Search This Blog

Wednesday 21 June 2017

ಉಭಯಮುಖಿ - ಮತ್ತು ಕನ್ನಡ ಶಾಸನ.

ಕನ್ನಡ ಭಾಷೆ ಸುಂದರವಾದ ಭಾಷೆ ಇದು ವೈಜ್ಞಾನಿಕವಾಗಿ ವ್ಯವಸ್ಥಿತವಾದ ನೆಲೆಗಟ್ಟನ್ನು ಹೊಂದಿರುವ ಭಾಷೆ, ಪರ್ಯಾಪ್ತವಾದ ಅಕ್ಷರಗಳು, ಆ ಅಕ್ಷರಗಳು ಸಹ ನೋಡಲು ಸುಂದರವಾಗಿರುವಂತವು. ಅರ್ಕ ಒತ್ತು, ದೀರ್ಘ - ಹೃಸ್ವ, ಅನುಸ್ವಾರ ವಿಸರ್ಗ ಮಹಾ ಪ್ರಾಣ ಅಲ್ಪಪ್ರಾಣಾದಿಗಳನ್ನು ಹೊಂದಿದ ಸುಸಂಬದ್ಧ ಭಾಷೆ. ಪ್ರಾಚೀನ ಭಾಷೆಗಳಲ್ಲಿ ಒಂದು ಎನ್ನುವುದೂ ಅಷ್ಟೆ ಸತ್ಯ. ಇಂತಹ ಭಾಷೆಗೆ ಅದ್ಭುತವಾದ ಇತಿಹಾಸವಿದೆ. ಮೊದಲ ಸಹಸ್ರಮಾನದ ಆರಂಭದಿಂದ ಹತ್ತನೆ ಶತಮಾನದ ತನಕ ಬರುವ ಶಾಸನಗಳಲ್ಲಿ ಅಲ್ಲಲ್ಲಿ ಯುದ್ಧದ ವರ್ಣನೆ, ವೀರಮರಣ, ತ್ಯಾಗ ಬಲಿದಾನಗಳು, ದಾನಗಳು, ವೀರ ಕೊಡುಗೆಗಳು ಇತ್ಯಾದಿ ಬರುತ್ತಾ ಹೋಗುತ್ತವೆ. ದಾನಗಳಲ್ಲಿ "ಉಭಯಮುಖೀ" ದಾನ ಅತ್ಯಂತ ಮಹತ್ವದ ಒಂದು ದಾನ. ಉಭಯ ಎನ್ನುವುದು ಎರಡನ್ನು ಸೂಚಿಸುತ್ತದೆ. ಅಂದರೆ ಇಲ್ಲಿ ಉಭಯಮುಖಿ ಅನ್ನುವುದು ಆಗತಾನೆ ಪ್ರಸವ ವೇದನೆ ಆರಂಭವಾಗಿ ಹಸುವಿನ ಕರುವುಯ್ ಭೂಮಿಗೆ ಬರುವ ಸಂದರ್ಭ ಕರುವಿನ ಮುಖ ಒಂದುಕಡೆಗಿದ್ದರೆ ತಾಯಿ ಹಸುವಿನ ಮುಖ ಇನ್ನೊಂದು ಕಡೆ ಇರುತ್ತದೆ ಆ ಸಮಯದಲ್ಲಿ ಆ ಗೋವನ್ನು ದಾನ ಕೊಡುವುದನ್ನು ಉಭಯ ಮುಖಿ ಎಂದು ಕರೆಯಲಾಗಿದೆ, ಇದು ಅತ್ಯಂತ ಶ್ರೇಷ್ಠವಾದ ದಾನ ಎಂದು ಇತಿಹಾಸದಲ್ಲಿ ಗುರುತಿಸಿಕೊಂಡಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ ಉತ್ತರ ದಿಕ್ಕಿನ ಅರ್ಧ ಮಂಟಪದ ಎಡಗಡೆ ಕಂಬದ ಮೇಲಿರುವ ೮ನೇ ಶತಮಾನದ ರಾಷ್ಟ್ರಕೂಟ ದೊರೆ ಧಾರಾವರ್ಷನ ಶಾಸನದಲ್ಲಿ
1. ಸ್ವಸ್ತಿ ಧಾರಾವರ್ಷ ಶ್ರೀ ಪೃಥವೀವಲ್ಲಭ ಮಹಾರಾಜಾಧಿರಾಜ
2. ಪರಮೇಶ್ವರ ಭಟ್ಟಾರ ಶ್ರೀ ಕಲಿಬಲ್ಲಹನ್
3. ಪಿೃಥುವೀ ರಾಜ್ಯಂಗೆಯೆ ಲೋಕಮಹಾದೇವಿಯರ ದೇಗು
4. ಲದ ಸೂಳೆ ಗೋಯಿನ್ದಪೊಡ್ಡಿಯ ಮಗಳು ಬಾದಿ
5. ಪೊಡ್ಡಿಯೆಮ್ಬೊ[ಳ್] ಉತ್ತ[ಮ] ಗೋಸಾಸಮಿೞ್ದೋಳ್
6. ಶ್ವರಥಗೊಟ್ಟೊಳಿಸ್ತಿರಥಮಿೞ್ದೋಳ್
7. ಭೂಮಿದಾನಮುಂ ಉಭಯಮುಖಿಯುಂ ಕೊಟ್ಟ[ಳ್] - ಒಬ್ಬ ವೇಶ್ಯೆಯು ಗೋಸಾಸದೊಂದಿಗೆ ಉಭಯಮುಖೀ ದಾನವನ್ನು ಕೊಟ್ಟ ಉಲ್ಲೇಖ ಮೊತ್ತ ಮೊದಲಿಗೆ ಲಭಿಸುತ್ತದೆ.
ವಾರಣಾಸಿಯೊಳಂಪ್ರಯಾಗೆಯೊಳವಗರ್ಘ್ರ್ಯ ತೀರ್ಥ್ತದೊಳಂಸಾಸಿರಕವಿಲೆಯಂಕೋಡುಂ ಕೊಳಗುಮಂಪಂಚರತ್ನಗಳೊಳುಕಟ್ಟಿಸಿಸಾ
ಸಿರವೇದಪಾರಗರಪ್ಪ ಬ್ರಾಹ್ಮಣರ್ಗ್ "ಉಭಯಮುಖಿ"ಗೊಟ್ಟಪುಂಣ್ಯಮನೆಯ್ದುಗುಮಿದನಳಿದವನಾ ಪುಂಣ್ಯತೀತ್ರ್ಥಂಗಳೊಳನಿತುಕವಿಲೆಯು
ಮಂಸಾಷಿರ್ವಬ್ರಾಹ್ಮಣರುಮನಳಿದಪಾತಕಮನೆಯ್ದುಗು - ಎಂದು ಸಾಂತರ ಜಿನದತ್ತರಾಯನ ವಿರಕ್ತ ಮಠದ ಚವುಕಿ ಹೊಂಡದ ಶಾಸನದಲ್ಲಿ ಹೇಳಲಾಗಿದೆ. ವಾರಣಾಸಿ ಮತ್ತು ಪ್ರಯಾಗದಲ್ಲಿ ಶ್ರೇಷ್ಠವಾದ ನದಿಯಲ್ಲಿ ಸಾವಿರ ಗೋವುಗಳ ಕೋಡನ್ನು ಪಂಚರತ್ನಗಳಿಂದ ಕಟ್ಟಿಸಿ ಸಾವಿರಜನ ವೇದ ವಿದರನ್ನು ಕರೆಸಿ ಅವರಿಗೆ ಉಭಯ ಮುಖೀ ದಾನವನ್ನು ಕೊಟ್ಟ ಎಂದು ಬರುತ್ತದೆ. ಆದರೆ ಇದು ಸತ್ಯ ಅನ್ನಿಸುತ್ತಿಲ್ಲ ಸಾವಿರ ಜನರಿಗೆ ಸಾವಿರ ಹಸುಗಳು ಪ್ರಸವಿಸುವ ವೇಳೆ ಹೇಗೆ ಕೊಡಬಹುದೋ ಅರ್ಥವಾಗುತ್ತಿಲ್ಲ. ರಾಷ್ಟ್ರಕೂಟರ ಕೊಟ್ಟಿಗನ ನಾಗಾವಿಯ ಶಾಸನದಲ್ಲಿ ಸಹ ಇದೇ ರೀತಿ ಬರುತ್ತದೆ. ಹುಲ್ಗೂರು ಮತ್ತು ಕಲ್ಯಾಣ ಚಾಲುಕ್ಯರ ಆಹವಮಲ್ಲ ದೇವನ ಗದಗದ ಹೊಸೂರು ಶಾಸನದಲ್ಲೂ ಉಭಯಮುಖೀ ಪ್ರಸ್ತಾಪ ಬರುತ್ತದೆ.


No comments:

Post a Comment