಿಯ ಪುತ್ರನಾದ ಕುತ್ಸನನ್ನು ಅನುಗ್ರಹಿಸಿದವನೂ ನಾನೇ ಕ್ರಾಂತ ದರ್ಶಿಯಾದ ಉಸನಸ್ ಎನ್ನುವ ಋಷಿಯೂ ನಾನೇ ಎಂದು ಕುತ್ಸನನ್ನು ಅರ್ಜುನೇಯ ಎನ್ನುವಲ್ಲಿ ಕಾಣಿಸಿಕೊಂಡಿದ್ದಾನೆ.
ಹೀಗೆ ಕುತ್ಸನು ರಾಜನಾಗಿ, ಋಷಿಯಾಗಿ, ಮಂತ್ರ ದೃಷ್ಟಾರನಾಗಿ, ಸೂಕ್ತಕರ್ತನಾಗಿ, ಮಹರ್ಷಿಯಾಗಿ, ಇಂದ್ರನಿಗೆ ಬಿಡಲಾರದ ಮಿತ್ರನಾಗಿ, ಅಲ್ಲಲ್ಲಿ ಶತ್ರುವಾಗಿ ಕಾಣಿಸಿಕೊಳ್ಳುತ್ತಾನೆ.

ವಾಗರ್ಥಾ ವಿವ ಸಂಪ್ರಕ್ತೌ - ಚಾಲುಕ್ಯ ಆರನೇ ವಿಕ್ರಮಾದಿತ್ಯ.

ಬನವಾಸಿ ಕದಂಬರಕಾಲ, ಆಗಿನ್ನು ಕನ್ನಡದ ಲಿಪಿ ತನ್ನ ಖಾತೆ ತೆರೆಯುತ್ತಿದ್ದ ಕಾಲವದು, ಬ್ರಾಹ್ಮಿಯಿಂದ ಕಳಚಿದ ಕೊಂಡಿ ಕನ್ನಡವಾಗಿ ಗುರುತಿಸಿಕೊಂಡು ತನ್ನದೇ ಸ್ವತಂತ್ರ ಇತಿಹಾಸವನ್ನು ನಿರ್ಮಿಸಿದ ಕಾಲದಲ್ಲಿ ಕುಬ್ಜನೆನ್ನುವ ಮೇರು ಕವಿಯೊಬ್ಬ ಸಂಪದ್ಭರಿತ ಸಾಹಿತ್ಯದ ರುಚಿಯನ್ನು ಉಣಿಸುತ್ತಿದ್ದ, ಅದೇ ಕಾಲ ಅಥಾ ತುಸು ಹಿಂದು ಮುಂದಕ್ಕೆ ಗುಡ್ನಾಪುರದ ಶಾಸನ ಕವಿಯಿಂದ ಇನ್ನೊಂದು ಸಾಹಿತ್ಯದ ಕೊಡುಗೆ ಬಿಟ್ಟರೆ ಆಮೇಲೆ ಚಾಳುಕ್ಯರ ಕಾಲದಲ್ಲಿನ ಎರಡನೇ ಪುಲಕೇಶಿಯ ಕಾಲದಲ್ಲಿ ಸುಮಾರು 634 ನೇ ಇಸವಿಯಲ್ಲಿ ರವಿಕೀರ್ತಿ ಎನ್ನುವ ಆಸ್ಥಾನ ಕವಿಯೊಬ್ಬ ಐಹೊಳೆಯ ಮೇಗುತಿಯಲ್ಲಿ ಸಾಹಿತ್ಯಾತ್ಮಕವಾದ ಶಿಲಾ ಫಲಕ ಖಂಡರಿಸಿ ತಾನು ಕಾಳಿದಾಸ ಭಾರವಿಯಂತಹ ಅತ್ಯಂತ ಶ್ರೇಷ್ಠ ಕವಿಗಳಿಗಿಂತ ಕಡಿಮೆಯವನಲ್ಲ ಎಂದು ಇತಿಹಾಸ ನಿರ್ಮಿಸುತ್ತಾನೆ.
ಈಗ ನಾನು ಇಲ್ಲಿ ಹೇಳುವುದು 1029ರ ಕಾಲದ ಚಾಲುಕ್ಯ ಆರನೇ ವಿಕ್ರಮಾದಿತ್ಯನ "ಹೂಲಿ"ಶಾಸನದ ಆರಂಭದ ಸಾಲು, ಬಾಣನ ಹರ್ಷ ಚರಿತದ ಮಂಗಲಾಚರಣೆಯ ಶ್ಲೋಕ “ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲ ಸ್ತಂಭಾಯ ಶಂಭವೇ”. ಇದು ಸುಮಾರಾಗಿ ಹೆಚ್ಚಿನ ಎಲ್ಲಾ ಶಾಸನಗಳಲ್ಲೂ ಕಂಡು ಬರುತ್ತದೆ. ಬನವಾಸಿ ಕದಂಬರ ಕಾಲದ ಶಾಸನಗಳಲ್ಲಿ ಇದು ಇಲ್ಲವೇ ಇಲ್ಲ ಅನ್ನಬಹುದು. ಆದರೆ ಆಮೇಲಿನ ಚಳುಕ್ಯರ ಕಾಲದಲ್ಲಿ ನಿಧಾನವಾಗಿ ಬಳಕೆಗೆ ಬಂದಿತು.
ಮಂಗಲೇಶನ ಮಹಾಕೂಟದ ಶಾಸನದಲ್ಲಿ ದಾಟ ಎನ್ನುವ ಕವಿ "ಯಥಾ ವಿಧಿ ಹುತಾಗ್ನೀನಾಂ"ಎಂದು ರಘುವಂಶದ ಶ್ಲೋಕವನ್ನು ಉದಾಹರಿಸಿದ್ದಾನೆ. ಅದರ ನಂತರ ಕಾಣಿಸಿಕೊಂಡ ರವಿಕೀರ್ತಿ ಕಾಳಿದಾಸ ಮತ್ತು ರಾಮಾಯಣದ ಅನೇಕ ಶ್ಲೋಕಗಳನ್ನು ತನ್ನ ಶಾಸನ ಕಾವ್ಯದಲ್ಲಿ ಸಮೀಕರಿಸಿ ಇಳಿಸಿಕೊಂಡಿದ್ದಾನೆ. ಆದರೆ ಇಲ್ಲಿ ಚಾಲುಕ್ಯ ಆರನೇ ವಿಕ್ರಮಾದಿತ್ಯನ ಹೂಲಿಯ ಶಿಲಾ ಶಾಸನದಲ್ಲಿ ಬಾಣನ ಹರ್ಷಚರಿತೆಯ ಮಂಗಲಾಚರಣೆಯ ಶ್ಲೋಕದ ಜೊತೆ ಜೊತೆಗೆ ಕಾಳಿದಾಸನ ರಘುವಂಶದ ಮಂಗಲಾಚರಣೆಯ ಅತ್ಯಂತ ಜನಪ್ರಿಯ ಶ್ಲೋಕವನ್ನು ತೆಗೆದುಕೊಂಡಿದ್ದಾನೆ.
ವಾಗರ್ಥಾ ವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ || ಇದು ಕಾಳಿದಾಸನ ರಘುವಂಶದ ಮಂಗಲಾಚರಣೆ. ಕಾಳಿದಾಸ ಮಹಾಕಾವ್ಯವನ್ನು ಬರೆಯಲು ತೊಡಗಿಕೊಂಡಾಗ ಮೊಟ್ತಮೊದಲಿಗೆ ಆತ ಜಗತ್ತಿನ ಒಡೆಯರಾದ, ಜಗತ್ತಿಗೆ ತಂದೆ ತಾಯಿಯರಂತಿರುವ ಪಾರ್ವತೀ ಮತ್ತು ಪರಮೇಶ್ವರರನ್ನು ನೆನೆಯುತ್ತಾನೆ. ಇದರ ಅರ್ಥವನ್ನು ಇಲ್ಲಿ ಹೇಳಲು ತೊಡಗಿದರೆ ಅದೇ ದೊಡ್ದದಾಗುವುದರಿಂದ ಅದನ್ನು ನಾನು ಮುಂದುವರೆಸುತ್ತಿಲ್ಲ. ಆದರೆ ಈ ಶಾಸನ ಕವಿ ತಾನು ಪಾರ್ವತೀ ಪರಮೇಶ್ವರರನ್ನು ನೆನೆದು ಈ ಶಾಸನದ ವಾಕ್ಯವೂ ಸಹ ಅಷ್ಟೇ ಗಂಭೀರವಾದದ್ದು ಎನ್ನುವುದನ್ನು ಪ್ರತಿಪಾದಿಸಲು ಪ್ರಯತ್ನಿಸಿರ ಬಹುದು.
ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ಈ ಚಲುಕ್ಯ ಆರನೇ ವಿಕ್ರಮಾದಿತ್ಯನ ಎಲ್ಲ್ಲಾ ಶಾಸನಗಳೂ ಒಂದಿಲ್ಲೊಂದು ವಿಶೇಷತೆಯನ್ನು ಹೊಂದಿರುವುದು ಕಾಣಬಹುದು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಉದಾಹರಿಸುತ್ತೇನೆ.
ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿನ ಕ್ರಿ 1112 ನೇ ಇಸವಿಯ ಚಾಲುಕ್ಯ ದೊರೆ 6ನೆಯ ವಿಕ್ರಮಾದಿತ್ಯನ ಕುರಿತು. ಅಚ್ಚ ಕನ್ನಡದ ಪರಿಶುದ್ಧ ಭಾಷೆ, ಆಲಂಕಾರಿಕ ಶೈಲಿಯಲ್ಲಿ ರಮಣೀಯ ವರ್ಣನೆಗಳು, ಹೀಗೆ ಪ್ರಬುದ್ಧ ಚಿಂತನೆಗೆ ಹಚ್ಚುವ ಕಾವ್ಯಾಸಕ್ತರಿಗೆ ಮತ್ತು ಸಾಹಿತ್ಯದ ಓದುಗರಿಗೆ ಅತ್ಯಂತ ಮಹತ್ವದ ಆಕರ ಎಂದೆನಿಸುವ ಶಾಸನದಲ್ಲಿ ಬೆಳ್ವಲ, ಇಟಗೆ ಮುಂತಾದುವುಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆಸೃಷ್ಟಿಕರ್ತನಿಂದ-ಭರತನ ತನಕ : ಸ್ವಯಂಭು (ಬ್ರಹ್ಮವಿಗೆ ಮಗನಾಗಿ ಸ್ವಾಯಂಭುವ ಹುಟ್ಟಿದ ಸ್ವಾಯಂಭುವನಿಗೆ ಮನುವು ಮಗನಾಗಿ ಜನಿಸಿದ, ಮನುವಿನ ಮಗ ಪ್ರಿಯವ್ರತ ರಾಜಪ್ರಿಯವ್ರತ ರಾಜನಿಗೆ ಏಳುಜನ ಮಕ್ಕಳು "ಸಪ್ತ ದ್ವೀಪಮಂ ಪಚ್ಚುಕೊಟ್ಟ ನಿಳಾವಲ್ಲಭನಾಏಳುಜನ ತನ್ನ ಮಕ್ಕಳಿಗೆ ಹಂಚಿಕೊಟ್ಟನು. ಅಂತಹ ಪ್ರಿಯವೃತನ ವಂಶದವನು ಎಂದು ಚಾಳುಕ್ಯ ವಿಕ್ರಮಾದಿತ್ಯನನ್ನು ಹೊಗಳಲಾಗಿದೆ."ಎನಿಸಿರ್ದ್ಧಂಬುರುಹ ಸ್ವಯಂಭುಗೆ ಸುತಂ ಸ್ವಾಯಂಭುವಂ ಪುಟ್ಟಿದಂ  ಮನುವಾತಂಗೆ ಮಗಂ ಪ್ರಿಯಬ್ರತ ನೃಪಂ ತತ್ಪುತ್ರರಗ್ನೀದ್ರಮುಖ್ಯ ನರೇಂದ್ರೋತ್ತಮರೆರ್ವ್ವರಂ ತವರ್ಗ್ಗೆ ಸಪ್ತದ್ವೀಪಮಂ ಪಚ್ಚು ಕೊಟ್ಟನಿಳಾವಲ್ಲಭನಾ ಪ್ರಿಯಬ್ರತನುದಾತ್ತ ಕ್ಷಾತ್ರಗೋತ್ರೋತ್ತಮಂ || " ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 6ನೇ ಸಾಲಿನಿಂದ.
ಅಗ್ನೀದ್ರನಿಗೆ ಜಂಬೂದ್ವೀಪವೂ(ಲವಣ ಸಮುದ್ರಾವೃತ), ಮೇಧಾತಿಥಿಗೆ ಪ್ಲಕ್ಷದ್ವೀಪ(ಇಕ್ಷುರದ್ವೀಪಾವೃತ). ವಪುಷ್ಮಂತನಿಗೆ ಶಾಲ್ಮಲೀ ದ್ವೀಪ (ಸುರಾಸಮುದ್ರ). ಜ್ಯೋತಿಷ್ಮಂತನಿಗೆ ಕುಶದ್ವೀಪ. ರಾಜಚಕ್ರನೆಂದು ಖ್ಯಾತನಾದ ದ್ಯುತಿಮಂತನಿಗೆ ಕ್ರೌಂಚದ್ವೀಪ. ಹವ್ಯನನಿಗೆ ಶಾಕಾಂತದ್ವೀಪ. ಸವನನಿಗೆ ಪುಷ್ಕರದ್ವೀಪ. ಜಂಬೂದ್ವೀಪದ ಒಡೆಯನಾದ ಅಗ್ನೀಧ್ರನಿಗೆ ಒಂಭತ್ತು ಮಕ್ಕಳು ಅವರಲ್ಲಿ ನಾಭಿಯೇ ಮೊದಲಾದವರು. (ನಾಭಿಕ್ಷೇತ್ರ, ಕಿಂಪುರುಷವರ್ಷ, ಹರಿವರ್ಷ, ಇಳಾವೃತ....ಹೀಗೆಯೇ ಸಾಗುತ್ತದೆ.) ಇವರೆಲ್ಲಾ ಸೇರಿ ನವಖಂಡಗಳನ್ನು ಆಳಿದರು. ನಾಭಿಯ ಮಗ ಋ‌ಷಭನೂ ಆತನ ಮಗ ಭರತನೂ ಈ ಭರತಖಂಡವನ್ನು ಆಳಿದರು. ಇಂತಹ ಭರತಾದಿ ರಾಜರುಗಳಿಗಿಂತಲೂ ಬಹಳ ಅತ್ಯಂತ ಪ್ರಸಿದ್ಧನಾಗಿ ಈಗ ಚಕ್ರವರ್ತಿಯಾಗಿದ್ದಾನೆ ಎಂದು ಶ್ಲಾಘಿಸಲ್ಪಟ್ಟಿದೆ. ಲವಣಾಂಭೋನಿಧಿ ಸುತ್ತಿರಲ್ಕೆಸೆವ ಜಂಭೂದ್ವೀಪವಗ್ನೀಧ್ರರಾಜ್ಯವಿಳಾಸಾಸ್ಪದ ವಿಕ್ಷುವೇಷ್ಟಿತ ವಿಶಾಳಪ್ಲಕ್ಷವಕ್ಷುಣ್ಣ ಸೌಷ್ಠವ ಮೇಧಾತಿದಿಪಾಳಿತಂ ಸುರೆಗಡಲ್ ಸುತ್ತಿರ್ಪ್ಪಿನಂ ನೋಡಲೊಪ್ಪುವುದಾ ಶಾಲ್ಮಲಿ ಸೋಷ್ಮಸಾಹಸವಪುಷ್ಮದ್ಭೂಭುಜಸ್ವೀಕೃತಂ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 7ನೇ ಸಾಲಿನಿಂದ.
ಚಂದ್ರವಂಶದ ಹಿರಿಮೆಯನ್ನು ಸಾರುತ್ತಾ ...... ಎರಡನೆಯ ಕಮಳ ಗರ್ಭರುಂ ತ್ರಿಭುವನ ಸದ್ಧರ್ಮ ಸೂತ್ರಧಾರರುಂ" ಎಂದು ಚಂದ್ರವಂಶದ ಪರಂಪರೆಯನ್ನು ಹೇಳುತ್ತಾ .....  ಅನುಪಮ ಹೇಮ ತಾಮರಸಗರ್ಬ್ಭನ ಮಾನಸಪುತ್ರನತ್ರಿ ತನ್ಮನುಪತಿನೇತ್ರ ಪುತ್ರಿಕೆಗೆ ಪುಟ್ಟಿದ ನಂದನನಿಂದುಮೌಳಿಮಂಡನನ ಮೃತಾಂಶು ತತ್ಪ್ರಿಯಸುತಂ ಬುಧನುನ್ನತ ಸೋಮ ವಂಶವರ್ದ್ಧನನೊಗೆದಂ ಬುಧಂ ಗವಿಳೆಗಂ ಪೃಥುಕೀರ್ತಿರವಂ ಪುರೂರವ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 17ನೇ ಸಾಲಿನಿಂದ. ಸ್ವಾಯಂಭುವನಿಂದ ಹಿಡಿದು ಚಾಕ್ಷುಷನ ತನಕ ಆರು ಮನುಗಳು ಆಳಿದ ತರುವಾಯ ಏಳನೆಯ ವೈವಸ್ವತನು ದಕ್ಷನ ಮೊಮ್ಮಗ ವಿವಸ್ವಂತನ ಮಗನು. ಇಳೆ ಪುರೂರವ ಮುಂತಾದವರಿಂದ ಸಾಗಿ ಹಾರೀತಿಯ ಹಲವು ಮಕ್ಕಳಿಂದ ಈ ಚಾಳುಕ್ಯ ವಂಶವು ಚಂದ್ರವಂಶದಿಂದ ಕೀರ್ತಿ ಹೊಂದಿತು. ಎನ್ನುವುದಾಗಿ ಹೇಳಲಾಗಿದೆ. ಅದೇ ಸತ್ಯಾಶ್ರಯಕುಳವಾಯಿತು. 
ಚಾಳುಕ್ಯ ವಿಕ್ರಮ; "ಪೆಣದುಗ್ರಾಹಿತ ವಂಶಮಂ" ಎಂದು ಶೌರ್ಯ ಸಾಹಸ, ಅವನ ಔನ್ನತ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಕವಿ, ವಿಕ್ರಮಾದಿತ್ಯನನ್ನು ಶ್ಲೇಷ ರೂಪಕಾಲಂಕಾರಗಳನ್ನು ಬಳಸಿ ತನ್ನ ಕವಿತಾ ಸಾಮರ್ಥ್ಯವನ್ನು ಮೆರೆದಿದ್ದಾನೆ. ಕೇಳೀಗೃಹವನ್ನೂ ಉದ್ಘರಿಸಿರುವ ಕವಿಯ ಹೇಳಿರುವುದು ಹೀಗೆ.... ಪೆಣದುಗ್ರಾಹಿತವಂಶಮಂತರಿದು ಭೂಭೃದ್ವರ್ಗ್ಗಮಂ ನುರ್ಗ್ಗಿ ತಕ್ಷಣದಿಂ ಕಂಟಕಕೋಟಿಯಂ ಕಡಿದು ಸಪ್ತಾಂಭೋಧಿ ಸಂರುದ್ಧಧಾರಿಣಿಯಂ ಧೋರ್ವ್ವಳದಿಂದೆ ನೇರ್ಪ್ಪಡಿಸಿ ಕೀರ್ತ್ತಿಶ್ರೀಗೆ ಕೇಳೀಗೃಹಾಂಗಣಮಪ್ಪಂತಿರೆ ಮಾಡಿದಂ ಸುಭಟರಾರ್ಚ್ಚಾಳುಕ್ಯರಾಮಂಬರ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 25ನೇ ಸಾಲಿನಿಂದ.  ಎಂದು ಕೀರ್ತಿಶ್ರೀಗೆ ಕೇಳೀಗೃಹದಂತೆ ಎಂದು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.
ವಿಕ್ರಮಾದಿತ್ಯನ ದೋರ್ದ್ದಂಡವನ್ನು(ಭುಜಬಲ-ಬಾಹುಬಲ)ವನ್ನು ತಿಳಿಸುತ್ತಾ ಕವಿಯು - ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರಕ್ಕೆ ವಂದು ಮಹೀಕಾಮಿನಿ ದಿಗ್ಗಜಬ್ರಜದ ಕುಂಭಾಗ್ರಂಗಳಂ ಮೆಟ್ಟಿ ವಿ  ಕ್ರಮಚಕ್ರೇಶನುದಗ್ರವಪ್ಪ ಭುಜಮಂ ಬಂದೇರಿದಳ್ ರಾಗದಿಂದಮಿದೇನುನ್ನತಮಯ್ತೊ ದಕ್ಷಿಣಭುಜಂ ಚಾಳುಕ್ಯ ಚಕ್ರೇಶನ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 26ನೇ ಸಾಲಿನಿಂದ. ಆಮೆಯ(ಕೂರ್ಮ)ಬೆನ್ನಿನ ಮೇಲೆ, ಆದಿಶೇಷನ ಹೆಡೆಗಳಮೇಲೆ, ದಿಗ್ಗಜಗಳ ತಲೆಗಳ ಮೇಲೆ ಈ ಜಗತ್ತು ನಿಂತಿದೆ ಎನ್ನುವುದು ನಮ್ಮ ಪ್ರಾಚೀನ ಪುರಾಣಗಳ ಕಲ್ಪನೆ. ಆದರೆ ರಾಜನೂ ಸಹ ಭೂಧರ(ಭೂಮಿಯನ್ನು ಧರಿಸಿದವನು). ಅದೇ ರೀತಿ ವಿಕ್ರಮಾದಿತ್ಯನೂ ಧರಿಸಿದ್ದಾನೆ. ಭೂ ದೇವಿಯು ಅವನ ಭುಜಕ್ಕೆ ಏರಲು (ದೋರ್ದ್ದಂಡ) ಆಮೆಯ ಬೆನ್ನು, ಆದಿಶೇಷನ ಹೆಡೆ, ಮತ್ತು ದಿಗ್ಗಜಗಳ ತಲೆ ಮೆಟ್ಟಿಲುಗಳಾದವು ಎಂದು ಶಾಸನ ಕವಿ ವರ್ಣಿಸುತ್ತಾನೆ. 
ವಿಕ್ರಮಾದಿತ್ಯನಿಗೆ ಶತ್ರುರಾಜರೂ ಸಹ ವಂದಿಸುತ್ತಿದ್ದರು ಎನ್ನುವುದು ಕವಿಯ ಈರೀತಿಯ ಅಂಬೋಣ.... ಪುದಿದು ಪೊದಳ್ದ ವಿಕ್ರಮ ವಿಜೃಂಭಣಮಂ ತೊರೆದಾಳ್ವೆಸಕ್ಕೆ ಪೂಣ್ದೊದವಿದ ಭೀತಿಯಿಂದೆರಗಲನ್ಯನೃವಾವಳಿ ಪಾದಪೀಠದೊಳ್ ಪದನಕದರ್ಪ್ಪಣಂಗಳೊಳಗಾ ರಿಪುಭೂಪರ ರೂಪು ಚಂದ್ರ ಬಿಂಬದ ಮೃಗದಂತಿರ್ಪ್ಪುವು ನೆಗರ್ತ್ತೆಯ ವಿಕ್ರಮಚಕ್ರವರ್ತ್ತಿಯ || ಎಪಿಗ್ರಾಪಿಯ ಇಂಡಿಕಾ 13, ಪುಟ 41 ರಲ್ಲಿ 30ನೇ ಸಾಲಿನಿಂದ.  ವಿಕ್ರಮಾದಿತ್ಯನ ಅಡಿಯ ಉಗುರುಗಳ ಕನ್ನಡಿಗಳಲ್ಲಿ ಮೂಡಿದ ವೈರಿ ರಾಜರುಗಳ ರೂಪಗಳು ಚಂದ್ರ ಬಿಂಬದ ಜಿಂಕೆಯಂತೆ ಕಾಣುತ್ತಿದ್ದವು. ಇಲ್ಲಿ ವೈರಿ ರಾಜರ ಮುಖಗಳನ್ನು ಚಂದ್ರನ ಬಿಂಬಕ್ಕೆ ಹೋಲಿಸಿರುವುದು ಅತ್ಯಂತ ಮಹತ್ವದ್ದು. ವೈರಿಗಳ ಮುಖವು ಕಪ್ಪಾಗಿದ್ದವು, ಅಥವಾ ವೈರಿಗಳ ಮುಖವು ಕಳೆಗುಂದಿದ್ದವು ಎನ್ನುವುದನ್ನು ಹಾಗೆ ಕವಿ ವಿಡಂಬನೆಮಾಡಿದ್ದಾನೆ. ಹೀಗೆ ಶಾಸನ ಒಂದರ ಕವಿ ಎಂತಹ ಅದ್ಭುತವಾದ ಕಾವ್ಯದ ಸೃಷ್ಟಿಗೆ ರಾಜಾಶ್ರಯವನ್ನು ಬಳಸಿಕೊಂಡಿದ್ದ ಅಥವಾ ಕವಿಯೊಬ್ಬನನ್ನು ರಾಜ ತನ್ನ ವರ್ಣನೆಗೆ ಬಳಸಿಕೊಂಡಿರಬಹುದಾದ