Search This Blog

Monday 22 May 2017

ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ

"ಕವಿಗಳ್ಗಿದು ಕೆಯ್ಗನ್ನಡಿ
ಕವಿತೆಗೆ ಬಾಳ್ಮೊದಲುದಾತ್ತ ವಾಗ್ದೇವತೆಗು
ದ್ಭವಹೇತು ಕೋಶಗೃಹಮೆನೆ
ಭುವನದೊಳಿದು ಪರೆದುನಿಲ್ವುದೊಂದಚ್ಚರಿಯೇ " ಎಂದು
ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಉದ್ಗರಿಸಿರುವುದು ಕಾವ್ಯ ರಚನೆ ಮಾಡಬೇಕಿದ್ದರೆ ಕಾವ್ಯ ಸ್ವಾರಸ್ಯದ ಜೊತೆಗೆ ಕೋಶದಂತೆ ವ್ಯಾಕರಣವೂ ಕೂಡ ಅಷ್ಟೆ ಅವಶ್ಯ ಎಂದಿದ್ದಾನೆ. ಈತ ತನ್ನ ಕಾವ್ಯಾವಲೋಕನದ ಸಂಧಿ ಪ್ರಕರಣದ ಹತ್ತನೆಯ ಸೂತ್ರದಲ್ಲಿನ 49ನೇ ಪದ್ಯವನ್ನು ಕ್ರಿಸ್ತ ಶಕ 974 ರಲ್ಲಿನ ಗಂಗರಾಜ ಮಾರಸಿಂಹನ ಶ್ರವಣಬೆಳಗೊಳದ ಕೂಗೆ ಬ್ರಹ್ಮದೇವರ ಕಂಬದ ಮೇಲಿರುವ 113 ಸಾಲುಗಳುಳ್ಳ ಶಾಸನದಲ್ಲಿ 83 ನೇ ಸಾಲಿನಿಂದ ಕನ್ನಡ ಆರಂಭವಾಗುತ್ತದೆ ಅಲ್ಲಿನ 97 ಮತ್ತು 98 ನೇ ಸಾಲನ್ನು ಶಾಸನದಿಂದ ಆಯ್ದುಕೊಂಡಿರುವುದು. ಶಾಸನದಲ್ಲಿನ ಕಾವ್ಯಾತ್ಮಕ ಗುಣವನ್ನು ಎತ್ತಿ ತೋರಿಸುತ್ತದೆ.

"ನುಡಿದನೆ ಕಾವುದನೇ ಎ(ನೆ)ರ್ದೆ
ಗೆಡದಿರು ಜವನಿಟ್ಟು ರಕ್ಕೆ ನಿನಗೀವುದನೇಂ
ನುಡಿದನೆ ಏ! ಅದು ಕೆಯ್ಯದು(ಮೇಣ್)
ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ" ಎನ್ನುವುದನ್ನು ನಾಗವರ್ಮ ಆಯ್ದುಕೊಂಡಿದ್ದಾನೆ.
ಅದೇರೀತಿ ಕೇಶಿರಾಜನು ಸಹ ಸಂಧಿ ಪ್ರಕರಣದ ಸೂತ್ರ 58 ರಲ್ಲಿ ಸಂಧಿಯ ಅಭಾವ ಸ್ಥಳದ ಅವಧಾರಣೆಗೆ ಇದೇ ಸಾಲುಗಳನ್ನು ಬಳಸಿಕೊಂಡಿರುವುದು ವ್ಯಾಕರಣದ ದೃಷ್ಟಿಯಿಂದ ಅತ್ಯಂತ ಮಹತ್ವದ ಶಾಸನ ಎನ್ನಿಸುತ್ತದೆ.

95. ಕಾಳನೊ ರಾವಣನೋ ಶಿಶುಪಾಳನೊ ತಾನೆನಿಸಿ ನೆಗಳ್ದ ನರಗನ ತಲೆ
96. ತನ್ನಾಳಾಳ ಕಯ್ಗೆ ವನ್ದುದು ಹೇಳಾಸಾಧ್ಯದೊಳೆ ಗಂಗಚೂಡಾಮಣಿಯಾ
97. ನುಡಿದನೆ ಕಾವುದನೇ ಎರ್ದೆಗೆಡದಿರು ಜವನಿಟ್ಟ ರಕ್ಕೆ ನಿನಗೀವುದನೇಂನು
98. ಡಿದನೆ ಏ ಅದು ಕೆಯ್ಯದು ನುಡಿದುದು ತಪ್ಪುಗುಮೆ ಗಂಗಚೂಡಾಮಣಿಯಾ

No comments:

Post a Comment