Search This Blog

Tuesday, 27 September 2016

ಕೀಳ್ಗುಂಟೆ ಎನ್ನುವ ಅನಿಷ್ಟ ಪದ್ಧತಿ

ಸುಮಾರು ೯ನೇ ಶತಮಾನದ ಆರಂಭದಲ್ಲಿ ನಮಗೆ ಕಾಣಸಿಗುವ ಶಾಸನಗಳಲ್ಲಿ ಕೀಳ್ಗುಂಟೆ ಅಥವಾ ಕೀಳ್ಗಂಚಿ ಪ್ರಮುಖವಾದದ್ದು. ಅತ್ಯಂತ ಕ್ರೂರವೂ ಅಸಹ್ಯವೂ ಆದ ಈ ಸಂಪ್ರದಾಯವನ್ನು ಅದು ಹೇಗೆ ಸತಿ ಸಹಗಮನ ಹೊಡೆದು ಹಾಕಿತೋ ತಿಳಿಯುತ್ತಿಲ್ಲ. ಸತಿ ಪದ್ಧತಿಯಲ್ಲಿ ತನ್ನ ಗಂಡನ ಚಿತೆಗೆ ಸತಿ ಹಾರಿ ಜೀವ ತೆಗೆದುಕೊಳ್ಳುತ್ತಾಳೆ. ಆದರೆ ಇಲ್ಲಿ ಯಾವುದೋ ಒಬ್ಬ ರಾಜ ಮರಣ ಹೊಡಿದಾಗ ಅತನ ಶವದ ಕೆಳಗೆ ಜೀವಂತ ವ್ಯಕ್ತಿಯೊಬ್ಬನನ್ನು ಮಲಗಿಸಿ ಅವನ ಆತ್ಮಾರ್ಪಣೆ ಮಾಡಿಸಲಾಗುತ್ತದೆ. ಈ ಅನಿಷ್ಟ ಪದ್ಧತಿಯ ಬಗ್ಗೆ ಒಂದು ಮಾತನ್ನೂ ಹೇಳಲಾಗುತ್ತಿಲ್ಲ.


Courtessy . E I 

Saturday, 24 September 2016

ಕ್ಷಾತ್ರವೃತ್ತಿ ಲತಾಮೂಲ ಗುಣಾಂಬು .......

ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರ ಶಾಸನದಲ್ಲಿನ ಒಂದು ಸಾಲು ಇದರಲ್ಲಿ ಮಯೂರ ವರ್ಮನನ್ನು ವೇದ ವೇದಾಂಗ ವಿದ್ಯಾಪಾರಗ ಎಂದಿದ್ದಲ್ಲದೇ ಕ್ಷತ್ರಿಯ ಬಲವನ್ನೂ ಹೇಳಲಾಗಿದೆ. ಕದಂಬರ ರವಿವರ್ಮನ ಈ ಶಾಸನ ೫ ೬ನೇ ಶತಮಾನದ್ದು ಇದರ ಅಕ್ಷರವಂತೂ ಕುಬ್ಜನ ತಾಳಗುಂದದ ಸ್ತಂಬಶಾಸನದಷ್ಟೇ ಸುಂದರ ಮತ್ತು ನೇರವಾಗಿದೆ. ಶಾಸನ ಕವಿ ಬೇರೆಯಾಗಿದ್ದರೂ ಕಂಡರಣೆಕಾರ ಒಂದರಂತೇ ಇನ್ನೊಂದನ್ನು ಅನುಸರಿಸುವುದು ಸಾಮಾನ್ಯ. ಈ ಚಿತ್ರವನ್ನು ಡಾ. ಬಾ ರಾ ಗೋಪಾಲ್ ರವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

Courtesy. Dr. B R Gopal

Thursday, 22 September 2016

ಸಾಧುಪ್ರಿಯನ್ - ಅಸಾಧು ಜನ ವರ್ಜಿತನ್ - ಉಡುಪಿ ಜಿಲ್ಲೆಯ ಉದ್ಯಾವರ

ಸುಮಾರು ೮ ನೇ ಶತಮಾನದಲ್ಲಿ ಖಂಡರಿಸಲಾದ ಕಪ್ಪೆ ಅರಭಟ್ಟನ ಶಾಸನ, ಶಾಸನ ಇತಿಹಾಸದಲ್ಲಿಯೆ ದೊಡ್ದ ಮೈಲಿಗಲ್ಲನ್ನು ಸ್ಥಾಪಿಸಿತು. ಸಾಹಿತ್ಯದ ಅನೇಕ ಅಂಶಗಳನ್ನು ತನ್ನಲ್ಲಿ ಹೊದ್ದು ಮೈದಳೆದ ಈ ಶಾಸನ ಯಾರ ಕುರಿತಾಗಿ ಬರೆಯಲಾಗಿದೆ. ಮತ್ತು ಇದರಲ್ಲಿ ರೋದನ ಮತ್ತು ಕಿಚ್ಚು ಯಾಕಾಗಿ ಅನ್ನುವುದೂ ಸಹ ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅನೇಕರು ಅನೇಕ ವಿಧವಾಗಿ ವಿಶ್ಲೇಶಿಸಿದರೂ ಸಹ ಒಮ್ಮತದ ಅಭಿಪ್ರಾಯ ಬಹಳ ಕಡಿಮೆಯೇ ಸರಿ. ಒಂದು ಕಡೆ ತಾನು ಒಳ್ಳೆಯ ಜನರಿಗೆ ಒಳ್ಳೆಯವನಾಗಿಯೂ ದುರ್ಜನರಿಗೆ ಕೆಟ್ಟವನಾಗಿದ್ದೇನೆ ಅಂತ ಹೇಳಿಕೊಳ್ಳುತ್ತಾನೆ. ಇನ್ನೊಂದೆಡೆ ದಿನವೂ ಅವಮಾನದಿಂದ ಬದುಕುವುದಕ್ಕಿಂತ ಸಾಯುವುದೇ ಲೇಸು ಅನ್ನುತ್ತಾನೆ. ಇನ್ನೊಂದೆಡೆ ನಾನು ಬಲಿಷ್ಟನಾದ ಕಲಿ ಶೂರ ಎನ್ನುತ್ತಾನೆ. ಹೀಗೆ ವರ್ಣಿಸಿಕೊಂಡಿದ್ದರೂ ಇಡೀ ಶಾಸನ ಕನ್ನಡ ಭಾಷೆಗೆ ತ್ರಿಪದಿ ಛಂದಸ್ಸಿನ ರೇಖೆ ಹಾಕಿ ಕೊಟ್ಟದ್ದಂತೂ ನಿಜ.

ಇದು ಉಡುಪಿ ಜಿಲ್ಲೆಯ ಉದ್ಯಾವರದ ಶಾಸನ ಅಳುಪ ರಾಜ ವಂಶಸ್ಥನಾದ ಪಾಂಡ್ಯನ ಮಗ ದೇವು ಎನ್ನುವವನ ಕಾಲದ್ದು. ಬಾದಾಮಿ ಚಾಲುಕ್ಯರ ಎರಡನೇ ಪೊಲೆಕೇಶಿಯ ಕಪ್ಪೆ ಅರಭಟ್ಟನ ಶಾಸನದ ಶಬ್ದಮಾಧುರ್ಯವನ್ನು ಹೊತ್ತಿರುವ ಶಾಸನ . ಹೇಳಿರುವ ವಿಧಾನ ಬೇರೆ ಆದರೂ ಅರ್ಥ ಮಾತ್ರ ಅದನ್ನೇ ಧ್ವನಿಸುತ್ತದೆ. ಕಪ್ಪೆ ಅರಭಟ್ಟನ ಶಾಸನ ಕಡೆದ ಶಿಲ್ಪಿಯೋ ಅಥವಾ ಆ ಶಾಸನದ ಶಾಸನ ಪಾಠವನ್ನು ರಚಿಸಿದ ಕವಿಯ ಅನುಕರಣೆಯನ್ನು ಮಾಡಲಿಕ್ಕಾಗಿ ಅದನ್ನೇ ಧ್ವನಿಸುವ ನುಡಿಗಟ್ಟನ್ನು ಹಾಕಲಾಗಿರ ಬಹುದು. ಅದೇನೇ ಇರಲಿ ಕರಾವಳಿಯ ಜನರಿಗೆ ಸಾಹಿತ್ಯದ ರುಚಿಯನ್ನಂತೂ ಉಣ ಬಡಿಸಿದೆ.

Wednesday, 21 September 2016

ಸ್ವರ್ಣವಲ್ಲಿಯ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು - ಕಡತೋಕೆಯ ಅಗ್ನಿಹೋತ್ರೀ ಕೇಶವ ಭಟ್ಟರು - ಸವಾಯಿ ರಾಮಚಂದ್ರ ನಾಯಕ

೧೬೭೪ ನೇ ಇಸವಿಯಲ್ಲಿ ಸೋದೆಯ ಸವಾಯಿ ರಾಮಚಂದ್ರ ನಾಯಕರು ಮುಖ್ಯಮಂತ್ರಿಗಳಾಗಿದ್ದರು, ಆಗ ಸೋದೆಯ ಹೊನ್ನಹಳ್ಳಿಯ(ಈಗಿನ ಸ್ವರ್ಣವಲ್ಲಿಯ)_ ಮಠದಲ್ಲಿ ಸರ್ವಜ್ಞ ಸರಸ್ವತಿ ಸ್ವಾಮೀಜಿಯವರು ಕೊಡಿಸಿದ ಅಪ್ಪಣೆಯಂತೆ ರಾಜರ ಅಭ್ಯುದಯಕ್ಕಾಗಿ ಕಾಶಿಯಿಂದ ಶ್ರೌತಿ ವಿಶ್ವಪತಿ ಭಟ್ಟರನ್ನು ಕರೆಸಿ ಕಡತೋಕೆಯ ಬೆಳ್ಳಿ ಶಂಭುದೇವರು ಭಟ್ಟರ ಮಗ ಅಗ್ನಿಹೋತ್ರಿ ಕೇಶವ ಭಟ್ಟರಿಂದ ಅರಸರ ಸಮ್ಮುಖದಲ್ಲಿ ಯಜ್ಞವನ್ನು ಮಾಡಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನದ ವಿಶೇಷವೆಂದರೆ ಇದನ್ನು ಅಗ್ನಿಹೋತ್ರದ ಮಂಟಪದಲ್ಲಿಯೇ ಬರೆಯಲಾಗಿದ್ದು ಈ ಶಾಸನದ ಮಧ್ಯಭಾಗದಲ್ಲಿ ಅದನ್ನು ಆಹವನೀಯ, ಗಾರ್ಹಪತ್ಯ ಮತ್ತು ದಕ್ಷಿಣಾಗ್ನಿಯನ್ನು ಖಂಡರಿಸಲಾಗಿದೆ. ಅಕ್ಷರ ಅಚ್ಚ ಕನ್ನಡವಾಗಿದ್ದರೂ ಕೆಲವೊಂದು ಅಕ್ಷರವನ್ನು ಗೊಂದಲಕಾರಿಯಾಗಿ ಬರೆದಿದ್ದಾರೆ . ಕೆಲವು ಹತ್ತನೇ ಶತಮಾನದ ಅಕ್ಷರಗಳನ್ನು ಹೋಲುತ್ತಿದೆ. ಇದು ಈಗ ಸ್ವರ್ಣವಲ್ಲಿ ಮಠದಲ್ಲಿರುವ ಶಾಸನ. ಹೊನ್ನಹಳ್ಳಿಗೂ ಕಡತೋಕೆಗೂ ಕಾಲಕಾಲಾಂತರದ ಸಂಬಂಧ ಇರುವುದು ತಿಳಿದು ಬರುತ್ತದೆ.















 

Monday, 19 September 2016

ಸಂಗೀತಪುರದ - ಭಟ್ಟಾಕಲಂಕ

೧೬೦೪ನೇ ಇಸವಿಯಲ್ಲಿ ಕೊಂಡಕುಂದಾನ್ವಯ ವಂಶದ ಚಾರು ಕೀರ್ತಿ ಪಂಡಿತನ ಶಿಷ್ಯನೇ ಸಂಗೀತಪುರದ ಅಕಲಂಕದೇವ. ಎರಡನೇ ನಾಗವರ್ಮ ಮತ್ತು ಕೇಶಿರಾಜನ ನಂತರದ ಕನ್ನಡ ವಯ್ಯಾಕರಣಿಕರಲ್ಲಿ ಭಟ್ಟಾಕಲಂಕ ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾನೆ. ಕನ್ನಡದ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಭಟ್ಟಾ ಕಲಂಕದೇವನು ಭಾಷೆಯೊಂದು ಜಾಗತಿಕ ಮಟ್ಟದಲ್ಲಿ ಪ್ರಸಾರಗೊಳ್ಳಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಎನ್ನುವುದು ಅವನ ಕೆಲಸದಿಂದ ತಿಳಿದು ಬರುತ್ತದೆ. ಈಗಿನ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಜೈನ ಕೇಂದ್ರವಾಗಿದ್ದು ಅಲ್ಲಿ ಭಟ್ಟಾಕಲಂಕ ಇದ್ದಿರುವುದರಿಂದ ಭಟ್ಕಳ ಎನ್ನುವ ಹೆಸರು ಬಂತು ಎನ್ನುವುದು ರೂಢಿ ಒಬ್ಬ ಕವಿಯ ಹೆಸರನ್ನೇ ಒಂದು ಊರು ಹೊಂದಿತು ಎನ್ನುವುದಾದರೆ ಅದಕ್ಕಿಂತ ದೊಡ್ದ ಭಾಗ್ಯ ಸಾಹಿತ್ಯ ಲೋಕಕ್ಕೆ ಬೇರೆ ಇರಲಾರದು. ಇದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾದಲ್ಲಿರುವ ಶಾಸನವೊಂದರಿಂದ ತೆಗೆದುಕೊಂಡಿದ್ದೇನೆ.


Saturday, 17 September 2016

ಸಿಂಹ ಕ್ಕೆ ಕನ್ನಡದಲ್ಲಿ ಸಿಂಘವೇ ಪರ್ಯಾಯವೇ ......

"ಸಿಂಹ" ಈ ಪದಕ್ಕೆ ಕನ್ನಡದಲ್ಲಿ ಪ್ರತ್ಯೇಕವಾದ ಬೇರೊಂದು ಪದ ಸಿಗುವುದಿಲ್ಲ. ಕ್ರಿ ಶ ೭ ನೇ ಶತಮಾನದಲ್ಲಿ ಬಾದಾಮಿಯ ಗುಹೆಯಲ್ಲಿ ಸಿಂಗಮಂಚಿ ಪದ ಬಳಕೆಯಾಗಿದೆ. ಈ ಸಿಂಗ ಎನ್ನುವುದು ಅಲ್ಲಿ ಸಿಂಹ ಪದಕ್ಕೆ ಬಂದಿರುವುದು. ಶಿಖಾರಿಪುರ ತಾಲೂಕಿನ ಕಲ್ಲೇಶ್ವರ ದೇವಾಲಯದ ಕ್ರಿ ಶ ಸುಮಾರು ೭೦೦ ರ ವಿಜಯಾದಿತ್ಯ ಸತ್ಯಾಶ್ರಯನ ಶಾಸನ ಒಂದರಲ್ಲಿ ಅರ್ಕ್ಕೇಸರಿ ಪದ ಬಂದಿದೆ. ತುಮಕೂರಿನ ಹಿರೇಗುಡಕಲ್ ಶಾಸನದಲ್ಲಿ ಪಂಡಿತರ ಸಿಂಹ ಎನ್ನಲಾಗಿದೆ ಹಿರೇಕೆರೂರಿನ ಸಿಡೇನೂರಿನಲ್ಲಿ ಸಿಂಗವಡ್ಡಗಿ ಬಳಕೆಯಾಗಿದೆ. ಉದ್ಯಾವರದ ಶಾಸನದಲ್ಲಿ ಕಾಳೆಗ ಕೇಸರಿ ಎಂದು ಹೇಳಿದ್ದಾರೆ. ಮಾರ ಸಿಂಗ ಮತ್ತು ಸಿಂಗಪ್ಪೊತ್ತಗಳೂ ಬಂದಿವೆ ಹಾಗೆಯೇ ಬಾದಾಮಿಯ ತಟ್ಟುಕೋಟೆಯ ಕಪ್ಪೆ ಅರಭಟ್ಟನ ಶಾಸನದಲ್ಲಿಯೂ ಸಿಂಘಮನ್ ಎಂದು ಬಳಸಿಕೊಂಡಿದ್ದಾರೆ ಸಂಸ್ಕೃತದಲ್ಲಿ ಬಳಕೆಯಾದ ಹೆಚ್ಚಿನ ಎಲ್ಲಾ ಪ್ರಾಣಿಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಪದ ಬಳಕೆಯಲ್ಲಿದ್ದರೂ ಸಿಂಹ ಮಾತ್ರ ಸಂಸ್ಕೃತ ಬಿಟ್ಟರೆ ಪ್ರಾಕೃತದ ಪದ ಹಾಗೆ ಉಳಿಸಿಕೊಂಡಿದೆ. ಭೌಗೋಳಿಕವಾಗಿ ಗಮನಿಸಿದರೂ ಕನ್ನಡನಾಡಿನಲ್ಲಿ ಎಲ್ಲಿಯೂ ಸಿಂಹಗಳಿದ್ದಿರಲಿಕ್ಕಿಲ್ಲ. ಕನ್ನಡನಾಡಿನಲ್ಲಿ ಯೇ ಹುಟ್ಟಿ ಅಸ್ತಿತ್ವದಲ್ಲಿದ ಪ್ರಾಣಿಗಳಿಗೆ ಹೆಸರು ಕನ್ನಡ ಭಾಶೆಯಲ್ಲಿಯೇ ಉಳಿಸಿಕೊಂಡಿವೆ.  

Wednesday, 14 September 2016

ಚತುರ್ಭುಜ ಚತುರಾರ್ಣವ ವಿಪುಲ ಸಲಿಲ

ಶಾಸನ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ವಿಷ್ಣುವನ್ನು ಕುರಿತಾಗಿ ಚತುರ್ಭುಜ ಮತ್ತು ಗರುಡ ಕೇತು ಎನ್ನುವುದಾಗಿ ವರ್ಣಿಸಿದ್ದಲ್ಲದೇ ಜನಾರ್ದನ ಪದವನ್ನು ಬಳಕೆ ಮಾಡಲಾದ ಈ ಶಾಸನವನ್ನು ಬುಧಗುಪ್ತನು ಏರಣ್ ನಲ್ಲಿನ ಕಲ್ಲಿನ ಸ್ತಂಬ ಶಾಸನದಲ್ಲಿ ಬರೆಸಿದ್ದಾನೆ. ಕನ್ನಡದಲ್ಲಂತೂ ಹಲ್ಮಿಡಿ ಶಾಸನದಲ್ಲಿ ಮೊತ್ತ ಮೊದಲಿಗೆ ಮಂಗಲಾಚರಣೆಯಲ್ಲಿ ವಿಷ್ಣುವಿನ ಬಗ್ಗೆ ಬಂದಿದ್ದರೆ ಹೆಚ್ಚಿನ ಕಡೆ ಪುಣ್ಯ ಕ್ಷೇತ್ರಗಳನ್ನು ಕುರುಕ್ಷೇತ್ರ, ವಾರಣಾಸಿ ಎಂದು ಬಳಸಿಕೊಂಡಿದ್ದಾರೆ.

 

Monday, 12 September 2016

ವೈಜಯಂತೀಪುರದ ಮಯೂರ ವರ್ಮ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ

ಕನ್ನಡದ ನೆಲದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ಎನ್ನುವುದನ್ನು ಕ್ರಿಯಾತ್ಮಕವಾಗಿ ತೋರಿಸಿದ ಮಹಾ ಮೇಧಾವಿ ಕದಂಬವಂಶದ ಮಯೂರ ವರ್ಮ. ಈತನ ಬಗ್ಗೆ ಈತನ ಹೆಸರನ್ನು ಅಧಿಕೃತವಾಗಿ ಸೂಚಿಸುವಂತಹ ಶಾಸನವೇ ಇಲ್ಲ ಎನ್ನಬಹುದು. ಆದರೆ ಇದಕ್ಕೆ ಅಪವಾದ ಎನ್ನುವಂತೆ ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಈ ಶಾಸನ ಮಯೂರವರ್ಮನು ಕೆರೆಯನ್ನು ಕಟ್ಟಿಸಿದ ಬಗೆಗಿನ ಉಲ್ಲೇಖವಿದೆ. ಸಂಸ್ಕೃತ ಪ್ರಬುದ್ಧ ವಿದ್ವಾಂಸನಾದ ಮಯೂರವರ್ಮನ ತರುವಾಯ ಬಂದ ಅರಸರೆಲ್ಲಾ ಶಾಸನ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡದ್ದು ಕಾಣಬರುತ್ತದೆ. ಕದಂಬರ ಕುರಿತಾಗಿ ಅನೇಕ ವಿಸ್ಮಯಕಾರ್ರಿ ವಿಷಯಗಳು ಅನೇಕ ವಿಧದಲ್ಲಿ ಸಿಗುತ್ತವೆ. ಕ್ರಿ. ಶ ೩ನೇ ಶತಮಾನದ ಸುಮಾರಿನ ಸಂಸ್ಕೃತದ ಈ ಶಾಸನ ಬ್ರಾಹ್ಮೀ ಲಿಪಿಯಲ್ಲಿದೆ.

Saturday, 10 September 2016

ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ - ಖಜುರಾಹೋ

ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಆಳಿದ ಚಂಡೇಲ ವಂಶದ ಅರಸರು ಖಜುರಾಹೋ ವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿ೦ದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬ೦ದಿತೆ೦ದು ಹೇಳಲಾಗುತ್ತದೆ.  ಯಶೋವರ್ಮನ ಕಾಲದಲ್ಲಿದ್ದ ಮಾಧವನೆನ್ನುವ ಸಂಸ್ಕೃತ ಕವಿಗೆ ದೆದ್ದನೆನ್ನುವವನು ಪ್ರಶಸ್ತಿಯನ್ನು ನೀಡಿದ ಕುರಿತು ಈ ದೇವಾಲಯದಲ್ಲಿರುವ ಶಾಸನ ಒಂದರಲ್ಲಿ ಹೇಳಲಾಗಿದೆ. ಅತ್ಯಂತ ಸುಂದರವಾದ ಪದಗಳನ್ನು ಪೋಣಿಸಿ ರಚಿಸಿದ ಈ ಶಾಸನ ಸಾಹಿತ್ಯಾಸಕ್ತರಿಗೆ ಅತ್ಯಂತ ಮಹತ್ವದ್ದು, ಇಲ್ಲಿ ಇನ್ನೊಂದು ಮುಖ್ಯ ವಿಶೇಷವೆಂದರೆ ಸಂಸ್ಕೃತ ಭಾಷೆಯನ್ನು ಕುರಿತು ಕವಿ ಜಯಗಣ ನ ಮಗನನ್ನು ಸಂಸ್ಕೃತಭಾಷಾ ವಿದುಷ ಎಂದು ಬಣ್ಣಿಸಿದ್ದಾರೆ. ಒಂದು ಭಾಷೆಯ ಕುರಿತು ಅಭಿಮಾನದಿಂದ ಹೇಳಿರುವುದು ಶಾಸನ ಇತಿಹಾಸದಲ್ಲಿ ತುಂಬಾ ವಿರಳ. ಖಂಡರಿಸಿರುವ ಅಕ್ಷರವನ್ನು ಕುರಿತಾಗಿಯೂ ಸಹ ರುಚಿರಾಕ್ಷರ ಎಂದು ಹೊಗಳಿಕೊಂಡದ್ದು ನಾಗರಿಲಿಪಿಯ ಬಗ್ಗೆ ಅವರಿಗಿದ್ದ ಅಭಿಮಾನವನ್ನು ತೋರಿಸುತ್ತದೆ. ಇಲ್ಲಿ ರುಚಿರಾಕ್ಷರ ಎನ್ನುವುದು ಪ್ರಶಸ್ತಿಯನ್ನು ಕುರಿತಾಗಿಯೂ ಹೇಳಿರುವ ಸಾಧ್ಯತೆ ಇದೆ.ಭಾಷೆ ಮತ್ತು ಲಿಪಿ ಯ ಜೊತೆಗೆ ಗೌರವಕ್ಕೆ ಪಾತ್ರನಾದ ಮಾಧವನು ಬೇರೆ ಬೇರೆ ಕೃತಿಗಳನ್ನು ಬರೆದವನು.
ಆದರೆ ಇದಕ್ಕೂ ಮೊದಲು ಸುಮಾರು ಕ್ರಿ ಶ ೬೯೯ರಲ್ಲಿ ಬಾದಾಮಿಯಲ್ಲಿ ವಿಜಯಾದಿತ್ಯ ಎನ್ನುವ ಚಾಲುಕ್ಯ ವಂಶದ ರಾಜನೊಬ್ಬ ಒಂದು ಶಾಸನ ಬರೆಸಿದಾಗ ಆ ಶಾಸನದಲ್ಲಿನ ೯ ಸಾಲುಗಳನ್ನು ಸಂಸ್ಕೃತ ಭಾಷೆಯಲ್ಲಿಯು ೧೦ನೇ ಸಾಲಿನಿಂದ ಕನ್ನಡದಲ್ಲಿ ಬರೆಸಿದ. ಆಗ ೧೦ನೇ ಸಾಲಿನಲ್ಲಿ ಅತಃ ಪರಂ ವರ್ಣಾನ್ಯೇತಾನಿ ಪ್ರಾಕೃತ ಭಾಷಾಯಾಂ ಎಂದು ಹೇಳಿಕೊಳ್ಳಲಾಗಿದೆ. ಆದರೆ ನಿರ್ದಿಷ್ಟವಾಗಿ ಕನ್ನಡವನ್ನು ಹೇಳದೇ ಇದ್ದರೂ ಸಹ ಭಾಷೆಯ ಬಗ್ಗೆ ಹೇಳಿದ್ದಾನೆ. ಅಕ್ಷರವನ್ನು ಕುರಿತಾಗಿ ಮತ್ತು ಕವಿಯನ್ನು ಹೆಸರಿಸಿದ್ದಿಲ್ಲ. ಖಜುರಾಹೋ ಶಿಲ್ಪಕಲೆಗಳಲ್ಲಿ ವೈಶಿಷ್ಟ್ಯವನ್ನು ಹೊಂದಿದ್ದಲ್ಲದೇ ಭಾಷಾ ಜ್ಞಾನದ ಕುರಿತಾಗಿ ಉಲ್ಲೇಖಿಸಿದ ಮಹತ್ವದ ದೇವಾಲಯ.
ಯಸ್ತ್ಯಾಗ ವಿಕ್ರಮ ವೆವೇಕ ಕಲಾ ವಿಲಾಸ ಪ್ರಜ್ಞಾಪ್ರತಾಪ ವಿಭವ ಪ್ರಭವಶ್ಚರಿತ್ರಾತ್ ಚಕ್ರೇ ಕೃತೀ
ಸುಮನಸಾಂ ಮನಸಾಮಕಸ್ಮಾದಸ್ಮಾದಕಾಲ ಕಲಿಕಾಲ ವಿರಾಮ ಶಂಕಾಂ
ಶಬ್ದಾನುಶಾಸನ ವಿದಾಪಿತ್ರಮಾನ್ತ್ರ್ಯ ಡತ್ತ ದದ್ದೇನ ಮಾದವ ಕವಿಃ ಸ ಇಮಾಂ ಪ್ರಶಸ್ತಿಂ
ಯಸ್ಯಾಮಲಂಕ ವಿಯಶಃ ಕೃತಿನಃ ಕಯಾಸು ರೋಮಾಂಚ ಕಂಚಕ ಜುಷಃ ಪರಿಕೀರ್ತಯನ್ತೀ
ಸಂಸ್ಕೃತ ಭಾಷಾ ವಿದುಷಾ ಜಯಗುಣ ಪುತ್ರೇಣ ಕೌತುಕಾ ಲಿಖಿತಾ

ರುಚಿರಾಕ್ಷರಾ ಪ್ರಶಸ್ತಿಃ ಕರಣಿಕ ಜದ್ದೇನ ಗೌಡೇನ





Wednesday, 7 September 2016

ಐಂದ್ರ - ಅಷ್ಟಾಧ್ಯಾಯೀ - ಸರ್ಪಬಂಧ

ಕೈಲಾಸ ವಾಸಿಯಾದ ಶಿವನಿಗೆ ಅನೇಕ ಶ್ರೇಷ್ಟರಾದ ಗಣಗಳ ಸಮೂಹವೇ ಇತ್ತು. ಅವರಲ್ಲಿ ಪುಷ್ಪದಂತಕೂಡಾ ಒಬ್ಬ. ಆತ ಒಮ್ಮೆ ಒಂದು ತಪ್ಪು ಮಾಡುತ್ತಾನೆ. ಆಗ ಪಾರ್ವತಿ ಕೋಪಗೊಳ್ಳುತ್ತಾಳೆ. ಕೋಪಗೊಂಡ ಪಾರ್ವತಿ ಶಾಪನೀಡುತ್ತಾಳೆ. ಆ ಶಾಪದ ಪರಿಣಾಮ ಪುಷ್ಪದಂತನು ಭೂಲೋಕದಲ್ಲಿ ವರರುಚಿಯಾಗಿ ಹುಟ್ಟುತ್ತಾನೆ. ವರರುಚಿಗೆ ಇನ್ನೊಂದು ಹೆಸರಿರುವುದು ಕಾತ್ಯಾಯನ ಎಂದು. ಅವನು ಪಾಟಲೀ ಪುತ್ರದಲ್ಲಿ ಉಪಾಧ್ಯಾಯ ವರ್ಷನೆನ್ನುವವನ ಬಳಿ ಸಕಲ ಶಾಸ್ತ್ರವಿದ್ಯೆಗಳನ್ನು ಕಲಿಯುತ್ತಾನೆ. ಹಾಗೆಯೇ ಅಲ್ಲಿಯೇ ಉಪಕೋಶ ಅನ್ನುವವಳನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿರುತ್ತಾನೆ. ಅದೇ ಕಾಲಕ್ಕೆ ಪಾಣಿನಿ ಎನ್ನುವ ಮಂದಬುದ್ಧಿಯವನೊಬ್ಬ ವರ್ಷನ ಶಿಷ್ಯನಾಗಿ ಬಂದು ಸೇರಿಕೊಳ್ಳುತ್ತಾನೆ. ಅವನ ಮಂದ ಬುದ್ಧಿಯನ್ನು ಗಮನಿಸಿದ ಗುರುಪತ್ನಿ ಅವನನ್ನು ಓಡಿಸುತ್ತಾಳೆ ಇದರಿಂದ ಖಿನ್ನನಾದ ಪಾಣಿನಿ ಹಿಮಾಲಯಕ್ಕೆ ತಪಸ್ಸಿಗೆ ತೆರಳುತ್ತಾನೆ . ಅಲ್ಲಿ ಶಿವನನ್ನು ಮೆಚ್ಚಿಸಿ. ಎಲ್ಲಾ ವಿದ್ಯೆಗಳನ್ನೂ ಅಭ್ಯಾಸ ಮಾಡಿ ಮರಳಿ ಪಾಟಲೀ ಪುತ್ರಕ್ಕೆ ಬಂದು ವರರುಚಿಯನ್ನು ವಾದಕ್ಕೆ ಕರೆದು ಏಳು ದಿನಗಳ ಕಾಲ ವಾದ ಮಾಡುತ್ತಾನೆ. ಪಾಣಿನಿ ಮತ್ತು ವರರುಚಿ ವಾದ ಮಾಡುತ್ತಾ ೭ ದಿನ ಕಳೆಯುತ್ತದೆ ಎಂಟನೇ ದಿನ ವರರುಚಿ ಪಾಣಿನಿಯನ್ನು ಗೆದ್ದನು ಆದರೆ ಅಷ್ಟರಲ್ಲಿ ಶಿವನು ಮೇಲಿನಿಂದ ಹೂಂಕರಿಸಲು ವರರುಚಿಯಲ್ಲಿದ್ದ ಐಂದ್ರ ವ್ಯಾಕರಣವೆಲ್ಲಾ ನಷ್ಟವಾಗಿ ವರರುಚಿ ಸೋತು ಪಾಣಿನಿಯೇ ಗೆದ್ದನು. ಇದೊಂದು ದಂತ ಕಥೆಯಾಗಿದ್ದರೂ ಸಹ ಪಾಣಿನಿಗಿಂತಲೂ ಪೂರ್ವದಲ್ಲೂ ಇನ್ನೊಂದು ವ್ಯಾಕರಣ ಪ್ರಬೇಧ ಇದ್ದದ್ದು ತಿಳಿದು ಬರುತ್ತದೆ. ಆದರೆ ಪಾಣಿನಿಯ ವ್ಯಾಕರಣವೇ ಮುಂದೆ ಪ್ರಮಾಣ ಗ್ರಂಥವಾಗುತ್ತಾ ಸಾಗುತ್ತದೆ.
ಸಂಸ್ಕೃತ ಸಾಹಿತ್ಯದ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯ ಕಾರರು, ಸ್ಮೃತಿಕಾರರು - ಭಾಷ್ಯಕಾರರ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತ ವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಸಂಸ್ಕೃತ ಭಾಷಾ ಲೋಕ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡಿದೆ.

ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ಆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ ೧೧- ೧೨ ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ. ಇಲ್ಲಿ ನಾನು ಸಧ್ಯಕ್ಕೆ ಒಂದನ್ನು ತಮ್ಮೆದುರಿಗೆ ಇಟ್ಟಿದ್ದೇನೆ.