Search This Blog

Monday 26 June 2017

ತೋರಣ - ಪ್ರಾಕೃತ - ಸಂಸ್ಕ್ಟತ - ಕನ್ನಡ

"ತೋರಣ" ಇದು ಮೂಲ ಸಂಸ್ಕೃತಪದ ಇಂದು ನಾವು ಕನ್ನಡದ ಪದವೇ ಇರಬೇಕೆನ್ನುವಷ್ಟು ನಮ್ಮ ಭಾಷೆಯಲ್ಲಿ ಸಮ್ಮಿಳಿತಗೊಂಡು ಬಳಕೆಗೊಂಡಿದೆ, ತೋರಣಕ್ಕೆ ಸಮಾನ ಕನ್ನಡ ಪದ ಯಾವುದೆಂದು ಹುಡುಕುತ್ತಾ ಹೋದರೆ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ಕನೇ ಸಂಪುಟದ ೩೭೦೯ನೇ ಪುಟದ ೨ನೇ ಕಾಲಂನ ೨೩ನೇ ಪದ ತೋರಣ: ಹೆಬ್ಬಾಗಿಲು, ಹೊರಬಾಗಿಲು ಎಂದು ಹೇಳಲಾಗಿದೆ. ಕಿಟ್ಟೆಲ್ ಶಬ್ದಕೋಶದ ೭೫೮ನೇ ಪುಟದಲ್ಲಿ A festoon suspended across gateways. ಎಂದು ಅರ್ಥೈಸಲಾಗಿದೆ. ಸಂಸ್ಕೃತದ ಮೋನಿಯರ್ ವಿಲ್ಲಿಯಮ್ಸ್ ನಲ್ಲಿ ೪೫೬ನೇ ಪುಟದಲ್ಲಿಯೂ ಹೂವಿನಿಂದಲಂಕೃತವಾದ ಬಾಗಿಲು ಎನ್ನಲಾಗಿದೆ. ಕುಮಾರ ಸಂಭವದಲ್ಲಿ "ಭಾಸೋಜ್ವತ್ಕಾಂಚನ ತೋರಣಾನಾಮ್" ಎಂದು ಹೇಳಲಾಗಿದೆ. "ದ್ವಾರಾಗ್ರೇ ನಿಖಾತಸ್ತಂಭೋ ಪರಿನಿಬದ್ಧೋ ಧನುರಾಕಾರಃ" ಎಂದು ವಾಚಸ್ಪತ್ಯದಲ್ಲಿ ಹೇಳಲಾಗಿದೆ. ಹೀಗೇ ತೋರಣ ಎನ್ನುವುದು ಯಾಗ ಶಾಲೆಗಳಲ್ಲಿಯೂ ವಿಶೇಷತೆಯನ್ನು ಪಡೆದಿದೆ. ಮಂಗಲಕರ ಸನ್ನಿವೇಶದಲ್ಲಿ "ತೋರಣ" ಬಹುಮುಖ್ಯ. ಸುಮಾರು ಒಂದು ಮತ್ತು ಎರಡನೇ ಶತಮಾನದ ಕಾಲದ ಜೈನ ಶಾಸನ. ಮಥುರಾದಲ್ಲಿರುವ ಶಾಸನದ ಭಾಷೆ ಪ್ರಾಕೃತ ಮಿಶ್ರವಾದ ಸಂಸ್ಕೃತ. ಲಿಪಿ ಬ್ರಾಹ್ಮಿ.
ಇಲ್ಲಿ "ಸಹ ಮಾತಾ ಪಿತಿಹಿ ಸಹ" ಮತ್ತು "ಶಶ್ರೂ ಶಶುರೇಣ" ಎನ್ನುವುದು ತೋರಣದೊಂದಿಗೆ ಇರುವುದು. ಇಲ್ಲಿ ಶಶುರೇಣ ಎನ್ನುವಲ್ಲಿನ ಅಕ್ಷರಗಳನ್ನು ತೋರಣದ ಅಂದಕ್ಕಾಗಿ ಸ್ವಲ್ಪ ಅಸ್ತವ್ಯಸ್ಥ ಗೊಳಿಸಲಾಗಿದೆ.

ಕವಿ ಪಂಪ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ತೋರಣವನ್ನು ಹೀಗೆ ಹೇಳುತ್ತಾನೆ -
ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋಱಣದೋಳಿಗಳ್
ತಳತ್ತಳಿಸಿ ವಿಚಿತ್ರ ಕೇತು ತತಿಗಳ್ ಮಿಳಿರ್ದಾಡೆ ಪುರಾಙ್ಗನಾ
ಜನಙ್ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಮ್
ಬಳಿಯಿಸೆ ಪೊಕ್ಕನಾ ದ್ರುಪದ ಮನ್ದಿರಮಮ್ ಮಮ್ದಿರಮಮ್ ಪರಸೈನ್ಯಭೈರವಮ್[3-74]

ಇದಿರೊಳ್ ಕಟ್ಟಿದ ತೋರಣಮ್ ನಿಹಿದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ
ನ್ಮದ ಭೃಂಗ ಧ್ವನಿ ಮಂಗಳ ಧ್ವನಿಯೆನಲ್ ಸಾಲ್ವನ್ನೆಗಮ್ ತಾನೆ
ತಕ್ಕುದು ಕಾಮಂಗೆ ವಿವಾಹ ಮಂಟಪಮೆನಲ್ಕಾ ಮಾಧವೀ ಮಂಟಪಮ್[5-6]


No comments:

Post a Comment