Search This Blog

Tuesday 17 April 2018

ವೇದದಲ್ಲಿ ಕಾಣಿಸಿಕೊಳ್ಳುವ ಕೀಕಟ ಮತ್ತು ಪ್ರಮಗಂದರು ..............ಮತ್ತು ಇಂದಿನ ಜಗತ್ತು.


ಅಶ್ವಮೇಧ ಎನ್ನುವ ಯಾಗವು ಕ್ಷತ್ರಿಯರಿಗೆ ಮಾತ್ರವೇ ಹೇಳಿರುವ ಯಜ್ಞ. ಮತ್ತು ಇದನ್ನು ಮಾಡುವ ಸಾಮರ್ಥ್ಯ ಇರುವುದು ಕ್ಷತ್ರಿಯರಿಗೆ ಮಾತ್ರ. ಈ ಯಾಗ ಮಾಡಲು ಹೇರಳವಾದ ಸಮ್ಪತ್ತು ಬೇಕಿತ್ತು. ಸಂಪತ್ತಿನ ಸಂಗ್ರಹಕ್ಕಾಗಿ ಒಂದು ಕುದುರೆಯನ್ನು ಪೂಜಿಸಿ ಬಿಡುತ್ತಿದ್ದರು ಆ ಕುದುರೆ ಸ್ವೇಚ್ಚೆಯಾಗಿ ಒಂದು ವರ್ಷಗಳ ಕಾಲ ತಿರುಗುತ್ತಿತ್ತು. ಹೀಗೆ ಸ್ವಚ್ಚಂದವಾಗಿ ಹೋಗುತ್ತಿದ್ದ ಕುದುರೆಯ ಜೊತೆಗೆ ರಾಜಪರಿವಾರದ ಸೈನಿಕರೂ ತೆರಳುತ್ತಿದ್ದರು. ಕುದುರೆಹೋದ ರಾಜ್ಯಗಲಲ್ಲಿ ಯುದ್ಧ ಮಾಡಿ ಹನ ಸಂಗ್ರಹಿಸಿ ತರುತ್ತಿದ್ದರು ಹೀಗೆ ಒಂದು ವರ್ಷದ ತನಕ ನಡೆಯುತ್ತಿದ್ದು ಕೊನೆಯಲ್ಲಿ ಪುನಃ ಯಜ್ಞ ದೀಕ್ಷಿತನಾದವನಲ್ಲಿ ಸೇರುತ್ತಿತ್ತು. ಅದೇ ರೀತಿಯಲ್ಲಿ ವಿಶ್ವಾಮಿತ್ರನು ಪಿಜವನ ಎನ್ನುವ ರಾಜನ ಮಗನಾದ ಸುದಾಸ ಎನ್ನುವ ರಾಜನಲ್ಲಿ ಒಂದು ಅಶ್ವಮೇಧಯಾಗವನ್ನು ಮಾಡಿಸುತ್ತಾನೆ. ವಿಶ್ವಾಮಿತ್ರ ಈ ರಾಜನ ಪುರೋಹಿತನಾಗಿದ್ದ. ಆದುದರಿಂದ ಯಜ್ಞದ ಅಂತ್ಯದಲ್ಲಿ ಸುದಾಸನು ವಿಶ್ವಾಮಿತ್ರನಿಗೆ ಅಧಿಕ ಮೊತ್ತದ ಸಂಪತ್ತನ್ನು ನೀಡುತ್ತಾನೆ. ಸಮ್ಪತ್ತನ್ನು ತೆಗೆದುಕೊಂಡು ವಿಶ್ವಾಮಿತ್ರನು ಹೋಗುತ್ತಿರುವುದು ಕಳ್ಳರಿಗೆ ಗೊತ್ತಾಗಿ ಅವರು ವಿಶ್ವಾಮಿತ್ರನನ್ನು ಅನುಸರಿಸುತ್ತಾರೆ. ವಿಶ್ವಾಮಿತ್ರ ಅವರಿಂದ ತಪ್ಪಿಸಿಕೊಳ್ಳಲು ಶತದ್ರು ಮತ್ತು ವಿಪಾಟ್ (ಇಂದಿನ ಸಟ್ಲೇಜ್ ಮತ್ತು ಬಿಯಾಸ್) ನದಿಯತೀರಕ್ಕೆ ಬಂದಾಗ ನದಿ ಉಕ್ಕಿ ಹರಿಯುತ್ತಿರುತ್ತಾಳೆ ಆಗ ವೇಗವನ್ನು ಕಡಿಮೆಗೊಳಿಸುವಂತೆ ನದಿಯನ್ನು ಪ್ರಾರ್ಥಿಸುತ್ತಾನೆ. ಆಗ ನದೀ ತಮಗೂ ಹವಿಸ್ಸನ್ನು ,ಮುಂದಿನ ಯಜ್ಞದಲ್ಲಿ ಕೊಡುವಂತೆ ಅನುಗ್ರಹಿಸು ಎಂದು ವೇಗ ಕಡಿಮೆ ಮಾಡಿ ದಾರಿ ಬಿಟ್ಟುಕೊಟ್ಟು ಕಳ್ಳರಿಂದ ರಕ್ಷಿಸುತ್ತದೆ. ಇದು ಋಗ್ವೇದದಲ್ಲಿ ಬರುವ ಕಥೆ. ಇದೇ ಯಾಜ ಮಾಡುತ್ತಿರಬೇಕಿದ್ದರೆ ಸುದಾಸ ಇಂದ್ರನಲ್ಲಿ ಪ್ರಾರ್ಥಿಸುವ ಋಕ್ಕುಗಳು ಮಹತ್ವವನ್ನು ಪಡೆಯುತ್ತವೆ.
ಇದೊಂದು ಋಕ್ಕು
ಕಿಂ ತೇ ಕೃಣ್ವಂತಿ ಕೀಕಟೇಷು ಗಾವೋ ನಾಶಿರಂ ದುಹ್ರೇ ನ ತಪಂತಿ ಘರ್ಮಂ |
ಆ ನೋ ಭರ ಪ್ರಮಗಂದಸ್ಯ ವೇದೋ ನೈಚಾ ಶಾಖಂ ಮಘವನ್ರಂಧಯಾ ನಃ || ೩ : ೫೩ : ೧೪
ಈ ಋಕ್ಕು ನನಗೆ ಆಶ್ಚರ್ಯವನ್ನುಂಟು ಮಾಡಿತು. "ಕಿಂ ಕೃತಾಃ ಕಿಂ ಕ್ರಿಯಾಭಿರಿತಿ ಪ್ರೇಪ್ಸಾ ವಾ" ಎನ್ನುವುದು ಇದರ ಅರ್ಥ ಅಂದರೆ, ಸಂಪತ್ತಿನಿಂದ ಕಂಗೊಳಿಸುತ್ತಿರುವ ಇಂದ್ರನೇ, ನಾಸ್ತಿಕರಾದ ಕೀಕಟ ಸಮುದಾಯದ ಜನರ ವಶದಲ್ಲಿರುವ ಗೋವುಗಳು ನಿನ್ನ ಯಜ್ಞ ಕಾರ್ಯಕ್ಕೆ ಉಪಯೋಗಕ್ಕೆ ಬರುವುದಿಲ್ಲ ನಿನ್ನ ಯಜ್ಞ ಕಾರ್ಯದ ಸೋಮರಸಕ್ಕೆ ಆ ಗೋವುಗಳ ಹಾಲು ಉಪಯೋಗಿಸಲ್ಪಡುವುದಿಲ್ಲ, ಅರ್ಘ್ಯ ಪಾತ್ರೆಯಲ್ಲಿಯೂ ಹಾಲಿಡುವುದಿಲ್ಲ ಆದುದರಿಂದ ಅವರಲ್ಲಿದ್ದ ಆ ಗೋವುಗಳನ್ನು ಯಜ್ಞಾಚರಣೆಯಲ್ಲಿರುವ ನಮಗೆ ಅವರ ಗೋ ಸಂಪತ್ತನ್ನು ತಂದು ಒದಗಿಸು ಎನ್ನುತ್ತದೆ.(ಇಲ್ಲಿ ನಾಸ್ತಿಕರಾದ ಕೀಕಟರು ಯಜ್ಞ ಮಾಡುವವರಲ್ಲ, ದೇವತಾರ್ಚನೆ ಮಾಡುವವರಲ್ಲ ಅವರು ತಮ್ಮ ಉಪಯೋಗಕ್ಕಾಗಿ ಗೋವುಗಳನ್ನು ಸಾಕಿಕೊಂಡಿದ್ದಾರೆ ಅವರ ಗೋವು ವ್ಯರ್ಥ ಎನ್ನುವ ಆಶಯ ಅಡಕವಾಗಿದೆ.)
ಕೀಕಟರು ಯಾರು ?
ಕೀಕಟರು ಆ ಕಾಲದಲ್ಲಿದ್ದ ಅನಾಗರಿಕರಾದ ಮೂರ್ವ ನಿವಾಸಿಗಳು. ಇವರು ಸಂಪ್ರದಾಯಸ್ಥರಂತಿರದೇ ಯಜ್ಞ ಯಾಗಾದಿಗಳನ್ನು ಮಾಡದೇ ಇಂದ್ರಾದಿ ದೇವತೆಗಳನ್ನು ಪೂಜಿಸದೇ ಉತ್ತಮವಂಶದಲ್ಲಿಯೇ ಹುಟ್ಟಿದ್ದರೂ ಸಹ ದಾನ, ಧರ್ಮ ಹೋಮಗಳನ್ನು ಮಾಡದೇ ಸತ್ಕರ್ಮಗಳಿಂದ ಪ್ರಯೋಜನ ಏನು ಎನ್ನುವ ಪ್ರತಿ ಪ್ರಶ್ನೆ ಮಾಡುತ್ತಿದ್ದ ಜನರನ್ನು ಕೀಕಟರು ಎನ್ನಲಾಗಿದೆ. ಸಾಮಾನ್ಯವಾಗಿ ಸತ್ಕಾರ್ಯಗಳಿಗೆ ತೊಂದರೆ ಕೊಡುತ್ತಿದ್ದ ಜನ. ಈ ಲೋಕದ ಹೊರತಾದ ಬೇರೆ ಯಾವ ಲೋಕವೂ ಇಲ್ಲ. ಸ್ವರ್ಗ ನರಕಾದಿಗಳಿಲ್ಲ, ಪಾಪ ಪುಣ್ಯಗಳೆಲ್ಲಾ ಸುಳ್ಳು ಆದುದರಿಂದ ವರ್ತಮಾನದ ಘಟನೆಗಳನ್ನು ಸುಖವಾಗಿ ಅನುಭವಿಸಿ ಎನ್ನುತ್ತಿದ್ದ ಜನಾಂಗ.
"ಪ್ರಮಗಂದಸ್ಯ ವೇದೋ" ಎನ್ನುವುದು ಋಕ್ಕಿನ ಇನ್ನೊಂದು ವಿಷಯ ಹಣವನ್ನು ಸಾಲ ರೂಪವಾಗಿ ಅವಶ್ಯ ಇರುವವನಿಗೆ ಕೊಟ್ಟು ಅದು ಎರಡರಷ್ಟು ತಿರುಗಿ ಬಡ್ದಿಯರೂಪದಲ್ಲಿ ಬರುತ್ತದೆ ಎಂದು ದುರಾಲೋಚನೆಯಿಂದ ವ್ಯವಹರಿಸುವವನು "ಮಗಂದ" ಎನ್ನಿಸಿಕೊಳ್ಳುತ್ತಾನೆ. ಪ್ರ ಎನ್ನುವ ಉಪಸರ್ಗ ಸೇರಿದಾಗ ಅದು ಆ "ಮಗಂದ"ನ ಮಗ. ಅಂದರೆ ಬಡ್ಡಿ ತೆಗೆದುಕೊಳ್ಳುವವನ ಮಗ ಇಂದಿಗೂ ಈ ನುಡಿ ಚಾಲ್ತಿಯಲ್ಲಿದೆ ಶಿಷ್ಟ ಕನ್ನಡದಲ್ಲಿ ಬಡ್ಡೀಮಗ ಎನ್ನುವ ಪದ ಬಯ್ಗುಳದ ರೂಪದಲ್ಲಿ ಬರುತ್ತದೆ, ಅದೇ ಬಡ್ಡಿಮಗನೇ ಪ್ರಮಗಂದ. ಈ ಮಗಂದಃ ಎಂದರೆ ಅವರು ಕುಸೀದೀ ದ್ರವ್ಯವನ್ನು ಸಮ್ಚಯನ ಮಾಡುತ್ತಿದ್ದರು. ಇಲ್ಲಿ ಮಗಂದರು ಎಂದರೆ ಅನಾಯಾಸವಾಗಿ ಬೇರೆಯವರ ಸ್ವತ್ತನ್ನು ಅಪಹರಿಸುವವರು. ಅಥವಾ ಮೋಸಗಾರರು ಎಂದಾಗುತ್ತದೆ.
ಪ್ರಮಗಂದ ಎನ್ನುವ ಶಬ್ದಕ್ಕೆ ಪ್ರಮದಕ ಎನ್ನುವ ಶಬ್ದವನ್ನು ಅರ್ಥೈಸ ಬಹುದು. ಇವರೆಲ್ಲಾ ತಮ್ಮ ಕಣ್ಣಿಗೆ ಸಾಕ್ಷಾತ್ಕಾರವಾಗಿರುವುದು ಮಾತ್ರವೇ ಸತ್ಯ ಮಿಕ್ಕವೆಲ್ಲಾ ಕಲ್ಪನೆ ಎಂದು ಸಾರಿದವರು.
"ನೈಚಾ ಶಾಖಂ" ಎಂದರೆ ಕುಲೀನ ವಂಶದೊಡನೆ ಬೆರೆತು ಹುಟ್ಟಿದವರು ಅಥವಾ ಬ್ರಾಹ್ಮಣ ಸಂಸ್ಕಾರವಂತನಾದವನು ಉಪನಯನ ವೇದಾಧ್ಯಯನ, ದಾನ ಹೋಮಾದಿಗಳನ್ನು ಮಾಡದೇ ತನ್ನ ಸಂಸ್ಕಾರಗಳಿಂದ ವಿಮುಖನಾಗಿರುವವನು ನೀಚ ಶಾಖೆಯವನು ಎನ್ನುತ್ತದೆ. ಇವರೆಲ್ಲರಲ್ಲಿಯೂ ಗೋವುಗಳಿರುವುದು ಅವರವರ ದೈನಂದಿನ ಉಪಯೋಗಕ್ಕೆ ಹೊರತಾಗಿ ಬೇರಾವ ಉಪಯೋಗಕ್ಕೂ ಅಲ್ಲ ಎನ್ನುವ ಅಭಿಪ್ರಾಯ.
ಶ್ರೀಮದ್ಭಾಗವತದ ಪ್ರಥಮಸ್ಕಂದದ ಮೂರನೇ ಅಧ್ಯಾಯದ ೨೪ನೇ ಶ್ಲೋಕದಲ್ಲಿಯೂ ಕೀಕಟರ ವಿಷಯ ಬಂದಿದ್ದು ಅಲ್ಲಿ ಸುರದ್ವಿಷಾಮ್ ಎನ್ನುವುದಾಗಿ ಹೇಳುತ್ತಾ ಬುದ್ಧೋ ನಾಮ್ನಾ ಜನಸುತಃ ಕೀಕಟಕರಾಗುತ್ತಾರೆ ಎನ್ನುತ್ತದೆ.
ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |
ಬುದ್ಧೋ ನಾಮ್ನಾಜನಸುತಃ ಕೀಕಟೇಷು ಭವಿಷ್ಯತಿ || ೨೪ || ಅಂದರೆ ಬಿಹಾರ ಪ್ರಾಂತ್ಯದಲ್ಲಿ ನೆಲೆಸಿದ ಜನರನ್ನು ಕುರಿತಾಗಿ ಈ ವಾಕ್ಯ ಬಂದಿದ್ದು ಯಾವ ಬುದ್ಧ ಎನ್ನುವುದು ಸ್ಪಷ್ಟವಾಗುವುದಿಲ್ಲ.
ಇನ್ನೊಮ್ಮೆ ಕೀಕಟರನ್ನು ಹೇಳುತ್ತಾ ಕುಶಾವರ್ತ, ಇಳಾವರ್ತ, ಬ್ರಹ್ಮಾವರ್ತ, ಮಲಯ, ಕೇತು, ಭದ್ರಸೇನ, ಇಂದ್ರಸ್ಪೃಕ್, ವಿದರ್ಭ ಮತ್ತು ಕೀಕಟಎಂಬ ಒಂಬತ್ತು ಮಂದಿಗಳು ಉಳಿದವರಿಗಿಂತಲೂ ಹಿರಿಯರೂ ಶ್ರೇಷ್ಠರೂ ಆಗಿದ್ದರು ಎನ್ನುತ್ತದೆ.
ಯತ್ರ ಯತ್ರ ಮದ್ಭಕ್ತಾಃ ಪ್ರಶಾನ್ತಾಃ ಸಮದರ್ಶಿನಃ |
ಸಾಧವಃ ಸಮುದಾಚಾರಾಸ್ತೇ ಪೂಯನ್ತ್ಯಪಿ ಕೀಕಟಾಃ || ೧೯
ಹೀಗೇ ಭಾಗವತ ಪುರಾಣದಲ್ಲಿ ಕೆಲವೆಡೆ ಇವರ ಉಲ್ಲೇಖ ಸಿಗುತ್ತದೆ. 
ಅಕೃಷ್ಣಸಾರೋ ದೇಶಾನಾಮಬ್ರಹ್ಮಣ್ಯೋ ಕೃಷ್ಣಸಾರೋಽಪ್ಯಸೌವೀರಕೀಕಟಾಸಂಸ್ಕೃತೇರಿಣಮ್ || || ಇವರಂತೂ ದೈವ ನಿಂದಕರು ಮತ್ತು ಅಸ್ತಿತ್ವದಲ್ಲಿ ನಂಬುಗೆ ಇಲ್ಲದ ನಾಸ್ತಿಕವಾದವನ್ನು ಪುಸ್ಕರಿಸಿದ್ದುದು ಗೋಚರಿಸುತ್ತದೆ.


1 comment:

  1. Please read this

    http://veda-vijnana.blogspot.in/2018/04/blog-post_29.html

    ReplyDelete