Search This Blog

Monday 11 September 2017

ಕಮಳೋದ್ಭವವಂಶ ಕವಿರಾಜರಾಜ ವಿಬುಧಪ್ರವರನ ಕಾಡಿಯೂರಿನ ವರ್ಣನೆ

ಆನೆಗಳೊಡನೆ ಹೋರಾಡುವ ಪರಿಣತಿಯನ್ನು ಪಡೆದಿದ್ದ ಗೊಜ್ಜಿಗನು ಸಂಪದ್ಭರಿತನಾಗಿದ್ದರೂ ಔದಾರ್ಯದ ಮೂರ್ತಿಯಾಗಿದ್ದನು. ಸಾಹಸದಲ್ಲಿ ಉತ್ಸಾಹಿಯಾದ ಭಟನಂತೆದ್ದ ರಾಜನಿಗಿಂತ ಮಿಗಿಲಾದ ಇನ್ನೊಬ್ಬ ಭೂ ಮಂಡಲದಲ್ಲಿಯೇ ಇದ್ದಂತೆ ತೋರುತ್ತಿಲ್ಲ. ಅರ್ಜುನನಂತೆ ಸಾಹಸಿಯೂ ಕರ್ಣನಂತೆ ಉದಾರಿಯೂ ಆಗಿದ್ದನು ಎನ್ನುವುದು ಗೊಜ್ಜಿಗನ ಕುರಿತಾಗಿ ಧಾರವಾಡಜಿಲ್ಲೆಯ ಸಿಗ್ಗಾವಿಯ ಕಳಸ(ಕಳಸ್) ಕೋನೆರಾಯ ಎನ್ನುವವರ ಮನೆಯ ಗೋಡೆಯ ಸಮೀಪ ಇರುವ ಶಾಸನ. ರಾಷ್ಟಕೂಟರ ನಾಲ್ಕನೆಯ ಗೋವಿಂದನ ಸುಮಾರು 930ನೆಯ ಇಸವಿಯ ಶಾಸನ.
"ಇಭಪರಿಣತೆ(ತಿ)ಯೊಳಮಾನ್ಷ ವಿಭವದೊಳೌದಾರ್ಯ್ಯವೃತ್ತಿಯೊಳ್ಸಾಹಸದೊಳ್ಸುಭಟತೆಯೊಳ್ಗೊಜ್ಜಿಗ ವಲ್ಲಭನಂ ಮಿಗಲುರ್ವ್ವಿ ನೃಪರನಾಂ ಕಣ್ಡಱಿಯೆ ಮುನಿದಿದಿರಾಗೆ ಶರಣ್ಬುಗೆ ಮನಮೊಲ್ದುದನೆರೆಯೆ ಫಲ್ಗುಣ(ನಂ) ಧಾತ್ರಂ ಕರ್ಣ್ಣನೆನಲ್ಗೊಜ್ಜಿಗಭೂಪಾಳನನೆಯ್ದುವ" ಶಸನದಲ್ಲಿ ಎಲ್ಲಿಯೂ ಸಹ ಕಳಸ ಎನ್ನುವ ಊರಿನ ಪ್ರಸ್ತಾಪ ಅಬರದೇ ಇದ್ದರೂ ಸಹ ಇದು "ಸರ್ವ್ವನಮಶ್ಯ(ಸ್ಯ)ಮಾಗಿರ್ಪ್ಪುದೆಂದೆಱೆಯನ ಕಾಡಿಯೂರಂ" ಎಂದು ಹೇಳಿರುವುದರಿಂದ ಕಾಡಿಯೂರು ಎನ್ನುವುದೇ ಮುಂದೆ ಕಳಸವಾಗಿರಬಹುದು.
ಪುಲಿಗೆರೆಯ ಸಮೀಪದ ಕಾಡಿಯೂರು, ಕೊಂಡಲಿಕೆರೆ, ಅಲ್ಲಿನ ಜನಮಾನಸವನ್ನು ಅತ್ಯಂತ ವಿಶದವಾಗಿ ವರ್ಣಿತವಾಗಿದ್ದಾರೆ. ಊರಿನಲ್ಲಿನ ಸಾಮಾನ್ಯ ಜನರನ್ನೂ ಸಹ ವರ್ಣಿಸಿರುವುದು ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. "ಭರತ ಮಹೀಮಣ್ಡಳಕ್ಕಾಭರಣಂ ಕೂಂತಳ ಧರಾತಳಂ ತದ್ವಿಷಯಕ್ಕೆರಡಱುನೂಱು ಲಲಾಮಂ ಪುರಿಕರ ಜನಪದಂ" ಎನ್ನುವುದಾಗಿ ಕೊಂಡಾಡುತ್ತದೆ ಶಾಸನ.
ಕಾಡಿಯೂರಿನ ಅಗ್ರಹಾರ : ಕಾಡಿಯೂರಿನ ಅಗ್ರಹಾರದಲ್ಲಿ ಹೋಮಧೂಮಗಳಿಗಿಂತ ಶ್ರುತಿ ಸ್ಮೃತಿಗಳ ಅಸ್ಖಲಿತ ಸ್ವರಗಳು ಮಾರ್ಗದ ಇಕ್ಕೆಡೆಗಳಲ್ಲಿ ಕೇಳಿ ಬರುತ್ತಿದ್ದವು. ವ್ಯಾಕರಣ, ಅರ್ಥಶಾಸ್ತ್ರ, ಸಾಹಿತ್ಯ, ಇತಿಹಾಸ ಮತ್ತು ಏಕಾಕ್ಷರ ಎನ್ನುವ ವಿದ್ಯೆಗಳ ಕೇಂದ್ರವಾಗಿತ್ತು. ಮತ್ತು ಎಲ್ಲಾ ವಿದ್ಯೆಗಳಿಗೆ ಸ್ವತಂತ್ರರಾಗಿ ಟೀಕಾಗ್ರಂಥಗಳನ್ನು ರಚಿಸಬಲ್ಲ ವಿದ್ಯಾರ್ಥಿಗಳನ್ನು ಇಲ್ಲಿ ಪರಿಣತರನ್ನಾಗಿ ಮಾಡಲಾಗುತ್ತಿತ್ತು.
"ಕಾಡಿಯೂರುಮೆಸೆವಲ್ಲಿಯ ವಿಪ್ರರುಮೊಪ್ಪಿ ತೋಱುಗುಂ ವ್ಯಾಕರಣಮರ್ತ್ಥಶಾಸ್ತ್ರಾನ್ತೀಕಂ ಸಾಹಿತ್ಯವಿದ್ಯೆಯಿತಿಹಾಸಂ ಮಿಕ್ಕೇಕಾಕ್ಷರ ಮಿ(ಮು)ನಿತರ್ಕ್ಕಂ ಟೀಕಂ ಬರೆಯಲ್ಸಮಗ್ರಾಭ್ಯಾ[ಸಿಸುವ] ರ್ವೇದಂ ಪ್ರಮಾಣಮಾಗ್ನಿ ಮಹಾದಯ್(ದೈ)ವಂ ತಮಗೆನಲ್ಪರೀಕ್ಷಾ ಕ್ಷಮ ಸದ್ವೇದ ವಿಧಾ()ರಖಿಳಶಾಸ್ತ್ರ ಪಯೋದಧಿಗಳ್ಕಾಡಿಯೂರ . . . . . . ." ಎಂದು ಕಾಡಿಯೂರಿನ ಅಗ್ರಹಾರದ ವೇದ ವಿದ್ಯಾ ವಿಶಾರದರನ್ನು ಹೊಗಳಲಾಗಿದೆ.
ಗೊಜ್ಜಿಗದೇವ - ನಾಲ್ಕನೇ ಗೋವಿಂದ : ಗೊಜ್ಜಿಗದೇವನು ವಿರೋಧಿಗಳನ್ನು ತನ್ನ ಚಾಣಾಕ್ಷ ಬುದ್ಧಿಯಿಂದ ಗೆಲ್ಲುತ್ತಿದ್ದುದರಿಂದ ಅವನು "ನೃಪತುಂಗ" ಎನ್ನುವ ಬಿರುದನ್ನು ಪಡೆದಿದ್ದನು. ಆನೆಗಳೊಡನೆ ಹೋರಾಟಮಾಡಿ ಗ್ತೆಲ್ಲುತ್ತಿದ್ದುದು ತಿಳಿದು ಬರುತ್ತದೆ. ಅದಕ್ಕೆ ಈತನನ್ನು ಇಭ ಪರಿಣತ ಎನ್ನಲಾಗಿದೆ.
ಪಗೆಗೊಣ್ಡಾಡುವ ಶತ್ರುಭೂಪತಿಗಳಂ ದೋರ್ಗ್ಗರ್ವ್ವದಿಂದೇಱಿದು
ಗ್ರಗಜೇಂದ್ರಂ ಬೆರಸೋವದನ್ತಕನ ಬಾಯೊಳ್ತೂನ್ತಿ ಮತ್ತಂ ಶರ
ಣ್ಬುಗಲೆಂದಿರ್ಪ್ಪವನೀಶ್ವರ ಪ್ರತತಿಯಂ ಕೈಕೊಣ್ಡು ಕಾದೆಯ್ದೆ ಗೊ
ಜ್ಜಿಗದೇವಂ ನ್ರಿ(ನೃ)ಪತುಂಗನೆಂಬಳವನೊಲ್ದಂಗೀಕೃತಂ ಮಾಡಿದ
ಎಂದು ಈತನ ಗುಣಗಾನ ಮಾಡಲಾಗಿದೆ.
 ಗೊಜ್ಜಿಗನ ರಾಜಮಾನ್ಯದ ಚಿಹ್ನೆಗಳು : ವೀಸೋತ್ತರ ಪಂಡಿತ ಎನ್ನುವ ಸಕಲ ವೇದಗಳ ಬಲ್ಲಾತನಿಗೆ ರಾಜಮಾನ್ಯದ ರಾಜ ಚಿಹ್ನೆಗಳನ್ನು ಪಡೆದು ಗೌರವಿತನಾದನೆಂದು ಶಾಸನದ ಮಾತುಗಳಿಂದ ತಿಳಿದು ಬರುತ್ತದೆ.
ಗುಡಿ ಶಂಖಂ ಚಾಮರಂ ಬೆಳ್ಗೊಡೆ ಘಳಿಗೆ ವಿಚಿತ್ರಾತಪತ್ರ ವ್ರಜಂ ಪೆ
ರ್ವ್ವಿಡಿ ಸೌಧಂ ಚಿತ್ರದಣ್ಡಂ ಪಳಿಯೆಸೆವ ಝಳಂಬಂ ಗಜೇಂದ್ರಂ ತುರಂಗಂ
ನಡೆಮಾಡಂ ದಣ್ಡನಾತೋ[ತ್ತ] ಪದವಿ ಮಹಾತೂರ್ಯ್ಯಮೆಂಬಿನ್ತಿವಂತುಂ
ಪಡೆದಂ ಚೆಲ್ವಿಂದೆ ವೀಸೋತ್ತರ ವಿದಿತ ಧರಾದೇವನಿಷ್ಟ ಪ್ರಭಾವ
ದೇಗುಲ, ಶಂಖ, ಚಾಮರ, ಬಿಳಿಯ ಕೊಡೆ, ಘಟವಾದ್ಯ, ಬಿಸಿಲಿನ ಆತಾಪದಿಂದ ತಪ್ಪಿಸತಕ್ಕಂತಹ ಕೊಡೆ, ದೊಡ್ಡ ಹೆಣ್ಣಾನೆ, ದೊಡ್ದ ಭವನ, ಚಿತ್ರದಂಡ, ಬೀಸಣಿಗೆ, ಆನೆ ಮತ್ತು ಕುದುರೆಗಳು, ದಂಡನಾಥ ಎನ್ನುವ ಪದವಿ, ಮಹಾತೂರ್ಯ, ಮುಂತಾದುವುಗಳನ್ನು ಪಡೆದರು. ಎನ್ನುವುದಾಗಿ ಶಾಸನದಲ್ಲಿ ಹೇಳಲ್ಪಟ್ಟಿದೆ.
 ಪುಲಿಗೆರೆ : ಭರತ ಮಹೀ ಮಣ್ಡಳಕ್ಕಾ
ಭರಣಂ ಕೂಂತಳ ಧರಾತಳಂ ತದ್ವಿಷಯ
ಕ್ಕೆರಡಱುನೂಱು ಲಲಾಮಂ
ಪುರಿಕರ ಜನಪದಂ ಅದಕ್ಕೆ ನವ ಪವಿ ಮುಕುರಂ
ಪುಲಿಗೆಱೆನಾಡೊಳಗೆ
ಶ್ರೀಪುಂಜಂ ದೇವತಾ ನಿವಾಸ ವಿಲಾಸ
ವ್ಯಾಪಾರಕೃತಂ ನೆಗೞ್ದ
ಹಾಪಟ್ಟಣಮೊಳ್ಪನಾಳ್ದ ಪುಲಿಗೆಱೆಯೆಸೆಗುಂ” ಎಂದು ಭಾರತದ ಭೂ ಪ್ರದೇಶದ ಆಭರಣದಂತಿದ್ದ ಪುಲಿಗೆರೆ ಎನ್ನುವುದು ಕುಂತಳದ ಭೂಪ್ರದೇಶ. ಊರಿನ ಎರಡು ನೂರು ಜನರನ್ನು ಪೋಷಿಸುತ್ತಿರುವ ರಾಜನ ಪ್ರದೇಶ. ದೇವತೆಗಳಿಗಿದು ಮನೆ, ವಿಲಾಸ ಮತ್ತು ವ್ಯಾಪಾರಕ್ಕೆ ಆಗರ ಎಂದು ಪುಲಿಗೆರೆ ನಗರವನ್ನು ವರ್ಣಿಸಲಾಗಿದೆ.
 
ಕಾಡಿಯೂರಿನ ವರ್ಣನೆ:
ಪುರಿಕರನಗರದ ಪಶ್ಚಿಮಪ್ರದೇಶದೊಳ್
ಪೊಱವೊಳಲೊಳ್ಪೊದಳ್ದ ನವನನ್ದನ ಬೃನ್ದದಿನೊಳ್ಪನಾಳ್ದ ಪೆ
ರ್ಗ್ಗೆರೆಗಳಿನೊನ್ದೆಗಾವರಿಸುತಿರ್ಪ್ಪ ಮದಾಳಿಯಿನೆಯ್ದೆ ಪೂದ ಕಿ
ಕ್ಕಿಱಿ ನಿಮಿರ್ದಿರ್ದ ಪಾದರಿಯಿ ನೂದುವ ತೆಂಬೆಲರಿಂ ಬೆಡಂಗಿನ್ವೆ
ತ್ತೆಱೆಯನ ಕಾಡಿಯೂರ್ವ್ವಯಸಿ ನೋರ್ಪ್ಪ(ೞ್ಪ) ಕಣ್ಗೆಸೆದೊಪ್ಪಿ ತೋಱುಗುಂ
 ತುಱುಗಿ ಕವಲ್ದು ಕತ್ತಲಿಪ ಚೂತಕುಜಂ[]ಳೊಳ್ ಒನ್ದಿ ಕಂಪಿನೊ
ಳ್ನೆಱೆದು ರಸಂಗಳಂ ತಳೆದ ಪಣ್ಗೊಲೆಯಂ ಗಿಳಿವಿಣ್ಡು ಚುಂಚುವಿಂ
ದಿಱೆದಡೆ ಸೋರೆ ಸೋನೆಯೊಳೆ ದಾಂಗುಡಿ ಮಿನ್ದೆಸೆದಿರ್ಪ್ಪುವೊಳ್ಪಿನಿ
ನ್ದೆಱೆ[] ಕಾಡಿಯೂರ ಲತೆ ವಳ್ಳಿಯುಮಲ್ಲಿಯ ನಾಗವಳ್ಳಿಯುಂ
ಪುರಿಕರ(ಪುಲಿಗೆರೆ) ನಗರದ ಪಶ್ಚಿಮದಲ್ಲಿ ಹೊರಗೆ ಮತ್ತು ಒಳಗಿನ ಸೌಂದರ್ಯವನ್ನು ಬಣ್ಣಿಸುವುದೇ ಒಂದು ರೀತಿಯ ಭಾಗ್ಯದಂತೆ. ನವನಂದನದಲ್ಲಿ ಜನಸಮೂಹದದಿಂದ ಆಳುತ್ತಿದ್ದ ರಾಜನು ಅಲ್ಲಿನ ಪೆರ್ಗ್ಗೆರೆಗಳಿಗೆ ಆಗಾಗ ಭೇಟಿಕೊಡುತ್ತಿದ್ದುದು, ಎರೆಯನು ಪ್ರದೇಶದಲ್ಲಿ ಅಧಿಪತ್ಯ ಹೊಂದಿದ್ದರಿಂದ ಎರೆಯನ ಕಾಡಿಯೂರು ಎಂದು ಕರೆಯುತ್ತಿದ್ದರು. ಸಂಧ್ಯಾಕಾಲದಲ್ಲಿ ಮಾವಿನ ಮರದಲ್ಲಿರುವ ತಮ್ಮ ಗೂಡುಗಳಿಗೆ ಸೇರುತ್ತಿರುವ ಹಕ್ಕಿಗಳು, ಮುಂಜಾನೆ ಮೂಡುತ್ತಿರುವ ಸೂರ್ಯನ ಕಿರಣಗಳು ಹೂವಿನ ಮೇಲೆ ಬೀಳುತ್ತಿರುವ ಸಂದರ್ಭದಲ್ಲಿ ದುಂಬಿಗಳು ಮಕರಂದವನ್ನು ಹೀರುತ್ತಿರುವ ದೃಶ್ಯ, ಗಿಳಿಯ ಸಮೂಹಗಳ ಚಿಲಿಪಿಲಿ, ಕಾಡಿಯೂರಿನ ಲತಾ ಬಳ್ಳಿಗಳ ವರ್ಣನೆ ಕಂಡು ಬರುತ್ತದೆ.
ಳ್ಪೆಱ್ [? ? ? - ?] ಎನ್ತು ನೂ(ನೊ)[-]ಡೆ ಪೊಗರ್ತ್ತೆ(ೞ್ತೆ)ಗಳುಂಬಮೊರ್ಳ್ಪು(ಳ್ಪು)
ವೆತ್ತೆಱೆಯನಳುರ್ಕ್ಕೆಯಿಂ ನೆಲಸಿದಂ ನೆಲಸಿರ್ದ್ದುದಱಿನ್ದೆ ಕಾಡಿಯೂ
ರೆಱೆಯನ ಕಾಡಿಯೂರೆನಿಸಿ ರೂಡಿಯಿನಾವಗಮಪ್ಪುಗಾಯ್ದುದ
ರಱವರೊ ಬಣ್ಣಿಸ[ಲ್] ಭುವನಸಾರಮೆನಲ್ನೆಗೞ್ದಹಾರಮ
ಎನ್ನುವುದಾಗಿ ಕಾಡಿಯೂರು ವಿಶ್ದದಲ್ಲಿಯೇ ಬೇರೆಲ್ಲೂ ಇಲ್ಲದ ದೇವಲೋಕದಂತಿದೆ ಎಂದು ವರ್ಣಿಸಿದ್ದಾನೆ.
ಕೊಂಡಲಿಗೆರೆ : ಶಾಸನದಲ್ಲಿ ಬರುವ ಇನ್ನೊಂದು ವರ್ಣನೆ. ಈ ಕೊಂಡಲಿಗೆರೆ ಎನ್ನುವುದು ಭೂಮಿಯ ಮೇಲಿರುವ "ಭೂತಳ()ಸತಿಗೊಳ್ಪನಾಳ್ದು ನವಮೇಖಳೆಯೆಂಬ ಸಮುದ್ರದನ್ತೆ ಕೊಣ್ಡಲಿಗೆಱೆಯೊಪ್ಪಿ ತೋಱುವುದೆನೆ " ಎಂದು ಶಾಸನದಲ್ಲಿ ವರ್ಣಿತವಾಗಿರುವುದರಿಂದ ಈ ಊರಿನ ಸುತ್ತಲೂ (ಸುಮಾರು ಅರ್ಧಕ್ಕಿಂತ ಹೆಚ್ಚುಭಾಗವಾದರೂ) ಈ ಕೆರೆ ಬಳಸಿರಬೇಕೆನ್ನುವ ಸಂದೇಹ ಉಂಟಾಗುತ್ತದೆ. ಹಾಗೆಯೇ ಕೊಣ್ಡಲಿ ಎಂದು ಬಂದಿರುವುದರಿಂದ ಅದೇ ಕುಂಡಲಿ ಯಾಗಿರಬಹುದು ಮುಂದೆ ಅದೇ ಕೊಂಡಲಿಗೆರೆಯಾಗಿ ಬಳಕೆಗೊಂಡಿರಬಹುದು. ಕೊಂಡಸರೋರುಹಾದರಂ (ಕಮಲದಂತೆ ತುಟಿಯಿದ್ದ)ಎನ್ನುವುದೇ ಮುಂದೆ ಕೊಂಡಲಿಗೆರೆಯನ್ನು ಸೂಚಿಸುತ್ತದೆ.
ಕುಲಗಿರಿಭಿತ್ತಿಯಿನ್ದೆ ಮಱವೊಕ್ಕಡೆ ಕೊಂಡ ಸರೋಹಾಧರಂ
ನೆಲಸಿದನಬ್ಜವಾಹನನೆನಲ್ದಿನರಾ []ನಿವಾಮಾದ ಭೂ
ತಳ()ಸತಿಗೊಳ್ಪನಾಳ್ದು ನವಮೇಖಳೆಯೆಂಬ ಸಮುದ್ರದನ್ತೆ ಕೊ
ಣ್ಡಲಿಗೆಱೆಯೊಪ್ಪಿ ತೋಱುವುದೆನೆ ಬಿಣ್ಪಿನೊಳಾವರಿಸಿರ್ದ್ದ ಪೆಂಪಿನೊಳ್ ||
ಕಾಡಿಯೂರಿನ ಜನರು : ಕಾಡಿಯೂರಿನ ಜನರು ಹೇಗಿದ್ದರು ಅನ್ನುವುದಕ್ಕೆ ಶಾಸನ ಕವಿ ಅಲ್ಲಿನ ಜನರು ಹೊಡೆದಾಡಲಿಕ್ಕೂ ಸಮರ್ಥರು ಹಾಗೂ ಕ್ಷಮಾದಾನಿಗಳೂ ಆಗಿದ್ದರು ಅನ್ನುತ್ತಾನೆ. "ಬಡಿವುದುಂ ಬಿಡುವುದುಂ ಚಾಪವಿದ್ಯೆಯೊಳ್" ಎಂದು ಯುದ್ಧದಲ್ಲಿ ಸಮರ್ಥರು ಎನ್ನುತ್ತಾನೆ. ಕೃತ್ರಿಮವಾದ ಇಂದ್ರಜಾಲದಲ್ಲಿಯೂ ಪ್ರವೀಣರು ಎನ್ನುತ್ತಾನೆ. "ಕಡಂಗುವುದುಂ * * ಇಸುವುದುಮಾಭ್ರಪಟಳದೊಳ್ಸರಳತೆಯುಂ" ಹುರಿದುಂಬಿಸಿ ಉತ್ಸಾಹ ಭರಿತರನ್ನಾಗಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇಂದ್ರನ ಪದವಿಯನ್ನೇ ಹೊಂದಿ ಕುಬೇರನ ಸಂಪತ್ತನ್ನೇ ಹೊಂದಿದ್ದರೂ ಸಹ ಸರಳತೆಯನ್ನು ಮೈಗೂಡಿಸಿಕೊಂಡಿದ್ದರಂತೆ. ಬಡತನವನ್ನೂ ಅತ್ಯಂತ ಪ್ರೀತಿಯಿಂದ ಸ್ವೀಕರಿಸುವ ಔದಾರ್ಯ ಹೊಂದಿದ್ದರು. ಮಕರಕೇತನನಂತೆ ಮರ್ಯಾದೆಯನ್ನೂ, ತಪೋವೃತ್ತಿಯಲ್ಲಿರುವವರ್ ನಿರೋಧ ಮತ್ತು ನಿಷ್ಪರಿಗ್ರಹವನ್ನೂ ಪರ್ವತದಂತಿರುವ ರಾಜ ಸಾಮಾನ್ಯರಲ್ಲಿಟ್ಟ ನಂಬುಗೆ ವಿಶ್ಪ್ವಾಸವನ್ನು ಈ ಶಾಸನಕವಿ ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾನೆ.
42. . . . . . . ."ಬಡತನಮುಮ
43. ಬಳಾಮಧ್ಯದೊಳ್ನಡುಕಮುಂ ಮಾಱಡಿಯುಂ ಚೂತಮಂಜರಿಯೊಳ್ ಕುಂದುಂ ಕಳಂಕಮುಂ ಹರಿಣಾಂಕನೊಳುರ್ಕ್ಕುಮಂ ಕಂಪ
44. ಮುಂ ಮಣ್ಡಳಾಗ್ರದೊಳ್ಸೆಱೆಯುಂ ಏಱುಂ ನೆತ್ತಂ ಆಡುವರೊಳ್ಲೋಭಮುಮೆಳೆ ಕೊನೆ[ಯೊ]ಳ್ಪಿನೊಳ್ನಿರೋಧಮುಂ ನಿಃಪರಿಗ್ರಹಮುಂ
45. ತಪೋವೃತ್ತಿಯೊಳ್ಪೆಱತೊನ್ದೆಡೆಯೊಳಿಲ್ಲೆನಿಸಿದ ತಾರ್ಕ್ಷ್ಯ ಪಕ್ಷದನ್ತೈಕ್ಯ ಪಕ್ಷ ಪಾಳನೆಯುಮಂ ಮಕರಕೇತದನ್ತೆ ಮರ್ಯ್ಯಾದೆಯುಂಮುಂ
46. ಪರ್ವ್ವತರಾಜನನ್ತೆ ಪ್ರತಿಪನ್ನತೆಯುಮನುರ್ವ್ವರೆಯನ್ತೆ ಕ್ಷಾನ್ತಿಯುಮಂ ಕವಿರಾಜರಾಜ ವಚಃಪ್ರಭಾವದನ್ತಳಂಕಾರಮುಮ
47. ನೊಳಕೊಣ್ಡ ಜನಂಗಳಿಂ ಮನಂಗೊಳಿಸುತ್ತಮಿರ್ಪ್ಪುದು. - ಸತ್ವವಿದರಾದ ಇನ್ನೂರು ಜನರಿದ್ದರು ಐವತ್ತು ಜನ ವೇದವಿದರಾದ ಬ್ರಾಹ್ಮಣರಿದ್ದರು, ಕವಿಗಳ ವಾಚನ ಗಮಕಿಗಳ ಗಾಯನ ಸದಾ ಮೊಳಗುತ್ತಿತ್ತು. ಕವಿರಾಜರಾಜರ ಮಾತುಗಳು ಆಲಂಕಾರಿಕಾವಾಗಿರುತ್ತಿದ್ದವು. ಇಂತಹ ಜನಗಳಿಂದ ಕಂಗೊಳಿಸುತ್ತಿದ್ದುದ್ಪು ಕಾಡಿಯೂರು.
ಕಾಡಿಯೂರಿನ ಇನ್ನೂರು ಜನ ಹೇಗಿದ್ದರು ?
ಕಾಡಿಯೂರಿನ ಇನ್ನೂರು ಜನರ ಬಗ್ಗೆ ಮತ್ತಷ್ಟು ಹೇಳುವ ಅವಶ್ಯವಿಲ್ಲ ಎನ್ನಿಸುತ್ತದೆ, ವೇದ ಆಗಮ ಹೋಮ, ಗ್ರಂಥಗಳಿಗೆ ಟೀಕೆಯನ್ನು ಬರೆಯಲಿಕ್ಕೆ ಸಾಮರ್ಥ್ಯ ಹೊಂದಿದ್ದರು ಎಂದು ಹೇಳಿದರೆ ಸಾಕಾಗುತ್ತದೆ ಆದರೆ ಸಾಮಾನ್ಯ ಜನರು ಹೇಗಿದ್ದರು ಅಂದರೆ ಎಲ್ಲರೂ ವಿದ್ಯಾವಂತರು. ಎಲ್ಲರೂ ಅತ್ಯುತ್ಸಾಹಿಗಳು, ಸಂಸ್ಕಾರವಂತರು, ಧೀಮಂತರು. ಗುರು ಹಿರಿಯರನ್ನು ಸಮಚಿತ್ತದಿಂದ ಆರಾಧಿಸತಕ್ಕ ಜನರು ಎನ್ನುವುದಾಗಿ ಹೇಳುತ್ತಾನೆ.
೪೭. ಕಾಡಿಯೂರನೆಯ್ದಿದಪುವೆ
48. ತ್ತಿನೂರ್ವಿಬುಧರಲ್ಲಿದರನ್ವಿತ ಸತ್ತ್ವವೀದರರಲ್ಲಿದರಭಿಧೀನರಲ್ಲಿದರುದಾರಿಗಳಲ್ಲಿದ[ರಾ]ಗಮಜ್ಞಾರಲ್ಲಿದ ರನವದ್ಯತ
49. ತ್ತ್ವವಿಧ()ರಲ್ಲಿದರುಳ್ಳಿದ[ರ್] ಎಲ್ಲಮಲ್ಲಿದರ್ನಿರವದ್ಯ ವೇದವಿದ್ಯಾ ಪರಿಣಿತರತಿವಿಷಮಶಬ್ದ ವಿದ್ಯಾಗಮ ಸತ್ಪ
50. ರಿಣತರೆನಿಸಿರ್ದಿರ್ಣ್ಣೂ(ರ್ನ್ನೂ)ರ್-ವ್ವರಚಾರಣ ವಿಪ್ರಕುಳಂ ವಿಚಿತ್ರಾಭರಣಂ

ಹಿರಿಯರು ಹೇಗಿದ್ದರು ಎನ್ನುವುದನ್ನು ....
ಕಾಡಿಯೂರ ಕಮುಳೋರ್ದ್ಭವ ವಂಶಜರೊಪ್ಪಿ ತೋಱುವರ್ಪಿರಿಯ ರ್ಮ್ಮೇ
58. ರುವಿನಿಂ ಧರಾ[? ? ?]ದಿಂ ವಾರಾಶಿಯಿಂ ಬಿಣ್ಪಿನೊಳ್ನಿರಹಂಕಾರತೆಯೊಳ್ಗಭೀರತೆಯೊಳೆನ್ದತ್ಯುತ್ತಮ ರ್ವಣ್ಣಿಸುತ್ತಿರೆ ಪೆಂಪಂ ಕ್ಷಮೆಯಂ
59. ಸ್ಥಿರತ್ವಮನುದಾತ್ತಂ ಮಾಡಿ ಸತ್ಕೀರ್ತ್ತಿಗಾಗರಮಾಗಿರ್ದ್ದ ಮಹಾಮಹ ದ್ದ್ವಿಜರೊಳೊಳ್ಪಂ ತಾಳ್ದಿದಿರ್ಣ್ಣೂರ್ವ್ವರುಂ
ಎಂದು ಹಿರಿಯರನ್ನು ಮೇರುವಿಗೆ ಹೋಲಿಸುತ್ತಾನೆ. ಹಿರಿಯರು ನಿರಹಂಕಾರಿಗಳು. ಗಂಭೀರರು
ಹೀಗೆ ಇವುಗಳನ್ನೆಲ್ಲ ವರ್ಣಿಸಿದ ಕವಿ ಕವಿರಾಜ ಎಂದು ಶಾಸನದ ಕೊನೆಯಲ್ಲಿ ಹೇಳಿಕೊಳ್ಳುತ್ತಾನೆ.
ಕವಿರಾಜರಾಜ ವಿಬುಧಪ್ರವರಂ ಶ್ರೀಕಾಡಿಯೂರನಲ್ಲಿಯೆ ಕಮಳೋದ್ಭವವಂಶ ಪ್ರೋತ್ತಮರಂ ನವೀನವರ್ಣ್ಣನೆಯಿನೆಸೆಯಲಭಿವರ್ಣ್ಣಿಸಿದಂ


No comments:

Post a Comment