Search This Blog

Friday 13 October 2017

ಕುಶ ಸಮಿತ್ತು ಸೃಕ್ ಆಜ್ಯ ಚರುಗಳನ್ನು ಹಿಡಿಯ ಬೇಕಿದ್ದ ಕೈಯಲ್ಲಿ "ಉದ್ವವರ್ಹ ದೀಪ್ತಿಮಚ್ಛಸ್ತ್ರಂ" ಧಾರಿ ಮಯೂರ - 2

ಭಾರತದ ಇತಿಹಾಸವೇ ಹಾಗೇ. ಇಲ್ಲಿನ ಅನೇಕ ರಾಜರು ರಾಜ ವಂಶಸ್ಥರು ಅಧ್ಯಯನ ಶೀಲರಾಗಿದ್ದರು, ಸಾಹಿತ್ಯದ ಆರಾಧಕರು ಪೋಷಕರು ಆಗಿದ್ದರು. ಇದು ಸಧ್ಯದ ವಿಷಯವಲ್ಲ ತಲತಲಾಂತರಗಳಿಂದಲೂ ನಡೆದು ಬಂದದ್ದು ಅದಕ್ಕೇ ಅಲ್ಲವೇ ನಮಗೆ ಈ ಕೆಳಗಿನ ಶ್ಲೋಕ ಉತ್ತಮ ಉದಾಹರಣೆಯಾಗಿ ದೊರಕುವುದು.

ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ನಾಲ್ಕು ವೇದಗಳನ್ನು ಕಲಿತು ಕಂಠಸ್ಥನಾಗಿ ಅಧ್ಯಯನ ಮಾಡಿಕೊಂಡಿದ್ದೇನೆ ವೇದ ವೇದಾಂಗಗಳ ಸಂಪೂರ್ಣ ಜ್ಞಾನ ನನ್ನಲ್ಲಿದೆ ಅದೇ ರೀತಿ ಶರ ಹಿಡಿದು ಯುದ್ಧ ಮಾಡುವ ಧನುರ್ವೇದವನ್ನೂ ಕಲಿತಿದ್ದೇನೆ ನನ್ನ ಬೆನ್ನ ಮೇಲೆ ಬಾಣದೊಂದಿಗೆ ಬಿಲ್ಲಿದೆ, ನಾನು ಯುದ್ಧಕ್ಕೂ ಸಿದ್ಧನಿದ್ದೇನೆ, ಸಾಮರ್ಥ್ಯವೂ ಇದೆ,ಇಲ್ಲಿ ಬ್ರಹ್ಮ ತೇಜಸ್ಸು ನನ್ನ ಮುಖದಲ್ಲಿದ್ದರೆ ಹಾಗೂ ಕ್ಷಾತ್ರತೇಜಸ್ಸು ಇಡೀ ದೇಹದಲ್ಲಿದೆ ನಾನು ಸಂಸ್ಕಾರವಂತನೂ ಹೌದು ಪರಾಕ್ರಮಿಯೂ ಹೌದು. ಎನ್ನುವ ಚಿತ್ರಣ ಈ ಒಂದು ಶ್ಲೋಕ ನಮಗೆ ನೀಡುತ್ತದೆ. ಪುರಾಣದ ಪರಶುರಾಮ ಇದಕ್ಕೆ ನಮಗೆ ಉತ್ತಮ ಉದಾಹರಣೆಯಾಗಿ ದೊರಕಬಲ್ಲ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಕಂಚಿಯ ಪಲ್ಲವರಿಂದ ಅವಮಾನಿತನಾದ ಕದಂಬ ವಂಶದ ದೊರೆ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತ ನಾಗಿದ್ದ (ಪಲ್ಲವರ ಅಶ್ವಮೇಧಕ್ಕಾಗಿ ಕಟ್ಟಿದ ಕುದುರೆಯಿಂದ ಆದ ಕಲಹ) ಮಯೂರ ಸಾಕ್ಷಾತ್ ಪರಶುರಾಮನಂತೆ ಆಗಿದ್ದ.

"ಕುಶ ಸಮಿತ್ಸ್ರುಗಾಜ್ಯ ಚರುಗ್ರಹಣಾದಿಧಕ್ಷೇನ ಪಾಣಿನಾ |
ಉದ್ವವರ್ಹ ದೀಪ್ತಿಮಚ್ಛಸ್ತ್ರಂ ವಿಜಿಗೀಷಮಾಣೋ ವಸುನ್ಧರಾಮ್ ||"
ದರ್ಭೆ ಹಿಡಿದು ಆಜ್ಯ ಮತ್ತು ಚರುಗಳಿಂದ ಹೋಮ ಹವನಗಳನ್ನು ಮಾಡಬೇಕಿದ್ದ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಭೂಮಿಯನ್ನು ಆಳಲು ಹೊರಟ ಎನ್ನುವುದಾಗಿ ತಾಳಗುಂದದ ಸ್ತಂಭ ಶಾಸನದ ೫ನೇ ಸಾಲಿನಲ್ಲಿ 13ನೇ ಶ್ಲೋಕದಲ್ಲಿ ಹೇಳಲ್ಪಡುತ್ತದೆ. ಕಂಚಿಯಿಂದ ಹೊರಟ ಮಯೂರ ಧನುರ್ವೇದಿಯಾಗಿ ಶ್ರೀಪರ್ವತ ಅಥವಾ ತ್ರಿಪರ್ವತದ ದಟ್ಟ ಕಾಡಿನಲ್ಲಿ ಪ್ರವೇಶಿಸಿ ಅಲ್ಲಿನ ಮೂಲ ನಿವಾಸಿಗಳ ಪಡೆಯನ್ನು ಕಟ್ಟಿ ಬ್ರಹದ್ಬಾಣರೇ ಮೊದಲಾದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ಎನ್ನುವುದಾಗಿ ಅದೇ ಸಾಲಿನಲ್ಲಿ ಹೇಳಲಾಗಿದೆ. ಉಪಾಯದಿಂದ ಪಲ್ಲವರ ಕೈಗೆ ಎಲ್ಲಿಯೂ ಸಿಕ್ಕಿ ಹಾಕಕೊಳ್ಳದೇ ಪರ್ವತದ ಸುತ್ತಲಿನ ಪಲ್ಲವರ ಸಾಮಂತ ದೊರೆಗಳಾದ ಆಂಧ್ರಪಾಲರನ್ನು ಅಲ್ಲಿಂದ ಓಡಿಸಿ ಆ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಂಡು ಮಯೂರ ಬಲಿಷ್ಠನಾಗುತ್ತ ಬಂದ.
ಯೋಂತಪಾಲಾನ್ ಪಲ್ಲವೇಂದ್ರಾಣಾಂ ಸಹಸಾ ವಿನಿರ್ಜ್ಜಿತ್ಯ ಸಂಯುಗೇ |
ಅದ್ಧ್ಯುವಾಸ ದುರ್ಗ್ಗಮಾಮಟವೀಂ ಶ್ರೀ ಪರ್ವ್ವತ ದ್ವಾರ ಸಂಶ್ರಿತಾಮ್ ||

ಆದದೇಕರದ್ಬೃಹದ್ಬಾಣ ಪ್ರಮುಖಾದ್ವಹೂನ್ ರಾಜ ಮಂಡಲಾತ್ |
ಏವಮೇಭಿಱ್ಪಲ್ಲವೇಂದ್ರಾಣಾಂ ಭ್ರುಕುಟೀ ಸಮುತ್ಪತ್ತಿ ಕಾರಣೈಃ ||



ಎನ್ನುವುದಾಗಿ 14 - 15 ನೇ ಶ್ಲೋಕದಲ್ಲಿ ಹೇಳಲಾಗಿದೆ. ಒಂದು ವೇಳೆ ಪಲ್ಲವರಿಂದ ಅಪಹಾಸ್ಯಕ್ಕೆ ಗುರಿಯಾಗದೇ ವೇದಾಧ್ಯಯನ ಶೀಲನಾಗಿ ಮಯೂರ ನಮಗೆ ದೊರಕಿದ್ದರೆ ಕರ್ನಾಟಕದ ಪಾಲಿಗೆ ಅನ್ಯಾಯವಾಗುತ್ತಿತ್ತು ಅನ್ನಿಸುತ್ತದೆ. ನಮ್ಮ ನೆಲಕ್ಕೆ ಶಾಪಾದಪಿ ಶರಾದಪಿ ಸಾಮರ್ಥ್ಯ ಹೊಂದಿದ ರಾಜನೊಬ್ಬನ ಅಥವಾ ರಾಜ ವಂಶ ಸಿಗುತ್ತಿರಲಿಲ್ಲ.

No comments:

Post a Comment