Search This Blog

Wednesday 25 April 2018

ನಮ್ಮ ದೇಶದ ಸಂಸ್ಕೃತಿಯೇ ಹಾಗೆ ..........................


ಮೊನ್ನೆ ವಿಶ್ವಾಮಿತ್ರರ ಕುರಿತು ಬರೆಯುವಾಗಲೇ ಇದನ್ನು ಬರೆದಿದ್ದೆ ಆದರೆ ದೀರ್ಘ ಬರಹ ಓದುವುದಕ್ಕೆ ಕಷ್ಟ ಎಂದು ಪ್ರಕಟಿಸಲಿಲ್ಲ. ವೇದಗಳಲ್ಲಿ ಅನೇಕ ವಿಧದ ಜನಾಂಗಗಳ ಉಲ್ಲೇಖ ಕಾಣಸಿಗುತ್ತದೆ. ಅದು ಋಗ್ವೇದ ಮಾತ್ರವಲ್ಲ ಮೂರೂ ವೇದಗಳಲ್ಲಿ ಬರುತ್ತವೆ. ಇಲ್ಲಿ ಭಾರತ ಜನಾಂಗ ಎನ್ನುವುದು ಸಾಮಾನ್ಯವಾಗಿ ಎಲ್ಲ ಕಡೆ ಕಾಣಸಿಗುತ್ತದೆ. ಈ ಭಾರತ ಜನಾಂಗದಲ್ಲಿಯೇ ಜನಸಿಸಿ ತಮ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡವರ ಕುರಿತಾಗಿ ಈ ಕಥೆ ಬರೆದೆ. ಇದು ಅತ್ಯಂತ ದೀರ್ಘವಾಗಿದೆ. ಸಹನೆಯಿಂದ ಓದುತ್ತೀರೆನ್ನುವ ವಿಶ್ವಾಸ.
ಮಹಾಭಾರತದ ವನಪರ್ವ೧೯೮ನೆಯ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ಮಾರ್ಕಾಂಡೇಯ ಆ ಕಥೆಯನ್ನು ಹೇಳುತ್ತಾ ಹೋಗುತ್ತಾನೆ.
ವಿಶ್ವಾಮಿತ್ರನ ಮಗನಾದ ಅಷ್ಟಕನು ಅಶ್ವಮೇದಯಜ್ಞವನ್ನು ಮಾಡುತ್ತಿದ್ದ. ಆ ಯಜ್ಞಕ್ಕೆ ಅಷ್ಟಕನ ಜ್ಞಾತಿಗಳಾದ ಪ್ರತರ್ದನ, ವಸುಮನಸ ಮತ್ತು ಉಶೀನರನ ಮಗ ಶಿಬಿ ಆಗಮಿಸಿದ್ದರು. ಅಶ್ವಮೇಧಯಾಗವು ಮುಗಿದನಂತರದಲ್ಲಿ ಅಷ್ಟಕನು ಯಾಗಕ್ಕೆ ಆಗಮಿಸಿದ್ದ ತನ್ನ ಮೂವರು ಅಣ್ಣ ತಮ್ಮಂದಿರನ್ನೂ ರಥದಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಮಾಡುತ್ತಾನೆ ಹಾಗೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ನಾರದರು ಸಿಕ್ಕಿದರು. ಕೂಡಲೇ ರಥವನ್ನು ನಿಲ್ಲಿಸಿ ನಾಲ್ವರು ರಾಜಕುಮಾರರೂ ಮಹರ್ಷಿಗಳಿಗೆ ಅಭಿವಾದನಮಾಡಿ ನಮಸ್ಕರಿಸಿ ರಥದ ಮೇಲೆ ಕುಳಿತುಕೊಳ್ಳುವಂತೆ ನಾರದರನ್ನು ಪ್ರಾರ್ಥಿಸಿದರು. ನಾರದರು ಹಾಗೆಯೇ ಆಗಲೆಂದು ಹೇಳಿ ರಥದಲ್ಲಿ ಕುಳಿತರು. ರಾಜ ಕುಮಾರರೂ ರಥವನ್ನು ಹತ್ತಿದರು. ನಾಲ್ವರಲ್ಲಿ ಒಬ್ಬ ರಾಜಕುಮಾರನು ರಥದಲ್ಲಿಯೇ ನಾರದರನ್ನು ಯಥೋಚಿತವಾಗಿ ಸತ್ಕರಿಸಿದನು. ಹಾಗೇ ನಾರದರಲ್ಲಿ ತಮ್ಮಲ್ಲಿ ಕೆಲವು ಪ್ರಶ್ನೆ ಕೇಳಬೇಕೆಂದಿರುವೆ ಕೇಳಬಹುದೇ ಎನ್ನುತ್ತಾನೆ.
ನಾರದರುಕೇಳಬಹುದುಎಂದು ಉತ್ತರಿಸಿದರು. “ಮಹರ್ಷಿಗಳೇ! ನಾವು ಚಿರಂಜೀವಿಗಳಾಗಿದ್ದೇವೆ. ಅನೇಕ ಧರ್ಮ ಕಾರ್ಯಗಳನ್ನು ಮಾಡಿದ್ದೇವೆ. ಸಾಧುಗಳು ಅನುಸರಿಸುವ ಸನ್ಮಾರ್ಗದಲ್ಲಿಯೇ ನಡೆಯುತ್ತಿದ್ದೇವೆ. ನಾವು ಮಾಡಿರುವ ಸತ್ಕರ್ಮಗಳ ಫಲವಾಗಿ ನಮಗೆ ಅವಸಾನಾನಂತರದಲ್ಲಿ ಸ್ವರ್ಗಪ್ರಾಪ್ತಿಯೂ ಆಗುವುದು. ಅಲ್ಲಿಯೂ ಬಹಳ ಕಾಲದವರೆಗೆ ಸ್ವರ್ಗಸುಖವನ್ನು ಅನುಭವಿಸುವೆವು. ಆದರೆ ಸ್ವರ್ಗಸುಖವೂ ಶಾಶ್ವತವಲ್ಲವೆಂಬುದೂ ನಮಗೆ ತಿಳಿದಿದೆ. ನಮ್ಮ ಸತ್ಕರ್ಮ ಫಲಗಳು ತೀರಿದೊಡನೆಯೇ ನಾವು ಪುನಃ ಭೂಮಿಯಲ್ಲಿ ಜನ್ಮವೆತ್ತಬೇಕಾಗುತ್ತದೆ. ನಮ್ಮ ನಾಲ್ವರಲ್ಲಿ ಯಾವನು ತನ್ನ ಸತ್ಕರ್ಮಗಳ ಫಲವು ಮುಗಿದನಂತರ ಮೂವರಿಗಿಂತಲೂ ಮೊದಲು ಸ್ವರ್ಗದಿಂದ ಚ್ಯುತನಾಗಿ ಭೂಮಿಯಲ್ಲಿ ಹುಟ್ಟುತ್ತಾನೆ? ರಹಸ್ಯವನ್ನು ದಯಮಾಡಿ ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.” ಎಂದನು ನಾರದರು ಜಟಿಲವಾದ ಪ್ರಶ್ನೆಗೆ ಉತ್ತರಿಸಲು ತಡಕಾಡದೇ ಅವನು ಕೇಳುತ್ತಿದ್ದಂತೆಯೇ ಪ್ರಶ್ನೆಗೆ ಉತ್ತರವನ್ನಿತ್ತರು. “ಅಷ್ಟಕನು ಎಲ್ಲರಿಗಿಂತಲೂ ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ.” “ಕಾರಣವೇನೆಂದು ಕೇಳಬಹುದೇ?” “ನಾನು ಹಿಂದೆ ಸ್ವಲ್ಪ ಕಾಲ ಅಷ್ಟಕನ ಮನೆಯಲ್ಲಿಯೇ ತಂಗಿದ್ದೆನು. ಒಂದು ದಿನ ಇವನು ನನ್ನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಪಟ್ಟಣದ ಹೊರಭಾಗಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅನೇಕ ವರ್ಣಗಳ ಸಾವಿರಾರು ಹಸುಗಳಿದ್ದುದನ್ನು ಕಂಡು ಹಸುಗಳು ಯಾರವೆಂದು ಅಷ್ಟಕನನ್ನು ಪ್ರಶ್ನಿಸಿದೆನು. ಅದಕ್ಕುತ್ತರವಾಗಿ ಅಷ್ಟಕನು, “ ಹಸುಗಳೆಲ್ಲವೂ ನನ್ನವೇ ಆಗಿದ್ದುವು. ಎಲ್ಲ ಹಸುಗಳನ್ನೂ ನಾನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಟ್ಟೆನುಎಂದುತ್ತರಿಸಿ ತನ್ನ ಶ್ಲಾಘನೆಯನ್ನು ತಾನೇ ಮಾಡಿಕೊಂಡನು. ಇವನು ವಿಧವಾದ ಉತ್ತರವನ್ನು ಕೊಟ್ಟದ್ದರಿಂದಲೇ ಇವನ ಮನಸ್ಸು ಎಷ್ಟರಮಟ್ಟಿಗೆ ಸಂಸ್ಕೃತವಾಗಿರುವುದೆಂಬುದನ್ನು ತಿಳಿದು ಇವನು ಮಾಡಿರುವ ದಾನಕ್ಕೆ ಇಂತಿಷ್ಟೇ ಫಲವೆಂದು ನಿರ್ಧರಿಸಿದೆನು.”
ಈಗ ಉಳಿದ ಮೂವರಲ್ಲಿ ಪುನಃ ಜಿಜ್ಞಾಸೆಯುಂಟಾಯಿತು. ಅವರಲ್ಲೊಬ್ಬನು ನಾರದರನ್ನು ಕೇಳಿದನು : “ಮಹರ್ಷಿಗಳೇ! ತಾವು ಹೇಳಿದಂತೆ ಅಷ್ಟಕನು ಮೊದಲು ಸ್ವರ್ಗದಿಂದ ಕೆಳಗಿಳಿಯುತ್ತಾನೆ. ನಾವು ಮೂವರೂ ಸನ್ಮಾರ್ಗದಲ್ಲಿಯೇ ಇದ್ದೇವೆ. ನಾವು ಅಷ್ಟಕನಿಗಿಂತಲೂ ಇನ್ನೂ ಸ್ವಲ್ಪ ಹೆಚ್ಚುಕಾಲ ಸ್ವರ್ಗದಲ್ಲಿರಲು ಸಾಧ್ಯವಾಗಬಹುದೇ ಹೊರತು ಶಾಶ್ವತವಾದ ಸ್ವರ್ಗಸುಖವು ನಮಗಾರಿಗೂ ಸಿಕ್ಕಲಾರದು. ನಾವು ಮೂವರಲ್ಲಿ ಯಾರು ಮೊದಲು ಸ್ವರ್ಗದಿಂದ ಭೂಮಿಯಲ್ಲಿ ಜನಿಸುತ್ತೇವೆ. ನಾರದರು ಕೂಡಲೇ ಹೇಳಿದರು : ‘ಪ್ರತರ್ದನ.’ಹುಟ್ಟುತ್ತಾನೆ. ಇವನ ಮನೆಯಲ್ಲಿಯೂ ನಾನು ಸ್ವಲ್ಪಕಾಲ ತಂಗಿದ್ದೆನು. ಇವನೂ ಒಮ್ಮೆ ನನ್ನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವಿಹಾರಾರ್ಥವಾಗಿ ಹೊರಟನು. ರಥಕ್ಕೆ ನಾಲ್ಕು ಕುದುರೆಗಳು ಕಟ್ಟಲ್ಪಟ್ಟಿದ್ದುವು. ಪ್ರಯಾಣಮಾಡುತ್ತಿರುವ ಸಮಯದಲ್ಲಿ ಒಬ್ಬ ಬ್ರಾಹ್ಮಣನು ಎದುರಾಗಿ ಬಂದು ರಾಜನಿಗೆ ಸ್ವಸ್ತಿವಾಚನಮಾಡಿ ಆಶೀರ್ವದಿಸಿ, ತನಗೊಂದು ಕುದುರೆಯನ್ನು ದಾನವಾಗಿ ಕೊಡುವಂತೆ ಪ್ರಾರ್ಥಿಸಿದನು. ತಾನು ರಾಜಧಾನಿಗೆ ಹಿಂದಿರುಗಿದನಂತರ ಕುದುರೆಯನ್ನು ಕೊಡುವೆನೆಂದು ಪ್ರತರ್ದನನು ಬ್ರಾಹ್ಮಣನಿಗೆ ಹೇಳಿದನು. ಆದರೆ ಬ್ರಾಹ್ಮಣನು ಅದಕ್ಕೊಪ್ಪಲಿಲ್ಲ. ಕೂಡಲೇ ತನಗೆ ಕುದುರೆಯು ಬೇಕಾಗಿದೆಯೆಂದು ಒತ್ತಾಯಮಾಡಿ ಕೇಳಿದನು. ಬ್ರಾಹ್ಮಣನು ಒತ್ತಾಯ ಪಡಿಸಿದನಂತರ ರಾಜನು ತನ್ನ ರಥದ ಬಲಭಾಗದಲ್ಲಿ ಕಟ್ಟಿದ್ದ ಕೊನೆಯ ಕುದುರೆಯನ್ನೇ ಬಿಚ್ಚಿ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟನು. ಮೂರು ಕುದುರೆಗಳಿಂದ ಎಳೆಯಲ್ಪಡುತ್ತಿದ್ದ ರಥವು ಮುಂದೆ ಸ್ವಲ್ಪದೂರ ಹೋಗುವುದರೊಳಗಾಗಿ ಮತ್ತೊಬ್ಬ ಬ್ರಾಹ್ಮಣನು ಬಂದನು. ಅವನೂ ಒಂದು ಕುದುರೆಯನ್ನೇ ದಾನವಾಗಿ ಕೇಳಿದನು. ರಾಜಧಾನಿಗೆ ಹಿಂದಿರುಗಿದನಂತರ
ಕೊಡುವೆನೆಂಬ ರಾಜನ ಉತ್ತರವು ಅವನಿಗೂ ಸಹ್ಯವಾಗಲಿಲ್ಲ. ರಥದ ಎಡ ಭಾಗದ ಕೊನೆಯಲ್ಲಿದ್ದ ಕುದುರೆಯನ್ನು ಬಿಚ್ಚಿ ಪ್ರತರ್ದನನು ಬ್ರಾಹ್ಮಣನಿಗೆ ದಾನವಾಗಿ ಕೊಟ್ಟುಬಿಟ್ಟನು. ರಥದಲ್ಲಿ ಎರಡು ಕುದುರೆಗಳು ಮಾತ್ರವೇ ಉಳಿದುವು. ನಾವಿಬ್ಬರೂ ಇನ್ನೂ ಮುಂದೆ ಸ್ವಲ್ಪದೂರ ಪ್ರಯಾಣಮಾಡಿದೆವು. ಇನ್ನೊಬ್ಬ ಬ್ರಾಹ್ಮಣನು ರಥಕ್ಕೆದುರಾಗಿ ಬಂದು ರಾಜನನ್ನು ಆಶೀರ್ವದಿಸಿ ತಾನು ಯಾಚಿಸಲು ಬಂದಿರುವುದಾಗಿಯೂ ತನ್ನ ಇಷ್ಟಾರ್ಥವನ್ನು ಪೂರೈಸಬೇಕೆಂದೂ ಹೇಳಿ ದನು. ಪ್ರತರ್ದನನು ರಥವನ್ನು ನಿಲ್ಲಿಸಿ ಕೆಳಗಿಳಿದು ಬ್ರಾಹ್ಮಣನಿಗೆ ನಮಸ್ಕರಿಸಿ ಏನುಬೇಕೆಂದು ಕೇಳಲಾಗಿ, ಅವನು ಕೇಳಿದ್ದೂ ಒಂದು ಕುದುರೆಯನ್ನೇ. ಬ್ರಾಹ್ಮಣನಿಗೂ ಪ್ರತರ್ದನನುನಗರಕ್ಕೆ ಹಿಂದಿರುಗಿದನಂತರ ಕೊಡುವೆನೆಂಬಹಿಂದಿನ ಇಬ್ಬರಿಗೆ ಕೊಟ್ಟ ಉತ್ತರವನ್ನೇ ಕೊಟ್ಟನು. ಆದರೆ ಬ್ರಾಹ್ಮಣನೂ ಅದಕ್ಕೊಪ್ಪಲಿಲ್ಲ. ರಾಜನು ಉಳಿದಿದ್ದ ಎರಡು ಕುದುರೆಗಳಲ್ಲಿ ಒಂದನ್ನು ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಬೇಕಾಯಿತು. ನಾನು ಘಟನೆಗಳೆಲ್ಲವನ್ನೂ ವೀಕ್ಷಿಸುತ್ತಾ ರಾಜನ ಮನಸ್ಸಿನ ಜೌದಾರ್ಯವನ್ನು ಬಹು ಸೂಕ್ಷ್ಮರೀತಿಯಲ್ಲಿ ಗ್ರಹಿಸುತ್ತಿದ್ದೆನು. ಉಳಿದಿದ್ದ ಒಂದೇ ಕುದುರೆಯು ನಮ್ಮ ರಥವನ್ನು ಇನ್ನೂ ಸ್ವಲ್ಪದೂರ ಮುಂದೆ ಕೊಂಡೊಯ್ದಿತು. “ಸ್ವಲ್ಪ ಮುಂದಕ್ಕೆ ಇನ್ನೊಬ್ಬ ನಾಲ್ಕನೆಯ ಬ್ರಾಹ್ಮಣನು ರಥಮ ಮುಂದೆ ಬಂದು ನಿಂತನು. ಅಡಿಗಡಿಗೆ ಯಾಚಕರು ಬರುತ್ತಿದ್ದರೂ ರಾಜನ ಮುಖವು ವಿವರ್ಣವಾಗಲಿಲ್ಲ. ರಥವನ್ನು ನಿಲ್ಲಿಸಿ ಕೆಳಗಿಳಿದು ಬ್ರಾಹ್ಮಣನಿಗೆ ನಮಸ್ಕರಿಸಿ ಪ್ರತರ್ದನನು ಪ್ರಶ್ನಿಸಿದನು. “ಏನು ಬೇಕೆಂದು ಪ್ರಶ್ನಿಸಿದನು ಅದಕ್ಕೆ ಬ್ರಾಹ್ಮಣನು ನನಗೆ ಒಂದು ಕುದುರೆಯು ಅತ್ಯವಶ್ಯವಾಗಿ ಬೇಕಾಗಿರುವುದು.” ಬ್ರಾಹ್ಮಣನೂ ಕುದುರೆಯನ್ನೇ ಕೇಳಿದನು. ರಥಕ್ಕೆ ಕಟ್ಟಿದ್ದುದು ಒಂದೇ ಒಂದು ಕುದುರೆ. ರಾಜನ ಪ್ರತಿಕ್ರಿಯೆಯನ್ನು ನೋಡಬೇಕೆಂದು ನನ್ನ ಮನಸ್ಸು ತವಕಿಸುತ್ತಿದ್ದಿತು. ಹಿಂದಿನ ಮೂವರು ಯಾಚಕರಿಗೆ ಉತ್ತರಿಸಿದಂತೆಯೇ ಬ್ರಾಹ್ಮಣನಿಗೂ ರಾಜನು ನಗರಕ್ಕೆ ಹಿಂದಿರುಗಿದನಂತರ ಕೊಡುವೆನೆಂದೇ ಉತ್ತರವನ್ನಿತ್ತನು. ಆದರೆ ರಥವನ್ನೆಳೆಯುತ್ತಿರುವುದು ಒಂದೇ ಕುದುರೆಯೆಂಬುದನ್ನೂ ವಿವೇಚಿಸದೇ ಬ್ರಾಹ್ಮಣನು ತನಗೆ ಕುದುರೆಯು ಈಗಲೇ ಬೇಕಾಗಿದೆಯೆಂದೂ, ಕಾಲಮೀರಿ ದಾನಕೊಡುವುದು ನಿರರ್ಥಕವೆಂದೂ ಹೇಳಿದನು. ಒಡನೆಯೇ ರಾಜನು ಇದ್ದ ಒಂದು ಕುದುರೆಯನ್ನೂ ಬ್ರಾಹ್ಮಣನಿಗೆ ಕೊಟ್ಟು ಕುದುರೆಯ ಸ್ಥಾನದಲ್ಲಿ ತಾನೇ ನಿಂತು ರಥವನ್ನೆಳೆಯುತ್ತಾ ಹೇಳಿದನು : “ಈಗ ಯಾವನಾದರೂ ಬ್ರಾಹ್ಮಣನು ಬಂದರೆ ದಾನವಾಗಿಕೊಡಲು ನನ್ನಲ್ಲಿ ಏನೂ ಇಲ್ಲವಲ್ಲ! ಏನು ಮಾಡಲಿ?” ಪ್ರತರ್ದನನು ತನ್ನಲ್ಲಿದ್ದ ನಾಲ್ಕು ಕುದುರೆಗಳನ್ನು ದಾನವಾಗಿ ಕೊಟ್ಟಿದ್ದು ನಿಶ್ಚಯ. ಆದರೆ ಅವನು ಪ್ರತಿಯೊಂದು ಬಾರಿ ದಾನಮಾಡುವಾಗಲೂ, “ರಥಕ್ಕೆ ಕಟ್ಟಿರುವ ಕುದುರೆಗಳನ್ನು ಕೊಟ್ಟುಬಿಡಲೇ? ಮೂರೇ ಕುದುರೆಗಳಿವೆಯಲ್ಲಾ! ಕೊಡುವುದೆಂತು? ಎರಡು ಕುದುರೆಗಳು ಮಾತ್ರವೇ ಉಳಿದಿವೆ. ಮಾಡುವುದೇನು? ಇರುವ ಒಂದು ಕುದುರೆಯನ್ನೂ ಕೊಟ್ಟು ಬಿಟ್ಟರೆ ಹೇಗೆ?” ವಿಧವಾಗಿ ತರ್ಕಿಸಿ ದಾನಮಾಡಿದನು. ದಾನಮಾಡುವಾಗ ವಿಧವಾದ ಜಿಜ್ಞಾಸೆಯು ಮನಸ್ಸಿನಲ್ಲಿಬಾರದು. ಆದುದರಿಂದಲೇ ನಿಮ್ಮ ಮೂವರಲ್ಲಿ ಪ್ರತರ್ದನನು ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ. ಎಲ್ಲರಿಗಿಂತಲೂ ಮೊದಲು ಅಷ್ಟಕನು ಸ್ವರ್ಗದಿಂದ ಚ್ಯುತನಾಗುವನೆಂದೂ ಎರಡನೆಯವನು ಪ್ರತರ್ದನನೆಂದೂ ನಾರದರು ಹೇಳಿದರು. ಉಳಿದಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುವರೆಂಬ ವಿಷಯವಾಗಿ ಈಗ ಜಿಜ್ಞಾಸೆಯುಂಟಾಯಿತು. ಇಬ್ಬರಲ್ಲಿ ಒಬ್ಬನು ನಾರದರನ್ನು ಕೇಳಿದನು: “ಮಹರ್ಷಿಗಳೇ! ನಮ್ಮಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುತ್ತೇವೆ?” ನಾರದರು ಹೇಳುತ್ತಾರೆವಸುಮನಸ.’ ಇದಕ್ಕೆ ಕಾರಣವೇನೆಂದರೆನಾನು ಹೀಗೆಯೇ ಪ್ರಪಂಚವೆಲ್ಲವನ್ನೂ ಸುತ್ತುತ್ತಿದ್ದಾಗ ಒಮ್ಮೆ ವಸುಮನಸನ ಮನೆಗೂ ಹೋಗಿದ್ದೆನು. ಸಮಯಕ್ಕೆ ಸರಿಯಾಗಿ ದೇವತೆ ಗಳಿಂದ ಕೊಡಲ್ಪಟ್ಟಿದ್ದ ಪುಷ್ಪರಥಕ್ಕೆ ಬ್ರಾಹ್ಮಣರು ಸ್ವಸ್ತಿವಾಚನವನ್ನು ಮಾಡುತ್ತಿದ್ದರು. ನಾನು ರಾಜನ ಸಮೀಪಕ್ಕೆ ಹೋದೆನು. ವೇಳೆಗೆ ಸ್ವಸ್ತಿ ವಾಚನವೂ ಮುಗಿಯಿತು. ಒಡನೆಯೇ ದಿವ್ಯರಥವು ಎಲ್ಲರಿಗೂ ಕಾಣಿಸಿತು. ಅನೇಕಾನೇಕ ಮಹಾಯಜ್ಞಗಳನ್ನು ಮಾಡಿ ದೇವತೆಗಳನ್ನು ಆರಾಧಿಸುತ್ತಿದ್ದ ವಸುಮನಸನಿಗೆ ಅವನು ಮಾಡಿದ ಯಜ್ಞದಿಂದ ಸುಪ್ರೀತರಾಗಿದ್ದ ದೇವತೆಗಳು ಪುಷ್ಪರಥವನ್ನು ಅನುಗ್ರಹಿಸಿದ್ದರು.) ನಾನು ರಥವನ್ನು ಮನಸಾರ ಹೊಗಳಿದೆನು. ನಾನು ಮಾಡಿದ ಪುಷ್ಪರಥದ ಸ್ತೋತ್ರವನ್ನು ಕೇಳಿ ವಸುಮನಸನು ನನ್ನೊಡನೆ ಹೇಳಿದನು : “ಮಹರ್ಷಿಗಳೇ! ನೀವು ಪುಷ್ಪರಥದ ಸೌಂದರ್ಯವನ್ನು ನೋಡಿ ಅದನ್ನು ಹೊಗಳಿದಿರಲ್ಲವೇ? ನಿಮ್ಮ ಹೊಗಳಿಕೆಗೆ ಪಾತ್ರವಾಗಿರುವ ರಥವು ಉತ್ತಮೋತ್ತಮವಾದುದೆಂಬುದರಲ್ಲಿ ಸಂಶಯವೇ ಇಲ್ಲ. ಅದೂ ಅಲ್ಲದೇ ಇಂತಹ ಉತ್ತಮವಾದ ವಸ್ತುವು ಮಹಾಜ್ಞಾನಿಗಳಾದ ತಮಗೇ ಸೇರುವುದು ಉಚಿತವಾಗಿದೆ. ಆದುದರಿಂದ ರಥವು ನಿಮ್ಮದೇ ಆಗಲಿ. ನಾನಿದನ್ನು ನಿಮಗೆ ಅರ್ಪಿಸಿದ್ದೇನೆ.” ಇದಾದ ಕೆಲವು ದಿನಗಳನಂತರ ಪುನಃ ಅವನಲ್ಲಿಗೆ ಹೋದೆನು. ಸಮಯಕ್ಕೆ ಸರಿಯಾಗಿ ಮತ್ತೊಂದು ಪುಷ್ಪರಥವನ್ನು ದೇವತೆಗಳು ಅನುಗ್ರಹಿಸಿದ್ದರು. ಅದರ ಸೌಂದರ್ಯವನ್ನು ನೋಡಿ ಭ್ರಾಂತನಾದ ನಾನು ರಥವನ್ನೂ ಸ್ತೋತ್ರಮಾಡಿದೆನು. ವಸುಮನಸನು ರಥವನ್ನೂ ನನಗೇ ಕೊಟ್ಟುಬಿಟ್ಟನು. ಮೂರನೆಯ ಬಾರಿ ರಾಜನ ಬಳಿಗೆ ಹೋಗುವ ಸಂದರ್ಭವೂ ಒದಗಿತು. ಕಾಕತಾಳನ್ಯಾಯದಂತೆ ಬಾರಿಯೂ ಬ್ರಾಹ್ಮಣರು ನೂತನವಾದ ಪುಷ್ಪರಥಕ್ಕೆ ಸ್ವಸ್ತಿವಾಚನಮಾಡುತ್ತಿದ್ದರು. ಸ್ವಸ್ತಿವಾಚನವು ಮುಗಿದ ನಂತರ ಅಲ್ಲಿದ್ದವರೆಲ್ಲರ ದೃಷ್ಟಿಗೂ ದಿವ್ಯರಥವು ಕಾಣಿಸಿಕೊಂಡಿತು. ರಥದ ಅನುಪಮವಾದ ಸೌಂದರ್ಯವನ್ನು ನೋಡಿದೊಡನೆಯೇ ಮುಗ್ಧನಾಗಿ ಹೋದ ನಾನು ಅದನ್ನೂ ಸ್ತೋತ್ರಮಾಡಿದೆನು. ನಾನು ಸ್ತೋತ್ರಮಾಡಿ ಮುಗಿಸಿದ ನಂತರ ವಸುಮನಸನುಮಹರ್ಷಿಗಳೇ! ನಿಮ್ಮಿಂದ ಪುಷ್ಪರಥಕ್ಕೆ ಸ್ವಸ್ತಿವಾಚನವು ಬಹಳ ಚೆನ್ನಾಗಿ ಮಾಡಲ್ಪಟ್ಟಿತುಎಂದು ಮಾತ್ರವೇ ಹೇಳಿ ಸುಮ್ಮನಾದನು. ಸಮಯದಲ್ಲಿ ಇವನಿಗೆ ರಥವನ್ನು ದಾನಕೊಡುವ ಮನಸ್ಸು ಬರಲಿಲ್ಲ. ಕಾರಣದಿಂದ ಶಿಬಿಗಿಂತಲೂ ವಸುಮನಸನು ಮೊದಲು ಸ್ವರ್ಗದಿಂದ ಚ್ಯುತನಾಗುತ್ತಾನೆ.” ನಾಲ್ವರಲ್ಲಿ ಒಬ್ಬನು ಪುನಃ ನಾರದರನ್ನು ಕೇಳಿದನು : “ನಾರದರೇ ಒಂದುವೇಳೆ ನೀವೂ ಮತ್ತು ಶಿಬಿಯೂ ಸ್ವರ್ಗಕ್ಕೆ ಹೋದರೆ ನಿಮ್ಮಿಬ್ಬರಲ್ಲಿ ಯಾರು ಮೊದಲು ಸ್ವರ್ಗದಿಂದ ಚ್ಯುತರಾಗುತ್ತಾರೆ?” ನಾರದರು ಒಡನೆಯೇ ಹೇಳಿದರು : “ನಾನೇ ಮೊದಲು ಕೆಳಗೆ ಬೀಳುತ್ತೇನೆ. ಶಿಬಿಯು ಮಾತ್ರ ಅಲ್ಲಿಯೇ ಇರುತ್ತಾನೆ.” ನಾಲ್ವರಲ್ಲೊಬ್ಬನು ಪುನಃ ನಾರದರನ್ನು ಪ್ರಶ್ನಿಸಿದನು. “ಶಿಬಿಯು ನಮ್ಮೆಲ್ಲರಿಗಿಂತಲೂ ಹೆಚ್ಚು ಕಾಲ ಸ್ವರ್ಗದಲ್ಲಿರುವ ಸಾಮರ್ಥ್ಯವನ್ನು ಹೇಗೆ ಪಡೆದನು? ಯಾವ ಧರ್ಮಕಾರ್ಯದಿಂದಾಗಿ ಇವನಿಗೆ ಮಹಾಫಲವು ಲಭ್ಯವಾಗಿರುವುದು? “ನಾನು ಶಿಬಿಗೆ ಸಮಾನನಲ್ಲ. ಇದಕ್ಕೆ ಕಾರಣವನ್ನು ತಿಳಿಸುವೆನು, ಸಾವಧಾನವಾಗಿ ಕೇಳಿರಿ. ಒಂದಾನೊಂದು ದಿನ ಬ್ರಾಹ್ಮಣನೊಬ್ಬನು ಶಿಬಿಯ ಸಮೀಪಕ್ಕೆ ಬಂದು ಸ್ವಸ್ತಿವಾಚನಮಾಡಿ ಇವನನ್ನು ಕುರಿತು ಹೇಳಿದನು : “ಶಿಬಿರಾಜ ನಾನು ಆಹಾರಾರ್ಥವಾಗಿ ನಿನ್ನಲ್ಲಿಗೆ ಬಂದಿರುವೆನು.” ಅದಕ್ಕುತ್ತರವಾಗಿ ಶಿಬಿಯು ಹೇಳಿದನು : “ಬ್ರಾಹ್ಮಣೋತ್ತಮ ನಾನು ನಿನಗೇನು ಸೇವೆಮಾಡಲಿ? ಕೂಡಲೇ ಆಜ್ಞೆ ಮಾಡುವವನಾಗು.” “ನಿನಗೆ ಬೃಹದ್ಗರ್ಭನೆಂಬ ಒಬ್ಬ ಮಗನಿರುವನಲ್ಲವೇ? ಅವನನ್ನು ಕೊಂದು ಅವನ ಮಾಂಸದಿಂದ ನನಗೆ ಆಹಾರವನ್ನು ಸಿದ್ಧಪಡಿಸುಎಂದು ಹೇಳಿ ಬ್ರಾಹ್ಮಣನು ಹೊರಟುಹೋದನು. ಸಮಯದಲ್ಲಿ ನಾನು ಶಿಬಿಯ ಬಳಿಯಲ್ಲಿಯೇ ಇದ್ದೆನು. ಬ್ರಾಹ್ಮ್ಲಣನ ಮಾತು ಕೇಳಿ ನಾನು ಭ್ರಾಂತನಾದೆನು. ಶಿಬಿಯು ಏನು ಹೇಳುವನು ಮತ್ತು ಏನು ಮಾಡುವನು? ಎಂಬುದನ್ನು ಬಹಳ ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದೆನು. ಮಗನನ್ನು ಕೊಂದು ತನಗೆ ಆಹಾರವನ್ನು ಸಿದ್ಧಪಡಿಸುವಂತೆ ಬ್ರಾಹ್ಮ ಣನು ಆಜ್ಞಾಪಿಸಿದುದಕ್ಕಾಗಿ ಶಿಬಿಯ ಮುಖದಲ್ಲಿ ಸ್ವಲ್ಪವಾದರೂ ಅಸಮಾ ಧಾನದ ಚಿಹ್ನೆಯೂ ಕಾಣಲಿಲ್ಲ. ಬಂದ ಅತಿಥಿಯನ್ನು ಸತ್ಕರಿಸಬೇಕೆಂಬ ನಿಶ್ಚಲಧ್ಯೇಯವೊಂದೇ ಇವನ ಮನಸ್ಸಿನಲ್ಲಿದ್ದಿತು. ಬ್ರಾಹ್ಮಣನು ಹೇಳಿದಂತೆ ತನ್ನ ಮಗನನ್ನು ಕೊಂದು ಅವನ ಮಾಂಸವನ್ನು ಬೇಯಿಸಿ ಘಮ-ಘಮಿಸುವ ಆಹಾರವನ್ನು ಸಿದ್ಧಮಾಡಿಕೊಂಡು ಅದನ್ನು ಒಂದು ಪಾತ್ರೆಯಲ್ಲಿಟ್ಟು ತಲೆಯ ಮೇಲೆ ಹೊತ್ತುಕೊಂಡು ಬ್ರಾಹ್ಮಣನನ್ನು ಹುಡುಕುವ ಸಲುವಾಗಿ ಅರಮನೆಯಿಂದ ಹೊರಟನು. ಇವನು ಬ್ರಾಹ್ಮಣನಿಗಾಗಿ ಆಹಾರವನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾಗ ಇವನಿಗೆದುರಾಗಿ ಸಿಕ್ಕಿದವನೊಬ್ಬನು ರಾಜನನ್ನು ಕುರಿತು ಗಾಬರಿಯಿಂದ ಹೇಳಿದನು : “ಮಹಾರಾಜ! ನೀನು ಹುಡುಕುತ್ತಿರುವ ಬ್ರಾಹ್ಮಣನು ಪಟ್ಟಣದ ಒಳಹೊಕ್ಕು ನಿನ್ನ ಅರಮನೆಗೆ ಬೆಂಕಿಯನ್ನಿಡುತ್ತಿದ್ದಾನೆ. ಅವನು ಬಹಳ ಕುಪಿತನಾಗಿದ್ದಂತೆ ಕಾಣುತ್ತಿದ್ದನು. ನಿನ್ನ ಅರಮನೆಗೆ ಬೆಂಕಿಯಿಟ್ಟದ್ದು ಮಾತ್ರವಲ್ಲದೇ ಬೊಕ್ಕಸಕ್ಕೂ, ನಿನ್ನ ಪತ್ನಿಯರಿರುವ ಅಂತಃಪುರಕ್ಕೂ, ಕುದುರೆಲಾಯ, ಆನೆಲಾಯಗಳಿಗೂ ಬೆಂಕಿಯಿಟ್ಟನು.” ಅಷ್ಟೊಂದು ರಾದ್ಧಾಂತದ ವಾರ್ತೆಯನ್ನು ಕೇಳಿದರೂ ಶಿಬಿಯ ಮುಖ ದಲ್ಲಿ ಕಳವಳದ ಕುರುಹೂ ಕಾಣಲಿಲ್ಲ. ಪುನಃ ನಗರಕ್ಕೆ ಹೋಗಿ ಅರಮನೆ ಯನ್ನು ಹೊಕ್ಕು ಅಲ್ಲಿಯೇ ಇದ್ದ ಬ್ರಾಹ್ಮಣನನ್ನು ಕಂಡು ವಿನೀತನಾಗಿಯೇ ಹೇಳಿದನು : “ಪೂಜ್ಯನೇ, ನಿನ್ನ ಆಜ್ಞಾನುಸಾರವಾಗಿ ಭೋಜನವನ್ನು ಸಿದ್ಧಗೊಳಿಸಲಾಗಿದೆ. ಸ್ವೀಕರಿಸು.” ಶಿಬಿಯ ಮಾತನ್ನು ಕೇಳಿ ಬ್ರಾಹ್ಮಣನು ಮಾತನಾಡಲೇ ಇಲ್ಲ. ಮೌನದಿಂದಲೇ ಕುಳಿತಿದ್ದನು. ಅಷ್ಟು ದಾರುಣವಾದ ಮಾರ್ತೆಗಳನ್ನು ಕೇಳಿಯೂ ರಾಜನ ಮುಖವು ಸ್ವಲ್ಪವಾದರೂ ವಿಕಾರಹೊಂದದಿರುವುದನ್ನು ನೋಡಿ ಬ್ರಾಹ್ಮಣನಿಗೆ ಪರ ಮಾಶ್ಚರ್ಯವಾಯಿತು. ರಾಜನನ್ನು ಇನ್ನೂ ಪರೀಕ್ಷಿಸುವುದು ಹೇಗೆಂಬುದನ್ನು ಯೋಚಿಸುತ್ತಾ ನೆಲದ ಮೇಲೆಯೇ ಕ್ಷಣಕಾಲ ನೆಟ್ಟದೃಷ್ಟಿಯುಳ್ಳವನಾಗಿ ಕುಳಿತಿದ್ದನು. ಶಿಬಿಗೆ ಬ್ರಾಹ್ಮಣನನ್ನು ಸತ್ಕರಿಸುವುದರಲ್ಲಿಯೇ ಪರಮಾಸಕ್ತಿಯಿದ್ದಿತು. ಅದೇ ತನ್ನ ಪರಮೋತ್ಕೃಷ್ಟಧರ್ಮವೆಂದೂ ದೃಢವಾಗಿ ನಂಬಿದ್ದನು. ಬ್ರಾಹ್ಮಣನನ್ನು ಸಂತೈಸುವ ಸಲುವಾಗಿ ಪುನಃ ದೈನ್ಯಭಾವದಿಂದ ಅವನೊಡನೆ ಶಿಬಿಯು ಹೇಳಿದನು : “ಭೋಜನವನ್ನು ಮಾಡಬಹುದಲ್ಲವೇ?” ಬ್ರಾಹ್ಮಣನು ಶಿಬಿಯ ಮುಖವನ್ನು ದುರ ದುರನೆ ಕ್ಷಣಕಾಲ ನೋಡಿನೀನೇ ಊಟ ಮಾಡುಎಂದು ಆಜ್ಞಾಪಿಸಿದನು. ತನ್ನ ಮಗನನ್ನು ಕೊಂದು ಸಿದ್ಧಪಡಿಸಿದ್ದ ಆಹಾರವನ್ನು ತಾನೇ ತಿನ್ನಬೇಕು. ವಿಷಯವು ಕೇಳುವವರಿಗೇ ಹೃದಯ ವಿದಾರಕವಾಗಿದ್ದರೂ ಶಿಬಿಯು ಬ್ರಾಹ್ಮಣನ ಮಾತಿನಿಂದಿಲೂ ವಿಚಲಿತ ಗೊಳ್ಳಲಿಲ್ಲ. ಬ್ರಾಹ್ಮಣನು ಹೇಳಿದುದೆಲ್ಲವೂ ಭಗವದಾಜ್ಞೆಯೆಂದೇ ಭಾವಿಸಿಹಾಗೆಯೇ ಆಗಲೆಂದುಬ್ರಾಹ್ಮಣನಿಗೆ ಉತ್ತರವಿತ್ತು, ತನ್ನ ತಲೆಯ ಮೇಲಿದ್ದ ಪಾತ್ರೆಯನ್ನು ಕೆಳಗಿಳಿಸಿ, ಬ್ರಾಹ್ಮಣನ ಆಜ್ಞಾನುಸಾರವಾಗಿ ಭೋಜನಮಾಡಲು ಸಿದ್ಧನಾದನು. ಬ್ರಾಹ್ಮಣನಿಗೆ ಅದನ್ನು ನೋಡಿ ಸಹಿಸಲಾಗಲಿಲ್ಲ. ಮೇಲೆದ್ದು ಹೋಗಿ ಶಿಬಿಯ ಕೈಹಿಡಿದು ಹೇಳಿದನುಶಿಬಿರಾಜ! ನೀನು ಕೋಪವನ್ನು ಸಂಪೂರ್ಣವಾಗಿ ಜಯಿಸಿ ಬಿಟ್ಟಿರುವೆ. ಬ್ರಾಹ್ಮಣನಿಗೆ ಕೊಡಕೂಡದೆಂದಿರುವ ವಸ್ತುವೇ ನಿನ್ನಲ್ಲಿಲ್ಲ. ತನು-ಮನ-ಧನ-ಪುತ್ರ-ಮಿತ್ರ-ಕಳತ್ರರೇ ಆದಿಯಾಗಿ ಸರ್ವಸ್ವವನ್ನೂ ನೀನು ಬ್ರಾಹ್ಮಣರಿಗೆ ದಾನಮಾಡಲು ಸಿದ್ಧನಾಗಿರುವೆಎಂದು ಹೇಳುತ್ತಾ ರಾಜನನ್ನು ಪುರಸ್ಕರಿಸಿದನು. ಬ್ರಾಹ್ಮಣನು ಸಂತುಷ್ಟನಾದುದಕ್ಕಾಗಿ ಸಂತಸಗೊಂಡ ಶಿಬಿಯು ತಲೆಯೆತ್ತಿ ನೋಡಲಾಗಿ, ತಾನು ಸಂಹರಿಸಿದ್ದ ಮಗನು ಜೀವಂತನಾಗಿ ದೇವತೆಯೋಪಾದಿಯಲ್ಲಿ ದಿವ್ಯಾಭರಣಗಳನ್ನು ಧರಿಸಿ ತನ್ನ ಮಗ ಮುಗುಳ್ನಗೆಯೊಡನೆ ಅಲ್ಲಿಯೇ ನಿಂತಿರುವುದನ್ನು ಕಂಡನು. ತಂದೆ ಮಕ್ಕಳಿಬ್ಬರನ್ನೂ ಆಶೀರ್ವದಿಸಿ ಬ್ರಾಹ್ಮಣನು ಅದೃಶ್ಯನಾದನು. ರಾಜಕುಮಾರರೇ ಬ್ರಹ್ಮನೇ ಬ್ರಾಹ್ಮಣನ ರೂಪವನ್ನು ಧರಿಸಿ ಶಿಬಿಯನ್ನು ಪರೀಕ್ಷಿಸುವ ಸಲುವಾಗಿ ಬಂದಿದ್ದನು. ಬ್ರಾಹ್ಮಣವೇಷದಲ್ಲಿದ್ದ ಬ್ರಹ್ಮನು ಅಂತರ್ಧಾನನಾದನಂತರ ಶಿಬಿಯ ಸಚಿವರು ಶಿಬಿಯನ್ನು ಕೇಳಿದರು : “ಮಹಾರಾಜ, ನೀನು ಎಲ್ಲ ವಿಷಯಗಳನ್ನೂ ತಿಳಿದವನಾಗಿರುವೆ. ಯಾವ ಅಪೇಕ್ಷೆಯಿಂದ ನೀನು ಹೀಗೆ ಮಾಡಿದೆ?. ನಾವೂ ಸಹ ಇದರ ರಹಸ್ಯವನ್ನು ತಿಳಿಯಬೇಕೆಂಬ ಆಶಯದಿಂದಿರುತ್ತೇವೆ.” ಶಿಬಿಯು ಉತ್ತರಿಸಿದನು :
ನೈವಾಹಮೇತದ್ಯಶಸೇ ದದಾನಿ ಚಾರ್ಥಹೇತೋರ್ನ ಭೋಗತೃಷ್ಣಯಾ |
ಪಾಪೈರನಾಸೇವಿತ ಏಷ ಮಾರ್ಗ ಇತ್ಯೇವಮೇತತ್ಸಕಲಂ ಕರೋಮಿ || ೨೬ ||
ಸದ್ಭಿಃ ಸದಾಧ್ಯಾಸಿತಂ ತು ಪ್ರಶಸ್ತಂ ತಸ್ಮಾ ತ್ಪ್ರಶಸ್ತಂ ಶ್ರಯತೇ ಮತಿರ್ಮೇ || ೨೭ || ಯಶಸ್ಸನ್ನು ಗಳಿಸಲು ನಾನು ದಾನಕೊಡುವುದಿಲ್ಲ. ಧನಲಾಭಕ್ಕಾಗಲೀ, ಭೋಗದ ತೃಷ್ಣೆಯಿಂದಾಗಲೀ ನಾನೀ ಮಾರ್ಗವನ್ನು ಅವಲಂಬಿಸಿರುವುದಿಲ್ಲ. ಪಾಪಾತ್ಮರುಗಳಿಗೆ ಮಾರ್ಗಾನುಸರಣೆಯು ದುಸ್ಸಾಧ್ಯವಾದುದೆಂಬುದನ್ನು ಮನಗಂಡೇ ನಾನೀ ಮಾರ್ಗವನ್ನು ಅನುಸರಿಸಲು ಇಚ್ಛೆಪಡುತ್ತೇನೆ. ಸತ್ಪುರುಷರಿಂದ ಅನುಸರಿಸಲ್ಪಟ್ಟಿರುವ ಮಾರ್ಗವು ಬಹುಪ್ರಶಸ್ತವಾದುದು. ನನ್ನ ಮನಸ್ಸು ಯಾವಾಗಲೂ ಸತ್ಪುರುಷರು ಅನುಸರಿಸಿರುವ ಮಾರ್ಗವನ್ನೇ ಅನುಸರಿಸಿಹೋಗಲು ತವಕಪಡುತ್ತದೆ.”


1 comment: