Search This Blog

Wednesday 15 July 2020

ಮಹಾಭಾರತದ ರಾಜಕಾರಣ : ಕಣಿಕನ ಕೂಟನೀತಿ ೧


ಪ್ರಾಯಶಃ ಮಹಾಭಾರತದ ಈ ಒಪಂದು ಸಂದರ್ಭ ಇರದೇ ಇದ್ದಿದ್ದರೇ ಪಾಂಡವರ ಮತ್ತು ಕೌರವರ ಮಧ್ಯೇ ಕಂದಕವೋ ದ್ವೇಷವೋ ಆಗುತ್ತಿರಲಿಲ್ಲವಿರಬಹುದು.

ಮಹಾಭಾರತದ ಆದಿಪರ್ವದಲ್ಲಿ ಬರುವ ಸಂಭವಪರ್ವದಲ್ಲಿ ಧೃತರಾಷ್ಟ್ರನಿಗೆ ಕಣಿಕನ ಕೂಟನೀತಿಯ ಉಪದೇಶವನ್ನು ವೈಶಂಪಾಯನರು ಹೇಳುತ್ತಾರೆ. ಪಾಂಡುವಿನ ಮಕ್ಕಳು ದಿನದಿಂದ ದಿನಕ್ಕೆ ಬಲದಲ್ಲಿ ತನ್ನ ಮಕ್ಕಳಿಗಿಂತಲೂ ಔನ್ನತ್ಯವನ್ನು ಹೊಂದುತ್ತಿರುವರೆಂಬುದನ್ನು ಕೇಳಿ ಧೃತರಾಷ್ಟ್ರನು ವ್ಯಾಕುಲನಾಗಿ ಚಿಂತೆಗೀಡಾಗುತ್ತಾನೆ. ಬೇರೆ ಮಾರ್ಗವನ್ನು ಕಾಣದೇ ಆ ಕಾಲದ ಪ್ರಸಿದ್ಧರಾಜಕಾರಣಿಯಾದ ಕಣಿಕನೆಂಬ ಮಂತ್ರಿಯನ್ನು ಕರೆಸಿ ಏಕಾಂತದಲ್ಲಿ ಮಾತನಾಡುತ್ತಾನೆ. ಕಣಿಕ ರಾಜಕಾರಣಿ ಮಾತ್ರವಲ ಚಾಣಾಕ್ಷನಾದ ರಾಜನೀತಿಜ್ಞನೂ ಆಗಿದ್ದನು. ಅವನ ಮತ್ತು ಧೃತರಾಷ್ಟ್ರನ ಮಾತುಕಥೆಗಳು ಮಹಾಭಾರತದಲ್ಲಿ ಪ್ರಸಿದ್ಧ.
ಕಣಿಕನು ಆರಂಭದಲ್ಲಿಯೇ ತಾನು ಹೇಳಿದ್ದರಲ್ಲಿ ಸೂಕ್ತವಾಗಿರುವುಇದನ್ನು ನೀನು ಅನುಸರಿಸು ಎಂದು ಆರಂಭಿಸುತ್ತಾನೆ.

‘ಪಾಂಡವರೇ ನಿನ್ನ ಶತ್ರುಗಳು’ ಎನ್ನುವ ಮಾತನ್ನು ಕಣಿಕನು ನೇರವಾಗಿ ಹೇಳದಿದ್ದರೂ ‘ಪಾಣ್ಡುಪುತ್ರೇಭ್ಯಃ ಆತ್ಮಾನಂ ರಕ್ಷ’ ಎನ್ನುವುದು ‘ಪಾಂಡುವಿನ ಮಕ್ಕಳಿಂದ ನಿನ್ನನ್ನು ಸಂರಕ್ಷಿಸಿಕೋ’ಎಂದು ಕಣಿಕನು ಹೇಳುವ ಮಾತು ‘ಪಾಂಡವರೇ ತನ್ನ ಶತ್ರುಗಳು’ಎಂಬ ಅಭಿಪ್ರಾಯವು ಧೃತರಾಷ್ಟ್ರನ ಮನಸ್ಸಿನಲ್ಲಿ ದೃಢವಾಗಿ ನಿಂತು ಬಿಡುತ್ತದೆ. ಪಾಂಡವರನ್ನು ಹೇಗಾದರೂ ಮಾಡಿ ನಿರ್ನಾಮ ಮಾಡಬೇಕೆನ್ನುವ ದುರ್ಯೋಧನನ ಯೋಜನೆಗಳಿಗೆ ಧೃತರಾಷ್ಟ್ರನ ಬೆಂಬಲ ಸಿಕ್ಕಿದ್ದು ಕಣಿಕನ ರಾಜನೀತಿಯ ಉಪದೇಶದ ಪ್ರಭಾವದಿಂದಲೇ.

ನಿತ್ಯಮುದ್ಯತದಣ್ಡಃ ಸ್ಯಾನ್ನಿತ್ಯಂ ವಿವೃತಪೌರುಷಃ |
ಅಚ್ಛಿದ್ರಶ್ಛಿದ್ರದರ್ಶೀ ಸ್ಯಾತ್ಪರೇಷಾಂ ವಿವರಾನುಗಃ || ೬ || ರಾಜರು ಆಯುಧ ಸನ್ನದ್ಧರಾಗಿಯೇ ಇರಬೇಕು. ತಮ್ಮ ಸೈನ್ಯದ ಪರಾಕ್ರಮವನ್ನು ಪ್ರಶಂಸಿಸಿ ಸೈನಿಕರನ್ನು ಹುರಿದುಂಬಿಸಬೇಕು. ತಮ್ಮಲ್ಲಿರುವ ಯಾವುದೇ ಲೋಪ ದೋಷಗಳೂ ಮತ್ತು ನ್ಯೂನತೆಗಳೂ ಬಹಿರಂಗವಾಗದಂತೆ ನೋಡಿಕೊಳ್ಳಬೇಕು ಮತ್ತು ಶತ್ರುವಿನಲ್ಲಿರುವ ಲೋಪ ದೋಷಗಳನ್ನೂ, ನ್ಯೂನತೆಗಳನ್ನೂ ತಿಳಿದುಕೊಳ್ಳುತ್ತಿರಬೇಕು. ಎನ್ನುವ ಕಣಿಕನ ಮಾತು ಇಂದಿಗೂ ಬಹಳ ಪ್ರಸ್ತುತವೆನ್ನಿಸುತ್ತದೆ.

ನಿತ್ಯಮುದ್ಯತದಣ್ಡಾದ್ಧಿ ಭೃಶಮುದ್ವಿಜತೇ ಜನಃ |
ತಸ್ಮಾತ್ಸರ್ವಾಣಿ ಕಾರ್ಯಾಣಿ ದಣ್ಡೇನೈವ ವಿಧಾರಯೇತ್ || ೭ || ಈ ಶ್ಲೋಕದಲ್ಲಿನ ಮಹತ್ವ ಗಮನಿಸಬಹುದು. ಇಲ್ಲಿ ದಂಡ ಎನ್ನುವ ಪದ ಪ್ರಯೋಗವಾಗಿದೆ. ಇಲ್ಲಿ ದಂಡವೆಂದರೆ ಶಿಕ್ಷೆ ಎಂದು ಗಮನಿಸಿದರೆ ಕಠಿನಶಿಕ್ಷೆಯನ್ನು ಕೊಡುವ ರಾಜನನ್ನು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಶಿಕ್ಷೆಯು ಕ್ರೂರವಾಗಿದ್ದಷ್ಟೂ ಅಪರಾಧಗಳು ಕಡಿಮೆಯಾಗುವುದು ಎನ್ನುವುದು ಅಂದಿನ ರಾಜಕಾರಣದ ಅಭಿಪ್ರಾಯ. ಮಾನವೀಯತೆಯ ಅನುಕಂಪದಿಂದ ರಾಕ್ಷಸಪ್ರವೃತ್ತಿಯವರನ್ನೂ ಸರಿಯಾಗಿ ಶಿಕ್ಷಿಸದೇ ಇರುವುದರಿಂದ ಅನರ್ಥಗಳೇ ಉಂಟಾಗುತ್ತವೆ. ಇದರಿಂದ ಅಂತಹ ರಾಜ ಕ್ರೂರಿ ಎನ್ನಿಸಿಕೊಂಡರು ಸಹ ಅನಿವಾರ್ಯತೆಯೂ ಇತ್ತು. ಯಾವ ರಾಜನು ಯಾವಾಗಲೂ ಮೇಲೆ ಬೀಳುವ ಸ್ವಭಾವದಿಂದಿರುವನೋ ಅವನನ್ನು ಕಂಡರೆ ಎಲ್ಲರೂ ಹೆಚ್ಚಾಗಿ ಭಯಪಡುವರು. ಆದುದರಿಂದ ರಾಜನಾದವನು ಎಲ್ಲ ಕಾರ್ಯಗಳನ್ನೂ ದಂಡದ ಮೂಲಕವಾಗಿಯೇ ಸಾಧಿಸಬೇಕು ಎನ್ನುವುದು ಕಣಿಕನ ಅಭಿಪ್ರಾಯವಾಗಿತ್ತು.

ನಾಸ್ಯಚ್ಛಿದ್ರಂ ಪರಂ ಪಶ್ಯೇಚ್ಛಿದ್ರೇಣ ಪರಮನ್ವಿಯಾತ್ |
ಗೂಹೇತ್ಕೂರ್ಮ ಇವಾಙ್ಗಾನಿ ರಕ್ಷೇದ್ವಿವರಮಾತ್ಮನಃ || ೮ || ಆಮೆ ತನ್ನ ವೈರಿಗಳನ್ನು ಕಂಡಾಗ ಅಥವಾ ತನಗೆ  ಸಂಬವನೀಯ ಅಪಾಯ ತಿಳಿದು ದೇಹವನ್ನು ಚಿಪ್ಪಿನೊಳಗೆ ಸೇರಿಸಿಕೊಂಡು ರಕ್ಷಿಸಿಕೊಳ್ಳುತ್ತದೆಯೋ ಅದೇ ರೀತಿ ತನ್ನ ಮತ್ತು ತನ್ನ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಬೇಕು. ಮತ್ತು ರಾಜನಾದವನು ಶತ್ರುವಿನ ಮೇಲೆ ಆಕ್ರಮಣದ ಸಿದ್ಧತೆಯನ್ನು ಮಾಡುವಾಗ ಅದರ ಸುಳಿವು ಶತ್ರುವಿಗೆ ಸ್ವಲ್ಪವೂ ತಿಳಿಯದಂತೆ ಎಚ್ಚರಿಕೆಯಿಂದಿರಬೇಕು. ಶತ್ರುವಿನಲ್ಲಿ ನ್ಯೂನತೆಯಿದೆಯೆಂದು ಅಥವಾ ಆತನ ಬಲ ಕಡಿಮೆಯಾಗಿದೆ ಎಂದು ತಿಳಿದೊಡನೆ ಅವನ ಮೇಲೆ ಬಿದ್ದು ಅವನನ್ನು ನಾಶಗೊಳಿಸಬೇಕು. ರಾಜನಾದವನು ತನ್ನ ಮನಸ್ಸಿನ ಧ್ಯೇಯೋದ್ದೇಶಗಳನ್ನು ಯಾರಿಗೂ ಬಿಟ್ಟುಕೊಡಬಾರದು.

ನಾಸಮ್ಯಕ್ಕೃತಕಾರೀ ಸ್ಯಾದುಪಕ್ರಮ್ಯ ಕದಾಚನ |
ಕಣ್ಟಕೋ ಹ್ಯಪಿ ದುಶ್ಛಿನ್ನ ಆಸ್ರಾವಂ ಜನಯೇಚ್ಚಿರಮ್ || ೯ || ಒಂದು ಚಿಕ್ಕ ಮುಳ್ಳು ಕಾಲಿಗೆ ಚುಚ್ಚಿದಾಗ ಅದರ ಒಂದು ಚೂರೂ ಉಳಿಯದಂತೆ ತೆಗೆದುಹಾಕಲಾಗುತ್ತದೆ ಹಾಗೆಯೇ ಒಂದು ಕಾರ್ಯಮಾಡಲು ನಿರ್ಧರಿಸಿದ ಮೇಲೆ ಕಡೆಯವರೆಗೂ ಆ ಕಾರ್ಯವನ್ನು ಸಾಧಿಸಲೇಬೇಕು. ಹಾಗೆಯೇ ಶತ್ರುಗಳನ್ನು ಸಂಪೂರ್ಣವಾಗಿ ನಾಶಗೊಳಿಸುವುದು ರಾಜನ ಮುಖ್ಯ ಕರ್ತವ್ಯ ಎನ್ನುತ್ತಾನೆ ಕಣಿಕ.

ವಧಮೇವ ಪ್ರಶಂಸನ್ತಿ ಶತ್ರೂಣಾಮಪಕಾರಿಣಾಮ್ |
ಸುವಿದೀರ್ಣಂ ಸುವಿಕ್ರಾನ್ತಂ ಸುಯುದ್ಧಂ ಸುಪಲಾಯಿತಮ್ |
ಆಪದ್ಯಾಪದಿ ಕಾಲೇ ಚ ಕುರ್ವೀತ ನ ವಿಚಾರಯೇತ್ || ೧೦ || ಶತ್ರುಗಳನ್ನೂ ಮತ್ತು ಅಪಕಾರಿಗಳನ್ನೂ ವಧಿಸುವುದೇ ಯೋಗ್ಯವೆಂದು ರಾಜನೀತಿಜ್ಞರು ಹೇಳುತ್ತಾರೆ ಮತ್ತು ಹೀಗೆ ಮಾಡುವುದನ್ನು ಅವರು ತಪ್ಪೆಂದು ಭಾವಿಸದೇ ಅದನ್ನು ಪ್ರಶಂಸಿಸುತ್ತಾರೆ. ಎಷ್ಟೇ ಪರಾಕ್ರಮಿಯಾದರೂ ಆತನಿಗೆ ಆಪತ್ತೆಂಬುದು ತಪ್ಪುವುದಿಲ್ಲ.  ಪರಾಕ್ರಮಶಾಲಿಯಾದವನಿಗೆ ಕಾಲಕಾಲಗಳಲ್ಲಿ ಒದಗುವ ಆಪತ್ತುಗಳನ್ನೇ ನಿರೀಕ್ಷಿಸುತ್ತಿದ್ದು, ಆ ಸಮಯದಲ್ಲಿ ಅಂತಹವನ ವಿಷಯದಲ್ಲಿ ಸ್ವಲ್ಪವೂ ದಯೆತೋರದೇ ಅವನನ್ನು ಸಂಹರಿಸಬೇಕು. ಯುದ್ಧದಲ್ಲಿ ಬಹಳ ನುರಿತವನಿಗೂ ಆಪತ್ತಿಲ್ಲವೆಂಬುದಿಲ್ಲ. ಅವನಿಗೂ ಕೆಲವು ಸಮಯಗಳಲ್ಲಿ ಭ್ರಾಂತಿಯುಂಟಾಗುತ್ತದೆ. ಅಂತಹ ಸಮಯವನ್ನೇ ಕಾದಿದ್ದು ಅವನನ್ನು ಪ್ರತಿಭಟಿಸಿ ಪಲಾಯನಮಾಡುವಂತೆ ಮಾಡಬೇಕು. ಶತ್ರುವು ವಿಪತ್ತಿನಲ್ಲಿರುವನೆಂದು ಖಂಡಿತವಾಗಿಯೂ ಕರುಣೆತೋರಬಾರದು. ಅವನ ಸಂಹಾರದಲ್ಲಿಯೇ ರಾಜನಾದವನು ಯೋಚಿಸುತ್ತಿರಬೇಕು.

No comments:

Post a Comment