Search This Blog

Wednesday 7 September 2016

ಐಂದ್ರ - ಅಷ್ಟಾಧ್ಯಾಯೀ - ಸರ್ಪಬಂಧ

ಕೈಲಾಸ ವಾಸಿಯಾದ ಶಿವನಿಗೆ ಅನೇಕ ಶ್ರೇಷ್ಟರಾದ ಗಣಗಳ ಸಮೂಹವೇ ಇತ್ತು. ಅವರಲ್ಲಿ ಪುಷ್ಪದಂತಕೂಡಾ ಒಬ್ಬ. ಆತ ಒಮ್ಮೆ ಒಂದು ತಪ್ಪು ಮಾಡುತ್ತಾನೆ. ಆಗ ಪಾರ್ವತಿ ಕೋಪಗೊಳ್ಳುತ್ತಾಳೆ. ಕೋಪಗೊಂಡ ಪಾರ್ವತಿ ಶಾಪನೀಡುತ್ತಾಳೆ. ಆ ಶಾಪದ ಪರಿಣಾಮ ಪುಷ್ಪದಂತನು ಭೂಲೋಕದಲ್ಲಿ ವರರುಚಿಯಾಗಿ ಹುಟ್ಟುತ್ತಾನೆ. ವರರುಚಿಗೆ ಇನ್ನೊಂದು ಹೆಸರಿರುವುದು ಕಾತ್ಯಾಯನ ಎಂದು. ಅವನು ಪಾಟಲೀ ಪುತ್ರದಲ್ಲಿ ಉಪಾಧ್ಯಾಯ ವರ್ಷನೆನ್ನುವವನ ಬಳಿ ಸಕಲ ಶಾಸ್ತ್ರವಿದ್ಯೆಗಳನ್ನು ಕಲಿಯುತ್ತಾನೆ. ಹಾಗೆಯೇ ಅಲ್ಲಿಯೇ ಉಪಕೋಶ ಅನ್ನುವವಳನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿರುತ್ತಾನೆ. ಅದೇ ಕಾಲಕ್ಕೆ ಪಾಣಿನಿ ಎನ್ನುವ ಮಂದಬುದ್ಧಿಯವನೊಬ್ಬ ವರ್ಷನ ಶಿಷ್ಯನಾಗಿ ಬಂದು ಸೇರಿಕೊಳ್ಳುತ್ತಾನೆ. ಅವನ ಮಂದ ಬುದ್ಧಿಯನ್ನು ಗಮನಿಸಿದ ಗುರುಪತ್ನಿ ಅವನನ್ನು ಓಡಿಸುತ್ತಾಳೆ ಇದರಿಂದ ಖಿನ್ನನಾದ ಪಾಣಿನಿ ಹಿಮಾಲಯಕ್ಕೆ ತಪಸ್ಸಿಗೆ ತೆರಳುತ್ತಾನೆ . ಅಲ್ಲಿ ಶಿವನನ್ನು ಮೆಚ್ಚಿಸಿ. ಎಲ್ಲಾ ವಿದ್ಯೆಗಳನ್ನೂ ಅಭ್ಯಾಸ ಮಾಡಿ ಮರಳಿ ಪಾಟಲೀ ಪುತ್ರಕ್ಕೆ ಬಂದು ವರರುಚಿಯನ್ನು ವಾದಕ್ಕೆ ಕರೆದು ಏಳು ದಿನಗಳ ಕಾಲ ವಾದ ಮಾಡುತ್ತಾನೆ. ಪಾಣಿನಿ ಮತ್ತು ವರರುಚಿ ವಾದ ಮಾಡುತ್ತಾ ೭ ದಿನ ಕಳೆಯುತ್ತದೆ ಎಂಟನೇ ದಿನ ವರರುಚಿ ಪಾಣಿನಿಯನ್ನು ಗೆದ್ದನು ಆದರೆ ಅಷ್ಟರಲ್ಲಿ ಶಿವನು ಮೇಲಿನಿಂದ ಹೂಂಕರಿಸಲು ವರರುಚಿಯಲ್ಲಿದ್ದ ಐಂದ್ರ ವ್ಯಾಕರಣವೆಲ್ಲಾ ನಷ್ಟವಾಗಿ ವರರುಚಿ ಸೋತು ಪಾಣಿನಿಯೇ ಗೆದ್ದನು. ಇದೊಂದು ದಂತ ಕಥೆಯಾಗಿದ್ದರೂ ಸಹ ಪಾಣಿನಿಗಿಂತಲೂ ಪೂರ್ವದಲ್ಲೂ ಇನ್ನೊಂದು ವ್ಯಾಕರಣ ಪ್ರಬೇಧ ಇದ್ದದ್ದು ತಿಳಿದು ಬರುತ್ತದೆ. ಆದರೆ ಪಾಣಿನಿಯ ವ್ಯಾಕರಣವೇ ಮುಂದೆ ಪ್ರಮಾಣ ಗ್ರಂಥವಾಗುತ್ತಾ ಸಾಗುತ್ತದೆ.
ಸಂಸ್ಕೃತ ಸಾಹಿತ್ಯದ ಇತಿಹಾಸದಲ್ಲಿ ಕ್ರಿಸ್ತ ಪೂರ್ವದಲ್ಲಿ ಯಾಜ್ಞವಲ್ಕ್ಯ, ಬೌಧಾಯನ, ಕಾಟ್ಯಾಯನ, ಆಪಸ್ತಂಬ, ಪಿಂಗಲ, ಪಾಣಿನಿ ಹೀಗೆ ಸಾಹಿತ್ಯ ಕಾರರು, ಸ್ಮೃತಿಕಾರರು - ಭಾಷ್ಯಕಾರರ ದಂಡು ನಮಗೆ ಸಿಗುತ್ತದೆ. ಅವುಗಳಲ್ಲಿ ಪಾಣಿನಿಯೇ ಅತ್ಯಂತ ಅತ್ಯಂತ ಗಂಭೀರವಾದ ಮಾರ್ಗವನ್ನು ಕರುಣಿಸಿದ ಅಂದರೆ ಅದು ಅತಿಶಯವಲ್ಲ. ಅಸ್ತವ್ಯಸ್ತ ವಾದ ಪದಬಳಕೆಯ ಕ್ರಮಕ್ಕೆ ಹದಿನಾಲ್ಕು ಸೂತ್ರಗಳನ್ನು ಹಾಕಿ ಒಂದು ವ್ಯವಸ್ಥಿತ ಪದ್ಧತಿಯನ್ನು ತೋರಿಸಿಕೊಟ್ಟದ್ದು ಪಾಣಿನಿಯ ದೊಡ್ದ ಕೊಡುಗೆ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಸಂಸ್ಕೃತ ಭಾಷಾ ಲೋಕ ತನ್ನದೇ ಆದ ದೊಡ್ದ ಕೊಡುಗೆಯನ್ನು ನೀಡಿದೆ.

ಒಂದು ದೇಶದ ರಾಜ ತಾನು ಕವಿಯಾಗಿ ಮಾರ್ಗದರ್ಶಕನಾಗಿ ಉತ್ತಮ ಆಡಳಿತಗಾರನಾಗಿ ಇದ್ದರೆ ಆ ದೇಶ ಎಂದೂ ಸಹ ದುರ್ಭಿಕ್ಷದಿಂದ ಇರಲು ಸಾಧ್ಯವೇ ಇಲ್ಲ ಅನ್ನುವುದಕ್ಕೆ ೧೧- ೧೨ ನೇ ಶತಮಾನದ ಭೋಜನೇ ಉದಾಹರಣೆ. ಸಾಹಿತ್ಯದ ಮೇಲೆ ಮಾತ್ರವಲ್ಲದೇ ಸಂಸ್ಕೃತ ಭಾಷಾ ಶಾಸ್ತ್ರದ ಮೇಲೂ ಸಹ ಆತ ಪ್ರಭುತ್ವದ ಜೊತೆಗೆ ಆಸಕ್ತಿ ಹೊಂದಿದ್ದ ಸಾಮಾನ್ಯರೂ ಸಹ ವ್ಯಾಕರಣ ಬದ್ಧರಾಗಿ ಮುಂದಿನ ಪೀಳಿಗೆಗೆ ಭಾಷೆಯನ್ನು ಜೀವಂತ ಇಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ವ್ಯಾಕರಣಕ್ಕೆ ಸಂಬಂಧಿಸಿ ನಾಲ್ಕು ಶಾಸನಗಳನ್ನು ಬರೆಸಿದ ಅದು ಕೂಡಾ ಸಾರ್ವಜನಿಕರು ಹೆಚ್ಚಾಗಿರುವ ಕಡೆ ಅದನ್ನು ಬರೆಸಿದ ಅದುವೇ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯದ ಸರ್ಪಬಂಧ ಶಾಸನ. ಇಲ್ಲಿ ನಾನು ಸಧ್ಯಕ್ಕೆ ಒಂದನ್ನು ತಮ್ಮೆದುರಿಗೆ ಇಟ್ಟಿದ್ದೇನೆ.




1 comment: