Search This Blog

Friday 11 October 2019

ಆಪೋ ಹಿ ಷ್ಠಾ ಮಯೋಭುವ



ಅಂಬರೀಷ ಎನ್ನುವವನು ಪುರಾಣದಲ್ಲಿ ರಾಜನಾಗಿ ಕಾಣಸಿಗುತ್ತಾನೆ. ಅಂಬರೀಷನ ಕಥೆ ಬಹಳ ರೋಚಕವಾಗಿ ಸಿಗುತ್ತದೆ. ಆದರೆ ಇದು ರಾಜವನೊಬ್ಬನ ಕಥೆಯಲ್ಲ, ನೀರಿನ ಕುರಿತಾಗಿ ಅಧ್ಯಯನ ಮಾಡಿದ್ದ ಋಷಿಯೊಬ್ಬನ ಕುರಿತಾಗಿ. ತ್ವಷ್ಟ್ರನ ಮಗನಾದ ತ್ರಿಶಿರಾ ಅಥವಾ ಅಂಬರೀಷನ ಕುರಿತಾಗಿರುವುದು. ಈತನನ್ನು ಸಿಂಧುದ್ವೀಪ ಎನ್ನುವುದಾಗಿ ಕರೆಯಲಾಗುತ್ತದೆ. ಈತ ಇಂದ್ರನಿಗಾಗಿ ನೀರನ್ನು ಶೊಧಿಸಿದ ಅಥವಾ ನೀರನ್ನು ಬಳಸಿದ ಕುರಿತಾಗಿರುವುದು. ಹಿಂದೆ ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡುತ್ತಾನೆ. ಆಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಇಂದ್ರ ತ್ವಷ್ಟ್ರನ ಮಗನಾದ ಸಿಂಧುದ್ವೀಪ ಎನ್ನುವ ಋಷಿಯನ್ನು ಪುರೋಹಿತನನ್ನಾಗಿ ಬಲಸಿಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧುದ್ವೀಪ ಋಷಿಯು ಪಾಪಪರಿಹಾರಾರ್ಥವಾಗಿ ನೀರನ್ನು ಕುರಿತು ಜಪಮಾಡಿ ಪಾಪ ಪರಿಹಾರವನ್ನು ಮಾಡಿಕೊಡುತ್ತಾನೆ. ಹಾಗಾದರೆ ಪಾಪ ಪರಿಹಾರಾರ್ಥವಾದ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಅದರಲ್ಲೂ ನೀರು ಮತ್ತು ಬೆಂಕಿ ಒಂದಕ್ಕೊಂದು ಪೂರಕ ಮತ್ತು ನೀರಿನಲ್ಲಿಯೂ ಬೆಂಕಿಯ ಅಂಶ ಇದೆ ಎನ್ನುವುದು ಋಷಿಯ ಅಭಿಪ್ರಾಯ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಹಿಂದೆ ಕಪ್ಪೆಯ ಕುರಿತಾಗಿ ಬರೆದಾಗಲೂ ಅಲ್ಲಿ ನೀರನ್ನು ನೋಡಿ ಕಪ್ಪೆ ಕೂಗುತ್ತದೆ ಎಂದು ಬರೆದಿದ್ದೆ.

ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಸೂಕ್ತದ ದೃಷ್ಟಾರ. ಈತನನ್ನು ಅಂಬರೀಷ ಎಂತಲೂ, ಸಿಂಧುದ್ವೀಪ ಅಥವಾ ತ್ರಿಶಿರಾ ಎನ್ನುವುದು ಋಷಿಗಿರುವ ಹೆಸರುಗಳು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.
ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.

ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಲ ಮಾಡಿದರೆ ಹಗಲಿನಲ್ಲಿ ಗೊತ್ತಗದೇ ಘಟಿಸಿದ ಪಾಪಕಾರ್ಯದ ಪರಿಮರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೀಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.

ಆಪೋ ಹಿ ಷ್ಠಾ ಮಯೋಭುವಸ್ತಾ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು ನೀರು ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ಇದರಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೇ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಋಕ್ಕಿನಲ್ಲಿ ಹೇಳಲಾಗಿದೆ.

ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.

ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ಶಂ ನೋ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.

 #ನೀರಿನಿಂದ_ಆರೋಗ್ಯ


No comments:

Post a Comment