Search This Blog

Sunday 14 May 2017

ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರ - ಚಾಳುಕ್ಯರ ಆರನೇ ವಿಕ್ರಮಾದಿತ್ಯ

ಬನವಾಸಿ ಕದಂಬರಕಾಲ, ಆಗಿನ್ನು ಕನ್ನಡದ ಲಿಪಿ ತನ್ನ ಖಾತೆ ತೆರೆಯುತ್ತಿದ್ದ ಕಾಲವದು, ಬ್ರಾಹ್ಮಿಯಿಂದ ಕಳಚಿದ ಕೊಂಡಿ ಕನ್ನಡವಾಗಿ ಗುರುತಿಸಿಕೊಂಡು ತನ್ನದೇ ಸ್ವತಂತ್ರ ಇತಿಹಾಸವನ್ನು ನಿರ್ಮಿಸಿದ ಕಾಲದಲ್ಲಿ ಕುಬ್ಜನೆನ್ನುವ ಮೇರು ಕವಿಯೊಬ್ಬ ಸಂಪದ್ಭರಿತ ಸಾಹಿತ್ಯದ ರುಚಿಯನ್ನು ಉಣಿಸುತ್ತಿದ್ದ, ಅದೇ ಕಾಲ ಅಥಾ ತುಸು ಹಿಂದು ಮುಂದಕ್ಕೆ ಗುಡ್ನಾಪುರದ ಶಾಸನ ಕವಿಯಿಂದ ಇನ್ನೊಂದು ಸಾಹಿತ್ಯದ ಕೊಡುಗೆ ಬಿಟ್ಟರೆ ಆಮೇಲೆ ಚಾಳುಕ್ಯರ ಕಾಲದಲ್ಲಿನ ಎರಡನೇ ಪುಲಕೇಶಿಯ ಕಾಲದಲ್ಲಿ ಸುಮಾರು ೬೩೪ ನೇ ಇಸವಿಯಲ್ಲಿ ರವಿಕೀರ್ತಿ ಎನ್ನುವ ಆಸ್ಥಾನ ಕವಿಯೊಬ್ಬ ಐಹೊಳೆಯ ಮೇಗುತಿಯಲ್ಲಿ ಸಾಹಿತ್ಯಾತ್ಮಕವಾದ ಶಿಲಾ ಫಲಕ ಖಂಡರಿಸಿ ತಾನು ಕಾಳಿದಾಸ ಭಾರವಿಯಂತಹ ಅತ್ಯಂತ ಶ್ರೇಷ್ಠ ಕವಿಗಳಿಗಿಂತ ಕಡಿಮೆಯವನಲ್ಲ ಎಂದು ಇತಿಹಾಸ ನಿರ್ಮಿಸುತ್ತಾನೆ. ಆದರೆ ಈಗ ನಾನು ಹೇಳ ಹೊರಡುವುದು ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿನ ಕ್ರಿ ಶ ೧೧೧೨ನೇ ಇಸವಿಯ ಚಾಲುಕ್ಯ ದೊರೆ ೬ನೆಯ ವಿಕ್ರಮಾದಿತ್ಯನ ಕುರಿತು.
ಅಚ್ಚ ಕನ್ನಡದ ಪರಿಶುದ್ಧ ಭಾಷೆ, ಆಲಂಕಾರಿಕ ಶೈಲಿಯಲ್ಲಿ ರಮಣೀಯ ವರ್ಣನೆಗಳು, ಹೀಗೆ ಪ್ರಬುದ್ಧ ಚಿಂತನೆಗ ಹಚ್ಚುವ ಕಾವ್ಯಾಸಕ್ತರಿಗೆ ಮತ್ತು ಸಾಹಿತ್ಯದ ಓದುಗರಿಗೆ ಅತ್ಯಂತ ಮಹತ್ವದ ಆಕರ ಎಂದೆನಿಸುವ ಈ ಶಾಸನದಲ್ಲಿ ಬೆಳ್ವಲ, ಇಟಗೆ ಮುಂತಾದುವುಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆ.
 
ಸೃಷ್ಟಿಕರ್ತನಿಂದ-ಭರತನ ತನಕ :
ಸ್ವಯಂಭು (ಬ್ರಹ್ಮ) ವಿಗೆ ಮಗನಾಗಿ ಸ್ವಾಯಂಭುವ ಹುಟ್ಟಿದ ಈ ಸ್ವಾಯಂಭುವನಿಗೆ ಮನುವು ಮಗನಾಗಿ ಜನಿಸಿದ, ಮನುವಿನ ಮಗ ಪ್ರಿಯವ್ರತ ರಾಜ, ಪ್ರಿಯವ್ರತ ರಾಜನಿಗೆ ಏಳುಜನ ಮಕ್ಕಳು" ಸಪ್ತ ದ್ವೀಪಮಂ ಪಚ್ಚುಕೊಟ್ಟ ನಿಳಾವಲ್ಲಭನಾ" ಏಳುಜನ ತನ್ನ ಮಕ್ಕಳಿಗೆ ಹಂಚಿಕೊಟ್ಟನು. ಅಂತಹ ಪ್ರಿಯವೃತನ ವಂಶದವನು ಎಂದು ಚಾಳುಕ್ಯ ವಿಕ್ರಮಾದಿತ್ಯನನ್ನು ಹೊಗಳಲಾಗಿದೆ.
"ಎನಿಸಿರ್ದ್ಧಂಬುರುಹ ಸ್ವಯಂಭುಗೆ ಸುತಂ ಸ್ವಾಯಂಭುವಂ ಪುಟ್ಟಿದಂ
ಮನುವಾತಂಗೆ ಮಗಂ ಪ್ರಿಯಬ್ರತ ನೃಪಂ ತತ್ಪುತ್ರರಗ್ನೀದ್ರಮು -
ಖ್ಯ ನರೇಂದ್ರೋತ್ತಮರೆರ್ವ್ವರಂ ತವರ್ಗ್ಗೆ ಸಪ್ತದ್ವೀಪಮಂ ಪಚ್ಚು ಕೊ-
ಟ್ಟನಿಳಾವಲ್ಲಭನಾ ಪ್ರಿಯಬ್ರತನುದಾತ್ತ ಕ್ಷಾತ್ರಗೋತ್ರೋತ್ತಮಂ || " ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೬ನೇ ಸಾಲಿನಿಂದ.

ಅಗ್ನೀದ್ರನಿಗೆ ಜಂಬೂದ್ವೀಪವೂ(ಲವಣ ಸಮುದ್ರಾವೃತ), ಮೇಧಾತಿಥಿಗೆ ಪ್ಲಕ್ಷದ್ವೀಪ(ಇಕ್ಷುರದ್ವೀಪಾವೃತ). ವಪುಷ್ಮಂತನಿಗೆ ಶಾಲ್ಮಲೀ ದ್ವೀಪ (ಸುರಾಸಮುದ್ರ). ಜ್ಯೋತಿಷ್ಮಂತನಿಗೆ ಕುಶದ್ವೀಪ. ರಾಜಚಕ್ರನೆಂದು ಖ್ಯಾತನಾದ ದ್ಯುತಿಮಂತನಿಗೆ ಕ್ರೌಂಚದ್ವೀಪ. ಹವ್ಯನನಿಗೆ ಶಾಕಾಂತದ್ವೀಪ. ಸವನನಿಗೆ ಪುಷ್ಕರದ್ವೀಪ. ಜಂಬೂದ್ವೀಪದ ಒಡೆಯನಾದ ಅಗ್ನೀಧ್ರನಿಗೆ ಒಂಭತ್ತು ಮಕ್ಕಳು ಅವರಲ್ಲಿ ನಾಭಿಯೇ ಮೊದಲಾದವರು. (ನಾಭಿಕ್ಷೇತ್ರ, ಕಿಂಪುರುಷವರ್ಷ, ಹರಿವರ್ಷ, ಇಳಾವೃತ....ಹೀಗೆಯೇ ಸಾಗುತ್ತದೆ.) ಇವರೆಲ್ಲಾ ಸೇರಿ ನವಖಂಡಗಳನ್ನು ಆಳಿದರು. ನಾಭಿಯ ಮಗ ಋ‌ಷಭನೂ ಆತನ ಮಗ ಭರತನೂ ಈ ಭರತಖಂಡವನ್ನು ಆಳಿದರು. ಇಂತಹ ಭರತಾದಿ ರಾಜರುಗಳಿಗಿಂತಲೂ ಬಹಳ ಅತ್ಯಂತ ಪ್ರಸಿದ್ಧನಾಗಿ ಈಗ ಚಕ್ರವರ್ತಿಯಾಗಿದ್ದಾನೆ ಎಂದು ಶ್ಲಾಘಿಸಲ್ಪಟ್ಟಿದೆ.
ಲವಣಾಂಭೋನಿಧಿ ಸುತ್ತಿರಲ್ಕೆಸೆವ ಜಂಭೂದ್ವೀಪವಗ್ನೀಧ್ರರಾ -
ಜ್ಯವಿಳಾಸಾಸ್ಪದ ವಿಕ್ಷುವೇಷ್ಟಿತ ವಿಶಾಳಪ್ಲಕ್ಷವಕ್ಷುಣ್ಣ ಸೌ -
ಷ್ಠವ ಮೇಧಾತಿದಿಪಾಳಿತಂ ಸುರೆಗಡಲ್ ಸುತ್ತಿರ್ಪ್ಪಿನಂ ನೋಡಲೊ -
ಪ್ಪುವುದಾ ಶಾಲ್ಮಲಿ ಸೋಷ್ಮಸಾಹಸವಪುಷ್ಮದ್ಭೂಭುಜಸ್ವೀಕೃತಂ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೭ನೇ ಸಾಲಿನಿಂದ.

ಚಂದ್ರವಂಶದ ಹಿರಿಮೆಯನ್ನು ಸಾರುತ್ತಾ ...... ಎರಡನೆಯ ಕಮಳ ಗರ್ಭರುಂ ತ್ರಿಭುವನ ಸದ್ಧರ್ಮ ಸೂತ್ರಧಾರರುಂ" ಎಂದು ಚಂದ್ರವಂಶದ ಪರಂಪರೆಯನ್ನು ಹೇಳುತ್ತಾ .....
ಅನುಪಮ ಹೇಮ ತಾಮರಸಗರ್ಬ್ಭನ ಮಾನಸಪುತ್ರನತ್ರಿ ತ -
ನ್ಮನುಪತಿನೇತ್ರ ಪುತ್ರಿಕೆಗೆ ಪುಟ್ಟಿದ ನಂದನನಿಂದುಮೌಳಿಮಂ -
ಡನನ ಮೃತಾಂಶು ತತ್ಪ್ರಿಯಸುತಂ ಬುಧನುನ್ನತ ಸೋಮ ವಂಶವ -
ರ್ದ್ಧನನೊಗೆದಂ ಬುಧಂ ಗವಿಳೆಗಂ ಪೃಥುಕೀರ್ತಿರವಂ ಪುರೂರವ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೧೭ನೇ ಸಾಲಿನಿಂದ.
ಸ್ವಾಯಂಭುವನಿಂದ ಹಿಡಿದು ಚಾಕ್ಷುಷನ ತನಕ ಆರು ಮನುಗಳು ಆಳಿದ ತರುವಾಯ ಏಳನೆಯ ವೈವಸ್ವತನು ದಕ್ಷನ ಮೊಮ್ಮಗ ವಿವಸ್ವಂತನ ಮಗನು. ಇಳೆ ಪುರೂರವ ಮುಂತಾದವರಿಂದ ಸಾಗಿ ಹಾರೀತಿಯ ಹಲವು ಮಕ್ಕಳಿಂದ ಈ ಚಾಳುಕ್ಯ ವಂಶವು ಚಂದ್ರವಂಶದಿಂದ ಕೀರ್ತಿ ಹೊಂದಿತು. ಎನ್ನುವುದಾಗಿ ಹೇಳಲಾಗಿದೆ. ಅದೇ ಸತ್ಯಾಶ್ರಯಕುಳವಾಯಿತು.

ಚಾಳುಕ್ಯ ವಿಕ್ರಮ ;
"ಪೆಣದುಗ್ರಾಹಿತ ವಂಶಮಂ" ಎಂದು ಶೌರ್ಯ ಸಾಹಸ, ಅವನ ಔನ್ನತ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಕವಿ, ವಿಕ್ರಮಾದಿತ್ಯನನ್ನು ಶ್ಲೇಷ ರೂಪಕಾಲಂಕಾತ್ರಗಳನ್ನು ಬಳಸಿ ತನ್ನ ಕವಿತಾ ಸಾಮರ್ಥ್ಯವನ್ನು ಮೆರೆದಿದ್ದಾನೆ. ಕೇಳೀಗೃಹವನ್ನೂ ಉದ್ಘರಿಸಿರುವ ಕವಿಯ ಹೇಳಿರುವುದು ಹೀಗೆ....
ಪೆಣದುಗ್ರಾಹಿತವಂಶಮಂ ತರಿದು ಭೂಭೃದ್ವರ್ಗ್ಗಮಂ ನುರ್ಗ್ಗಿ ತ
ಕ್ಷಣದಿಂ ಕಂಟಕಕೋಟಿಯಂ ಕಡಿದು ಸಪ್ತಾಂಭೋಧಿ ಸಂರುದ್ಧಧಾ
ರಿಣಿಯಂ ಧೋರ್ವ್ವಳದಿಂದೆ ನೇರ್ಪ್ಪಡಿಸಿ ಕೀರ್ತ್ತಿಶ್ರೀಗೆ ಕೇಳೀಗೃಹಾಂ -
ಗಣಮಪ್ಪಂತಿರೆ ಮಾಡಿದಂ ಸುಭಟರಾರ್ಚ್ಚಾಳುಕ್ಯರಾಮಂಬರ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೨೫ನೇ ಸಾಲಿನಿಂದ.
ಎಂದು ಕೀರ್ತಿಶ್ರೀಗೆ ಕೇಳೀಗೃಹದಂತೆ ಎಂದು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.

ವಿಕ್ರಮಾದಿತ್ಯನ ದೋರ್ದ್ದಂಡವನ್ನು(ಭುಜಬಲ-ಬಾಹುಬಲ)ವನ್ನು ತಿಳಿಸುತ್ತಾ ಕವಿಯು -
ಕಮಠಾಧೀಶನ ಬೆನ್ನೊಳಿರ್ದ್ದು ಫಣಿರಾಜೋದ್ಯತ್ಫಣಾಗ್ರಕ್ಕೆ ವಂ -
ದು ಮಹೀಕಾಮಿನಿ ದಿಗ್ಗಜಬ್ರಜದ ಕುಂಭಾಗ್ರಂಗಳಂ ಮೆಟ್ಟಿ ವಿ
ಕ್ರಮಚಕ್ರೇಶನುದಗ್ರವಪ್ಪ ಭುಜಮಂ ಬಂದೇರಿದಳ್ ರಾಗದಿಂ -
ದಮಿದೇನುನ್ನತಮಯ್ತೊ ದಕ್ಷಿಣಭುಜಂ ಚಾಳುಕ್ಯ ಚಕ್ರೇಶನ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೨೬ನೇ ಸಾಲಿನಿಂದ.
ಆಮೆಯ(ಕೂರ್ಮ)ಬೆನ್ನಿನ ಮೇಲೆ, ಆದಿಶೇಷನ ಹೆಡೆಗಳಮೇಲೆ, ದಿಗ್ಗಜಗಳ ತಲೆಗಳ ಮೇಲೆ ಈ ಜಗತ್ತು ನಿಂತಿದೆ ಎನ್ನುವುದು ನಮ್ಮ ಪ್ರಾಚೀನ ಪುರಾಣಗಳ ಕಲ್ಪನೆ. ಆದರೆ ರಾಜನೂ ಸಹ ಭೂಧರ(ಭೂಮಿಯನ್ನು ಧರಿಸಿದವನು). ಅದೇ ರೀತಿ ವಿಕ್ರಮಾದಿತ್ಯನೂ ಧರಿಸಿದ್ದಾನೆ. ಭೂ ದೇವಿಯು ಅವನ ಭುಜಕ್ಕೆ ಏರಲು (ದೋರ್ದ್ದಂಡ) ಆಮೆಯ ಬೆನ್ನು, ಆದಿಶೇಷನ ಹೆಡೆ, ಮತ್ತು ದಿಗ್ಗಜಗಳ ತಲೆ ಮೆಟ್ಟಿಲುಗಳಾದವು ಎಂದು ಶಾಸನ ಕವಿ ವರ್ಣಿಸುತ್ತಾನೆ.

ವಿಕ್ರಮಾದಿತ್ಯನಿಗೆ ಶತ್ರುರಾಜರೂ ಸಹ ವಂದಿಸುತ್ತಿದ್ದರು ಎನ್ನುವುದು ಕವಿಯ ಈರೀತಿಯ ಅಂಬೋಣ....
ಪುದಿದು ಪೊದಳ್ದ ವಿಕ್ರಮ ವಿಜೃಂಭಣಮಂ ತೊರೆದಾಳ್ವೆಸಕ್ಕೆ ಪೂ -
ಣ್ದೊದವಿದ ಭೀತಿಯಿಂದೆರಗಲನ್ಯನೃವಾವಳಿ ಪಾದಪೀಠದೊಳ್
ಪದನಕದರ್ಪ್ಪಣಂಗಳೊಳಗಾ ರಿಪುಭೂಪರ ರೂಪು ಚಂದ್ರ ಬಿಂ -
ಬದ ಮೃಗದಂತಿರ್ಪ್ಪುವು ನೆಗರ್ತ್ತೆಯ ವಿಕ್ರಮಚಕ್ರವರ್ತ್ತಿಯ || ಎಪಿಗ್ರಾಪಿಯ ಇಂಡಿಕಾ ೧೩, ಪುಟ ೪೧ ರಲ್ಲಿ ೩೦ನೇ ಸಾಲಿನಿಂದ.
ವಿಕ್ರಮಾದಿತ್ಯನ ಅಡಿಯ ಉಗುರುಗಳ ಕನ್ನಡಿಗಳಲ್ಲಿ ಮೂಡಿದ ವೈರಿ ರಾಜರುಗಳ ರೂಪಗಳು ಚಂದ್ರ ಬಿಂಬದ ಜಿಂಕೆಯಂತೆ ಕಾಣುತ್ತಿದ್ದವು. ಇಲ್ಲಿ ವೈರಿ ರಾಜರ ಮುಖಗಳನ್ನು ಚಂದ್ರನ ಬಿಂಬಕ್ಕೆ ಹೋಲಿಸಿರುವುದು ಅತ್ಯಂತ ಮಹತ್ವದ್ದು. ವೈರಿಗಳ ಮುಖವು ಕಪ್ಪಾಗಿದ್ದವು, ಅಥವಾ ವೈರಿಗಳ ಮುಖವು ಕಳೆಗುಂದಿದ್ದವು ಎನ್ನುವುದನ್ನು ಹಾಗೆ ಕವಿ ವಿಡಂಬನೆಮಾಡಿದ್ದಾನೆ. ಹೀಗೆ ಶಾಸನ ಒಂದರ ಕವಿ ಎಂತಹ ಅದ್ಭುತವಾದ ಕಾವ್ಯದ ಸೃಷ್ಟಿಗೆ ರಾಜಾಶ್ರಯವನ್ನು ಬಳಸಿಕೊಂಡಿದ್ದ ಅಥವಾ ಕವಿಯೊಬ್ಬನನ್ನು ರಾಜ ತನ್ನ ವರ್ಣನೆಗೆ ಬಳಸಿಕೊಂಡಿರಬಹುದಾದ ಸಾಧ್ಯತೆಯೂ ಇರಬಹುದು.


No comments:

Post a Comment