Search This Blog

Monday 9 October 2017

ಮಯೂರಶರ್ಮನ - ತಾಳಗುಂದ - ಗುಡ್ನಾಪುರ - 1

ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿರುವ ಸ್ತಂಭಶಾಸನವು ಕದಂಬರ ಕುರಿತಾಗಿ ಹಾಗೂ ಮಯೂರ ವರ್ಮನ ಕುರಿತಾಗಿ ಕೆಲವು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಮಯೂರನ ಕುರಿತಾಗಿಯೇ ಕೆಲವು ವಿಚಾರ ತಿಳಿಸುವ ಇನ್ನೊಂದು ಶಾಸನವೆಂದರೆ ಅದು ಗುಡ್ನಾಪುರ ಶಾಸನ. ವೇದ ವಿದ್ಯಾ ಪಾರಂಗತ ಎನ್ನುವುದನ್ನು ಎರಡೂ ಶಾಸನಗಳು ಬಿಂಬಿಸುತ್ತವೆ, ಒಮ್ಮೆ ಮಯೂರ ಶರ್ಮನು ತನ್ನ ಅಜ್ಜ ವೀರ ಶರ್ಮಜೊತೆಗೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯ ಘಟಿಕಾಸ್ಥಾನಕ್ಕೆ** ತೆರಳಿದ್ದ ಎಂದು ಶಾಸನದ ನಾಲ್ಕನೇ ಸಾಲು ೯ನೇ ಶ್ಲೋಕದಿಂದ ತಿಳಿದು ಬರುತ್ತದೆ. ಅಲ್ಲಿ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರ ಶರ್ಮನನ್ನು ಪಲ್ಲವರ ರಾಜ ಶಿವಸ್ಕಂದವರ್ಮನು ಸುಮಾರು ೩೪೫ ರಿಂದ ೩೫೫ ರ ಸಮಯದಲ್ಲಿ ಅಶ್ವಮೇಧ ಯಾಗವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಂಚಿಯಲ್ಲಿ ಆ ಸಂದರ್ಭದಲ್ಲಿ ನಡೆದ ಜಗಳ ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಅಪಮಾನಿತನಾದ. ಆದರೆ ಮಯೂರ ಅದನ್ನು ಅಲ್ಲಿನ ಆಳರಸರಲ್ಲಿ ತನ್ನ ದೂರನ್ನು ನಿವೇದಿಸಿಕೊಂಡರೂ ಸಹ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವಮಾನವನ್ನು ಅನುಭವಿಸಿದ. ಇವುಗಳಿಂದ ಸಹಜವಾಗಿಯೇ ಆತ ಸಿಟ್ಟಿಗೆದ್ದು ಕಂಚಿಯ ಪಲ್ಲವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ. ಶಸ್ತ್ರ ವಿದ್ಯೆಯನ್ನು ಕಲಿಯಲು ಆರಂಭಿಸಿದ ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನಲ್ಲಿ ೧೧ನೇ ಶ್ಲೋಕದಲ್ಲಿ
"ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ |
ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾ ವಿಪ್ರತಃ ||"
ಎಂದು ಹೇಳಲಾಗಿದೆ. ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನ ಶರ್ಮ ಅಭಿದಾನವನ್ನು ತೊರೆದು ಕ್ಷತ್ರಿಯರ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯರ ಸೂಚಕ ಅಭಿದಾನವಾದ ವರ್ಮನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ. ೫ನೇ ಸಾಲಿನ ೧೪ನೇ ಶ್ಲೋಕದಲ್ಲಿ ಮಯೂರ ವರ್ಮನು ಶ್ರೀಪರ್ವತದ್ವಾರಾ ಸಂಶ್ರಿತಾಮ್ ಎಂದು ಉಲ್ಲೇಖಗೊಂಡಿದೆ. ಶ್ರೀ ಶೈಲದ ದಟ್ಟಕಾಡಿನಲ್ಲಿ ಗುಡ್ದಗಾಡಿನ ಜನರಿಂದ ಸೇರಿದ ಸೇನೆ ಕಟ್ಟಿದ ಎನ್ನುವುದು ತಿಳಿದು ಬರುತ್ತದೆ.
**ಘಟಿಕಾ ಸ್ಥಾನ ಎಂದರೆ ವೇದಾಧ್ಯಯನದ ಕೇಂದ್ರ.

No comments:

Post a Comment