Search This Blog

Monday 21 August 2017

ಸೌಂದರಾನಂದದ ಅಶ್ವಘೋಷನು - ರಾಜನಾಗಿದ್ದನೇ ????

ಬೌದ್ಧಮತ ತನ್ನ ನೆಲೆಯನ್ನು ಕಂಡುಕೊಂಡ ಕಾಲ ಅದು. ಸರಿ ಸುಮಾರು ಕ್ರಿ. ಶ. ೭೮ ರ ಅವಧಿ. ಮೊದಲ ಸಹಸ್ರಮಾನದ ಮೊದಲ ಶತಮಾನ. ಹಸಿದ ಕುದುರೆಗಳು ತಮ್ಮೆದುರಿಗಿದ್ದ ಆಹಾರವನ್ನೂ ಸೇವಿಸದೇ ಅಸ್ಖಲಿತವಾದ ಧರ್ಮವಾಣಿಯ ನುಡಿಗಳನ್ನು ಕೇಳಿಸಿಕೊಂಡು ಆಹಾರವನ್ನು ಸೇವಿಸಿದವಂತೆ ಅದಕ್ಕೆ ಆಚಾರ್ಯನೆನ್ನುವ ಗೌರವದಿಂದ ಕರೆಯಲ್ಪಡುತ್ತಿದ್ದವನು ಆಶ್ವಘೋಷನೆನ್ನುವ ಹೆಸರಿನಿಂದ ಮುಂದೆ ಪ್ರಸಿದ್ಧನಾದ. ಈತನ ತಾಯಿ ಸುವರ್ಣಾಕ್ಷಿ, ಈತ ಹುಟ್ಟಿದ್ದು ಸಾಕೇತ ಅಥವಾ ಶ್ರಾವಸ್ತಿ. ಈತನ ತಂದೆಯ ಬಗ್ಗೆ ಎಲ್ಲಿಯೂ ತಿಳಿದು ಬರದಿರುವುದು ಸೋಜಿಗವಾಗಿದೆ. ಬ್ರಾಹ್ಮಣನಾಗಿ ಜನಿಸಿದ ಈತ ನಾಲ್ಕು ವೇದಗಳು ಹದಿನಾರು ಪುರಾಣಗಳನ್ನಲ್ಲದೇ ವೇದಾಂಗಾದಿಗಳನ್ನು ಕರಗತ ಮಾಡಿಕೊಂಡಿದ್ದ. ಸಂಗೀತದಲ್ಲಿಯೂ ಸಹ ಈತ ಪಳಗಿದ್ದನೆಂದು ಇನ್ನಿತರ ಹಲವು ಗ್ರಂಥಗಳಿಂದ ತಿಳಿದು ಬರುತ್ತದೆ. ಈತ ಮುಂದೆ ಬೌದ್ಧ ಧರ್ಮದ ಸರ್ವಾಸ್ತಿವಾದದ ಕಡೆ ಮನಗೊಟ್ಟು, ಭೌದ್ಧ ಧರ್ಮ ಸ್ವೀಕರಿಸಿದ. ಈತ ಸಂಸ್ಕøತದಲ್ಲಿ ಅದೆಷ್ಟು ಪಳಗಿದ್ದ ಅಂದರೆ ಈತ ಬುದ್ಧನನ್ನು ಇನ್ನಿಲ್ಲದಂತೆ ವರ್ಣಿಸಿ ತನ್ನ ಕಾವ್ಯಾತ್ಮಕ ಗುಣಗಳ ಮೂಲಕ ಬುದ್ಧನನ್ನು ಕೊಂಡಾಡಿ ಬೌದ್ಧದರ್ಮ ಪ್ರಪಂಚದಲ್ಲಿ ಎಲ್ಲ ಕಡೆ ಬುದ್ಧನನ್ನು ಅರಿಯುವಂತೆ ಮಾಡಿದವರಲ್ಲಿ ಈತನೂ ಒಬ್ಬ. ಬುದ್ಧ ಚರಿತ ಈತನ ಸುಪ್ರಸಿದ್ಧ ಕೃತಿಗಳಲ್ಲಿ ಒಂದು.
ಸೌಂದರಾನಂದ ಈತನ ಇನ್ನೊಂದು ಕೃತಿ. ಸೌಂದರಾನಂದದಲ್ಲಿ ತನ್ನ ಪರಿಚಯವನ್ನು ಹೇಳಿಕೊಳ್ಳುತ್ತ ಈತನು :
ಸೌಂದರಾನಂದೇ ಮಹಾಕಾವ್ಯೇ ಅಜ್ಞ ವ್ಯಾಕರಣೋ ನಾಮ ಅಷ್ಟಾದಶಃ
ಸರ್ಗಃ ಆರ್ಯ ಸುವರ್ಣಾಕ್ಷೀಪುತ್ರಸ್ಯ ಸಾಕೇತಕಸ್ಯ ಭಿಕ್ಷೋರಾಚಾರ್ಯ
ಭದಂ ತಸ್ಯ ಅಶ್ವಘೋಷಸ್ಯ ಮಹಾ ಕವೇರ್ಮಹಾವಾದಿನಃ ಕೃತಿರಿಯಮ್
ಆರ್ಯ(ಗೌರವಸೂಚಕ)ಪುತ್ರಿಯಾದ ಸುವರ್ಣಾಕ್ಷೀ ದೇವಿಯ ಮಗನಾದ ನಾನು ಸಾಕೇತ ಅಂದರೆ ಅಯೋಧ್ಯೆಯವನು, ಆಧ್ಯಾತ್ಮಿಕ ಗುರುವಾಗಿ, ಭೌದ್ಧ ಭಿಕ್ಷುವಾಗಿ, ಭೌದ್ಧಮತದ ಉಪದೇಶಕನಾಗಿ, ಶ್ರೇಷ್ಠಕವಿಯಾಗಿ, ವಾಗ್ಮಿ ಮತ್ತು ಮಹಾವಾದಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಸೌಂದರನಂದದ ಹದಿನೆಂಟನೆಯ ಸರ್ಗವನ್ನು ಅಜ್ಞವ್ಯಾಕರಣವೆಂದು ಕರೆಯಲಾಗಿದೆ. ಈತನ ಕಾಲವನ್ನು ಕನಿಷ್ಕನ ಕಾಲ ಎಂದು ಪರಿಗಣಿಸಲಾಗಿದೆ. ಕ್ರಿ. ಶ. 78 ರಿಂದ 150. ಬೌದ್ಧಮತದ ಅಷ್ಟಾಂಗ ಮಾರ್ಗವನ್ನು ಕಟ್ಟು ನಿಟ್ಟಾಗಿ ಅನುಸರಿಸಿದವನು. ಅಶ್ವಘೋಷ ಬಳಸಿದ ಭಾಷೆಯನ್ನು ಗಮನಿಸಿದರೆ ಪ್ರೌಢ ಸಂಸ್ಕøತವನ್ನು ಬಳಸಿದ್ದಾನೆ. ಕವಿಯಾಗಿ ನಾಟಕಕಾರನಾಗಿ ಸಂಗೀತಜ್ಞನಾಗಿ ಗುರುತಿಸಿಕೊಂಡ ಅಶ್ವಘೋಷ
ಬುದ್ಧಚರಿತ, ಸೌಂದರನಂದ ಎನ್ನುವ ಎರಡು ಮಹಾಕಾವ್ಯಗಳು, ಸೂತ್ರಾಲಂಕಾರ, ಸ್ವಲ್ಪಭಾಗ ಮಾತ್ರ ಸಂಸ್ಕೃತದಲ್ಲಿದೆ. ಮಹಾಯಾನ ಶ್ರದ್ಧೋತ್ಪಾದ, ಆ ಕಾಲದ ಮಹಾಯಾನ ಪಂಥದ ತತ್ತ್ವವಿವರಣೆ. ಗಂಡೀಸ್ತೋತ್ರಗಾಥಾ. ಛಂದೋಬದ್ದರಚನೆಯಲ್ಲಿ, ಸಂಗೀತಶಾಸ್ತ್ರದಲ್ಲಿ ಈತನ ವಿದ್ವತ್ತು ಅಪಾರ. ವಜ್ರಸೂಚೀ ಎನ್ನುವುದು ಧರ್ಮದ ಮೇಲಿನ ಹೋರಾಟವನ್ನು ಸೂಚಿಸುವ ಗ್ರಂಥ, ಶಾರೀಪುತ್ರಪ್ರಕರಣ, ನಾಟಕದ ಕೆಲವು ಭಾಗಗಳು ಮಾತ್ರ ದೊರೆತಿವೆ. ಅಶ್ವಘೋಷ ಕನಿಷ್ಕನಿಗೆ ಗುರುವಾಗಿದ್ದ. ಕನಿಷ್ಕ 125ರ ವೇಳೆಗೆ ಪೇಷಾವರ್ ನಗರದಲ್ಲಿ ಆಳುತ್ತಿದ್ದ. ಸಾರಾನಾಥದ ಅಶೋಕಸ್ತಂಭ ಶಾಸನದಲ್ಲಿ ಅಶ್ವಘೋಷ ರಾಜನ ನಿರ್ದೇಶನವಿದೆ. ಬಹುಶಃ ಇದು ಈ ಕವಿಯನ್ನೇ ಕುರಿತಿದ್ದಿರಬಹುದು. ಹಿಂದಿನ ಕಾಲದಲ್ಲಿ ಗುರುಗಳು, ಮಠಾಧಿಪತಿಗಳು, ಜ್ಞಾನಿಗಳು, ಕವಿಗಳು ಮೊದಲಾದ ಸಮಾಜದ ಉನ್ನತ ಪುರುಷರನ್ನು ರಾಜರೆಂದು ಕರೆಯುವುದು ವಾಡಿಕೆಯಲ್ಲಿತ್ತು. ಬೌದ್ಧಗುರು ಗಳ ಸಾಲಿನಲ್ಲಿ ಅಶ್ವಘೋಷ ಪಾರ್ಶ್ವನಾದ ಮೇಲೆ ನಾಗಾರ್ಜುನನಿಗಿಂತ ಹಿಂದೆ ಬರುತ್ತಾನೆ. ಬುದ್ಧಚರಿತ ಈಗ ಸಂಸ್ಕೃತದಲ್ಲಿ ಉಪಲಬ್ಧವಿರುವುದು 13 ಸರ್ಗಗಳು ಮಾತ್ರ. ಕಳೆದ ಶತಮಾನದಲ್ಲಿ ಅಮೃತಾನಂದ ಎನ್ನುವ ವಿದ್ವಾಂಸ ಇನ್ನೂ ನಾಲ್ಕು ಸರ್ಗಗಳನ್ನು ಪುರಕವಾಗಿ ರಚಿಸಿದ. ಈ ಕಾವ್ಯದಲ್ಲಿ ಬುದ್ಧನ ಮನೋಜ್ಞವಾದ ಜೀವನ ಮತ್ತು ಜ್ಞಾನೋಪದೇಶ ರಮಣೀಯವಾಗಿ ಚಿತ್ರಿಸಲ್ಪಟ್ಟಿವೆ. ಸರ್ಗಾನುಸಾರ ಕಥೆ ಹೀಗಿದೆ. ಇಕ್ಷ್ವಾಕು ವಂಶದ, ಶಾಕ್ಯರ ದೊರೆ ಶುದ್ಧೋದನನಿಗೆ ಅಪಗತ ಮಾಯೆಯಾದ ಮಾಯಾದೇವಿ ರಾಣಿ. ಕಪಿಲವಸ್ತು ರಾಜಧಾನಿ. ಒಮ್ಮೆ ಮಾಯಾದೇವಿಗೆ ಸ್ವಪ್ನದಲ್ಲಿ ಶ್ವೇತಗಜವೊಂದು ಹೊಟ್ಟೆಯನ್ನು ಹೊಕ್ಕಂತೆ ಭಾಸವಾಗುತ್ತದೆ. ಇದು ನಿಜವೋ ಎಂಬಂತೆ ಗರ್ಭವತಿಯಾಗುತ್ತಾಳೆ. ಕೆಲವು ದಿನಗಳು ಕಳೆಯಲು, ವನ ವಿಹಾರಕಾಲದಲ್ಲಿ ಲುಂಬಿನೀವನ ದಲ್ಲಿ ಲತಾವಲಂಬಿನಿಯಾಗಿದ್ದಾಗ ಮಾಯಾದೇವಿಯ ಪಾಶ್ರ್ವದಿಂದಲೇ ವೇದನಾರಹಿತವಾಗಿ ಶಿಶುವಿನ ಜನನವಾಗುತ್ತದೆ. ಜನಿಸಿದ ಕೂಡಲೇ ಮಗು ಎರಡು ಹೆಜ್ಜೆ ನಡೆದು ಸಿಂಹವಾಣಿ ಯಿಂದ ಹೀಗೆ ನುಡಿಯುತ್ತದೆ: ಜಗತ್ತಿನ ಒಳಿತಿಗಾಗಿ ಜ್ಞಾನಾರ್ಜನೆಗಾಗಿ ಜನ್ಮ ತಳೆದಿದ್ದೇನೆ ; ನನಗೆ ಇದೇ ಕಡೆಯ ಜನ್ಮ. ಪ್ರಕೃತಿಮಾತೆ ಅದ್ಭುತವಾಗಿ ಆಶ್ಚರ್ಯಜನಕವಾದ ಸಂಗತಿಗಳಿಂದ ಬುದ್ಧ ಜನನವನ್ನು ಸೂಚಿಸುತ್ತಾಳೆ. ತಾಯಿ ತಂದೆಗಳಿಗೆ ಆನಂದ ಮತ್ತು ಭಯ ಏಕಕಾಲದಲ್ಲುಂಟಾಗುತ್ತದೆ. ಬ್ರಾಹ್ಮಣರು ಈ ಶಿಶು ಮಹಾಜ್ಞಾನಿ ಅಥವಾ ಚಕ್ರವರ್ತಿಯಾಗು ವುದು ನಿಜವೆಂದು ಭವಿಷ್ಯ ನುಡಿಯುತ್ತಾರೆ. ಅಷ್ಟರಲ್ಲಿ ತನ್ನ ತಪೋಬಲದಿಂದ ಬುದ್ಧಜನ್ಮವನ್ನರಿತ ಅಸಿತ ಮಹರ್ಷಿ ತನ್ನ ಶೋಕವನ್ನು ನುಂಗಿಕೊಂಡು ಮುದುಕನಾದ ತಾನು ಬುದ್ಧನ ಉಪದೇಶವನ್ನು ಕೇಳುವವರೆಗೆ ಜೀವಿಸಿರುವುದಿಲ್ಲವಲ್ಲ ಎಂದು ಹಲುಬುತ್ತಾನೆ. ಜಗತ್ತಿನ ಮೋಹಾಂಧಕಾರವನ್ನು ನಾಶಗೊಳಿಸುವ ಸೂರ್ಯನೇ ಮಗನಾದರೂ ಮಗ ಎಲ್ಲಿ ಋಷಿಯೇ ಆಗುವನೋ ಎಂದು ಶುದ್ಧೋದನನಿಗೆ ಚಿಂತೆ ಪ್ರಾರಂಭವಾಯಿತು. ಜಾತಕರ್ಮಾದಿಗಳನ್ನು ನೆರವೇರಿಸಿ ಪುರಪ್ರವೇಶ ಮಾಡುತ್ತಾನೆ. ಹೀಗೇ ಕಥೆ ಸಾಗುತ್ತದೆ. ಇದರಲ್ಲಿ ಬುದ್ಧನ ಧರ್ಮಬೋಧೆ ಅವನ ದೈಹಿಕ ಅವಶೇಷಗಳ ವಿಚಾರವಾಗಿ ನಡೆದ ಕಲಹಗಳು ಮತ್ತು ಅಶೋಕ ಚಕ್ರವರ್ತಿಯ ವೃತ್ತಾಂತ ಇವೆಲ್ಲ ಉಕ್ತವಾಗಿವೆ. ಸೌಂದರನಂದ ಹದಿನೆಂಟು ಸರ್ಗಗಳ ಕಾವ್ಯ. ಬಹುಶಃ ಇದೇ ಅಶ್ವಘೋಷನ ಪ್ರಥಮ ಕೃತಿಯಾಗಿರಬಹುದು. ಏಕೆಂದರೆ ಈ ಗ್ರಂಥದ ಯಾವ ಭಾಗದಲ್ಲೂ ಇತರ ಗ್ರಂಥಗಳನ್ನು ಹೆಸರಿಸಿಲ್ಲ. ಅಶ್ವ್ಘೋಷನನ್ನು ರಾಜನೆಂದು ಕರೆದಿರುವುದು, ಕವಿಯೊಬ್ಬನನ್ನು ರಾಜಮರ್ಯಾದೆಯಿಂದ ಗೌರವಿಸಿ ಅವನ ಬಗ್ಗೆ ಶಾಸನವನ್ನೇ ಬರೆಸಿರುವುದು ಕವಿಗೆ ಕೊಟ್ಟ ಅತ್ಯುನ್ನತ ಗೌರವ.





No comments:

Post a Comment