Search This Blog

Thursday 11 May 2017

ಪರಮಹಂಸಾನುಷ್ಟಾನ ಭವನ ನಾಗಾವಿಯ ಮದುಸೂಧನ ದೇವಾಲಯ.

ಚಾಳುಕ್ಯ ಆಹವಮಲ್ಲನ ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ - ಪರಮಹಂಸಾನುಷ್ಟಾನ ಭವನ ನಾಗಾವಿಯ ಮದುಸೂಧನ ದೇವಾಲಯ.
ರಾಷ್ಟ್ರಕೂಟ ನಾಲ್ಕನೆಯ ಗೋವಿಂದನ ಕಳಸ, ಶಿಗ್ಗಾವಿ ಶಾಸನ ೯೩೦ರಲ್ಲಿ ಬರೆಸಿದ್ದರಲ್ಲಿ ಸಮುದ್ರದಿಂದಾವೃತವಾದ ಸುಂದರವಾದ ಪವಿತ್ರವಾದ ಭೂ ಮಂಡಲದಲ್ಲಿ ಮೆರೆಯುತ್ತಿರುವ ಅಗ್ರಹಾರವು ಕಾಡಿಯೂರಿನಲ್ಲಿತ್ತು. ಇನ್ನೂರು ಜನರು ವಿದ್ಯಾಭ್ಯಾಸವನ್ನು ಅಲ್ಲಿ ಮಾಡುತ್ತಿದ್ದರು, ಹೀಗೇ ವಿದ್ಯಾ ಕೇಂದ್ರವಾಗಿತ್ತು ಎನ್ನುವುದಾಗಿ ತನ್ನ ರಾಜ್ಯವನ್ನು ವರ್ಣಿಸಿದ್ದಾನೆ. ವ್ಯಾಕರಣ, ಅರ್ಥಶಾಸ್ತ್ರ, ಸಾಹಿತ್ಯವಿದ್ಯೆ, ಇತಿಹಾಸ, ಇನ್ನುಳಿದ ಏಕಾಕ್ಷರ ಟೀಕೆ ಮುಂತಾದ ವಿದ್ಯೆ ಇವುಗಳೆಲ್ಲವನ್ನು ಸಮಗ್ರವಾಗಿ ಅಭ್ಯಸಿಸುತ್ತಿದ್ದರು ಎನ್ನುವುದಾಗಿ ವಿದ್ಯಾದಾನವನ್ನು ಪ್ರಶಂಸಿಸಿಕೊಳ್ಳುವುದನ್ನು ಕೆಳಗಿನ ಶಾಸನ ನುಡಿ ತಿಳಿಸುತ್ತದೆ.
ಶರಧಿವ್ಯಾವೇಷ್ಟಿತೋರ್ವ್ವೀತಳದೊಳೆಸೆಯುತೀರ್ಪ್ಪಗ್ರಹಾರಂಗಳಂ ಧಿ
ಕ್ಕರಿಸಲ್ಸಾದತ್ತು ನಾನಾಫಳವಿಳಸನದಿಂ ಕಾಡಿಯೂರಲ್ಲಿಯಿರ್ಣ್ಣೂ
ರ್ವ್ವರ ವಿದ್ಯಾಭ್ಯಾಸಮಿರ್ಣ್ಣೂರ್ವ್ವರ ವಿಧಿಲಸದಾಚಾರ ಸಮ್ಪತ್ತಿ ಯಿರ್ಣ್ಣೂ
ರ್ವ್ವರ ದಾನೋದಾರಿಯಿರ್ಣ್ಣೂರ್ವ್ವರ ವಿಮಳಯಶಃಶ್ರೀ ವಿಚಿತ್ರಂ ಪವಿತ್ರ ||
ನಾಗಾವಿ - ನಾಗವಾವಿ :
ಇದು ಗದಗ ಜಿಲ್ಲೆಯ ನಾಗಾವಿ ಹಿಂದೆ ನಾಗವಾವಿ ಎಂದು ಕರೆಸಿಕೊಳ್ಳುತ್ತಿತ್ತು. ಚಾಳುಕ್ಯ ಆಹವಮಲ್ಲನ ೧೦೫೮ನೇ ಇಸವಿಯ ಆಸುಪಾಸಿನ ಕಾಲದಲ್ಲಿ ಅದೊಂದು ಪ್ರಮುಖ ಅಗ್ರಹಾರವಾಗಿತ್ತು. ಅಲ್ಲಿಯ ತ್ರಿಪುರುಷರ ದೇವಸ್ಥಾನ ಅತ್ಯಂತ ದೊಡ್ಡ ಘಟಿಕಾಸ್ಥಾನವಾಗಿತ್ತು. ಇನ್ನೂರು ವೇದ ವಿದ್ಯಾರ್ಥಿಗಳು, ಐವತ್ತು ಶಾಸ್ತ್ರ ವಿದ್ಯಾರ್ಥಿಗಳು, ಇಲ್ಲಿ ಓದುತ್ತಿದ್ದರು. ಸರಸ್ವತೀ ಗ್ರಂಥ ಭಂಡಾರ ಅಲ್ಲಿನ ಲೈಬ್ರರಿಯಾಗಿತ್ತು. ಇವೆಲ್ಲಾ ವಿದ್ಯೆಗಳನ್ನು ಬೋಧಿಸಲು ಒಂಬತ್ತು ಉಪಾಧ್ಯಾಯರುಗಳೂ ಆರು ಮಂದಿ ಭಂಡಾರಿಗಳೂ ಇದ್ದರು. ಇಂತಹ ವಿದ್ಯಾಕೇಂದ್ರವಾಗಿದ್ದ ನಾಗಾವಿ ಸುಸಜ್ಜಿತವಾದ ಅಗ್ರಹಾರವಾಗಿತ್ತು ಎನ್ನುವುದು ಅತಿಶಯವಲ್ಲ. ಇಲ್ಲಿನ ಗುರುವರ್ಗ ಮತ್ತು ಶಿಷ್ಯವರ್ಗದ ಊಟೋಪಚಾರ ಮತ್ತು ವಸತಿಗಾಗಿ ಒಂದು ಸಾವಿರ ಮತ್ತರು ಭೂಮಿಯ ಉಂಬಳಿ ಮೀಸಲಾಗಿತ್ತು.
ಅಗ್ರಹಾರ : "ನಿಜಗುಣೋಪಾರ್ಜ್ಜಿತ ಯಶೋಲತಾವಿಶಾಲಕಂದಮುಮಂ" ಅಖಿಳ ಜಗತೀತಳಕ್ಕೆ ಮಾಡಿ ತೋರುವಂತೆ ಕಟಕ ಕಮಳಾರ್ಕ್ಕವೆಸರ ತ್ರೈಪುರುಷ ದೇವರ ಶಾಲೆಯುಮಂ ಜಗತ್ತಿಗೆ ಎದ್ದು ತೋರುತ್ತಿರುವಂತಹ ತ್ರೈಪುರುಷದೇವಾಲಯವಿತ್ತು ಎಂದೂ, ನಿಜಾಭಿದಾನಾಭಿ ರಂಜಿತಮಪ್ಪ ಮಧುಸೂದನಾಲಯಮುಮಂ ಎಂದು ಮಧುಸೂದನಾಲಯ ಎನ್ನುವ ವಿದ್ಯಾಕೇಂದ್ರವಿತ್ತು ಎನ್ನುವುದಾಗಿ ಶಾಸನದಲ್ಲಿ ವರ್ಣಿತವಾಗಿದೆ. ಘಟಿಕಾ ಸ್ಥಾನದಲ್ಲಿ ಉಪಾಧ್ಯಾಯರು, ಶಾಸ್ತ್ರಾಧ್ಯಾಯಿಗಳು, ವೇದಾಧ್ಯಾಯಿಗಳು, ಭಟ್ಟದರ್ಶನ, ನ್ಯಾಸ, ಪ್ರಭಾಕರ ವ್ಯಾಖ್ಯಾತೃಗಳು ಇವರಿಗೆಲ್ಲ ಉಂಬಳಿಯನ್ನು ಬಿಟ್ತ ಬಗ್ಗೆ ದಾಖಲೆಯನ್ನು ಕೊಡುತ್ತಾ " ಸಾಲೆಯ ಸರಸ್ವತೀ ಭಂಡಾರಿಗರಾರ್ವ್ವರ್ಗಮನ್ತು" ಎಂದು ಆ ಕಾಲದಲ್ಲಿ ಘಟಿಕಾ ಸ್ಥಾನದಲ್ಲಿದ್ದ ವಾಚನಾಲಯದಲ್ಲಿದ್ದ ಸೇವಕರು ಆರುಜನರಿಗೆ ಮತ್ತು " ಮಾಣಸರ ಅಸನಾಚ್ಚಾದನಕ್ಕಂ" ಎಂದು ಊಟ ವಸತಿಗಳನ್ನು ನಿರ್ದೇಶಿಸಲಾಗಿದೆ.
ಮಹಾಮಾಣಿಕ ಮದುಸೂಧನ ದೇವಾಲಯ : ಕ್ರಿ. ಶ ೧೦೬೮ ಮತ್ತು ೧೦೮೫ ರ ಚಾಳುಕ್ಯ ಆಹವಮಲ್ಲ ಮತ್ತು ೬ನೇ ವಿಕ್ರಮಾದಿತ್ಯನ ಕಾಲದಲ್ಲಿ ಘಟಿಕಾಸ್ಥಾನ (ಮಧುಸೂದನ) ನಾಟ್ಯಶಾಲೆಯೂ ಇದ್ದ ಬಗ್ಗೆ " ನಾಟ್ಯಶಾಳಾಳಂಕೃತಮುಂ" ಎನ್ನುವುದಾಗಿ ಹೇಳಿಕೊಂಡಿದ್ದರೆ ಮುಂದೆ ಮಹಾಮಾಣಿಕ ಮದುಸೂಧನ ದೇವಾಲಯವನ್ನು ನಿರ್ಮಿಸಿ ಅದರಲ್ಲಿ "ಶುಂಭಚ್ಛಾಕುಂಬ ವೈನತೇಯ ಸ್ತಂಭಮುಮಮರರಾಜದ್ವಿಮಾನಾನುಕಾರಿಯಪ್ಪ ಮೂರು ನೆಲೆಯ ಬಾಗಿಲ್ವಾಡಮುಂ - "ಏಕದಂಡಿ" - "ತ್ರಿದಣ್ಡಿ" - ಸ್ನಾತಕ ಬ್ರಹ್ಮಚಾರಿ, ಹಂಸ - ಪರಮಹಂಸಾನುಷ್ಟಾನ ಭವನಮುಂ" ಹೀಗೆ ಆರ್ಷ ಧರ್ಮ ಪ್ರತಿಪಾದಕನಾಗಿದ್ದು, ಅನುಷ್ಠಾನ ನಿರತರಿಗೆ ಪ್ರತ್ಯೇಕ ಆಲಯವನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾನೆ. ನಾಲ್ಕು ವೇದಗಳು ಮತ್ತು ಶಾಖೆಗಳ ಅಧ್ಯಯನಕ್ಕೆ "ಪಠನಮಠವಿರಾಜಿತಮುಮುತ್ತುಂಗತೋರಣ ಪ್ರಾಸಾದ" ಎಂದು ವಿದ್ಯಾಕಾಂಕ್ಷಿಗಳಿಗೆ ತವರುಮನೆಯಂತೆ ಇದ್ದಿತ್ತು ಹಾಗೂ ವಿದ್ವತ್ತಿಗೆ ತಕ್ಕ ಮಾನ್ಯತೆಯೂ ಇತ್ತು ಎನ್ನುವುದಾಗಿ ತಿಳಿದು ಬರುತ್ತದೆ.

No comments:

Post a Comment