Search This Blog

Sunday 29 April 2018

ಸೋಮ - ಅದೊಂದು ಶಕ್ತಿ



ಸೋಮ ಎನ್ನುವುದು ಯಾವುದೇ ಮತ್ತು ಭರಿಸುವ ಪಾನವಲ್ಲ. ಸೋಮದಿಂದಲೇ ಭಾಷೆಗಳ ಉಗಮ ವಿಕಾಸ ಎಲ್ಲವೂ ಆಗಿದೆ. ಸೋಮದ ಕುರಿತಾಗಿ ಬರೆಯುತ್ತಾ ಸಾಗಿದಾರೆ ಅದ್ಭುತವಾದ ಜಗತ್ತೊಂದು ಗೋಚರಿಸುತ್ತದೆ. ಸೋಮನೇ ಸೂರ್ಯ, ಸೋಮನೇ ಜಗದ್ಯಾಪೀ. ಈ ಸೋಮ ಎನ್ನುವುದು ಅಗಾಧ ಶಕ್ತಿಯನ್ನು ಸೂಚಿಸುವ ಒಂದು ಪದ ಅನ್ನಿಸಿ ಬಿಡುತ್ತದೆ. ನಾವಿಂದು ನಮ್ಮ ನಮ್ಮ ಭಾವನೆಗಲನ್ನು ಹೇಗೆ ವ್ಯಕ್ತ ಪಡಿಸುತ್ತಿದ್ದೇವೆಯೋ ಅವೆಲ್ಲವೂ ಸೋಮದಿಂದಲೇ, ಸೋಮನಿಂದಲೇ. ಒಂದು ಕೃತಿ ಅಥವಾ ನಾವು ಆಡುವ ಮಾತು ಭಾಷಣ ಎಲ್ಲವೂ ಸ್ವಾರಸ್ಯಕರವಾಗಿರಬೇಕಿದ್ದರೆ ಅದು ಸೋಮದಿಂದಲೇ ಸಾಧ್ಯವಾಗಿದೆ. ಸೋಮದ ಕುರಿತಾಗಿ ಅನೇಕ ಕಥೆಗಳಿವೆ.
ಪರ್ಜನ್ಯ ವೃದ್ಧಂ ಮಹಿಷಂ ತಂ ಸೂರ್ಯಸ್ಯ ದುಹಿತಾಭರತ್ |
ತಂ ಗಂಧರ್ವಾಃ ಪ್ರತಗೃಭ್ಣಂತಂ ಸೋಮೇ ರಸಮಾದಧುರಿಂದ್ರಾ ಯೇಂದೋಪರಿ ಸ್ರವ || ೯ :೩ : ೧೧೩
ಪರ್ಜನ್ಯನಂತೆ ಬಲಶಾಲಿಯಾದ ಪೂಜ್ಯನಾದ ಸೋಮನನ್ನು (ಸೋಮವನ್ನು) ದ್ಯುಲೋಕದಿಂದ ಸೂರ್ಯನ ಮಗಳಾದ ಶೃದ್ಧೆಯು ತಂದಳು. ಅದನ್ನು ಗಂಧರ್ವರು ಸ್ವೀಕರಿಸಿದರು. ಅದೇ ಸೋಮದಲ್ಲಿ ರಸ ಬರುವಂತೆ ಮಾಡಿದರು. ಸೋಮನೇ ನೀನು ಇಂದ್ರನು ಕುಡಿಯುವುದಕ್ಕಾಗಿ ಪ್ರವಹಿಸು ಎನ್ನುವುದು ಈ ಋಕ್ಕಿನ ಅರ್ಥ.
ಆದರೆ ಈ ಸೋಮದ ಕುರಿತಾಗಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಲ್ಪಟ್ಟಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ "ತಂ ಸೋಮ ಮಾಹ್ರಿಯಮಾಣಂ ಗಂಧರ್ವೋ ವಿಶ್ವಾವಸುಃ ಪರ್ಯಮುಷ್ಣಾತ್ಸತಿಸ್ರೋ ರಾತ್ರಿಃ" (೬:೧ ರಿಂದ ೬:೫ ರವರೆಗೆ)
ಹಿಂದೆ ಸೋಮವು ಸ್ವರ್ಗದಲ್ಲಿದ್ದಿತ್ತು. ಅದನ್ನು ಭೂಮಿಗೆ ತರಲು ಯಾರಿಂದಲೂ ಸಾಧ್ಯವಾಗದೇ ಇದ್ದಾಗ ಗಾಯತ್ರಿಯು ಶ್ಯೇನ ಪಕ್ಷಿಯ ರೂಪದಿಂದ ಸ್ವರ್ಗಕ್ಕೆ ಹೋಗಿ ಅಲ್ಲಿ ಸೋಮವನ್ನು ಕಾಯುತ್ತಿದ್ದ ಸ್ವಾನ, ಭ್ರಾಜ, ಅಂಘಾರಿ, ಬಂಭಾರಿ, ಹಸ್ತ, ಸುಹಸ್ತ, ಕೃಶಾನು ಎನ್ನುವ ಸೋಮದ ಪಾಲಕರನ್ನು ಎದುರಿಸಿ ಅವರಿಂದ ತಪ್ಪಿಸಿಕೊಂಡು ಸೋಮವನ್ನು ಭೂಮಿತರುತ್ತಾಳೆ. ಭೂಮಿಗೆ ತರುತ್ತಿರುವ ಸಮಯದಲ್ಲಿ "ವಿಶ್ವಾವಸು" ಎನ್ನುವ ಗಂಧರ್ವನೊಬ್ಬ ಸೋಮವನ್ನು ಅಪಹರಿಸಿ ಮೂರು ದಿನಗಳ ತನಕ ಇಟ್ಟುಕೊಂಡನು. ಅದನ್ನು ಅವನಿಂದ ಹೇಗೆ ಬಿಡಿಸಿ ತರುವುದು ಎಂದು ಚಿಂತಿಸುತ್ತಿರುವಾಗ ಒಂದು ವಿಚಾರ ಹೊಳೆಯುತ್ತದೆ. ಗಂಧರ್ವರು ಸ್ತ್ರೀ ವ್ಯಾಮೋಹಿಗಳು, ಅತಿ ಕಾಮಿಗಳು ಅವರಿಗೆ ಸ್ತ್ರೀಯರ ಆಶೆ ತೋರಿಸಿ ಸೋಮವನ್ನು ಬಿಡಿಸಿ ತರುವುದು ಎಂದು ಆಲೋಚಿಸಿ ವಾಗ್ದೇವತೆಯ ಸಮೀಪಕ್ಕೆ ಹೋಗಿ ಅವಳಲ್ಲಿ ವಿಷಯವನ್ನೆಲ್ಲಾ ತಿಳಿಸಿ ಅವಲ ಅನುಮತಿಯಂತೆ ಅವಳನ್ನು ಸುಂದರ ಸ್ತ್ರೀಯಾಗಿ ಮಾರ್ಪಡಿಸಿ ಅವಳನ್ನು ಗಂಧರ್ವರಿಗೆ ಮಾರಿ ಅದಕ್ಕೆ ಬದಲಾಗಿ ಸೋಮವನ್ನು ತರುವಂತೆಯೂ ನಿಷ್ಕರ್ಷೆಯಾಯಿತು. ಅದರಂತೆ ವಾಗ್ದೇವತೆಯು ಸುಂದರ ರೂಪ ಧರಿಸಿದಳು. ಅವಲನ್ನು ಗಂಧರ್ವರಿಗೆ ಕೊಟ್ಟು ಅವರ ವಶದಲ್ಲಿದ್ದ ಸೋಮವನ್ನು ಹಿಂದಕ್ಕೆ ತಂದರು. ಸೋಮವು ದೇವತೆಗಳ ವಶವಾದ ತಕ್ಷಣ ಸುಂದರಳಾಗಿದ್ದ ವಾಗ್ದೇವತೆಯು ಕೆಂಪು ಬಣ್ಣದ ಜಿಂಕೆಯ ರೂಪ ಧರಿಸಿ ಗಂಧರ್ವರಿಂದ ತಪ್ಪಿಸಿಕೊಂಡು ಬಂದು ದೇವತೆಗಳಲ್ಲಿ ಸೇರಿಕೊಂಡಳು. ಇದು ಯಜುರ್ವೇದದಲ್ಲಿ ಬರುವ ಕಥೆ. ಇದು ಅಂದಿನಿಂದ ಇಂದಿನ ತನಕವೂ ಯಜ್ಞಗಳಲ್ಲಿನ ಉಪಯೋಗಕ್ಕಾಗಿ ಸೋಮವನ್ನು ಕೊಂಡು ತರುತ್ತಾರೆ. ಯಜ್ಞಾಂಗಗಳಲ್ಲಿ "ಸೋಮವಿಕ್ರಯಣ" ಎನ್ನುವುದು ಒಂದು ಯಜ್ಞಾಂಗ ಕರ್ಮ ಎನ್ನಿಸಿತು. ಸೋಮವನ್ನು ತರುವುದು ಬಹಳ ಕಷ್ಟದ ಕೆಲಸ ಆದುದರಿಂದ ಅದನ್ನು ದ್ರವ್ಯ ಕೊಟ್ಟೆ ತರುತ್ತಾರೆ. ಮತ್ತು ಅದು ಮೂರು ದಿನ ಗಂಧರ್ವರ ವಶದಲ್ಲಿದ್ದುದರ ಪರಿಣಾಮ ಇಂದಿಗೂ ಸೋಮವನ್ನು ಮೂರು ದಿನ ಇಟ್ಟು ಆಮೇಲೆ ಬಳಸಲಾಗುತ್ತದೆ.


No comments:

Post a Comment