Search This Blog

Wednesday 7 June 2017

ಕಾಳಿದಾಸ ರಘುವಂಶ - ಮಂಗಲೇಶನ ಮಕುಟ ಶಾಸನ

ಮಂಗಲೇಶನು ಪುಲಿಕೇಶಿಯ ಚಿಕ್ಕಪ್ಪ, ಈತ ಕ್ರಿ ಶ ೬೦೨ರಲ್ಲಿ ಒಂದು ಸ್ತಂಭ ಶಾಸನವನ್ನು ಮಹಾಕೂಟದಲ್ಲಿ ಬರೆಸುತ್ತಾನೆ ಇಲ್ಲಿ ಮಂಗಲೇಶನನ್ನು ಬಹುವಾಗಿ ವೈಭವಿಸಿ ಬರೆಯಲಾಗಿದೆ. ಅದೆಷ್ಟು ಪ್ರಶಂಸಿಸಲಾಗಿದೆ ಅಂದರೆ ಕಾಳಿದಾಸನ ರಘುವಂಶ ಮಹಾಕಾವ್ಯದ ಪ್ರಥಮ ಸರ್ಗ್ಗದ ಆರನೇ ಶ್ಲೋಕದ ಮೊದಲಾರ್ಧವನ್ನು ಹಾಗೆಯೇ ಬರೆಯಲಾಗಿದೆ. ಈ ಶಾಸನ ಸಂಪೂರ್ಣ ಸಂಸ್ಕೃತದಲ್ಲಿದ್ದರೂ ಕೊನೆಯಲ್ಲಿ ದಾಟ ಆನ ಕುಟ್ಟಿದ ಎನ್ನುವ ಪದ ಬಳಕೆಯಾಗಿರುವುದು ದಾಟ ಎನ್ನುವವನು ಬರೆದಂತೆ ಕಂಡುಬರುತ್ತದೆ. ಕನ್ನಡ ಶಾಸನಗಳ ಇತಿಹಾಸದಲ್ಲಿ ಖ್ಯಾತಿವೆತ್ತ ಸಂಸ್ಕೃತ ಕವಿಗಳ ನಿದರ್ಶನಗಳು ಅಲ್ಲಲ್ಲಿ ಗೋಚರಿಸುತ್ತವೆ, ರವಿಕೀರ್ತಿಯು ಕಾಳಿದಾಸ ಭಾರವಿಯನ್ನು ಉಲ್ಲೇಖಿಸಿದ್ದಾದರೆ ಇಲ್ಲಿ ನೇರವಾಗಿ ಕಾಳಿದಾಸನ ಕಾವ್ಯದ ಸೊಬಗನ್ನು ತರಲಾಗಿದೆ. ಇಲ್ಲಿ ಇನ್ನೊಂದು ಸೋಜಿಗವನ್ನು ಗಮನಿಸಬಹುದು, ಮಹಾಕೂಟವು ಐಹೊಳೆಯಿಂದ ಹತ್ತಿರವಿದ್ದು ಮಂಗಲೇಶನ ಆಶ್ರಯದಲ್ಲಿ ರವಿಕೀರ್ತಿಯಷ್ಟೇ ಪ್ರಬಲ ಅಥವಾ ರವಿಕೀರ್ತಿಯೇ ತರುಣಾವಸ್ಥೆಯಲ್ಲಿದ್ದಾಗ ಈ ಶಾಸನದ ಬರೆದು ದಾಟನು ಖಂಡರಿಸಿರಲೂ ಬಹುದು. ಅಂತೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕವಿಗಳ ಸಮೂಹವೇ ಇದ್ದಿರಬಹುದು ಅನ್ನಿಸುತ್ತದೆ. ಇಲ್ಲಿ ಈ ಶಾಸನದಲ್ಲಿ ಮಹಾಕೂಟವನ್ನು ಮಕುಟೇಶ್ವರ ಎಂದು ಕರೆಯಲಾಗಿದ್ದು ಅದೇ ಮಕುಟ ಅಥವಾ ಮುಕುಟವೇ ಮಹಾಕೂಟ ಎಂದು ಹೆಸರು ಪಡೆದಿದೆ. ನನಗನ್ನಿಸುವುದು ಕವಿಯೊಬ್ಬ ತನ್ನ ತಾರುಣ್ಯದಲ್ಲಿ (ಕ್ರಿಶ ೬೦೨) ಈ ಶಾಸನ ಬರೆದು ತನಗೇ ಅರಿವಿಲ್ಲದಂತೆ ಕಾಳಿದಾಸನ ಕಾವ್ಯದ ತುಣುಕನ್ನು ಇಲ್ಲಿ ಸೇರಿಸಿ ಮುಂದೆ ಪ್ರೌಢನಾದಾಗ(ಪುಲಿಕೇಶಿಯ ಕಾಲಕ್ಕೆ ಕ್ರಿ ಶ ೬೩೨) ಆತ ಆತ್ಮವಿಶ್ವಾಸದಿಂದ ತಾನು ಕಾಳಿದಾಸ ಮತ್ತು ಭಾರವಿಗೆ ಸರಿಸಮನೆಂದು ಹೇಳಿಕೊಂಡಿರಬಹುದು. ಇಲ್ಲಿ ಈ ಶಾಸನದಲ್ಲಿ ಆತ ಸ್ವಲ್ಪ ಯಡವಿದ್ದು ಗಮನಿಸಿದರೆ ಹಾಗೆ ಅನ್ನಿಸುತ್ತದೆ " ಯಥಾ ಹುತಾಗ್ನಿನಾ" ಎಂದು ಬರೆದು ಆಮೇಲೆ ಆ ಸಾಲಿನ ಕೆಳಗೆ "ವಿಧಿ" ಎನ್ನುವ ಪದವನ್ನು ಮೊದಲ ಸಾಲಿಗಿಂತ ಚಿಕ್ಕದಾಗಿ ಸೇರಿಸಿದ್ದು ಕಂಡು ಬರುತ್ತದೆ. ಕದಂಬರ ಕಾಲದ ತಗರೆ ಶಾಸನದಲ್ಲೂ ಇದೇ ರೀತಿ ಶಾಸನದಸಾಲಿನ ಕೆಳಗಳೆ ಚಿಕ್ಕದಾಗಿ ಅಕ್ಷರಗಳನ್ನು ಪೇರಿಸಿರುವುದು ಕಾಣ ಸಿಗುತ್ತದೆ.

ಯಥಾವಿಧಿ ಹುತಾಗ್ನೀನಾಂ ಯಥಾ ಕಾಮಾರ್ಚಿತಾರ್ಥಿನಾಂ |
ಯಥಾಪರಾ ದಂಡಾನಾಂ ಯಥಾ ಕಾಲ ಪ್ರಬೋಧಿನಾಂ ||

- ಇದು ಕಾಳಿದಾಸನ ರಘುವಂಶದಲ್ಲಿ ಒಂದನೇ ಸರ್ಗದ ೬ನೇ ಶ್ಲೋಕ. ಇದರ ಮೊದಲ ಸಾಲು ಮಂಗಲೇಶನ ಮಹಾಕೂಟ ಸ್ತಂಭ ಶಾಸನದ ಮೊದಲ ಮತ್ತು ಎರಡನೇ ಸಾಲಿನಲ್ಲಿ ಬರೆಯಲಾಗಿದೆ.

No comments:

Post a Comment