Search This Blog

Monday 27 August 2018

ಅನಿತಭಾ - ರಸಾ - ಕುಭಾ ಮತ್ತು ಅಖಂಡ ಭಾರತ


ವೇದಗಳಲ್ಲಿ ಭಾರತದ ಯಾವ ಪ್ರದೇಶದ ಹೆಸರೂ ಅಷ್ಟಾಗಿ ಇಲ್ಲದ್ದರಿಂದ ವೇದ ಭಾರತದಲ್ಲಿ ರೂಪುಗೊಂಡದ್ದಲ್ಲ ಎನ್ನುವ ಒಂದು ವಾದ ಬಹಳ ಹಿಂದಿನಿಂದಲೂ ವಿದೇಶೀ ಚಿಂತಕರಲ್ಲಿ ಮತ್ತು ಸ್ವದೇಶದಲ್ಲಿರುವ ವಿದೇಶೀ ಮನಸ್ಥಿತಿಯವರ ಅಂಬೋಣ. ಈ ವಿಷಯವಾಗಿ ನನ್ನಲ್ಲಿ ಶ್ರೀ ಸಿಂಹ ಮೇಲೊಕೂಟೆ ಯವರು ಪ್ರಸ್ತಾವಿಸಿದಾಗ ನಾನು ಇದೆ ಎಂದು ಉತ್ತರಿಸಿದ್ದೆ. ವೇದಗಳ ಕುರಿತು ಸಾಕು ಇನ್ನು ನನ್ನ ಶಾಸನಗಳ ಕೆಲಸ ಮಾಡೋಣ ಎಂದು ಕುಳಿತರೆ ನನ್ನನ್ನು ಈ ಒಂದು ವಿಷಯ ಹಿಡಿದು ಬಿಟ್ಟಿತು.
ಋಗ್ವೇದದ ಐದನೇ ಮಂಡಲದ ೫೩ನೇ ಸೂಕ್ತವನ್ನು ಗಮನಿಸಿದರೆ ಅಲ್ಲಿ
ಮ ವೋ ರಸಾನಿತಭಾ ಕುಭಾ ಕ್ರುಮುರ್ಮಾ ವಃ ಸಿಂಧುರ್ನಿ ರೀರಮತ್ |
ಮಾ ವಃ ಪರಿಷ್ಠಾತ್ಸರಯುಃ ಪುರೀಷಿಣ್ಯಸ್ಮೇ ಇತ್ಸುಮ್ನಮಸ್ತು ವಃ ||
ಹೇ ಮರುತ್ತುಗಳೇ ರಸಾ, ಅನಿತಭಾ ಮತ್ತು ಕುಭಾ ಎನ್ನುವ ನದಿಗಳಲ್ಲಿ ಯಾವುವೂ ನಿಮ್ಮನ್ನು ತಡೆಯದಿರಲಿ, ಸಮುದ್ರವೂ ಮತ್ತು ನೀರಿನಿಂದ ತುಂಬಿರುವ ಸರಯೂ ನದಿಯೂ ಸಹ ನಿಮ್ಮನ್ನು ತಡೆಯದಿರಲಿ, ನಿಮ್ಮ ಬರುವಿಕೆಯಿಂದ ಆಗುವ ಸುಖವು ನಮಗಾಗಿಯೇ ಮೀಸಲಿರಲಿ ಎನ್ನುವುದು ಋಗ್ವೇದದ ಐದನೇ ಮಂಡಲದ ಐವತ್ತ ಮೂರನೇ ಸೂಕ್ತದ ಒಂಬತ್ತನೇ ಋಕ್ಕಿನಲ್ಲಿ ಪ್ರಸ್ತಾಪವಾಗಿದೆ.
ಈ ರಕ್ಕಿನಲ್ಲಿ ರಸಾ, ಅನಿತಭಾ, ಕುಭಾ ಮತ್ತು ಸರಯೂ ನದಿಯ ಉಲ್ಲೇಖ ಬಂದಿದೆ. ಇದರಲ್ಲಿ ರಸಾ, ಅನಿತಭಾ, ಕುಭಾ ನದಿಗಳು ಋಗ್ವೇದದಲ್ಲಿನ ಈ ಋಕ್ಕಿನಲ್ಲಿ ಮಾತ್ರ ಪಠಿತವಾಗಿದೆ ಬೇರೆಲ್ಲಿಯೂ ಇಲ್ಲ ಆದರೆ ಸರಯೂ ಮಾತ್ರ ರಾಮಾಯಣದಲ್ಲಿಯೂ ಗೋಚರವಾಗುತ್ತದೆ. ಈ ಅನಿತಭಾ ನದಿಯು ಪ್ರಾಯಶಃ ಯಮುನಾ ನದಿಯ ಉಪನದಿಯಾಗಿದ್ದಿರಬಹುದು ಈ ಮೂರು ನದಿಗಳು ಅಷ್ಟೊಂದು ಪ್ರಾಮುಖ್ಯತೆ ಪಡೆಯದೇ ಇರುವುದು ದೊಡ್ದ ನದಿಯೊಂದರ ಜೊತೆ ವಿಲೀನ ವಾಗಿದ್ದಿರಬಹುದು. ಇನ್ನು ಸರಯೂ ನದಿಯ ದಡದಲ್ಲಿಯೇ ಅಯೋಧ್ಯಾನಗರ ಇತ್ತು ಎನ್ನುವ ಪುರಾಣದ ಪ್ರಸ್ತಾವದಿಂದಾಗಿ ಇದು ಈ ನೆಲದ್ದೇ ಎನ್ನುವುದು ವೇದ್ಯವಾಗುತ್ತದೆ. ಋಗ್ವೇದದ ಹತ್ತನೇ ಮಂಡಲದಲ್ಲಿ "ಸರಸ್ವತೀ ಸರಯುಃ ಸಿಂಧುರೂರ್ಮಿಭಿರ್ಮಹೋ ಮಹೀರವಸಾ ಯಂತು ವಕ್ಷಿಣೀಃ" ಸರಸ್ವತೀ ಸರಯೂ ಸಿಮ್ಧೂ ನದಿಗಳು ನಮ್ಮ ರಕ್ಷಣೆಗೆ ಬರಲಿ ಎನ್ನುವ ಪ್ರಾರ್ಥನೆ ಕಂಡು ಬರುತ್ತದೆ. ಋಗ್ವೇದದ ನಾಲ್ಕನೇ ಮಂಡಲದಲ್ಲಿ "ಉತ ತ್ಯಾ ಸದ್ಯ ಆರ್ಯಾ ಸರಯೋರಿಂದ್ರ ಪಾರತಃ | ಅರ್ಣಾಚಿತ್ರ ರಥಾವಧೀಃ || ಎನ್ನುವ ಋಕ್ಕಿನಲ್ಲಿ ಇಂದ್ರನು ಚಿತ್ರರಥ ಎನ್ನುವ ರಾಜನನ್ನು ಇದೇ ಸರಯೂ ನದಿಯ ದಡದಲ್ಲಿ ಕೊಂದ ಎನ್ನುವ ಪ್ರಸ್ತಾವ ಬರುತ್ತದೆ. ಹೀಗೆ ಸರಯೂ ನದಿ ವೇದಗಳಲ್ಲಿ ಈ ಮೂರು ಋಕ್ಕುಗಳಲ್ಲಿ ಮಾತ್ರವೇ ಕಾಣಿಸಿಕೊಂಡು ಆಮೇಲೆ ರಾಮಾಯಣದಂತಹ ಪುರಾಣಗಳಲ್ಲಿ ಗೋಚರವಾಗುತ್ತಾಳೆ.
ವೇದಗಳಲ್ಲಿ ರಸಾ ಎನ್ನುವ ನದಿ ಪ್ರಸಿದ್ಧವಾದ ನದಿ ಮತ್ತು ಇದು ಅತ್ಯಂತ ಪವಿತ್ರವಾದ ನದಿಯಾಗಿತ್ತು ಕಾಲಕ್ರಮೇಣ ಅನಾವೃಷ್ಟಿಯಿಂದ ಈ ನದಿ ಬತ್ತಿ ಹೋಗಿದ್ದಿರಬಹುದೆನ್ನುವ ಅಭಿಪ್ರಾಯವೂ ಇದೆ. ಇನ್ನು ಕೆಲವರ ಊಹೆ ಸಿಂಧೂ ಎನ್ನುವ ನದಿಯೇ ರಸಾ ಎನ್ನುವ ನದಿ ಎಂದು. ದೇವನದಿ ಎನ್ನಿಸಿಕೊಂಡಿದ್ದ ಈ ನದಿ ಒಮ್ಮೆ ಬತ್ತಿಹೋದಾಗ ಅಶ್ವಿನೀದೇವತೆಗಳು ತಮ್ಮ ಸಾಮರ್ಥ್ಯದಿಂದ ನೀರು ತುಂಬಿಕೊಳ್ಳುವಂತೆ ಮಾಡಿದರು ಎಂದು ಒಂದನೇ ಮಂಡಲದಲ್ಲಿ ಬರುತ್ತದೆ.
ರಸ್ ಎನ್ನುವ ಧಾತು ಶಬ್ದವನ್ನುಂಟು ಮಾಡು ಎನ್ನುವುದನ್ನು ಸೂಚಿಸುತ್ತದೆ. ರಭಸದಿಂದ ದುಮ್ಮಿಕ್ಕಿ ಹರಿಯುವಾಗ ಹೆಚ್ಚಿನ ಶಬ್ದ ಬರುವುದರಿಂದ ಈ ನದಿಗೆ ರಸಾ ಎನ್ನುವ ಹೆಸರು ಬಂದಿದೆ ಎನ್ನುವುದು ಸಾಯಣಾಚಾರ್ಯರ ಅಭಿಮತ. ಋಗ್ವೇದದ ಹತ್ತನೇ ಮಂಡಲದಲ್ಲಿ ಫಣಿಗಳ ಕಥೆ ಬರುತ್ತದೆ. ಅಲ್ಲಿ "ಕಾಸ್ಮೇಹಿತಿಃ ಕಾ ಪರಿತಕ್ಮ್ಯಾಸೀತ್ಕಥಂ ರಸಾಯಾ ಅತರಃ ಪಯಾಂಸಿ" ಫಣಿಗಳು ಒಮ್ಮೆ ದೇವತೆಗಳ ಗೋವುಗಳನ್ನು ಅಪಹರಿಸಿಕೊಂಡು ಬಹುದೂರದ ಗುಡ್ದ ಒಂದರ ಮರೆಯಲ್ಲಿದ್ದ ಗುಹೆಯಲ್ಲಿ ಅಡಗಿಸಿರುತ್ತಾರೆ. ಆಗ ಅದನ್ನು ಇಂದ್ರ ಗಮನಿಸಿ ಅವರು ಎಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಕಂಡು ಹಿಡಿಯಲು ಸರಮೆ ಎನ್ನುವ ನಾಯಿಯನ್ನು ಕಳುಹಿಸುತ್ತಾನೆ. ಈ ನಾಯಿ ಮತ್ತು ಫಣಿಗಳಿಗೆ ತುಂಬಾ ಪ್ರಶ್ನೋತ್ತರಗಳು ನಡೆಯುತ್ತವೆ. ಆಗ ಫಣಿಗಳು ಸರಮೆಯಲ್ಲಿ ಅಗಾಧವಾದ ಜಲರಾಶಿಯಿಂದ ಬೋರ್ಗರೆಯುವ ರಸಾ ನದಿಯನ್ನು ನೀನು ಹೇಗೆ ದಾಟಿ ಬಂದೆ ಎನ್ನುವಲ್ಲಿ ರಸಾ ನದಿಯ ಪ್ರಸ್ತಾಪದೊಂದಿಗೆ ಆ ನದಿಯ ವರ್ಣನೆಯೂ ಬರುತ್ತದೆ. ಹೀಗೆ ಅನಿತಾಭಾ ಎನ್ನುವ ನದಿ ಒಮ್ಮೆ ಮಾತ್ರ ನಗೆ ಕಾಣಿಸಿದರೆ ಉಳಿದ ನದಿಗಳು ಕಾಣ ಸಿಗುತ್ತವೆ. ಈ ನಮ್ಮ ಪವಿತ್ರ ಭೂಮಿಯನ್ನು ಹಸನು ಮಾಡಿ ಭರತಖಂಡದಲ್ಲಿ ತಮ್ಮ ಅಸ್ತಿತ್ವವನ್ನು ಅಂದಿನಿಂದ ಇಂದಿಗೂ ಉಳಿಸಿಕೊಂಡು ಬರಬೇಕಿದ್ದರೆ ಅವುಗಳ ಸಾಮರ್ಥ್ಯ ಮತ್ತು ಅವುಗಳ ಪಾವಿತ್ರ್ಯ ಎಷ್ಟಿದ್ದಿರಬಹುದು. ಅದೆಷ್ಟೋ ಸಹಸ್ರ ವರ್ಷಗಳ ಹಿಂದೆ ಇದ್ದು ಇನ್ನೂ ಸಹ ಅದರ ಹೆಸರು ಜೀವಂತವಾಗಿ ನಮಗೆ ಸಿಗುವಾಗ ವೇದ ಈ ಜನ ಮಾನಸದ್ದೇ ಅನ್ನುವುದರಲ್ಲಿ ಯಾವ ಸಂಶಯವೂ ಬೇಡ. ವೇದಗಳಲ್ಲಿ ಅಲ್ಲಲ್ಲಿ ಅನೇಕ ಭೂಭಾಗಗಳನ್ನು ನಾವು ಗುರುತಿಸಬಹುದು ಆದರೆ ಅಂತಹ ಮನಸ್ಥಿತಿ ನಮಗೆ ಬೇಕು. ನಾನಂತೂ ಭಾರತೀಯನಾಗಿಯೇ ಇರುವುದಕ್ಕೆ ಭಯಸುವವ. ನಾನು ಭಾರತೀಯ ಎನ್ನಲು ನನಗೆ ಹೆಮ್ಮೆ ಅನ್ನಿಸುತ್ತದೆ.
#ಶಿಲೆಗಳಲ್ಲಡಗಿದ_ಸತ್ಯ

No comments:

Post a Comment