Search This Blog

Friday 8 September 2017

ಸಿಸುವಿನಹಾಳದಲ್ಲಿರುವ - ನೃಪತುಂಗನ ರಾಜಮಂದಿರದ ದೇವಣಯ್ಯ

ಅದು ಅಗ್ರಹಾರದ ಪ್ರದೇಶ ಸ್ಮೃತಿಯನ್ನು ಶ್ರುತಿಯಿಂದ ಹಾಡುತ್ತಾ ಹೋಮಧೂಮಗಳಿಂದ ಆಜ್ಯಾಹುತಿಗಳ ಘಮ ಘಮ ಪರಿಮಳದಿಂದ ಕಂಗೊಳಿಸುತ್ತಿದ್ದ ಪ್ರದೇಶ ಅನ್ನಿಸುತ್ತದೆ. "ಶ್ರುತಿಯೊಳ್ವಿಶ್ರುತ ವಿಸ್ವಸ್ಕೃತಿಯೊಳ್ವ್ಯಾಕರಣ ಕಾವ್ಯನಾಟಕ ತರ್ಕ್ಕಸ್ಥಿತಿಯೊಳ್ಸರ್ವ್ವಾಗಮದೊಳ್ಚತುರ್ಮ್ಮೂಖ ಪ್ರತಿಮರಯ್ವದಿಂಬರ್ವಿಪ್ರ[ರ್] ಮೊದಲೊಳ್ಸಿಸೂಳಹಾೞಂ" ಇದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸಿಸೂವಿನಹಾಳದ ಶಾಸನದಲ್ಲಿ ಬರುವ ವಾಕ್ಯ. ಈಗ ಇದು ಸಿಸುವಿನ ಹಳ್ಳಿ ಎನ್ನುವುದಾಗಿ ಬದಲಾಗಿದೆ. ಈ ಊರಿನ ೫೦ ಜನ ಬ್ರಾಹ್ಮಣರು ಶ್ರುತಿ, ಸ್ಮೃತಿ, ವ್ಯಾಕರಣ, ಕಾವ್ಯ, ನಾಟಕ, ತರ್ಕ, ಆಗಮವೇ ಮೊದಲಾದ ವಿದ್ಯೆಗಳಿಂದ ಪಾರಂಗತರಾಗಿದ್ದರು. ಈ ಹಿಂದೆ ಈ ಪ್ರದೇಶವನ್ನು ಆಳಿದ ಚಳುಕ್ಯರಿಂದ ಈ ಊರನ್ನು ಈ ಬ್ರಾಹ್ಮಣರು ಪಡೆದುಕೊಂಡಿದ್ದರು. ಯಜ್ಞ ಯಾಗಾದಿಗಳನ್ನು ಮಾಡುತ್ತಾ ಸಾಂಗವಾಗಿ ನೆರವೇರಿಸಿಕೊಳ್ಳುತ್ತಾ ಅಗ್ರಹಾರವನ್ನು ವಿದ್ಯಾಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ರಾಷ್ಟ್ರಕೂಟರ ದೊರೆ ಅಮೋಘವರ್ಷನ ಮಾಂಡಲೀಕನಾದ ದೇವಣಯ್ಯನು ಬೆಳ್ವೊಲ ಮೂರುನೂರನ್ನು ಆಳುತ್ತಿದ್ದನು. ಒಂದು ಚಂದ್ರಗ್ರಹಣದ ದಿನ ಗ್ರಹಣಕಾಲದಲ್ಲಿ ಈ ೫೦ ಜನ ಬ್ರಾಹ್ಮಣರನ್ನು ಕರೆಸಿ ನೃಪತುಂಗ ರಾಜಮಂದಿರದ "[ನೃ]ಪತು[ಙ್ಗ]ರಾಜಮನ್ದಿರಾ" ಅಂಗಳದಲ್ಲಿ "ವಿಪ್ರೋತ್ತಮರಂ ಕರೆಯಿಸಿ ಪಾದಪ್ರಕ್ಷಾಳನಪೂರ್ಬ್ಬಕಂ ಸಹಿರಣ್ಯನ್ತುಪ್ಪದೆಱೆಯ " ತೀರ್ಥೋದಕ ಸಹಿತವಾಗಿ ಮತ್ತು ಹಿರಣ್ಯದೊಂದಿಗೆ ತುಪ್ಪದ ಮೇಲಿನ ತೆರಿಗೆಯನ್ನು ಬಿಟ್ಟು ದಾನ ಕೊಟ್ತ ಉಲ್ಲೇಖ ಈ ಶಾಸನದಲ್ಲಿ ಕಂಡುಬರುತ್ತದೆ.
1. ಸ್ವಸ್ತ್ಯಮೋಘವರ್ಷ ಶ್ರೀ ಪೃಥುವೀವಲ್ಲಭ ಮಹಾರಾಜಾಧಿರಾಜ ಪರಮೇ-
2. ಶ್ವರ ಪರಮಭಟರರಾ ರಾಜ್ಯಮುತ್ತರೋತ್ತರಮಭಿವೃದ್ಧಿಗೆ
3. ಸಲುತ್ತಿರೆ ಶ್ರೀ ಮದಮೋಘವರ್ಷದೇವ ಪಾದಪಂಕ-
4. ಜಭ್ರಮರ [ವಿ]ಸಿಷ್ಟಜನಾಶ್ರಯಂ ಶ್ರೀಮದ್ದೇವಣಯ್ಯಂ ಬೆ-
5. ಳ್ವೊಲಮೂನೂಱುಮ ನಾಳುತ್ತುಂ ಸಕ[ನೃ]ಪಕಾ[ಳಾ]ತೀತಸಂವತ್ಸರಂಗ ಳೇೞ್ನೂಱ
6. ತೊಮ್ಬತ್ತಮೂಱನೆಯ ಖರಮೆಮ್ಬ ವರಿಷಂ ಪ್ರವರ್ತ್ತಿಸೆ
7. ಫಾಲ್ಗುಣಮಾಸ ಶುದ್ಧಪಕ್ಷ ಪ್ರತಿಪದ ತಿ[ಥಿ] ಬುಥ-
8. ವಾರ ಹಸ್ತನಕ್ಷತ್ರದನ್ದು . . . . . [ನೃ]ಪತು[ಙ್ಗ]ರಾಜಮನ್ದಿರಾ[ಂ]-
9. ಗಣದೊಳ್ದೇವಣಯ್ಯ [ಶರ್ವ್ವ]ತೀರ್ತ್ಥೋದಕಸ್ನಾನಪವಿ-
10. ತ್ತ್ರೀಕ್ರಿತಗಾತ್ರಂ ಸ್ವಕೀಯ ಕನ್ನೆರಾಸಿಯೊಳ್ಸೋಮಗ್ರಹ-
11. ಣದೊ [ಳ್ಸಿ]ಸುಳಹಾಳಯ್ವದಿಂಬರು ಮಹಾಜನಮ ನವ-
12. ಧಾರಿಸಿ

ಸಿಸುವಿನಹಾಳದ ಬ್ರಾಹ್ಮಣರು ಹೇಗಿದ್ದರು ಎಂದರೆ :
೧೨. . . . . . .ಶ್ರುತಿಯೊಳ್ವಿಶ್ರುತ ವಿಸ್ವ-
13. ಸ್ಕೃತಿಯೊಳ್ವ್ಯಾಕರಣ ಕಾವ್ಯನಾಟಕ ತರ್ಕ್ಕಸ್ಥಿತಿಯೊಳ್ಸರ್ವ್ವಾ-
14. ಗಮದೊಳ್ಚ ತುರ್ಮ್ಮೂಖ ಪ್ರತಿಮರಯ್ವದಿಂಬರ್ವಿಪ್ರ[ರ್] ಮೊ-
15. ದಲೊ ಳ್ಸಿಸೂಳಹಾೞಂ ವಿದಿತಶ್ರೀ ಸಳುಕಿರಾಜ್ಯ [ದೊ]ಳ್ಪಡೆದು
16. ಮಹಾಸದಮಲಸರ್ವ್ವಕ್ರಿತುಗಳನುದಾರ[ತ]ರಮಾಗೆ ಬೇ[ಳ್ಪ]
17. ವಿಪ್ರೋತ್ತಮರಂ
- ಎಂದು ಆ ಊರಿನ ಬ್ರಾಹ್ಮಣರನ್ನು ಹಾಡಿ ಹೊಗಳಿರುವುದು ಕಂಡು ಬರುತ್ತದೆ. ಈ ಬ್ರಾಹ್ಮಣರಿಗೆ ಕೊಟ್ಟ ಭೂಮಿಯನ್ನು ಕಾಪಾಡಿ ಅವರಿಗೆ ಸಲ್ಲಿಸಿದರೆ ಅಶ್ವಮೃಧದ ಫಲಪ್ರಾಪ್ತಿಯಾಗುವುದು ಮತ್ತು ಇದನ್ನು ತನ್ನದೆಂದು ಭಾವಿಸಿ ಅನುಭವಿಸಿದರೆ ಮತ್ತು ತುಪ್ಪದ ಮೇಲಿನ ಸುಂಕವನ್ನು ಕೇಳಿದರೆ ಆತನು ಕಾಶಿಯಲ್ಲಿ ಸಾವಿರ ಗೋವುಗಳನ್ನು, ಬಾಲಕರನ್ನು ಮತ್ತು ಬ್ರಾಹ್ಮಣರು ಮತ್ತು ಗುರುಗಳನ್ನು ಕೊಂದ ಪಂಚಮಹಾಪಾತಕಿಯಾಗುತ್ತಾನೆ ಎನ್ನುತ್ತದೆ ಈ ಶಾಸನ.
19. ಸರು ಮೂರುಂ ಕಾದೊಡಶ್ವಮೇಧದ ಫಲ ಮಕ್ಕು ಮಿಲ್ಲಿ ಸೊಲ್ಲ-
20. ಗೆಯ ತುಪ್ಪಮನುಣ್ಬೆನೆಂಬಾತಂ ಬಾರಣಾಸಿಯೊಳ್ಸಾಸಿ-
21. ರಂ ಗೋಬಾಳಸ್ತ್ರೀ ದ್ವಿಜಗುರುಗಳಂ ಕೊನ್ದ ಪಂಚಮಹಾ-
22. ಪಾತಕರಪ್ಪರ್ ಎಂದು ಶಾಪೋಕ್ತಿ ಹೇಳಲ್ಪಡುತ್ತದೆ.

ಈ ಶಾಸನದಲ್ಲಿ ಬರುವ "ನೃಪತುಙ್ಗರಾಜಮನ್ದಿರಾಂಗಣದೊಳ್ದೇವಣಯ್ಯ" ಎಂದು ಬರೆದಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ಈ ದಾನ ಪ್ರಕ್ರಿಯೆಯನ್ನು ನೆರವೇರಿಸಲು ನೃಪತುಂಗನ ಸಾನ್ನಿಧ್ಯದಲ್ಲಿ ನೆರವೇರಿಸಲು ರಾಜನ ಮಂದಿರಕ್ಕೆ ಹೋಗಿರಬಹುದು ಅಥವಾ ರಾಜನಿಗೆ ಇನ್ನೊಂದು ವಿಶ್ರಾಂತಿಗ್ರಹವೋ ಅಥವಾ ರಾಜನಿಗೆ ಈ ಪ್ರದೇಶಕ್ಕೆ ಬಂದಾಗ ತಂಗಲಿಕ್ಕಾಗಿಯೆ ನಿರ್ಮಿಸಲಾದ ಮಂದಿರದಲ್ಲಿಯೇ ಈ ದಾನ ಪ್ರಕ್ರಿಯೆ ನಡೆದಿರಲಿಕ್ಕೂ ಸಾಕು. ಅದೇನೇ ಇರಲಿ ದಾನ ಪ್ರಕ್ರಿಯೆ ಒಂದು ಎಷ್ಟು ಸುಸಂಬದ್ಧವಾಗಿ ನಡೆಯುತ್ತಿತ್ತೆನ್ನುವುದು ತಿಳಿದು ಬರುತ್ತದೆ.  

No comments:

Post a Comment