Search This Blog

Sunday 17 September 2017

ಪ್ರತಿಷ್ಠಾ ನಗರದ ಸಾತವಾಹನ - ಭಾಗ 2

ಪೆದ್ದ ಹಾಲ - ಸಾತವಾಹನ ಮತ್ತು ಪ್ರಾಣಾಧಿಕಮೋದಕೈಸ್ತಾಡಯ !!

ಸಾತವಾಹನನು ಸರಸ್ವತೀ ವರಪುತ್ರನಾಗಿದ್ದ ರಾಜ. ವಿದ್ವತ್ತಿನ ಜೊತೆಗೆ ಅಧಿಕಾರವೂ ಇತ್ತು. ಈತನು ಮಹಾಕವಿಯಾಗಿದ್ದು ೭೦೦ ಶ್ಲೋಕಗಳಿಂದ ಕೂಡಿದ ಗ್ರಂಥವನ್ನು ಬರೆದವನು. ಆದರೆ ಈ ಸಾತವಾಹನನು ಯಾರು ಮತ್ತು ಹಾಲ ಎನ್ನುವವನು ಯಾರು ಎನ್ನುವ ಬಗ್ಗೆ ಅನೇಕ ಊಹಾಪೋಹಗಳಿವೆ.
ಶಾಲೋ ಹಾಲೋ ಮತ್ಸ್ಯಭೇದೇ : ಎಂದು ಶಾಲಃ ಹಾಲಃ ಎನ್ನುವುದು ಮತ್ಸ್ಯಭೇದದ ಅಭಿಪ್ರಾಯ ಅದೇರೀತಿ "ಹಾಲವಾಹನ ಪಾರ್ಥಿವೇ" ಎನ್ನುವಲ್ಲಿ ಹಾಲ ಎನ್ನುವುದು ಸಾತವಾಹನ ರಾಜ ಎನ್ನುವ ಅರ್ಥದಲ್ಲಿಯೂ ಹೇಳಲ್ಪಡುತ್ತದೆ.
ಶಲತಿ ಶಾಲಃ - ಶಯತಿ ವಾ ಶಯಮಾಶಯಾ ಇತಿ ಲಃ ಹಾಲಃ ಎನ್ನುವುದನ್ನು ಮನಗಂಡರೆ ಸಾತವಾಹನ ರಾಜ ಎನ್ನುವುದಾಗಿ ಹೈಮಾನೇಕಾರ್ಥದಲ್ಲಿ ಹೇಳಿದೆ.
ಹೈಮಾನೇಕಾರ್ಥದ ವ್ಯಾಖ್ಯಾನ ಗ್ರಂಥ ಅನೇಕಾರ್ಥಕೈರವಾಕರಕೌಮುದಿಯಲ್ಲಿ "ಜಜ್ಞೇ ಶಾಲ ಮಹೀಪಾಲಃ ಪ್ರತಿಷ್ಠಾನಪುರೇ ಪುರಾ" ದಿವಂಗತೇ ಹಾಲ ವಸುಂಧರಾಧಿಪೇ......."ಎಂದು ಬಂದಿದೆ.
ಹಾಲಸ್ಯಾತ್ ಸಾತವಾಹನಃ ಎಂದು ಹೈಮನಾಮ ಮಾಲೆಯಲ್ಲಿ ಬಂದಿದೆ. ಕಥಾ ಸರಿತ್ಸಾಗರದಲ್ಲಿ ಕೂಡ ಸಾ ತೇನ ಯಸ್ಮಾದೂಢೋಭೂತ್ತಸ್ಮಾತ್ತಂ ಸಾತವಾಹನಂ | ನಾಮ್ನಾ ಚಕಾರ ಕಾಲೇನ ರಾಜ್ಯೇ ಚೈನಂ ನ್ಯವೇಶಯತ್ ಎಂದು ಹೇಳಲ್ಪಟ್ಟಿದೆ. ಸಾತವಾಹನ ಪದವು ನಿರುಕ್ತದಲ್ಲಿಯೂ ಕಂಡುಬರುತ್ತದೆ.
ಸಾತನೆಂಬ ಹೆಸರುಳ್ಳ ಯಕ್ಷನೊಬ್ಬನು ಕುಬೇರನ ಶಾಪದಿಂದ ಸಿಂಹ ಜನ್ಮವನ್ನು ಹೊಂದಿ ಸಾತವಾಹನನನ್ನು ತನ್ನ ಬೇನ್ನಿನಮೇಲೆ ಹೊತ್ತುಕೊಂಡು ಹೋಗುತ್ತಿದ್ದುದರಿಂದ ಸಾತವಾಹನ ಎನ್ನುವ ಹೆಸರು ಬಂದಿತು ಎಂದು ನಿರುಕ್ತದಲ್ಲಿ ಹೇಳಲ್ಪಟ್ಟಿದೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿಯೂ ಸಹ ಸಾತವಾಹನನ ಉಲ್ಲೇಖ ಬಂದಿದೆ. ವಾಯು, ಮತ್ಸ್ಯ ಮತ್ತು ವಿಷ್ಣು ಪುರಾಣ ಮತ್ತು ಭಾಗವತದಲ್ಲಿಯೂ ಹಾಲಮಹೀಪತಿ ಎನ್ನುವ ಉಲ್ಲೇಖ ಬಂದಿದೆ.
ಸಾತವಾಹನನ ಕುರಿತಾದ ಕಥೆ : ದೀಪಕರ್ಣ ಎನ್ನುವ ರಾಜನಿಗೆ ಶಕ್ತಿಮತಿ ಎನ್ನುವ ರಾಣಿ ಇದ್ದಳು. ಒಂದಿ ದಿನ ತನ್ನ ಪತಿಯೊದನೆ ಏಕಾಂತದಲ್ಲಿರುವಾಗ ಶಕ್ತಿಮತಿಗೆ ಸರ್ಪವೊಂದು ಕಡಿದು ಮರಣ ಹೊಂದಿದಳು. ದೀಪಕರ್ಣನು ತನ್ನಮಡದಿ ಮಡಿದ ದುಖದಜೊತೆಗೆ ಪುತ್ರಹೀನತೆಯಿಂದ ಕೊರಗಿದನು. ಸಂತಾನ ಭಾಗ್ಯವಿಲ್ಲದ ದೀಪಕರ್ಣನು ದುಖ್ಹಿಸುತ್ತಿರುವಾಗ ಒಂದು ದಿನ ಆತನಿಗೆ ಸ್ವಪ್ನಾವಸ್ತೆಯಲ್ಲಿ ಶಿವನು ಪ್ರತ್ಯಕ್ಷನಾಗಿ " ನೀನು ಚಿಂತೆಯನ್ನು ಬಿಡು. ನೀನು ಅರಣ್ಯಕ್ಕೆ ಹೋಗಿ ಅಲ್ಲಿ ಒಬ್ಬ ಹುಡುಗ ಸಿಂಹವನ್ನೇರಿಕೊಂಡು ಬರುವನು ನೀನು ಸಿಂಹವನ್ನು ಕೊಂದು ಆ ಹುಡುಗನನ್ನು ಕರೆದುಕೊಂಡು ಬಂದು ಸಾಕು ಅವನೇ ನಿನ್ನ ಮಗ" ಎಂದು ಅಂತರ್ಧಾನನಾಗುವನು. ಇದನ್ನು ಕೇಳಿದ ರಾಜ ದೀಪಕರ್ಣ ಮಾರನೇ ದಿನವೇ ಕಾಡಿಗೆ ಹೋಗುತ್ತಾನೆ. ಅಲ್ಲಿ ಆತನಿಗೆ ಹುಡುಗನೊಬ್ಬ ಸಿಂಹದ ಮೇಲೆ ತಿರುಗುತ್ತಿರುವುದು ಕಾಣಿಸುತ್ತದೆ ಆಗ ಸಿಂಹಕ್ಕೆ ಒಂದು ಬಾಣವನ್ನು ಪ್ರಯೋಗಿಸಿ ಕೊಂದನು. ಆಗ ಸಿಂಹವು ಯಕ್ಷರೂಪವನ್ನು ತಳೆದು ತಾನು ಸಾತವಾಹನನೆಂಬ ಯಕ್ಷನು ಶಾಪರೂಪದಿಂದ ಈ ರೀತಿ ಸಿಂಹದ ರೂಪ ಹೊಂದಿದ್ದು. ಮುನಿಕುಮಾರಿಯೊಬ್ಬಳೊಂದಿಗೆ ರಮಿಸಿದ್ದಕ್ಕೆ ನಮ್ಮಿಬ್ಬರಿಗೂ ಶಾಪ ಕೊಟ್ಟರು ಆಗ ನಾವು ಪ್ರಾಯಶ್ಚಿತ್ತ ಕೇಳಿದಾಗ ಪುತ್ರಜನನದ ತಕ್ಷಣ ತಾಯಿಗೂ ಮುಂದೆ ರಾಜನೊಬ್ಬನ ಒಂದೇ ಬಾಣದ ಪ್ರಯೋಗದಿಂದ ಯಕ್ಷನಿಗೂ ಶಾಪವಿಮೋಚನೆ ಎಂದರು ಇಂದಿಗೆ ತನ್ನ ಶಾಪ ವಿಮೋಚನೆ ಆಯಿತು ಎಂದು ಹೇಳಿ. ಮಗುವಿಗೆ ಇಷ್ಟರ ತನಕ ಸಿಂಹಿಣಿಗಳ ಹಾಲನ್ನೇ ಕುಡಿಸಿದ್ದು ಇನ್ನು ಮುಂದೆ ಇವನು ನಿನ್ನ ಮಗ ಇವನು ನಿನ್ನವನು ಎಂದು ಅಂತರ್ಧಾನನಾದನು. ಆ ಮಗುವನ್ನು ತಂದು ಸಾಕಿದ ದೀಪಕರ್ಣನು ಅವನಿಗೆ ರಾಜ ಪಟ್ಟ ಕಟ್ಟಿದನು. ಸಾತ್ ಎಂದರೆ ಸಾತನೆನ್ನುವ ಯಕ್ಷನ ಹೆಸರೂ ವಾಹನಃ ಎಂದರೆ ಹೊತ್ತುತಿರುಗಿದ್ದರಿಂದ ಆತನನ್ನು ಸಾತವಾಹನ ಎನ್ನಲಾಯಿತು. ಈ ಸಾತವಾಹನನ ಹೆಂಡತಿ ಮಲಯವತಿ. ಒಂದು ದಿನ ಉದ್ಯಾನದಲ್ಲಿ ಜಲಕ್ರೀಡೆಯಾಡ್ವಾಗ ಬೇಸರಗೊಂಡ ಮಲಯವತಿ "ಪ್ರಾಣಾಧಿಕಮೋದಕೈಸ್ತಾಡಯ" ಎಂದು ಹೇಳಿದ್ದನ್ನು ರಾಜ ಕೇಳಿ ಅಪಾರ್ಥ ಮಾಡಿಕೊಂಡು ಮೋದಕಗಳಿಂದ ರಾಣಿಗೆ ಹೊಡೆಯುತ್ತಾನೆ. ಮಲಯವತಿ ವಿದ್ಯಾ ಪ್ರವೀಣೆ ಅವಳು ರಾಜನನ್ನು ಚೇಡಿಸಿ ನಾನು ಹೇಳಿದ್ದು "ಜೀವಿತೇಶ ಮಾ ಉದಕೈಸ್ತಾಡಯ" ಶಬ್ದ ಸಂಧಿಜ್ಞಾನವಿಲ್ಲದವನೆಂದು ಮೂದಲಿಸುತ್ತಾಳೆ. ಇದು ಕಥಾ ಬೃಹತ್ಕಥಾಮಂಜರಿಯಲ್ಲಿಯೂ ಈ ವಿಷಯ ಬಂದಿದ್ದು
ತತ್ರೈಕಾ ಮಹಿಷೀ ರಾಜ್ಞಾ ಹತಾ ಸಾವೇಗ ಮಂಬುನಾ |
ಮಾ ಮೋದಕೇನ ರಾಜೇಂದ್ರ ತಾಡಯೇತ್ಯಭ್ಯಧಾನ್ನೃಪಂ || ಎಂದು
ಶ್ರುತ್ವೇತಿ ಮೂರ್ಖೋ ಭೂಪಾಲಃ ಕ್ಷಿಪ್ರಮಾಹೃತ ಮೋದಕಃ |
ಮಾ ಮಾರಿಣೇತಿ ದೇವಾಸ್ತದ್ವಚಶ್ರುತ್ವಾ ಹ್ರಿಯಂ ಯಯೌ ||
ಎಂದೂ ಕಥಾ ಸರ್ತ್ಸಾಗರದ ೬ನೇ ಲಂಬಕದಲ್ಲಿಯೂ ಇದೇ ರೀತಿಯಲ್ಲಿ ಬಂದಿದೆ., ಇದರಿಂದ ರಾಜನು ಬಹಳ ಅಪಮಾನಿತನಾಗಿ ತನ್ನ ಮಂತ್ರಿ ಗುಣಾಡ್ಯನನ್ನು ಕರೆದು ವ್ಯಾಕರಣ ಕಲಿಸು ಎನ್ನುತ್ತಾನೆ ಅದಕ್ಕೆ ಗುಣಾಡ್ಯನು ಆರು ವರ್ಷಗಳು ಬೇಕು ಎನ್ನಲು ರಾಜನು ಶರ್ವವರ್ಮನೆನ್ನುವ ಬ್ರಾಹ್ಮಣನನ್ನು ಕರೆದು ವ್ಯಾಕರಣ ಕಲಿಸಲು ನಿನಗೆಷ್ಟು ಸಮಯ ಬೇಕು ಎಂದು ಕೇಳಲು ಅವನು ಷಣ್ಮಾಸಃ ಆರು ತಿಂಗಳು ಎನ್ನುತ್ತಾನೆ. ಆಗ ಗುಣಾಡ್ಯನು ಶರ್ವವರ್ಮನಿಗೆ ಸಂಸ್ಕೃತ ಅಥವಾ ಪ್ರಾಕೃತ ಮತ್ತು ದೇಶೀ ಭಾಷೆ ಯಲ್ಲಿ ಯಾವುದಾದರೊಂದರಲ್ಲಿ ಒಂದು ಶಬ್ದವನ್ನೂ ಹೇಳಲು ಸಾಧ್ಯವಿಲ್ಲ ಎಂದನು ಆಗ ಶರ್ವವರ್ಮನು ಪಂಥಾಹ್ವಾನ ಕೊಟ್ಟು. ಆರು ತಿಂಗಳಲ್ಲಿ ನಾನು ಕಲಿಸದೇ ಹೊದರೆ ಹನ್ನೆರಡು ವರ್ಷ ನಿನ್ನ ಪಾದುಕೆಯನ್ನು ತನ್ನ ತಲೆಯಲ್ಲಿಟ್ಟು ತಿರುಗುವೆ ಎಂದು ಹೇಳಿ ಷಣ್ಮುಖನನ್ನು ಆರಾಧಿಸಿ. ಕಾಲಾಪ ವ್ಯಾಕರಣವನ್ನು ಪಡೆದು ಅದನ್ನು ಭೋದಿಸಿ ರಾಜನನ್ನು ವಿದ್ವದ್ರಾಜನನ್ನಾಗಿ ಮಾಡುತ್ತಾನೆ. ಇದ್ದರಿಂದ ಭರೋಚ ರಾಜ್ಯವನ್ನು ಕೊಟ್ಟ ವಿಷಯ ಈಗಾಗಲೇ ನಾನು ಹೇಳಿರುವೆ.

ಗುಣಾಡ್ಯ ಮೊದಲ ಸಹಸ್ರಮಾನದ ಮೊದಲ ಶತಮಾನದ ಪೂರ್ವಾರ್ಧದಲ್ಲಿದ್ದವನು. ಅವನ ಆಶ್ರಯದಾತ ಸಾತವಾಹನನೂ ಸಮಕಾಲೀನನು. ಹೀಗೆ ಅವನ ಜನ್ಮ ವೃತ್ತಾಂತವನ್ನು ಹೇಳಿರುವೆನು ಮತ್ತು ವ್ಯಾಕರಣ ಗ್ರಂಥವೊಂದರ ಉಲ್ಲೇಖ ಮಾಡಿರುವೆನು ಮುಂದೆ ಅವನ ಕಾಲ ವಿಚಾರವನ್ನು ಗಮನಿಸ ಬೇಕಿದೆ.      

No comments:

Post a Comment