Search This Blog

Sunday 28 May 2017

ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ದಿನೇ ದಿನೇ - ಮರಣದ ದುಃಖವು ಕ್ಷಣಿಕವಾದದ್ದು ಮಾನವಂತರ ಮಾನಭಂಗವು ದಿನ ದಿನವೂ ಮರಣದ ದುಃಖವನ್ನು ಕೊಡುತ್ತದೆ.

ಕಪ್ಪೆ ಅರಭಟ್ಟನನ್ನು ಕನ್ನಡದ ದೇಸೀ ಛಂದಸ್ಸಾದ ತ್ರಿಪದಿಯಲ್ಲಿ ಬಣ್ಣಿಸಿದ ಶಾಸನ ಇದು. ಕನ್ನಡದ ಮೊತ್ತಮೊದಲ ತ್ರಿಪದಿ ಸಾಹಿತ್ಯವನ್ನು ಕೊಟ್ಟ ಈ ಶಾಸನ, ಸಾಹಿತಿಗಳಿಗೆ ಸಾಹಿತ್ಯವನ್ನು ಹಾಗೂ ಜಿಜ್ಞಾಸುಗಳಿಗೆ ವಿಷಯವನ್ನು ಕೊಡುತ್ತದೆ. ಈ ತ್ರಿಪದಿಯನ್ನು ಗಮನಿಸಿದರೆ ಇದಕ್ಕೂ ಅಂದರೆ ಕ್ರಿ ಶ ೮ನೇ ಶತಮಾನಕ್ಕೂ ಮೊದಲೇ ತ್ರಿಪದಿ ಛಂದಸ್ಸು ರೂಪು ಪಡೆದಾಗಿತ್ತು ಅನ್ನಿಸುತ್ತದೆ. ಈ ಶಾಸನದಲ್ಲಿ ಎಲ್ಲಿಯೂ ಪ್ರಥಮಾ ವಿಭಕ್ತಿಯ ರೂಪಗಳು ವ್ಯತ್ಯಾಸವಾಗದೇ "ಕೆಟ್ಟರ್" "ಸತ್ತರ್" ಇಂತಹ ರೂಪಗಳೇ ಕಂಡು ಬರುತ್ತವೆ. "ಪ್ರಿಯನ್" "ಭಟ್ಟನ್" ಮುಂತಾದ ಷಷ್ಟೀ ವಿಭಕ್ತಿ ಪ್ರಯೋಗವು ಕೂಡ ಅದೇ ರೀತಿಯಾಗಿ ಇವೆ. ಈ ಶಾಸನದ ಅರ್ಥವನ್ನು ಗಮನಿಸಿದರೆ
ಕಪ್ಪೆ ಅರಭಟನು ಶಿಷ್ಟಜನರಿಗೆ(ಸಜ್ಜನರಿಗೆ) ಪ್ರೀತಿಪಾತ್ರನು, ದುರ್ಜನರಿಂದ ದೂರವಿರುವವನು. ಗುಣಗಳಲ್ಲಿ ಆತ ಮಹಾ ಶೂರ (ಕಲಿ) ಮತ್ತು ಕಲಿಯುಗದ ಗುಣಧರ್ಮಕ್ಕೆ ಅತೀತನಾಗಿರವವನು. ವಿಶೇಷ ತೇಜಸುಳ್ಳವರ ಪಾಲಿಗೆ ಮರಣ ಅನ್ನುವುದು ಮರಣವೇ ಅಲ್ಲ. ಮಾನವಂತರನ್ನು ಕೊಲ್ಲಲಾಗದು. ಮರಣದಿಂದ ಬರುವ ದುಃಖ ತಾತ್ಕಾಲಿಕವಾದುದು, ಆದರೆ ಅಪಮಾನದ ವಿಷವು ದಿನವೂ ಕೊಲ್ಲುತ್ತದೆ. ಈತನು ಸಾಧುಜನರಿಗೆ (ಸಾತ್ವಿಕ) ಒಳಿತನ್ನೇ ಮಾಡುತ್ತಾನೆ. ಎದುರಿಸಿ ನಿಂತ ಶತ್ರುಗಳ ಪಾಲಿಗೆ ಯಮ ಭಯಂಕರನು. ಈತನೇ ಸಾಕ್ಷಾತ್ ಮಾಧವನು (ಶ್ರೀವಿಷ್ಣುವು), ಬೇರೆಯಲ್ಲ. ಒಳಿತನ್ನೇ ಮಾಡುವವರ ಪಾಲಿಗೆ ಒಳ್ಳೆಯವನು. ಕಪ್ಪೆ ಅರಭಟನನ್ನು ಬಂಧನದಲ್ಲಿರುವ ಸಿಂಹವೆಂದು, ಅದೇನು ಮಾಡಬಹುದು ಎಂದು ಉಪೇಕ್ಷಿಸಿದರೆ, ಅವರು ಬಂಧವನ್ನು ಕಳಚಿಕೊಂಡು ಬಂದ ಸಿಂಹವನ್ನೇ ಎದುರಿಸಬೇಕಾಗುತ್ತದೆ. ಆ ವೀರನ ಮುಂದೆ ಎದುರಾಳಿಯು ಸತ್ತಂತೆಯೇ. ಕೆಟ್ಟವರು ಮತ್ತು ಸತ್ತವರು ಎಂಬ ವಿಚಾರವನ್ನು ಕೂಡಾ ಪರಿಗಣಿಸದಂತೆ ಮಾಡಬಲ್ಲವನು. ಹೀಗೆ ಈ ಶಾಸನದಲ್ಲಿ ಜನ್ಮ ಜನ್ಮಾಂತರದ ಕರ್ಮ ಬಂಧಗಳನ್ನೂ ಸಾರುತ್ತಾ ಜನರನ್ನು ಜಿಜ್ಞಾಸೆಗೆ ಹಚ್ಚುತ್ತದೆ.
ಬಾಗಲಕೋಟೆ ಜಿಲ್ಲೆ ಬಾದಾಮಿಯ ತಟ್ಟುಕೋಟೆಯ ಮಾರುತಿ ದೇವಾಲಯಕ್ಕೆ ಹೊಗುವ ದಾರಿಯಲ್ಲಿ ಎಡಬದಿಯ ಬೃಹತ್ ಬಂಡೆಯ ಮೇಲೆ ಇರುವ ಈ ಶಾಸನ ಬಾದಾಮಿಯಲ್ಲಿರುವ ಗಮನಾರ್ಹ ಶಾಸನಗಳಲ್ಲೊಂದು. ಇದರ ಕಾಲಮಾನ ಸು.8ನೇ ಶತಮಾನ.
1. ಕಪ್ಪೆ ಅರಭಟ್ಟನ್ ಶಿಷ್ಟಜನ ಪ್ರಿಯನ್
2. ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್
3. ವರನ್ತೇಜಸ್ವಿನೋ ಮೃತ್ತ್ಯುರ್ನತು ಮಾನಾವಖಣ್ಡನಮ್
4. ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್ದಿನೇ ದಿನೇ
5. ಸಾಧುಗೆ ಸಾಧು ಮಾಧೂರ್ಯಂನ್ಗೆ ಮಾಧೂರ್ಯ್ಯಂ ಬಾಧಿಪ್ಪ
6. ಕಲಿಗೆ ಕಲಿಯುಗ ವಿಪರೀತನ್ಮಾಧವನೀತನ್ಪೆರನಲ್ಲ
7. ಒಳಿತ್ತ ಕೆಯ್ವೊರಾರ್ಪೊಲ್ಲದು ಮದರನ್ತೆ ಬಲ್ಲಿತ್ತು ಕಲಿಗೆ
8. ವಿಪರೀತಾ ಪುರಾಕೃತಮಿಲ್ಲಿ ಸನ್ಧಿಕ್ಕುಮದು ಬಂದು
9. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆನ್ದು ಬಿಟ್ಟವೋಲ್ಕಲಿಗೆ ವಿ

10. [ಪ]ರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಮ್




No comments:

Post a Comment