Search This Blog

Monday 29 May 2017

ಪರಮಾರ ವಂಶಸ್ಥ ಭೋಜರಾಜ

ಪರಮಾರ ವಂಶದ ಬಗ್ಗೆ ಉದಯಪುರ ಶಾಸನದಲ್ಲಿ ಮತ್ತು ಪದ್ಮಗುಪ್ತನನಿಂದ ಬರೆಯಲ್ಪಟ್ಟ "ಪರಿಮಳಾ" ಎನ್ನುವ ಗ್ರಂಥದ ನವಸಾಹಸಾಂಕ ಚರಿತದ ೧೧ನೇ ಸರ್ಗದಿಂದ ವಶಿಷ್ಠಕುಲ(ಗೋತ್ರ)ದವರೆಂದು ತಿಳಿದು ಬರುತ್ತದೆ. 
ಅಸ್ತ್ಯೂರ್ವಿಘ್ನಂ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಾಂಪತ್ಯ ಸಿದ್ಧೇಃ| 
ಸ್ಥಾನಂ ಚ ಜ್ಞಾನಭಾಜಾಮಭಿಮತ ಫಲದೋ ಖರ್ವಿರಃ ಸೋರ್ಬುಧಾಖ್ಯಃ || 
ವಿಶ್ವಾಮಿತ್ರ ವಶಿಷ್ಠಾದಹರತ ಬಲತೋ ಯತ್ರಗಾಂ ತತ್ಪ್ರಭಾವಾ | 
ಜ್ಞಜ್ಞೇ ವೀರೋಗ್ನಿ ಕುಂಡಾದ್ರಿಪುಬಲ ನಿಧನಂ ಯಶ್ಚ ಕಾರೈಕ ಏವಂ || 
ಮಾರಯಿತ್ವಾ ಪರಾನ್ ಧೇನು ಮಾನಿನ್ಯೇ ಸ ತತೋ ಮುನಿಃ 
ಉವಾಚ ಪರಮಾರಾಖ್ಯಃ ಪಾರ್ಥಿವೇಂದ್ರೋ ಭವಿಷ್ಯಸಿ || ಎನ್ನುವುದು ಉದಯಪುರ ಪ್ರಶಸ್ತಿ ಶಾಸನದ ವಾಕ್ಯದಿಂದಲೂ ಸಹ ವಶಿಷ್ಟಕುಲದವರು ಎನ್ನುವುದು ಗೊತ್ತಾಗುತ್ತದೆ. ಇದಲ್ಲದೇ ಭೋಜನು "ಸರಸ್ವತೀ ಕಂಠಾಭರಣ"ದ ನಾಯಕಗುಣದಲ್ಲಿ ಮಹಾಕುಲೀನತ್ವದ ಉದಾಹರಣೆಗೆ ತನ್ನ ವಂಶವನ್ನೇ ಉದಾಹರಿಸಿಕೊಂಡಿದ್ದಾನೆ. 
  
ಪರಮಾರ ವಂಶವು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಅನ್ನುವಷ್ಟು. ಆ ವಂಶಸ್ಥ ರಾಜರೆಲ್ಲರೂ ಭಾಷಾಭಿಮಾನಿಗಳೂ ಸಾಹಿತ್ಯಾಭಿಮಾನಿಗಳಾಗಿದ್ದರು ಎನ್ನುವುದು ಧರ್ ಮತ್ತು ಉದಯಪುರ ಶಾಸನಗಳಿಂದ ತಿಳಿದು ಬರುತ್ತದೆ. ಇವರ ವಂಶದ ಮುಂಜ(ವಾಕ್ಪತಿ ರಾಜ) ಸ್ವತಃ ಸಾಹಿತಿಯಾಗಿದ್ದ ಈತನ ಆಸ್ಥಾನ ಕವಿ ಧನಪಾಲ ಎನ್ನುವವನು "ತಿಲಕ ಮಂಜರಿ" ಎನ್ನುವ ಸಂಸ್ಕೃತ ಗ್ರಂಥ ರಚಿಸಿದ್ದ ಎನ್ನುವುದು ತಿಳಿದು ಬರುತ್ತದೆ. ಈತನ ತಮ್ಮನ ಮಗನೇ ಪ್ರಸಿದ್ಧನಾದ ಭೋಜರಾಜ. ಭೋಜನ ತಂದೆ ಸಿಂಧುಲ ಅಥವಾ ಸಿಂಧುರಾಜ. ಹರ್ಷನ ಮೊಮ್ಮಗ ಈತ. ಶೈವ ಪರಂಪರೆಯಲ್ಲಿ ಆಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಭೋಜ್ಪುರದ ಭೋಜೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು. ಭೋಜನಿಂದ ಬರೆಯಲ್ಪಟ್ಟ "ಯೋಗಸೂತ್ರವೃತ್ತಿ"ಯಲ್ಲಿ "ಶ್ರೀ ರಣರಂಗಮಲ್ಲ ನೃಪತೇಃ " ಎಂದಿರುವುದು ಈತನ ಬಿರುದುಗಳಲ್ಲಿ ಒಂದು.
ಭೋಜನು ಕ್ರಿ. ಶ. ೧೦೪೨ರಲ್ಲಿ "ರಾಜ ಮೃಗಾಂಕ" ಎನ್ನುವ ಖಗೋಲಶಾಸ್ತ್ರ ಗ್ರಂಥವನ್ನು ಬರೆದುದಾಗಿ ಅದರ ಪ್ರಾರಂಭಶ್ಲೋಕದಿಂದ ತಿಳಿದು ಬರುತ್ತದೆ. 
ಬಲ್ಲಾಳ ಸೇನನ "ಭೋಜ ಪ್ರಬಂಧ" ದಲ್ಲಿ ಸಿಂಧುಲನು ಭೋಜನ ತಂದೆಯಾಗಿರದೇ ಅಣ್ಣನಾಗಿದ್ದು ಅವನು ಸಾಯುವ ಸಮಯದಲ್ಲಿ ತಮ್ಮನಾದ ಮುಂಜನ ವಶಕ್ಕೆ ಚಿಕ್ಕವನಾದ ಭೋಜನನ್ನು ಒಪ್ಪಿಸಿ ರಕ್ಷಿಸ ತಕ್ಕದೆಂದು ಹೇಳಲಾಗಿದೆ. ಆದರೆ ಭೋಜನ ಆಡಳಿತದ ಆರಂಭಿಕ ಸಮಯವೇ ಗೊಂದಲವಾಗಿದ್ದು ಅದು ಭೋಜ ಪ್ರಬಂಧವನ್ನು ಇತಿಹಾಸದಿಂದ ಬೇರ್ಪಡಿಸಿ ಅದೊಂದು ಪ್ರಬಂಧವಷ್ಟೇ ಅನ್ನುವುದು ತಿಳಿದು ಬರುತ್ತದೆ.
ಭೋಜನು ಜ್ಯೋತಿಷ್ಯ, ಶಿಲ್ಪ ಶಾಸ್ತ್ರ , ಮತ್ತು ಕಾವ್ಯಗಳ ಕುರಿತಾಗಿ ಅನೇಕ ಗ್ರಂಥ ಬರೆದ ಕುರಿತು ತಿಳಿದು ಬರುತ್ತದೆ. ಶಾಸನಗಳಿಂದ ತಿಳಿದು ಬರುವ ಅನೇಕ ಗ್ರಂಥಗಳು ಈಗ ಉಪಲಬ್ದವಿರುವುದಿಲ್ಲ. 


ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಮಾಪಾತ ಮಾತ್ರ ಮಧುರೋವಿಷಯೋಪಭೋಗಃ |
ಪ್ರಾಣಸ್ತೃಣಾಗ್ರ ಜಲಬಿಂದು ಸಮಾನರಾಣಾಂ ಧರ್ಮಸ್ಸಖಾಪರಮಹೋ ಪರಲೋಕಯಾನೇ ||
ಈ ಅರಸುತನವು (ರಾಜಭೋಗ) ಧೋ ಎಂದು ಬೀಸುವ ಗಾಳಿಗೆ ಸಿಲುಕಿದ ಮೋಡಗಳ ಮಾಲೆಯಂತೆ ಕ್ಷಣಾರ್ಧದಲ್ಲಿ ಬಿದ್ದು ಕರಗಿ ಹೋಗಬಹುದು. (ಪ್ರಭುತ್ವವು ಅಸ್ಥಿರವಾದುದು). ಇಂದ್ರಿಯ ಸುಖಗಳು ಆ ಕ್ಷಣಕ್ಕೆ ರುಚಿಸತಕ್ಕವು. ನಮ್ಮ ದೇಹದಲ್ಲಿರುವ ಪ್ರಾಣವು ನೀರಿನ ಮೇಲಿರುವ ಗುಳ್ಳೆಯಂತೆ ಕ್ಷಣಿಕ. ಮೋಕ್ಷದ ಆಕಾಂಕ್ಷಿಗಳಾದ ಸಾಧಕರಿಗೆ ಪರಲೋಕದ ಸಾಧನೆಗೆ ಹೊರಟಿರುವವರಿಗೆ ಧರ್ಮವೇ ಸರ್ವಸ್ವ ಎನ್ನುವುದಾಗಿ ತನ್ನ ದಾನ ಶಾಸನ ಒಂದರಲ್ಲಿ ಹೇಳಿಕೊಂಡಿದ್ದಾನೆ. ಇವತ್ತಿಗೂ ಸಹ ಭೋಜ ಸಾಹಿತ್ಯಾಸಕ್ತರಿಗೆ ಸಾಹಿತಿಯಾಗಿ. ಶಾಸನ ಅಧ್ಯಯನ ಮಾಡುವವರಿಗೆ ವಿಸ್ಮಯ ಮತ್ತು ಬಲವಾನ್ ರಾಜನಾಗಿ ಕಂಗೊಳಿಸುತ್ತಾನೆ.  

No comments:

Post a Comment