Search This Blog

Friday 11 October 2019

“ಆಘಾಟಿಭಿ” ಎಂಬ ವೇದಕಾಲದ ವೀಣೆಯೂ, ‘ಚಿಚ್ಚಿಕ’ ಮತ್ತು ‘ವೃಷಾರವವೆಂಬ’ ಪ್ರಾಣಿಗಳೂ .


ನಾನು ಹುಟ್ಟಿದ್ದು ಹಳ್ಳಿಯಲ್ಲಿ, ಹಳ್ಳಿ ಅಂದರೆ ಕುಗ್ರಾಮ. ಕುಗ್ರಾಮ ಅಂದರೆ ಅಲ್ಲಿಗೆ ಬಸ್ಸಿನ ವ್ಯವಸ್ಥೆಯೂ ಇರಲಿಲ್ಲ. ಹೈಸ್ಕೂಲು ಕಲಿಯಲು ದಿನಾ ಆರು ಕಿ. ಮಿ ಗೂ ಹೆಚ್ಚು ನಡೆದು ತಲುಪಬೇಕಿತ್ತು. ಇನ್ನು ವಿದ್ಯುತ್ ಅಂತೂ ಆಮೆಲೆ ಬಂದದ್ದು. ಹಳ್ಳಿಯ ವಾತಾವರಣ ತುಂಬಾ ಇಷ್ಟವಾಗಿತ್ತು. ಬೇಸಿಗೆಯಲ್ಲಿ ಸೆಕೆಯಾದಾಗ ಹೊಳೆಯಲ್ಲಿ ಗಂಟೆಗಟ್ಟಲೆ ಸ್ನಾನ. ಮಳೆ ಬಂದರೆ ಜೀರುಂಡೆಗಳ ಮೇಳ, ಕಪ್ಪೆಗಳ ಕೂಗು, ಹೀಗೇ ಅದೊಂದು ಆಹ್ಲಾದಕರ ವಾತಾವರಣ ಅನ್ನಿಸಿತ್ತು. ಕೆಲವೊಮ್ಮೆ ರಾತ್ರಿ ಇಡೀ ಜೀರುಂಡೆಗಳು ಕೂಗುತ್ತಿದ್ದವು, ಇನ್ನು ಕೆಲವೊಮ್ಮೆ ಬೇರೆ ಬೇರೆ ಸ್ವರದಲ್ಲಿ ಕೂಗುತ್ತಿದ್ದವು. ಹೌದು. ವಾತಾವರಣ ಎಷ್ಟು ಖುಷಿ ಕೊಡುತ್ತದೆ ಎನ್ನುವುದು ಆಗಿನ ಅನುಭವಕ್ಕಿಂತ ಈಗಿನ ನೆನಪು ಕಾಡುತ್ತದೆ. ಅದೇ ಸನ್ನಿವೇಶದ ಒಂದು ವಿಷಯವನ್ನು ಈಗ ನಾನು ಬರೆಯ ಹೊರಟಿರುವುದು.
ಕಾಡಿಗೆ ಅರಣ್ಯ ವನ ಮುಂತಾದ ಹೆಸರಿದೆ. ಇದರಲ್ಲಿ ಅರಣ್ಯ ಎನ್ನುವುದು ನಿರ್ಜನವಾಗಿರುವ ಎಲ್ಲಎಲ್ಲೂ ಸೂರ್ಯನ ಬಿಸಿಲೂ ಸಹ ಬೀಳದ ನೀರವ ವಾತಾವರಣ ಹೊಂದಿ ಭಯವನ್ನು ಹುಟ್ಟಿಸುವಂತಹ ಮರದಿಂದ ಕೂಡಿರುವುದನ್ನು ಅರಣ್ಯ ಎಂದು ಕರೆಯಲಾಗುತ್ತದೆ. ಅರಣ್ಯಕ್ಕೆ ದೇವತೆ ಇದ್ದು ಅರಣ್ಯಾನಿ ಎಂದು ಕರೆಯಲಾಗುತ್ತದೆ. ಅರಣ್ಯದ ಪತ್ನೀ ಸ್ಥಾನವನ್ನು ಅರಣ್ಯಾನಿಗೆ ಕೊಡಲಾಗಿದೆ. ಗ್ರಾಮ, ನಗರ, ಮತ್ತು ಪಟ್ಟಣದಿಂದ ದೂರವಾಗಿ ಅಥವಾ ಗ್ರಾಮದಲ್ಲಿ ಇರುವಂತೆ ಯಾವ ಮನರಂಜನೆಯೂ ಇಲ್ಲಿ ಸಿಗದಿರುವುದನ್ನೇ ಅರಣ್ಯ ಎಂದು ಕರೆಯಲಾಗುತ್ತದೆ.
ಅರಣ್ಯಾನ್ಯರಣ್ಯಾನ್ಯಸೌ ಯಾ ಪ್ರೇವ ನಶ್ಯಸಿ |
ಕಥಾ ಗ್ರಾಮಂ ಪ್ರಚ್ಛಸಿ ತ್ವಾ ಭೀರಿವ ವಿಂದತೀ ||
ಹಿಂದೆ ಇರಂಮದ ಎನ್ನುವ ಮಹರ್ಷಿಯೊಬ್ಬನಿದ್ದ. ಆತನಿಗೆ ದೇವಮುನಿ ಎನ್ನುವ ಮಗನೊಬ್ಬ ಇದ್ದ. ಈತ ಮಹಾ ತಪಸ್ವಿಯಾಗಿದ್ದ. ಮಂತ್ರ ದೃಷ್ಟಾರನಾಗಿದ್ದ, ಯಾಗ ಯಜ್ಞಗಳನ್ನು ನೆರವೇರಿಸಿಕೊಂಡು ಸನ್ಯಾಸ ಜೀವನ ನಡೆಸುತ್ತಿದ್ದ. ಒಮ್ಮೆ ಈತ ಏಕಾಂಗಿಯಾಗಿ ಹೊರಡುತ್ತಾನೆ. ನಡೆಯುತ್ತಾ ನಡೆಯುತ್ತಾ ಒಂದು ಅರಣ್ಯವನ್ನು ಪ್ರವೇಶಿಸಿತ್ತಾನೆ. ಕಾಡನ್ನು ನೋಡಿ ಭಯಗೊಳ್ಳುತ್ತಾನೆ. ಆಗ ಅರಣ್ಯಾಭಿಮಾನಿ ದೇವತೆಯನ್ನು ಕೇಳುತ್ತಾನೆ. ಋಕ್ಕಿನಲ್ಲಿ ಅದನ್ನೇ ಪ್ರಶ್ನಿಸಲಾಗಿದೆ. ಇಲ್ಲಿ ಮೊದಲ ಸಾಲಿನ ಮೊದಲ ಪದ ದ್ವಿರುಕ್ತಿಗೊಂಡಿದೆ ಅರಣ್ಯಾನಿ ಅರಣ್ಯಾನಿ ಎನ್ನಲಾಗಿದೆ. ಅಂದರೆ ಮೊದಲನೆಯದು ಅರಣ್ಯಾಭಿಮಾನಿ ದೇವತೆಯನ್ನು ಕರೆದಿರುವುದು. ಎಲೈ ಅರಣ್ಯ ದೇವತೆಯೇ ನಿನಗೆ ಭಯವಾಗುವುದಿಲ್ಲವೇ ? ಇಲ್ಲಿ ಎಲ್ಲಿಯೂ ಕಾಣಿಸದೇ ಅದೃಶ್ಯಳಾಗಿರುವ ನೀನು ಗ್ರಾಮದ ಕುರಿತಾಗಿ ಕೇಳುವುದಿಲ್ಲವೇ ? ಕೇಳಲು ಇಂತಹ ನಿರ್ಜನ ಪ್ರದೇಶದಲ್ಲಿ ಯಾರೂ ಇಲ್ಲವೇ ? ಹಾಗಾದರೆ ನಿನಗೆ ಸ್ವಲ್ಪವೂ ಭಯವಾಗುವುದಿಲ್ಲವೇ ? ನಿನಗೆ ಭಯವಾಗುತ್ತೋ ಇಲ್ಲವೋ ನನಗಂತೂ ತಿಳಿಯದಾಗಿದೆ ಎನ್ನುವುದು ಋಗ್ವೇದದ ಹತ್ತನೇ ಮಂಡಲದ ೧೪೬ನೇ ಸೂಕ್ತದ ೧ನೇ ಋಕ್ಕಿನ ಅಭಿಪ್ರಾಯ.
ಇಲ್ಲಿ ಮುನಿ ಅರಣ್ಯದ ಭೀಕರ ಸನ್ನಿವೇಶವನ್ನು ನೀರವ ಮೌನವನ್ನು ಹೇಳಿ ಅದರ ಕಲ್ಪನೆಯನ್ನು ಜಾಗ್ರತಗೊಳಿಸುತ್ತಾನೆ.
ವೃಷಾರವಾಯ ವದತೇ ಯದುಪಾವತಿ ಚಿಚ್ಚಿಕಃ |
ಆಘಾಟಿಭಿರಿವ ಧಾವಯನ್ನರಣ್ಯಾನಿರ್ಮಹೀಯತೇ
ಇದು ನನಗೆ ಅತ್ಯಂತ ಮಹತ್ವದ ಋಕ್ಕು ಎಂದೆನಿಸಿತು. ಇಲ್ಲಿ "ಆಘಾಟಿಭಿಃ" ಎನ್ನುವ ಪದ ಪ್ರಯೋಗವಾಗಿದೆ. ಇದನ್ನು ಸಾಯಣಾಚಾರ್ಯರು ಹೇಳುವುದು "ಆಘಾಟಯೋ ಘಾಟಲಿಕಾಃ ಕಾಂಡವೀಣಾಃ | ಎಂದು ಹೇಳುತ್ತಾರೆ. ಸಪ್ತಸ್ವರಗಳನ್ನು ನುಡಿಸಬಲ್ಲ ವೀಣೆ ಎಂದು ಹೇಳುತ್ತಾರೆ. ಮಣ್ಣಿನಿಂದ ಮಾಡಲ್ಪಟ್ಟ ಘಟ ಅಥವಾ ಬುರುಡೆಯನ್ನು ಹೊಂದಿರತಕ್ಕ ವೀಣೆಯನ್ನು ವೀಣಾವಾದಕರು ಗಾಯಕರು ನಿಷಾದವೇ ಮೊದಲಾದ ಸಪ್ತಸ್ವರವನ್ನು ಬಳಸಿ ನುಡಿಸುವ ಸಾಧನ 'ಆಘಾಟಿಭಿ'. ಅರಣ್ಯದಲ್ಲಿ ಕೇಳಿ ಬರುವ ಪ್ರಾಣಿಗಳ ಶಬ್ದವನ್ನು ಋಷಿಯು ವೀಣೆಗೆ ಹೋಲಿಸಿದ್ದಾನೆ. ಅರಣ್ಯದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಚೀ ಚೀ ಎಂದು ಕೂಗುತ್ತಾ ಕಿವಿಗೆ ಅಪ್ಪಳಿಸುವಂತೆ ಎಡಬಿಡದೇ ಕೂಗುವ ಚಿಚ್ಚಿಕ ಎನ್ನುವ ಪ್ರಾಣಿಯಾದರೆ ಅದಕ್ಕೆ ಉತ್ತರಿಸುವಂತೆ ಕೂಗುವ ವೃಷಾರವ ಎನ್ನುವ ಪ್ರಾಣಿಯ ಕೂಗು. ಎರಡೂ ಕೂಗುವ ಶೈಲಿ ಮಾತ್ರವೇ ಬೇರೆ ಶಬ್ದ ಚೀ ಚೀ ಎಮ್ದೇ ಇರುತ್ತದೆ. ಇವುಗಳ ಕೂಗು ಕರ್ಣ ಕಠೋರವಾಗಿವೆ ಎನ್ನುತ್ತಾನೆ. ಆದರೆ ಇಂತಹ ಶಬ್ದಗಳೂ ಸಹ ಸುಸಜ್ಜಿತವಾದ ವೀಣೆಯ ಸಪ್ತಸ್ವರದಂತೆ ಇದೆ ಎನ್ನುತ್ತಾನೆ. ಅಂದರೆ ವೇದದ ಕಾಲದಲ್ಲಿಯೇ ಸಂಗೀತದ ಅಸ್ತಿತ್ವವು ಗೋಚರಿಸುತ್ತದೆ. ಈಗ ನಾವು ವೀಣೆ ಎಂದು ಕರೆಯುವ ವಾದನವೊಂದು ಆಕಾಲದಲ್ಲಿಯೂ ಬಹಳ ಪ್ರಸಿದ್ಧವಾಗಿತ್ತು ಎನ್ನುವುದು ತಿಳಿಯುತ್ತದೆ.
ಹೀಗೆ ನಾನಾ ವಿಧವಾದ ಶಬ್ದಗಳ ವರ್ಣನೆಯನ್ನು ಋಷಿ ಮಾಡುತ್ತಾನೆ. ಹಾಗೆಯೇ ಅರಣ್ಯದ ವರ್ಣನೆಯನ್ನು ಗ್ರಾಮದ ಪರಿಕಲ್ಪನೆಯಲ್ಲಿಯೇ ಮಾಡಿ ಅರಣ್ಯಾನಿಯನ್ನು ಹಾಡಿ ಹೊಗಳುತ್ತಾನೆ. ಸ್ವತಂತ್ರವಾಗಿ ಬದುಕನ್ನು ಪ್ರಾಣಿಗಳು ಮತ್ತು ಮನುಷ್ಯರು ಅರಣ್ಯದಲ್ಲಿ ಕಟ್ಟಿಕೊಳ್ಳಬಹುದೆನ್ನುವುದು ಅವನ ಆಶಯ. ಮಹಾ ಅರಣ್ಯ ಯಾರನ್ನೂ ಹಿಂಸಿಸುವುದಿಲ್ಲ. ಎಲ್ಲರನ್ನೂ ಸಲಹುತ್ತದೆ. ಇಲ್ಲಿನ ಹಿಂಸಾ ಪ್ರವೃತ್ತಿಯ ಪ್ರಾಣಿಗಳೂ ಸಹ ಯಾರನ್ನೂ ಹಿಂಸಿಸುವುದಿಲ್ಲ ಎನ್ನುತ್ತಾನೆ. ಒಟ್ಟಿನಲ್ಲಿ ಅರಣ್ಯ ಮನುಷ್ಯನ ಬದುಕಿಗೆ ಅತ್ಯವಶ್ಯ ಎನ್ನುವುದು ಋಷಿಯ ಆಶಯ. ಹಾಗೆಯೆ ಕೊನೆಯಲ್ಲಿ
ಆಂಜನ ಗಂಧಿಂ ಸುರಭಿಂ ಬಹ್ವನ್ನಾಮ ಕೃಷೀವಲಾಂ |
ಪ್ರಾಹಂ ಮೃಗಾಣಾಂ ಮಾತರಮರಣ್ಯಾನಿ ಮಶಂಸಿಷಂ ||
ಕಸ್ತೂರಿಯೇ ಮೊದಲಾದ ಸುಗಂಧಯುಕ್ತವಾದದ್ದೂ, ಪುಷ್ಪಗಳಿಂದ ಹೊರಡುವ ಸುಗಂಧವನ್ನೂ ಹೊಂದಿರತಕ್ಕದ್ದೂ, ಭಕ್ಷಿಸಲು ಯೋಗ್ಯವಾದ ಹಣ್ಣು ಹಂಪಲುಗಳಿಂದ ತುಂಬಿರುವಂತಹದ್ದೂ ವನ್ಯಮೃಗಗಳಿಗೆ ಜನನಿಯಂತಿರುವುದೂ ಆದ ಅರಣ್ಯವನ್ನು ಸ್ತುತಿಸುತ್ತೇನೆ ಎಂದು ಅರಣ್ಯವನ್ನು ಋಷಿಯು ಸ್ಮರಿಸುತ್ತಾನೆ.
ಹೌದು ಮಾನವನ ಜೀವನಕ್ಕೂ ಸಹ ಅರಣ್ಯ ಅತ್ಯವಶ್ಯ. ತನಗೆ ಏನನ್ನೂ ಬಯಸದೇ ನಮಗೆ ಬೇಕಾದ್ದನ್ನೂ ನೀಡಬಲ್ಲ ಅರಣ್ಯ ಈಗ ನಮಗೆ ಬೇಡವಾಗಿದ್ದು ವಿಪರ್ಯಾಸ. ಅದೇನೇ ಇರಲಿ ಇಲ್ಲಿ ಋಷಿಯು ಸಂಗೀತದ ವೀಣೆಯನ್ನು ಕುರಿತಾಗಿ ಹೇಳಿರುವುದನ್ನು ಗಮನಿಸಿದರೆ ಋಷಿ ಅದ್ಯಾವ ಕಾಲದಲ್ಲಿದ್ದನೋ ಕಾಲದಲ್ಲಿಯೇ ಮಣ್ಣಿನ ಗಡಿಗೆಯಂತಹ ಆಕಾರದಲ್ಲಿ ಸಂಘಿತದ ವಾದ್ಯವೊಂದನ್ನು ರಚಿಸಿದ್ದು ಮತ್ತು ಅದರಿಂದ ಇಂಪಾದ ನಾದ ಹೊರಡಿಸುತ್ತಿದ್ದುದು ಕೇಳಿದರೆ ನಮ್ಮ ಸಂಗೀತ ಶಾಸ್ತ್ರವೂ ಸಹ ಅದೆಷ್ಟು ಪ್ರಾಚೀನವಾಗಿರಬಹುದು. ಇತ್ತೀಚೆಗಷ್ಟೇ ಕರ್ಕರೀ ಎನ್ನುವ ವಾದ್ಯ ವೊದರ ಕುರಿತು ಬರೆದು ವಾದ್ಯದಿಂದ ಅನೇಕ ರೋಗಗಳನ್ನು ಗುಣ ಪಡಿಸಬಹುದೆನ್ನುವುದನ್ನು ಬರೆದಿದ್ದೆ. ವೀಣೆಯೂ ಸಹ ತನ್ನ ನಾದದ ತರಂಗದಿಂದ ನಮ್ಮ ನರ್ಗಳ ಮೇಲೆ ನಮ್ಮ ಮಾನಸಿಕ ಸ್ಥಿಮಿತದ ಮೇಲೆ ಪ್ರಭಾವ ಬೀರಬಲ್ಲದು. ಇವೆಲ್ಲವನ್ನು ಗಮನಿಸಿದರೆ ಭಾರತ ಅದೆಷ್ಟು ಸಮೃದ್ಧವಾಗಿರಬೇಕು. ನಾವು ಭಾರತೀಯರು ಎನ್ನಲು ನಿಜಕ್ಕೂ ಹೆಮ್ಮೆಪಡಬೇಕು.
#ವೇದದಲ್ಲಿ_ವೀಣೆ

No comments:

Post a Comment