Search This Blog

Thursday 8 June 2017

ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್ - ನಾಕಿರಾಜ

ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್ - ನಾಕಿರಾಜ

ಧಾರವಾಡದ ಮುಗದ್ ನಲ್ಲಿರುವ ಈ ಶಾಸನ ತ್ರಿಭುವನ ಮಲ್ಲ ಆರನೇ ವಿಕ್ರಮಾದಿತ್ಯನದ್ದು ಇದರ ಕಾಲ ಕ್ರಿ. ಶ. 1125 ರ ಸಮಯದ್ದು. ಈ ಶಾಸನದ ಉದ್ದಕ್ಕೂ ನಾಕಿರಾಜ ಎನ್ನುವವನ ಅನೇಕ ಗುಣಗಳನ್ನು ಸಾರುತ್ತಾ, ಶಾಸನಗಳ ವಿಧ ಮತ್ತು ಧರ್ಮವನ್ನು ಸಾರಲಾಗಿದೆ. "ಬಿಡುವ, ಮರಳ್ಚುವಟ್ಟುವ ಮಗುಳ್ವಾ ಕಡಂಗುವ ರೂಪಿಡುವ ಜಗುಳ್ವ ಝಳ್ಪಿಸುವ ಎಂದು ಶಾಸನದ 27ನೇ ಸಾಲಿನಲ್ಲಿ ಹೇಳಲಾಗಿದೆ. ಮುಂದೆ 29 ನೇ ಸಾಲಿನಲ್ಲಿ "ಸುರಿಗೆವಿಡಿವವರ ದೇವಂ" ಎಂದು ದೈವತ್ವಕ್ಕೆ ಏರಿಸಲಾಗಿದೆ. ಪರಿವಾರಕ್ಕ ಪ್ರಜೆಗಂ ನಿರುತಂ ತಾಂ ದೆಯ್ಯಮಾಗಿ" ಎಂದು ಪ್ರಜಾನುರಾಗಿ ಎಂದು ೪೩ನೇ ಸಾಲಿನಲ್ಲಿ ಹೇಳಲಾಗಿದೆ. 53ನೇ ಸಾಲಿನಲ್ಲಿ "ಮುಗುಂದಮೆಂಬುಇದಯ ಶೈಳಸ್ಥಾನದೊಳ್ತೇಜಮಾಗಿರೆ ಚೆಲ್ವಾದುದು ನಾಕಿರಾಜ ವಿಭುವೆಂಬಾದಿತ್ಯ ನಿತ್ಯೋದಯಂ" ಎಂದು ಪ್ರಭಾತ ಸಮಯದ ಸೂರ್ಯ ಮೇಲೇರುತ್ತಾ ಪ್ರಭೆಯನ್ನು ಹೆಚ್ಚಿಸಿಕೊಳ್ಳುವಂತೆ ನಾಕಿರಾಜನೂ ಪ್ರಭಾನ್ವಿತನು ಎನ್ನಲಾಗಿದೆ. ಈ ಶಾಸನದ ಕೊನೆಯಲ್ಲಿ ಅಂದರೆ 108ನೇ ಸಾಲಿನಲ್ಲಿ "ನಾಗಾರ್ಜುನ ಪಂಡಿತರು ಪೇಳ್ದ ಕಬ್ಬಂ ಕೆಸರು ಕಲ್ಲಾದಿಯಾಗಿ ಕಲ್ಲೋಝರ ಕೆಲಸ| ಭರತೋಜನ ಕಂಡರಣೆ. ಎಂದು ನಾಗಾರ್ಜುನ ಎನ್ನುವ ವಿದ್ವಾಂಸ ಈ ಕೃತಿಯನ್ನು ಬರೆದದ್ದು ಅದನ್ನು ಕಲ್ಲು ಕೆಲಸವನ್ನು ಮಾಡುವ ಶಿಲ್ಪಿ ಭರತನು ಕೆತ್ತಿದ್ದಾನೆ ಎಂದು ಬರೆಯಲಾಗಿದೆ.

ಈ ಶಾಸನದ 58ರಿಂದ 60ನೇ ಸಾಲಿನಲ್ಲಿ ಬಂದಿರುವ ಶಾಸನ ಧರ್ಮ ಈ ರೀತಿ ಇದೆ : 
ಸಾಸನಮಾಗಿರೊಳ್ಪೆಸೆವ ಕಲ್ಲಿನ ಸಾಸನವೊಂದಿದಲ್ತು ಕೇಳ್
ಸಾಸದ ಸಾಸನಂ ಜಯದ ಸಾಸನ ವಾರ್ಪ್ಪಿನ ಸಾಸನಂ ಗುಣೋ
ದ್ಭಾಸನ ಸಾಸನಂ ಸಿರಿಯ ಸಾಸನ ವೊಳ್ಪಿನಸಾಸನಾಳಿಯಿಂ
ಲೇಸೆನೆ ನಾಕಿರಾಜ ವಿಭು ಸಾಸನ ಕೋಟಿಯನೆಯ್ದೆ ತಾಳ್ದಿದಮ್
ಒಳ್ಳೆಯತನವನ್ನು, ಜಯದ ವಿವರಣೆಯನ್ನು ಶೌರ್ಯಗುಣವನ್ನು, ಐಶ್ವರ್ಯಗಳ ವರ್ಣನೆ, ದಾನವನ್ನು ವಿವರಿಸುವ ಶಾಸನಗಳೆಂದು ವಿಂಗಡಿಸಿಕೊಳ್ಳಬಹುದು.

ಇವುಗಳಲ್ಲಿ ದಾನಶಾಸನಗಳನೇಕವು ತಾಮ್ರಪಟಗಳ ಸಾಲಿಗೆ ಸೇರುತ್ತವೆ. ಗೋಸಾಸದ ಶಾಸನವನ್ನು ಇಲ್ಲಿ ಸಾಸದ ಶಾಸನ ಎಂದಿದ್ದು, ಜಯದ ಶಾಸನ, ಗುಣವನ್ನು ಹೇಳುವ ಶಾಸನ. ಹೀಗೆ ಕನ್ನಡದ ಶಾಸನಗಳ ವಿಧಗಳನ್ನು ಹೇಳುತ್ತಾ ನಾಕಿರಾಜನು ಈ ಎಲ್ಲಾ ಗುಣಗಳನ್ನು ಹೊಂದಿರುವ ಶಾಸನಗಳನ್ನು ಬರೆಸಲು ಸಮರ್ಥ ಎನ್ನುವುದನ್ನು ಹೇಳಲಾಗಿದೆ. ಇಲ್ಲಿ ಹೇಳಿರುವ ಶಾಸನಗಳನ್ನೆ ಎರಡು ವಿಧವಾಗಿ ನೋಡಿದರೆ ಒಂದು ದಾನಗಳಿಗೆ ಮತ್ತು ಇನ್ನೊಂದು ವೀರ ಶಾಸನಗಳನ್ನಾಗಿಸಬಹುದು. ದಾನಗಳು ಕಲ್ಲು ಮತ್ತು ತಾಮ್ರಗಳಿದ್ದರೆ ವೀರ ಶಾಸನಗಳು ಕಲ್ಲಿನಲ್ಲಿಯೇ ಬರೆಯಲ್ಪಟ್ಟ ವೀರಗಲ್ಲುಗಲಾಗಿವೆ. ತ್ಯಾಗ ಮತ್ತು ಶೌರ್ಯವನ್ನು ಈ ಶಾನ ಪ್ರತಿಪಾದಿಸುತ್ತಾ ಹೋಗುತ್ತದೆ. 

No comments:

Post a Comment