Search This Blog

Saturday 16 September 2017

ಪ್ರತಿಷ್ಠಾ ನಗರದ ಸಾತವಾಹನ - ಭಾಗ ೧

ರಾಜನಾಗಿಯೂ, ಗಾಥಾಸಪ್ತಶತೀ ಯನ್ನು ಬರೆದ ವಿದ್ವತ್ತುಳ್ಳ ಕವಿಯೂ, ಮತ್ತು ದೀಪಕರ್ಣಿಯಮಗನೂ ಆದ ಸಾತವಾಹನನೆನ್ನುವನು ಪ್ರತಿಷ್ಠಾನಗರದಲ್ಲಿದ್ದನು, "ದೀಪಕರ್ಣಿ ಸೂನುಃ ಸಾತವಾಹನೋ ನಾಮ ಕಶ್ಚನ ವಿದ್ವಾನ್ ಮಹೀಪತಿಃ"
ಸೋಮದೇವ ಭಟ್ಟನ ಕಥಾಸರಿತ್ಸಾಗರದ ಕಥಾಪೀಠಲಂಬಕದ ಆರನೇ ಸರ್ಗದಲ್ಲಿ :
"ಯತ್ ಸಭಾಂ ಬೃಹತ್ಕಥಾ ಪ್ರಣೀತ ಗುಣಾಢ್ಯ ಕಾಲಾಪ ವ್ಯಾಕರಣಕರ್ತೃ ಶರ್ವವರ್ಮ ಪ್ರಭೃತಯೋ ಭೂಯಾಂಸೋ ವಿದ್ವಾಂಸೋ ಮಂಡಯಾಂಚಕ್ರುರಿತಿ" ಈ ಸಾತವಾಹನನ ಸಭೆಯಲ್ಲಿ ಪೈಶಾಚೀ ಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಬರೆದ ಗುಣಾಢ್ಯನೆನ್ನುವವನಿದ್ದನು. ಕಾಲಾಪ ವ್ಯಾಕರಣವನ್ನು ಬರೆದ ಶರ್ವವರ್ಮನೇ ಮೊದಲಾದ ವಿದ್ವಾಂಸರುಗಳು ಇದ್ದುದಾಗಿಯೂ ತಿಳಿದು ಬರುತ್ತದೆ.
ಕ್ಷೇಮೇಂದ್ರನ ಬೃಹತ್ಕಥಾ ಮಂಜರಿಯಲ್ಲಿ ಇವನ ವಿಷಯವಾಗಿ ಬಂದಿದೆ.
ರಾಜಶೇಖರ ಸೂರಿಯ ಪ್ರಬಂಧ ಕೋಶದಲ್ಲಿ "ಅಧುನಾ ತು ದಕ್ಷಿಣ ದೇಶಸ್ಥಿತಂ ಪ್ರತಿಷ್ಠಾನಪುರಂ ಕ್ಷುಲ್ಲಕ ಗ್ರಾಮತುಲ್ಯಂ ವರ್ತತೇ ಇತ್ಯಸ್ತಿ" ಎನ್ನುವುದಾಗಿ ಪ್ರಸ್ತುತ ದಕ್ಷಿಣದೇಶದಲ್ಲಿ ಪ್ರತಿಷ್ಠಾನಪುರವೆನ್ನುವುದು ಚಿಕ್ಕ ಗ್ರಾಮದಂತಿರುವುದಾಗಿ ಹೇಳಿದ್ದಾನೆ. ಆದರೆ ಈ ಹಳ್ಳಿಯು ಯಾವುದೆಂದು ತಿಳಿಯುತ್ತಿಲ್ಲ. ಆಗಿನ ಕಾಲದಲ್ಲಿ ಅದು ದೊಡ್ದ ನಗರವಾಗಿದ್ದು ರಾಜಶೇಖರನ ಕಾಲಕ್ಕೆ ಅದು ಚಿಕ್ಕ ಹಳ್ಳಿಯಾಗಿದ್ದಿರಬಹುದು. ಗೋಧಾವರೀ ತೀರದಲ್ಲಿರುವ ಪೈಠಣವು ಕುಂತಲಕ್ಕೆ ರಾಜಧಾನಿಯಾಗಿತ್ತೆನ್ನುವುದನ್ನು ರಾಜಶೇಖರಸೂರಿಯು ಅದೇ ಪೈಠನವು ಪ್ರತಿಷ್ಠಾನಪುರವಾಗಿತ್ತು ಎನ್ನುವುದಾಗಿ ಉಲ್ಲೇಖಿಸಿದ್ದಾನೆ.
ವಾತ್ಸ್ಯಾಯನನೌ ತನ್ನ ಕಾಮಸೂತ್ರದ ೧೨ನೇ ಅಧ್ಯಾಯದಲ್ಲಿ ಕುಂತಳದ ರಾಜನಾದ ಶಾತವಾಹನನು ಮಹಾದೇವಿ(ಪಟ್ಟದರಾಣಿ) ಮಲಯವತಿಯನ್ನು ಕೊಂದು ಹಾಕಿದನೆಂದು ಹೇಳಿದ್ದಾನೆ. "ಕುಂತಲ ಶಾತಕರ್ಣಿ ಶಾತವಾಹನೋ ಮಹದೇವೀಂ ಮಲಯವತೀಂ ಜಘಾನ" ಎಮೋದು ಉಲ್ಲೇಖಿಸಿದ್ದಾನೆ ಆದರೆ ಕಥಾಸರಿತ್ಸಾಗರದಲ್ಲಿ ಮಲಯವತಿ ಎನ್ನುವುದಾಗಿರದೇ ವಿಷ್ಣು ಶಾಕ್ತಿಯ ಮಗಳನ್ನು ಕೊಂದುದಾಗಿ ಹೇಳಲಾಗಿದೆ.

ಇವುಗಳಲ್ಲದೆ ಗಾಥಾಸಪ್ತಶತೀಯಲ್ಲಿ ಶ್ರಂಗಾರ ಕಾವ್ಯದ ಕೊನೆಯಲ್ಲಿ ಹಾಲ - ಸಾತವಾಹನನು
ಶ್ರೀಮತ್ ಕುಂತಲದೇಶ ಜನಪದೇಶ್ವರ ಪ್ರತಿಷ್ಠಾಪತ್ತನಾಧೀಶ ಶತಕರ್ಣೋಪನಾಮಕ
ಮಲಯತ್ಯುಪದೇಶಪಣ್ಡಿತೀಭೂತ ತ್ಯಕ್ತ ಭಾಷಾತ್ರಯ ಸ್ವೀಕೃತ ಪೈಶಾಚಕ ಪಣ್ಡಿತರಾಜ ಗುಣಾಢ್ಯ
ನಿರ್ಮಿತ ಭಸ್ಮೀಭವದ್ ಭೃಹತ್ಕಥಾವಶಿಷ್ಟ ಸಪ್ತಮಾಂಶಾವಲೋಕನ ಪ್ರಾಕೃತಾದಿವಾಕ್ಪಂಚಕ ....................................... ಎಂದು
ಹಾಲಾದ್ಯುಪನಾಮಕ ಶ್ರೀಸಾತವಾಹನ ನರೇಂದ್ರ ನಿರ್ಮಿತಾ ವಿವಿಧಾನ್ಯೋಕ್ತಿಮಯ
ಪಾಕೃತಗೀರ್ಗುಂಭಿತಾ ಶುಚಿರಸಪ್ರಧಾನಾ ಕಾವ್ಯೋತ್ತಮಾ ಸಪ್ತಶತಮವಸಾನಮಗಾತ್ .............ಎಂದು ಹೇಳಿರುವುದರಿಂದ ಕಥಾ ಸರಿತ್ಸಾಗರದಲ್ಲಿ ಹೇಳಿರುವ ಸಾತವಾಹನನೂ ವಾತ್ಸ್ಯಾಯನನಿಂದ ಹೇಳಿರಲ್ಪಟ್ಟ ಸಾತವಾಹನನೂ ಗಾಥಾಸಪ್ತಶತಿಯನ್ನು ಬರೆದ ಸಾತವಾಹನನೂ ಒಬ್ಬನೇ ಎನ್ನುವುದು ಬಲವಾಗುತ್ತದೆ. ಇವನು ಪ್ರತಿಷ್ಠಾನಗರದ ಅರಸನಾಗಿದ್ದುದಲ್ಲದೇ ಗುರ್ಜರದಲ್ಲೂ ಅಧಿಪತ್ಯ ಸ್ಥಾಪಿಸಿರುವುದೂ ತಿಳಿದುಬರುತ್ತದೆ.

ರಾಜಾರ್ಹ ರತ್ನನಿಚಯೈ ರಥಶರ್ವವರ್ಮಾ ತೇನಾರ್ಚಿತೋ ಗುರುರಿತಿ ಪ್ರಣತೇನ ರಾಜ್ಞಾ |
ಸ್ವಾಮೀಕೃತಶ್ಚ ವಿಷಯೇ ಭರುಕಚ್ಛನಾಮ್ನಿ ಕೂಲೋಪಕಂಠವಿನಿವೇಶಿನಿ ನರ್ಮದಾಯಾಃ ||
ಕಾಲಾಪವ್ಯಾಕರಣವನ್ನು ತನಗೆ ಬೋಧಿಸಿದ ಶರ್ವವರ್ಮನಿಗೆ ಅವನ ಪಾಂಡಿತ್ಯಕ್ಕೆ ಮೆಚ್ಚಿ ಗೌರವದಿಂದ ಭರುಕಚ್ಚ(ಭರೋಚ) ಹೆಸರಿನ ಪ್ರದೇಶದ ಆಡಳಿತವನ್ನು ಬಿಟ್ಟುಕೊಟ್ಟನು ಎನ್ನುವುದಾಗಿ ಈ ಶ್ಲೋಕದಿಂದ ತಿಳಿಯುತ್ತದೆ.
ಕಾಶ್ಮೀರದ ರಾಜನಾದ ಅನಂತ ರಾಜ, ಕಲಶದೇವ , ಹರ್ಷದೇವ ಮೊದಲಾದವರು ಸಾತವಾಹನ ವಂಶದವರು ಎಂದು ಕಲ್ಲಣನ ರಾಜತರಂಗಿಣೀ ಮತ್ತು ಕಥಾ ಸರಿತ್ಸಾಗರದ ಕೊನೆಯ ಪ್ರಶಸ್ತಿವಾಕ್ಯದಿಂದ ತಿಳಿದು ಬರುತ್ತದೆ.

ಬಾಣ ತನ್ನ ಹರ್ಷಚರಿತದ ಆರಂಭದಲ್ಲಿ ಸಾತವಾಹನನ ಕುರಿತಾಗಿ ..
ಅವಿನಾಶಿನಮಗ್ರಾಮ್ಯಮಕರೋತ್ಸಾತವಾಹನಃ |
ವಿಶುದ್ಧ ಜಾತಿಭಿಃ ಕೋಶಂ ರತ್ನೈರಿವ ಸುಭಾಷಿತೈಃ || ಎಂದು ಇದೊಂದು ಶಾಶ್ವತ ಕೋಶ ಎಂದಿರುವನು. ಇದೇ ಶ್ಲೋಕವು ಜಲ್ಹಣನ ಸೂಕ್ತಿ ಮುಕ್ತಾವಳಿಯಲ್ಲಿ ರಾಜಶೇಖರನ ಹೆಸರಿನಿಂದ ಉಲ್ಲೇಖಗೊಂಡಿದೆ.
ಸಾತವಾಹನನು ಗಾಥಾ ಸಪ್ತ ಶತಿಯನ್ನು ಬರೆದಿರುವುದಲ್ಲದೇ ಸಾತವಾಹನ ಕೋಶವೆಂಬ ಇನ್ನೊಂದು ಗ್ರಂಥ ಬರೆದ ಎಂದು ಶ್ಲೋಕವೊಂದರಿಂದ ತಿಳಿದು ಬರುತ್ತದೆ.
ನಮಃ ಶ್ರೀಹರವರ್ಷಾಯ ಯೇನಹಾಲಾದನಂತರಂ |

ಸ್ವಕೋಶಃ ಕವಿಕೋಶಾನಾಮಾವಿರ್ಭಾವಾಯ ಸಂಭೃತಃ || ಎಂದು ಕೊಶವನ್ನೂ ಸಹ ಬರೆದಿದ್ದ ಎನ್ನುವುದು ತಿಳಿದು ಬರುತ್ತದೆ. ಇದೇ ಶ್ಲೋಕವು ಶತಾನಂದನನ ಮಗನಾದ ಅಭಿನಂದನನಿಂದ ಬರೆಯಲ್ಪಟ್ಟ ರಾಮಚರಿತವೆಂಬ ಏಳನೆಯ ಮತ್ತು ಹದಿನೈದನೆಯ ಸರ್ಗದ ಕೊನೆಯಲ್ಲಿ ಕಾಣಸಿಗುತ್ತವೆ.

No comments:

Post a Comment