Search This Blog

Saturday 7 April 2018

ಅಗ್ರಹಾರ ಎಂದರೆ ಬ್ರಹ್ಮಪುರೀ – ಚತುರ್ವೇದೀಮಂಗಳ - ಸದ್ಯೋಜಾತ ಭಟ್ಟ


ನಾನಾ ಗೋತ್ರ, ಪ್ರವರ ಮತ್ತು ಶಾಖೆಗಳಿಗೆ ಸೇರಿದ ನಿರ್ದಿಷ್ಟ ಸಂಖ್ಯೆಯ ಬ್ರಾಹ್ಮಣರಿಗೆ, ಅವರು ಗೃಹಸ್ಥಾಶ್ರಮ ನೀತಿನಿಯಮಗಳನ್ನೂ ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಎಂಬ ಈ ಸ್ಮೃತಿಸಿದ್ಧವಾದ ಕಾರ್ಯಗಳನ್ನೂ ನೆರವೇರಿಸಿಕೊಂಡು ಹೋಗಲೆಂದು ಒಂದು ಗ್ರಾಮದ ನೆಲ ಹೊಲಗಳನ್ನೂ ಮನೆಯ ನಿವೇಶನಗಳನ್ನೂ ವೃತ್ತಿಗಳಾಗಿ ವಿಂಗಡಿಸಿ ಸಾಮೂಹಿಕವಾಗಿ ದಾನ ಕೊಟ್ಟಲ್ಲಿ ಅದು ಅಗ್ರಹಾರವೊಂದರ ಸೃಷ್ಟಿಯಾಯಿತೆಂದೇ ಅರ್ಥ. ಕೆಲವು ಶಾಸನಗಳಲ್ಲಿ ಈ ಪಾರಿಭಾಷಿಕ ಪದವನ್ನು ಅಗ್ರಾಹಾರ ಎಂದೂ ಬರೆಯಲಾಗಿದೆ. ಅಗ್ರಹಾರದ ಮೂಲರೂಪ ಅಗ್ರಾಹಾರ’ (ಅಗ್ರ+ಆಹಾರ) ಎಂದೇ ಇದ್ದಿರಬೇಕೆಂಬುದು ಕೆಲವು ವಿದ್ವಾಂಸರ ಅಬಿsಪ್ರಾಯ.

ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲ ಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿರುತ್ತಿತ್ತು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರು. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರಿತ್ತು. ಇವರೆಲ್ಲರೂ ಅನೇಕ ಪ್ರದೇಶಗಳ, ಗ್ರಾಮಗಳ ಘಟಕಗಳ  ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಭಾರತದಾದ್ಯಂತ ಇದ್ದಿದ್ದರೂ ಸಹ ಹೆಚ್ಚಿನ ಅಗ್ರಹಾರಗಳು ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಶಾಸನಗಳಲ್ಲಿ ಮಾತ್ರವಲ್ಲ ಅಗ್ರಹಾರದ ಮೊತ್ತ ಮೊದಲ ಉಲ್ಲೇಖ ನಮಗೆ ಸಿಗುವುದು ಮಹಾಭಾರತದಲ್ಲಿ.
  1. ಮಹಾ ಭಾರತದ ಆದಿಪರ್ವ ಅಧ್ಯಾಯ-೧೩೦ ರಲ್ಲಿ ದ್ರೋಣನು ಪರಶುರಾಮನನ್ನು ಕುರಿತು ಹೇಳಿದನು : ಅಹಂ ಧನಮನನ್ತಂ ಹಿ ಪ್ರಾರ್ಥಯೇ ವಿಪುಲವ್ರತ || ೬೦ || “ಮಹಾವ್ರತಗಳನ್ನು ಪಾಲನೆಮಾಡುವ ಮಹರ್ಷಿಯೇ! ನಾನು ನಿನ್ನಲ್ಲಿರುವ ವಿಪುಲವಾದ ಧನವನ್ನು ಪ್ರಾರ್ಥಿಸುವೆನು.ಎಂದು ದ್ರೋಣ ಹೇಳುವಾಗ ಅದಕ್ಕೆ ಪರಶುರಾಮನುದ್ರೋಣ ಈಗ ಕಾಲ ಮಿಂಚಿಹೋಯಿತು. ನನ್ನಲ್ಲಿದ್ದ ಚಿನ್ನ-ವಜ್ರ-ವೈಡೂರ್ಯಾದಿಗಳೆಲ್ಲವನ್ನೂ ನಾನು ಬ್ರಾಹ್ಮಣರಿಗೆ ದಾನಮಾಡಿಬಿಟ್ಟೆನು. ಅಂತೆಯೇ ಬೇರೆ ಬೇರೆ ನಗರಗಳಿಂದಲೂ, ಪಟ್ಟಣಗಳನ್ನೂ, ಅಗ್ರಹಾರ ಮತ್ತು ಗ್ರಾಮಗಳನ್ನೂ ಹೊಂದಿದ ಸಮುದ್ರಾಂತ ವಾದ ಭೂಮಿಯನ್ನೇ ಕಶ್ಯಪನಿಗೆ ದಾನವಾಗಿ ಕೊಟ್ಟುಬಿಟ್ಟೆನು. ಆದರೆ ಯಾಚಕನಾಗಿ ಬಂದಿರುವ ನಿನಗೆ ನನ್ನಲ್ಲಿ ಏನೂ ಇಲ್ಲವೆಂದು ಹೇಳುವ ಇಚ್ಛೆಯಿಲ್ಲ. ನನ್ನಲ್ಲಿ ಇನ್ನೂ ಎರಡು ವಸ್ತುಗಳುಯಾರಿಂದಲೂ ಅಯಾಚಿತವಾಗಿ ಹಾಗೆಯೇ ಉಳಿದಿವೆ. ಎಂದು ಹೇಳುವಾಗ ಅಗ್ರಹಾರದ ಉಲ್ಲೇಖ ಸಿಗುತ್ತದೆ.
  2. ವನಪರ್ವ ಅಧ್ಯಾಯ-೬೮ ರಲ್ಲಿ ನಲೋಪಾಖ್ಯಾನಪರ್ವ ದ ಸಂದರ್ಭದಲ್ಲಿ ವಿದರ್ಭದ ಭೀಮರಾಜನು ದುಃಖದಿಂದ ನಲ-ದಮಯಂತಿಯರನ್ನು ಹೇಗಾದರೂ ಮಾಡಿ ತನ್ನ ರಾಜ್ಯಕ್ಕೆ ಕರೆತರಬೇಕೆಂಬ ಆಶಯದಿಂದ ಗೂಢಚರ್ಯೆಯಲ್ಲಿ ನಿಷ್ಣಾತರಾದ ಬ್ರಾಹ್ಮಣರನ್ನು ತನ್ನ ಅರಮನೆಗೆ ಕರೆಸಿ ಅವರಿಗೆ ತುಂಬಾ ಹಣನ್ನು ಕೊಟ್ಟು ಹೀಗೆ ಹೇಳುತ್ತಾನೆ ಬ್ರಾಹ್ಮಣೋತ್ತಮರೇ! ನೀವು ಈ ಕೂಡಲೇ ದೇಶ-ವಿದೇಶಗಳಲ್ಲಿ ಸುತ್ತಿ ನಲ-ದಮಯಂತಿಯರು ಎಲ್ಲಿದ್ದಾರೆ ಎಂದು ತಿಳಿಯಿರಿ. ನಲ-ದಮ ಯಂತಿಯರಿರುವ ಸ್ಥಳವನ್ನು ತಿಳಿದು ಅವರನ್ನು ನಮ್ಮ ದೇಶಕ್ಕೆ ಕರೆತರಲು ನಿಮ್ಮಲ್ಲಿ ಯಾರು ಸಮರ್ಥರಾಗುವಿರೋ ಅವರಿಗೆನೇ ನಾನು ಒಂದು ಸಾವಿರ ಗೋವುಗಳನ್ನೂ, ಅಗ್ರಹಾರಗಳನ್ನೂ, ನಗರಸದೃಶವಾದ ಗ್ರಾಮಗಳನ್ನೂ ಬಹುಮಾನವಾಗಿ ಕೊಡುವೆನು. ಒಂದು ವೇಳೆ ನಲ-ದಮಯಂತಿಯರನ್ನು ಕರೆತರಲಾಗದಿದ್ದರೂ ಅವರಿಬ್ಬರೂ ಇರುವ ಸ್ಥಳವನ್ನಾದರೂ ತಿಳಿದು ಬಂದವರೂ ನನ್ನಿಂದ ಒಂದು ಸಾವಿರ ಗೋವುಗಳನ್ನು ಬಹುಮಾನ ರೂಪವಾಗಿ ಪಡೆಯುತ್ತಾರೆ.ಎಂದು ಹೇಳುತ್ತಾನೆ. ವನಪರ್ವದ ೧೮೮ನೇ ಅಧ್ಯಾಯದಲ್ಲಿ ಪರಶುರಾಮನ ಕುರಿತಾದ ಕಥೆಯಲ್ಲಿ" ಆಲದೆಲೆಯ ಮೇಲಾಡುತ್ತಿದ್ದ ಮಗುವಿನ ಹೊಟ್ಟೆಯಲ್ಲಿ ಬ್ರಹ್ಮಾಂಡವನ್ನೇ ಕಂಡೆನು. ಧರ್ಮಪುತ್ರನೇ! ಅಗ್ರಹಾರ, ಗ್ರಾಮ, ಪಟ್ಟಣ, ರಾಜಧಾನೀ, ಅನೇಕಾನೇಕದೇಶಗಳು, ಗಿರಿ-ದುರ್ಗ-ಪರ್ವತಗಳು-ಎಲ್ಲವನ್ನೂ ನಾನು ಅಲ್ಲಿ ಸಂದರ್ಶಿಸಿದೆನು. ಗಂಗಾ, ಶತದ್ರು, ಸೀತಾ, ಯಮುನಾ, ಕೌಶಿಕೀ, ಚರ್ಮಣ್ವತೀ, ವೇತ್ರವತೀ, ಚಂದ್ರಭಾಗಾ, ಸರಸ್ವತೀ, ಸಿಂಧು, ವಿಪಾಶಾ, ಗೋದಾವರೀ, ವಸ್ವೋಕ ಸಾರಾ, ನಲಿನೀ, ನರ್ಮದಾ, ತಾಮ್ರಪರ್ಣೀ, ವೇಣಾ, ಸುವೇಣಾ, ಕೃಷ್ಣ ವೇಣಾ, ಇರಾಮಾ, ಮಹಾನದೀ, ವಿತಸ್ತಾ, ಕಾವೇರೀ, ಶೋಣಾ, ವಿಶಲ್ಯಾ ಕಿಂಪುನಾ ಮೊದಲಾದ ಈ ಪೃಥ್ವಿಯಲ್ಲಿ ಶುಭಜಲದಿಂದ ಕೂಡಿದ್ದ ನದೀ-ನದ ಗಳನ್ನೆಲ್ಲವನ್ನೂ ಆ ಶಿಶುವಿನ ಉದರದಲ್ಲಿಯೇ ಸಂದರ್ಶಿಸಿದೆನು. ಎಂಬ ಉಲ್ಲೇಖ ಸಿಗುತ್ತದೆ. 
3.     ಅನುಶಾಸನಪರ್ವ೬೭ನೇ ಅಧ್ಯಾಯದಾನಧರ್ಮಪರ್ವದಲ್ಲಿ ಯಮಧರ್ಮ-ಬ್ರಾಹ್ಮಣರ ಸಂವಾದದಲ್ಲಿ "ತಿಲಾನಾಂ ಕೀದೃಶಂ ದಾನಮಥ ದೀಪಸ್ಯ ಚೈವ ಹಿ | ಅನ್ನಾನಾಂ ವಾಸಸಾಂ ಚೈವ ಭೂಯ ಏವ ಬ್ರವೀಹಿ ಮೇ || || “ಭೀಷ್ಮ ಪಿತಾಮಹ, ತಿಲದಾನಮಾಡಿದರೆ ಯಾವ ಫಲವಿದೆ? ದೀಪ ದಾನ, ಅನ್ನದಾನ ಮತ್ತು ವಸ್ತ್ರದಾನಗಳಿಗೆ ಯಾವ ಫಲಗಳೆಂಬುದನ್ನು ಪುನಃ ಹೇಳು.ಭೀಷ್ಮನು ಹೇಳುತ್ತಾನೆ: ಯುಧಿಷ್ಠಿರ! ಈ ವಿಷಯದಲ್ಲಿ ಹಿಂದೆ ಒಬ್ಬ ಬ್ರಾಹ್ಮಣನಿಗೂ ಯಮಧರ್ಮನಿಗೂ ನಡೆದ ಪುರಾತನವಾದ ಇತಿಹಾಸರೂಪವಾದ ಸಂವಾದವನ್ನು ವಿದ್ವಾಂಸರು ಉದಾಹರಿಸುತ್ತಾರೆ. ಗಂಗಾ ಮತ್ತು ಯಮುನೆಯರ ಮಧ್ಯಭಾಗದಲ್ಲಿ ಯಾಮುನ ಪರ್ವತದ ಕೆಳಭಾಗದಲ್ಲಿ ಬ್ರಾಹ್ಮಣರ ದೊಡ್ಡದಾದ ಅಗ್ರಹಾರವಿದ್ದಿತು. ಪರ್ಣಶಾಲಾ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದ ಆ ಗ್ರಾಮವು ಅತ್ಯಂತರಮಣೀಯವಾಗಿತ್ತು. ಅಲ್ಲಿ ವಿದ್ವಾಂಸರಾದ ಅನೇಕಬ್ರಾಹ್ಮಣರು ವಾಸವಾಗಿದ್ದರು. ಒಮ್ಮೆ ಯಮರಾಜನು, ಕಪ್ಪಾದ ವಸ್ತ್ರವನ್ನುಟ್ಟಿದ್ದ, ಕೆಂಗಣ್ಣನಾಗಿದ್ದ, ಮೇಲ್ಮುಖವಾದ ರೋಮಗಳುಳ್ಳವನಾಗಿದ್ದ, ಕಾಗೆಯ ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಮತ್ತು ಮೂಗಿಗೆ ಸಮಾನವಾದ ಮೊಣಕಾಲುಗಳನ್ನೂ, ಕಣ್ಣುಗಳನ್ನೂ, ಮೂಗನ್ನೂ ಹೊಂದಿದ್ದ ತನ್ನ ದೂತನಿಗೆ ಹೇಳಿದನು: ನೀನು ಭೂಲೋಕದಲ್ಲಿ ಗಂಗಾ ಮತ್ತು ಯಮುನೆಯರ ಮಧ್ಯದಲ್ಲಿರುವ ಬ್ರಾಹ್ಮಣರ ಅಗ್ರಹಾರಕ್ಕೆ ಹೋಗು. ಅಲ್ಲಿರುವ ಅಗಸ್ತ್ಯಗೋತ್ರೋದ್ಭವನಾದ, ಅಗಸ್ತ್ಯಶರ್ಮಾ ಎಂಬ ಹೆಸರಿನ, ಶಮಪರಾಯಣನಾದ, ವಿದ್ವಾಂಸನಾದ, ಅಧ್ಯಾಪಕನಾದ, ಉತ್ತರೀಯವನ್ನು ಹೊದೆದುಕೊಳ್ಳದಿರುವ ಬ್ರಾಹ್ಮಣನನ್ನು ಇಲ್ಲಿಗೆ ಕರೆದುಕೊಂಡು ಬಾ. ಆದರೆ ಅದೇ ಗ್ರಾಮದಲ್ಲಿಯೇ ಅವನಿಗೆ ಅನುರೂಪನಾದ ಮತ್ತೊಬ್ಬ ಬ್ರಾಹ್ಮಣನೂ ಇರುವನು. ಅವನು ಕೂಡ ಅಗಸ್ತ್ಯ ಶರ್ಮನ ಗೋತ್ರದವನೇ ಆಗಿರುವನು. ಅವನ ಮನೆಯೂ ನಾನು ಹೇಳಿದ ಅಗಸ್ತ್ಯಶರ್ಮನ ಮನೆಯ ಪಕ್ಕದಲ್ಲಿಯೇ ಇದೆ. ಗುಣ, ವೇದಾಧ್ಯಯನ ಮತ್ತು ಕುಲಗಳಲ್ಲಿಯೂ ಅವನಿಗೆ ಸದೃಶನಾಗಿಯೇ ಇರುವನು. ಅವನಿಗಿರುವಷ್ಟೇ ಮಕ್ಕಳು ಇವನಿಗೂ ಇವೆ. ಆಚಾರ-ವ್ಯವಹಾರಗಳಲ್ಲಿಯೂ ಧೀಮಂತನಾದ ಆ ಅಗಸ್ತ್ಯಶರ್ಮನಿಗೆ ಇವನೂ ಸಮಾನನಾಗಿಯೇ ಇರುವನು. ಆದರೆ ನೀನು ಅವನನ್ನು ಮಾತ್ರ ಕರೆತರಬೇಡ. ನಾನು ಹೇಳಿದ, ವಸ್ತ್ರದಿಂದ ಅನಾವೃತನಾಗಿರುವ ಅಗಸ್ತ್ಯಶರ್ಮನನ್ನೇ ಇಲ್ಲಿಗೆ ಕರೆದುಕೊಂಡು ಬಾ. ಏಕೆಂದರೆ: ನಾನು ಅವನನ್ನು ಸತ್ಕರಿಸಬೇಕಾಗಿದೆ.ಇಲ್ಲಿ ನನ್ನ ಗಮನಕ್ಕೆ ಬರುವುದು ಅಗ್ರಹಾರದ ಹೆಚ್ಚಿನ ಪ್ರಜೆಗಳು ಶ್ರೇಷ್ಠವಾದ ವಿದ್ಯೆಗಳನ್ನು ಹೊಂದಿರುತ್ತಿದ್ದರು.
  1. ಆಶ್ರಮವಾಸಿಕಪರ್ವದಲ್ಲಿ ಧೃತರಾಷ್ಟ್ರನು ಬ್ರಾಹ್ಮಣರಿಗೆ ವಾಸಮಾಡಲು ಯೋಗ್ಯವಾಗಿದ್ದ ಅಗ್ರಹಾರಗಳನ್ನು ದಾನವಾಗಿ ಕೊಡುತ್ತಿದ್ದನು. ಮತ್ತು ಪೃಥ್ವೀನಾಥನಾದ, ಪಾಂಡುಪುತ್ರನಾದ ಯುಧಿಷ್ಠಿರನು ಹಿಂದಿನ ರಾಜರಿಂದ ಬ್ರಾಹ್ಮಣರಿಗೆ ದಾನರೂಪವಾಗಿ ಮತ್ತು ಪುರಸ್ಕಾರರೂಪವಾಗಿ ಅರ್ಪಿಸಲ್ಪಟ್ಟಿರುವ ಅಗ್ರಹಾರಗಳನ್ನೂ ಮತ್ತು ಗ್ರಾಮಗಳನ್ನೂ ರಕ್ಷಿಸಿಕೊಂಡು ಬರುತ್ತಿದ್ದನು ಎಂದು ಬರುತ್ತದೆ. ಯುಧಿಷ್ಠಿರನ ರಾಜ್ಯ ಹಲವಾರು ಬಗೆಯ ರತ್ನಗಳಿಗೆ ಆಕರವಾಗಿದ್ದಿತು. ಉಂಬಳಿಯಾಗಿ ಕೊಡಲು ಸಿದ್ಧವಾಗಿದ್ದ ಗ್ರಾಮ ಮತ್ತು ಅಗ್ರಹಾರಗಳೇ ಸಮುದ್ರದ ದ್ವೀಪಗಳಂತಿದ್ದುವು. ಮಣಿ ಮತ್ತು ಸುವರ್ಣಗಳೆಂಬ ನೀರಿನಿಂದ ಆ ಸಮುದ್ರವು ತುಂಬಿದ್ದಿತು. ಧೃತರಾಷ್ಟ್ರರೂಪಿಯಾದ ಚಂದ್ರನ ಉದಯ ವಾದೊಡನೆಯೇ ದಾನಯಜ್ಞರೂಪವಾದ ಆ ಸಮುದ್ರವು ಉಕ್ಕಿಹರಿದು ಜಗತ್ತನ್ನೇ ಮುಳುಗಿಸಿತು. ಹೀಗೆ ಧೃತರಾಷ್ಟ್ರರಾಜನು ಪುತ್ರ-ಪೌತ್ರರಿಗೂ, ಪಿತೃಗಳಿಗೂ ಶ್ರಾದ್ಧವನ್ನು ಮಾಡಿದನಲ್ಲದೇ ತನ್ನ ಮತ್ತು ಗಾಂಧಾರಿಯ ಪರಲೋಕಪ್ರಾಪ್ತಿಗಾಗಿಯೂ ಅನೇಕವಿಧವಾದ ದಾನಗಳನ್ನು ಕೊಟ್ಟನು. ೨೬ನೆಯ ಅಧ್ಯಾಯ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಮತ್ತು ಪಾಂಡವರ ಸಂಭಾಷಣೆ: : ಯುಧಿಷ್ಠಿರ ಮಹಾಬಾಹೋ ಕಚ್ಚಿತ್ತ್ವಂ ಕುಶಲೋ ಹ್ಯಸಿ | ಸಹಿತೋ ಭ್ರಾತೃಭಿಃ ಸರ್ವೈಃ ಪೌರಜಾನಪದೈಸ್ತಥಾ || || “ ಯುಧಿಷ್ಠಿರ! ನೀನು ನಿನ್ನ ತಮ್ಮಂದಿರೊಡನೆಯೂ ಮತ್ತು ನಗರ ಮತ್ತು ಜನಪದಗಳ ಪ್ರಜೆಗಳೊಡನೆಯೂ ಸಂತೋಷದಿಂದಿರುವೆಯಾ ? ಬ್ರಾಹ್ಮಣಾನಗ್ರಹಾರೈರ್ವಾ ಯಥಾವದನುಪಶ್ಯಸಿ | ಕಚ್ಚಿತ್ತೇ ಪರಿತುಷ್ಯನ್ತಿ ಶೀಲೇನ ಭರತರ್ಷಭ || || ಬ್ರಾಹ್ಮಣರನ್ನು ಅಗ್ರಹಾರಾದಿಗಳ ಉಂಬಳಿಯಿಂದ ಯಥೋಚಿತವಾಗಿ ಕಾಣುತ್ತಿರುವೆಯಲ್ಲವೇ? ಎಂದು ಅಗ್ರಹಾರಗಳ ಉಲ್ಲೇಖ ಮಹಾಭಾರತದ ಅನೇಕ ಕಡೆ ಉಲ್ಲೇಖ ಬರುತ್ತದೆ.

ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕೃತಿ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ, ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಬಳ್ಳಿಗಾವೆ, ತಿಳಿವಳ್ಳಿ, ಸಾಲೋತ್ತಗಿ, ಕಲಶ ಮುಂತಾದ ನೂರಾರು ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿ ವಿಶ್ವವಿದ್ಯಾನಿಲಯಗಳ ಸ್ಥಾನಗಳಾಗಿದ್ದುವು. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.
ಅಗ್ರಹಾರವೆಂದರೆ ತೆರಿಗೆಯಿಂದ ಮುಕ್ತಗೊಳಿಸಿದ ಬ್ರಾಹ್ಮಣರ ವಸತಿ ಸ್ಥಾನ. ಬ್ರಹ್ಮಪುರಿ ಮತ್ತು ಚತುರ್ವೇದಿಮಂಗಳ ಎಂಬವು ಇದರ ಪರ್ಯಾಯ ಪದಗಳು. ವೇದ, ಶಾಸ್ತ್ರ, ಪುರಾಣ, ಪೌರೋಹಿತ್ಯ, ಯಜ್ಞ, ಯಾಗ, ಆಗಮ, ಜ್ಯೋತಿಷ್ಯ ಅಲ್ಲದೆ ಇನ್ನೂ ಹಲವಾರು ವಿದ್ಯೆಗಳಲ್ಲಿ ಪರಿಣತಿ ಪಡೆದ ಬ್ರಾಹ್ಮಣರನ್ನು ಇಲ್ಲಿ ನೆಲೆನಿಲ್ಲಿಸಿ, ಅವರವರ ಅರ್ಹತೆಗೆ ತಕ್ಕಂತೆ ಅನುಕೂಲತೆಗಳನ್ನು (ಅಂದರೆ ನಿವೇಶನ, ಮನೆ, ಭೂಮಿ, ಆದಾಯ, ಸಂಬಳ) ಒದಗಿಸಿ, ಅವರಿಗೆ ಹಲವು ಕರ್ತವ್ಯಗಳನ್ನು ವಹಿಸಿಕೊಡಲಾಗುತ್ತಿತ್ತು. ಇಂಥವರು ತಮ್ಮ ಕುಟುಂಬದೊಡನೆ ಇಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಹಿರಿಯರೂ ಜ್ಞಾನಿಗಳೂ ಆದವರನ್ನು ಹಿರಿಯ ಮಹಾಜನರುಎಂದು, ಎರಡನೆಯ ಹಂತದಲ್ಲಿದ್ದವರನ್ನು ಮಹಾಜನರೆಂದು ಗುರುತಿಸಲಾಗುತ್ತಿತ್ತು. ಆದರೆ ಬ್ರಾಹ್ಮಣರೆಲ್ಲರೂ ಮಹಾಜನರಾಗಿರುತ್ತಿರಲಿಲ್ಲ. ಅಲ್ಲದೆ ಅಗ್ರಹಾರದಲ್ಲಿ ಬ್ರಾಹ್ಮಣರು ಮಾತ್ರ ವಾಸಿಸುತ್ತಿರಲಿಲ್ಲ.
ಅಗ್ರಹಾರವು ಪ್ರಮುಖವಾಗಿ ಬ್ರಾಹ್ಮಣರ ವಸತಿ ಸ್ಥಾನವಾಗಿದ್ದರೂ ಅನೇಕ ಬಗೆಯ ಆಡಳಿತ ಮತ್ತು ಪರಿಚಾರ ವರ್ಗಗಳಿಗೆ ಇಲ್ಲಿ ಅನುವು ಇರುತ್ತಿತ್ತು. ಬ್ರಾಹ್ಮಣರಲ್ಲಿ ಮಹಾಜನರಲ್ಲದೆ, ಆಚಾರ್ಯರು, ಪುರಾಣಿಕರು, ಆಗಮಿಕರು, ಮಾಂತ್ರಿಕರು, ಸ್ತಾನಿಕರು, ಮೀಮಾಂಸಕಾರರು, ತಾರ್ಕಿಕರು, ವ್ಯಾಕರಣಕಾರರು ಮತ್ತು ನಂಬಿಗಳ ಎಂಬ ವರ್ಗಗಳಿದ್ದವು.
ಗುಪ್ತರ ಕಾಲದ ನಂದಪುರ ತಾಮ್ರ ಶಾಸನದ ಮೊದಲ ಸಾಲಿನ ಆರಂಭವೇ ಸ್ವಸ್ತ್ಯಂಬಿಲ ಗ್ರಾಮಾಗ್ರಹಾರಾತ್ ಸ ವಿಶ್ವಾಸಮಧಿಕರಣಾಂ ಎಂದು ಬರುತ್ತದೆ. ಅಲ್ಲಿನ ಗ್ರಾಮವೊಂದನ್ನು ಬ್ರಾಹ್ಮಣರಿಗೆ ಮತ್ತು ಉಳಿದ ಜನರಿಗೆ ಅಗ್ರಹಾರವಾಗಿ ಕೊಟ್ಟದ್ದು ಉಲ್ಲೇಖಿತವಾಗಿದೆ.
ಬುಧಗುಪ್ತನ ಬಿಹಾರದ ಸ್ತಂಬಶಾಸನದ ೨೮ನೇ ಸಾಲಿನಿಂದ ಆರಂಭವಾಗುವ ವಣಿಜಕ ಪಾಡಿತಾರಿಕ ಆಗ್ರಹಾರಿಕ ಶೌಲ್ಕಿಕ ಗೌಲ್ಮಿಕ ಎಂದು ಅಗ್ರಹಾರವನ್ನು ಕುರಿತು ಹೇಳಲಾಗಿದೆ. ಆ ಅಗ್ರಹಾರದಲ್ಲಿ ವ್ಯಾಪಾರಿಗಳು, ಶುಲ್ಕವನ್ನು ವಸೂಲು ಮಾಡುವ ಆಸ್ಥಾನಿಗರು, ಮರದ ವ್ಯವಹಾರ ನೋಡಿಕೊಳ್ಳುವ ಜನ. ಎಲ್ಲರ ವಸತಿಗಾಗಿ ಅಗ್ರಹಾರವನ್ನು ನಿರ್ಮಿಸಿದ ಮಾಹಿತಿ ದೊರಕುತ್ತದೆ.
ಕಳಿಂಗದ ದೊರೆ ಅನಂತವರ್ಮನ ಸಿರಿಪುರಂ ತಾಮ್ರ ಶಾಸನದ ೯ನೇ ಸಾಲಿನಲ್ಲಿ ಪೂರ್ವಮೇವಾಗ್ರಹಾರಃ ಎಂದು ಬರುತ್ತದೆ. ಆ ಶಾಸನದಲ್ಲಿ ಮುಂದುವರೆದು ಇದಾನೀಂ ಅಸ್ಮಾಭಿಃ ಪುಣ್ಯ ಆಯುರ್ಯಶಸಾಂ ಅಭಿವೃದ್ಧಯೇ ಯಜನ ಯಾಜನ ಯಾಜನಾಧ್ಯಯನಾಧ್ಯಾಪನಃ ಎಂದು ಬರುತ್ತದೆ. ಅಂದರೆ ಅಗ್ರಹಾರವನ್ನು ಯಾತಕ್ಕಾಗಿ ನಿರ್ಮಿಸುತ್ತಿದ್ದರು ಮತ್ತು ಅಲ್ಲಿನ ವಸತಿ ಯಾವರೀತಿ ಎನ್ನುವುದು ತಿಳಿಯುತ್ತದೆ.
ಸುಮಾರು ೬ - ೭ ನೇ ಶತಮಾನದ ಇಂದ್ರವರ್ಮನ ಅಂಧವರಂ ಶಾಸನದಲ್ಲಿ ತೋಟವಾಟಕ ಗ್ರಾಮವನ್ನು ಎಲ್ಲಾ ಕುಟುಂಬದವರಿಗಾಗಿ ಪುಣ್ಯ ಆಯುರ್ ಐಶ್ವರ್ಯಾಭಿವೃದ್ಧಯೇ ಆಂದೋರಕಾಗ್ರಹಾರ ವಸ್ತವ್ಯೇಭ್ಯೋ ನಾನಾ ಗೋತ್ರ ಬಹೃಚ ಚರಣ ಬ್ರಹ್ಮಚಾರಿಭ್ಯಃ ಎಂದು ಬರುತ್ತದೆ. ಅಂದರೆ ತನ್ನ ಸೇವಕ ವರ್ಗದವರಿಗೂ ಮತ್ತು ಬೇರೆ ಬೇರೆ ಗೋತ್ರದ ಬ್ರಾಹ್ಮಣರಿಗೆ ಮತ್ತು ಬ್ರಹ್ಮ ಚಾರಿಗಳ ವಸತಿಗೆ ಅಗ್ರಹಾರವನ್ನು ನಿರ್ಮಿಸಿದ ಎಂದು ತಿಳಿದು ಬರುತ್ತದೆ.  
ಕನ್ನಡನಾಡಿನಲ್ಲಿಯೂ ಸಹ ಅಗ್ರಹಾರಗಳನ್ನು ನಿರ್ಮಿಸಲಾಗಿತ್ತು. ಶಿಖಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಬಾದಾಮಿ ಚಲುಕ್ಯ ಪೊಲೆಕೇಶಿಯು ಸುಮಾರು ೬೪೦ನೇ ಇಸವಿಯಲ್ಲಿ ಅಗ್ರಹಾರ ನಿರ್ಮಿಸಿದ ದಾಖಲೆ ಮೊತ್ತಮೊದಲು ಸಿಗುತ್ತದೆ. ಸ್ವಸ್ತಿಶ್ರೀಅನಾದಿತೊ . . . . . ಅಗ್ರಹಾರ ಎಂದು ಶಾಸನ ಆರಂಭವಾಗುತ್ತದೆ. ಆಮೇಲೆ ಅಂದರೆ ಬಾದಾಮಿ ಚಲುಕ್ಯ - ಎರಡನೆ ಪೊಲಕೇಸಿ ಸುಮಾರು.೭ನೇ ಶತಮಾನದ ೬ನೇ ಸಾಲಿನಲ್ಲಿ ಆ ಮಾರ್ಗ್ಗಮೆ ಕೊಟ್ಟಾರ್ ಅನ್ತೊಸಲೆ ಬಾಣರಾಜರ ವಿಷಯದ ಅಗ್ರಹಾರಂಗಳನ್ತೆ ಎಂದು ಬರುತ್ತದೆ. ನೊಳಂಬರ ಕಾಲದಲ್ಲಿ ಪಲ್ಲವ ವೀರ ಮಹೇಂದ್ರ ನೊಳಂಬಾಧಿರಾಜ ಸುಮಾರು ೮೯೦ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲಿನ ಆವನಿ ರಾಮೇಶ್ವರ ದೇವಾಲಯದ ದಕ್ಷಿಣದ ಮಹಾದ್ವಾರದ ಬಳಿಯಲ್ಲಿರುವ ಶಿಲೆಯಲ್ಲಿ
೧. ಶ್ರೀವಧುಧರೆಪೇಳಲ್ಚೇರಾವನಿಪಂ
೨. ಗಗ್ರಮಹಿಷಿಭುವನಾಂಬಿಕೆವಾಗ್ದೇವಿ
೩. ಯರದೊರೆಯರೆನಿಸಿದದೀವಬ್ಬರಸಿ
೪. ಯರದೊರೆಗೆೞ್ದರ್‌ಪೆಱರೊಳರೇ ಅತಿ
೫. ಶಯಮಾಗೆತಮ್ಮಪೆಸರೊಳ್ನೆಱೆತತ್ಪ
೬. ತಿನಾಮದಿಂಯಶೋರ್ಜ್ಜಿತಮೆನಿಪಗ್ರ
೭. ಹಾರಮವಿನಾಶಿನಮಸ್ಯಮೆಮಾಡಿರಾ
೮. ಜ್ಯದೊಳು
ಎಂದು ಅಗ್ರಹಾರವನ್ನು ದಾನಕೊಟ್ಟ ಬಗ್ಗೆ ಉಲ್ಲೇಖಿಸಲಾಗಿದೆ. ಕನ್ನಡನಾಡಿನಲ್ಲಂತೂ ಅದೆಷ್ಟು ಅಗ್ರಹಾರ ನಿರ್ಮಿಸಲಾಗಿತ್ತೋ ಅದು ಲೆಕ್ಕ ಸಿಗದಷ್ಟು. ಅಗ್ರಹಾರವೆನ್ನುವುದು ಕೇವಲ ಬ್ರಾಹ್ಮಣರ ವಸತಿ ಮಾತ್ರವಾಗಿರದೇ ಅದು ವಿದ್ಯಾಕೇಂದ್ರವೆನಿಸಿ ರಾಜಪರಿವಾರದ ಎಲ್ಲರೂ ನೆಲೆಗೊಳ್ಳಲು ಅನುಕೂಲವಾಗುವಂತಹ ನೆಲೆ.



No comments:

Post a Comment