Search This Blog

Wednesday 31 May 2017

ಉಚ್ಚಂಗಿ -ಉಚ್ಚೃಂಗಿ - ಉತ್ ಶೃಂಗಿ - ಉಚ್ಚಶೃಂಗಿ


ಇದು ಹರಪನಹಳ್ಳಿ ತಾಲೂಕಿನ(*ಬಳ್ಳಾರಿ ಜಿಲ್ಲೆ ಎಂದು ಎಸ್ ಐ ಐ ನಲ್ಲಿದೆ) ಉಚ್ಚಂಗಿ ದುರ್ಗ. ಚಾಳುಕ್ಯ ಒಂದನೇ ಸೋಮೇಶ್ವರನ ೧೦೬೪ನೆಯ ಇಸವಿಯ ಶಾಸನ. ಉಚ್ಚಂಗಿಯ ತಾವಕೇಶ್ವರ ಸ್ವಾಮಿ ದೇವಾಲಯದಲ್ಲಿರುವ ಕಲ್ಲಿನ ಶಾಸನ.

ಕದಂಬಾವಾಡಿ ನಾಡ ಮಧ್ಯದೊಳ್ಮೇರುವಿಪ್ಪಂತಿಳ್ದುದುಚ್ಚಂಗಿಯ ಪರ್ವ್ವತಂ ಅದಕ್ಕೆ ನಾಲ್ಕು ನಾಮವದೆಂ
ತೆಂದೊಡೆ ಕೃತಯುಗದೊಳು ಮೇ[ಘನಾ]ದನೆಂಬ ರಾಕ್ಷಸ ನಿವಾಸಮಪ್ಪುದರಿಂ ಮೇಘನಾ
ದವೆಂಬುದು ತ್ರೇತೆಯೊಳ್ ಹಿರಣ್ಯಕನಿವಾಸ ಮಾತನ ನಾರಾಯಣಂ ವಧೆಗೆಯ್ದಂದಿನೊಸ
ಗೆಯೊಳ್ ಸ್ವರ್ಣ್ನ ವ್ರಿಷ್ಟಿ ಕರೆದುದರಿಂ ವೀರ ಕನಕಗಿರಿಯೆಂಬುದು ದ್ವಾಪರದೊಳುತ್ತುಂಗ ಮ
ಹರಿಷಿ ಆಶ್ರಮಮಪ್ಪುದರಿಂ ಉತ್ತುಂಗಪರ್ವ್ವತಮೆಂಬುದು ಕಲಿಯುಗದೊಳ್ ಉಚ್ಚಂಗಿಯ
ಬ್ಬೆಯೆಂಬಳು ಮೊದಲಾಗಿ ಮೂವರು ಬ್ರಾಹ್ಮಣ ಕನ್ನಿಕೆಯರು ತಪಂ ಗೆಯ್ದೀಶ್ವರವರ
ಪ್ರಸಾದದಿಂ ದೇವತ್ವಮಂ ಪಡೆದರ್ದರಿಂದುಚ್ಚಂಗಿಯಾ ಪರ್ವ್ವತಮೆಂಬುದು (೨೧ ನೇ ಸಾಲಿನಿಂದ ೨೬ನೇ ಸಾಲಿನ ವರೆಗೆ)
ಇದೊಂದು ಗದ್ಯ ಶಾಸನ ಉಚ್ಚಂಗಿಯ ಪರಿಸರದ ಚಿತ್ರಣವನ್ನು ನೀಡಲಾಗಿದೆ. ಉಚ್ಚಂಗಿಯ ಪರ್ವತಕ್ಕೆ ನಾಲ್ಕು ಯುಗಗಳಲ್ಲಿ ನಾಲ್ಕು ಹೆಸರುಗಳು ಹೇಗೆ ಉಂಟಾದವು ಎನ್ನುವುದಕ್ಕೆ ಆಯಾಯ ಯುಗದ ಉದಾಹರಣೆಯೊಂದಿಗೆ ವಿವರಿಸಲಾಗಿದೆ. ಕೃತಯುಗದಲ್ಲಿ ಮೇಘನಾದನೆನ್ನುವ ರಾಕ್ಷಸನಿದ್ದುದರಿಂದ ಮೇಘನಾದ ಎಂದು ಹೆಸರಾಗಿತ್ತು. ತ್ರೇತಾಯುಗದಲ್ಲಿ ಹಿರಣ್ಯಕ ನೆನ್ನುವವನಿದ್ದ ಅವನನ್ನು ಶ್ರೀಹರಿ ಕೊಂದುದರಿಂದ ಮತ್ತು ಆಮೇಲೆ ಸ್ವರ್ಣ ವೃಷ್ಟಿ ಆಗಿದ್ದರಿಂದ ಕನಕಗಿರಿ ಎಂದು ಹೆಸರಾಗಿತ್ತು. ದ್ವಾಪರದಲ್ಲಿ ಉತ್ತುಂಗನೆನ್ನುವ ಮಹರ್ಷಿ ಇಲ್ಲಿ ಆಶ್ರಮ ಕಟ್ಟಿಕೊಂಡು ತಪಸ್ಸನಾಚರಿಸಿದ್ದರಿಂದ ಉತ್ತುಂಗ ಪರ್ವತ ಎಂದೂ ಹಾಗೂ ಕಲಿಯುಗದಲ್ಲಿ ಉಚ್ಚಂಗಿಯೇ ಮೊದಲಾದ ಮೂವರು ಬ್ರಾಹ್ಮಣ ಕನ್ಯೆಯರು ಶಿವನನ್ನು ತಪಸ್ಸಿನಲ್ಲಿ ಮೆಚ್ಚಿಸಿಕೊಂಡು ದೇವತ್ವವನ್ನು ಪಡೆದುದರಿಂದ ಉಚ್ಚಂಗಿ ಪರ್ವತ ಎಂದು ಹೆಸರಾಯಿತು ಎನ್ನುವ ವರ್ಣನೆ ಇದೆ.
ಹಿಡಿಂಬವನ ಅಥವಾ ಹಿಡಿಂಬೇಶ್ವರ

ಆ ಪರ್ವ್ವತದ ಮೂಡಣ ದೆಸೆಯೊಳು ಹಿಡಿಂಬವನಮಾ ಬನದೊಳಗೆ ಸ್ವಯಂಭು ಕಲಿದೇವಸ್ವಾಮಿ ಎಂಬುದು . . . ಹೀಗೆ ಈ ಶಾಸನ ಮುಂದುವರೆಯುತ್ತದೆ. ಈ ಉಚ್ಚಂಗಿ ಪರ್ವತದ ಪೂರ್ವದಿಕ್ಕಿನಲ್ಲಿ "ಸ್ವಯಂಭೂ ಕಲಿದೇವಸ್ವಾಮಿಗೆ" ಹಿಡಿಂಬೆಯು ದೇವಾಲಯವನ್ನು ನಿರ್ಮಿಸಿದುದರಿಂದ "ಹಿಡಿಂಬೇಶ್ವರ" ಎಂದೂ ಆ ಲಿಂಗವು ಚಂದ್ರ ಕಳೆಯಂತೆ ಬೆಳೆಯುತ್ತಿದ್ದುದರಿಂದ ಕಳಸೇಶ್ವರ - ಅಮೃತಲಿಂಗ ಎಂದು ಹೆಸರಾಯಿತು. ದಣ್ಡನಾಯಕ ದೇವಪ್ಪಯ್ಯನು ಈ ಉಚ್ಚಂಗಿ ೩೦ ನ್ನು ಆಳುತ್ತಿದ್ದಾಗ ಇದಕ್ಕೆ ಅಧಿಷ್ಠಾನ ಮಂಟಪ ಮಠ ಬಾವಿಗಳನ್ನು ತೋಡಿಸಿದ ಬಗ್ಗೆ ಉಲ್ಲೇಕ ಇದೆ. ಈ ಶಾಸನದ ವ್ಯಾಕರಣ ಅಂಶವನ್ನು ಗಮನಿಸಿದರೆ ಉತ್ತುಂಗ ಎನ್ನುವುದೇ ಕನ್ನಡದಲ್ಲಿ ಉಚ್ಚಂಗಿಯಾಗಿದ್ದು ತಿಳಿದು ಬರುತ್ತದೆ. ಆಮೇಲೆ ಉಚ್ಛೃಂಗಿ ಅಂದರೆ ಉತ್ + ಶೃಂಗಿ ಯೇ ಉಚ್ಚಶೃಂಗಿಯಾಗಿ ಉಚ್ಚಂಗಿಯಾಗಿದ್ದು ತತ್ಸಮ - ತದ್ಭವ ರೂಪಗಳ ನಿದರ್ಶನ ಸಿಗುತ್ತದೆ. 

No comments:

Post a Comment