Search This Blog

Tuesday 12 September 2017

ಕಿರಾತಾರ್ಜುನೀಯದ ಭಾರವಿ - ಎಲ್ಲೆಡೆಯೂ ಪ್ರಸ್ತುತ

ಭಾರವಿಯನ್ನು ಆರನೇ ಶತಮಾನಕ್ಕೆ ಎಲ್ಲಾ ವಿದ್ವಾಸರೂ ತಂದು ನಿಲ್ಲಿಸುತ್ತಾರೆ ಆದರೆ ಅದಕ್ಕೂ ಮೊದಲು ನೇಪಾಲದ ಒಂದು ಶಾಸನದಲ್ಲಿ "ಸುಸ್ವಾದುಶೀತಲ ವಿಶುದ್ಧ ಜಲಾಭಿರಾಮಾ ಕೀರ್ತಿಃ ಕೃತೇ ಯಂ ಇಹ ಭಾರವಿನಾ ನ ವಿನಾ" ಎನ್ನುತ್ತದೆ ಇಲ್ಲಿ ಭಾರವಿ ಎನ್ನುವುದು ಇದೇ ಭಾರವಿಗೋ ಅಥವಾ ಬೇರೆಯೋ ನನಗೆ ಅರ್ಥವಾಗಿಲ್ಲ. ಆದರೆ ಶಾಸನವಂತೂ ಅತ್ಯಂತ ಸುಂದರ ನುಡಿಮುತ್ತುಗಳಿಂದ ಕಂಗೊಳಿಸಿದೆ.
ಸಂಸ್ಖ್ರತ ಕವಿ ಭಾರವಿಯ . ಕಾಲ ಕ್ರಿ. . 634ಕ್ಕೂ ಮೊದಲು. ಮಹಾಕಾವ್ಯಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಮಾಡಿದ್ದ ಕಾಳಿದಾಸ ಮತ್ತು ಅಶ್ವಘೋಷರ ನಂತರ ಅಗ್ರಗಣ್ಯನೆನಿಸುವವನು ಭಾರವಿ. ಹುಟ್ಟು ಬಡತನದಿಂದ ಬಂದ ಭಾರವಿ ತನ್ನ ಬಾಲ್ಯದಿಂದ ಹಿಡಿದು ಯೌವನದ ತನಕವೂ ಅತ್ಯಂತ ಸಂಕಷ್ಟದಲ್ಲಿ ಬೆಳೆದ. ಮಡದಿಯ ಕುಹಕನದ ನುಡಿಯ ಮಧ್ಯೆಯೂ ತನ್ನ ಕಾವ್ಯಾತ್ಮಕ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಕೊನೆಗೊಮ್ಮೆ ಮಡದಿಯ ಮಾತಿನಿಂದ ಸಿಟ್ಟಿಗೆದ್ದು ಮನೆಯಿಂದ ಹೊರಟು ತನ್ನ ವಿದ್ಯಾ ಸಂಪತ್ತಿಗೆ ಎಂದಾದರೊಂದು ದಿನ ಅದೃಷ್ಟ ಲಕ್ಷ್ಮಿ ಒಲಿಯ ಬಹುದೆಂದು ಆಸೆ ಹೊಂದಿ ಅಲೆಯುತ್ತಾ ಬಳಲಿ ಕಾಡಿನ ಸಮೀಪದ ಒಂದು ಕೆರೆಯ ದಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸುಮ್ಮನೆ ಕುಳಿತಿರಲಾರದೇ ಕೆರೆಯಲ್ಲಿ ಆಗತಾನೆ ಅರಳಿದ್ದ ಕಮಲದ ಪತ್ರೆಯ ಮೇಲೆ ಒಂದು ಕವಿತೆಯನ್ನು ರಚಿಸುತ್ತಾನೆ "ಯಾರೂ ಸಹ ಪೂರ್ವಾಪರವನ್ನು ಯೋಚಿಸದೇ (ಹಿಂದೆ ಮುಂದೆ ಯೋಚಿಸದೇ) ಯಾವುದೇ ಕಾರ್ಯಕ್ಕೂ ಕೈಹಾಕಬಾರದು. ಸರಿಯಾಗಿ ತಿಳಿಯದೇ ಮಾಡಿದ ಕಾರ್ಯ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ. ಸಂಪತ್ತು ಸದ್ಗುಣಗಳನ್ನು ಮಾತ್ರವೇ ಅಪೇಕ್ಷಿಸುತ್ತದೆ. ಮತ್ತು ಪೂರ್ವ ವಿಮರ್ಶೆಮಾಡುವವನನ್ನು ಸಂಪತ್ತು ತಾನಾಗಿಯೇ ಸೇರುತ್ತದೆ" ಎಂದು ಬರೆದಿಟ್ಟನು. ಅದೇ ಸಮಯಕ್ಕೆ ಆ ದೇಶದ ರಾಜ ಕಾಡಿಗೆ ಬಂದವನು ಇವನ ಈ ಕವಿತೆಯನ್ನು ನೋಡಿ ಸಂತೋಷಗೊಂಡು. ಮಾರನೆಯ ದಿನ ಅರಮನೆಯಲ್ಲಿ ಬಂದು ಕಾಣುವಂತೆ ವಿನಂತಿಸುತ್ತಾನೆ. ಭಾರವಿ ಮಾರನೆಯ ದಿನ ಅರಮನೆಗೆ ತೆರಳಿದಾಗ ಆತನ ದರಿದ್ರ ವೇಷವನ್ನು ನೋಡಿ ದ್ವಾರದಲ್ಲಿಯೇ ತಡೆದು ಹಿಂದಕ್ಕೆ ಕಳಿಸುತ್ತಾರೆ. ಆದರೆ ಮುಂದೊಂದು ದಿನ ರಾಜ ಒಂದು ಅಚಾತುರ್ಯಕ್ಕೆ ಕೈಹಾಕಿದಾಗ ಈತನ ಈ ಕವಿತೆಯನ್ನು ನೋಡಿ ಸಮಾಧಾನದಿಂದ ಯೋಚಿಸಿದಾಗ ನಡೆಯಬಹುದಾಗಿದ್ದ ದೊಡ್ದ ಅನಾಹುತವೊಂದು ತಪ್ಪುತ್ತದೆ. ಆಗ ರಾಜ ಈ ಭಾರವಿಯನ್ನು ಕರೆಸಿ ಸನ್ಮಾನಿಸಿದ ಎಂದು ಒಂದು ಕಥೆ ಬರುತ್ತದೆ. ಆದರೆ ಭಾರವಿಯ ಬಗ್ಗೆ ಇರುವ ಈ ಕಥೆ ಎಷ್ಟು ಸತ್ಯವೋ ತಿಳಿಯುತ್ತಿಲ್ಲ. ಭಾರವಿಯ ಹುಟ್ಟು ಹೆಸರು ದಾಮೋದರ. ಈತನ ತಂದೆ ನಾರಾಯಣಸ್ವಾಮೀ. ಈತ ಚಾಲುಕ್ಯರಾಜನಾದ ವಿಷ್ಣುವರ್ಧನನ ಮಿತ್ರನಾಗಿದ್ದನು. ಎಂದು ತಿಳಿದು ಬರುತ್ತದೆ. ಭಾರವಿ ದಂಡಿ ಎನ್ನುವ ಕವಿಯ ಅಜ್ಜ. ಗಂಗ ದೊರೆ ದುರ್ವಿನೀತನಿಗಂತೂ ಈತ ಅತ್ಯಂತ ಪ್ರೀತಿಪಾತ್ರನು ಅನ್ನಿಸುತ್ತದೆ. ಕ್ರಿ. . 634 ಐಹೊಳೆ ಶಾಸನದಲ್ಲಿ "ಯೇನಾಯೋಜಿ ನವೇಶ್ಮಸ್ಥಿರಮತ್ರ್ಥವಿಧೌ ವಿವೇಕಿನಾ ಜಿನವೇಶ್ಮ ವಿಜಯತಾಂ ರವಿಕೀರ್ತ್ತಿಃ ಕವಿತಾಶ್ರಿತಕಾಳಿದಾಸ ಭಾರವಿಕೀರ್ತ್ತಿಃ" ಎಂದು ಕಾಳಿದಾಸನ ಹೆಸರಿನ ಜತೆಯಲ್ಲೇ ಭಾರವಿಯ ಹೆಸರಿನ ಉಲ್ಲೇಖವಿರುವುದರಿಂದಲೂ ಕ್ರಿ. . 673ರಲ್ಲಿ ಭಾರತದಲ್ಲಿ ಸಂಚರಿಸಿದ ಇತ್ಸಿಂಗ್ ಎಂಬ ಚೀನಿಯಾತ್ರಿಕ ಉಲ್ಲೇಖಿಸಿರುವ ಜಯಾದಿತ್ಯನ "ಕಾಶಿಕಾವೃತ್ತಿ"ಯಲ್ಲಿ "ಪ್ರಕಾಶ ಸ್ಥೇಯಾಖ್ಯಯೋಶ್ಚ" ಎಂಬ ಪಾಣಿನಿ ಸೂತ್ರದ ವೃತ್ತಿಯಲ್ಲಿ ಭಾರವಿಯ ಕಿರಾತರ್ಜುನೀಯದ "ಸಂಶಯ್ಯ ಕರ್ಣಾದಿಷು ಶಿಷ್ಠತೇಯಃ" ಎಂಬ ಪ್ರಯೋಗ ಉದಾಹೃತವಾಗಿರುವುದರಿಂದಲೂ ಭಾರವಿ ಕ್ರಿ.. ಆರನೆಯ ಶತಮಾನಕ್ಕಿಂತ ಮೊದಲಿನವನು ಎಂದು ತಿಳಿಯುತ್ತದೆ. ದಂಡಿವಿರಚಿತ ಎನ್ನಲಾದ "ಅವಂತಿ ಸುಂದರೀಕಥೆ" ಉಪಕ್ರಮಶೋಕಗಳಲ್ಲಿ ಭಾರವಿಗೆ ದಾಮೋದರನೆಂಬ ಹೆಸರು ಇತ್ತೆಂದೂ ಅವನ ಮಗನ ಪ್ರಪೌತ್ರನೇ ದಂಡಿಯೆಂದೂ ಅವನು ಕೌಶಿಕ ಗೋತ್ರದ ಬ್ರಾಹ್ಮಣನೆಂದೂ ಅವನ ಪೂರ್ವಜರು ಆರ್ಯಾವರ್ತದ ವಾಯವ್ಯದಲ್ಲಿದ್ದ ಆನಂದಪುರದಿಂದ ದಕ್ಷಿಣಾಪಥದ ಅಚಲಪುರಕ್ಕೆ ವಲಸೆ ಬಂದವರೆಂದೂ ಭಾರವಿ ಚಾಲುಕ್ಯರಾಜನಾದ ವಿಷ್ಣುವರ್ಧನನ ಗೆಳೆಯನಾಗಿದ್ದು ಕ್ರಮೇಣ ಗಂಗ ದುರ್ವಿನೀತನೆಂಬ ರಾಜನ ಆಸ್ಥಾನ ಕವಿಯಾದನೆಂದು ಹೇಳಿದೆ. ದುರ್ವಿನೀತನು ಕಿರಾತಾರ್ಜುನೀಯದ 16ನೆಯ (ಚಿತ್ರಬಂಧಗಳ) ಸರ್ಗಕ್ಕೆ ವಾಖ್ಯಾನ ಬರೆದುದಾಗಿ ಗುಮ್ಮಾರೆಡ್ಡಿಪುರದ ತಾಮ್ರಪಟ ಶಾಸನದಿಂದ ತಿಳಿದುಬರುತ್ತದೆ. ವ್ಯಾಖ್ಯಾನ ಈಗ ಉಪಲಬ್ಧವಾಗಿಲ್ಲದಿದ್ದರೂ ದುರ್ವಿನೀತನ ಕಾಲ ಸುಮಾರು 580 ಎಂದು ನಂಬಲಾಗಿದೆಯಾದ್ದರಿಂದ ಭಾರವಿ 6ನೆಯ ಶತಮಾನದ ಉತ್ತರಾರ್ಧದವನೆಂದು ಹೇಳಬಹುದಾಗಿದೆ.
ಭಾರವಿ ತನ್ನ ಕಿರಾತಾರ್ಜುನೀಯ ಕಾವ್ಯದ 18ನೆಯ ಸರ್ಗದ 5ನೆಯ ಶ್ಲೋಕದಲ್ಲಿ ಶಿವನ ಎದೆಯ ಮೇಲೆ ಅರ್ಜುನನೆಸಗಿದ ಮುಷ್ಟಿಪ್ರಹಾರವನ್ನು ಸಹ್ಯಾದ್ರಿಯ ವಿಶಾಲವಾದ ತಪ್ಪಲು ಪ್ರದೇಶದ ಮೇಲೆ ಅಪ್ಪಳಿಸಿ ಹಿಂದೂಡಲ್ಪಡುವ ಸಮುದ್ರದ ಅಲೆಗಳಿಗೆ ಹೋಲಿಸಿರುವುದರಿಂದಲೂ ಮೊದಲನೆಯ ಸರ್ಗದ ಕೊನೆಯ ಶ್ಲೋಕದಲ್ಲೂ 9ನೆಯ ಸರ್ಗದ 2 ಮತ್ತು 5ನೆಯ ಶ್ಲೋಕಗಳಲ್ಲೂ ಸೂರ್ಯಸಮುದ್ರದಲ್ಲಿ ಮುಳುಗುವುದನ್ನು ನಿರೂಪಿಸಿರುವುದರಿಂದಲೂ ಈತ ಪಶ್ಚಿಮದ ಸಮುದ್ರತೀರದಲ್ಲಿ ನೆಲಸಿದ್ದವನಾಗಿರಬೇಕೆಂದು ಊಹಿಸಬಹುದು.
ಈತನ ಬಡತನವನ್ನು "ಸಹಸಾವಿಧದೀತನ ಕ್ರಿಯಾಂ" ಎಂಬ ಕಿರಾತಾರ್ಜುನೀಯದ ಶ್ಲೋಕವೊಂದು ಈತನಿಗೆ ರಾಜಾಶ್ರಯ ದೊರಕಿಸಿಕೊಟ್ಟಿತೆಂದೂ ಮುಂತಾಗಿ ಹೇಳುವ ಕೆಲವು ದಂತಕಥೆಗಳನ್ನು ಬಿಟ್ಟರೆ ಈತನ ಜೀವನ ವೃತ್ತಾಂತದ ಬಗೆಗೆ ವಿಶೇಷ ಮಾಹಿತಿ ಉಪಲಬ್ಧವಾಗಿಲ್ಲ. ಈತನಿಗೆ ಮಹಾಶೈವ, ಮಜಹಾಪ್ರಭಾವ ಪ್ರದೀಪ್ತಭಾಸ ಎಂಬ ಹೆಸರುಗಳಿದ್ದುವಾಗಿ ಅವಂತಿಸುಂದರೀ ಕಥೆಯಲ್ಲಿ ಹೇಳಿದೆ.
ಭಾರವಿ ರಚಿತವೆಂದು ಪರಿಚಿತವಾಗಿರುವ 18 ಸರ್ಗಗಳ ಕಿರಾತಾರ್ಜುನೀಯ ಮಹಾಕಾವ್ಯ. ಮಹಾಭಾರತದ ಒಂದು ಪ್ರಸಿದ್ಧ ಆಖ್ಯಾನದ ಮೇಲೆ ರಚಿತವಾಗಿದೆ. ದ್ಯೂತದಲ್ಲಿ ಸೋತ ಯುಧಿಷ್ಠಿರ ಸಹೋದರರ ಸಮೇತ ದ್ವೈತ ವನದಲ್ಲಿರುವಾಗ ಅಲ್ಲಿಗೆ ಬಂದ ವೇದವ್ಯಾಸರ ಹೇಳಿಕೆಯಂತೆ ಅರ್ಜುನ ಈಶ್ವರನಿಂದ ನಿಂದ ಪಾಶುಪತಾಸ್ತ್ರ ಪಡೆಯಲಿಕ್ಕಾಗಿ ಇಂದ್ರಕೀಲಪರ್ವತದಲ್ಲಿ ತಪಸ್ಸುಮಾಡಲು ಹೋಗುತ್ತಾನೆ. ಅರ್ಜುನನ ಕಠಿಣ ತಪಸ್ಸನ್ನು ಭಂಗಪಡಿಸಲು ಅಪ್ಸರ ಸ್ತ್ರೀಯರೇ ಮೊದಲಾದವರು ಯತ್ನಿಸುತ್ತಾರೆ. ಆದರೆ ಅರ್ಜುನ ಮತ್ತಷ್ಟು ಏಕಾಗ್ರ ಮನಸ್ಸಿನಿಂದ ಈಶ್ವರನ ಉಪಾಸನೆಗೆ ತೊಡಗುತ್ತಾನೆ. ಈತನ ತಪೋಬಲವನ್ನು ಪರೀಕ್ಷಿಸುವುದಕ್ಕಾಗಿ ಈಶ್ವರ ಕಿರಾತ ವೇಷಧರಿಸಿ ಬರುತ್ತಾನೆ. ಒಂದು ಹಂದಿಯನ್ನು ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸುತ್ತಾನೆ ಅರ್ಜುನ ಹಂದಿಯ ಮೇಲೆ ಬಾಣ ಬಿಡುತ್ತಾನೆ. ಅರ್ಜುನನ ಬಾಣದಿಂದ ಹಂದಿ ಸಾಯುತ್ತದೆ. ಆದರೆ ಬಿಟ್ಟ ಬಾಣದ ವಿಷಯದಲ್ಲಿ ಕಿರಾತ ಹಾಗೂ ಅರ್ಜುನರಲ್ಲಿ ಜಗಳ ಆರಂಭವಾಗುತ್ತದೆ. ಒಂದು ಸಲ ಅರ್ಜುನ ವಿಜಯಿಯಾದರೆ ಮತ್ತೊಂದು ಸಲ ಕಿರಾತವಿಜಯಿ ಎನಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಇಬ್ಬರೂ ಮಲ್ಲಯುದ್ಧಕ್ಕೆ ನಿಲ್ಲುತ್ತಾರೆ. ಗಾಂಡೀವಿಯ ಬಲಕ್ಕೆ ಪ್ರಸನ್ನನಾದ ಶಂಕರ ತನ್ನ ನಿಜಸ್ವರೂಪ ತೋರಿಸಿ ಪಾಶುಪತಾಸ್ತ್ರ ಕೊಟ್ಟು ಅರ್ಜುನನ ಅಭಿಲಾಷೆಯನ್ನು ಪೂರ್ಣಗೊಳಿಸುತ್ತಾನೆ. ಅರ್ಜುನ ಪಾಶುಪತಾಸ್ತ್ರ ಪಡೆಯಲು ಹೊರಡುವ ಸನ್ನಿವೇಶ, ಅವನ ತಪಸ್ಸು ಅದರ ಸಿದ್ಧಿ ಹಿನ್ನೆಲೆಯಲ್ಲಿ ಅರ್ಜುನನಿಗೂ ಕಿರಾತಸ್ವರೂಪಿ ಶಿವನಿಗೂ ನಡೆದ ಯುದ್ಧ - ಇದು ಕಿರಾತಾರ್ಜುನೀಯದ ಕಥಾವಸ್ತು. ಮಹಾಭಾರತದ ವನಪರ್ವದಲ್ಲಿ ಬರುವ ಕಥೆಗೂ ಕಾವ್ಯದ ಕಥೆಗೂ ವಿಶೇಷ ವ್ಯತ್ಯಾಸವಿಲ್ಲ. ಲಕ್ಷಣಬದ್ಧವಾಗಿರುವ ಕಾವ್ಯವನ್ನು ಪರಿಶೀಲಿಸಿದವರಿಗೆ ಲಾಕ್ಷಣಿಕರು ಇದನ್ನೇ ಆದರ್ಶವಾಗಿಟ್ಟುಕೊಂಡು ಮಹಾಕಾವ್ಯಲಕ್ಷಣಗಳನ್ನು ರಚಿಸಿರಬೇಕೆಂದು ತೋರುತ್ತದೆ. ಕಾವ್ಯದ 18 ಸರ್ಗಗಳಲ್ಲಿ ಅಡಕವಾಗಿರುವ 18 ವರ್ಣನೆಗಳೂ ಮನೋಹರವಾಗಿವೆ. ಪಾತ್ರ ಚಿತ್ರಣದಲ್ಲೂ ವಿಷಯನಿರೂಪಣೆಯಲ್ಲೂ ಭಾರವಿಯ ಕೌಶಲ ಅಪ್ರತಿಮ; ಪ್ರತಿಭೆ ಉಜ್ವಲ. ಉಪಮಾನಗಳಿಗೆ ಕಾಳಿದಾಸ ಪ್ರಸಿದ್ಧನಾಗಿರುವಂತೆ ಅರ್ಥಗೌರವಕ್ಕೆ ಭಾರವಿ ಹೆಸರಾಗಿದ್ದಾನೆ. ಕಾಳಿದಾಸನ ಶೈಲಿ ಲಲಿತವೂ ಸುಕುಮಾರವೂ ಆಗಿದ್ದರೆ ಭಾರವಿಯದು ಗಂಭೀರ ಮತ್ತು ಪ್ರೌಢ. ಪ್ರಕೃತಿಮಧುರಾ ಭಾರವಿಗಿರಃ ಎಂಬುದು ಸದುಕ್ತಿಕರ್ಣಾಮೃತದ ಒಂದು ಶ್ಲೋಕದಲ್ಲಿ ಬರುವ ಭಾರವಿ ಪ್ರಶಸ್ತಿ.
ಬೇರೆ ಕಾವ್ಯಾದಿಗಳನ್ನು ಭಾರವಿ ರಚಿಸಲೇ ಇಲ್ಲವೇ ಅಥವಾ ರಚಿಸಿದ್ದು ಈಗ ಅವು ಲುಪ್ತವಾಗಿಬಿಟ್ಟಿವೆಯೇ ಎಂಬುದನ್ನು ತಿಳಿಯಲು ಆಧಾರಗಳಾವುವೂ ದೊರತಿಲ್ಲ. ಕಾಳಿದಾಸನ ಕಾವ್ಯಗಳಿಗೆ ಸಂಜೀವಿನಿ ವ್ಯಾಖ್ಯಾನ ಬರೆದಿರುವ ಮಲ್ಲಿನಾಥನೇ ಕಿರಾತಾರ್ಜುನೀತಕ್ಕೆ "ಘಂಟಾಪಥವ್ಯಾಖ್ಯಾನ" ಬರೆದಿದ್ದಾನೆ. ಭಾರವಿಯಯ ಕಾವ್ಯ ನಾರಿಕೇಳಪಾಕದಂತೆ ಎಂಬುದೇ ಮಲ್ಲಿನಾಥನ ಅಭಿಪ್ರಾಯ. ಕಾಳಿದಾಸ ಅಶ್ವಘೋಷದಲ್ಲಿ ಕಾಣಸಿಗುವ ಚಿತ್ರಬಂಧಾದಿ ಶಬ್ಧ ಚಮತ್ಕಾರಗಳು ಭಾರವಿಯ ಕಾವ್ಯದಲ್ಲಿವೆ. ಕಿರಾತಾರ್ಜುನೀಯದ 15ನೆಯ ಸರ್ಗದ 22ನೆಯ ಶ್ಲೋಕವನ್ನು ಕೊನೆಯಿಂದ ಹಿಂದಕ್ಕೆ ಓದಿದರೆ ಅದೇ 23ನೆಯ ಶ್ಲೋಕ. ಸಂದರ್ಭಾನುಸಾರ ಅರ್ಥವೂ ಸರಿಹೋಗುತ್ತದೆ. ಒಂದು ಅಥವಾ ಎರಡೇ ಅಕ್ಷರಗಳನ್ನು ಬಳಸಿಕೊಂದು ರಚಿತವಾದ ಶ್ಲೋಕಗಳು 16 ಬೇರೆ ಬೇರೆ ವೃತ್ತಗಳಲ್ಲಿವೆ. ಇವೆಲ್ಲವನ್ನೂ ಗಮನಿಸಿದರೆ ಭಾರವಿ ಕಾವ್ಯರಚನೆ ಮಾಡುವ ವೇಳೆಗೆ ಪಾಂಡಿತ್ಯಪ್ರದರ್ಶನ ಕವಿಗೆ ಅವಶ್ಯಗುಣವೆಂಬ ಭಾವನೆ ಬೇರು ಬಿಟ್ಟಿತ್ತೆಂದು ಕಾಣುತ್ತದೆ.
ಕಿರಾತಾರ್ಜುನೀಯದ ಆದಿಯಲ್ಲೆ ಶ್ರೀ ಶಬ್ದವೂ ಅದರ ಪ್ರತಿಯೊಂದು ಸರ್ಗದ ಕೊನೆಯ ಶ್ಲೋಕದಲ್ಲಿ ಲಕ್ಷ್ಮಿಶಬ್ದವೂ ಇರುವುದರಿಂದ ಅದು ಲಕ್ಷ್ಮೀಪದಲಾಂಛನವುಳ್ಳ ಕಾವ್ಯವೆಂದು ಹೆಸರುಗೊಂಡಿತು. ಭಾರವಿಯ ಅನಂತರದವನಾದ ಮಾಘಕವಿ ರಚಿಸಿರುವ ಶಿಶುಪಾಲವಧ ಮಹಾಕಾವ್ಯ ಅನೇಕ ರೀತಿಯಲ್ಲಿ ಕಿರಾತಾರ್ಜುನೀಯದ ಅನುಕರಣೆ ಎಂದು ಹೇಳಬಹುದು.
ಭಾರವಿಯ ಬಗ್ಗೆ ಹೀಗೆಯೂ ಒಂದು ಕಥೆ ಇದೆ.

ಒಮ್ಮೆ ತನ್ನ ಸಮಕಾಲೀನ ರಾಜಕುಮಾರನಾದ ವಿಷ್ಣುವರ್ಧನನ ಜೊತೆ ಬೇಟೆಗಾಗಿ ದಟ್ಟ ಅರಣ್ಯವನ್ನು ಹೊಕ್ಕಾಗ ಭಾರವಿ ಮಾಂಸವನ್ನು ಸೇವಿಸಿದ ಕಾರಣಕ್ಕಾಗಿ ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆಗೆ ಹೋದನು. ಆಗ ಅವನ ಕಾವ್ಯವನ್ನು ಕೇಳಿದ ಕಾಂಚೀನೃಪಾಲ ಸಿಂಹವಿಷ್ಣು ಅವನನ್ನು ತನ್ನ ರಾಜಧಾನಿಗೆ ಕರೆದೊಯ್ದನು. ಸಿಂಹವಿಷ್ಣುವಿನ ಮಗನಾದ ಮಹೇಂದ್ರವಿಕ್ರಮನೊಡನೆ ಭಾರವಿ ಅಲ್ಲಿಯೇ ಆನಂದದಿಂದ ವಾಸಿಸತೊಡಗಿದನು. ಅವನ ಮಗ ಮನೋರಥ ಹಾಗೂ ಮೊಮ್ಮಗ ದಂಡೀ. ಕಥೆ ಅವಂತಿಸುಂದರೀ ಕಥೆಯಲ್ಲಿ ನಿರೂಪಿತವಾಗಿದೆ. ಭಾರವಿಯ ಮತ್ತೊಂದು ಹೆಸರು ದಾಮೋದರೆಂಬುದು ಕೆಲವರ ಅಭಿಪ್ರಾಯವಾದರೆ, ಮತ್ತೆ ಕೆಲವರು ದಾಮೋದರ-ಭಾರವಿ ಬೇರೆಬೇರೆ ಎನ್ನುತ್ತಾರೆ.

No comments:

Post a Comment