Search This Blog

Thursday 12 April 2018

ಯಾಸ್ಕ - ಯಾಸ್ಕೋಮಾಮೃಷಿರವ್ಯಗ್ರೋ ನೈಕಯಜ್ಞೇಷು ಗೀತವಾನ್


ಪ್ರಾಚೀನ ನಿಘಂಟುಕಾರರಲ್ಲಿ ಮೊದಲಿಗೆ ಕಾಣಸಿಗುವವನೇ ಯಾಸ್ಕ. ವೇದಗಳನ್ನು ಅರ್ಥೈಸಲು ಬೇಕಾಗುವ ಕ್ಲಿಷ್ಟಕರ ಶಬ್ದಗಳನ್ನು ಅರ್ಥಮಾಡಿಕೊಡುತ್ತಾ ಸಾಗುವ ಗ್ರಂಥವೊಂದನ್ನು ನಮಗೆ ನೀಡಿದ ಯಾಸ್ಕ ವೇದಾಧ್ಯಯನ ಮಾಡುವವರ ಪಾಲಿಗಂತೂ ಅನನ್ಯ. ನಿರುಕ್ತವೆನ್ನುವ ನಿಘಂಟು ರಚಿಸಿದ ಯಾಸ್ಕ ಅದರಿಂದಲೇ ಪ್ರಸಿದ್ಧಿಗೆ ಬಂದರೂ ಸಹ ಆತನ ಕುರಿತಾಗಿ ತಡಕಾಡಿದರೂ ಹೆಚ್ಚೇನೂ ಸಿಗುತ್ತಿಲ್ಲ. ಆದರೆ ನಿರುಕ್ತ ಬರುವುದಕ್ಕೂ ಮೊದಲೇ ಸಂಸ್ಕೃತಕ್ಕೆ ವ್ಯಾಕರಣ ಶಾಸ್ತ್ರ ಬಂದಾಗಿತ್ತು. ಪ್ರಸಿದ್ಧ ವೈಯಾಕರಣಿ ಗಾರ್ಗ್ಯನನ್ನು ನಿರುಕ್ತದಲ್ಲಿ ಸ್ಮರಿಸಿಕೊಳ್ಳುತ್ತಾರೆ.
ವೇದದಲ್ಲಿ ಬರುವ ಕಠಿಣ ಶಬ್ದಗಳಿಗೆ ವಿವರಣೆ ಕೊಡುವ ಅಮೂಲ್ಯ ಗ್ರಂಥವೇ ನಿರುಕ್ತ. ವೇದಾಂಗಗಳಲ್ಲಿ ಇದು ಸಹ ಸ್ಥಾನ ಪಡೆದುಕೊಂಡಿದೆ. ಈಗ ನಮಗೆ ಭ್ಯವಿರುವ ನಿರುಕ್ತದ ಕರ್ತೃ ಯಾಸ್ಕರು "ವೇದಾಧ್ಯಯನ ಮಾಡಿಯೂ ಆ ವೇದದ ಅರ್ಥವನ್ನರಿಯದವನು ಕಂಬದಂತೆ ವೇದದ ಭಾರವನ್ನು ಹೊರುವವನಾಗುತ್ತಾನೆ. ಆದರೆ ವೇದಾರ್ಥಗಳನ್ನು ಮನನ ಮಾಡಿಕೊಂಡವನು ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಕಟ್ಟಿಗೆ ಎಷ್ಟೇ ಒಣಗಿದ್ದರೂ ಅಗ್ನಿಯನ್ನು ಸೇರಿ ಸುಡದಿದ್ದರೆ ಪ್ರಜ್ವಲಿಸುವುದಿಲ್ಲ. ಯಾವುದನ್ನೇ ಆದರೂ ಅರ್ಥ ಮಾಡಿಕೊಳ್ಳದೆ ಹೋದರೆ ಕಲಿತ ಶಬ್ದ ಪ್ರಕಾಶವನ್ನು ನೀಡುವುದಿಲ್ಲ" ಎನ್ನುತ್ತಾರೆ. ವೇದದ ಅರ್ಥನಿರ್ಣಯಕ್ಕೆ ಮೀಸಲಾಗಿರುವ ನಿರುಕ್ತವು ವೇದಾಂತಗಳಲ್ಲೆಲ್ಲ ಪ್ರಧಾನವಾದ ಸ್ಥಾನವನ್ನು ಹೊಂದಿದೆ. ಯಾಸ್ಕರೇ ತಮ್ಮ ನಿರುಕ್ತದಲ್ಲಿ ಹೇಳುವಂತೆ" ನಿರುಕ್ತ ಮತ್ತು ನಿರ್ವಚನ ಕ್ರಮದ ಪರಿಚಯವಿಲ್ಲದೆ ಹೋದರೆ ವೇದಾರ್ಥವನ್ನರಿಯುವುದು ಅಸಾಧ್ಯ."
ಯಾಸ್ಕರಿಗೂ ಮೊದಲೇ ಅನೇಕ ನಿರುಕ್ತಕಾರರಿದ್ದರು ಎನ್ನುವುದು ಅವರ ಕೆಲವು ಉಲ್ಲೇಖಗಳಿಂದ ತಿಳಿದು ಬರುತ್ತದೆ. ನಿರುಕ್ತ ಎನ್ನುವುದು ೧೪ ಪ್ರಭೇದಗಳಲ್ಲಿತ್ತೆಂದು ದುರ್ಗಭಾಷ್ಯದಲ್ಲಿ ಸ್ಪಷ್ಟವಾಗಿ ಹೇಳಿದೆ. ಯಾಸ್ಕರು ತಮ್ಮ ನಿರುಕ್ತದಲ್ಲಿ ಅಗ್ರಯಣ, ಔದುಂಬರಾಯಣ, ಔಪಮನ್ಯವ, ಔರ್ಣವಾಭ, ಕಾಥಕ್ಯ, ಕೌತ್ಸ, ಗಾರ್ಗ್ಯ, ಗಾಲಮ, ಧರ್ಮಶಿರಸ್, ವಾರ್ಷ್ಯಾಯಣಿ, ಶತವಲಾಕ್ಷ ಮೌದ್ಗಲ್ಯ, ಶಾಕಟಾಯನ, ಶಾಕಪೂಣಿ, ಸ್ಥೌಲಾಷ್ಠೀವೀ ಮುಂತಾದ ಪ್ರಾಚೀನ ನಿರುಕ್ತಕಾರರನ್ನು ಹೆಸರಿಸಿದ್ದಾರೆ. ಇವರ ಅಭಿಪ್ರಾಯಗಳನ್ನು ಅಲ್ಲಲ್ಲಿ ಉಲ್ಲೇಖಿಸಿದ್ದಾರೆ. ಇದೆಲ್ಲದರಿಂದ ಯಾಸ್ಕರು ತಮ್ಮ ಹಿಂದಿನವರ ಪರಿಶ್ರಮದ ಪ್ರಯೋಜನವನ್ನು ಪಡೆದು ಈ ಗ್ರಂಥವನ್ನು ನಿರ್ಮಾಣ ಮಾಡಿದ್ದಾರೆಂಬುದು ಗೊತ್ತಾಗುವುದು.
ಯಾಸ್ಕ ಪ್ರಣೀತ ನಿರುಕ್ತಕ್ಕೆ ಬ್ರಾಹ್ಮಣ ಗ್ರಂಥಗಳು ಒಂದು ದೃಷ್ಟಿಯಲ್ಲಿ ಆಧಾರಗಳೆಂದು ಹೇಳಬಹುದು. ವೇದದಲ್ಲಿಯೇ ವೇದಾಂಗಗಳ ಅಂಶಗಳು ಸೇರಿಕೊಂಡಿವೆ. ಬ್ರಾಹ್ಮಣ ಗ್ರಂಥಗಳಲ್ಲಿ ಅನೇಕ ಕಡೆ ಶಬ್ದ ನಿರ್ವಚನ ಹಾಗೂ ಅರ್ಥ ನಿರ್ವಚನ ಮಾಡಿದೆ. ಯಾಸ್ಕರೂ ಸಹ ತಮ್ಮ ನಿರ್ವಚನವನ್ನು ಸಮರ್ಥಿಸುವುದಕ್ಕಾಗಿ ಅನೇಕವಾಗಿ ಬ್ರಾಹ್ಮಣ ಗ್ರಂಥಗಳ ಅಭಿಪ್ರಾಯವನ್ನು ಉದಾಹರಿಸಿದ್ದಾರೆ.
"ಪಾಣಿನಿ ಯಾಸ್ಕದಿಭ್ಯೋ ಗೋತ್ರೇ" ಎಂಬ ಸೂತ್ರದಲ್ಲಿ ಯಾಸ್ಕರ ಉಲ್ಲೇಖವನ್ನು ಪಾಣಿನಿ ಮಾಡಿದ್ದಾನೆ. ಹಾಗಾಗಿ ಯಾಸ್ಕರು ಆತನಿಗಿಂತಲೂ ಪ್ರಾಚೀನರು. ನಿರುಕ್ತದ ಕೊನೆಯಲ್ಲಿ "ನಮೋ ಯಾಸ್ಕಾಯ" ಎಂಬ ಉಲ್ಲೇಖವಿದೆ. ಇದರಿಂದ ನಿರುಕ್ತವೂ ನಿಘಂಟೂ ಬೇರೆ ಬೇರೆ ಯಾಸ್ಕರುಗಳಿಂದ ನಿರ್ಮಾಣ ಮಾಡಲ್ಪಟ್ಟವೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಯಾಸ್ಕರು ಉಪಧಾ ಅಭ್ಯಾಸ ಗುಣ ಮುಂತಾದ ಸಂಜ್ಞೆಗಳನ್ನು ಬಳಸಿರುವುದರಿಂದ ಪಾಣಿನಿಗಳಿಗಿಂತ ಅರ್ವಾಚೀನರೆಂಬ ವಾದವೂ ಬಂದಿದೆ. ಆದರೆ ಪಾಣಿನಿಗಿಂತಲೂ ಮೊದಲೇ ವ್ಯಾಕರಣ ಶಾಸ್ತ್ರವಿತ್ತೆನುವುದರಿಂದ ಯಾಸ್ಕರನ್ನು ಪ್ರಾಚೀನತೆಯಿಂದ ಎಳೆದು ತರುವುದು ಸರಿ ಅನ್ನಿಸುವುದಿಲ್ಲ.
ಋಗ್ವೇದ ಸಂಹಿತೆಯ ಪದ ಪಾಠಕಾರರಾದ ಶಾಕಲ್ಯರು ಯಾಸ್ಕರಿಗಿಂತ ಪ್ರಾಚೀನರು. ಸಿರುಕ್ತದಲ್ಲಿ (6-28) ಯಾಸ್ಕರು ಶಾಕಲ್ಯರ ಹೆಸರನ್ನು ಹೇಳಿದ್ದಾರೆ. ಅನೇಕ ಕಡೆ ಶಾಕಲ್ಯರ ಪದಪಾಠವನ್ನು ಯಾಸ್ಕರು ಅನುಸರಿಸಿಲ್ಲ. ವಾಯೇ ಎಂಬುದನ್ನು ವಾ ಮತ್ತು ಯ ಎಂದು ಶಾಕಲ್ಯರು ಮಾಡಿದ ವಿಭಾಗ ಸರಿಯಿಲ್ಲವೆಂದು ಯಾಸ್ಕರು ಆಕ್ಷೇಪಿಸುತ್ತಾರೆ. ಮಾಸಕೃತ್ ಎಂಬುದನ್ನೇ ಶಾಕಲ್ಯರು ಮಾ ಮತ್ತು ಸಕೃತ್ ಎಂದು ವಿಭಾಗಿಸಿದರೆ, ಯಾಸ್ಕರು ಮಾಸ ಕೃತ್ ಎಂದು ವಿಭಾಗ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರಲ್ಲಿ ಹೀಗೆ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಯಾಸ್ಕರು ಅನಂತರ ಇದ್ದ ಶೌನಕರು ತಮ್ಮ ಬೃಹದ್ದೇವತೆಯಲ್ಲಿ ನಿರುಕ್ತಕಾರ ಯಾಸ್ಕರ ಅಭಿಪ್ರಾಯವನ್ನು ಉಲ್ಲೇಖಿಸಿ ಅಲ್ಲಲ್ಲಿ ಟೀಕಿಸಿದ್ದಾರೆ. ಪುರುಷಾದಃ ಎಂಬುದನ್ನು ಪುರುಷಾನ್ ಮತ್ತು ಅದನಾಯ ಎಂದು ಯಾಸ್ಕರು ವಿಭಾಗಿಸಿರುವುದನ್ನು ಶೌನಕರು ಆಕ್ಷೇಪಿಸುತ್ತಾರೆ. ವಾಯೋ ಎಂಬಲ್ಲಿ ಶಾಕಲ್ಯರ ಪದವಿಭಾಗವನ್ನು ಬೃಹದ್ದೇವತೆಯಲ್ಲಿ ಸಮರ್ಥಿಸಲಾಗಿದೆ. ಇದರಿಂದ ಈ ಆಚಾರ್ಯರುಗಳಲ್ಲಿ ಇವುಗಳ ಬಗೆಗೆ ಭಿನ್ನಾಭಿಪ್ರಾಯಗಳಿದ್ದವೆಂಬುದು ಗೊತ್ತಾಗುತ್ತದೆ.
ನಿಘಂಟು ಐದು ಅಧ್ಯಾಯಗಳಲ್ಲಿ ಮೂರು ಕಾಂಡಗಳಲ್ಲಿ ಇದೆ. ಮೊದಲ ಮೂರು ಅಧ್ಯಾಯಗಳಿಗೆ ನೈಘಂಟುಕ ಕಾಂಡವೆಂದು ಹೆಸರು, ನಾಲ್ಕನೆಯ ಅಧ್ಯಾಯಕ್ಕೆ ನೈಗಮಕಾಂಡವೆಂದೂ ಐದನೆಯ ಅಧ್ಯಾಯಕ್ಕೆ ದೇವತಾಕಾಂಡವೆಂದೂ ಹೆಸರಿದೆ. ನೈಘಂಟುಕ ಕಾಂಡದಲ್ಲಿ ಸಮಾನಾರ್ಥಕಗಳಾದ ಅನೇಕ ಶಬ್ದಗಳ ೬೯ ಗಣಗಳಿವೆ. ,೨೮೦ ಪದಗಳಿವೆ. ನೈಗಮ ಕಾಂಡದಲ್ಲಿ ೨೭೮ ಏಕಪದಿಕಗಳಿವೆ, ದೇವತಾ ಕಾಂಡದಲ್ಲಿ ೧೫೧ ಪದಗಳಿವೆ. ನೈಘಂಟುಕ ಕಾಂಡದಲ್ಲಿನ ಗಣಗಳಲ್ಲಿ ಮುಖ್ಯವಾದ ಪದಗಳಿಗೂ ನೈಗಮ ಮತ್ತು ದೇವತಾ ಕಾಂಡದ ಒಂದೊಂದು ಪದಕ್ಕೂ ನಿರ್ವಚನ ಹೇಳಿ, ಮಂತ್ರಗಳಿಂದ ಉದಾಹರಿಸಿ ಅರ್ಥವಿವರಣೆ ಮಾಡಲಾಗಿದೆ.
ವೈದಿಕ ನಿಘಂಟಿಗೆ ವಿವರಣೆ ಕೊಡುವುದರಲ್ಲಿಯೇ ಯಾಸ್ಕರು ತೃಪ್ತರಾಗಿಲ್ಲ. ಅವರು ಅನೇಕ ಮಹತ್ತ್ವದ ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ವಿವೇಚಿಸಿದ್ದಾರೆ. ನಿಘಂಟಿನ ಶಬ್ದಗಳ ವ್ಯುತ್ಪತ್ತಿಯನ್ನು ತಿಳಿಸಿ ಆ ಪದ ಬರುವ ಮಂತ್ರವನ್ನು ಉದಾಹರಿಸಿ ಪ್ರಸಂಗವಶಾತ್ ಆ ಮಂತ್ರಗಳ ಅರ್ಥವನ್ನು ವಿವೇಚಿಸಿದ್ದಾರೆ. ನಿರುಕ್ತ ಮೊಟ್ಟಮೊದಲ ವೇದಭಾಷ್ಯವಾಗಿದೆ ಎನ್ನಿಸಿಕೊಂಡಿದೆ. ಇಲ್ಲಿ ಬರುವ ವ್ಯಾಕರಣಾಸ್ತ್ರಸಮೀಕ್ಷೆ ಪ್ರತಿ ಶಾಖ್ಯಕ್ಕೂ ಪಾಣಿನಿಯ ಕಾಲಕ್ಕೂ ನಡುವಿನ ಕೊಂಡಿಯಂತಿದೆ. ವೇದ ವಾಙ್ಮಯದ ಸ್ವರೂಪದ ವಿಮರ್ಶೆಯೂ ಇಲ್ಲಿದೆ. ಹೀಗೆ ಬಹುಮುಖ ಪ್ರಾಧಾನ್ಯ ಈ ಗ್ರಂಥಕ್ಕಿದೆ.
ವೇದಮಂತ್ರಕ್ಕೆ ಅರ್ಥವುಂಟೆಂಬುದನ್ನು ಯಾಸ್ಕರು ಪ್ರತಿಪಾದಿಸಿದ್ದಾರೆ. ಆಚಾರ್ಯ ಪರಂಪರೆಯಿಂದ ಜ್ಞಾನಸಾಕ್ಷಾತ್ಕಾರ ಪಡೆದ ಬಹುಶ್ರುತರು ಮಂತ್ರಾರ್ಥ ವಿಜ್ಞಾನಶಾಲಿಗಳಾಗಬಹುದೆಂದು ಇವರ ಮತ. ನಿರ್ವಚನ ಕ್ರಮವನ್ನು ಕುರಿತು ಯಾಸ್ಕರು ಮಾಡಿರುವ ವಿವೇಚನೆ ಭಾಷಾ ಸಂಶೋಧಕರಿಗೆ ಸಹಾಯವನ್ನುಂಟುಮಾಡುತ್ತದೆ. ವ್ಯವಹಾರದಲ್ಲಿ ಪ್ರಸಿದ್ಧವಾದ ಪ್ರಯೋಗಗಳನ್ನು ಗಮನಿಸಿ ವೈದಿಕ ಶಬ್ದ ನಿರ್ವಚನವನ್ನೂ ವೈದಿಕ ಪ್ರಯೋಗಗಳನ್ನರಿತು ವ್ಯಾವಹಾರಿಕ ಭಾಷಾ ನಿರ್ವಚನವನ್ನೂ ಮಾಡಬೇಕೆಂಬ ಯಾಸ್ಕರ ಸೂಚನೆ ಬಹಳ ಅರ್ಥವತ್ತಾಗಿದೆ. ಯಾಸ್ಕರು ಶಬ್ದಪ್ರಪಂಚವನ್ನು ನಾಮ, ಕ್ರಿಯಾಪದ, ಉಪಸರ್ಗ ಮತ್ತು ನಿಪಾತ ಎಂದು ನಾಲ್ಕು ಬಗೆಯದಾಗಿ ವಿಂಗಡಿಸಿದ್ದಾರೆ. ಉಪಸರ್ಗಗಳೂ ಸ್ವತಂತ್ರವಾಗಿ ಅರ್ಥವನ್ನು ಕೊಡಬಲ್ಲವೆಂದು ಯಾಸ್ಕರ ಅಭಿಪ್ರಾಯ. ನಾಮಪದಗಳೆಲ್ಲ ಕ್ರಿಯಾಪದಗಳಿಂದಲೇ ಬಂದವೆಂಬ ನಿರ್ಣಯವನ್ನು ಯಾಸ್ಕರು ಸಮರ್ಥಿಸುತ್ತಾರೆ. ನಿರುಕ್ತಶಾಸ್ತ್ರ ಇವರ ಅಭಿಪ್ರಾಯದಂತೆ ತನ್ನ ಸ್ವತಂತ್ರತೆಯನ್ನೂ ಉಳಿಸಿಕೊಂಡು ವ್ಯಾಕರಣ ಶಾಸ್ತ್ರವನ್ನು ಪೂರ್ತಿಗೊಳಿಸುತ್ತದೆ.
ಯಾಸ್ಕರು ನೇಕ ವಿಷಯಗಳನ್ನು ತಮ್ಮ ನಿರುಕ್ತದಲ್ಲಿ ತಿಳಿಸುವುದು ನಮ್ಮ ಆಸಕ್ತಿಯನ್ನು ಕೆರಳಿಸುತ್ತ ಸಾಗುತ್ತದೆ. ಸಮಕಾಲೀನ ಸಮಾಜದ ನಿಯಮಗಳ ವಿಚಾರ ಅಲ್ಲಲ್ಲಿ ಬರುತ್ತದೆ. ಸ್ತ್ರೀಯರಿಗೆ ಆಸ್ತಿಗೆ ಅಧಿಕಾರವುಂಟೇ ಇಲ್ಲವೇ ಎಂಬುದನ್ನೊಂದು ಕಡೆ ಚರ್ಚಿಸುವರು. "ಪಂಚಜನಾಃ" ಎಂಬ ಪದಕ್ಕೆ ಅರ್ಥ ಹೇಳುವಾಗ ನಾಲ್ಕು ವರ್ಣಗಳ ಜೊತೆಗೆ ನಿಷಾದವನ್ನು ಐದನೆಯವನನ್ನಾಗಿ ಇವರು ತಿಳಿಸುವುದು ಕುತೂಹಲಕರವಾಗಿದೆ. ಚಂದ್ರನಿಗೆ ಸ್ವಯಂಪ್ರಕಾಶವಿಲ್ಲವೆಂದೂ ಸೂರ್ಯನ ಕಿರಣದ ಸಹಾಯದಿಂದ ಚಂದ್ರ ಕಾಂತಿಯುತನಾಗಿದ್ದಾನೆ ಎಂದೂ ನಿರೂಪಿಸುತ್ತ ಖಗೋಳಶಾಸ್ತ್ರದಲ್ಲಿ ಅಂದಿನ ಜನರ ತಿಳಿವಳಿಕೆಯನ್ನು ಹೊರಗೆಡಹಿದ್ದಾರೆ. ಉಪಮಾನಗಳ ವಿಚಾರವೂ ಅವುಗಳ ಭೇದಪ್ರಭೇದಗಳ ವಿಚಾರವೂ ಅಲ್ಲಿ ಚರ್ಚಿತವಾಗಿದೆ. ಇದರಿಂದ ಅಲಂಕಾರಶಾಸ್ತ್ರದ ಉದಯ ಆಗಲೇ ಆಗಿತ್ತೆಂದು ಗೊತ್ತಾಗುತ್ತದೆ.
ಯಾಸ್ಕರು ವೇದದಲ್ಲಿ ಪ್ರಸ್ತುತವಾಗಿರುವ ದೇವತಾನಾನಾತ್ವ ಮತ್ತು ದೇವತೈಕ್ಯಕ್ಕೆ ಸಮನ್ವಯ ಮಾಡುತ್ತ "ಮಹಾಭಾಗ್ಯಾತ್ ದೇವತಾಯಾಃ ಏಕ ಆತ್ಮಾ ಬಹುಧಾಸ್ತೂಯತೇ" ಎಂದು ನಿರೂಪಿಸುತ್ತಾರೆ.
ಪ್ರಸ್ತುತ ವಿಷಯಕ್ಕೆ ಬಂದಾಗ ಯಾಸ್ಕರನ್ನು ಕುರಿತಾಗಿ ಹರಪ್ಪಾ ಮುದ್ರೆಯೊಂದರಲ್ಲಿ ಯಾಸ್ಕರ ವಿವರಣೆ ಸಿಗುತ್ತದೆ.
ಮಹಾಭಾರತದ ಶಾಂತಿ ಪರ್ವದ ಈ ಶ್ಲೋಕ.
ಸೂರ್ಯಾಚನ್ದ್ರಮಸೌ ಚಕ್ಷುಃ ಕೇಶಾಶ್ಚೈವಾಂಶವಃ ಸ್ಮೃತಾಃ |
ಬೋಧಯಂಸ್ತಾಪಯಂಶ್ಚೈವ ಜಗದುತ್ತಿಷ್ಠತೇ ಪೃಥಕ್‍ || 66 ||
ಸೂರ್ಯ-ಚಂದ್ರರು ನನ್ನ ನೇತ್ರಗಳು. ಸೂರ್ಯ-ಚಂದ್ರರ ಕಿರಣಗಳೇ ನನ್ನ ಕೇಶಗಳಾಗಿವೆ. ಆ ಸೂರ್ಯ- ಚಂದ್ರರು ಅನುಕ್ರಮವಾಗಿ ಜಗತ್ತನ್ನು ಎಚ್ಚರಗೊಳಿಸುತ್ತಾ ಮತ್ತು ಅದಕ್ಕೆ ತಾಪವನ್ನುಂಟುಮಾಡುತ್ತಾ ಪ್ರತ್ಯೇಕ-ಪ್ರತ್ಯೇಕವಾಗಿ ಉದಯಿಸುತ್ತಾರೆ.
ಬೋಧನಾತ್ತಾಪನಾಚ್ಚೈವ ಜಗತೋ ಹರ್ಷಣಂ ಭವೇತ್‍ |
ಅಗ್ನೀಷೋಮಕೃತೈರೇಭಿಃ ಕರ್ಮಭಿಃ ಪಾಣ್ಡುನನ್ದನ |
ಹೃಷೀಕೇಶೋಽಹಮೀಶಾನೋ ವರದೋ ಲೋಕಭಾವನಃ || 67 ||
ಸೂರ್ಯ-ಚಂದ್ರರ ತಾಪದಿಂದಲೂ ಮತ್ತು ಬೋಧನದಿಂದಲೂ ಜಗತ್ತಿಗೆ ಸಂತೋಷವುಂಟಾಗುತ್ತದೆ. ಅಗ್ನೀಷೋಮರು ಮಾಡುವ ಈ ಕರ್ಮಗಳಿಂದಲೇ ನಾನು ಈಶಾನನೂ, ವರದನೂ, ಲೋಕಭಾವನನೂ ಆದ ಹೃಷೀಕೇಶನಾಗಿದ್ದೇನೆ.
ಇಡೋಪಹೂತಯೋಗೇನ ಹರೇ ಭಾಗಂ ಕ್ರತುಷ್ವಹಮ್‍ |
ವರ್ಣಶ್ಚ ಮೇ ಹರಿಃ ಶ್ರೇಷ್ಠಸ್ತಸ್ಮಾದ್ಧರಿರಹಂ ಸ್ಮೃತಃ || 68 ||
ಇಡೋಪಹೂತಾ. | ಉಪಹೂತೇಡಾಎಂಬ ಮಂತ್ರಯೋಗದಿಂದ ಯಜ್ಞಗಳಲ್ಲಿ ಮಾಡುವ ಆಹುತಿಭಾಗವನ್ನು ನಾನು ಪರಿಗ್ರಹಿಸುತ್ತೇನೆ. ಆದರಿಂದ ನನಗೆ ಹರಿಎಂಬ ಹೆಸರು ಬಂದಿದೆ. ನನ್ನ ಮೈಬಣ್ಣವೂ ಶ್ರೇಷ್ಠ ವಾದ ಹರಿನ್ಮಣಿಯಂತೆ (ಪಚ್ಚೆಮಣಿಯಂತೆ) ಇರುವುದರಿಂದಲೂ ನಾನು ಹರಿಎಂದು ಕರೆಯಲ್ಪಡುತ್ತೇನೆ.
ಧಾಮ ಸಾರೋ ಹಿ ಭೂತಾನಾಮೃತಂ ಚೈವ ವಿಚಾರಿತಮ್‍ |
ಋತಧಾಮಾ ತತೋ ವಿಪ್ರೈಃ ಸತ್ಯಶ್ಚಾಹಂ ಪ್ರಕೀರ್ತಿತಃ || 69 ||
ಪ್ರಾಣಿಗಳ ಶಕ್ತಿಯು ಧಾಮ’–ಎಂಬ ಹೆಸರನ್ನು ಹೊಂದಿದೆ. ಋತಎಂಬುದರ ಅರ್ಥವು ವಿಚಾರಮಾಡಿ ಕೈಗೊಂಡ ನಿರ್ಣಯಎಂದಾಗಿದೆ. ಈ ಕಾರಣದಿಂದ ನನ್ನನ್ನು ವಿದ್ವಾಂಸರು ಋತಧಾಮನೆಂದೂ ಸತ್ಯನೆಂದೂ ವರ್ಣಿಸಿದ್ದಾರೆ.
ನಷ್ಟಾಂ ಚ ಧರಣೀಂ ಪೂರ್ವಮವಿನ್ದಂ ವೈ ಗುಹಾಗತಾಮ್‍ |
ಗೋವಿನ್ದ ಇತಿ ತೇನಾಹಂ ದೇವೈರ್ವಾಗ್ಭಿರಭಿಷ್ಟುತಃ || 70 ||
ಹಿಂದೆ ನಾನು ಅದೃಶ್ಯಳಾಗಿ ರಸಾತಲಕ್ಕೆ ಹೋಗಿದ್ದ, ಗೋಶಬ್ದದಿಂದ ಕರೆಯಲ್ಪಡುವ ಭೂದೇವಿಯನ್ನು ವರಾಹರೂಪವನ್ನು ಧರಿಸಿ ಮೇಲಕ್ಕೆತ್ತಿದೆನು. ಈ ಕಾರಣದಿಂದ ದೇವತೆಗಳು ನನ್ನನ್ನು ಅವರ ವಾಕ್ಕುಗಳಿಂದ ಗೋವಿಂದನೆಂದು ಸ್ತೋತ್ರಮಾಡುತ್ತಾರೆ.
ಯಾಸ್ಕೋ ಮಾಮೃಷಿರವ್ಯಗ್ರೋ ನೈಕಯಜ್ಞೇಷು ಗೀತವಾನ್‍ |
ಶಿಪಿವಿಷ್ಟ ಇತಿ ಹ್ಯಸ್ಮಾದ್ಗುಹ್ಯನಾಮಧರೋ ಹ್ಯಹಮ್‍ || 72 ||
ಯಾಸ್ಕನು ಏಕಾಗ್ರಚಿತ್ತನಾಗಿ ನನ್ನನ್ನು ಅನೇಕಯಜ್ಞಗಳಲ್ಲಿ ಶಿಪಿವಿಷ್ಟ ಎಂಬ ನಾಮದಿಂದಲೇ ಸ್ತೋತ್ರಮಾಡಿದ್ದಾನೆ. ಆ ಕಾರಣದಿಂದಲೂ ನಾನು ರಹಸ್ಯವಾದ ಈ ನಾಮವನ್ನು ಹೊಂದಿರುತ್ತೇನೆ.
ಸ್ತುತ್ವಾ ಮಾಂ ಶಿಪಿವಿಷ್ಟೇತಿ ಯಾಸ್ಕೋ ಋಷಿರುದಾರಧೀಃ |
ಮತ್ಪ್ರಸಾದಾದಧೋ ನಷ್ಟಂ ನಿರುಕ್ತಮಭಿಜಗ್ಮಿವಾನ್‍ || 73 ||
ಉದಾರಚಿತ್ತನಾದ ಯಾಸ್ಕಮುನಿಯು  ಶಿಪಿವಿಷ್ಟಎಂಬ ಹೆಸರಿನಿಂದ ನನ್ನನ್ನು ಸ್ತುತಿಸಿ ನನ್ನ ಅನುಗ್ರಹದಿಂದಲೇ ಕೆಳಗೆಬಿದ್ದು ನಷ್ಟವಾಗಿ ಹೋಗಿದ್ದ ನಿರುಕ್ತಶಾಸ್ತ್ರವನ್ನು ಪುನಃ ಪಡೆದುಕೊಂಡನು. ಹೀಗೇ ಮಹಾಭಾರತದ ಶ್ಲೋಕವನ್ನು ಹರಪ್ಪಾದ ಹಲಗೆಗಳಲ್ಲಿ ಹಿಡಿದಿಟ್ಟದ್ದು ಕಂಡು ಬರುತ್ತದೆ. ಹೀಗೇ ಇನ್ನೂ ಅನೇಕ ಉದಾಹರಣೆ ಕಾಣಸಿಗುತ್ತದೆ.





No comments:

Post a Comment