Search This Blog

Tuesday 29 August 2017

ವನವಾಸಿ ಯೋಶಿದೀಕ್ಷಣ ವಿಮುಗ್ಧ ಕರ್ಣಾರ ಯುವತೀ ........

ರಾಮಾಯಣದ ಅಯೋಧ್ಯಾ ಕಾಂಡದ ೯ನೇ ಅಧ್ಯಾಯದಲ್ಲಿ ಬನವಾಸಿಯನ್ನು ವೈಜಯನ್ತಿ ಎಂದು ಕರೆಯಲಾಗಿದೆ.
ದಿಶಾಮಾಸ್ತಾಯ ವೈ ದೇವೀ ದಕ್ಷಿಣಾಂ ದಂಡಕಾನ್ ಪ್ರತಿ | ವೈಜಯಂತಮಿತಿಖ್ಯಾತಂ ಪುರಂ ಯತ್ ತಿಮಿಧ್ವಜಃ || ಎಂದು ಬನವಾಸಿಯನ್ನು ಕುರಿತಾಗಿ ಉಲ್ಲೇಖಿಸಲಾಗಿದೆ. ೯:೩:೧೩
ದಂಡಕಾರಣ್ಯದ ದಕ್ಷ್ಜಿಣದ ವೈಜಯಂತಿ ಪುರದಲ್ಲಿ ತಿಮಿಧ್ವಜನೆನ್ನುವ ರಾಕ್ಷಸ ಇದ್ದ ಎನ್ನುವ ಉಲ್ಲೇಖ ಸಿಗುತ್ತದೆ.
ಸುಮಾರು ಆರನೇ ಶತಮಾನದಲ್ಲಿದ್ದ ವರಾಹಮಿಹಿರ ತನ್ನ ಬೃಹತ್ ಸಂಹಿತೆಯ ಹದಿನಾಲ್ಕನೆ ಅಧ್ಯಾಯದ ೧೨ನೇ ಶ್ಲೋಕದಲ್ಲಿ "ಕಂಟದ್ಕ್ಕನಕವನವಾಸಿ ....ಎಂದು ಬನವಾಸಿಯಯ ಉಲ್ಲೇಖವನ್ನು ಕೊಡುತ್ತಾನೆ.
ಸುಮಾರು ಹತ್ತನೇ ಶತಮಾನದಲ್ಲಿದ್ದ ಸೋಮದೇವನು ತನ್ನ ಯಶಸ್ತಿಲಕದಲ್ಲಿ
ವನವಾಸಿ ಯೋಶಿದೀಕ್ಷಣ ವಿಮುಗ್ಧ ಕರ್ಣಾರ ಯುವತೀ ಎಂದು ಬನವಾಸಿಯನ್ನು ವರ್ಣಿಸುತ್ತಾನೆ.
ಹತ್ತನೇ ಶತಮಾನದ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ಬಣ್ಣಿಸಿದಷ್ಟು ಮತ್ತಾರೂ ಹೊಗಳಿದಂತೆ ಕಾಣಿಸುವುದಿಲ್ಲ. ತಾನು ಮರಿದುಂಬಿಯಾಗಿಯಾದರೂ ಬನವಾಸಿಯಲ್ಲಿ ಜನಿಸಬೇಕೆನ್ನುವ ಹಂಬಲವನ್ನು ಹೇಳುತ್ತಾನೆ.
ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತಜಾತಿ
ಸಂಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಮ್
ನಗೆಮೊಗೆದೊಳ್ ಪಳಂಬಲೆಯೆ ಕೂಡುವ ನಲ್ಲರೆ ನೋಳ್ಪೊಡಾವ
ಬೆಟ್ಟುಗಳೊಳಮಾವ ನಂದನ ವನಂಗಳೊಳಮ್ ಬನವಾಸಿ ದೇಶದೊಳ್[4-28]

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಮ್ಪಿನಿಮ್ಪುಗ
ಳ್ಗಾಗರವಾದ ಮಾನಸರೆ ಮಾನಸರಮ್ತವರಾಗಿ ಪುಟ್ಟಲೇ
ನಾಗೆಯುಮೇನೊ ತೀರ್ದುಪು[ದೆ] ತೀರದೊಡಮ್ ಮಹಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್[4-29]

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ಡೊಡಮಿಂಬನಾಳ್ದ
ಗೇಯಮ್ ಕಿವಿವೊಕ್ಕೊಡಮ್ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಮ್
ಪಂಗೆಡೆಗೊಂಡಮ್ ಮಧುಮಹೋತ್ಸವಮದೊಡಮೇನನೆಂಬೆನಾ
ರಂಕುಸವಿಟ್ಟೊಡಮ್ ನೆನೆವುದೆನ್ನ ಮನಮ್ ವನವಾಸಿ ದೇಶಮಮ್[4-30]

ಚಾಮರಸನು ತನ್ನ ಪ್ರಭುಲಿಂಗ ಲೀಲೆಯಲ್ಲಿ ಬನವಾಸಿಯ ವರ್ಣನೆಯನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.
ಅದರೊಳ್ ಅವನಿ ಕಾಂತೆಗೊಪ್ಪುವ
ವದನವೋ ಶ್ರಿಂಗಾರ ಸರದ
ಸದನವೋ ಸೊಬಗಿನ ಸುಮನದ ಸುಖದ ನೆಲೆವೀಡೋ
ಸುದತಿರತ್ನಗಳೊಗೆವ ಚೆಲುವಂ
ಬುದ್ಧಿಯೋ ಪೇಳೆನೆ ಸಕಲ ಸೌರಂ
ಭದಲ್ಲಿ ಸೊಗಸಿಹುದಲ್ಲಿ ಬನವಾಸಿ ಎಂಬ ಪಟ್ಟಣವು ಎಂದು ಬನವಾಸಿಯನ್ನು ಅಲ್ಲಿನ ಜನರನ್ನು ಮತ್ತು ಭವನಗಳ ಕುರಿತಾಗಿ ಹೇಳುತ್ತಾನೆ.
ಇತ್ತಿಚಿನ ಕವಿ ಬೇಂದ್ರೆಯವರು ಸಹ ಬನವಾಸಿಯನ್ನು ತಮ್ಮ ಕವಿತೆ ಗಂಗಾವತರಣದ ಮೂಲಕ ವಿಜ್ರಂಭಿಸುತ್ತಾರೆ.
ಏಲಾವನ ಲವಲೀ ಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss
ಎಂದು ಹೇಳಿಕೊಳ್ಳುತ್ತಾರೆ.
ಆದರೆ ಇವೆಲ್ಲಕ್ಕೂ ಮಿಗಿಲಾಗಿ ಕದಂಬರ ಹೆಚ್ಚಿನೆಲ್ಲಾ ಶಾಸನಗಳಲ್ಲಿಯೂ ಸಹ ವೈಜಯಂತೀ ಪುರವನ್ನು ನೆನೆಯದೇ ಇರುವುದಿಲ್ಲ. ನಮಗೆ ಅಧಿಕೃತವಾಗಿ ಕಣ್ಣಿಗೆ ಕಾನೀಸುವ ದಾಖಲೆಗಳು ಕದಂಬರ ಶಾಸನಗಳೇ. ಒಂದು ದೃಷ್ಟಿಯಲ್ಲಿ ನಾಗಾರಾಧನೆ ಆರಂಭವಾಗಿರುವುದೇ ಬನವಾಸಿಯಿಂದ ಅಂದರೆ ಅದು ತಪ್ಪಿರಲಿಕ್ಕಿಲ್ಲ. ಸಾತಕರ್ಣಿಗಳ ಕಾಲದ ಚುಟುಕಲಾನಂದ ಸಾತಕರ್ಣಿ ನಾಗನನ್ನು ನಾಗ ಶಿಲ್ಪವನ್ನು ಕೆತ್ತಿಸಿದ ಉಲ್ಲೇಖ ಅದೇ ನಾಗ ಶಿಲ್ಪದಲ್ಲಿ ನಗೆ ಕಾಣಸಿಗುವುದಲ್ಲದೇ ಶಿಲ್ಪಿಯೊಬ್ಬ ತಾನು ಈ ನಾಗನನ್ನು ಮಾಡಿದ್ದೇನೆ ಎಂದುಕೊಂಡಿರುವುದು ವಿಶೇಷವಾಗಿ ಕಾಣಿಸುತ್ತದೆ. ಭಾಶಃಎ ಪ್ರಾಕೃತವಾಗಿದ್ದು ಲಿಪಿ ಬ್ರಾಹ್ಮಿಯಲ್ಲಿದೆ.
 


No comments:

Post a Comment