Search This Blog

Friday 26 August 2016

ಯಥಾವಿಧಿ ಹುತಾಗ್ನಿನಾಂ ಯಥಾ ಕಾಮಾರ್ಚಿತಾರ್ಥಿನಾಂ - ಮಂಗಲೇಶನ ಶಾಸನದಲ್ಲಿ

ಪದವೀಂ ಕಾಲಿದಾಸಸ್ಯ ಲಲಿತಾಂ ಮೃದುಲೈಃ ಪದೈ |
ನ ಶಕ್ನುವಂತ್ಯಹೋ ಗನ್ತುಂ ಪಶ್ಯನ್ತೋsಪಿ ಕವೀಶ್ವರಾಃ ||

ಸಾಯಣಾಚಾರ್ಯರು ತಮ್ಮ ಸುಭಾಷಿತದಲ್ಲಿ ಕಾಳಿದಾಸನ ಕಾವ್ಯಮಾರ್ಗವೆನ್ನುವುದು ಲಾಲಿತ್ಯದಿಂದ ಕೂಡಿದೆ, ಅವನು ಉಪಯೋಗಿಸುವ ಪದಗಳು ತುಂಬಾ ಮೃದುವಾದ ನುಡಿಗಳು. ಆದರೆ ಅವನಂತೆಯೇ ಬರೆಯಲು ಎಂತೆಂತಹ ಕವಿಗಳು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ, ಕಾಳಿದಾಸನ ಕಾವ್ಯಮಾರ್ಗ ಮತ್ತಾರಿಗೂ ಪ್ರವೇಶಕೊಟ್ಟಿಲ್ಲ ಏನಾಶ್ಚರ್ಯ. ಎಂದು ಉದ್ಗರಿಸಿದ್ದಾರೆ. ಇದನ್ನೇ ದಂಡಿ
ಲಿಪ್ತಾಮಧುದ್ರವೇಣಾಸನ್ ಯಸ್ಯ ನಿರ್ವಿಷಯಾ ಗಿರಃ |
ತೇನೇದಂ ವರ್ತ್ಮ ವೈದರ್ಭಂ ಕಾಲಿದಾಸೇನ ಶೋಭಿತಮ್ ||
ಜೇನಿನ ಮಧುರವಾದ ಸಿಹಿಯಲ್ಲಿ ಅವನ ವೈದರ್ಭೀ ಶೈಲಿಯನ್ನು ಕೊಂಡಾಡಿದ್ದಾರೆ.
ಬಾಣ ಭಟ್ಟ:
ನಿರ್ಗತಾಸು ನವಾ ಕಸ್ಯ ಕಾಲಿದಾಸಸ್ಯ ಸೂಕ್ತಿಷು |
ಪ್ರೀತಿರ್ಮಧುರಸಾಂದ್ರಾಸು ಮಂಜರೀಷ್ವಿವ ಜಾಯತೇ || ಎಂದಿದ್ದಾನೆ.
ವಸಂತ ಋತುವಿನ ಆರಂಭದಲ್ಲಿನ ಚಿಗುರಿರುವ ಮಾವಿನ ಹೂಗೊಂಚಲು ಎಂದು ಬಾಣ ಉದ್ಗರಿಸಿದ್ದಾನೆ.
ಕಾಳಿದಾಸನನ್ನು ಮೀರಿಸುವ ಇನ್ನೊಬ್ಬ ಕವಿ ಹುಟ್ಟಲೇ ಇಲ್ಲವೆಂದು ಇನ್ನೊಂದು ಶ್ಲೋಕ ಹೇಳುತ್ತದೆ.
ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಠಿಕಾಧಿಷ್ಠಿತ ಕಾಲಿದಾಸಾ |
ಅದ್ಯಾಪಿ ತತ್ತುಲ್ಯಕವೇರಭಾವಾದನಾಮಿಕಾ ಸಾರ್ಥವತೀ ಬಭೂವ||

ಇದನ್ನೆಲ್ಲಾ ಸಂಸ್ಕೃತಕವಿಗಳೇ ಹೇಳಿದ್ದರೆ ನಮ್ಮ ಕನ್ನಡದ ಕವಿ ರುದ್ರಭಟ್ಟ ತನ್ನ ಜಗನ್ನಾಥ ವಿಜಯದಲ್ಲಿ ಹೀಗೆ ಸುಂದರವಾಗಿ ಅನುವಾದಿಸಿದ್ದಾನೆ .
ಸುಕವಿ ಜನಗಣನೆಯೊಳ್ ದತ್ತಕನಿಷ್ಠಿಕನಾಗೆ ಕಾಳಿದಾಸಂ ಮೊದಲೆಂ |
ದು ಕರಂ ಬಣ್ಣಿಪರದರಿಂದೆ ಕಾಳಿದಾಸಂಗೆ ದಾಸರೆನಿಪರ್ ಕವಿಗಳ್ ||
ಕಾಶ್ಮೀರದ ಆಲಂಕಾರಿಕರಿಗೆಲ್ಲಾ ಕಾಳಿದಾಸನೇ ಮೇಲ್ಪಂಕ್ತಿ ಅದರಲ್ಲೂ ಕಾಳಿದಾಸಾದೀನಾಮಿವ ಯಶಃ ಎಂದು ಮಮ್ಮಟ ಹಾಡಿ ಹೊಗಳಿದ್ದಾನೆ. ಕನ್ನಡದಲ್ಲಿ ಪಂಪನೊಬ್ಬನನ್ನು ಹೊರತು ಪಡಿಸಿ ಉಳಿದೆಲ್ಲಾ ಕವಿಗಳೂ ಒಂದಲ್ಲ ಒಂದು ರೀತಿಯಲ್ಲಿ ಕಾಳಿದಾಸನನ್ನು ಹೊಗಳಿದ್ದಾರೆ.
ಮೃದು ಪದ್ಯ ರಚನೆಯೊಳ್ ಕಾಳಿದಾಸನುಂ ಗದ್ಯರಚನೆಯೊಳ್ ಬಾಣನುಮಂ |
ಕದ ಕವಿಗಳೆನಿಸಿ ನೆಗಳ್‍ದರದರಿಂ ಸತ್ಕವಿಗಳಿರ್ವರೆಮಗಭಿವಂದ್ಯರ್ || ಎಂದು ರನ್ನ ಮುಕ್ತಕಂಠದಿಂದ ಬಾಣನನ್ನೂ ಮತ್ತು ಕಾಳಿದಾಸನನ್ನು ವಂದಿಸಿದರೆ ದುರ್ಗಸಿಂಹನು ತನ್ನ ಪಂಚತಂತ್ರದಲ್ಲಿ "ಸುರತರ ಚಂದ್ರಿಕಾ ದ್ಯುತಿನಿರಸ್ತ ಸಮಸ್ತ ಜಗತ್ತಮಂ ಕಳಾ ಪರಿಣತನೆಂದೊಡೇವೊಗಳ್ವೆನುನ್ನತಿಯಂ ಕವಿ ಕಾಳಿದಾಸನಾ" ಎಂದಿದ್ದಾನೆ. ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಳಿದಾಸ ಕಾವ್ಯ ಪ್ರಪಂಚದಲ್ಲಿ ಹೊಗಳಲ್ಪಟ್ಟಿದ್ದಾನೆ. ಪೊನ್ನನಂತೂ ತಾನು ಕಾಳಿದಾಸನಿಗೂ ಮಿಗೆಲೆಂದು ಹೇಳಿಕೊಂಡಿದ್ದಾನೆ. "ಮುನ್ನುಳ್ಳ ಕಾಳಿದಾಸಂಗಂ" "ನಾಗವರ್ಮನಂತೂ "ತನಗಿನ್ನಾರ್ ಸರಿ .....ನಾಗವರ್ಮ ಕೃತಿಗಂ ಕಾಳಿದಾಸಂಬರಂ"

ಶಾಸನ ಸಾಹಿತ್ಯದಲ್ಲೂ ಹಿಂದೆ ಬಿದ್ದಿಲ್ಲ ಕಲ್ಯಾಣಿ ಚಾಲುಕ್ಯರ ಕಾಲದ ಆರನೇ ವಿಕ್ರಮಾದಿತ್ಯನ ಹೂಲಿ ಶಾಸನದಲ್ಲಿ "ವಾಗರ್ಥಾ ವಿವ...." ಎನ್ನುವ ರಘುವಂಶದ ಮಂಗಲಾಚರಣೆಯನ್ನು ಬಳಸಿಕೊಲಾಗಿದೆ. ಬೆಂಗಳೂರು ಬೇಗೂರಿನ ಅಗಸಾಳೆ ಮಠದ ತಾಮ್ರ ಶಾಸನದಲ್ಲೂ ವಾಗರ್ಥವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇವುಗಳಲ್ಲದೇ ಬಾದಾಮಿ ಚಾಲುಕ್ಯರ ಕಾಲದ ಎರಡನೇ ವಿಕ್ರಮಾದಿತ್ಯನ ಆಸ್ಥಾನ ಕವು ರವಿಕೀರ್ತಿಯಂತೂ ತಾನು ಭಾರವಿ ಮತ್ತು ಕಾಳಿದಾಸನಿಗೆ ಸಮನಾದವನೆಂದಿದ್ದಾನೆ. ಮಹಾಕೂಟದ ಮಂಗಲೇಶನ ಸ್ತಂಬ ಶಾಸನದಲ್ಲೂ ರಘುವಂಶದ "ಯಥಾವಿಧಿ ಹುತಾಗ್ನಿನಾಂ ಯಥಾ ಕಾಮಾರ್ಚಿತಾರ್ಥಿನಾಂ" ಎಂದು ಶಾಸನವನ್ನು ಆರಂಭಿಸಲಾಗಿದೆ. ಕಾಳಿದಾಸ ಸಾಹಿತ್ಯಲೋಕದ ಅನಭಿಷಿಕ್ತ ದಿಒರೆ ಎನ್ನಿಸಿ ಅಂದಿಗೂ ಇಂದಿಗೂ ಎಂದೆಂದಿಗೂ ಸಾಹಿತ್ಯಾಸಕ್ತರ ಕೇಂದ್ರವಾಗಿದ್ದಾನೆ. ಅಸೂಯಾಪರರಿಗೂ ಅವಕಾಶ ಕಲ್ಪಿಸಿ, ಹೆಗ್ಗಳಿಕೆಗೂ ಅವಕಾಶ ಮಾಡಿಕೊ ಟ್ಟ ಒಬ್ಬನೇ ಒಬ್ಬ ಕವಿ ಕಾಳಿದಾಸ.

No comments:

Post a Comment