Search This Blog

Friday 1 September 2017

ಪ್ರಾಗಾಸೀತ್ ಸುಚಿರಾಭಿಯೋಗ ಬಲತೋ ನೀತಂ ಪರಾಮುನ್ನತಿ – ಆಲಂಕಾರಿಕ ಶ್ರೀವಿಜಯ.

ಸುಮಾರು ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ನಿತ್ಯವರ್ಷಕಡಪ ಜಿಲ್ಲೆಯ ಜಮ್ಮಲಮಡುಗುವಿನ ದಾನವುಲಪಾಡು ಎನ್ನುವ ಊರಿನಲ್ಲಿ ಒಂದು ಕನ್ನಡದ ಶಾಸನ ಬರೆಸುತ್ತಾನೆ. ಇದು ಆಲಂಕಾರಿಕ ಮಾರ್ಗಕಾರ ಕವಿರಾಜಮಾರ್ಗದ ಕರ್ತೃ ಶ್ರೀವಿಜಯನ ಕುರಿತಾಗಿ ಉಲ್ಲೇಖವಿರುವ ಇರುವ ಮೊದಲ ಕನ್ನಡಶಾಸನ. ಈ ಶಾಸನದ ಮಹತ್ವ ಎಂದರೆ ಸುಮಾರು 8 ಬಾರಿ ಶ್ರೀವಿಜಯನನ್ನು ಉಲ್ಲೇಖಿಸಲಾಗಿದೆ. 8 ಮತ್ತು 9ನೇ ಸಾಲಿನಲ್ಲಿ “ಅನೂನ ಸುಖಾಸ್ಪದಮನೞ್ತಿಯೊಳ್ ಶ್ರೀವಿಜಯಂ”ಎಂದು ಮೊದಲ ಉಲ್ಲೇಖ. 17 – 18 ನೇ ಸಾಲಿನಲ್ಲಿ, “ಶ್ರೀಗೊಳ್ಗಣ್ಡಂ ಶ್ರೀದಣ್ಡನಾಯಕಂ ಶ್ರೀವಿಜಯಂ” ಎಂದು ಶ್ರೀ ವಿಜಯನನ್ನು ದಂಡನಾಯಕ ಎನ್ನಲಾಗಿದೆ. 22ನೇ ಸಾಲಿನಲ್ಲಿ ಶ್ರೀ ವಿಜಯನನ್ನು. “ಶ್ರೀವಿಜಯಂ ಅನುಪಮ ಕವಿ” ಎಂದು ಬಣ್ಣಿಸಲಾಗಿದೆ. ಪುನಃ 30 ಮತ್ತು 31ನೇ ಸಾಲಿನಲ್ಲಿ “ದಣ್ಡನಾಯಕಂ ಶ್ರೀ ವಿಜಯಂ” ಎನ್ನಲಾಗಿದೆ. 38ನೇ ಸಾಲಿನಿಂದ 41ರ ವರೆಗೆ “ಕರಮರಿದು ರಣದೊಳನುಪಮಕವಿಯಾ ಕುಪಿತವತಿ ಶ್ರೀ ವಿಜಯೇ” ಎಂದು ಅನುಪಮ ಕವಿಯಾಗಿ ವರ್ಣಿಸಿದ್ದಾರೆ. 59ನೇ ಸಾಲಿನಿಂದ 65ನೇ ಸಾಲಿನ ತನಕ 2 ಸಲ ಶ್ರೀವಿಜಯನನ್ನು ಸ್ಮರಿಸಲಾಗಿದೆ. “ಶ್ರೀವಿಜಯಾ ಚತುರುದಧಿ ವಲಯವಲಯಿತ ವಸುನ್ಧರಾಮಿನ್ದ್ರಶಾಸನಾತ್ಸಂರಕ್ಷನ್ ಶ್ರೀವಿಜಯ ದಣ್ಡನಾಯಕ ಜೀವಚಿರಂ” ಎಂದು ಶಾಸನ ವಾಕ್ಯವನ್ನು ಕೊನೆಗೊಳಿಸಲಾಗಿದೆ.
“ಕನ್ನಡದೊಳು ಚಂಪೂಕಾವ್ಯವ ನೆಱೆ ಪೇೞ್ದ | ಸನ್ನುತ ಸತ್ಕವೀಶ್ವರರ” ಹೆಸರನ್ನು ಹೇಳುತ್ತೇನೆ ಎಂದು ಆರಂಭಿಸಿ “ದೇವಚಂದ್ರ ಪ್ರಭರನ್ನು ಕೊಂಡಾಡಿದ | ಶ್ರೀ ವಿಜಯರ . . .” ಎನ್ನುವುದಾಗಿ ಸುಮಾರು 1508ನೇ ಇಸವಿಯಲ್ಲಿದ್ದ ಮಂಗರಸನು ತನ್ನ ನೇಮಿಜಿನೇಶ ಸಂಗತಿಯಲ್ಲಿ ಕನ್ನಡಭಾಷೆಯಲ್ಲಿ ಚಂದ್ರಪ್ರಭಪುರಾಣವನ್ನು ಚಂಪೂ ಶೈಲಿಯಲ್ಲಿ ಬರೆದ ಎಂದು ಹೇಳಿಕೊಂಡಿದ್ದಾನೆ. ಶ್ರೀ ವಿಜಯ ಜೈನ ಕವಿ. ಸುಮಾರು 16ನೇ ಶತಮಾನದ ಪಿರಿಯಾ ಪಟ್ಟಣದ ದೊಡ್ಡಯ್ಯನು ತನ್ನ ಚಂದ್ರಪ್ರಭಾಸಾಂಗತ್ಯದಲ್ಲಿ “ಚಂದ್ರಪ್ರಭ ಪುರಾಣವ ಪೇೞ್ದ ವಿಜಯ ಕವೀಂದ್ರ” ಎಂದು ಶ್ರೀ ವಿಜಯನನ್ನು ಸ್ಮರಿಸಿದ್ದಾನೆ. “ಶ್ರೀವಿಜಯ ಕವಿಮಾರ್ಗಂ | ಭಾವಿಪ ಕವಿಜನದ ಮನಕೆ ಕನ್ನಡಿಯುಂಕೆ | ಯ್ದೀವಿಗೆಯುಮಾದುವದ¾Âಂ | ಶ್ರೀ ವಿಜಯರಂ ದೇವರವರನೇ ವಣ್ಣಿಪುದೋ ||” ಎನ್ನುವುದಾಗಿ ಶ್ರೀ ವಿಜಯನನ್ನು ತನ್ನ ಪಂಚತಂತ್ರದಲ್ಲಿ ಹೊಗಳುತ್ತಾನೆ. ವೈಯ್ಯಾಕರಣಿ ಕೇಶಿರಾಜನು ಶಬ್ದಮನಿ ದರ್ಪಣದಲ್ಲಿ “ಸುಮಾರ್ಗಮಿದಱೊಳೆ ಲಕ್ಷ್ಯಂ” ಎಂದು ಹೇಳಿದ್ದಾನೆ. “ಪ್ರಾಗಾಸೀತ್ ಸುಚಿರಾಭಿಯೋಗ ಬಲತೋ ನೀತಂ ಪರಾಮುನ್ನತಿಂ ಪ್ರಾಯಃ ಶ್ರೀ ವಿಜಯೇ ತದೇತದಖಿಲಂ ತತ್ವೀರಿಕಾಯಾಂ ಸ್ಥಿತೇ ಸಂಕ್ರಾನ್ತಂ ಕಥಮನ್ಯತಾನತಿ ಚರಾದ್ವಿದ್ಯೇದೃಗೀದೃಕ್ತಪಃ ||” ಎನ್ನುವುದಾಗಿ ಶ್ರವಣಬೆಳಗೊಳದಲ್ಲಿರುವ 67ನೇ ಸಂಖ್ಯೆಯ ಶಾಸನದಲ್ಲಿ ಶ್ರೀವಿಜಯನೆನ್ನುವವನೊಬ್ಬ ಗಂಗರಾಜನಿಗೆ ಗುರುವಾಗಿಯೂ, ಹೇಮಸೇನ ಮುನಿಯ ತಪಸ್ಸಿನ ಫಲವು ಈ ಶ್ರೀವಿಜಯನಲ್ಲಿ ಸೇರಿಕೊಂಡಿತು ಎನ್ನುವುದಾಗಿಯೂ ಉಲ್ಲೇಖಿಸಿದ್ದಾರೆ.

ಶ್ರೀವಿಜಯ ಕನ್ನಡಕ್ಕೊಬ್ಬ ಮಾರ್ಗಕಾರನಾಗಿ, ಅಲಂಕಾರ ಶಾಸ್ತ್ರಕ್ಕೆ ಮಾರ್ಗದರ್ಶಕನಾಗಿದ್ದದು ನಿಜ. ಈತನು ನೃಪತುಂಗನ ಆಸ್ಥಾನದಲ್ಲಿ ಸಭಾಸದನಾಗಿದ್ದಂತೆ ನೃಪತುಂಗ ರಾಜನ ಹೆಸರಿನಲ್ಲಿ ಅಲಂಕಾರ ಗ್ರಂಥವಾದ ಕವಿರಾಜ ಮಾರ್ಗವನ್ನು ರಚಿಸಿದ್ದನೆನ್ನಬಹುದಾಗಿದೆ. ದುರ್ಗಸಿಂಗ ಮತ್ತು ಕೇಶೀರಾಜನು ಶ್ರೀವಿಜಯನನ್ನು ಹೋಗಳಿರುವುದು ಗಮನಿಸಿದರೆ ಶ್ರೀವಿಜಯ ಪ್ರೌಢ ಕವಿಯಾಗಿದ್ದ ಎನ್ನ ಬಹುದಾಗಿದೆ. ಆದರೆ ಈತ ಬರೆದ ಚಂದ್ರಪ್ರಭ ಚಂಪೂ ಈ ವರೆಗೂ ಲಭ್ಯವಾಗದೇ ಇರುವುದು ಕನ್ನಡ ಭಾಷೆಗೆ ತುಂಬಲಾರದ ನಷ್ಟ ಎನ್ನಬಹುದು. ಅಲ್ಲದೇ ಈತನು ಚಂದ್ರಪ್ರಭಚಂಪು ವಲ್ಲದೇ ಮತ್ತಿನ್ನೇದಾರೂ ಬರೆದಿದ್ದಾನೋ ಎನ್ನುವುದು ಎಲ್ಲಿಯೂ ತಿಳಿದು ಬರುವುದಿಲ್ಲ.    

No comments:

Post a Comment