Search This Blog

Friday 20 October 2017

ಮಯೂರವರ್ಮನ ವಿಷಮ ದೇಶ ಪ್ರಯಾಣ - 3


“ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಮ್ “ ಇದು ವಶಿಷ್ಠನಿಂದ ವಿಶ್ವಾಮಿತ್ರನು ತನ್ನ ಪೂರ್ವಾಶ್ರಮದಲ್ಲಿ ಕಾಮಧೇನುವನ್ನು ಪಡೆದುಕೊಳ್ಳಲು ಆಗದಿರುವಾಗ ಹೇಳುವ ನುಡಿ. ಆದರೆ ಇಲ್ಲಿ ಇತಿಹಾಸದಲ್ಲಿ ಕದಂಬರ ಮಯೂರಶರ್ಮನು ವರ್ಮನಾಗಿ ಬದಲಾದಾಗ ಈ ಮಾತು ಆತನಿಗೂ ಅನ್ವಯಿಸುತ್ತದೆ. ವಿಶ್ವಾಮಿತ್ರ ಕ್ಷತ್ರಿಯನಾಗಿ ನಂತರ ಬ್ರಹ್ಮರ್ಷಿಯಾದ ಆದರೆ ಇಲ್ಲಿ ಬ್ರಹ್ಮ ತೇಜಸ್ಸನ್ನು ಪಡೆದ ಮಯೂರ ಕ್ಷತ್ರಿಯ ತೇಜಸ್ಸನ್ನು ಪಡೆದ. 
ತನ್ನ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳಲಿಕ್ಕಾಗಿ ತ್ರಿಪರ್ವತದ ಸುತ್ತಲಿನ ಪಲ್ಲವರ ಸಾಮಂತರನ್ನು ಓಡಿಸಿದ ಮಯೂರ ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಳ್ಳುತ್ತಾ ಸಾಗಿದ. ಈತ ಒಂದು ಕಡೆಯಿಂದ ಸೈನ್ಯವನ್ನು ಕಟ್ಟಿ ತನ್ನ ಕೇಂದ್ರವನ್ನು ತನ್ನ ಪ್ರತಿಜ್ಞೆಯನ್ನು ತೀರಿಸಿಕೊಳ್ಳುವ ಹಂಬಲಕ್ಕಾಗಿ ಇರಿಸಿದ.

ಸ್ವಪ್ರತಿಜ್ಞಾ ಪಾರಣೋತ್ಥಾನ ಲಘುಭೀ ಕೃತಾರ್ಥೈಶ್ಚ ಚೇಷ್ಟಿತೈಃ |
ಭೂಷಣೈರಿವಾ ಬಭೌ ಬಲವದ್ಯಾತ್ರಾಸಮುತ್ಥಾಪನೇನ ಚ || 16 ||

ತನ್ನ ವೈರಿಗಳ ಪ್ರದೇಶಕ್ಕೆ ತೆರಳಿ ಅಲ್ಲಿ ಹಿಂದಿನ ಮಯೂರನಾಗಿರದೇ ರಾಜನಾಗಿರುವ ಮಯೂರನಾಗಿ ವಿಜಯಶಾಲಿಯಾಗಿ ಬರಬೇಕು ಎನ್ನುವುದು ಮಯೂರನ ಹಂಬಲವಾಗಿತ್ತು. ಅತ್ಯಂತ ಉತ್ಸಾಹ ಭರಿತ ಸೈನ್ಯವನ್ನು ಕಟ್ಟಿ ಬೆಳೆಸಿ ಅವರಲ್ಲಿ ಸ್ವಾಭಿಮಾನವನ್ನು ತುಂಬಿ ಪಲ್ಲವರ ಕಾಂಚಿಯನ್ನು ಜಯಿಸಲಿಕ್ಕಾಗಿ ಮತ್ತು ಪಲ್ಲವರಿಗೆ ತಕ್ಕ ಪಾಠ ಕಲಿಸಲಿಕ್ಕಾಗಿ ಹೊರಟ.

ಅಭಿ ಯುಯುಕ್ಷಯಾಗತೇಷು ಭೃಶಂ ಕಾಂಚೀ ನರೇಂದ್ರೇಷ್ವರಾತಿಷು |
ವಿಷಮದೇಶ ಪ್ರಯಾಣ ಸಂವೇಶ ರಜನೀಷ್ವವಸ್ಕಂದ ಭೂಮಿಷು || 17 ||

ಭೂಮಿಗೆ ಇಳಿದು ಬಂದ ಚಂದ್ರನಂತೆ ಪ್ರಕಾಶಮಾನನಾದ ಮಯೂರ ವಿಷಮ ದೇಶ ಪ್ರಯಾಣ ಎನ್ನುವುದಾಗಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಮಯೂರನ ಸೇನೆ ಸಾಮಾನ್ಯದ ಸೇನೆ ಆಗಿರಲಿಲ್ಲ ಅದೊಂದು ಸಾಗರದಂತೆ ಕಂಗೊಳಿಸುತ್ತಿತ್ತು. ಅತ್ಯಂತ ಉತ್ಸಾಹ ಭರಿತ ಸೇನೆ ಬಲಶಾಲಿಯಾಗಿಯೂ ಗಿಡುಗ ಆಕಾರದಲ್ಲಿದ್ದು ಆ ಸೇನೆಯನ್ನು ಶತ್ರು ಸೈನ ಬಿಡಿಸಿಕೊಳ್ಳಲು ಸಾಧ್ಯವಾಗದಂತೆ ನಿರ್ಮಿಸಲಾಗಿತ್ತು ಅದನ್ನೇ ಶಾಸನ ವಾಕ್ಯದಲ್ಲೂ ಶ್ಯೇನವತ್ತದಾ ಎಂದು ಉಲ್ಲೇಖಿಸಿದ್ದು.

ಪ್ರಾಪ್ಯ ಸೇನಾ ಸಾಗರಂ ತೇಷಾಂ ಪ್ರಾಹನ್ ಬಲೀ ಶ್ಯೇನವತ್ತದಾ |
ಆಪದಂತಾಂಧಾರಯಾಮಾಸ ಭುಜ ಖಡ್ಗ ಮಾಂತ್ರ ವ್ಯುಪಾಶ್ರಯಃ || 18 ||

ತನ್ನ ಪ್ರತಿಜ್ಞೆಯನ್ನು ಸಾಕಾರಗೊಳಿಸಿಕೊಳ್ಳಲು ಬಲಿಷ್ಠವಾದ ಮತ್ತು ವೈರಿಗಳಿಂದ ಸುಲಭದಲ್ಲಿ ಬಿಡಿಸಿಕೊಳ್ಳಲು ಸಾಧ್ಯವಾಗದಂತಹ ವೈಹವನ್ನು ರಚಿಸಿಕೊಂಡ ಮಯೂರ ವಿಷಮ ದೇಶವನ್ನು ಪ್ರವೇಶಿಸಿದ್ದಾನೆ. ವೈರಿಗಳಲ್ಲಿ ನಡುಕ ಹುಟ್ಟಿಸಿ ಕಾಮೋಡದಂತೆರಗಿ ಅವರಲ್ಲಿ ಭಯದ ವಾತಾವರಣ ಹುಟ್ಟಿಸಿದ್ದಾನೆ.


No comments:

Post a Comment