Search This Blog

Thursday 16 July 2020

ಆಚಾರದಲ್ಲಿ ಆದರ್ಶವನ್ನು ಬೋಧಿಸುವವ : ಕಣಿಕನ ಕೂಟನೀತಿ ೨

ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು. ಎನ್ನುವುದನ್ನೇ ಈ ಶ್ಲೋಕದಲ್ಲಿ ಹೇಳಲಾಗಿದೆ.

ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ ||

ತನಗೆ ಕೋಪಬಂದಿದ್ದರೂ ಮುಖದಲ್ಲಿ ಅದನ್ನು ಪ್ರಕಟಿಸಬಾರದು. ಮಾತಿನಲ್ಲಿಯೂ ಸಹ ಕೋಪದ ಭಾವ  ಮತ್ತು ನಿಷ್ಠುರತೆಯನ್ನು ತೋರಿಸಬಾರದು. ಯಾವಾಗಲೂ ನಸುನಗುತ್ತ್ತಲೇ ಮಾತನಾಡಬೇಕು. ಕೋಪದಿಂದ ಬೇರೆಯವರನ್ನು ನಿಂದಿಸಬಾರದು ಎನ್ನುವುದನ್ನು ಕಣಿಕ ಧೃತರಾಷ್ಟ್ರನಿಗೆ ಈ ಶ್ಲೋಕದಿಂದ ಹೇಳುತ್ತಾನೆ.

ಕ್ರುದ್ಧೋಽಪ್ಯಕ್ರುದ್ಧರೂಪಃ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ |
ನ ಚಾಪ್ಯನ್ಯಮಪಧ್ವಂಸೇತ್ಕದಾಚಿತ್ಕೋಪಸಂಯುತಃ || ೫೫ ||

ಶತ್ರುಗಳ ನಾಶವನ್ನು ಹೇಳುತ್ತಾ . . . .
ಪ್ರಹರಿಷ್ಯನ್ಪ್ರಿಯಂ ಬ್ರೂಯಾತ್ಪ್ರಹರನ್ನಪಿ ಭಾರತ |
ಪ್ರಹೃತ್ಯ ಚ ಕೃಪಾಯೀತ ಶೋಚೇತ ಚ ರುದೇತ ಚ || ೫೬ ||

ಶತ್ರುವನ್ನು ನಾಶಮಾಡುವ ಮೊದಲು ಮತ್ತು ನಾಶಮಾಡುವ ಕಾಲದಲ್ಲಿ ಹಿತವಾದ ಮಾತುಗಳನ್ನೇ ಹೇಳುತ್ತಿರಬೇಕು. ಶತ್ರುವನ್ನು ಧ್ವಂಸಮಾಡಿದನಂತರ ಅವನಿಗಾಗಿ ಪರಿತಾಪಪಡಬೇಕು ಅಥವಾ ಅಂತಹ ಭಾವನೆಯನ್ನು ವ್ಯಕ್ತಪಡಿಸಬೇಕು. ಕೆಲವು ಸಂದರ್ಭಗಳಲ್ಲಿ ಅವನ ಪ್ರಶಂಸೆಮಾಡುತ್ತಾ ದುಃಖಿಸುತ್ತಾ ಅಳಬೇಕಾಗುತ್ತದೆ.
ಶತ್ರುವು ತನಗಿಂತ ಪರಾಕ್ರಮಿಯಾಗಿದ್ದಾಗ ಅವನನ್ನು ವಿದವಿದವಾಗಿ ಹೊಗಳಿ ಸಂತೈಸುತ್ತಲಿದ್ದು, ಅವನು ದುರ್ಬಲನಾದ ತಕ್ಷಣ ಅಥವಾ ಅವನು ನತದೃಷ್ಟನಾದದ್ದು ತಿಳಿದೊಡನೆಯೇ ಧ್ವಂಸಮಾಡಬೇಕು.

ಅಪರಾಧವನ್ನು ತಿಳಿಸುತ್ತಾ . . . .
ಅಪಿ ಘೋರಾಪರಾಧಸ್ಯ ಧರ್ಮಮಾಶ್ರಿತ್ಯ ತಿಷ್ಠತಃ |
ಸ ಹಿ ಪ್ರಚ್ಛಾದ್ಯತೇ ದೋಷಃ ಶೈಲೋ ಮೇಘೈರಿವಾಸಿತೈಃ || ೫೮ || ನಗುನಗುತ್ತಾ ಜನರಿಗೆ ಆಚಾರದ ಆದರ್ಶವನ್ನು ಬೋಧಿಸುತ್ತಾ ತೋರಿಕೆಯ ಸದಾಚಾರ ಪ್ರದರ್ಶನವು ತಾನು ಮಾಡಿದ ಅಪರಾಧಕ್ಕೆ ಒಂದು ಆವರಣದ ರೂಪದಲ್ಲಿರುತ್ತದೆ. ಕಪ್ಪುಮೋಡಗಳು ಪರ್ವತವನ್ನೇ ಮುಚ್ಚುವಂತೆ ಸದಾಚಾರದ ತೋರಿಕೆಯು ಅವನ ಮಹಾಪರಾಧವನ್ನೂ ಮುಚ್ಚಿಬಿಡುವುದು.

ಯಃ ಸ್ಯಾದನುಪ್ರಾಪ್ತವಧಸ್ತಸ್ಯಾಗಾರಂ ಪ್ರದೀಪಯೇತ್ |
ಅಧನಾನ್ನಾಸ್ತಿಕಾಂಶ್ಚೌರಾನ್ವಿಷಯೇ ಸ್ವೇ ನ ವಾಸಯೇತ್ || ೫೯ || ಯಾರನ್ನು ಕೊಲ್ಲಬೇಕಾಗಿರುವುದೋ ಅಂತಹವರ ಮನೆಯನ್ನೇ ಭಸ್ಮಮಾಡಬೇಕು. ಅವರ ಮನೆಗೆ ಬೆಂಕಿ ಹಾಕಿ ನಿಃಶೇಷವಾಗಿ ನಾಶಮಾಡಬೇಕು. ದರಿದ್ರರನ್ನೂ, ನಾಸ್ತಿಕರನ್ನೂ ಮತ್ತು ಕಳ್ಳರನ್ನೂ ದೇಶದಲ್ಲಿ ಇರಲಿಕ್ಕೆ ಆಸ್ಪದ ಕೊಡಬಾರದು. ಇಂತವರು ಶತ್ರುಗಳ ಕೈಗೊಂಬೆಗಳಾಗುವ ಸಂಭವ ಇರುತ್ತದೆ.

ಶತ್ರುವು ಬಂದ ತಕ್ಷಣ ಆತನನ್ನು ಸ್ವಾಗತಿಸಿ ಅವನಿಗೆ ಆಸನ ಮತ್ತು ಭೋಜನಾದಿಗಳಿಂದ ಉಪಚರಿಸಿ, ಅವನಿಗೆ ಇಷ್ಟವಾದ ವಸ್ತುವನ್ನು ಕೊಟ್ಟು ಸಂಪೂರ್ಣವಿಶ್ವಾಸಿಯನ್ನಾಗಿ ಮಾಡಿಕೊಂಡು ಅನಂತರ ನಾಶಮಾಡಬೇಕು. ಕಚ್ಚಿದ ಕೂಡಲೇ ಸಾಯಿಸುವ ವಿಷದ ಹಲ್ಲಿರುವ ಹಾವಿನಂತೆ ಶತ್ರುವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸುವ ತೀಕ್ಷ್ಣವಾದ ಆಯುಧವನ್ನು ಹೊಂದಿರಬೇಕು.

ಅಶಙ್ಕಿತೇಭ್ಯಃ ಶಙ್ಕೀತ ಶಙ್ಕಿತೇಭ್ಯಶ್ಚ ಸರ್ವಶಃ |
ಆಶಙ್ಕ್ಯಾದ್ಭಯಮುತ್ಪನ್ನಮಪಿ ಮೂಲಂ ನಿಕೃನ್ತತಿ || ೬೧ || ನಿನಗೆ ಯಾರ ವಿಷಯದಲ್ಲಿ ಸಂಶಯ ಇರುವುದಿಲ್ಲವೋ ಅವರನ್ನು ಬಹಳ ಜಾಗ್ರತೆಯಿಂದ ಪರೀಕ್ಷಿಸುತ್ತಲೇ ಇರಬೇಕು. ನಿನಗೆ ಆಗದವರೆಂದು ಯಾರ ವಿಷಯದಲ್ಲಿ ಸಂಶಯವಿರುವುದೋ ಅವರ ವಿಷಯದಲ್ಲಿ ನೀನು ಎಲ್ಲ ರೀತಿಯಿಂದಲೂ ಎಚ್ಚರದಿಂದಿರಬೇಕು. ನೀನು ಯಾರ ವಿಷಯದಲ್ಲಿ ಸಂಶಯಪಡುವುದಿಲ್ಲವೋ ಮತ್ತು ಯಾರು ನಿನ್ನ ನಂಬಿಕೆಗೆ ಪಾತ್ರರೆಂದು ಭಾವಿಸಿರುವೆಯೋ ಅಂತಹವರಿಂದಲೇ ಅಪಾಯವೇನಾದರೂ ಸಂಭವಿಸಿದರೆ ಅದು ನೀನು ತಡೆದುಕೊಳ್ಳಲಾಗದ ಅಪಾಯವಾಗುತ್ತದೆ. ನಿನ್ನನ್ನೇ ಅದು ಸಂಪೂರ್ಣವಾಗಿ ನಾಶಗೊಳಿಸಿಬಿಡುತ್ತದೆ.

ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್ |
ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃನ್ತತಿ || ೬೨ || ವಿಶ್ವಾಸಕ್ಕೆ ಯೋಗ್ಯರಲ್ಲದವರನ್ನು ನಂಬಲೇಬಾರದು. ವಿಶ್ವಾಸಕ್ಕೆ ಯೋಗ್ಯರಾದವರನ್ನೂ ಸಂಪೂರ್ಣವಾಗಿ ನಂಬಬಾರದು. ಏಕೆಂದರೆ ಹೆಚ್ಚು ನಂಬಿದವನಿಂದ ಉಂಟಾಗುವ ಭಯವು ರಾಜನನ್ನೇ ಸಮೂಲವಾಗಿ ನಾಶಮಾಡಿಬಿಡುತ್ತದೆ. ವಿಶ್ವಸನೀಯರಾಗಿರುವವರೇನಾದರೂ ಶತ್ರುಗಳ ಕಡೆಗೆ ಸೇರಿಬಿಟ್ಟರೆ ನಿನ್ನ ಮೂಲೋತ್ಪಾಟನೆಯಾಗುತ್ತದೆ.

1 comment: