Search This Blog

Monday 12 June 2017

ಇಲ್ಲದ ಸಲ್ಲದ ಭಾಷೆಗ ಕಲ್ಲಂ ನಿಱಿಸುವರನುಱದೆ ನಗುವ್ವೊಲಿರ್ಕ್ಕುಂ........

ಕ್ರಿ ಶ. 970ರ ಕೊಟ್ಟಿಗದೇವನ ರೋಣ ತಾಲೂಕಿನ ಸವಡಿಯ ಗ್ರಾಮ ಚಾವಡಿಯಲ್ಲಿದ್ದ ಶಾಸನದಲ್ಲಿ "ವೇದ ವೇದಾಂಗಮನೋದದೇ ಶಾಸ್ತ್ರಮನಾದಿ ಮಧ್ಯಾಂತಮರಿಯದೆ ನಾರಣಂಗಾದುದು ಕವಿತ ಸಹಜಮೇ ನಾಗನಾರ್ಯ್ಯನ ಶೀಘ್ರ ಲಿಖಿತಂ" ಎಂದು ವೇದಗಳನ್ನು ಶಾಸ್ತ್ರಾದಿಗಳನ್ನೂ ಅರಿಯದ ಮುಗ್ಧತೆಯನ್ನು ಉಲ್ಲೇಖಿಸಿಕೊಂಡಿದ್ದಾನೆ. ಆದರೂ ಸಹ ಸಹಜವಾದ ಒಂದು ಕವಿತೆಯ ರಚನೆಮಾಡಿರುವೆನೆಂದು ವಿನಮ್ರನಾಗಿ ಹೇಳಿಕೊಂಡಿದ್ದಾನೆ. ಹಾಗೆಯೇ ಸೂಡಿಯ ಒಂದನೆಯ ಸೋಮೇಶ್ವರನ 981 ರ ಶಾಸನದಲ್ಲಿ " ವಾಕ್ಯಂ ನ್ಯೂನಾಕ್ಷರಂ ಅಧಿಕಾಕ್ಷರಂ ವಾ ಸರ್ಬ್ಬಂ ಪ್ರ್ತಮಾಣಂ ಇತಿ" ಎಂದು , ಕೈತಪ್ಪಿನಿಂದಾಗು೮ವ ದೋಷಗಳೆಲ್ಲವೂ ಮನ್ನಿಸಿ ಅದನ್ನು ಕೂಡಿಸಿಕೊಂಡು ಓದಬೇಕೆಂದು ಹೇಳಿಕೊಂಡಿದ್ದಾನೆ. ಗದಗದ ಮುಳ್ಗುಂದದ ತ್ರೈಲೋಕ್ಯ ಮಲ್ಲ ದೇವ(ಒಂದನೇ ಸೋಮೇಶ್ವರನ 1062ನೇ ಇಸವಿಯ ಶಾಸನದಲ್ಲಿ "ಅನುಪಮತರಾಕ್ಷರಂ ಬುಧಜನಮಂ ಜೀಯೆನಿಸೆ ಸಕಳವಿದ್ಯಾ ನಿಳಯಂ ಮನುಮುನಿಚಾರಿತ್ರ ನೀ ಸಾಸನಮಂ ಮನ್ನೆಯರ ಬಸವಣ್ಣಯ್ಯಂ ಬರೆದಂ" ಎಂದು ತನ್ನ ಅಕ್ಷರದಿಂದ ಬುದ್ಧಿವಂತರ ಮನಸ್ಸನ್ನು ಗೆದ್ದು ಈ ಶಾಸನವನ್ನು ಮನು ವಿನ ಶ್ಲೋಕಗಳೊಂದಿಗೆ ಬರೆದೆ ಎಂದು ಬಸವಣ್ಣಯ್ಯನು ಹೇಳಿಕೊಂಡಿದ್ದಾನೆ. ಇದೇ ರಾಜನ ಗದಗದ ಕುರ್ತಕೋಟಿಯ ಶಾಸನದಲ್ಲಿ 1081ರ ಶಾಸನವಿದು. ಇದರಲ್ಲಿ "ಮರವೆಸೆದೊಪ್ಪುವಿಟ್ಟಿಗೆಯ ದನ್ತದ ಚಿತ್ರದ ಶಾಸ್ತ್ರಮಾಗಿರೆ ಬೆಸಗೆಯ್ವ ಕಲುಭರಿವ ಕಮ್ಮಱ ವಿನ್ನಣದೋಜೆಗೆಲ್ಲಿಯುಂ ಪರಿಕಿಸೆ ವಿಶ್ವಕರ್ಮ್ಮನಿನವಂ ಮಿಗಿಲಂಬುದಶೇಷಭೂತಳ" ಎಂದು ವಿಶ್ವಕರ್ಮನನ್ನೇ ಮೀರಿಸುವ ಶಿಲ್ಪಕಲಾ ಚತುರ ಎಂದು ಬಣ್ಣಿಸಿಕೊಂಡಿದ್ದಾನೆ. ಅದೇ ಶಾಸನದಲ್ಲಿ " ಪರಹಿತರಿನ್ನೂರ್ವ್ವರ ಪದಸರಸೀರುಹಾಮೋದ ಮಧುಕರಂ ಶಿವಭಕ್ತಂ ಕರವತಿಶಯದೆ ವಿಸ್ತರಮಾಗಿರೆ ಎಂದು ಶಾಸನ ಕವಿ ತನ್ನನ್ನು ಹೇಳಿಕೊಂಡಿದ್ದಾನೆ. ಹೀಗೇ ಶಾಸನ ರಚನ ಕಾರರು ಒಮ್ಮೊಮ್ಮೆ ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದರೆ ಕೆಲವೊಮ್ಮೆ ವಿಡಂಬನೆಗಳನ್ನು ಮಾಡಿದ್ದಾರೆ. ಅದಕ್ಕೆ ಉದಾಹರಣೆ ಎನ್ನುವಂತೆ
ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿರುವ ಸ್ತ್ರೀಲಿಂಗ ದೇವಾಲಯದಲ್ಲಿ ನ ಒಂದು ಶಾಸನದ 103 ನೇ ಸಾಲಿನಲ್ಲಿ " ಇಲ್ಲದ ಸಲ್ಲದ ಭಾಷೆಗ ಕಲ್ಲಂ ನಿಱಿಸುವರನುಱದೆ ನಗುವ್ವೊಲಿರ್ಕ್ಕುಂ ಪಲ್ಲವಿಸಿ ಕುವರ ಲಕ್ಷ್ಮನ ಕಲ್ಲ ಕವಲ್ತೆಸೆವ ಕಾಂತಿ ದಿಗ್ಭಿತ್ತಿಗಳೊಳ್" ಎಂದು ಶಾಸನಗಳಿಂದ ತಾನು ಮಾಡಿರುವ ದಾನ ಧರ್ಮಾದಿಗಳು ಶಾಶ್ವತವಾಗಿರುವವು ಎನ್ನುವ ವಿಡಂಬನೆಯು ಈ ಒಂದು ಶಾಸನದ ವಾಕ್ಯದಿಂದ ತಿಳಿದು ಬರುತ್ತದೆ.

No comments:

Post a Comment